Monday, May 6, 2013



  ಕಣ್ಣುಗಳಿಗೆ ಕಂಟಕವೆನಿಸಬಲ್ಲ ವಾಹನಗಳ ತಲೆದೀಪಗಳು
ಕತ್ತಲಾದ ಬಳಿಕ ರಸ್ತೆಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ನೀಲಿ,ಬಿಳಿ ಅಥವಾ ನಸುಹಳದಿ ಬಣ್ಣದ ಕಣ್ಣುಕುಕ್ಕುವ ತಲೆದೀಪಗಳನ್ನು ಬೆಳಗಿಸಿ,ಶರವೇಗದಲ್ಲಿ ಧಾವಿಸುವ ವಾಹನಗಳನ್ನು ನೀವು  ಕಂಡಿರಲೇಬೇಕು.ಈ ದೀಪಗಳ ಪ್ರಖರತೆಯಿಂದ ಕ್ಷಣಕಾಲ ವಿಚಲಿತರಾಗಿ ,ಇಂತಹ ವಾಹನಗಳ  ಚಾಲಕರಿಗೆ ಹಿಡಿಶಾಪವನ್ನು ಹಾಕಿರಲೂಬಹುದು.ಮೋಟಾರು ವಾಹನಗಳ ಕಾಯಿದೆಯನ್ನು  ರಾಜಾರೋಷವಾಗಿ ಉಲ್ಲಂಘಿಸುವ ಇಂತಹ ಪ್ರವೃತ್ತಿಗೆ ಕಡಿವಾಣವನ್ನು ತೊಡಿಸಲು ಸಂಬಂಧಿತ ಇಲಾಖೆಗಳ ಸಿಬಂದಿಗಳು ವಿಫಲರಾಗಿರುವುದರಿಂದ,ಅಯಾಚಿತ ಸಮಸ್ಯೆಗಳು ಉದ್ಭವಿಸುತ್ತಿವೆ.ಜೊತೆಗೆ ಅಮಾಯಕರ ಪ್ರಾಣಹಾನಿಗೂ ಕಾರಣವೆನಿಸುತ್ತಿದೆ.
-----------------------------      ----------------      -------------------------- 
ಅತ್ಯಂತ ಪ್ರಖರವಾದ ಬೆಳಕನ್ನು ಬರಿಗಣ್ಣಿನಿಂದ ದಿಟ್ಟಿಸಿ ನೋಡಿದಲ್ಲಿ ಮನುಷ್ಯನ ಕಣ್ಣುಗಳಿಗೆ ಹಾನಿ ಸಂಭವಿಸುತ್ತದೆ ಎನ್ನುವುದು ನಿಮಗೂ ತಿಳಿದಿರಬೇಕು.ಇದೇ ಕಾರಣದಿಂದಾಗಿ ಸೂರ್ಯಗ್ರಹಣದ ಸಂದರ್ಭದಲ್ಲಿ ಬರಿಗಣ್ಣಿನಿಂದ  ಸೂರ್ಯನನ್ನು ವೀಕ್ಷಿಸಬಾರದೆಂದು  ನೇತ್ರತಜ್ಞರು ಎಚ್ಚರಿಕೆಯನ್ನು  ನೀಡುತ್ತಾರೆ.ಆದರೆ ಪ್ರತಿನಿತ್ಯ ಕತ್ತಲಾದ ಬಳಿಕ ರಸ್ತೆಗಳಲ್ಲಿ ನಡೆದಾಡುವ ಪಾದಚಾರಿಗಳು,ವಾಹನಗಳ ಚಾಲಕರು ಮತ್ತು   ರಸ್ತೆಯನ್ನು ಬಳಸುವ ಅನ್ಯ ಜನರು,ತಮ್ಮ ವಿರುದ್ಧ ದಿಕ್ಕಿನಿಂದ ಬರುವ ವಾಹನಗಳ ಪ್ರಖರವಾದ "ತಲೆ ದೀಪ"ಗಳಿಂದ ತಮ್ಮ ಕಣ್ಣುಗಳಿಗೆ ಸಂಭವಿಸಬಲ್ಲ ಹಾನಿಯನ್ನು ತಡೆಗಟ್ಟಲಾರದೆ ಚಡಪಡಿಸುತ್ತಾರೆ.
ಕ್ಸೆನಾನ್-ಹೇಲೋಜೆನ್  ದೀಪಗಳು
ನಿರಂತರವಾಗಿ ನಡೆಯುತ್ತಿರುವ ಸಂಶೋಧನೆಗಳಿಂದ ನಾವಿಂದು ಆವಿಷ್ಕರಿಸಿರುವ ಅನೇಕ ವಸ್ತುಗಳಲ್ಲಿ ಹೆಲೋಜೆನ್ ಮತ್ತು ಕ್ಸೆನಾನ್ ದೀಪಗಳೂ ಸೇರಿವೆ.ಮನುಷ್ಯನು ತನ್ನ ಸೌಕರ್ಯಕ್ಕಾಗಿ ಸೃಷ್ಟಿಸಿದ ಆದರೆ ತನ್ನದೇ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿನಮಿಸಬಲ್ಲ ವಸ್ತುಗಳಲ್ಲಿ ಈ ಪ್ರಖರವಾದ ವಾಹನಗಳ ತಲೆದೀಪಗಳೂ ಸೇರಿವೆ.ವಿಶೇಷವೆಂದರೆ ಈ ದೀಪಗಳು ಕಣ್ಣುಗಳಿಗೆ ಹಾನಿಯನ್ನು ಉಂಟುಮಾಡುವುದಲ್ಲದೆ,ಅಸಂಖ್ಯ ವಾಹನ ಅಪಘಾತಗಳಿಗೂ ಕಾರಣವೆನಿಸುತ್ತಿವೆ.ಏಕೆಂದರೆ ಈ ದೀಪಗಳ ಪ್ರಖರತೆಯಿಂದಾಗಿ, ವಿರುದ್ಧ ದಿಕ್ಕಿನಿಂದ ಬರುವ ವಾಹನಗಳ ಚಾಲಕರ ಕಣ್ಣುಗಳಿಗೆ ಮುಂದಿರುವ ರಸ್ತೆಯೇ ಕಾಣಿಸದಂತೆ ಭಾಸವಾಗುತ್ತದೆ.
ಇಂತಹ ದೀಪಗಳಲ್ಲಿ ನೀಲಿಬಣ್ಣದ ಅತ್ಯಂತ ಪ್ರಕಾಶಮಾನವಾದ ಬೆಳಕನ್ನು ಸೂಸುವ ಕ್ಸೆನಾನ್ ದೀಪಗಳು ಪ್ರಮುಖವಾಗಿವೆ.ಹಾಗೂ ಇದೇ ಕಾರಣದಿಂದಾಗಿ ಇವುಗಳನ್ನು ಅನೇಕ ದೇಶಗಳು ನಿಷೇಧಿಸಿವೆ.ಆದರೆ ಪ್ರೊಜೆಕ್ಟರ್ ಇರುವ ಕ್ಸೆನಾನ್ ದೀಪಗಳನ್ನು ಕೆಲದೇಶಗಳಲ್ಲಿ ಬಳಸಲಾಗುತ್ತಿದ್ದು,ಇವುಗಳ ಬೆಲೆಯೂ ಕೊಂಚ ದುಬಾರಿಯಾಗಿದೆ.ಇಂತಹ ದುಬಾರಿ ದೀಪಗಳು ವಿರುದ್ಧ ದಿಕ್ಕಿನಿಂದ ಬರುವ ವಾಹನಗಳ ಚಾಲಕರ ಕಣ್ಣುಕುಕ್ಕದಂತೆ ಮಂದಗೊಳಿಸಬಹುದಾಗಿದೆ.ಆದರೆ ನಮ್ಮಲ್ಲಿ ಬಳಸುತ್ತಿರುವ ಕ್ಸೆನಾನ್ ದೀಪಗಳಲ್ಲಿ ಪ್ರೊಜೆಕ್ಟರ್ ಇಲ್ಲದಿರುವುದರಿಂದ,ಇವುಗಳ ಬೆಲೆ ಸಾಕಷ್ಟು ಕಡಿಮೆಯಿದೆ.ಹಾಗೂ ಇದೇ ಕಾರಣದಿಂದಾಗಿ ಈ ದೀಪಗಳು ಅನ್ಯವಾಹನಗಳ ಚಾಲಕರು ಮತ್ತು ಪಾದಚಾರಿಗಳ ಕಣ್ಣುಗಳಿಗೆ ಹಾನಿಕಾರಕವಾಗಿ ಪರಿಣಮಿಸುತ್ತಿವೆ.ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿರುವ ಮೋಟಾರು ವಾಹನಗಳ ಕಾಯಿದೆಯಂತೆ ಇಂತಹ ಕಣ್ಣುಕುಕ್ಕುವ ದೀಪಗಳನ್ನು ವಾಹನಗಳ ತಲೆದೀಪಗಳಲ್ಲಿ ಬಳಸುವಂತಿಲ್ಲ,ಆದರೆ ಕಾಯಿದೆಗಳು-ನಿಯಮಗಳು ಇರುವುದೇ ಉಲ್ಲಂಘಿಸುವ ಸಲುವಾಗಿ ಎನ್ನುವ ಭಾರತೀಯರ ಕೆಟ್ಟ ಹವ್ಯಾಸದಿಂದಾಗಿ,ಇಂತಹ ನಿಷೇಧಿತ ದೀಪಗಳ ಬಳಕೆಯು ನಮ್ಮಲ್ಲಿ ಅವ್ಯಾಹತವಾಗಿ ಸಾಗುತ್ತಿದೆ.
ವಿಶೇಷವೆಂದರೆ ಪ್ರೊಜೆಕ್ಟರ್ ಇರುವ ಕ್ಸೆನಾನ್ ದೀಪಗಳನ್ನು ಅನೇಕ ವಿದೇಶಿ ನಿರ್ಮಿತ ಮೋಟಾರು ವಾಹನಗಳಲ್ಲಿ ಬಳಸಲಾಗುತ್ತಿದ್ದು,ಇವುಗಳು ವಿರುದ್ಧ ದಿಕ್ಕಿನಿಂದ ಬರುವ ವಾಹನಗಳ ಚಾಲಕರು ಹಾಗೂ ಪಾದಚಾರಿಗಳ ಕಣ್ಣುಗಳಿಗೆ ಹಾನಿಮಾಡುವುದಿಲ್ಲ.ಆದರೆ ನಮ್ಮದೇಶದಲ್ಲಿ ಕಡಿಮೆಬೆಲೆಗೆ ಲಭ್ಯವಿರುವ ಕ್ಸೆನಾನ್ ದೀಪಗಳಲ್ಲಿ ಪ್ರೊಜೆಕ್ಟರ್ ಇಲ್ಲದಿರುವುದರಿಂದ ಮತ್ತು ವಾಹನಗಳ ತಲೆದೀಪಗಳಿಗೆ ಕಪ್ಪುಬಣ್ಣ ಬಳಿಯುವ ಅಥವಾ ಕಪ್ಪು ಸ್ಟಿಕ್ಕರ್ ಆಂಟಿಸಬೇಕೆನ್ನುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದ  ಕಾರಣದಿಂದಾಗಿ,ಅಮಾಯಕರ ಕಣ್ಣುಗಳಿಗೆ ಹಾನಿ ಸಂಭವಿಸುತ್ತದೆ.
ನಿಯಮಗಳ ಉಲ್ಲಂಘನೆ
ಸಾಮಾನ್ಯವಾಗಿ ಕತ್ತಲಾದ ಬಳಿಕ ದಾರಿದೀಪಗಳು ಬೆಳಗುವ ನಗರ -ಪಟ್ಟಣಗಳಲ್ಲಿ ಯಾವುದೇ ವಾಹನಗಳ ತಲೆದೀಪಗಳನ್ನು ಬೆಳಗಿಸುವಂತಿಲ್ಲ.ಮಹಾನಗರಗಳಲ್ಲಂತೂ ವಾಹನಗಳ ತಲೆದೀಪಗಳನ್ನು ಬೆಳಗಿಸುವುದನ್ನೇ ನಿಷೇಧಿಸಲಾಗಿದೆ.ಇಂತಹ ಸಂದರ್ಭದಲ್ಲಿ "ಪಾರ್ಕ್ ಲೈಟ್ "ಎಂದು ಕರೆಯಲ್ಪಡುವ ಪುಟ್ಟ ದೀಪಗಳನ್ನು ಮಾತ್ರ ಬೆಳಗಿಸಿ ವಾಹನಗಳನ್ನು ಚಲಾಯಿಸಬೇಕಾಗುವುದು.ಏಕೆಂದರೆ ಮಹಾನಗರಗಳಲ್ಲಿ ಇರುವ ಅಸಂಖ್ಯ ದಾರಿದೀಪಗಳು, ವಾಹನಗಳ ಚಾಲಕರು-ಪಾದಚಾರಿಗಳಿಗೆ ಅವಶ್ಯಕ ಪ್ರಮಾಣದ ಬೆಳಕನ್ನು ನೀಡುತ್ತವೆ.ಇದಲ್ಲದೇ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸುವಾಗ,ವಿರುದ್ಧ ದಿಕ್ಕಿನಿಂದ ಯಾವುದೇ ವಾಹನ ಬರುತ್ತಿರುವುದನ್ನು ಕಂಡೊಡನೆ ತಮ್ಮ ವಾಹನದ ತಲೆದೀಪಗಳನ್ನು ಮಂದಗೊಳಿಸಲೆಬೇಕು. ಆದರೆ ನಮ್ಮ ರಾಜ್ಯದಲ್ಲಿ ಈ ನಿಯಮವನ್ನು ಯಾವುದೇ ವಾಹನಗಳ ಚಾಲಕರು ಪರಿಪಾಲಿಸುವುದಿಲ್ಲ.ಜೊತೆಗೆ ಸಾರಿಗೆ ಮತ್ತು ಆರಕ್ಷಕ ಇಲಾಖೆಗಳು ಇದನ್ನು ಅನುಷ್ಠಾನಿಸಲು ಆಸಕ್ತಿಯನ್ನೇ ತೋರುವುದಿಲ್ಲ.
ಮೋಟಾರು ವಾಹನಗಳ ಕಾಯಿದೆಯಂತೆ  ನಗರದ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿಯ ವೇಳೆ ಸಂಚರಿಸುವ ಪ್ರತಿಯೊಂದು ವಾಹನಗಳ ಚಾಲಕರು,ತಮ್ಮ ವಿರುದ್ಧ ದಿಕ್ಕಿನಿಂದ ಯಾವುದೇ ವಾಹನ ಬರುತ್ತಿರುವುದನ್ನು ಕಂಡೊಡನೆ ತಮ್ಮ ವಾಹನದ ತಲೆದೀಪವನ್ನು "ಮಂದ "ಗೋಳಿಸಲೇಬೇಕು.ಆದರೆ ಅನೇಕ ವಾಹನಗಳ ಚಾಲಕರು ಈ ನಿಯವನ್ನು ಉಲ್ಲಂಘಿಸುವುದರೊಂದಿಗೆ,ತಮ್ಮ ವಾಹನದ ದೀಪಗಳನ್ನು ಹಲವಾರು ಬಾರಿ ಆರಿಸಿ ಮತ್ತೆ ಉರಿಸುವ ಅಥವಾ ಮಂದಗೊಳಿಸದೇ ಇರುವ  ಕೆಟ್ಟ ಹವ್ಯಾಸವನ್ನು ಹೊಂದಿರುತ್ತಾರೆ.ಇದರಿಂದಾಗಿ ವಿರುದ್ಧ ದಿಕ್ಕಿನಿಂದ ಬರುವ ವಾಹನಗಳ ಚಾಲಕರ ಕಣ್ಣು ಕೋರೈಸಿದಂತಾಗಿ,ಅಪಘಾತಗಳ ಸಂಭಾವ್ಯತೆ ಹೆಚ್ಚುವುದು.ಕಾಲುದಾರಿಗಳೇ ಇಲ್ಲದ ನಗರ-ಪಟ್ಟಣಗಳಲ್ಲಿನ ಪಾದಚಾರಿಗಳು,ಅದರಲ್ಲೂ ವಿಶೇಷವಾಗಿ ವಯೋವೃದ್ಧರು ಮತ್ತು ಮಕ್ಕಳು  ಇಂತಹ ಸನ್ನಿವೇಶಗಳಲ್ಲಿ ತಮ್ಮ ಪ್ರಾಣವನ್ನು ಉಳಿಸುವ ಸಲುವಾಗಿ ರಸ್ತೆಯ ಅಂಚಿಗೆ ಸರಿಯುವ ಆತುರದಲ್ಲಿ ಬಿದ್ದು ಕೈ-ಕಾಲುಗಳನ್ನು ಮುರಿದುಕೊಂಡ ನಿದರ್ಶನಗಳೂ ಸಾಕಷ್ಟಿವೆ.
ವಿಶೇಷವೆಂದರೆ ರಾತ್ರಿಯ ವೇಳೆಯಲ್ಲಿ ಸಾಮಾನ್ಯವಾಗಿ ವಾಹನಗಳ ತಪಾಸಣೆಯನ್ನೇ ಮಾಡದ(ಮಾಡಿದರೂ ಅನ್ಯ ಉದ್ದೇಶಕ್ಕಾಗಿ ಮಾಡುವ )ಸಾರಿಗೆ ಇಲಾಖೆಯ ಅಧಿಕಾರಿಗಳು  ಮತ್ತು ಸಂಚಾರ ವಿಭಾಗದ ಆರಕ್ಷಕರಿಂದಾಗಿ, ಪ್ರಖರವಾದ ತಲೆದೀಪಗಳನ್ನು ಬೆಳಗುತ್ತಾ ಸಾರಿಗೆ ನಿಯಮಗಳನ್ನು ಉಲ್ಲಂಘಿಸುವ ಚಾಳಿ ನಿರಂತರವಾಗಿ ಸಾಗುತ್ತಿದೆ.ತತ್ಪರಿಣಾಮವಾಗಿ ಸಹಸ್ರಾರು ಅಮಾಯಕರ ಕಣ್ಣುಗಳಿಗೆ ತೀವ್ರವಾದ ಹಾನಿ ಸಂಭವಿಸುವುದರೊಂದಿಗೆ,ಅಸಂಖ್ಯ ಅಪಘಾತಗಳಿಗೆ ಕಾರಣವೆನಿಸುತ್ತಿದೆ.ಇವೆಲ್ಲಕ್ಕೂ ಮಿಗಿಲಾಗಿ ನೂರಾರು ಜನರ ಮರಣಕ್ಕೆ ಕಾರಣವೆನಿಸಿರುವ ಈ ಸಮಸ್ಯೆಯ ಅರಿವಿದ್ದರೂ,ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಇದನ್ನು ಬಗೆಹರಿಸಲು ಕ್ರಮ ಕೈಗೊಳ್ಳದಿರುವುದು ಮಾತ್ರ ನಂಬಲು ಅಸಾಧ್ಯವೆನಿಸುತ್ತಿದೆ.
ಕೆಲವೇ ವರ್ಷಗಳ ಹಿಂದಿನ ತನಕ ಪ್ರತಿಯೊಂದು ವಾಹನಗಳ ತಲೆದೀಪಗಳ ಮೇಲಿನ ಅರ್ಧಭಾಗಕ್ಕೆ ಕಪ್ಪು ಬಣ್ಣವನ್ನು ಬಳಿಯಲೇ ಬೇಕೆನ್ನುವ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತಿತ್ತು.ಈ ನಿಯಮವನ್ನು ಉಲ್ಲಂಘಿಸಿದವರಿಗೆ ದಂಡವನ್ನೂ ವಿಧಿಸಲಾಗುತ್ತಿತ್ತು.ಅಂತೆಯೇ ಅನೇಕ ಸ್ವಯಂಸೇವಾ ಸಂಘಟನೆಗಳು ಸಂಚಾರ ವಿಭಾಗದ ಆರಕ್ಷಕರೊಂದಿಗೆ ಜೊತೆಗೂಡಿ  ವರ್ಷದಲ್ಲಿ ಒಂದುಬಾರಿಯಾದರೂ ವಾಹನಗಳ ತಲೆದೀಪಗಳಿಗೆ ಉಚಿತವಾಗಿ ಕಪ್ಪುಬಣ್ಣವನ್ನು ಬಳಿಯುವ "ಕಾರ್ಯಕ್ರಮ "ವನ್ನು ಹಮ್ಮಿಕೊಳ್ಳುತ್ತಿದ್ದವು.ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಇಂತಹ ಕಾರ್ಯಕ್ರಮಗಳು ಕಣ್ಮರೆಯಾಗಿವೆ.ಇದರೊಂದಿಗೆ ಪ್ರಖರವಾದ ತಲೆದೀಪಗಳನ್ನು ಬೆಳಗಿಸುತ್ತಾ ಶರವೇಗದಲ್ಲಿ ವಾಹನಗಳನ್ನು ಚಲಾಯಿಸುವ ಪ್ರವೃತ್ತಿ ಹೆಚ್ಚುತ್ತಿದೆ.ಈ ಅಪಾಯಕಾರಿ ಪ್ರವೃತ್ತಿಯನ್ನು ಕ್ಷಿಪ್ರಗತಿಯಲ್ಲಿ ತೊಡೆದುಹಾಕದೆ ಇದ್ದಲ್ಲಿ,ಇನ್ನಷ್ಟು ಅಮಾಯಕರಿಗೆ ಕಂಟಕವಾಗಿ ಪರಿಣಮಿಸಲಿದೆ.
ಕೊನೆಯ ಮಾತು
ದೇಶದ ಪ್ರತಿಯೊಂದು ರಾಜ್ಯಗಳಲ್ಲಿ ವರ್ಷಂಪ್ರತಿ "ರಸ್ತೆ ಸುರಕ್ಷತಾ ಸಪ್ತಾಹ"ವನ್ನು ತಪ್ಪದೇ ಆಚರಿಸಲಾಗುತ್ತದೆ.ಈ ಸಂದರ್ಭದಲ್ಲಿ ಸಾರಿಗೆ ನಿಯಮಗಳನ್ನು ಪರಿಪಾಲಿಸದೇ  ಇದ್ದಲ್ಲಿ ಸಂಭವಿಸುವ ಅನಾಹುತಗಳ ಬಗ್ಗೆ ಮತ್ತು ರಸ್ತೆ ಸುರಕ್ಷತೆಯ ವಿಚಾರದಲ್ಲಿ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ವೈವಿಧ್ಯಮಯ ಕಾರ್ಯಕ್ರಮಗಳು ಮತ್ತು ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗುತ್ತದೆ.ಆದರೆ ಸಂಚಾರ ವಿಭಾಗದ ಆರಕ್ಷಕರ "ದಂಡ"ಕ್ಕೂ ಬೆದರದ ಜನರು, "ಸಾಮ"ಕ್ಕೆ ಹೆದರುವುದೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು.
ಪ್ರಾಯಶಃ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ತಮ್ಮ ಸಿಬ್ಬಂದಿಗಳಿಗೆ ಸಾರಿಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಟಾನಿಸುವಂತೆ  ಆದೇಶಿಸಿದಲ್ಲಿ,ಇಂತಹ ಪ್ರವೃತ್ತಿಯನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದಾಗಿದೆ.ತನ್ಮೂಲಕ ಗಣನೀಯ ಪ್ರಮಾಣದ ಅಪಘಾತಗಳನ್ನು ತಡೆಗಟ್ಟುವುದರೊಂದಿಗೆ,ಅಮಾಯಕರ ಕಣ್ಣುಗಳಿಗೆ ಸಂಭವಿಸುವ ಹಾನಿಯನ್ನು ಸುಲಭದಲ್ಲೇ ನಿವಾರಿಸಬಹುದಾಗಿದೆ.
 ಡಾ.ಸಿ.ನಿತ್ಯಾನಂದ ಪೈ ,ಪುತ್ತೂರು
 ಬಳಕೆದಾರರ ಹಿತರಕ್ಷಣಾ ವೇದಿಕೆ ,ಬೊಳುವಾರು,ಪುತ್ತೂರು -574201
ಬಳಕೆದಾರರ ಹಿತರಕ್ಷಣಾ ವೇದಿಕೆ


No comments:

Post a Comment