Saturday, May 4, 2013



" ರಾಜಕೀಯ " ಉದ್ಯೋಗವೇ ಹೊರತು ಸೇವೆಯಲ್ಲ!
ಭವ್ಯ ಭಾರತದ ಪ್ರತಿಯೊಬ್ಬ ರಾಜಕಾರಣಿಯ ಅಭಿಪ್ರಾಯದಂತೆ, ರಾಜಕೀಯ ಒಂದು ಸೇವೆಯೇ ಹೊರತು ಉದ್ಯೋಗವಲ್ಲ. ಆದರೆ ದೇಶದ ಪ್ರತಿಯೊಂದು ರಾಜ್ಯಗಳ ಮತ್ತು ಕೇಂದ್ರ ಸರಕಾರದ ರಾಜಕೀಯ ನೇತಾರರು(ಶಾಸಕರು -ಸಂಸದರು) ಗಳಿಸುತ್ತಿರುವ ಸಂಬಳ-ವೈವಿಧ್ಯಮಯ ಭತ್ಯೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ,ಇವರು ಮಾಡುತ್ತಿರುವುದು ನಿಶ್ಚಿತವಾಗಿಯೂ ಸೇವೆಯಲ್ಲ ಎನ್ನುವುದು ಜನಸಾಮಾನ್ಯರಿಗೆ ಮನದಟ್ಟಾಗುತ್ತದೆ.
ನಮ್ಮ ದೇಶದಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಕನಿಷ್ಠ ವಯೋಮಿತಿಯನ್ನು ನಿಗದಿಸಿದ್ದರೂ,ಶೈಕ್ಷಣಿಕ, ಶಾರೀರಿಕ-ಮಾನಸಿಕ ಆರೋಗ್ಯ,ಅನುಭವ,ಸಚ್ಚಾರಿತ್ರ್ಯ ಇತ್ಯಾದಿ ಅರ್ಹತೆಗಳ ಬಗ್ಗೆ ಯಾವುದೇ ಮಾನದಂಡಗಳನ್ನು ನಿಗದಿಸಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಅನಕ್ಷರಸ್ತ, ಅನಾರೋಗ್ಯಪೀಡಿತ,ಅನನುಭವಿ ಹಾಗೂ ಅತ್ಯಾಚಾರ,ದರೋಡೆ,ಸುಲಿಗೆ,ವಂಚನೆ ಹಾಗೂ ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಮತ್ತು ಬಂದೀಖಾನೆಯಲ್ಲಿರುವ ವ್ಯಕ್ತಿಗಳೂ ಚುನಾವಣೆಯಲ್ಲಿ ಸ್ಪರ್ದಿಸಬಹುದಾಗಿದೆ. ನಮ್ಮದೇ ರಾಜ್ಯದ ಹಿರಿಯ ನೇತಾರರೇ ಹೇಳುವಂತೆ,ಅವರೊಬ್ಬ ಆರೋಪಿಯೇ ಹೊರತು ಅಪರಾಧಿಯಲ್ಲ!.
ನಮ್ಮ ದೇಶದಲ್ಲಿನ ಯಾವುದೇ ಉದ್ಯೋಗದಲ್ಲಿರುವ ವ್ಯಕ್ತಿಯೊಬ್ಬ ತನ್ನ ಸಂಬಳ-ಭತ್ಯೆ ಇತ್ಯಾದಿಗಳನ್ನು ಹೆಚ್ಚಿಸಿಕೊಳ್ಳುವ ಅಧಿಕಾರವನ್ನು ಹೊಂದಿರುವುದಿಲ್ಲ. ಆದರೆ ನಮ್ಮ ಜನಪ್ರಿಯ ಜನನಾಯಕರು ಮಾತ್ರ 
ತಮಗೆ ಬೇಕೆನಿಸಿದಾಗ ಮತ್ತು ತಮಗೆ ಬೇಕೆನಿಸದಷ್ಟು ಪ್ರಮಾಣದಲ್ಲಿ,ತಮ್ಮ ಸಂಬಳ-ಭತ್ಯೆ ಮತ್ತು ಇತರ ಸವಲತ್ತುಗಳನ್ನು ಹೆಚ್ಚಿಸಿಕೊಳ್ಳುವ ಪರಮಾಧಿಕಾರವನ್ನು ಹೊಂದಿದ್ದಾರೆ!. ವಿಶೇಷವೆಂದರೆ  ಸದಾ ಕಚ್ಚಾಡುವ
 ಹಾಗೂ  ಒಬ್ಬರು ಹೇಳಿದ್ದನ್ನು ಮತ್ತೊಬ್ಬರು ಅಲ್ಲಗಳೆವ ಆಡಳಿತ-ವಿರೋಧ ಪಕ್ಷಗಳ ಸದಸ್ಯರೆಲ್ಲರೂ,ತಮ್ಮ ಸಂಬಳ-ಭತ್ಯೆಗಳನ್ನು ಹೆಚ್ಚಿಸುವ ವಿಚಾರದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ. ಹಾಗೂ ಇಂತಹ ಸಂದರ್ಭದಲ್ಲಿ ಪ್ರಸ್ತಾವನೆಯನ್ನು ಮಂಡಿಸುವ ಮಂತ್ರಿಯ ಭಾಷಣಕ್ಕೆ ಅಡ್ಡಿಪಡಿಸುವ,ಸದನದ ಬಾವಿಯನ್ನು ಪ್ರವೇಶಿಸಿ ಗದ್ದಲವೆಬ್ಬಿಸುವ,ತಮ್ಮ ಆಸನದ ಮೇಲೇರಿ ಘೋಷಣೆಗಳನ್ನು ಕೂಗುವ,
ಧರಣಿ ಅಥವಾ ಸಭಾತ್ಯಾಗ ಮಾಡುವುದನ್ನೇ ಮರೆತುಬಿಡುತ್ತಾರೆ!. ಅಂತೆಯೇ ಇಂತಹ ನಿರ್ಣಯಗಳನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸುತ್ತಾರೆ. 
ಕೇವಲ ಎರಡು ವರ್ಷಗಳ ಹಿಂದೆ ಕರ್ನಾಟಕದ ಮುಖ್ಯಮಂತ್ರಿ,ಅನ್ಯ ಮಂತ್ರಿಗಳು,ಸಭಾಧ್ಯಕ್ಷರು,ವಿಪಕ್ಷ ನಾಯಕರು,ಸಚೇತಕರು 
ಮತ್ತು ಶಾಸಕರ ವೇತನಭತ್ಯೆ ಮತ್ತಿತರ ಸವಲತ್ತುಗಳನ್ನು ಹೆಚ್ಚಿಸುವ ಪ್ರಸ್ತಾ ವನೆಯನ್ನು,ಸದನವು ಕೇವಲ ಎರಡೇ ನಿಮಿಷಗಳಲ್ಲಿ 
ಅಂಗೀಕರಿಸಿತ್ತು. ಬಹಳಷ್ಟು ವರ್ಷಗಳಿಂದ  ಇದನ್ನು ಪರಿಷ್ಕರಣೆ ಮಾಡದೇ ಇದ್ದ ನೆಪವನ್ನು ಮುಂದೊಡ್ಡಿ, ಈ ಜನನಾಯಕರ ಸಂಬಳ-ಭತ್ಯೆ ಮತ್ತಿತರ ಸವಲತ್ತುಗಳನ್ನು ಎರಡರಿಂದ ಎರಡೂವರೆ ಪಟ್ಟು ಹೆಚ್ಚಿಸಲಾಗಿತ್ತು!.
 ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾಸಿಕ ವೇತನವನ್ನು ೧೨ ಸಾವಿರದಿಂದ ೩೦  ಸಾವಿರ,ಸಚಿವರ ವೇತನವನ್ನು ೧೦ ರಿಂದ ೨೫,ಆತಿಥ್ಯ ಭತ್ತೆಯನ್ನು ೭೫ ಸಾವಿರದಿಂದ ೧. ೫೦,ಮನೆಬಾಡಿಗೆ ಭತ್ಯೆ ೨೦ ರಿಂದ ೪೦,ಮನೆ ನಿರ್ವಹಣೆ ೫ ರಿಂದ ೧೦,ಪ್ರವಾಸ ಭತ್ಯೆ ೧೨೦೦ ರಿಂದ ೨೦೦೦,ಪೆಟ್ರೋಲ್-ಡೀಸೆಲ್ ೫೦೦ ರಿಂದ ೭೫೦ ಲೀಟರ್ ಗಳಿಗೆ ಹೆಚ್ಚಿಸಲಾಗಿತ್ತು. ಸಭಾಪತಿ-ಸಭಾಧ್ಯಕ್ಷರಿಗೂ ಮುಖ್ಯಮಂತ್ರಿಗಳಿಗೆ ನೀಡುವಷ್ಟೇ ವೇತನ ಮತ್ತಿತರ ಸವಲತ್ತುಗಳನ್ನು ನಿಗದಿಸಲಾಗಿತ್ತು. ಇನ್ನು ಶಾಸಕರ ಮಾಸಿಕ ವೇತನವನ್ನು ೧೦ ರಿಂದ ೨೦ ಸಾವಿರ,ದಿನಭತ್ಯೆಯನ್ನು ೬೦೦ ರೂ. ಗಳಿಂದ ೧ ಸಾವಿರ,ಮಾಸಿಕ ದೂರವಾಣಿ ವೆಚ್ಚವನ್ನು ೧೦ ರಿಂದ ೧೫ ಸಾವಿರ,ಅಂಚೆವೆಚ್ಚವನ್ನು ೪ ರಿಂದ ೫ ಸಾವಿರ,ಆಪ್ತ ಸಹಾಯಕರಿಗೆ ಮಾಸಿಕ ೫ ರಿಂದ  ೧೦ ಸಾವಿರ ಮತ್ತು ಇನ್ನಿತರ ಭತ್ಯೆಗಳನ್ನು ಪರಿಷ್ಕರಿಸಲಾಗಿತ್ತು.
 ಇಷ್ಟು ಮಾತ್ರವಲ್ಲ,ಸದನದ ಸದಸ್ಯರು ಮುಂದಿನ ಚುನಾವಣೆಯಲ್ಲಿ ದುರಾದೃಷ್ಟವಶಾತ್ ಸೋತಲ್ಲಿ ಅಥವಾ ಕಾರಣಾಂತರಗಳಿಂದ ನಿವೃತ್ತರಾದಲ್ಲಿ ದೊರೆಯಲಿರುವ ಪಿಂಚಣಿಯ ಮೊತ್ತವನ್ನೂ ಹೆಚ್ಚಿಸಲಾಗಿತ್ತು. ಇದರಿಂದಾಗಿ ನಿವೃತ್ತ ಶಾಸಕರಿಗೆ ಕನಿಷ್ಠ ೨೫ ರಿಂದ ಗರಿಷ್ಟ ೩೫ ಸಾವಿರ ರೂ. ಮಾಸಿಕ ಪಿಂಚಣಿ ಯೊಂದಿಗೆ ವರ್ಷಕ್ಕೊಂದು ಬಾರಿ ಔಷದೋಪಚಾರ ಮತ್ತು ಪ್ರವಾಸಕ್ಕಾಗಿ ತಲಾ ೧ ಲಕ್ಷ ರೂ. ಗಳನ್ನು ನೀಡುವ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ಇವೆಲ್ಲಕ್ಕೂ ಮಿಗಿಲಾಗಿ ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದಿದ್ದ ಅಧಿವೇಶನದಲ್ಲಿ "ಅನರ್ಹ ಶಾಸಕ"ರಿಗೂ ಪಿಂಚಣಿಯನ್ನು ನೀಡುವ ಪ್ರಸ್ತಾವನೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು!.ಪ್ರಾಯಶಃ ವೇತನಕ್ಕಿಂತ ಅಧಿಕ ಮೊತ್ತದ ಪಿಂಚಣಿಯನ್ನು ಗಳಿಸಬಹುದಾದ
 "ಉದ್ಯೋಗ"ವು ಇದೊಂದೇ ಎನ್ನುವುದನ್ನು ನೀವೂ ಗಮನಿಸಿರಲೇಬೇಕು. ವಿಶೇಷವೆಂದರೆ ಈ ವಿಚಾರವು ಅನೇಕ ಹಗರಣ-ಪ್ರಕರಣಗಳ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಹೂಡುವ ಪ್ರಜ್ಞಾವಂತ ನಾಗರಿಕರ ಗಮನವನ್ನು ಸೆಳೆಯಲು ವಿಫಲವಾಗಿತ್ತು.
ಇಷ್ಟೆಲ್ಲಾ ಸಂಬಳ-ಸವಲತ್ತುಗಳನ್ನು ಪಡೆದುಕೊಂಡರೂ, ಕಾರಣಾಂತರಗಳಿಂದ ಸರಕಾರ ತಮಗೆ ನೀಡಿದ್ದ ಬಂಗಲೆಗಳನ್ನು ತೆರವುಗೊಳಿಸದ ನಮ್ಮ ನೇತಾರರು,ಅಂತಿಮವಾಗಿ ಲಕ್ಷಾಂತರ ರೂಪಾಯಿ ಬಾಡಿಗೆ,ದೂರವಾಣಿ ಮತ್ತು ವಿದ್ಯುತ್ ಶುಲ್ಕವನ್ನು ಪಾವತಿಸದೇ ಇರುವ ವಿಚಾರ ಮತದಾರರಿಗೂ ತಿಳಿದಿದೆ. ಅನೇಕ ಸಂದರ್ಭಗಳಲ್ಲಿ ಉಚ್ಛ ನ್ಯಾಯಾಲಯವು ಇಂತಹ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಸನ್ನಿವೇಶಗಳೂ ಉದ್ಭವಿಸಿವೆ.
ಮೇಲೆ ನಮೂದಿಸಿದ ವಿಚಾರಗಳು ಕೇವಲ ಸ್ಯಾಂಪಲ್ ಮಾತ್ರ. ನಮ್ಮನ್ನಾಳುವವರಿಗೆ ದೊರೆಯುವ ಅನ್ಯ ಸವಲತ್ತುಗಳು ಯಾವುದೇ ಬಹುರಾಷ್ಟ್ರೀಯ ಸಂಸ್ಥೆಗಳ ಉನ್ನತ ಅಧಿಕಾರಿಗಳಿಗಿಂತ ಕಡಿಮೆಯೇನಿಲ್ಲ. ಇವೆಲ್ಲವನ್ನೂ ನಮೂದಿಸಿದಲ್ಲಿ ಇದೊಂದು ಬೃಹತ್ ಲೇಖನವಾಗುವುದರಲ್ಲಿ ಸಂದೇಹವಿಲ್ಲ. ಆದರೆ ಈ ಲೇಖನದಲ್ಲಿ ಉಲ್ಲೇಖಿಸಿರುವ ಒಂದಿಷ್ಟು ಮಾಹಿತಿಗಳನ್ನು ಅರಿತುಕೊಂಡ ಓದುಗರಿಗೆ,ರಾಜಕಾರಣಿಗಳು ಹೇಳುವಂತೆ "ತಾವು ಮಾಡುತ್ತಿರುವುದು ಸೇವೆಯೇ ಹೊರತು, ಇದೊಂದು ಉದ್ಯೋಗವಲ್ಲ" ಎನ್ನುವುದು ನಿಜವಲ್ಲ ಎಂದು ಮನವರಿಕೆ ಆಗುವುದರಲ್ಲಿ ಸಂದೇಹವಿಲ್ಲ!.
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು

No comments:

Post a Comment