Saturday, May 4, 2013


              ಎಳನೀರಿನಲ್ಲಿದೆ ರೋಗಾಣುನಾಶಕ ಗುಣ!
             ಅಬಾಲವೃದ್ಧರೆಲ್ಲರೂ ಮೆಚ್ಚಿ ಸವಿಯುವ ಎಳನೀರು ಬಾಯಾರಿಕೆಯನ್ನು ನೀಗಿಸುವುದರೊಂದಿಗೆ, ಬಸವಳಿದ ಶರೀರಕ್ಕೆ ಒಂದಿಷ್ಟು ಹುಮ್ಮಸ್ಸನ್ನೂ ನೀಡುತ್ತದೆ. ವೈವಿಧ್ಯಮಯ ಜೀವಸತ್ವಗಳು, ಖನಿಜಗಳು, ಪ್ರೋಟೀನ್ ಹಾಗೂ  ಅನ್ಯ ಕೆಲ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸೀಯಾಳದ ನೀರು, ಜ್ವರ,ವಾಂತಿ,  ಭೇಧಿ ಹಾಗೂ   ನಿರ್ಜಲೀಕೃತ ಸ್ಥಿತಿಯಲ್ಲಿ ಮತ್ತು ಅನಾರೋಗ್ಯ ಪೀಡಿತ ವ್ಯಕ್ತಿಗಳಿಗೆ ಜೀವ ರಕ್ಷಕ ಎನಿಸುವುದು. ಈ ನೈಸರ್ಗಿಕ ಪೇಯವು ಯಾವುದೇ ರೋಗಾಣುಗಳಿಂದ ಕಲುಷಿತವಾಗಿರದ ಕಾರಣದಿಂದಾಗಿ,ಇದರ ಸೇವನೆಯಿಂದ ಅಯಾಚಿತ ಮತ್ತು ಅನಪೇಕ್ಷಿತ ಸಮಸ್ಯೆಗಳು ಉಧ್ಭವಿಸುವ ಸಾಧ್ಯತೆಗಳಿಲ್ಲ.
ಕಡು ಬೇಸಗೆಯ ದಿನಗಳಲ್ಲಿ ಬಾಯಾರಿದ ಜನರು ತಮ್ಮ ದಾಹವನ್ನು ನೀಗಿಸಲು ಕುಡಿಯುವ ಏಳನೀರಿನಲ್ಲಿ ಔಷದೀಯ ಗುಣಗಳು ಇರುವುದನ್ನು ವೈದ್ಯಕೀಯ ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಆದರೆ ಸಹಸ್ರಾರು ವರ್ಷಗಳ ಹಿಂದೆ ಬರೆದಿದ್ದ ಆಯುರ್ವೇದ ಸಂಹಿತೆಗಳಲ್ಲಿ, ಅನಾರೋಗ್ಯ ಪೀಡಿತರ ಪಾಲಿಗೆ ಸಂಜೀವಿನಿ ಎನಿಸುವ ಎಳನೀರಿನ ಉಪಯುಕ್ತತೆಗಳ ಬಗ್ಗೆ ಸಾಕಷ್ಟು ಮಾಹಿತಿ ಇದೆ.ಅನೇಕ ವಿಧದ ಆಯುರ್ವೇದ ಔಷದಗಳ ತಯಾರಿಕೆಯಲ್ಲಿ ಎಳನೀರನ್ನು ಬಳಸಲಾಗುತ್ತದೆ.  ನಾಟಿ ಔಷದ ಮತ್ತು ಮಂತ್ರ ತಂತ್ರಗಳ ಚಿಕಿತ್ಸೆಗಳನ್ನು ನೀಡುವ ಹಳ್ಳಿ ವೈದ್ಯರು, ಇತರ ಔಷದಗಳೊಂದಿಗೆ ಎಳನೀರನ್ನು ಬಳಸಲು ಇದುವೇ ಕಾರಣವಾಗಿರಬಹುದು.
ನೈಸರ್ಗಿಕ-ಸುರಕ್ಷಿತ ಪೇಯ
ಯುವಜನರು ಮೆಚ್ಚಿ ಸವಿಯುವ ಕೋಲಾಗಳಂತಹ ಲಘು ಪಾನೀಯಗಳಲ್ಲಿ ಅತಿಯಾದ ಕ್ಯಾಲರಿಗಳೊಂದಿಗೆ ಒಂದಿಷ್ಟು ಕೀಟ ನಾಶಕಗಳ ಅಂಶಗಳು ಇರುವ ಸಾಧ್ಯತೆಗಳಿವೆ. ಆದರೆ ನೈಸರ್ಗಿಕ ಹಾಗೂ ಶತಪ್ರತಿಶತ ಸುರಕ್ಷಿತ ಮತ್ತು ರುಚಿಕರವಾದ ಎಳನೀರು, ಮನುಷ್ಯನ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಹಿತಕರವೆನಿಸುವುದು. ಇಷ್ಟು ಮಾತ್ರವಲ್ಲ, ಲಘುಪಾನೀಯಗಳ ಅತಿಸೇವನೆಯಿಂದ ವಿವಿಧ  ರೀತಿಯ ಆರೋಗ್ಯದ ಸಮಸ್ಯೆಗಳು ಬಾಧಿಸಿದಲ್ಲಿ, ಏಳನೀರು ತನ್ನಲ್ಲಿರುವ ರೋಗಾಣುನಾಶಕ ಗುಣದಿಂದಾಗಿ ಕೆಲವೊಂದು ಕಾಯಿಲೆಗಳಿಂದ ರಕ್ಷಿಸುತ್ತದೆ.
ಏಷ್ಯ ಖಂಡ,ಪೆಸಿಫಿಕ್ ಐಲ್ಯಾಂಡ್ ,ಆಫ್ರಿಕಾ, ಕ್ಯಾರಿಬಿಯನ್ ಐಲ್ಯಾಂಡ್  ಮತ್ತು ಲ್ಯಾಟಿನ್ ಅಮೇರಿಕ ಪ್ರದೇಶಗಳಲ್ಲಿ ಜನಪ್ರಿಯ ಪೇಯವೆನಿಸಿರುವ ಸೀಯಾಳದ ನೀರು ಸಿಹಿಯಾಗಿರುವುದರೊಂದಿಗೆ, ಗಣನೀಯ ಪ್ರಮಾಣದ ಪೋಷಕಾಂಶಗಳನ್ನು ಹೊಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜನರು ಸಾಮಾನ್ಯವಾಗಿ ಉಧ್ಭವಿಸುವಹಾಗೂ ಆಡುಭಾಷೆಯಲ್ಲಿ "ಉಷ್ಣ" ಎಂದು ಕರೆಯುವ  ಉರಿಮೂತ್ರ ಹಾಗೂ ಇತರ ಕೆಲ ತೊಂದರೆಗಳ  ಪರಿಹಾರಕ್ಕಾಗಿ ಸೇವಿಸುವುದು ಸೀಯಾಳವನ್ನೇ ಹೊರತು ಔಷದವನ್ನಲ್ಲ!. ಅದೇ ರೀತಿಯಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ರೋಗಿಗಳನ್ನು ಸಂದರ್ಶಿಸಲು ಹೋಗುವ ಬಂಧು ಮಿತ್ರರು,ಹಣ್ಣು ಹಂಪಲುಗಳೊಂದಿಗೆ ತಪ್ಪದೆ ಕೊಂಡೊಯ್ಯುವುದು ಎಳನೀರನ್ನೇ ಎನ್ನುವುದು ಗಮನಾರ್ಹ.
ಸೀಯಾಳದ ನೀರು ರೋಗಾಣುರಹಿತವಾಗಿರುವುದರಿಂದ ಅನೇಕ ಬಡ ರಾಷ್ಟ್ರಗಳಲ್ಲಿ ಇದನ್ನು ರೋಗಿಗಳ ರಕ್ತನಾಳಗಳ ಮೂಲಕ ಸಲೈನ್  ದ್ರಾವಣಕ್ಕೆ ಬದಲಾಗಿ ನೀಡುತ್ತಾರೆ.
ಎಳನೀರಿನಲ್ಲಿರುವ ಪೊಟಾಸಿಯಂ, ಸೋಡಿಯಂ, ಖನಿಜಾಂಶಗಳು, ಅಲ್ಪ ಪ್ರಮಾಣದ ಕಾರ್ಬೋಹೈಡ್ರೇಟ್ ಮತ್ತು ಕ್ಯಾಲರಿಗಳಿಂದಾಗಿ, ಇದನ್ನು ನೈಸರ್ಗಿಕ ಶಕ್ತಿವರ್ಧಕ ಮತ್ತು ಕ್ರೀಡಾ ಪೇಯವೆಂದು ಪರಿಗಣಿಸಲಾಗಿದೆ. ಆದರೆ ಕ್ಯಾನ್, ಟೆಟ್ರಾ ಪ್ಯಾಕ್ ಮತ್ತು ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿಸಿ ಇದನ್ನು ಮಾರಾಟ ಮಾಡುವ ವಾಣಿಜ್ಯ ಉತ್ಪನ್ನಗಳ ಮಾರಾಟಗಾರರು, ನಿಮ್ಮ ಆರೋಗ್ಯಕ್ಕೆ ಈ ಪೇಯವು ಲಾಭದಾಯಕವೆನ್ನುವ ಬಗ್ಗೆ ಉತ್ಪ್ರೇಕ್ಷಿತ ಜಾಹೀರಾತುಗಳನ್ನು ಪ್ರಕಟಿಸುವುದು ಅಪರೂಪವೇನಲ್ಲ.
ಈ ರೀತಿಯಲ್ಲಿ ಮನುಷ್ಯನ ಆರೋಗ್ಯಕ್ಕೆ  ಹಿತಕರ ಎನಿಸುವ ಏಳನೀರಿನಲ್ಲಿ ಕೆಲವಿಧದ ಅಪಾಯಕಾರಿ ರೋಗಾಣುಗಳನ್ನು ನಾಶಪಡಿಸುವ ಶಕ್ತಿ ಇರುವುದನ್ನು ವೈದ್ಯಕೀಯ ಸಂಶೋಧಕರು  ಕೆಲ ವರ್ಷಗಳ ಹಿಂದೆಯೇ ಪತ್ತೆಹಚ್ಚಿದ್ದರು.
ರೋಗಾಣು ನಾಶಕ ಗುಣ
ಮನುಷ್ಯನನ್ನು ಬಾಧಿಸಬಲ್ಲ ಅಧಿಕತಮ ರೋಗಾಣುಗಳು ಕಾಲಕ್ರಮೇಣ ಪರಿವರ್ತನೆಗೊಂಡು, ಇನ್ನಷ್ಟು ಪ್ರಬಲವಾಗುವುದರೊಂದಿಗೆ, ಜೀವನಿರೋಧಕ ಔಷದಗಳಿಗೆ ಪ್ರತಿರೋಧಕ ಶಕ್ತಿಯನ್ನು ಗಳಿಸಿಕೊಳ್ಳುತ್ತಿವೆ. ಈ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ವೈದ್ಯಕೀಯ ವಿಜ್ಞಾನಿಗಳು ನಮ್ಮ ಶರೀರಕ್ಕೆ ಮೂಲ ಪ್ರತಿರೋಧ ಶಕ್ತಿಯನ್ನು ಒದಗಿಸುವ ಪ್ರೋಟೀನ್ ಗಳತ್ತ ಗಮನ ಹರಿಸಿದ್ದರು. ಏಕೆಂದರೆ ಮನುಷ್ಯನ ಶರೀರದ ಮೇಲೆ ಬ್ಯಾಕ್ಟೀರಿಯಾಗಳು ದಾಳಿ ಮಾಡಿದಾಗ ಪ್ರತಿರೋಧಕ ಜೀವಕಣಗಳು ಬಿಡುಗಡೆ ಮಾಡುವ ಪ್ರತಿಕಾಯಗಳು ಪ್ರೋಟೀನ್ ನಿಂದಲೇ ನಿರ್ಮಿತವಾಗಿರುತ್ತವೆ.
ಜಗತ್ತಿನಾದ್ಯಂತ ಅನೇಕ ಸಂಶೋಧಕರು ವಿವಿಧ ಸಸ್ಯಗಳ  ಬೇರು, ಗಡ್ದೆ, ಎಲೆ, ಹೂ ಮತ್ತು ಬೀಜಗಳಿಂದ ಸೂಕ್ಷ್ಮಾಣುಜೀವಿ ವಿರೋಧಿ  ಪ್ರೋಟೀನ್ ಗಳನ್ನು ಪ್ರತ್ಯೆಕಿಸಿದ್ದಾರೆ. ಅದೇ ರೀತಿಯಲ್ಲಿ ಎಳನೀರಿನಲ್ಲಿರುವ ಔಷದೀಯ ಗುಣಗಳನ್ನು ಅರಿತ ಪಶ್ಚಿಮ ಬಂಗಾಳ ಮತ್ತು ಬ್ರೆಜಿಲ್ ದೇಶದ ಸಂಶೋಧಕರು, ಇದರ ಸೂಕ್ಷ್ಮಾನು ಜೀವಿ ವಿರೋಧಿಗುಣಗಳನ್ನು ಅಧ್ಯಯನ ಮಾಡಿದ್ದರು. ಈ ಪ್ರಯೋಗದ ಅಂಗವಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿಸಿದ್ದ ಸೀಯಾಳದ ನೀರನ್ನು ಶುದ್ಧೀಕರಿಸಿ, ಮೂರು ಪಾಲಾಗಿ ವಿಂಗಡಿಸಿದ ಬಳಿಕ ನಾಲ್ಕು ವಿಧದ ಬ್ಯಾಕ್ಟೀರಿಯಗಳ ತಳಿಗಳ ಮೇಲೆ ಪ್ರಯೋಗಿಸಿದ್ದರು. ತತ್ಪರಿಣಾಮವಾಗಿ ಎಸ್ಕರೆಶಿಯಾ ಕೊಲೈ, ಸ್ಟ್ರೆಪ್ಟೋಕಾಕಸ್  ಆರಿಯಸ್, ಬ್ಯಾಸಿಲಸ್ ಸಬ್ಟಿಲಿಸ್ ಮತ್ತು ಸುಡೋಮೊನಾಸ್ ಏರುಜಿನೋಸ್ ರೋಗಾಣುಗಳ ವಿರುದ್ಧ ಸೀಯಾಳದನೀರು ಅತ್ಯಂತ ಪರಿಣಾಮಕಾರಿ ಎನ್ನುವುದು ತಿಳಿದುಬಂದಿತ್ತು.
ವೈದ್ಯಕೀಯ ವಿಜ್ಞಾನಿಗಳ ಈ ಸಂಶೋಧನೆಯು  ಮುಂದಿನ ದಿನಗಳಲ್ಲಿ  ಅಪಾಯಕಾರಿ ರೋಗಾಣುಗಳ ವಿರುದ್ಧ ಸಂಶೋಧಿಸಲಿರುವ  ಜೀವನಿರೋಧಕ ಔಷಧಗಳ ತಯಾರಿಕೆಯಲ್ಲಿ ಮಹತ್ವಪೂರ್ಣ ಪಾತ್ರವನ್ನು
ನಿರ್ವಹಿಸಲಿದೆ.
ಅದೇನೇ ಇರಲಿ, ಇವೆಲ್ಲಾ ವಿಚಾರಗಳ ಬಗ್ಗೆ ಅವಶ್ಯಕ ಮಾಹಿತಿಗಳನ್ನು ಅರಿತಿರದ ಜನರೂ, ಪ್ರತಿನಿತ್ಯ ಸೀಯಾಳವನ್ನು ಕುಡಿಯುತ್ತಾರೆ. ಇದೀಗ ಇದರ ಔಷದೀಯ ಗುಣಗಳನ್ನು ಅರಿತ ಬಳಿಕ, ಅನಾರೋಗ್ಯಕರ ಲಘು ಪಾನೀಯಗಳನ್ನು ಸೇವಿಸುವ ಜನರೂ ಎಳನೀರನ್ನು ಕುಡಿಯಲು ಆರಂಭಿಸಿದಲ್ಲಿ ಅಚ್ಚರಿಪಡಬೇಕಾಗಿಲ್ಲ!.
ಡಾ. ಸಿ. ನಿತ್ಯಾನಂದ ಪೈ ,ಪುತ್ತೂರು  


No comments:

Post a Comment