Wednesday, May 22, 2013



      ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರಯ್ಯಾ!
ನಮ್ಮ ದೇಶದಲ್ಲಿ  ಸಣ್ಣದೊಂದು ಉದ್ಯೋಗ ದೊರೆಯಬೇಕಿದ್ದಲ್ಲಿ ಕನಿಷ್ಠ ವಿದ್ಯಾರ್ಹತೆ,ಅನುಭವ,ಶಾರೀರಿಕ ಹಾಗೂ ಮಾನಸಿಕ ಆರೋಗ್ಯಗಳ ಮಟ್ಟ ಇತ್ಯಾದಿಗಳಿಗೆ ನಿರ್ದಿಷ್ಟ ಮಾನದಂಡಗಳಿವೆ. ಜೊತೆಗೆ ನಿವೃತ್ತಿಯ ವಯೋಮಿತಿಯೂ ಇದೆ. ಆದರೆ ರಾಜಕೀಯ ಕ್ಷೇತ್ರದಲ್ಲಿ ಪಂಚಾಯತ್ ನಿಂದ ಆರಂಭಿಸಿ ಲೋಕಸಭೆಯ ವರೆಗಿನ ಯಾವುದೇ ಚುನಾವಣೆಗಳಿಗೆ ಸ್ಪರ್ಧಿಸಲು ಇಂತಹ ಮಾನದಂಡಗಳನ್ನು ನಿಗದಿಸಿಲ್ಲ. ಕ್ರಿಮಿನಲ್ ಹಿನ್ನೆಲೆಯುಳ್ಳ,ಅತ್ಯಾಚಾರ,ದರೋಡೆ ಅಥವಾ ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದು ಜೈಲಿಗೆ ಹೋಗಿಬಂದವರಿಗೂ,ಚುನಾವಣೆಗಳಲ್ಲಿ ಸ್ಪರ್ಧಿ ಸುವ ಮತ್ತು ಗೆದ್ದಲ್ಲಿ ಮಂತ್ರಿಯಾಗುವ ಅವಕಾಶವಿರುವುದು ಪ್ರಾಯಶಃ ಭವ್ಯ ಭಾರತದಲ್ಲಿ ಮಾತ್ರ ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಇದೇ ಕಾರಣದಿಂದಾಗಿ"ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರಯ್ಯಾ"ಎನ್ನಲು ಅಡ್ಡಿಯಿಲ್ಲ!.
ರಾಜಕೀಯ ದೊಂಬರಾಟ
ಕರ್ನಾಟಕದಲ್ಲಿ ಇದುವರೆಗೆ ನಡೆದಿದ್ದ ಚುನಾವಣೆಗಳಲ್ಲಿ ಕಂಡುಕೇಳರಿಯದ ವಿಚಿತ್ರ ವಿದ್ಯಮಾನಗಳನ್ನು ಕಣ್ಣಾರೆ ಕಾಣುವ ಸೌಭಾಗ್ಯವು ಇದೀಗ ರಾಜ್ಯದ ಜನತೆಗೆ ಪ್ರಾಪ್ತಿಯಾಗಿದೆ. ಈ ಬಾರಿಯ ಚುನಾವಣೆಯು ನಮ್ಮನ್ನಾಳುವವರ ನಿಜವಾದ ಬಣ್ಣವನ್ನು ಬಯಲುಮಾಡುತ್ತಿದೆ. ಅಧಿಕಾರದ ಗದ್ದುಗೆಯನ್ನು ಏರುವ ಹೆಬ್ಬಯಕೆಯು,ರಾಜಕೀಯ ಪುಡಾರಿಗಳು ನಡೆಸುತ್ತಿರುವ ಕಸರತ್ತುಗಳಿಗೆ ಕಾರಣವೆನಿಸಿದೆ. ಈ ದೊಂಬರಾಟವನ್ನು ವೀಕ್ಷಿಸುತ್ತಿರುವ ಮತದಾರರಿಗೆ ಮಾತ್ರ,ಅಭ್ಯರ್ಥಿಗಳ ಮರಕೋತಿ ಆಟವು  ಪ್ರಾಣ-ಧರ್ಮ ಸಂಕಟಗಳಿಗೆ ಕಾರಣವೆನಿಸುತ್ತಿದೆ. ಇದ್ದ ಮೂವರಲ್ಲಿ ಮೂವರೂ ಕದ್ದವರೇ ಆಗಿದ್ದಲ್ಲಿ,ತಾವು ಮತವನ್ನು ನೀಡುವುದಾದರೂ ಯಾರಿಗೆ?,ಎನ್ನುವ ಪ್ರಶ್ನೆ ಮತದಾರರನ್ನು ಕಾಡುತ್ತಿದೆ. 
ಅಂದು ಆ ಪಕ್ಷದಲ್ಲಿದ್ದವರು ಇಂದು ಈ ಪಕ್ಷದಲ್ಲಿ ಹಾಗೂ ಇಂದು ಈ ಪಕ್ಷದಲ್ಲಿ  ಇದ್ದವರು ನಾಳೆ ಇನ್ನೊಂದು ಪಕ್ಷಕ್ಕೆ  ವಲಸೆ ಹೋಗುತ್ತಿದ್ದು,ಯಾವ
 ಅಭ್ಯರ್ಥಿ ಯಾವ ಪಕ್ಷದಲ್ಲಿ ಇದ್ದಾನೆ ಎನ್ನುವುದು ಮತದಾರರಿಗೆ ತಿಳಿಯುತ್ತಿಲ್ಲ. ಕ್ಷಣಮಾತ್ರದಲ್ಲಿ ಅಭ್ಯರ್ತಿಗಳು
ಪಕ್ಷನಿಷ್ಠೆ ಬದಲಾಯಿಸಲು,ನಿರ್ದಿಷ್ಟ   ಪಕ್ಷದಿಂದ ಟಿಕೇಟು 
ದೊರೆಯದಿರುವುದು  ಕಾರಣವೇ ಹೊರತು,ಅನ್ಯ ಕಾರಣಗಳು ನಿಶ್ಚಿತವಾಗಿಯೂ ಅಲ್ಲ. ಆದರೂ ತಮ್ಮದೇ ಪಕ್ಷದಿಂದ ಚುನಾಯಿತರಾಗಿ,ಆಪರೇಶನ್ ಮೂಲಕ ಮತ್ತೊಂದು ಪಕ್ಷವನ್ನು ಸೇರಿ,ಇದೀಗ ಮತ್ತೆ ಮಾತೃ ಪಕ್ಷಕ್ಕೆ ಬಂದವರಿಗೆ ಟಿಕೇಟು ನೀಡುತ್ತಿರುವುದು ರಾಜಕೀಯ ಪಕ್ಷಗಳ ನೈತಿಕ ದಿವಾಳಿತನವನ್ನು ಬಯಲುಮಾಡಿದೆ.
ರಾಜಕೀಯ ಕ್ಷೇತ್ರದಲ್ಲಿ ತಮ್ಮ ಘನತೆ-ಗೌರವಗಳನ್ನು ಮೆರೆದಿದ್ದ ಹಿರಿಯ ರಾಜಕಾರಣಿಗಳು, ಇದೀಗ ತಮ್ಮ ಮಕ್ಕಳಿಗೆ ಸೂಕ್ತ ಸ್ಥಾನಮಾನವನ್ನು ಗಳಿಸಿಕೊಳ್ಳುವ ಸಲುವಾಗಿ ಟಿಕೇಟನ್ನು ನೀಡುವಂತೆ ತೆರೆಯ ಮರೆಯಲ್ಲಿ ನಡೆಸುತ್ತಿರುವ ಪ್ರಯತ್ನಗಳು ಜನಸಾಮಾನ್ಯರಿಗೆ ತಿಳಿಯದ ವಿಚಾರವೇನಲ್ಲ. ಚಲಾವಣೆಯಲ್ಲಿ ಇಲ್ಲದ ನಾಣ್ಯ ಎನಿಸಿರುವ ಇಂತಹ ಹಳೆಯ ತಲೆಮಾರಿನ ರಾಜಕಾರಣಿಗಳ ಅಧಿಕಾರ ದಾಹಕ್ಕೆ ಇದಕ್ಕಿಂತಲೂ ಉತ್ತಮ ಉದಾಹರಣೆ ಮತ್ತೊಂದಿಲ್ಲ!.
ಮತದಾರರಿಗೆ ಮನೋರಂಜನೆ
ಚುನಾವಣೆಯ ದಿನಗಳು ಸಮೀಪಿಸುತ್ತಿರುವಂತೆಯೇ ವಿವಿಧ ಪಕ್ಷಗಳ ನೇತಾರರ ಆಲಾಪ-ಪ್ರಲಾಪಗಳು ಅತಿಯಾಗುತ್ತಿವೆ. ಒಂದು ದಿನ ತಮ್ಮ ವಿರೋಧಿಗಳ ವಿರುದ್ಧ ಘರ್ಜಿಸಿದ ನಾಯಕರು,ಮರುದಿನ ಮತ್ತೊಂದು ವೇದಿಕೆಯಲ್ಲಿ ಗಳಗಳನೆ ಅಳುವುದು ಮತದಾರರಿಗೆ ಪುಕ್ಕಟೆ ಮನೋರಂಜನೆಯನ್ನು ಒದಗಿಸುತ್ತಿದೆ. ಮೊಸಳೆ ಕಣ್ಣೀರು ಸುರಿಸುವ ಇಂತಹ ನಾಯಕರ ಬಗ್ಗೆ "ನಗುವ ಹೆಂಗಸರನ್ನು ನಂಬಬೇಡ,ಅಳುವ ಗಂಡಸರನ್ನು ನಂಬಬೇಡ" ಎಂದು ಮತದಾರರು ಆಡಿಕೊಳ್ಳುವಂತಾಗಿದೆ.
ತಾವು ಸ್ಪರ್ದಿಸಿರುವ ಕ್ಷೇತ್ರದ ಜನರ ಸಮಸ್ಯೆಗಳು ಮತ್ತು ಇವುಗಳನ್ನು ಪರಿಹರಿಸಲು ತಾನು ಕೈಗೊಳ್ಳಲಿರುವ ಕಾರ್ಯತಂತ್ರಗಳ ಬಗ್ಗೆ ಯಾವುದೇ ಅಭ್ಯರ್ಥಿಯು ಚುನಾವಣಾ ಪ್ರಚಾರ ಸಭೆಗಳಲ್ಲಿ ವಿವರಿಸುವುದನ್ನು ನೀವೂ ಕೇಳಿರಲಿಕ್ಕಿಲ್ಲ. ಆದರೆ ತನ್ನ ಎದುರಾಳಿಗಳು -ಪಕ್ಷಗಳು ಹೆಣೆದಿರುವ "ಷಡ್ಯಂತ್ರ" ಗಳ ಬಗ್ಗೆ ನಿರರ್ಗಳವಾಗಿ ಕೊರೆಯುವ ಸಾಮರ್ಥ್ಯವನ್ನು ಇವರು ಹೊಂದಿರುತ್ತಾರೆ.ತನ್ನ ವಿರೋಧಿಗಳ ದೌರ್ಬಲ್ಯಗಳು,ಹಗರಣಗಳು ಮತ್ತು ಆತನ ಚರಿತ್ರೆಯನ್ನು ಕೂಲಂಕುಶವಾಗಿ ಅರಿತುಕೊಳ್ಳಲು ಸಾಕಷ್ಟು ಸಮಯವನ್ನು ವಿನಿಯೋಗಿಸಿದರೂ,ಸ್ವಕ್ಷೇತ್ರದ ಸಮಸ್ಯೆಗಳನ್ನು ತಿಳಿದುಕೊಳ್ಳಲು ಇವರಿಗೆ ಬಿಡುವೇ ಇರುವುದಿಲ್ಲ!.
ಪಕ್ಷಾತೀತರು
ತನ್ನ ಪಕ್ಷದ ಟಿಕೇಟು ಲಭಿಸದ ಕಾರಣದಿಂದಾಗಿ ಪಕ್ಷವನ್ನು ತೊರೆದು,ಪಕ್ಷ ಮತ್ತು ನಾಯಕರನ್ನು ವಾಚಾಮಗೋಚರವಾಗಿ ದೂಷಿಸುವ ಅಭ್ಯರ್ಥಿಗಳು,ತಾವು ಈ ಹಿಂದೆ ದೂಷಿಸುತ್ತಿದ್ದ ಮತ್ತೊಂದು ಪಕ್ಷವನ್ನು ಸೇರಿ ಹಾಡಿಹೊಗಳಲು,ಆ ಪಕ್ಷವು ಈತನಿಗೆ ನೀಡಿದ್ದ ಟಿಕೇಟಿನ ಪ್ರಭಾವವೇ ಹೊರತು ಬೇರೇನೂ ಅಲ್ಲ!.
ಪಕ್ಷದ ಶಿಸ್ತಿನ ಸಿಪಾಯಿಯಾಗಿ ಅನೇಕ ವರ್ಷಗಳಿಂದ ದುಡಿಯುತ್ತಿದ್ದ ಅಭ್ಯರ್ಥಿಯೊಬ್ಬನನ್ನು ಕಡೆಗಣಿಸಿ,ಇದೀಗ ಮತ್ತೊಂದು ಪಕ್ಷದಲ್ಲಿ ಸಲ್ಲದೇ(ಟಿಕೇಟು ದೊರೆಯದೆ) ಈ ಪಕ್ಷವನ್ನು ಸೇರಿದವರಿಗೆ  ಟಿಕೆಟ್ ನೀಡುವುದು ರಾಜಕೀಯ ರಂಗದ ಚದುರಂಗದಾಟದ ನಡೆಗಳಲ್ಲಿ ಒಂದಾಗಿದೆ. ತಮ್ಮ ಪಕ್ಷದ ತತ್ವ-ಸಿದ್ದಾಂತಗಳಲ್ಲಿ ನಂಬಿಕೆ ಇಲ್ಲದಿದ್ದರೂ,ಟಿಕೆಟ್ ನ ಆಸೆಯಿಂದ ವಲಸೆ ಬಂದಿರುವ ಪಕ್ಷಾಂತರಿಗಳನ್ನು  ವಿರೋಧಿಸುವ ತಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವ ನಾಯಕರು,ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು "ವ್ಯಕ್ತಿಗಿಂತ ಪಕ್ಷ ದೊಡ್ಡದು" ಎಂದು ಹೇಳಲು ಹಿಂಜರಿಯುವುದಿಲ್ಲ.
ಇಷ್ಟು ಮಾತ್ರವಲ್ಲ,ಅಂತಿಮ ಕ್ಷಣದಲ್ಲಿ ಟಿಕೆಟ್ ನೀಡಲು ನಿರಾಕರಿಸಿ ಕಡೆಗಣಿಸಿದ್ದ ತಮ್ಮದೇ ಪಕ್ಷದ ಪ್ರಭಾವಿ ಅಭ್ಯರ್ಥಿಯನ್ನು ಸಮಾಧಾನಿಸಲು ಅವರನ್ನು ಎಂ.ಎಲ್.ಸಿ ಮಾಡುವ ಅಥವಾ ಸೂಕ್ತ ಸ್ಥಾನಮಾನವನ್ನು ನೀಡುವ ಆಮಿಷವನ್ನು ಒಡ್ಡುವುದು ಸುಳ್ಳೇನಲ್ಲ.
ಆಶ್ವಾಸನೆಗಳ ಸುರಿಮಳೆ
ಚುನಾವಣಾ ಕಣದಲ್ಲಿರುವ ಒಂದು ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಆಶ್ವಾಸನೆಗಳ ಸುರಿಮಳೆಯು ಮತ್ತೊಂದು ಪಕ್ಷದ ಭರವಸೆಗಳ ಮಹಾಪೂರದಲ್ಲಿ ಕೊಚ್ಚಿಹೊಗುತ್ತಿದೆ. ಇದೇ ಕಾರಣದಿಂದಾಗಿ ಮಗದೊಂದು ಪಕ್ಷವು,ಇವೆರಡೂ ಪಕ್ಷಗಳ ಪ್ರಣಾಳಿಕೆಗಳಲ್ಲಿನ ಪ್ರಮುಖ ಅಂಶಗಳೊಂದಿಗೆ ತನ್ನ ಪಾಲಿನ ಇನ್ನಷ್ಟು ಆಶ್ವಾಸನೆಗಳನ್ನು ಸೇರಿಸಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತದೆ!.
ಇವೆಲ್ಲಕ್ಕೂ ಮಿಗಿಲಾಗಿ,ತಾವು ಅಧಿಕಾರದಲ್ಲಿ ಇದ್ದಾಗ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದ ನೇತಾರರು,ಇದೀಗ ಮತದಾರರು ನಿರೀಕ್ಷಿಸದ ಕೊಡುಗೆಗಳನ್ನು ನೀಡಲು ಮುಂದಾಗಿರುವುದು ನಂಬಲು ಅಸಾಧ್ಯವೆನಿಸುತ್ತದೆ. ಆದರೆ ಇವರು ಏನನ್ನು ನೀಡುವುದಾದರೂ ರಾಜ್ಯ ಸರಕಾರದ ಬೊಕ್ಕಸದಿಂದಲೇ ಹೊರತು,ತಮ್ಮ ಜೇಬಿನಿಂದ ಅಲ್ಲ ಎನ್ನುವುದನ್ನು ಅರ್ಥೈಸಿಕೊಳ್ಳಲು ಆಗದಷ್ಟು ಹೆಡ್ದರಲ್ಲ ರಾಜ್ಯದ ಮತದಾರರು.
ವಿಶೇಷವೆಂದರೆ ಚುನಾವಣಾ ಪ್ರಚಾರ ಸಭೆಗಳಲ್ಲಿ ತಾವು ಘೋಷಿಸಿದ್ದ  ಹಾಗೂ ಪಕ್ಷದ ಪ್ರಣಾಳಿಕೆಯಲ್ಲಿ ಮುದ್ರಿಸಿದ್ದ ಆಶ್ವಾಸನೆಗಳನ್ನು,ಚುನಾವಣೆಯಲ್ಲಿ ಗೆದ್ದು  ಅಧಿಕಾರದ ಸೂತ್ರವನ್ನು ಕೈಗೆತ್ತಿಕೊಂಡ ಬಳಿಕ ಮರೆತುಬಿಡಲು ಅಲ್ಜೀಮರ್ಸ್ ಕಾಯಿಲೆಯಂತೂ ಕಾರಣವಲ್ಲ ಎನ್ನುವುದರಲ್ಲಿ ಮಾತ್ರ ಸಂದೇಹವಿಲ್ಲ!.
ಅದೇನೇ ಇರಲಿ,ಮುಂದಿನ ಕೆಲವೇ ದಿನಗಳಲ್ಲಿ ಚುನಾವಣೆಗಳು-ಮತ ಎಣಿಕೆಗಳ ಕಾರ್ಯ ಮುಗಿದು,ನಮ್ಮನ್ನು ಆಳುವವರು ಯಾರು?,ಎನ್ನುವ ಪ್ರಶ್ನೆಗೆ ಉತ್ತರ ದೊರೆಯಲಿದೆ. ಆದರೆ ಜನಸಾಮಾನ್ಯರನ್ನು ಕಾಡುತ್ತಿರುವ ನೂರಾರು  ಸಮಸ್ಯೆಗಳು ಮಾತ್ರ ಎಂದಿನಂತೆಯೇ ಮುಂದುವರೆಯಲಿವೆ!.
ಬಾಕ್ಸ್ ಐಟಂ
ಸಮಾಜಸೇವೆಯ ಸೋಗಿನಲ್ಲಿ ಶಾಸಕ-ಮಂತ್ರಿಯಾಗುವ ರಾಜಕಾರಣಿಗಳು,ರಾಜ್ಯದ ಬೊಕ್ಕಸಕ್ಕೆ ಕನ್ನವನ್ನು ಕೊರೆಯುವ ಮೂಲಕ ಅಗಾಧ ಪ್ರಮಾಣದ ಆಸ್ತಿಪಾಸ್ತಿಗಳನ್ನು ಬೆವರಿಳಿಸದೇ ಗಳಿಸುತ್ತಾರೆ. ಈ ರೀತಿಯಲ್ಲಿ ಅಕ್ರಮವಾಗಿ ಗಳಿಸಿದ್ದ ಸಂಪತ್ತನ್ನು ಉಳಿಸಿಕೊಳ್ಳುವ ಸಲುವಾಗಿ ಮತ್ತೆ ಚುನಾವಣೆಯಲ್ಲಿ ಗೆಲ್ಲಲು ಹೆಣಗುತ್ತಾರೆ. ಇದಕ್ಕಾಗಿ ತಾನು ಗಳಿಸಿದ್ದ ಸಂಪತ್ತಿನ ಸಣ್ಣದೊಂದು ಅಂಶವನ್ನು ವ್ಯಯಿಸುತ್ತಾರೆ. ಈ ವಿಚಾರವನ್ನು ಚೆನ್ನಾಗಿ ಅರಿತಿರುವ ಅಧಿಕತಮ ಪ್ರಜ್ಞಾವಂತ ಮತದಾರರು,ಇಂತಹ ಭ್ರಷ್ಟ ರಾಜಕಾರಣಿಗಳಿಗೆ ತಕ್ಕ ಪಾಠವನ್ನು ಕಲಿಸಲು ಸನ್ನದ್ಧರಾಗಿದ್ದಾರೆ!.
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು


No comments:

Post a Comment