Wednesday, May 22, 2013



                ಹರ ಹರಾ, ಇದೇನಿದು ಇಲಿಜ್ವರ ?
ಕಣ್ಣುಮುಚ್ಚಾಲೆ ಆಡುತ್ತಿರುವ ಮುಂಗಾರು ಮಳೆಯೊಂದಿಗೆ ಬಿಸಿಲು ಮಳೆಗಳ ಮೇಳದಿಂದಾಗಿ, ಜನಸಾಮಾನ್ಯರನ್ನು ಕಾಡುತ್ತಿರುವ ಕಾಯಿಲೆಗಳ ಬಾಧೆ ತುಸು ಅಧಿಕವಾಗಿದೆ. ಸಾಮಾನ್ಯ ಶೀತ, ಫ್ಲೂ ಜ್ವರ, ಡೆಂಗೆ, ಟೈಫಾಯಿಡ್, ವಾಂತಿ-ಭೇದಿ ಇತ್ಯಾದಿ ವ್ಯಾಧಿಗಳೊಂದಿಗೆ, ಇಲಿ ಜ್ವರದ ಹಾವಳಿಯೂ ನಮ್ಮ ಜಿಲ್ಲೆಯಲ್ಲಿ  ಸಾಂಕ್ರಾಮಿಕವಾಗಿ ಹಬ್ಬಿದೆ.ಇವುಗಳಲ್ಲಿ  ಹಿಂದೂ ಬಾಂಧವರ ಆರಾಧ್ಯ ದೈವ  ವಿಘ್ನೇಶನ ವಾಹನವಾಗಿರುವ ಮೂಷಿಕದ ನಾಮಧೇಯದ ಕಾಯಿಲೆಯು ಈಗಾಗಲೇ ಕೆಲ ಅಮಾಯಕರನ್ನು ಬಲಿಪಡೆದಿದೆ. ಮಾರಕವೆನಿಸಬಲ್ಲ ಈ ವ್ಯಾಧಿಯ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ.
"ಇಲಿ ಓಡಿತು ಎನ್ನುವುದನ್ನು ಕೇಳಿದವನು, ಹುಲಿ ಓಡಿತು ಎಂದು ಹೇಳಿದಂತೆ' ಎಂಬರ್ಥದ ತುಳುವರ ಆಡುಮಾತು ಇಲಿ ಜ್ವರದ ಮಟ್ಟಿಗೆ ಅನ್ವರ್ಥವೆನಿಸುತ್ತದೆ. ಏಕೆಂದರೆ ಈ ಸೋಂಕಿನಿಂದ ಪೀಡಿತವಾದ ಇಲಿಯ ಮೂತ್ರದ ಮೂಲಕ ಹರಡುವ ಇಲಿ ಜ್ವರವು, ಅನೇಕ ರೋಗಿಗಳ ಪಾಲಿಗೆ ಪ್ರಾಣಾಂತಿಕವಾಗಿ ಪರಿಣಮಿಸುತ್ತದೆ. ಅಪರೂಪದಲ್ಲಿ ತಲೆದೋರುವ ಈ ಕಾಯಿಲೆಯು "ಸ್ಪೈರೋಕೆಟ್" ಎನ್ನುವ ಬ್ಯಾಕ್ಟೀರಿಯಾಗಳಿಂದ ಉದ್ಭವಿಸುತ್ತದೆ.
ಉದ್ಭವಿಸುವುದೆಂತು? 
ಲೆಪ್ಟೋಸ್ಪೈರೋಸಿಸ್ ಎಂದು ಕರೆಯಲ್ಪಡುವ ಇಲಿಜ್ವರವು ಈ ಸೋಂಕು ಪೀಡಿತ ಇಲಿಗಳ ಮೂತ್ರ ಹಾಗೂ ನಾಸಿಕ, ನೇತ್ರ ಮತ್ತು ಇತರ ಕೆಲ ಅಂಗಾಂಗಗಳ ಸ್ರಾವಗಳ ಮೂಲಕ ಮತ್ತು ಇಲಿಗಳು ಕಚ್ಚುವ ಮೂಲಕವೂ, ಸಾಕು-ಕಾಡು ಪ್ರಾಣಿಗಳೊಂದಿಗೆ ಮನುಷ್ಯರಿಗೂ ಹರಡಬಲ್ಲದು. ಡಾ.ವೇಲ್ ಎಂಬಾತನು ಮೊತ್ತ ಮೊದಲ ಬಾರಿಗೆ ಈ ವ್ಯಾಧಿಯ ಲಕ್ಷಣಗಳನ್ನು ನಿಖರವಾಗಿ ವಿವರಿಸಿದ್ದುದರಿಂದ ಇದನ್ನು "ವೇಲ್ಸ್ ಸಿಂಡ್ರೋಮ್' ಎಂದೂ ಕರೆಯುತಾರೆ.
ಈ ಸೋಂಕು ಪೀಡಿತ ಇಲಿಗಳು ವಿಸರ್ಜಿಸಿದ ಒಂದು ಮಿ.ಲೀ.  ಮೂತ್ರದಲ್ಲಿ ಸುಮಾರು ೧೦ ಕೋಟಿಗೂ ಅಧಿಕ ರೋಗಾಣುಗಳಿದ್ದು,  ಇವುಗಳಿಂದ  ಕಲುಷಿತಗೊಂಡ  ನೀರು ಮತ್ತು ಮಣ್ಣಿನ ಮೂಲಕವೂ ಈ ಸೋಂಕು ಹರಡುತ್ತದೆ. ಉದಾಹರಣೆಗೆ ನಿಮ್ಮ ಮನೆಯ ಅಂಗಳದಲ್ಲಿನ ಹುಲ್ಲಿನ ಮೇಲೆ ಸೋಂಕು ಪೀಡಿತ ಇಲಿಯೊಂದು ವಿಸರ್ಜಿಸಿದ ಮೂತ್ರವನ್ನು ನಿಮ್ಮ ಸಾಕು ನಾಯಿಯು ನೆಕ್ಕಿದಲ್ಲಿ, ಅದರಲ್ಲಿದ್ದ ಬ್ಯಾಕ್ಟೀರಿಯಾಗಳು ನಾಯಿಯ ಶರೀರವನ್ನು ಪ್ರವೇಶಿಸಿ ರೋಗವನ್ನು ಉಂಟುಮಾಡುತ್ತವೆ. ಅದೇರೀತಿಯಲ್ಲಿ ನಿಮ್ಮ ಕೈ-ಕಾಲುಗಳಲ್ಲಿ ಇರಬಹುದಾದ ಗಾಯಗಳ ಮೂಲಕ ಅಥವಾ ಸಂದರ್ಭೋಚಿತವಾಗಿ ನಿಮ್ಮ ಕಣ್ಣು, ಮೂಗು ಹಾಗೂ ಬಾಯಿಗಳ ಮೂಲಕ ನಿಮ್ಮ ಶರೀರದಲ್ಲಿ ಪ್ರವೇಶವನ್ನು ಗಳಿಸಿದ ಬ್ಯಾಕ್ಟೀರಿಯಾಗಳು ಇಲಿಜ್ವರಕ್ಕೆ ಕಾರಣವೆನಿಸುತ್ತವೆ. ಇಲಿಜ್ವರವು ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡಬಲ್ಲದಾದರೂ, ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ.
ಮನುಷ್ಯರಲ್ಲಿ ಈ ವ್ಯಾಧಿ ಉದ್ಭವಿಸಲು ಲೆಪ್ಟೋಸ್ಪೈರಾ ಇಕ್ಟೆರೋ ಹೆಮೊರೆಜಿಯೇ ಅಥವಾ ಲೆ.ಕೆನಿಕೊಲ ಎನ್ನುವ ಎರಡು ವಿಧದ ಬ್ಯಾಕ್ಟೀರಿಯಾಗಳೇ  ಕಾರಣವೆನಿಸುತ್ತವೆ.
ರೋಗ ಲಕ್ಷಣಗಳು
ಈ ರೋಗಾಣುಗಳು ಮನುಷ್ಯನ ಶರೀರವನ್ನು ಪ್ರವೇಶಿಸಿದ ನಂತರ ಸುಮಾರು ನಾಲ್ಕರಿಂದ ಇಪ್ಪತ್ತೊಂದು ದಿನಗಳಲ್ಲಿ ಇಲಿಜ್ವರದ ಲಕ್ಷಣಗಳು ಪ್ರಕಟಗೊಳ್ಳುತ್ತವೆ. ಮೊದಲ ಹಂತದಲ್ಲಿ ಫ್ಲೂ ಜ್ವರದ ಲಕ್ಷಣಗಳನ್ನೇ ಹೋಲುವ ವಿಪರೀತ ತಲೆನೋವು, ಶರೀರದ ಮಾಂಸಖಂಡಗಳು, ಆಸ್ಥಿಸಂಧಿಗಳು ಮತ್ತು ಕಣ್ಣುಗಳಲ್ಲಿ ನೋವು, ಕಣ್ಣುಗಳು ಕೆಂಪಾಗುವುದು, ಒಂದಿಷ್ಟು ಚಳಿ ಮತ್ತು ಜ್ವರ ಕಂಡುಬರುವುದು. ಮುಂದಿನ ಐದರಿಂದ ಹತ್ತು ದಿನಗಳಲ್ಲಿ ಇವೆಲ್ಲಾ ಲಕ್ಷಣಗಳು ನಿಧಾನವಾಗಿ ಮಾಯವಾಗುತ್ತವೆ. ಈ ಹಂತದಲ್ಲಿ ವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆಯದವರು, ಸ್ವಯಂ ಚಿಕಿತ್ಸೆ ಪ್ರಯೋಗಿಸಿದವರು ಮತ್ತು ಇಂತಹ ಸಣ್ಣ ಪುಟ್ಟ ಜ್ವರಗಳಿಗೆ ಔಷದ ಸೇವನೆ ತರವಲ್ಲ ಎಂದು ನಿರ್ಲಕ್ಷಿಸುವ ವ್ಯಕ್ತಿಗಳಿಗೆ ಮುಂದಿನ ಹಂತದಲ್ಲಿ ಗಂಭೀರ ಸಮಸ್ಯೆಗಳು ಬಾಧಿಸುವ ಸಾಧ್ಯತೆಗಳಿವೆ.
ದ್ವಿತೀಯ ಹಂತದಲ್ಲಿ ಮತ್ತೆ ಮರುಕಳಿಸುವ ಮೊದಲ ಹಂತದ ಲಕ್ಷಣಗಳೊಂದಿಗೆ, ಕೆಲ ರೋಗಿಗಳಲ್ಲಿ ಕಣ್ಣು, ಮೆದುಳು ಮತ್ತು ಬೆನ್ನುಹುರಿಗಳಿಗೆ ಸಂಬಂಧಿಸಿದ ನರಗಳ ಉರಿಯೂತ ಹಾಗೂ ಕುತ್ತಿಗೆಯ ಸೆಡೆತಗಳು ಉದ್ಭವಿಸುತ್ತವೆ. ಜೊತೆಗೆ ಈ ರೋಗಾಣುಗಳು ಮೆದುಳಿನ ಮೇಲೆ ಪರೋಕ್ಷವಾಗಿ ಬೀರುವ ಪರಿಣಾಮದಿಂದಾಗಿ ಮೆದುಳುಜ್ವರವನ್ನು ಹೋಲುವ ಲಕ್ಷಣಗಳು ಅನೇಕ ರೋಗಿಗಳಲ್ಲಿ ಕಂಡುಬರುತ್ತವೆ. ಅಪರೂಪದಲ್ಲಿ ಕೆಲರೋಗಿಗಳಲ್ಲಿ ಶ್ವಾಸಕೋಶಗಳು, ಯಕೃತ್, ಪ್ಲೀಹ, ಮೂತ್ರಾಂಗಗಳು ಮತ್ತು ಹೃದಯದ ವೈಫಲ್ಯಗಳಂತಹ ಗಂಭೀರ ಸಮಸ್ಯೆಗಳು ಉದ್ಭವಿಸಿದಲ್ಲಿ, ಇಲಿಜ್ವರವು ಮಾರಣಾಂತಿಕವಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಈ ರೀತಿಯ ಯಾವುದೇ ಸಮಸ್ಯೆಗಳು ತಲೆದೋರದಿದ್ದಲ್ಲಿ, ನಾಲ್ಕು ವಾರಗಳ ಅವಧಿಯಲ್ಲಿ ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗುವರು.
ಇಲಿಜ್ವರವನ್ನು ನಿಖರವಾಗಿ ಪತ್ತೆ ಹಚ್ಚಬಲ್ಲ ಪರೀಕ್ಷೆಗಳು ನಮ್ಮ ದೇಶದಲ್ಲೂ ಲಭ್ಯವಿದ್ದು, ಕೇವಲ ೨ ನಿಮಿಷಗಳಲ್ಲಿ ಇದನ್ನು ಪತ್ತೆ ಹಚ್ಚುವ ವಿಧಾನವನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಅದೇ ರೀತಿಯಲ್ಲಿ ವ್ಯಾಧಿಯ ಮೊದಲ ಹಂತದಲ್ಲೇ ನಿಯಂತ್ರಿಸಬಲ್ಲ ಜೀವನಿರೋಧಕ ಔಷದಗಳು ಲಭ್ಯವಿದೆ.ಆದುದರಿಂದ ಜ್ವರ ಪೀಡಿತ ವ್ಯಕ್ತಿಗಳು ತಮ್ಮ ಕಾಯಿಲೆ ಯಾವುದೆಂದು ಆರಿಯದೇ, ನಿರ್ಲಕ್ಷಿಸುವುದರ ಬದಲಾಗಿ ತಮ್ಮ ನಂಬಿಗಸ್ಥ ವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆದುಕೊಂಡಲ್ಲಿ ಪ್ರಾಣಾಪಾಯದ ಸಂಭಾವ್ಯತೆಯನ್ನು ನಿಶ್ಚಿತವಾಗಿಯೂ ತಡೆಗಟ್ಟಬಹುದಾಗಿದೆ.  
ಇಲಿಜ್ವರ ಪೀಡಿತ ವ್ಯಕ್ತಿಗಳಲ್ಲಿ ಶೇ.೧೦ ರಿಂದ ೪೦ ರಷ್ಟು ರೋಗಿಗಳು ಗಂಭೀರ ಸಮಸ್ಯೆಗಳಿಂದ ಮೃತಪಡುತ್ತಾರೆ. ಆದರೆ ರೋಗಿಯ ವಯಸ್ಸು, ವ್ಯಾಧಿಯ ತೀವ್ರತೆ ಹಾಗೂ ಇದರಿಂದ ಆತನ ಅಂಗಾಂಗಗಳಿಗೆ ಸಂಭವಿಸಿರುವ ಹಾನಿಯ ಪ್ರಮಾಣ, ಆತನಲ್ಲಿ ಅದಾಗಲೇ ಇದ್ದ ಅನ್ಯ ಗಂಭೀರ ಆರೋಗ್ಯದ ಸಮಸ್ಯೆಗಳು(ಉದಾ-ಅನಿಯಂತ್ರಿತ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಗಂಭೀರ ಹೃದ್ರೋಗಗಳು) ಮತ್ತು ಆತನ ಸಾಮಾನ್ಯ ಆರೋಗ್ಯದ ಮಟ್ಟಗಳನ್ನು ಹೊಂದಿಕೊಂಡು, ಇಲಿಜ್ವರದ ಮಾರಕತೆಯ ಪ್ರಮಾಣವೂ ಹೆಚ್ಚು- ಕಡಿಮೆಯಾಗಬಲ್ಲದು.
ಇಲಿಜ್ವರವನ್ನು ತಡೆಗಟ್ಟಬಲ್ಲ ಲಸಿಕೆಯೊಂದು ಕೆಲ ದೇಶಗಳಲ್ಲಿ ಈಗಾಗಲೇ ಲಭ್ಯವಿದ್ದರೂ, ನಮ್ಮ ದೇಶದಲ್ಲಿ ಇದನ್ನು ತರಿಸಿ ಬಳಸುವವರ ಸಂಖ್ಯೆ ತೀರಾ ಕಡಿಮೆಯಿದೆ. ಆದರೆ ಈ ವ್ಯಾಧಿ ಸಾಂಕ್ರಾಮಿಕವಾಗಿ ಹರಡುತ್ತಿರುವ ಸಂದರ್ಭದಲ್ಲಿ, ಕೆಲ ವಿಧದ ಜೀವನಿರೋಧಕ ಔಷದವನ್ನು ವಾರದಲ್ಲಿ ಒಂದು ಬಾರಿ ಸೇವಿಸುವ ಮೂಲಕ ತಡೆಗಟ್ಟುವ ವಿಧಾನ ನಮ್ಮ ದೇಶದಲ್ಲಿ ಬಳಸಲ್ಪಡುತ್ತಿದೆ.
ಡಾ. ಸಿ. ನಿತ್ಯಾನಂದ ಪೈ, ಪುತ್ತೂರು

No comments:

Post a Comment