Wednesday, May 22, 2013


    ಲಘುಪಾನೀಯಗಳ ಅತಿಸೇವನೆ ಹಿತಕರವಲ್ಲ
ವಿಶ್ವದ ಬಹುತೇಕ ರಾಷ್ಟ್ರಗಳ ಮಕ್ಕಳು ಮತ್ತು ಯುವಜನರು ಲಘುಪಾನೀಯಗಳ ಅತಿಸೇವನೆಯ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ.ಆಧುನಿಕ ಜೀವನಶೈಲಿಯ ಅವಿಭಾಜ್ಯ ಅಂಗವೆನಿಸಿರುವ ಇಂತಹ ಹವ್ಯಾಸಗಳು,ಅನೇಕವಿಧದ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತಿವೆ.ಅನೇಕ ದೇಶಗಳು ನಡೆಸಿದ್ದ ಹಲವಾರು ವೈದ್ಯಕೀಯ ಅಧ್ಯಯನ-ಸಂಶೋಧನೆಗಳಿಂದ ಬೆಳಕಿಗೆ ಬಂದಿರುವ ಈ ವಿಚಾರದ ಬಗ್ಗೆ ಜನಸಾಮಾನ್ಯರಿಗೆ ಅರಿವಿದ್ದರೂ,ಇದನ್ನು ನಿರ್ಲಕ್ಷಿಸುತ್ತಿರುವುದು ಮಾತ್ರ ನಂಬಲು ಅಸಾಧ್ಯವೆನಿಸುತ್ತಿದೆ!.
ಕೆಲವೇ ವರ್ಷಗಳ ಹಿಂದೆ ಸಾಮಾನ್ಯವಾಗಿ ಮಧ್ಯವಯಸ್ಸು ಕಳೆದ ಬಳಿಕ ಉದ್ಭವಿಸುತ್ತಿದ್ದ ಕೆಲವಿಧದ ಗಂಭೀರ ಕಾಯಿಲೆಗಳು,ಇದೀಗ ಹದಿಹರೆಯದವರನ್ನು ಕಾಡಲು ಲಘುಪಾನೀಯ,ನಿಷ್ಪ್ರಯೋಜಕ ಆಹಾರ(ಜಂಕ್ ಫುಡ್ )ಗಳ ಅತಿಸೇವನೆಯೊಂದಿಗೆ ನಿಷ್ಕ್ರಿಯ ಜೀವನಶೈಲಿಯೂ ಕಾರಣವೆಂದು ತಿಳಿದುಬಂದಿದೆ.
ಲಘುಪಾನೀಯಗಳಿಂದ ಅಪಾಯ
ಸಾಮಾನ್ಯವಾಗಿ ಕೃತಕ ರಾಸಾಯನಿಕಗಳು,ರುಚಿಕಾರಕ ಹಾಗೂ ರುಚಿವರ್ಧಕ ದ್ರವ್ಯಗಳಿಗೆ ಸಾಕಷ್ಟು ಸಕ್ಕರೆ ಅಥವಾ ಕೃತಕ ಮಾಧುರ್ಯಕಾರಕಗಳನ್ನು ಸೇರಿಸಿ,ನೀರಿನಲ್ಲಿ ಬೆರೆಸಿದ ಬಳಿಕ ಬಾಟಲಿಗಳಲ್ಲಿ ತುಂಬಿ,ಒಂದಿಷ್ಟು ಇಂಗಾಲಾಮ್ಲವನ್ನು ಸೇರಿಸಿ ಲಘುಪಾನೀಯವನ್ನು ತಯಾರಿಸುತ್ತಾರೆ.ಆದರೆ ಇವುಗಳ ಅತಿಸೇವನೆಯ ದುಷ್ಪರಿಣಾಮಗಳ ಬಗ್ಗೆ ಇಂತಹ ಉತ್ಪನ್ನಗಳ ತಯಾರಕರು ಯಾವುದೇ ಮಾಹಿತಿಯನ್ನು ಅಥವಾ ಎಚ್ಚರಿಕೆಯನ್ನು ಪ್ರಕಟಿಸುವುದಿಲ್ಲ.ಜನಸಾಮಾನ್ಯರಂತೂ ಈ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ.
ವಿಶೇಷವೆಂದರೆ ಖ್ಯಾತ ಚಲನಚಿತ್ರ ತಾರೆಯರು ಮತ್ತು ಕ್ರಿಕೆಟ್ ಆಟಗಾರರು ಕೈತುಂಬಾ ಸಂಭಾವನೆಯನ್ನು ಪಡೆದು,ತಾವು ಅನುಮೋದಿಸುವ ಲಘುಪಾನೀಯವನ್ನು ಇದರ ಜಾಹೀರಾತಿನ ಚಿತ್ರೀಕರಣದ ಸಂದರ್ಭದಲ್ಲಿ ಮಾತ್ರ ಗುಟುಕರಿಸುತ್ತಾರೆ!.ಆದರೆ ಇಂತಹ ಜಾಹೀರಾತುಗಳಿಂದ ಪ್ರಭಾವಿತರಾದ ಜನರು ಪ್ರತಿನಿತ್ಯ ಇದನ್ನು ಸೇವಿಸುತ್ತಾರೆ.
ನೀವು ಮೆಚ್ಚಿ ಸವಿಯುವ ಲಘುಪಾನೀಯದಲ್ಲಿ ಏನಿದೆ ಎನ್ನುವುದು ಪ್ರಾಯಶಃ ನಿಮಗೂ ತಿಳಿದಿರಲಾರದು.ಉದಾಹರಣೆಗೆ ಮುಚ್ಚಳ ತೆಗೆದೊಡನೆ ನೊರೆಯೊಂದಿಗೆ ಹೊರಬರುವ ಕೋಲಾಗಳನ್ನು ಸಕ್ಕರೆ ,ಕೆಫೀನ್ ಮತ್ತು ಫಾಸ್ಫಾರಿಕ್ ಆಮ್ಲಗಳೊಂದಿಗೆ ಒಂದಿಷ್ಟು ವರ್ಣಕಾರಕ ಮತ್ತು ರುಚಿವರ್ಧಕ ದ್ರವ್ಯಗಳ ಸಮ್ಮಿಶ್ರಣಗಳಿಂದ ತಯಾರಿಸಲಾಗುತ್ತದೆ.ಇತ್ತೀಚಿಗೆ ಜನಪ್ರಿಯವೆನಿಸಿರುವ ಡಯಟ್ ಕೋಲಾಗಳಲ್ಲಿ ಸಕ್ಕರೆಯ ಬದಲಿಗೆ ಕೃತಕ ಮಾಧುರ್ಯಕಾರಕವನ್ನು ಬಳಸುತ್ತಿದ್ದು,ಇವೆಲ್ಲವೂ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ ಎಂದು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ.
ಒಂದು ಬಾಟಲಿ ಕೋಲಾದಲ್ಲಿ ಸಾಕಷ್ಟು ಪ್ರಮಾಣದ ಫಾಸ್ಫಾರಿಕ್ ಆಮ್ಲವಿದ್ದು,ನೀವು ಬಳಸುವ ಕಬ್ಬಿಣದ ಮೊಳೆ-ಬೀಗದಕೈಗಳಿಗೆ ಹಿಡಿದ ತುಕ್ಕನ್ನು ಕರಗಿಸಲು ಉಪಯುಕ್ತವೆನಿಸುತ್ತದೆ.ಜೊತೆಗೆ ನಿಮ್ಮ ಶೌಚಾಲಯದಲ್ಲಿನ ಅಪಾಯಕಾರಿ ರೋಗಾಣುಗಳನ್ನು ನಾಶಪಡಿಸುವಷ್ಟು ಶಕ್ತಿಶಾಲಿಯಾಗಿದೆ.ಈ ಆಮ್ಲದಿಂದಾಗಿ ಕೋಲಾಗಳ ಪಿ.ಎಚ್ ನ ಪ್ರಮಾಣವು ೨.೬ ಅಂದರೆ ಸರಿಸುಮಾರು ವಿನೆಗರ್ ನಲ್ಲಿ ಇರುವಷ್ಟೇ ಆಗಿರುತ್ತದೆ.
ಒಂದು ಬಾಟಲಿ ಕೋಲಾ ಅಥವಾ ಇತರ ಲಘುಪಾನೀಯಗಳಲ್ಲಿ ಸುಮಾರು ೧೫೦ರಿಂದ ೨೦೦ ಕ್ಯಾಲರಿಗಳಿದ್ದು,ಈ ನಿಷ್ಪ್ರಯೋಜಕ ಕ್ಯಾಲರಿಗಳನ್ನು ಹೊರತುಪಡಿಸಿ ನಿಮ್ಮ ಶರೀರಕ್ಕೆ ಯಾವುದೇ ಪೋಷಕಾಂಶಗಳು ದೊರೆಯುವುದಿಲ್ಲ.ಅಂತೆಯೇ ಈ ಕ್ಯಾಲರಿಗಳ ಬಹುದೊಡ್ಡ ಪಾಲು ಇವುಗಳಲ್ಲಿನ ಸಕ್ಕರೆಯಿಂದಾಗಿ ಲಭ್ಯವಾಗುವುದರಿಂದ,ಇವುಗಳ ಅತಿಸೇವನೆಯಿಂದ ವಯಸ್ಕರಲ್ಲಿ ಮಧುಮೇಹ,ಅತಿಬೊಜ್ಜು,ಅಧಿಕತೂಕ,ಅಧಿಕ ರಕ್ತದೊತ್ತಡ,ಹೃದಯ-ರಕ್ತನಾಳಗಳ ಕಾಯಿಲೆಗಳು ಮತ್ತು ಮಕ್ಕಳಲ್ಲಿ ಅಧಿಕ ತೂಕ ಹಾಗೂ ಅತಿಬೊಜ್ಜಿನಂತಹ ಸಮಸ್ಯೆಗಳಿಗೆ ಕಾರಣವೆನಿಸಬಲ್ಲದು.
ನಮ್ಮ ಜಠರದಲ್ಲಿರುವ ಕ್ಷಾರ-ಆಮ್ಲಗಳ ಸಮತೋಲನವು ಬಹಳ ಸೂಕ್ಷ್ಮ ಪ್ರವೃತ್ತಿಯದಾಗಿದ್ದು,ಅತಿಯಾದ ಲಘುಪಾನೀಯಗಳ ಸೇವನೆಯಿಂದ ಇದರಲ್ಲಿ ವ್ಯತ್ಯಯವಾಗುವುದು.ಅನುಭವೀ ವೈದ್ಯರೇ ಹೇಳುವಂತೆ ನಮ್ಮ ಜಠರದಲ್ಲಿ ಹೆಚ್ಚುವ ಆಮ್ಲದ ಪ್ರಮಾಣಕ್ಕೆ ಅನುಗುಣವಾಗಿ,ಉದರ ಸಂಬಂಧಿತ ವ್ಯಾಧಿಗಳ ಸಂಭಾವ್ಯತೆಯೂ ಹೆಚ್ಚಾಗುವುದು.ಜಠರದ ಲೋಳ್ಪರೆಯ ಉರಿಯೂತ-ಕೊರೆತಗಳಿಗೆ ಕಾರಣವೆನಿಸಬಲ್ಲ ಆಮ್ಲದಿಂದಾಗಿ ಉದರಶೂಲೆಯೂ ಉದ್ಭವಿಸಬಹುದು.ಈ ವಿಶಿಷ್ಟ ಸಮಸ್ಯೆಗೆ ಲಘುಪಾನೀಯಗಳಲ್ಲಿರುವ ಕೆಫೀನ್ ಹಾಗೂ ಅಸಿಟಿಕ್,ಫ್ಯುಮರಿಕ್,ಲುಕೊನಿಕ್ ಅಥವಾ ಪ್ಹಾಸ್ಫಾರಿಕ್ ಆಮ್ಲಗಳೇ ಕಾರಣವೆನಿಸುತ್ತವೆ.ಇದಲ್ಲದೆ ಕಾರ್ಬನ್ ಡೈ ಆಕ್ಸೈಡ್ ಬಳಸಿ ಸಿದ್ಧಪಡಿಸುವ ಎಲ್ಲಾ ಲಘುಪಾನೀಯಗಳು ಆಮ್ಲೀಯ ಗುಣವನ್ನು ಹೊಂದಿರುತ್ತವೆ.ಇಂತಹ ಒಂದು ಲಘುಪಾನೀಯವನ್ನು ಸೇವಿಸಿದಾಗ ನಿಮ್ಮ ಉದರವನ್ನು ಆಮ್ಲವನ್ನು ನಿಷ್ಕ್ರಿಯಗೊಳಿಸಲು,ಹತ್ತು ಲೋಟ ಕ್ಷಾರೀಯ ಗುಣವುಳ್ಳ ನೀರನ್ನು ಕುಡಿಯಬೇಕಾಗುವುದು!.
ಬಹುತೇಕ ಲಘುಪಾನೀಯಗಳಲ್ಲಿರುವ ಫಾಸ್ಫಾರಿಕ್ ಆಮ್ಲವು ಜಠರದಲ್ಲಿರುವ ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ಹೋರಾಡುವುದರಿಂದಾಗಿ ಅಜೀರ್ಣ,ಹೊಟ್ಟೆಯುಬ್ಬರ,ಎದೆಯುರಿ,ಮತ್ತು ಹುಳಿತೇಗಿನಂತಹ ತೊಂದರೆಗಳು ಉದ್ಭವಿಸುವ ಸಾಧ್ಯತೆಗಳಿವೆ.ನಿಮಗೆ ಅತಿಯಾದ ಹಸಿವೆ ಬಾಧಿಸಿದಾಗ ಕೇವಲ ಒಂದು ಬಾಟಲಿ ಲಘುಪಾನೀಯವನ್ನು ಕುಡಿದಲ್ಲಿ ಹೊಟ್ಟೆತುಂಬಿದಂತಹ ಭಾವನೆ ಮೂಡುವುದು.ಪ್ರಾಯಶಃ ಇದೇ ಕಾರಣದಿಂದಾಗಿ ಇವುಗಳನ್ನು ಅತಿಯಾಗಿ ಸೇವಿಸುವ ವ್ಯಕ್ತಿಗಳು,ಸೂಕ್ತ ಸಮಯದಲ್ಲಿ ಸೂಕ್ತಪ್ರಮಾಣದ ಆಹಾರವನ್ನು ಸೇವಿಸುವುದಿಲ್ಲ.ತತ್ಪರಿಣಾಮವಾಗಿ ಶರೀರಕ್ಕೆ ಅವಶ್ಯಕ ಪ್ರಮಾಣದ ಪೋಷಕಾಂಶಗಳೇ ದೊರೆಯದೇ ಸೊರಗುವ ಶರೀರವು,ತನ್ನ ರೋಗನಿರೋಧಕ ಶಕ್ತಿಯನ್ನೇ ಕಳೆದುಕೊಳ್ಳಬಹುದು.ಹಾಗೂ ಇದರಿಂದಾಗಿ ಅಯಾಚಿತ ಆರೋಗ್ಯದ ಸಮಸ್ಯೆಗಳು ಉದ್ಭವಿಸಬಹುದು.
ಕೋಲಾಗಳಲ್ಲಿ ಇರುವ ಕೆಫೀನ್ ನಮ್ಮ ಶರೀರದಲ್ಲಿರುವ ಕ್ಯಾಲ್ಸಿಯಂ ನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.ಇದರೊಂದಿಗೆ ಕೋಲಾಗಳಲ್ಲಿ ಇರುವ ಫಾಸ್ಫಾರಿಕ್ ಆಮ್ಲ ಮತ್ತು ಕಾರ್ಬನ್ ಡೈ ಆಕ್ಸೈಡ್ ಮೂಳೆಗಳಲ್ಲಿನ ಖನಿಜಾಂಶಗಳನ್ನು ನಿವಾರಿಸುವುದರಿಂದಾಗಿ ದುರ್ಬಲವಾಗುವ ಮೂಳೆಗಳು,ಸುಲಭದಲ್ಲೇ ಮುರಿಯುವ ಸಾಧ್ಯತೆಗಳಿವೆ.
ಇದಲ್ಲದೇ ಈ ಪಾನೀಯಗಳಲ್ಲಿ ಇರುವ ಕೆಫೀನ್ ಜಠರದ ಹುಣ್ಣುಗಳಿಗೆ ಕಾರಣವೆನಿಸಬಲ್ಲದು.ಜೊತೆಗೆ ಹೃದಯ ಮತ್ತು ಕೇಂದ್ರ ನರಮಂಡಲಗಳನ್ನು ಇದು ಉತ್ತೇಜಿಸುವುದರಿಂದ ತೀವ್ರ ಎದೆಬಡಿತ,ಅತಿಚಟುವಟಿಕೆ ಮತ್ತು ನಿದ್ರಾಹೀನತೆಗಳಿಗೆ ಕಾರಣವೆನಿಸಬಲ್ಲದು.ಕೆಫೀನ್ ನ ಅತಿಸೇವನೆಯು ರಕ್ತದ ಒತ್ತಡವನ್ನು ಹೆಚ್ಚಿಸುವುದರಿಂದ ಅಧಿಕ ರಕ್ತದೊತ್ತಡ ಇರುವ ವ್ಯಕ್ತಿಗಳು ಮತ್ತು ಗರ್ಭಿಣಿಯರು ಇವುಗಳನ್ನು ಸೇವಿಸದೇ ಇರುವುದು ಹಿತಕರ.
ಪುಟ್ಟ ಮಕ್ಕಳಲ್ಲಿ ಲಘುಪಾನೀಯಗಳ ಅತಿಸೇವನೆಯು "ದಂತಕುಳಿ "ಗಳಿಗೆ ಕಾರಣವೆನಿಸಲು ಇವುಗಳಲ್ಲಿರುವ ಸಕ್ಕರೆಯೇ ಕಾರಣ.ಅಂತೆಯೇ  ಇವುಗಳಲ್ಲಿನ ಆಮ್ಲಗಳು ಖನಿಜಾಂಶವನ್ನು ತೊಡೆದುಹಾಕುವುದರಿಂದ ದಂತಕ್ಷಯಕ್ಕೂ ಮೂಲವೆನಿಸುತ್ತವೆ.ವಿಶೇಷವಾಗಿ ಬೆಳೆಯುವ ವಯಸ್ಸಿನ ಮಕ್ಕಳು ಲಘುಪಾನೀಯಗಳ ಅತಿಸೇವನೆಯ ವ್ಯಸನಕ್ಕೆ ಒಳಗಾಗಿದ್ದಲ್ಲಿ,ಅವಶ್ಯಕ ಪ್ರಮಾಣದ ಸಮತೋಲಿತ ಆಹಾರವನ್ನೇ ಸೇವಿಸದೇ ಇರುವುದರಿಂದ ಇವರ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗಳು ಕುಂಠಿತಗೊಳ್ಳುವ ಸಾಧ್ಯತೆಗಳಿವೆ.ಇದರೊಂದಿಗೆ ನಿಷ್ಪ್ರಯೋಜಕ ಆಹಾರಗಳನ್ನು ಅತಿಯಾಗಿ ಸೇವಿಸುವ ಮಕ್ಕಳು ಅಧಿಕತೂಕ ಮತ್ತು ಅತಿಬೊಜ್ಜಿನಂತಹ ಸಮಸ್ಯೆಗಳಿಗೆ ಈಡಾಗುತ್ತಾರೆ.ಇವೆಲ್ಲವುಗಳೊಂದಿಗೆ ನಿಷ್ಕ್ರಿಯ ಜೀವನಶೈಲಿಯನ್ನು ಅನುಸರಿಸುವ ಮಕ್ಕಳು ಹದಿಹರೆಯದಲ್ಲೇ ಅನುವಂಶಿಕ ಮತ್ತು ಇತರ ಕಾಯಿಲೆಗಳಿಗೆ ಸುಲಭದಲ್ಲೇ ಈಡಾಗುತ್ತಾರೆ!.
ಅಂತಿಮವಾಗಿ ಲಘುಪಾನೀಯಗಳಲ್ಲಿ ಅಲ್ಪಪ್ರಮಾಣದಲ್ಲಿ ನಿಶ್ಚಿತವಾಗಿಯೂ ಇದೆಯೆಂದು ಇವುಗಳ ತಯಾರಕರೇ ಒಪ್ಪಿಕೊಂಡಿರುವ ಕೀಟನಾಶಕಗಳು,ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿದ್ದಲ್ಲಿ ಸಂಭವಿಸಬಲ್ಲ ವಿಷಕಾರಕ ಪರಿಣಾಮಗಳು ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸಬಲ್ಲವು.ಇವೆಲ್ಲಾ ಕಾರಣಗಳಿಂದಾಗಿ ಲಘುಪಾನೀಯಗಳ ಅತಿಸೇವನೆಯಿಂದ ಅನಾರೋಗ್ಯವನ್ನು ಆಹ್ವಾನಿಸುವುದಕ್ಕಿಂತಲೂ,ಇವುಗಳ ಸೇವನೆಯನ್ನೇ  ವರ್ಜಿಸುವುದು ಹಿತಕರವೆನಿಸುವುದು.
ಡಾ.ಸಿ.ನಿತ್ಯಾನಂದ ಪೈ
ಬಳಕೆದಾರರ ಹಿತರಕ್ಷಣಾ ವೇದಿಕೆ
ಬೊಳುವಾರು,ಪುತ್ತೂರು.ದ.ಕ

No comments:

Post a Comment