Wednesday, May 22, 2013



        ಹೆಂಗಸರನ್ನೇ ಹೆಚ್ಚಾಗಿ ಬಾಧಿಸುವ ಗ್ಲಕೊಮಾ
ಮನುಷ್ಯನ ಪಂಚೆಂದ್ರಿಯಗಳಲ್ಲಿ ಅತ್ಯಂತ ಪ್ರಮುಖ ಮತ್ತು ಅತ್ಯಮೂಲ್ಯವಾದ ಕಣ್ಣುಗಳ ದೃಷ್ಠಿಯನ್ನು ನಾಶಪಡಿಸಬಲ್ಲ ವ್ಯಾಧಿಗಳಲ್ಲಿ, ಗ್ಲಕೊಮಾ ದ್ವಿತೀಯ ಸ್ಥಾನದಲ್ಲಿದೆ. ಅದೇ ತಾನೇ ಜನಿಸಿದ ಪುಟ್ಟ ಕೂಸಿನಿಂದ ಆರಂಭಿಸಿ ವಯೋವೃದ್ಧರನ್ನೂ ಬಾಧಿಸಬಲ್ಲ ಈ ಕಾಯಿಲೆಗೆ ಶಾಶ್ವತ ಪರಿಹಾರವನ್ನು ಇಂದಿನ ತನಕ ಪತ್ತೆಹಚ್ಚಿಲ್ಲ. ಇದೇ ಕಾರಣದಿಂದಾಗಿ ಗ್ಲಕೊಮಾ ಪೀಡಿತ ವ್ಯಕ್ತಿಗಳು ಜೀವನಪರ್ಯಂತ ಚಿಕಿತ್ಸೆಯನ್ನು ಪಡೆಯಬೇಕಾದ ಅನಿವಾರ್ಯತೆ ಇದೆ. ಹೆಂಗಸರನ್ನು ಹೆಚ್ಚಾಗಿ ಕಾಡುವ ಈ ಅಪಾಯಕಾರಿ ವ್ಯಾಧಿಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
-------------          -------------          --------------              ---------------           
ಜಾಗತಿಕ ಮಟ್ಟದಲ್ಲಿ ಅತ್ಯಧಿಕ ಜನರಲ್ಲಿ ದೃಷ್ಟಿಹೀನತೆಗೆ ಕಾರಣವೆನಿಸುತ್ತಿರುವ ಕಾಯಿಲೆಗಳಲ್ಲಿ ಗ್ಲಕೊಮಾ ದ್ವಿತೀಯ ಸ್ಥಾನದಲ್ಲಿದ್ದರೂ,ಭಾರತದಲ್ಲಿ ತೃತೀಯ ಸ್ಥಾನದಲ್ಲಿದೆ. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೂ ವ್ಯಾಪಕವಾಗಿ ಕಂಡುಬರುವ ಮತ್ತು ಶಾಶ್ವತ ಪರಿಹಾರವೇ ಇಲ್ಲದ ಈ ವ್ಯಾಧಿಗೆ,ಅಜೀವಪರ್ಯಂತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.
ಗ್ಲಕೊಮಾ ಕಾಯಿಲೆ ಹಾಗೂ ಇದರ ಲಕ್ಷಣಗಳ ಬಗ್ಗೆ ಜನಸಾಮಾನ್ಯರಿಗೆ ಅವಶ್ಯಕ ಮಾಹಿತಿಯ ಅರಿವಿಲ್ಲದೇ ಇರುವುದರೊಂದಿಗೆ,ಅಜ್ಞಾನದಿಂದಾಗಿಯೂ ಇದರ ಪ್ರಾಬಲ್ಯ ವೃದ್ಧಿಸುವುದರಿಂದಾಗಿ ಶಾಶ್ವತ ದೃಷ್ಟಿನಾಶಕ್ಕೆ ಕಾರಣವೆನಿಸುತ್ತಿದೆ. ಜಗತ್ತಿನ ಶೇಕಡಾ ಐವತ್ತರಷ್ಟು ಗ್ಲಕೊಮಾ ಪೀಡಿತರಿಗೆ ಈ ವ್ಯಾಧಿಯ ಇರುವಿಕೆಯ ಅರಿವಿಲ್ಲದಿರುವುದು ಇದನ್ನು ಸಮರ್ಥಿಸುತ್ತದೆ
ಗ್ಲಕೊಮಾ ಎಂದರೇನು?
ಮನುಷ್ಯನ ಕಣ್ಣುಗಳ ಒಳಭಾಗದಲ್ಲಿನ ದ್ರವದ ಹೊರಹರಿಯುವಿಕೆಯ ಹಾದಿಯಲ್ಲಿ ತಲೆದೋರುವ ಅಡಚಣೆಯಿಂದಾಗಿ,ಕಣ್ಣುಗಳ ಆಂತರಿಕ ಒತ್ತಡದ ಹೆಚ್ಚುವಿಕೆ ಮತ್ತು ಓಪ್ಟಿಕ್ ನರಕ್ಕೆ ಹಾನಿಯಾಗುವ ಸ್ಥಿತಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ಗ್ಲಕೊಮಾ ಎಂದು ಕರೆಯುತ್ತಾರೆ. ಇದನ್ನು ಸ್ಥೂಲವಾಗಿ ಕ್ಲೋಸ್ಡ್ ಎಂಗಲ್ ಮತ್ತು ಓಪನ್ ಎಂಗಲ್(Closed angle-Open angle) ಎಂದು ವಿಂಗಡಿಸಿದ್ದಾರೆ. ಸಾಮಾನ್ಯವಾಗಿ ಓಪನ್ ಎಂಗಲ್ ಗ್ಲಕೊಮಾದಲ್ಲಿ ಗಮನಾರ್ಹ ಲಕ್ಷಣಗಳು ಕಂಡುಬರುವುದಿಲ್ಲ. ಆದರೆ ಕ್ಲೋಸ್ಡ್ ಎಂಗಲ್ ನಲ್ಲಿ ಕೆಲವೊಂದು ವಿಶಿಷ್ಠ ಲಕ್ಷಣಗಳು ಪ್ರಕಟವಾಗುತ್ತವೆ.
ಗ್ಲಕೊಮಾ ವ್ಯಾಧಿಯನ್ನು ಪ್ರಾರಂಭಿಕ ಹಂತದಲ್ಲೇ ನಿಖರವಾಗಿ ಪತ್ತೆಹಚ್ಚಿ,ಸೂಕ್ತ ಚಿಕಿತ್ಸೆಯನ್ನು ಪಡೆಯದಿದ್ದಲ್ಲಿ ನಿಶ್ಚಿತವಾಗಿಯೂ ದೃಷ್ಟಿನಾಶಕ್ಕೆ ಕಾರಣವೆನಿಸುತ್ತದೆ. ಕೆಲವೊಮ್ಮೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡರೂ,ಅಲ್ಪ ಪ್ರಮಾಣದ ವ್ಯಕ್ತಿಗಳಲ್ಲಿ ಆಂಶಿಕ ಅಥವಾ ಸಂಪೂರ್ಣ ದೃಷ್ಟಿನಾಶ ಸಂಭವಿಸುವ ಸಾಧ್ಯತೆಗಳಿವೆ. ಹಾಗೂ ಇದೇ ಕಾರಣದಿಂದಾಗಿ ಇದನ್ನು ನಿರ್ಲಕ್ಷಿಸದೇ ಕ್ಷಿಪ್ರಗತಿಯಲ್ಲಿ ತಜ್ಞವೈದ್ಯರಿಂದ ಚಿಕಿತ್ಸೆ ಪಡೆಯುವುದು ನಿಸ್ಸಂದೇಹವಾಗಿ ಹಿತಕರ ಎನಿಸುವುದು.
ಈ ಕಾಯಿಲೆಯನ್ನು ಸಂಪೂರ್ಣ-ಶಾಶ್ವತವಾಗಿ ಗುಣಪಡಿಸಬಲ್ಲ ಚಿಕಿತ್ಸಾ ವಿಧಾನವನ್ನು ಇದುವರೆಗೆ ಯಾವುದೇ ವೈದ್ಯಕೀಯ ವಿಜ್ಞಾನಿಗಳು-ಸಂಶೋಧಕರು ಪತ್ತೆಹಚ್ಚಿಲ್ಲ. ಅಂತೆಯೇ ತನ್ನ ನಿರ್ಲಕ್ಷ್ಯದಿಂದಾಗಿ ರೋಗಿಯು ಕಳೆದುಕೊಂಡ ದೃಷ್ಟಿಯನ್ನು ಮರಳಿ ಗಳಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಸೂಕ್ತ ಔಷದಗಳು ಅಥವಾ ಸಂದರ್ಭೋಚಿತ ಶಸ್ತ್ರಚಿಕಿತ್ಸೆಯ ಮೂಲಕ ಇದನ್ನು ನಿಯಂತ್ರಿಸಬಹುದಾಗಿದೆ. ಹಾಗೂ ಆಂಶಿಕವಾಗಿ ಸಂಭವಿಸಿರಬಹುದಾದ ದೃಷ್ಟಿನಾಶವನ್ನು ಸ್ಥಗಿತಗೊಳಿಸಬಹುದಾಗಿದೆ.ಜೊತೆಗೆ ಸುದೀರ್ಘಕಾಲ ಬಾಧಿಸುವ ಈ ವ್ಯಾಧಿಯ ಸ್ಥಿತಿಗತಿಗಳನ್ನು ನಿರಂತರವಾಗಿ ಗಮನಿಸಬೇಕಾಗುತ್ತದೆ.
 ಸುಮಾರು ೧೩ ದಶಲಕ್ಷ ಭಾರತೀಯರು ಗ್ಲಕೊಮಾ ವ್ಯಾಧಿಯಿಂದ ಬಳುತ್ತಿದ್ದಾರೆಂದು  ಅಂದಾಜಿಸಲಾಗಿದ್ದು,ಶೇ. ೧೩ ರಷ್ಟು  
ಕುರುಡುತನಕ್ಕೆ ಈ ವ್ಯಾಧಿಯು ಮೂಲಕಾರಣವೆನಿಸಿದೆ. 
ಗ್ಲಕೊಮಾ ಕಾಯಿಲೆಯನ್ನು ಸ್ಥೂಲವಾಗಿ ಕ್ಲೋಸ್ಡ್ ಎಂಗಲ್ ಮತ್ತು ಓಪನ್ ಎಂಗಲ್ ಎನ್ನುವ ಎರಡು ಪ್ರಭೇಧಗಳನ್ನಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ತೀವ್ರ ಸ್ವರೂಪದ ಕ್ಲೋಸ್ಡ್ ಎಂಗಲ್ ಪ್ರಭೇದವು ಹೆಂಗಸರಲ್ಲಿ ಗಂಡಸರಿಗಿಂತ ಮೂರುಪಟ್ಟು ಹೆಚ್ಚಿದೆ. ಏಷಿಯನ್ ರಾಷ್ಟ್ರಗಳಲ್ಲಿ ಇವೆರಡೂ ಪ್ರಭೇದಗಳ ಪ್ರಮಾಣ ಶೇ. ೫೦ ರಷ್ಟಿದೆ.  
ಸಂಭಾವ್ಯತೆ  
ಗ್ಲಕೊಮಾ ವ್ಯಾಧಿಯ ಸಂಭಾವ್ಯತೆ ಮತ್ತು ಅಪಾಯಕಾರಿ ಅಂಶಗಳು ಈ ಕೆಳಗಿನಂತಿವೆ.
ಮಧುಮೇಹ,ಅಧಿಕ ರಕ್ತದೊತ್ತಡ,ಥೈರಾಯ್ದ್  ಸಂಬಂಧಿತ ಕಾಯಿಲೆಗಳು,ಸ್ಟೆರಾಯ್ದ್ ಯುಕ್ತ ಔಷದಗಳ  ಬಳಸುವಿಕೆ,
ನಿದ್ರಾಹೀನತೆ,ಉದ್ವಿಗ್ನತೆ,ಖಿನ್ನತೆ,ಪಾರ್ಕಿನ್ಸನ್ಸ್ ಕಾಯಿಲೆ,ಆಸ್ತಮಾ ಮತ್ತಿತರ ವ್ಯಾಧಿಗಳಿಂದ ಬಳಲುತ್ತಿರುವ- ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳಲ್ಲಿ ಗ್ಲಕೊಮಾ ಉದ್ಭವಿಸುವ ಸಾಧ್ಯತೆಗಳಿವೆ. ಇದಲ್ಲದೇ ೪೦ ವರ್ಷ ವಯಸ್ಸನ್ನು ಮೀರಿದವರು ಮತ್ತು  ಕುಟುಂಬದ ಹಿರಿಯರು ಅಥವಾ ಸಮೀಪ ಸಂಬಂಧಿಗಳಲ್ಲಿ ಈ ವ್ಯಾಧಿ ಪೀಡಿತರು ಇದ್ದಲ್ಲಿ, ಮುಂದಿನ ಪೀಳಿಗೆಯಲ್ಲಿ ಇದು ತಲೆದೋರುವ ಸಾಧ್ಯತೆಗಳೂ ಇವೆ.
ಇದಲ್ಲದೆ ಪ್ರಕಾಶಮಾನವಾದ ದೀಪದ ಸುತ್ತ ಕಾಮನಬಿಲ್ಲಿನಂತಹ ಬಣ್ಣದ ಚಕ್ರವನ್ನು ಕಾಣುವವವರು,ಸಮೀಪದೃಷ್ಟಿ ಪೀಡಿತರು,ಆಗಾಗ ತಲೆನೋವಿನಿಂದ ಬಳಲುತ್ತಿರುವವರು,ಮುಖ-ಕಣ್ಣುಗಳಿಗೆ ಏಟು ಬಿದ್ದವರು ಮತ್ತು ಪದೇ ಪದೇ ಕನ್ನಡಕವನ್ನು ಬದಲಾಯಿಸಬೇಕಾದ ವ್ಯಕ್ತಿಗಳು ಗ್ಲಕೊಮಾ ವ್ಯಾಧಿಗೆ ತುತ್ತಾಗುವ ಸಾಧ್ಯತೆಗಳಿವೆ.
ಸಂಭಾವ್ಯ ವ್ಯಕ್ತಿಗಳು ನಿಯಮಿತವಾಗಿ ನೇತ್ರತಜ್ಞರಿಂದ ಕಣ್ಣುಗಳ ತಪಾಸಣೆಯನ್ನು ಮಾಡಿಸುತ್ತಿದ್ದಲ್ಲಿ,ಈ ವ್ಯಾಧಿಯನ್ನು ಪ್ರಾಥಮಿಕ ಹಂತದಲ್ಲೇ ಪತ್ತೆಹಚ್ಚಬಹುದಾಗಿದೆ. ಜೊತೆಗೆ ಸೂಕ್ತ ಚಿಕಿತ್ಸೆಯನ್ನು ಪಡೆಯುವ ಮೂಲಕ ಕಣ್ಣುಗಳಿಗೆ ಸಂಭವಿಸಬಲ್ಲ ಹಾನಿಯೊಂದಿಗೆ ದೃಷ್ಠಿನಾಶದಂತಹ ಗಂಭೀರ ಸಮಸ್ಯೆಯನ್ನು ಸುಲಭವಾಗಿ ತಡೆಗಟ್ಟಬಹುದಾಗಿದೆ. ಎಳೆಯ ವಯಸ್ಸಿನಲ್ಲಿ ಬಾಧಿಸುವ ಹಾಗೂ ಅನುವಂಶಿಕವಾಗಿ ತಲೆದೋರಬಲ್ಲ  "ಜುವೆನೈಲ್ ಓಪನ್ ಎಂಗಲ್ ಗ್ಲಕೊಮಾ" ಪೀಡಿತ ಕುಟುಂಬಗಳ ಸದಸ್ಯರು ನಿಯಮಿತವಾಗಿ  ಮತ್ತು ಕಡ್ಡಾಯವಾಗಿ ತಜ್ಞವೈದ್ಯರಿಂದ ನೇತ್ರತಪಾಸಣೆ ಮಾಡಿಸುವುದು ಹಿತಕರವೆನಿಸುವುದು.
ಚಿಕಿತ್ಸೆ
ಅವಶ್ಯಕ ಪರೀಕ್ಷೆಗಳನ್ನು ನಡೆಸಿ ಗ್ಲಕೊಮಾ ವ್ಯಾಧಿಯನ್ನು ನಿಖರವಾಗಿ ಗುರುತಿಸಿದ ಬಳಿಕ,ವ್ಯಾಧಿಯ ತೀವ್ರತೆ,ರೋಗಿಯ ವಯಸ್ಸು ಹಾಗೂ ಆತನಲ್ಲಿ ಇರಬಹುದಾದ ಅನ್ಯ ಕಾಯಿಲೆಗಳು ಮತ್ತಿತರ ಅಂಶಗಳನ್ನು ಪರಿಗಣಿಸಿ, ಔಷದ ಅಥವಾ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುವಂತೆ ತಜ್ಞ ವೈದ್ಯರು ಸಲಹೆಯನ್ನು ನೀಡುವರು. ಚಿಕಿತ್ಸೆ ಯಾವುದೇ ಆಗಿದ್ದರೂ,ವೈದ್ಯರ ಸೂಚನೆಯಂತೆ ಜೀವನಪರ್ಯಂತ ಔಷದೋಪಚಾರ ಮತ್ತು ನಿಗದಿತ ಅವಧಿಗೊಮ್ಮೆ ಕಣ್ಣುಗಳ ತಪಾಸಣೆಯನ್ನು ಮಾಡಬೇಕಾಗುವುದು ಅನಿವಾರ್ಯವೂ ಹೌದು.
ಇವೆಲ್ಲಕ್ಕೂ ಮಿಗಿಲಾಗಿ ಯಾವುದೇ ಕಾರಣಕ್ಕೂ ಬಂಧುಮಿತ್ರರ ಪುಕ್ಕಟೆ ಸಲಹೆಯನ್ನು ಮನ್ನಿಸಿ,ಅನ್ಯ ಚಿಕಿತ್ಸಾ ವಿಧಾನಗಳನ್ನು ಮಾತ್ರ ಪ್ರಯೋಗಿಸದಿರಿ. ಪ್ರಯೋಗಿಸಿ ಕಣ್ಣುಗಳ ದೃಷ್ಟಿಯನ್ನೇ ಕಳೆದುಕೊಂಡು ಪರಿತಪಿಸದಿರಿ!.
ಡಾ. ಸಿ . ನಿತ್ಯಾನಂದ ಪೈ
ಬಳಕೆದಾರರ ಹಿತರಕ್ಷಣಾ ವೇದಿಕೆ
ಬೊಳುವಾರು,ಪುತ್ತೂರು . ದ. ಕ

No comments:

Post a Comment