Wednesday, May 22, 2013

   ದಾರಿತಪ್ಪಿಸುವ ಜಾಹೀರಾತುಗಳತ್ತ ಕೇಂದ್ರಸರಕಾರದ ಚಿತ್ತ
ವಿವಿಧ ಮಾಧ್ಯಮಗಳಲ್ಲಿ ಪ್ರತಿನಿತ್ಯ ಪ್ರಕಟವಾಗುವ ಅಸಂಖ್ಯ ಜಾಹೀರಾತುಗಳಲ್ಲಿ ಜನಸಾಮಾನ್ಯರ ದಾರಿತಪ್ಪಿಸುವ,ಸತ್ಯಕ್ಕೆ ದೂರವಾದ ಮತ್ತು ಉತ್ಪ್ರೇಕ್ಷಿತ  ಜಾಹೀರಾತುಗಳ ಸಂಖ್ಯೆ ಸಾಕಷ್ಟಿದೆ. ಇಂತಹ  ಜಾಹೀರಾತುಗಳನ್ನು ನಿಯಂತ್ರಿಸಲು ಹಾಗೂ ನಿಷೇಧಿಸಲು ಮತ್ತು ಇವುಗಳ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲು ನಮ್ಮ ದೇಶದಲ್ಲಿ ಅವಶ್ಯಕ ವ್ಯವಸ್ಥೆಗಳೂ ಇವೆ.  ಆದರೆ  ಔಷದ ನಿಯಂತ್ರಣ ಇಲಾಖೆಯ ಅಧಿಕಾರಿಗಳು  ಈ ಕಾನೂನುಗಳನ್ನು  ಕಟ್ಟುನಿಟ್ಟಾಗಿ ಜಾರಿಗೊಳಿಸದ ಕಾರಣದಿಂದಾಗಿ, ಇಂತಹ ಜಾಹೀರಾತುಗಳ  ಹಾವಳಿ ಇತ್ತೀಚಿನ ಕೆಲ ವರ್ಷಗಳಿಂದ ಹೆಚ್ಚುತ್ತಿದೆ. ಹಾಗೂ ಇದೇ ಕಾರಣದಿಂದಾಗಿ ಇವುಗಳ ವಿರುದ್ಧ ದೂರುಗಳನ್ನು ನೀಡುತ್ತಿರುವ ಗ್ರಾಹಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರವು, ಈ ಸಮಸ್ಯೆಯನ್ನು  ನಿಯಂತ್ರಿಸಲು ಕಠಿಣ  ಕ್ರಮಗಳನ್ನು ಕೈಗೊಳ್ಳಲು ಸನ್ನದ್ಧವಾಗಿದೆ.  
-----------          ------------           -------------          ------------           -----------          ------------         ------------                           ಪ್ರತಿನಿತ್ಯ ವಿವಿಧ ಮಾಧ್ಯಮಗಳಲ್ಲಿ ಪ್ರಕಟ- ಪ್ರಸಾರವಾಗುವ ವೈವಿಧ್ಯಮಯ ಜಾಹೀರಾತುಗಳಲ್ಲಿ ಕೆಲವೊಂದು ಜಾಹೀರಾತುಗಳು  ಮುಗ್ಧ ಹಾಗೂ ಅಮಾಯಕ ಜನರನ್ನು ಮರುಳುಗೊಳಿಸುತ್ತವೆ. ಜನಸಾಮಾನ್ಯರನ್ನು ದಾರಿತಪ್ಪಿಸಬಲ್ಲ, ಸತ್ಯಕ್ಕೆ ದೂರವಾದ ಮತ್ತು ವಿಸ್ಮಯಕಾರಿ- ಪವಾಡ ಸದೃಶ ಪರಿಣಾಮಗಳನ್ನು ಬೀರಬಲ್ಲ ಎಂದು ಘೋಷಿಸುವ ವಿವಿಧ ಗ್ರಾಹಕ ಉತ್ಪನ್ನಗಳ ಜಾಹೀರಾತುಗಳನ್ನು ನಿಯಂತ್ರಿಸಲು ಇದೀಗ ಕೇಂದ್ರ ಸರಕಾರ ಸಜ್ಜಾಗಿದೆ.
ಆಹಾರ ಸುರಕ್ಷಾ ಮತ್ತು ಗುಣಮಟ್ಟ ಕಾಯಿದೆ, ಗ್ರಾಹಕ ರಕ್ಷಣಾ ಕಾಯಿದೆ ಮತ್ತು ಔಷದ ಮತ್ತು ವಿಸ್ಮಯಕಾರಿ ಚಿಕಿತ್ಸೆಗಳ ಕಾಯಿದೆಗಳು ಅಸ್ತಿತ್ವದಲ್ಲಿದ್ದರೂ, ಇಂತಹ ಜಾಹೀರಾತುಗಳ ಹಾವಳಿ ಮಿತಿಮೀರಿದೆ. ಇವುಗಳಿಗೆ ಕಡಿವಾಣವನ್ನು ತೊಡಿಸುವ ಸಲುವಾಗಿ ಅಂತರ್ ಸಚಿವಾಲಯ ಮಟ್ಟದ ಸಮಿತಿಯೊಂದನ್ನು ರೂಪಿಸುವುದಾಗಿ ಕೇಂದ್ರದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರು  ಮೇ ತಿಂಗಳಿನಲ್ಲಿ ಹೇಳಿಕೆಯೊಂದನ್ನು ನೀಡಿದ್ದರು.
ಇಂತಹ ಜಾಹೀರಾತುಗಳನ್ನು  ತಡೆಗಟ್ಟಲು ಸಮಗ್ರವಾದ ಕಾನೂನನ್ನು ರೂಪಿಸುವ ಅವಶ್ಯಕತೆಯಿದ್ದು, ಇದಕ್ಕಾಗಿ ಸಂಬಂಧಿತರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುತ್ತಿದೆ. ಸಂಸ್ಥೆಗಳು ತಮ್ಮ ಜಾಹೀರಾತುಗಳಲ್ಲಿ ನೀಡುವ ಸುಳ್ಳು ಭರವಸೆಗಳ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸುವ ಹಕ್ಕನ್ನು, ನೂತನ ಕಾಯಿದೆಯು ಗ್ರಾಹಕರಿಗೆ ನೀಡಲಿದೆ ಎಂದು ಸಚಿವರು ನುಡಿದಿದ್ದರು. ಜೊತೆಗೆ ಈ ವಿಚಾರದಲ್ಲಿ ಸ್ವಯಂ ನಿಯಂತ್ರಣ ಮತ್ತು ಕಾನೂನು ನಿಯಂತ್ರಣಗಳು ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕು ಎನ್ನುವ ಅಭಿಪ್ರಾಯ ವ್ಯಾಪಕವಾಗಿ ವ್ಯಕ್ತಗೊಂಡಿದೆ ಎಂದು ಹೇಳಿದ್ದರು.
ಅವಶ್ಯಕ ಕಾನೂನುಗಳು ಇದ್ದರೂ ಅನಿಯಂತ್ರಿತವಾಗಿ ವೃದ್ಧಿಸುತ್ತಿರುವ ಈ ಸಮಸ್ಯೆಯನ್ನು ಖಚಿತವಾಗಿ ನಿಯಂತ್ರಿಸುವತ್ತ ಕೇಂದ್ರ ಸರಕಾರವು ತನ್ನ ಗಮನವನ್ನು ಹರಿಸಿರುವುದು ಇದರ ತೀವ್ರತೆ ಮತ್ತು ದುಷ್ಪರಿಣಾಮಗಳನ್ನು  ಸೂಚಿಸುತ್ತದೆ. ಅಸಂಖ್ಯ ಗ್ರಾಹಕ ಉತ್ಪನ್ನಗಳು, ಸೌಂದರ್ಯ ಪ್ರಸಾದನಗಳು ಮತ್ತು ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದ ವೈವಿಧ್ಯಮಯ ಉತ್ಪನ್ನಗಳ ಕೆಲವೊಂದು  ಜಾಹೀರಾತುಗಳಿಂದ ಪ್ರಭಾವಿತರಾಗಿ, ಇವುಗಳನ್ನು ಖರೀದಿಸಿ ಬಳಸಿದ ಪರಿಣಾಮವಾಗಿ ಕಷ್ಟ ನಷ್ಟಗಳಿಗೆ ಈಡಾಗಿದ್ದ ಗ್ರಾಹಕರಿಂದ ಬಂದಿದ್ದ ಸಹಸ್ರಾರು ದೂರುಗಳೇ, ಸರಕಾರದ ಈ ಕ್ರಮಕ್ಕೆ ಕಾರಣವೆನ್ನುವುದರಲ್ಲಿ ಸಂದೇಹವಿಲ್ಲ. 
ಮೋಡಿ ಮಾಡುವ ಜಾಹೀರಾತುಗಳು 
ಮಾಧ್ಯಮಗಳಲ್ಲಿ ಪ್ರತಿನಿತ್ಯ ಪ್ರಸಾರವಾಗುವ ಸಹಸ್ರಾರು ಜಾಹೀರಾತುಗಳಲ್ಲಿ ಮನುಷ್ಯನ ಶರೀರ, ಮನಸ್ಸು ಮತ್ತು  ಆರೋಗ್ಯಗಳಿಗೆ ಸಂಬಂಧಿಸಿದ ಅನೇಕ ಜಾಹೀರಾತುಗಳು ಗ್ರಾಹಕರನ್ನು ಆಯಸ್ಕಾಂತದಂತೆ ಆಕರ್ಷಿಸುತ್ತವೆ. ಇವುಗಳಲ್ಲಿ ಕೃಷ್ಣ ವರ್ಣದವರನ್ನು ಗೌರ ವರ್ಣದವರನ್ನಾಗಿಸಬಲ್ಲ,ಬಕ್ಕತಲೆಯಲ್ಲಿ    ಮತ್ತೆ ಕೂದಲುಗಳನ್ನು ಮೂಡಿಸಬಲ್ಲ, ಕುಳ್ಳರನ್ನು ನೀಳಕಾಯರನ್ನಾಗಿಸುವ,  ಕೃಶಕಾಯರನ್ನು ಅತಿಕಾಯರನ್ನಾಗಿಸುವ,  ಧಡೂತಿ ದೇಹದವರನ್ನು ಬಳುಕುವ ಬಳ್ಳಿಯಂತೆ ಪರಿವರ್ತಿಸುವ, ಮರೆಗುಳಿಗಳ ಸ್ಮರಣ ಶಕ್ತಿಯನ್ನು ಹೆಚ್ಚಿಸುವ, ಇಳಿವಯಸ್ಸಿನವರ ಲೈಂಗಿಕ ಸಾಮರ್ಥ್ಯವನ್ನು ವೃದ್ಧಿಸುವ, ಗಂಟು - ಸೊಂಟ ನೋವುಗಳನ್ನು ಕ್ಷಣಮಾತ್ರದಲ್ಲಿ ನಿವಾರಿಸಬಲ್ಲ,ಆಸ್ತಮಾ-ಮಧುಮೇಹ-ಅಧಿಕ ರಕ್ತದೊತ್ತಡ-ಹೃದ್ರೋಗ ಮತ್ತು ಮಾರಕ ಕ್ಯಾನ್ಸರ್ ಗಳಂತಹ ಶಾಶ್ವತ ಪರಿಹಾರವಿಲ್ಲದ ವ್ಯಾಧಿಗಳನ್ನು ನಿಶ್ಚಿತವಾಗಿ ಗುಣಪಡಿಸುವುದಾಗಿ ಘೋಷಿಸುವ ನೂರಾರು ವಿಸ್ಮಯಕಾರಿ ಔಷದಗಳ  ಜಾಹೀರಾತುಗಳನ್ನು    ನೀವೂ ಕಂಡಿರಲೇಬೇಕು.ನಿಜ ಹೇಳಬೇಕಿದ್ದಲ್ಲಿ   ಔಷದ ನಿಯಂತ್ರಣ ಇಲಾಖೆಯ ನಿಯಮಗಳಲ್ಲಿ ೫೪ ವಿಧದ ಕಾಯಿಲೆಗಳು- ಆರೋಗ್ಯದ ಸಮಸ್ಯೆಗಳನ್ನು ಹೆಸರಿಸಿದ್ದು, ಇವುಗಳ ಬಗ್ಗೆ ಯಾವುದೇ ರೀತಿಯ ಜಾಹೀರಾತುಗಳನ್ನು ನೀಡುವಂತಿಲ್ಲ.  ಇವುಗಳಲ್ಲಿ ಮಧುಮೇಹ, ಕ್ಯಾನ್ಸರ್,  ತೊನ್ನು, ಅತಿಬೊಜ್ಜು, ನಪುಂಸಕತ್ವ, ಸಂತಾನ ಹೀನತೆ, ಜಠರದ ಹುಣ್ಣುಗಳು, ಲೈಂಗಿಕ ರೋಗಗಳು-ಸಮಸ್ಯೆಗಳು ,ಹೃದ್ರೋಗಗಳು ಮತ್ತು  ಸ್ತ್ರೀಯರ ಸ್ತನಗಳ ಮತ್ತು ಶರೀರದ ಗಾತ್ರಗಳಿಗೆ  ಸಂಬಂಧಿಸಿದ ಮತ್ತು ಇತರ ಕೆಲ  ಸಮಸ್ಯೆಗಳೂ  ಸೇರಿವೆ. ೨೦೦೪ ರಲ್ಲಿ ಈ ಪಟ್ಟಿಯನ್ನು ಪುನರ್ ವಿಮರ್ಶಿಸಿದ್ದು, ಎಚ್.ಐ. ವಿ-ಏಡ್ಸ್ ಮತ್ತು ಪೋಲಿಯೋ ಇತ್ಯಾದಿ ಕಾಯಿಲೆಗಳನ್ನು ಇದರಲ್ಲಿ ಸೇರಿಸಲಾಗಿತ್ತು. ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಾಲಯವು ಇಂತಹ ಕಾಯಿಲೆಗಳನ್ನು ಗುಣಪಡಿಸುವುದಾಗಿ ಜಾಹೀರಾತುಗಳನ್ನು ನೀಡಿ ಜನಸಾಮಾನ್ಯರನ್ನು ಮರುಳುಗೊಳಿಸುವ ಸಂಸ್ಥೆಗಳ ಮತ್ತು ನಕಲಿ ವೈದ್ಯರ  ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಲು ೨೦೦೪ರಲ್ಲಿ  ಸಮಿತಿಯೊಂದನ್ನು ರಚಿಸಿತ್ತು. ಡ್ರಗ್ಸ್ ಎಂಡ್ ಮ್ಯಾಜಿಕ್ ರೆಮಿಡೀಸ್(ಅಬ್ಜೆಕ್ಷನೆಬಲ್ ಅಡ್ವರ್ಟೈಸ್ಮೆಂಟ್ಸ್)ಆಕ್ಟ್ ೧೯೫೪ ಮತ್ತು ಡ್ರಗ್ಸ್ ಎಂಡ್ ಕಾಸ್ಮೆಟಿಕ್ಸ್ ರೂಲ್ಸ್ ಕಾಯಿದೆಗಳನ್ವಯ  ಇಂತಹ ಜಾಹೀರಾತುಗಳನ್ನು ನೀಡುವ ವ್ಯಕ್ತಿಗಳು- ಸಂಸ್ಥೆಗಳ ವಿರುದ್ಧ ಔಷದ ನಿಯಂತ್ರಣ ಇಲಾಖೆಯು ನ್ಯಾಯಾಲಯದಲ್ಲಿ  ದಾವೆಯನ್ನು ಹೂಡಿ, ಶಿಕ್ಷೆಯನ್ನೂ ವಿಧಿಸಬಹುದಾಗಿದೆ. ಆದರೆ ನಮ್ಮ ದೇಶದಲ್ಲಿ ಇವೆರಡೂ ಕಾಯಿದೆಗಳನ್ನು ರಾಜಾರೋಷವಾಗಿ ಉಲ್ಲಂಘಿಸಲಾಗುತ್ತಿದೆ. ಔಷದ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಇಂತಹ ಜಾಹೀರಾತುಗಳ ವಿರುದ್ಧ ನ್ಯಾಯಾಲಯಗಳಲ್ಲಿ ದಾವೆಯನ್ನು ಹೂಡಿ, ಶಿಕ್ಷೆಯನ್ನು ಕೊಡಿಸಿದ್ದ ಪ್ರಕರಣಗಳು ಮತ್ತು ಇವುಗಳಿಂದ  ಮೋಸ ಹೋಗಿದ್ದ ಗ್ರಾಹಕರು ಇಲಾಖೆಗೆ ಸಲ್ಲಿಸಿದ್ದ ದೂರುಗಳ ಸಂಖ್ಯೆಯೂ ಕೇವಲ ಬೆರಳೆಣಿಕೆಯಷ್ಟೇ ಇವೆ.ಪ್ರಾಯಶಃ ಇದೇ ಕಾರಣದಿಂದಾಗಿ ದಾರಿತಪ್ಪಿಸುವ ಜಾಹೀರಾತುಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದೆ. ಈ ವಿಲಕ್ಷಣ ಸಮಸ್ಯೆಗೆ ಕರ್ನಾಟಕವೂ ಅಪವಾದ ಎನಿಸಿಲ್ಲ.
ಉದಾಹರಣೆಗೆ ಉತ್ತಮ ಗುಣಮಟ್ಟದ ಹಾಗೂ ಪೋಷಕಾಂಶಗಳಿಂದ ಸಮೃದ್ಧವಾದ ಆಹಾರವನ್ನು ಸೇವಿಸದೇ ಮತ್ತು  ಯಾವುದೇ ರೀತಿಯ ವ್ಯಾಯಾಮವನ್ನು ಮಾಡದೇ ಪೈಲ್ವಾನರಂತಹ ಕಟ್ಟುಮಸ್ತಾದ ಶರೀರವನ್ನು ಹೊಂದುವುದು  ಅಸಾಧ್ಯ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಸುಪ್ರಸಿದ್ದ ನಟರು ಅಥವಾ ಕ್ರೀಡಾಪಟುಗಳು ರೂಪದರ್ಶಿಯಾಗಿರುವ  ದುಬಾರಿ ಬೆಲೆಯ ಔಷದವೊಂದನ್ನು ಪ್ರತಿನಿತ್ಯ ಸೇವಿಸಿ ಆಕರ್ಷಕ ಅಂಗಸೌಷ್ಟವವನ್ನು ಗಳಿಸಿರಿ ಎಂದು ಘೋಷಿಸುವ ಜಾಹೀರಾತುಗಳಿಗೆ ಮರುಳಾಗಿ ಇದನ್ನು ಖರೀದಿಸಿ ಸೇವಿಸಿದಲ್ಲಿ, ದೊಡ್ಡ ಮೊತ್ತದ ಹಣದೊಂದಿಗೆ ನಿಮ್ಮ ಆರೋಗ್ಯವನ್ನೂ ಕಳೆದುಕೊಳ್ಳುವ ಸಾಧ್ಯತೆಗಳಿವೆ .ಏಕೆಂದರೆ ಇಂತಹ ಉತ್ಪನ್ನಗಳ ಹೊರಕವಚಗಳ ಮೇಲೆ ಇವುಗಳಲ್ಲಿ ಬಳಸಿರುವ ಔಷದ-ಅನ್ಯ ದ್ರವ್ಯಗಳ ವಿವರಗಳನ್ನು ಮುದ್ರಿಸಿರುವುದಿಲ್ಲ. ನೈಸರ್ಗಿಕ ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ ಎನ್ನುವ ಇಂತಹ ಉತ್ಪನ್ನಗಳಲ್ಲಿ, ಅನಬಾಲಿಕ್ ಸ್ಟೆರಾಯ್ಡ್ ನಂತಹ ಔಷದಗಳನ್ನು ಬೆರೆಸಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇಂತಹ ಔಷದಗಳ ಅತಿಯಾದ ಸೇವನೆಯಿಂದ ಅಯಾಚಿತ ಹಾಗೂ ಗಂಭೀರ ಸಮಸ್ಯೆಗಳು ತಲೆದೋರುವುದರಲ್ಲಿ ಸಂದೇಹವಿಲ್ಲ.ತಜ್ಞ ವೈದ್ಯರ ಸಲಹೆ ಪಡೆಯದೇ ಸ್ಟೆರಾಯ್ಡ್ ಗಳನ್ನು ಸೇವಿಸುವುದು ಬೆಂಕಿಯೊಂದಿಗೆ ಸರಸವಾಡಿದಂತೆ ಎನ್ನುವುದನ್ನು ಮರೆಯದಿರಿ.
ಕೇವಲ ಜಾಹೀರಾತುಗಳ ಬಲದಿಂದಲೇ ಮಾರಾಟವಾಗುವ ಲೈಂಗಿಕ ಶಕ್ತಿವರ್ಧಕ ಔಷದಗಳು ಅತ್ಯಂತ ದುಬಾರಿಯಾಗಿದ್ದರೂ, ಇವುಗಳಲ್ಲಿ ನಿಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸಬಲ್ಲ ಔಷದಗಳೇ ಇರುವುದಿಲ್ಲ. ಇದಕ್ಕೂ ಮಿಗಿಲಾಗಿ ಇಂತಹ ಔಷದಿಗಳೊಂದಿಗೆ  ಉಚಿತವಾಗಿ ನೀಡುವ, ಪುರುಷರ ಪ್ರಜನನಾಂಗದ ಉದ್ದ ಮತ್ತು ಗಾತ್ರಗಳನ್ನು ಹೆಚ್ಚಿಸುವ "ಯಂತ್ರ"ವನ್ನು ಇಂದಿನ ತನಕ ಸಂಶೋಧಿಸಿಲ್ಲ. ಮಾತ್ರವಲ್ಲ, ಇದು ಸಾಧ್ಯವೂ ಅಲ್ಲ.
ಇನ್ನು ಚರ್ಮದ ಮೇಲಿನ ಬಿಳಿ ಮಚ್ಚೆಗಳು ಅರ್ಥಾತ್ ತೊನ್ನು ಎಂದು ಕರೆಯಲ್ಪಡುವ ವ್ಯಾಧಿಯನ್ನು ಖಚಿತವಾಗಿ ಗುಣಪಡಿಸುವುದಾಗಿ ಘೋಷಿಸುವ ಔಷದಗಳನ್ನು ಹಚ್ಚಿದ ಕೆಲವೇ ಗಂಟೆಗಳಲ್ಲಿ ,ಚರ್ಮದ ಮೇಲಿನ ಬಿಳಿಯ ಕಲೆಗಳ ಬಣ್ಣ ಬದಲಾಗುವ  ಸಾಧ್ಯತೆಗಳೇ ಇಲ್ಲ.
ಇನ್ನು ಸ್ತ್ರೀಯರ ಸ್ತನಗಳ ಗಾತ್ರ ಹಾಗೂ ಆಕಾರಗಳನ್ನು ಹೆಚ್ಚಿಸಿ, ಆಕರ್ಷಣೀಯವಾಗಿ ಪರಿವರ್ತಿಸಬಲ್ಲ ಔಷದಗಳು ನಿಜಕ್ಕೂ ಲಭ್ಯವಿದ್ದಲ್ಲಿ,ನಿಮ್ಮ ಚಿರಪರಿಚಿತ ಕುಟುಂಬ ವೈದ್ಯರು ನಿಮಗೆ ಇದನ್ನು ಸೇವಿಸುವಂತೆ ಸೂಚಿಸುವುದರಲ್ಲಿ ಸಂದೇಹವಿಲ್ಲ!.
ಇವೆಲ್ಲಕ್ಕೂ ಮಿಗಿಲಾಗಿ ಜನಸಾಮಾನ್ಯರನ್ನು ಜೀವನ ಪರ್ಯಂತ ಕಾಡಬಲ್ಲ ಮತ್ತು ಶಾಶ್ವತ ಪರಿಹಾರವೇ ಇಲ್ಲದ ಅಧಿಕ ರಕ್ತದೊತ್ತಡ, ಮಧುಮೇಹ, ಕೆಲ ವಿಧದ ಹೃದ್ರೋಗಗಳಂತಹ  ಕಾಯಿಲೆಗಳನ್ನು  ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ಗುಣಪಡಿಸುವಂತಹ ಔಷದಗಳನ್ನು ಇಂದಿನ ತನಕ ಸಂಶೋಧಿಸಿಲ್ಲ. ನಿಜಕ್ಕೂ ಇಂತಹ ಔಷದಗಳನ್ನು ಸಂಶೋಧಿಸಿದ ವ್ಯಕ್ತಿಗಳಿಗೆ ಜಗತ್ಪ್ರಸಿದ್ಧ "ನೊಬೆಲ್ ಪ್ರಶಸ್ತಿ" ದೊರೆಯುವುದರಲ್ಲಿ ಸಂದೇಹವಿಲ್ಲ!.
ಕಾನೂನು ಕ್ರಮ ಕೈಗೊಳ್ಳುವವರು ಯಾರು?
ಕಾನೂನುಬಾಹಿರವಾಗಿ ಈ ರೀತಿಯ ಜಾಹೀರಾತುಗಳು ಪ್ರತಿನಿತ್ಯ ಪ್ರಕಟವಾಗುತ್ತಿದ್ದರೂ,ಇವುಗಳನ್ನು ನೀಡುತ್ತಿರುವ ವ್ಯಕ್ತಿ ಅಥವಾ ಸಂಸ್ಥೆಗಳ ವಿರುದ್ಧ ಔಷದ ನಿಯಂತ್ರಣ ಇಲಾಖೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಡ್ರಗ್ಸ್ ಎಂಡ್ ಮ್ಯಾಜಿಕ್ ರೇಮಿಡೀಸ್  (ಒಬ್ಜೆಕ್ಷನೆಬಲ್ ಅಡ್ವರ್ಟೈಸ್ ಮೆಂಟ್ಸ್)ಆಕ್ಟ್ ೧೯೫೪ ರಂತೆ ಇಂತಹ ಜಾಹೀರಾತುಗಳನ್ನು ನೀಡುವ ಸಂಸ್ಥೆಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ, ಶಿಕ್ಷೆಗೆ ಗುರಿಯಾಗಿದ್ದ ಸಂಸ್ಥೆಗಳೂ ಮತ್ತೆ ಇದೇ ಜಾಹೀರಾತುಗಳನ್ನು ಪ್ರಕಟಿಸುತ್ತಿರುವುದು ಮಾತ್ರ ನಂಬಲಸಾಧ್ಯ ಎನಿಸುತ್ತದೆ. ಕರ್ನಾಟಕ ರಾಜ್ಯದ ಔಷದ ನಿಯಂತ್ರಣ ಇಲಾಖೆಯಿಂದ ಮಾಹಿತಿ ಹಕ್ಕು ಕಾಯಿದೆಯಂತೆ ಪಡೆದುಕೊಂಡಿದ್ದ ವಿವರಗಳಿಂದ ಈ ವಿಚಾರ ಬಯಲಾಗಿದೆ.
ಆದರೆ ಮಾಧ್ಯಮಗಳಲ್ಲಿ ಇದೇ ರೀತಿಯ  ಅನೇಕ ಜಾಹೀರಾತುಗಳು ಪ್ರಕಟವಾಗುತ್ತಿದ್ದು ಈ ಬಗ್ಗೆ ನೀವು ಕೈಗೊಂಡಿರುವ ಕ್ರಮಗಳೇನು?,ಎಂದು  ಮಾಹಿತಿ ಹಕ್ಕು ಕಾಯಿದೆಯನ್ವಯ ನಾವು ಸಲ್ಲಿಸಿದ್ದ ಅರ್ಜಿಯಲ್ಲಿ ನಮೂದಿಸಿರುವ ವಿವರಗಳು ಮತ್ತು ಇದರೊಂದಿಗೆ ಲಗತ್ತಿಸಿದ್ದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಜಾಹೀರಾತುಗಳ ತುಣುಕುಗಳನ್ನು  ಕಂಡ ಬಳಿಕ ಎಚ್ಚೆತ್ತ ಇಲಾಖೆಯು ಜಾಹೀರಾತುದಾರರಿಗೆ ನೋಟೀಸು ಜಾರಿಗೊಳಿಸಿರುವುದಾಗಿ ನಮಗೆ ತಿಳಿಸಿದೆ!. ಅರ್ಥಾತ್, ಔಷದ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವುದಿಲ್ಲ   ಹಾಗೂ ಟೆಲಿವಿಶನ್ ಚಾನಲ್ ಗಳನ್ನು ನೋಡುವುದೇ ಇಲ್ಲ ಎನ್ನುವಂತಹ ಹಾರಿಕೆಯ ಉತ್ತರವನ್ನು ನೀಡಿರುವುದು ಇವರ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ.
ಇಷ್ಟು ಮಾತ್ರವಲ್ಲ, ಇಂತಹ ಜಾಹೀರಾತುದಾರರ ವಿರುದ್ಧ ಇಲಾಖೆಯು ಮೊಕದ್ದಮೆಗಳನ್ನು ಹೂಡಿರುವ ಬಗ್ಗೆ ವಿವರಗಳನ್ನು ಒದಗಿಸುವಂತೆ ಕೋರಲಾಗಿದ್ದು, ಇಂತಹ ಪ್ರಕರಣಗಳ ತೀರ್ಪಿನ ಸಂಪೂರ್ಣ ವಿವರಗಳನ್ನೇ ನೀಡದ ಅಧಿಕಾರಿಗಳು ಕೇವಲ ಮೊದಲನೆಯ ಪುಟಗಳ ಜೆರಾಕ್ಸ್ ಪ್ರತಿಗಳನ್ನು ನೀಡಿರುವುದು ಹಲವಾರು ಸಂದೇಹಗಳಿಗೆ ಆಸ್ಪದವನ್ನು ನೀಡುವಂತಿದೆ. ಹಾಗೂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಗಳನ್ನು ತೋರಿಸುತ್ತದೆ.
ಇದಕ್ಕೂ ಮಿಗಿಲಾಗಿ ಅಧಿಕಾರಿಗಳು ನೋಟೀಸನ್ನು ನೀಡಿರುವುದಾಗಿ ತಿಳಿಸಿರುವ ಸಂಸ್ಥೆಗಳು ನೀಡುತ್ತಿರುವ ದಾರಿ ತಪ್ಪಿಸುವ ಜಾಹೀರಾತುಗಳು, ಮಾಧ್ಯಮಗಳಲ್ಲಿ ಇಂದಿಗೂ ಪ್ರಕಟವಾಗುತ್ತಲೇ ಇವೆ!.ಔಷದ ನಿಯಂತ್ರಣ ಇಲಾಖೆಯ ಅಧಿಕಾರಿಗಳು ನಿಜಕ್ಕೂ ಈ ಸಂಸ್ಥೆಗಳಿಗೆ ನೋಟೀಸನ್ನು ನೀಡಿದ್ದಲ್ಲಿ,ಈ ರೀತಿಯ ಜಾಹೀರಾತುಗಳು ಇಂದಿಗೂ ಪ್ರಕಟವಾಗುತ್ತಿರುವುದಾದರೂ  ಹೇಗೆ?,ಎನ್ನುವ ಪ್ರಶ್ನೆಗೆ ಸಂಬಂಧಿತ ಅಧಿಕಾರಿಗಳೇ ಉತ್ತರಿಸಬೇಕಷ್ಟೇ!.
ಆದರೆ ಇದೇ ಸಂದರ್ಭದಲ್ಲಿ ನೆರೆಯ ಕೇರಳದ ಔಷದ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಇದೇ ವರ್ಷದ ಮೇ ತಿಂಗಳಿನಲ್ಲಿ ತಮ್ಮ ರಾಜ್ಯಾದ್ಯಂತ ಶೃಂಗಾರ ಸಾಧನಗಳು, ಸೌಂದರ್ಯ ವರ್ಧಕಗಳು ಮತ್ತು ತ್ವರಿತಗತಿಯಲ್ಲಿ ಕೆಲವೊಂದು ಕಾಯಿಲೆಗಳನ್ನು ಗುಣಪಡಿಸುವುದಾಗಿ ಘೋಷಿಸುವ ಔಷದಗಳನ್ನು ತಯಾರಿಸುವ ಸಂಸ್ಥೆಗಳ ಮೇಲೆ ದಾಳಿನಡೆಸಿ, ೫೦ ಲಕ್ಷ ರೂ. ಮೌಲ್ಯದ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದರು. ಹಾಗೂ ಈ ಸಂಸ್ಥೆಗಳ ವಿರುದ್ಧ ಡ್ರಗ್ಸ್ ಎಂಡ್ ಮ್ಯಾಜಿಕ್ ರೇಮಿಡೀಸ್(ಒಬ್ಜೆಕ್ಷನೆಬಲ್ ಅಡ್ವರ್ಟೈಸ್ ಮೆಂಟ್ಸ್) ಆಕ್ಟ್ ೧೯೫೪ ರಂತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಇಂತಹ ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡು, ಈ ಉತ್ಪನ್ನಗಳನ್ನು ಬಳಸುವಂತೆ ಜನಸಾಮಾನ್ಯರ ಮೇಲೆ ಪ್ರಭಾವವನ್ನು ಬೀರುವ ಖ್ಯಾತ ಕ್ರೀಡಾ ಪಟುಗಳು ಮತ್ತು ಚಲನ ಚಿತ್ರ ನಟರಿಗೆ ಇಂತಹ ಜಾಹೀರಾತುಗಳಲ್ಲಿ ನಟಿಸದಂತೆ ಮತ್ತು ಇಂತಹ ಉತ್ಪನ್ನಗಳನ್ನು ಅನುಮೋದಿಸದಂತೆ ಎಚ್ಚರಿಕೆಯನ್ನು ನೀಡಿದ್ದಾರೆ.
ಕೇರಳದ ಔಷದ ನಿಯಂತ್ರಣ ಇಲಾಖೆ ಈ ರೀತಿಯ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳುವ ಮೂಲಕ ತಮ್ಮ ರಾಜ್ಯದ ಜನತೆಯ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ನ್ಯಾಯಾಲಯದಿಂದ ನಿಷೇಧಿತ  ಉತ್ಪನ್ನಗಳ ಜಾಹೀರಾತುಗಳು, ಇಂದಿಗೂ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ!.
ಅದೇನೇ ಇರಲಿ, ರಾಜ್ಯದ ಔಷದ ನಿಯಂತ್ರಣ ಇಲಾಖೆಯು ಈ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳದಿದ್ದರೂ, ನೀವಂತೂ ಇಂತಹ ಜಾಹೀರಾತುಗಳಿಗೆ ಮರುಳಾಗದಿರಿ.ಜೊತೆಗೆ ನೀವು ಕಷ್ಟಪಟ್ಟು ಸಂಪಾದಿಸಿದ ಹಣದೊಂದಿಗೆ  ನಿಮ್ಮ ಆರೋಗ್ಯವನ್ನೂ  ಕಳೆದುಕೊಳ್ಳದಿರಿ!.

ದಿ . ೦೫-೧೧-೨೦೧೨ ರ ಹೊಸ ದಿಗಂತ ಪತ್ರಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು
ಬಳಕೆದಾರರ ಹಿತರಕ್ಷಣಾ ವೇದಿಕೆ
ಬೊಳುವಾರು, ಪುತ್ತೂರು-೫೭೪೨೦೧



ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ದಾರಿತಪ್ಪಿಸುವ ಹಾಗೂ ಕಾನೂನುಬಾಹಿರ ಜಾಹೀರಾತುಗಳು

No comments:

Post a Comment