Monday, May 6, 2013


 ಎಲ್ಲರೂ ಮಾಡುವುದು ಹೊಟ್ಟೆಗಾಗಿ,ರಾಜಕಾರಣಿಗಳು ಮಾಡುವುದುಸೀಟಿಗಾಗಿ!
ಮೌಲ್ಯಾಧಾರಿತ  ರಾಜಕಾರಣಕ್ಕೆ ತಿಲಾಂಜಲಿಯನ್ನು ನೀಡಿರುವ ಇಂದಿನ ರಾಜಕೀಯ ನೇತಾರರು,ತಮ್ಮ ಪಕ್ಷದ ತತ್ವ,ಸಿದ್ಧಾಂತಗಳು ಮತ್ತು ಧ್ಯೇಯ ಧೋರಣೆಗಳನ್ನೇ ಮರೆತು ಕೇವಲ ಅಧಿಕಾರ ಮತ್ತು ಧನದಾಹ ಎನ್ನುವ ವ್ಯಾಧಿಯಿಂದ ಬಳಲುತ್ತಿರುವುದು ಮತದಾರರಿಗೆ ಅರಿಯದ ವಿಚಾರವೇನಲ್ಲ. ಚುನಾವಣೆಗಳ ಘೋಷಣೆಯಾದೊಡನೆ ಮತದಾರರ ಮನೆಬಾಗಿಲಿಗೆ ಬಂದು ಕೈಮುಗಿದು ಮತಯಾಚನೆ ಮಾಡುವ ರಾಜಕಾರಣಿಗಳು, ಗೆದ್ದಬಳಿಕ ಕಣ್ಣಿನಲ್ಲಿ ಎಣ್ಣೆಯನ್ನು ಹಾಕಿ ಹುಡುಕಿದರೂ ಕಾಣದಂತೆ ಅದೃಶ್ಯರಾಗುತ್ತಾರೆ!
 
ಜಗತ್ತಿನ  ಅತೀದೊಡ್ಡ ಪ್ರಜಾಪ್ರಭುತ್ವ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ದೇಶದಲ್ಲಿ,ಕೆಲವೇ ದಶಕಗಳ ಹಿಂದಿನತನಕ "ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು" ಎನ್ನುವ ಮಾತು ಅಕ್ಷರಶಃ ಅರ್ಥಪೂರ್ಣ ಎನಿಸಿತ್ತು. ಆದರೆ ಬದಲಾದ  ಇಂದಿನ ಇಂದಿನ ಪರಿಸ್ಥಿತಿಯಲ್ಲಿ ಈ ಮಾತುಗಳು ಅರ್ಥಹೀನವೆನಿಸಿರುವುದು ಸುಳ್ಳೇನಲ್ಲ.
ರಾಜ್ಯದ ವಿಧಾನಸಭಾ ಚುನಾವಣೆಯ ದಿನಾಂಕದ ಘೋಷಣೆಯಾದಂತೆಯೇ ವಿವಿಧ ರಾಜಕೀಯ ಪಕ್ಷಗಳ ಮತ್ತು ನೇತಾರರ ಚದುರಂಗದಾಟ ಇನ್ನಷ್ಟು ರಂಗೇರುತ್ತಿದೆ.ಒಂದು ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದಂತೆಯೇ,ಟಿಕೆಟ್ ದೊರೆಯದ ಸ್ಪರ್ಧಿಗಳು ಮತ್ತೊಂದು ಪಕ್ಷವನ್ನು ಸೇರಿ ಟಿಕೆಟ್ ಪಡೆಯುವ ಅಥವಾ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಿಸುತ್ತಿದ್ದಾರೆ. ಜೊತೆಗೆ ಟಿಕೆಟ್ ನೀಡದ ಪಕ್ಷದಲ್ಲಿ "ಉಸಿರುಗಟ್ಟಿಸುವ" ವಾತಾವರಣವಿದ್ದ ಅಥವಾ" ಭ್ರಷ್ಟರೇ ತುಂಬಿದ್ದ" ಕಾರಣದಿಂದಾಗಿ ಪಕ್ಷವನ್ನು ತೊರೆಯುತ್ತಿರುವುದಾಗಿ ಹೇಳಿಕೆಯನ್ನು ನೀಡುತ್ತಾರೆ. ಆದರೆ ಐದು ವರ್ಷಗಳ ಕಾಲ ಉಸಿರುಕಟ್ಟಿಸುವ ವಾತಾವರಣದಲ್ಲಿ ಭ್ರಷ್ಟರೊಂದಿಗೆ ಉಳಿದುಕೊಂಡಿದ್ದೇಕೆ?,ಎನ್ನುವ ಪ್ರಶ್ನೆಗೆ ಉತ್ತರಿಸದೇ ನುಣುಚಿಕೊಳ್ಳುತ್ತಾರೆ!.
ಪ್ರಸ್ತುತ ಬಹುತೇಕ ಪಕ್ಷಗಳು ಟಿಕೆಟ್ ದೊರೆಯದ ಆಕಾಂಕ್ಷಿಗಳ ಬಂಡಾಯದ ಬಿರುಗಾಳಿಗೆ ಸಿಲುಕಿ ನಲುಗುತ್ತಿವೆ. ಆದರೂ ಮತ್ತೊಂದು ಪಕ್ಷದ ಟಿಕೆಟ್ ಸಿಗದ ಅಭ್ಯರ್ಥಿಯ ಮನವೊಲಿಸಿ,ತಮ್ಮಪಕ್ಷದ ಟಿಕೆಟ್ ನೀಡಲು ಹಾತೊರೆಯುತ್ತಿವೆ. ಪ್ರಾಯಶಃ ಚುನಾವಣಾ ಕಣದಲ್ಲಿರುವ ಯಾವುದೇ ಪಕ್ಷಗಳೂ ಇದಕ್ಕೆ ಅಪವಾದವೆನಿಸಿಲ್ಲ.
ತಮ್ಮಪಕ್ಷದಿಂದ ಟಿಕೆಟ್ ದೊರೆಯದ ಕಾರಣದಿಂದಾಗಿ ಪಕ್ಷವನ್ನೇ ತೊರೆದು,ತಮ್ಮ ನಿಷ್ಠೆಯನ್ನು ಕ್ಷಣಮಾತ್ರದಲ್ಲಿ ಬದಲಿಸುವ,ಪಕ್ಷದ ಕಚೇರಿಯ ಅಥವಾ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ತಮ್ಮ ಬೆಂಬಲಿಗರಿಂದ ನಾಶಪಡಿಸುವ ಮನೋಭಾವವುಳ್ಳ ಅಭ್ಯರ್ಥಿಗಳು,ಆಕಸ್ಮಿಕವಾಗಿ ಚುನಾವಣೆಯಲ್ಲಿ ಗೆದ್ದಲ್ಲಿ ಅಧಿಕಾರದ ಗದ್ದುಗೆಯನ್ನು ಏರಲು ಏನನ್ನೂ ಮಾಡಲು ಹಿಂಜರಿಯಲಾರರು. ರಾಜ್ಯದ ಮತ್ತು ದೇಶದ ಹಿತಾಸಕ್ತಿಗಿಂತ ತನ್ನ ವೈಯುಕ್ತಿಕ ಹಿತಾಸಕ್ತಿಯ ಬಗ್ಗೆ ಚಿಂತಿಸುವ ಇಂತಹ ರಾಜಕಾರಣಿಗಳಿಂದ ದಕ್ಷ ಹಾಗೂ ಸ್ವಚ್ಚ ಆಡಳಿತವನ್ನು ನಿರೀಕ್ಷಿಸುವಂತಿಲ್ಲ.
 ಸಮಾಜಸೇವೆಗಾಗಿ....
ತಾವು ಶಾಸಕರಾಗುವ,ಮಂತ್ರಿಯಾಗುವ ಅಥವಾ ಅಧಿಕಾರದ ಆಸೆಯಿಲ್ಲದೇ,ಕೇವಲ "ಸಮಾಜ ಸೇವೆ" ಮಾಡುವ ಉದ್ದೇಶದಿಂದಲೇ ಚುನಾವಣೆಯಲ್ಲಿ ಸ್ಪರ್ದಿಸುತ್ತಿರುವುದಾಗಿ ಘಂಟಾಘೋಷವಾಗಿ ಸಾರುವ ಅಭ್ಯರ್ಥಿಗಳ ಮಾತುಗಳನ್ನು ಆಯಾ ಪಕ್ಷಗಳ "ನಿಷ್ಠಾವಂತ" ಮತದಾರರು ನಂಬಿದರೂ,"ಪ್ರಜ್ಞಾವಂತ" ಮತದಾರರು ನಿಶ್ಚಿತವಾಗಿಯೂ ನಂಬಲಾರರು. ಏಕೆಂದರೆ ಚುನಾವಣೆಗಾಗಿ ಪ್ರತಿಯೊಬ್ಬ ಅಭ್ಯರ್ಥಿಯು ತನ್ನ ಶಕ್ತ್ಯಾನುಸಾರ ವ್ಯಯಿಸುವ ಹಣದಿಂದ,ಹಲವಾರು ವರ್ಷಗಳ ಕಾಲ ಸಮಾಜಸೇವೆ ಮಾಡಬಹುದು ಎನ್ನುವುದು ಮತದಾರರಿಗೆ ಅರಿಯದ ವಿಚಾರವೇನಲ್ಲ!.
ಅಧಿಕಾರದ ಗದ್ದುಗೆಯನ್ನೇರುವ ಏಕಮಾತ್ರ ಉದ್ದೇಶದಿಂದ ಜನ,ಹಣ ,ಜಾತಿಯ ಬಲಗಳೊಂದಿಗೆ ರಾಜಕೀಯ ಪ್ರಭಾವಗಳನ್ನು ಬಳಸಿಕೊಂಡು ಚುನಾವಣೆಗಳಲ್ಲಿ ಸ್ಪರ್ಧಿಸುವ,ತಮ್ಮ ಅನುಕೂಲಕ್ಕೆ ತಕ್ಕಂತೆ ಪಕ್ಷಗಳನ್ನು ಬದಲಾಯಿಸುವ ಸಾಕಷ್ಟು ಅಭ್ಯರ್ಥಿಗಳ ನಿಜವಾದ ಬಣ್ಣ ಈಗಾಗಲೇ ಬಯಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಮುನ್ನ ಅನಿವಾರ್ಯವಾಗಿ ಘೋಷಿಸಲೆಬೇಕಾದ ಇವರ ಆಸ್ತಿಪಾಸ್ತಿಗಳ ವಿವರಗಳು,ಇವರು ಮಾಡಿರುವ ಸಮಾಜಸೇವೆಗೆ ಸೂಕ್ತ ಸಾಕ್ಷಿಯಾಗಿವೆ.
ಸ್ಥಾನಮಾನ
ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಹುತೇಕ ಅಭ್ಯರ್ಥಿಗಳ ಮೊದಲ ಗುರಿ ಶಾಸಕರಾಗಿ ಆಯ್ಕೆಯಾಗುವುದೇ ಆಗಿದ್ದರೂ,ತದನಂತರ ಮಂತ್ರಿಮಂಡಲದಲ್ಲೊಂದು ಸ್ಥಾನವನ್ನು ಗಳಿಸುವತ್ತ ಕೇಂದ್ರೀಕೃತವಾಗಿರುತ್ತದೆ. ಅದೃಷ್ಟವಶಾತ್ ಮಂತ್ರಿಯಾಗಿ ಆಯ್ಕೆಯಾದಲ್ಲಿ "ಫಲವತ್ತಾದ ಖಾತೆ" ಯೊಂದನ್ನು ಪಡೆಯಲು ಹಾಗೂ ಮಂತ್ರಿಗಿರಿ ಲಭಿಸದಿದ್ದಲ್ಲಿ,ಯಾವುದಾದರೂ ನಿಗಮ-ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಬಗಲಿಗೆ ಹಾಕಿಕೊಳ್ಳಲು ಹರಸಾಹಸವನ್ನೇ ನಡೆಸುತ್ತಾರೆ. ಇಂತಹ ಸ್ಥಾನಗಳು ಕ್ಯಾಬಿನೆಟ್ ದರ್ಜೆಯ ಸ್ಥಾನಕ್ಕೆ ಸಮನಾಗಿದ್ದು,ಇದರೊಂದಿಗೆ ಕಾರು,ಬಂಗಲೆ ಇತ್ಯಾದಿ ಸೌಕರ್ಯಗಳು ಉಚಿತವಾಗಿ ದೊರೆಯುತ್ತವೆ. ಆಕಸ್ಮಿಕವಾಗಿ ಇವೆಲ್ಲವೂ ಕೈತಪ್ಪಿದಲ್ಲಿ,ಸದನದ ಯಾವುದಾದರೂ ಸಮಿತಿಯಲ್ಲಿ ಸದಸ್ಯರಾಗಿ ಸೇರಿಕೊಳ್ಳುವ ಪ್ರಯತ್ನವನ್ನು ನಡೆಸುತ್ತಾರೆ.
ಇದರೊಂದಿಗೆ ಶಾಸಕರಿಗೆ ಅಲ್ಪಬೆಲೆಗೆ ದೊರೆಯುವ ಸೈಟು,ಕಾರು ಖರೀದಿಸಲು ಕಡಿಮೆಬಡ್ಡಿಯಲ್ಲಿ ಸಾಲ,ಉಚಿತ ಕಂಪ್ಯೂಟರ್,
ಸಹಾಯಕರೊಂದಿಗೆ ರಾಜ್ಯಾದ್ಯಂತ ಸಂಚರಿಸಲು ಬಸ್ ಪಾಸ್,ಉಚಿತ ದೂರವಾಣಿ,ಕೈತುಂಬಾ ಸಂಬಳ ಮತ್ತು ಭತ್ತೆಗಳು ದೊರೆಯುತ್ತವೆ. ಐದು ವರ್ಷಗಳ ಅವಧಿಯನ್ನು ಪೂರೈಸಿದಲ್ಲಿ ಜೀವನಪರ್ಯಂತ ಪಿಂಚಿಣಿಯೊಂದಿಗೆ ವೈದ್ಯಕೀಯ ಸೆಚ್ಚಕ್ಕಾಗಿ ಹಾಗೂ ದೇಶವನ್ನು ಸುತ್ತಾಡಲು ತಲಾ ಒಂದೊಂದು ಲಕ್ಷ ರೂಪಾಯಿಗಳು ರಾಜ್ಯದ ಬೊಕ್ಕಸದಿಂದ ಅನಾಯಾಸವಾಗಿ ಲಭಿಸುತ್ತದೆ. ಇಷ್ಟೆಲ್ಲಾ ಸವಲತ್ತುಗಳು ದೊರೆತರೂ ತೃಪ್ತಿಯಿಲ್ಲದ ಅನೇಕ ಸಮಾನ ಮನಸ್ಕ ಶಾಸಕರು ಒಂದಾಗಿ,ತಮ್ಮದೇ ಆದ ಬಣವನ್ನು ರಚಿಸಿ ಮಂತ್ರಿಮಂಡಲದ ಪುನಾರಚನೆಯ ಸಂದರ್ಭದಲ್ಲಿ ಮಂತ್ರಿಪದವಿಯನ್ನು ಗಳಿಸಲು ತಂತ್ರಗಳನ್ನು ರೂಪಿಸುತ್ತಲೇ ಇರುತ್ತಾರೆ.
ಚುನಾವಣೆಗಳ ಘೋಷಣೆಯಾದ ದಿನದಿಂದ ವಿಧಾನಸಭೆಯ ಸದಸ್ಯರ ಅವಧಿ ಮುಗಿಯುವ ಅಥವಾ ಅನಿರೀಕ್ಷಿತವಾಗಿ ವಿಸರ್ಜನೆಯಾಗುವ ಅವಧಿಯಲ್ಲಿ,ನಮ್ಮನ್ನು ಆಳುವ ರಾಜಕಾರಣಿಗಳು ನಡೆಸುವ ಕಸರತ್ತುಗಳು,ಮಕ್ಕಳು ಆಡುವ ಮರಕೋತಿ ಆಟವನ್ನು ಜ್ಞಾಪಿಸುತ್ತದೆ ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು!.
ಡಾ. ಸಿ. ನಿತ್ಯಾನಂದ ಪೈ ,ಪುತ್ತೂರು

No comments:

Post a Comment