Thursday, May 2, 2013


    ವಾಹನದಟ್ಟಣೆ ನಿಯಂತ್ರಿಸಲು ವಿನೂತನ ಶುಲ್ಕ!
ಭಾರತದ ಪ್ರತಿಯೊಂದು ನಗರ-ಮಹಾನಗರಗಳ ಪ್ರತಿಯೊಂದು ರಸ್ತೆಗಳಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ವಾಹನದಟ್ಟಣೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರದ ನಗರಾಭಿವೃದ್ಧಿ ಮಂತ್ರಾಲಯವು ಮೋಟಾರ್ ಕಾರುಗಳ ಮೇಲೆ "ದಟ್ಟಣೆ ಶುಲ್ಕ" ವನ್ನು  ವಿಧಿಸುವ ಬಗ್ಗೆ ಚಿಂತಿಸುತ್ತಿದೆ. ಏಕೆಂದರೆ ಬಹುತೇಕ ರಸ್ತೆಗಳ ಬಹುದೊಡ್ಡ ಭಾಗವನ್ನು ಕಾರುಗಳೇ ಬಳಸುತ್ತವೆ. ಈ "ಕಾರುಬಾರನ್ನು" ನಿಯಂತ್ರಿಸಲು ಕೇಂದ್ರವು ರಾಜ್ಯ ಸರಕಾರಗಳಿಗೆ ಸಲಹೆಯನ್ನು ನೀಡಿದ್ದು, ಇದರ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಿದ ಬಳಿಕ ಅನುಷ್ಠಾನಿಸಲು ಸೂಚಿಸಿದೆ. ಕೇಂದ್ರ ನಗರಾಭಿವೃದ್ಧಿ ಮಂತ್ರಾಲಯದ ಸ್ವಾಯತ್ತ ಸಂಸ್ಥೆಯಾಗಿರುವ ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಟ್ರಾನ್ಸ್ ಪೋರ್ಟ್,ಕಾರುಗಳ ಮೇಲೆ ಈ ಶುಲ್ಕವನ್ನು ವಿಧಿಸುವ ಪ್ರಸ್ತಾವನೆಯನ್ನು ಶಿಫಾರಸು ಮಾಡಿದೆ.
ದಟ್ಟಣೆ  ಶುಲ್ಕ
ಕಾನೂನುಬದ್ಧವಾಗಿ ಘೋಷಿಸಿರುವ ಅತಿಯಾದ ವಾಹನ ದಟ್ಟಣೆಯಿರುವ ನಿಗದಿತ ಪ್ರದೇಶವನ್ನು ಪ್ರವೇಶಿಸುವ ಕಾರುಗಳಿಗೆ ಪೂರ್ವ ನಿರ್ಧಾರಿತ ಶುಲ್ಕವನ್ನು ವಿಧಿಸುವ ಪರಿಣಾಮಕಾರಿ ವಿಧಾನವೇ "ದಟ್ಟಣೆ ಶುಲ್ಕ" ಅರ್ಥಾತ್ ಕಂಜೆಶನ್ ಚಾರ್ಜ್. ಸುಗಮ ಸಂಚಾರಕ್ಕೆ ಸಂಭವಿಸುವ ಅಡ್ಡಿ ಆತಂಕಗಳು,ವಿಳಂಬ,ಸಮಯ ಹಾಗೂ ಇಂಧನದ ಅಪವ್ಯಯ ಮತ್ತು ಪರಿಸರ ಪ್ರದೂಷಣೆಗಳನ್ನು ತಡೆಗಟ್ಟಲು ಈ ಶುಲ್ಕವು ಉಪಯುಕ್ತ ಎನಿಸಲಿದೆ.
ದಟ್ಟಣೆ ಶುಲ್ಕವನ್ನು ವಿಧಿಸಿದಲ್ಲಿ ಇಂತಹ ಪ್ರದೇಶಗಳನ್ನು ಸದಾ ಅನಿಯಂತ್ರಿತವಾಗಿ  ಪ್ರವೇಶಿಸುತ್ತಿದ್ದ ವಾಹನಗಳು ಅನ್ಯ ರಸ್ತೆಗಳ ಮೂಲಕ ಸಂಚರಿಸುವುದರಿಂದ,ಜನಸಾಮಾನ್ಯರು ಸ್ವಂತ ವಾಹನಗಳ ಬದಲಾಗಿ ಸಾರ್ವಜನಿಕ ಸಾರಿಗೆ ವಾಹನಗಳನ್ನು ಬಳಸುವುದರಿಂದ ಮತ್ತು ಇದರಿಂದಾಗಿ ಈ ಪ್ರದೇಶಗಳಲ್ಲಿ ತಂಗುವ ವಾಹನಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆ ಆಗಲಿರುವುದು. ಈ ಬಗ್ಗೆ ಅಧ್ಯಯನವನ್ನು ನಡೆಸಿರುವ ದೆಹಲಿಯ ಸ್ಕೂಲ್ ಆಫ್ ಪ್ಲಾನಿಂಗ್ ಎಂಡ್ ಆರ್ಕಿಟೆಕ್ಚರ್ ಸಂಸ್ಥೆಯು ಹೇಳುವಂತೆ,ಕೇವಲ ೧೦ ರೂ. ದಟ್ಟಣೆ ಶುಲ್ಕವನ್ನು ವಿಧಿಸಿದಲ್ಲಿ ಇಂತಹ ಪ್ರದೇಶಗಳ ವಾಹನ ದಟ್ಟಣೆಯ ಪ್ರಮಾಣವು ಶೇ. ೨೦ ರಿಂದ ೨೫ ರಷ್ಟು ಕಡಿಮೆಯಾಗಲಿದೆ. ಈ ಶುಲ್ಕವನ್ನು ಈಗಾಗಲೇ ಸಿಂಗಾಪುರ,ಸ್ಟಾಕ್ ಹೋಂ,ಲಂಡನ್ ಮುಂತಾದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. 
ದಟ್ಟಣೆ ಶುಲ್ಕವನ್ನು ಮೊಟ್ಟಮೊದಲಬಾರಿಗೆ ರಾಷ್ಟ್ರೀಯ ನಗರ ಸಾರಿಗೆ ಧೋರಣೆ-೨೦೦೬ ರಲ್ಲಿ ಪ್ರಸ್ತಾವಿಸಲಾಗಿದ್ದರೂ, ಸಂಬಂಧಿತ ಮಂತ್ರಾಲಯವು ಇದನ್ನು ಪರಿಗಣಿಸಿರಲಿಲ್ಲ. ಆದರೆ ಈ ಬಾರಿ ೧೨ ನೆಯ ಪಂಚವಾರ್ಷಿಕ ಯೋಜನೆಯಲ್ಲಿ ಇದಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗಿದ್ದು,ದಟ್ಟಣೆ ಶುಲ್ಕವನ್ನು ವಿಧಿಸುವ ಮತ್ತು ಪಾರ್ಕಿಂಗ್ ಶುಲ್ಕವನ್ನು ಹೆಚ್ಚಿಸುವಮೂಲಕ ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆಮಾಡಿ,ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ವೃದ್ಧಿಸುವ ಪ್ರಸ್ತಾವನೆಯಿದೆ. ಜಾಗತಿಕ ಮಟ್ಟದಲ್ಲಿ ಸುಗಮ ವಾಹನ ಸಂಚಾರದ ಸಲುವಾಗಿ ದಟ್ಟಣೆ ಶುಲ್ಕವನ್ನು ನಿರ್ಧರಿಸುವ ವಿಧಾನವನ್ನು ವಿಶ್ಲೇಷಿಸಲು ಯೋಜನಾ ಆಯೋಗ ಸೂಚಿಸಿದೆ. ೨೦೦೮ ರಲ್ಲಿ ನಗರ ಮೂಲಸೌಕರ್ಯಗಳ ಸಲಹಾ ಸಂಸ್ಥೆಯೊಂದು ನಡೆಸಿದ್ದ ಅಧ್ಯಯನದಂತೆ,೨೦೩೦ ರಲ್ಲಿ ದೇಶದ ದೊಡ್ಡ ನಗರಗಳಲ್ಲಿ ಗರಿಷ್ಠ ಸಂಖ್ಯೆಯ ವಾಹನಗಳು ಓಡಾಡುವ ಸಮಯದಲ್ಲಿ (ಪೀಕ್ ಅವರ್) ಇವುಗಳ ವೇಗವು ಗಂಟೆಗೆ ಕೇವಲ ೬ ಕಿಲೋಮೀಟರ್ ಗೆ ಕುಸಿಯಲಿದೆ. ಅರ್ಥಾತ್ ವಾಹನಗಳ ಸಂಚಾರವು ಅಕ್ಷರಶಃ ಸ್ಥಗಿತಗೊಳ್ಳಲಿದೆ!.
ಸಾರ್ವಜನಿಕ ಸಾರಿಗೆ ಅಭಿವೃದ್ಧಿ
ತಜ್ಞರ ಅಭಿಪ್ರಾಯದಂತೆ ದಟ್ಟಣೆ ಶುಲ್ಕವು ಉಪಯುಕ್ತ ಎನಿಸುವುದಾದರೂ,ಇದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು ಸುಲಭಾಸಾಧ್ಯವೇನಲ್ಲ. ಏಕೆಂದರೆ ವಿವಿಧ ನಗರಗಳ ಗಾತ್ರ,ಜನಸಂಖ್ಯೆ ಮತ್ತು ಸಾರಿಗೆ ವ್ಯವಸ್ಥೆಗಳಲ್ಲಿನ ವ್ಯತ್ಯಾಸಗಳು  ಅನೇಕ ಗೊಂದಲಗಳಿಗೆ ಕಾರಣವೆನಿಸಬಹುದು. ಇದಕ್ಕಾಗಿ ಸಮರ್ಪಕವಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದರೊಂದಿಗೆ,ದಟ್ಟಣೆ ಶುಲ್ಕವನ್ನು ವಿಧಿಸುವುದರಿಂದ ಕಡಿಮೆಯಾಗಲಿರುವ ವಾಹನಗಳ ಸಂಖ್ಯೆಯ ವೈಜ್ಞಾನಿಕ ಲೆಕ್ಕಾಚಾರವನ್ನು ಮಾಡಬೇಕಿದೆ.
ದಟ್ಟಣೆ  ಶುಲ್ಕವನ್ನು ಜಾರಿಗೊಳಿಸುವ ಮುನ್ನ ಸಮರ್ಪಕವಾದ ಹಾಗೂ ಸುಗಮ ವಾಹನ ಸಂಚಾರಕ್ಕೆ ಅವಶ್ಯಕವೆನಿಸುವ ವ್ಯವಸ್ಥೆಗಳನ್ನು ಸಿದ್ಧಪಡಿಸಲು,  ಅವಶ್ಯಕವಾದ ಆಧುನಿಕ ತಂತ್ರಜ್ಞಾನ ಮತ್ತು ಪರ್ಯಾಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಿಗಾಗಿ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಬೇಕಾಗುವುದು. ಆದರೆ ಇದರಿಂದಾಗಿ ಜನಸಾಮಾನ್ಯರಿಗೆ ಲಭಿಸಲಿರುವ ಪ್ರಯೋಜನಗಳನ್ನು,ಅಂದರೆ ವಾಹನ ದಟ್ಟಣೆಯ ಪ್ರಮಾಣದಲ್ಲಿ ಇಳಿಕೆ,ಸುಗಮ ವಾಹನ ಸಂಚಾರಕ್ಕೆ ಆಸ್ಪದ,ಸಮಯ ಮತ್ತು ಇಂಧನಗಳ ಉಳಿತಾಯ,ಪರಿಸರ ಪ್ರದೂಷಣೆಯ ನಿಯಂತ್ರಣಗಳೊಂದಿಗೆ ದಟ್ಟಣೆ ಶುಲ್ಕ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಂದ ಗಳಿಸಲಿರುವ ಹೆಚ್ಚುವರಿ ಆದಾಯಗಳನ್ನು ಪರಿಗಣಿಸಿದಾಗ ಲಾಭದಾಯಕವೆನಿಸಲಿದೆ.
ಬಾಕ್ಸ್ ಐಟಂ
ಲಂಡನ್-ಯಶಸ್ವಿ ಪ್ರಯೋಗ
ಲಂಡನ್ ನಗರದಲ್ಲಿ ೨೦೦೩ ರಲ್ಲೇ ಅನುಷ್ಠಾನಗೊಂಡಿದ್ದ ದಟ್ಟಣೆ ಶುಲ್ಕದ ಪರಿಣಾಮವಾಗಿ,ಕೇವಲ ಎರಡೇ ದಿನಗಳಲ್ಲಿ  ವಾಹನಗಳ ದಟ್ಟನೆಯ ಪ್ರಮಾಣವು ಶೇ. ೨೫ ರಷ್ಟು ಕಡಿಮೆಯಾಗಿತ್ತು. ಇದರಲ್ಲಿ ಶೇ. ೬೦ ರಷ್ಟು ದಟ್ಟಣೆ ಕಡಿಮೆಯಾಗಲು ಜನರು ಸಾರ್ವಜನಿಕ ಸಾರಿಗೆಯನ್ನು ಬಳಸಲು ಆರಂಭಿಸಿದ್ದುದು ಮತ್ತು ಇನ್ನುಳಿದ ಶೇ. ೪೦ ರಷ್ಟು ಜನರು ಕಾರುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಂಡು ಪ್ರಯಾಣಿಸಲು ಆರಂಭಿಸಿದ್ದುದು,ಮೋಟಾರ್ ಬೈಕುಗಳು ಹಾಗೂ ಸೈಕಲ್ ಗಳನ್ನು ಉಪಯೋಗಿಸಲು ಪ್ರಾರಂಭಿಸಿದ್ದುದು  ಕಾರಣವೆನಿಸಿತ್ತು.ತತ್ಪರಿಣಾಮವಾಗಿ ವಾರದ ದಿನಗಳಲ್ಲಿ ಅಲ್ಲಿನ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ಬಸ್ಸುಗಳು ಮತ್ತು ಅನ್ಯ ವಾಹನಗಳ ವೇಗವು ಶೇ. ೧೦ ರಿಂದ ೨೦ ರಷ್ಟು ಹೆಚ್ಚಿತ್ತು. 
ವಾಹನಗಳ ಸಂಖ್ಯೆ ಕಡಿಮೆಯಾಗಿದ್ದ ಕಾರಣದಿಂದಾಗಿ,ವಾಯು ಮಾಲಿನ್ಯ-ಪರಿಸರ ಪ್ರದೂಷಣೆಯ ಪ್ರಮಾಣಗಳೂ ಶೇ. ೧೩ ರಿಂದ ೧೫ ರಷ್ಟು ಕಡಿಮೆಯಾಗಿತ್ತು. ನಮ್ಮ ದೇಶದ ಮಹಾನಗರಗಳ ವಾಹನ ದಟ್ಟಣೆ ಮತ್ತು
 ತತ್ಪರಿಣಾಮವಾಗಿ ಉದ್ಭವಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿದಾಗ,ಆದಷ್ಟು ಬೇಗನೇ ದಟ್ಟಣೆ ಶುಲ್ಕವನ್ನು ಜಾರಿಗೊಳಿಸುವುದು ನಿಶ್ಚಿತವಾಗಿಯೂ ಹಿತಕರ ಎನಿಸುವುದರಲ್ಲಿ ಸಂದೇಹವಿಲ್ಲ.
ಡಾ. ಸಿ . ನಿತ್ಯಾನಂದ ಪೈ
ಬಳಕೆದಾರರ ಹಿತರಕ್ಷಣಾ ವೇದಿಕೆ
ಬೊಳುವಾರು
ಪುತ್ತೂರು .ದ .ಕ


No comments:

Post a Comment