Saturday, June 1, 2013

                             ಜ್ವರಪೀಡಿತ    ಕಂದನನ್ನು ಕಾಡಬಲ್ಲ ಸೆಳೆತಗಳು
ಜ್ವರಪೀಡಿತ ಮಕ್ಕಳಲ್ಲಿ ಅಕಸ್ಮಿಕವಾಗಿ ಉದ್ಭವಿಸುವ ಅಪಸ್ಮಾರದಂತಹ ಸೆಳೆತಗಳನ್ನು "ಬಾಲಗೃಹ"ದ ಪೀಡೆ ಎಂದು ನಂಬಿ,ಹಿರಿಯರ ಅಣತಿಯಂತೆ "ಚಿಹ್ನೆಯ ಮಾತ್ರೆ"ಯನ್ನು ನೀಡುವ ಮಾತೆಯರನ್ನು ನೀವೂ ಕಂಡಿರಬಹುದು. ಈ ರೀತಿಯ ಚಿಕಿತ್ಸೆಗಳಿಗೆ ತಪ್ಪುಕಲ್ಪನೆಗಳು ಅಥವಾ ಮೂಢನಂಬಿಕೆಗಳೇ ಕಾರಣ. ಈ ಬಗ್ಗೆ ಒಂದಿಷ್ಟು ವೈಜ್ಞಾನಿಕ ಮಾಹಿತಿ ಇಲ್ಲಿದೆ.
----------           -----------           -------------            -------------             ------------             ---------------      
ಕೆಲದಿನಗಳಿಂದ ಶೀತದಿಂದ ಬಳಲುತ್ತಿದ್ದ ಪುಟ್ಟಿಗೆ ಅಂದು ರಾತ್ರಿ ಕೆಂಡಾಮಂಡಲ ಜ್ವರ ಕಾಯಲಾರಂಭಿಸಿತ್ತು. ಜ್ವರದ ತಾಪಕ್ಕೆ ಏನೇನೋ ಬಡಬಡಿಸುತ್ತಿದ್ದ ಮಗುವಿನ ಸ್ಥಿತಿಯನ್ನು ಕಂಡು ಗಾಬರಿಯಾದ ಪದ್ಮಕ್ಕ ತನ್ನಲ್ಲಿದ್ದ ಶೀತದ ಮದ್ದನ್ನು ನೀಡಿ,ಗಂಡ ಮನೆಗೆ ಬಂದೊಡನೆ ಪುಟ್ಟಿಯನ್ನು ವೈದ್ಯರಲ್ಲಿ ಕರೆದೊಯ್ಯಲು ಸಿದ್ಧಳಾದಳು.
ತೊಡೆಯ ಮೇಲೆ ಮಗುವನ್ನು ಮಲಗಿಸಿ ಚಿಂತಾಕ್ರಾಂತಳಾಗಿ ಕುಳಿತಿದ್ದ ಪದ್ಮಕ್ಕನಿಗೆ ಆಕಸ್ಮಿಕವಾಗಿ ಪುಟ್ಟಿಯ ಕೈಕಾಲು ಮತ್ತು ಮತ್ತು ಶರೀರ ಸೆಟೆದುಕೊಂಡು,ಕಣ್ಣಾಲಿಗಳು ಮೇಲೆ ಹೋಗಿದ್ದುದನ್ನು ಕಂಡು ಹೃದಯವೇ ಬಾಯಿಗೆ ಬಂದಂತಾಗಿತ್ತು. ಅಷ್ಟರಲ್ಲೇ ಮಗುವಿನ ಮುಖವು ವಕ್ರವಾಗಿ,ಬಾಯಿಯಿಂದ ಒಂದಿಷ್ಟು ನೊರೆಯೊಂದಿಗೆ ಸಂಜೆ ನೀಡಿದ್ದ ಆಹಾರ ವಾಂತಿಯಾಗಿತ್ತು. ಜೊತೆಗೆ ಮಗುವಿನ ಗಂಟಲಿನಿಂದ ಗೊರಗೊರ ಸದ್ದು ಬರುತ್ತಿದ್ದು,ಶ್ವಾಸೋಚ್ವಾಸದ ಗತಿಯೂ ಬದಲಾಯಿತು. ಮರುಕ್ಷಣದಲ್ಲೇ ಸೆಟೆದುಕೊಂಡಿದ್ದ ಕೈ,ಕಾಲು ಹಾಗೂ ಶರೀರ ಮತ್ತು ವಕ್ರವಾಗಿದ್ದ ಬಾಯಿ ಸಡಿಲಗೊಂಡು, ಮಗು ನಿಶ್ಚೇಷ್ಟಿತವಾಯಿತು.
ಒಂದೆರಡು ನಿಮಿಷಗಳಲ್ಲೇ ನಡೆದುಹೊಗಿದ್ದ ಘಟನೆಯಿಂದ ಭಯಭೀತಳಾದ ಪದ್ಮಕ್ಕನು ನೆರೆಮನೆಯ ಶಾಂತಮ್ಮನನ್ನು ಜೋರಾಗಿ ಕೂಗಿ ಕರೆದಿದ್ದಳು. ತಕ್ಷಣ ಧಾವಿಸಿದ್ದ ಶಾಂತಮ್ಮನು, ಮಗುವನ್ನು ಎತ್ತಿಕೊಂಡು ಸಮೀಪದ ವೈದ್ಯರಲ್ಲಿಗೆ ಕರೆದೊಯ್ದಳು.
ಪುಟ್ಟಿಗೆ ತೊಡಿಸಿದ್ದ ಅಂಗಿಯ ಮೇಲೊಂದು ಸ್ವೆಟರ್,ತಲೆಗೊಂದು ಉಣ್ಣೆಯ ಟೋಪಿಯೊಂದಿಗೆ ಉಣ್ಣೆಯ ಶಾಲಿನಲ್ಲಿ ಸುತ್ತಿದ್ದ ಜ್ವರಪೀಡಿತ ಕಂದನನ್ನು ಕಂಡ ವೈದ್ಯರು ಸಿಟ್ಟಿಗೆದ್ದಿದ್ದರು. ಕ್ಷಣಮಾತ್ರದಲ್ಲಿ ಮಗುವಿನ ಬಟ್ಟೆಗಳನ್ನು ಕಿತ್ತೆಸೆದು,ವೇಗವಾಗಿ ತಿರುಗುವ ಫ್ಯಾನಿನ ಕೆಳಗೆ ಮಲಗಿಸಿ ತಣ್ಣೀರನ್ನು ಶರೀರದಾದ್ಯಂತ ಚಿಮುಕಿಸಿದ್ದರು. ಇದಕ್ಕೆ ಸ್ಪಂದಿಸಿದ ಪುಟ್ಟಿಯು ಒಂದೆರಡು ನಿಮಿಷಗಳ ಬಳಿಕ ಕಣ್ತೆರೆದಳು.
ಮಗುವಿನ ಶಾರೀರಿಕ ತಪಾಸಣೆಯನ್ನು ನಡೆಸಿದ ನಡೆಸಿದ ವೈದ್ಯರಿಗೆ ಪುಟ್ಟಿಯನ್ನು ಪೀಡಿಸಿದ್ದ ಸೆಳೆತಗಳಿಗೆ ಮಿತಿಮೀರಿದ ಜ್ವರವೇ  ಕಾರಣವೆಂದು ಖಚಿತವಾಗಿತ್ತು. ಅವಶ್ಯಕ ಔಷದಗಳನ್ನು ನೀಡಿದ ವೈದ್ಯರು ಇನ್ನುಮುಂದೆ ಮಗುವಿಗೆ ಜ್ವರಬಂದಲ್ಲಿ ಸ್ವೆಟರ್,ಟೋಪಿ ಮತ್ತು ಶಾಲುಗಳನ್ನು ಹೊದಿಸದೇ,ತಲೆ ಹಾಗೂ ಹಣೆಗೆ ತಣ್ಣೀರಿನ ಪಟ್ಟಿ ಅಥವಾ ಐಸ್ ಬ್ಯಾಗ್ ಇರಿಸಿ,ಫ್ಯಾನಿನ ಕೆಳಗೆ ಮಲಗಿಸಲು ಸೂಚಿಸಿದ್ದರು. ಜೊತೆಗೆ ಅಲ್ಪ ಪ್ರಮಾಣದ ಜ್ವರ ಬಾಧಿಸಿದರೂ ವಿಲಂಬಿಸದೇ,ಪಾರಾಸಿಟಮಾಲ್ ಔಷದವನ್ನು ಪ್ರತೀ ನಾಲ್ಕು ಘಂಟೆಗೊಮ್ಮೆ ನೀಡಿ ಅವಶ್ಯಕತೆ ಇದ್ದಲ್ಲಿ ವೈದ್ಯರ ಸಲಹೆ ಪಡೆಯುವಂತೆ ಎಚ್ಚರಿಕೆಯನ್ನು ನೀಡಿದ್ದರು.
ನಿಜ ಹೇಳಬೇಕಿದ್ದಲ್ಲಿ ಪುಟ್ಟಿಯನ್ನು ಬಾಧಿಸಿದ್ದ ಜ್ವರವು ಇನ್ನಷ್ಟು ಹೆಚ್ಚಲು ಪದ್ಮಕ್ಕನು ಆಕೆಗೆ ತೊಡಿಸಿದ್ದ ಉಣ್ಣೆಯ ಟೋಪಿ ಹಾಗೂ ಶಾಲು ಕಾರಣವಾಗಿತ್ತು. ತಮ್ಮ ಅಜ್ಞಾನದಿಂದಾಗಿ ಇಂತಹ ತಪ್ಪುಗಳನ್ನು ಎಸಗುವ ಬಹುತೇಕ ಮಾತಾಪಿತರು,ಇದನ್ನು ತಮ್ಮ ತಂದೆತಾಯಿ ಅಥವಾ ಅಜ್ಜ ಅಜ್ಜಿಯರಿಂದ ಕಲಿತಿರುತ್ತಾರೆ!.
ಫೆಬ್ರೈಲ್ ಕನ್ವಲ್ಶನ್ಸ್
ಅನೇಕ ವ್ಯಾಧಿಗಳ ಲಕ್ಷಣವಾಗಿರುವ ಜ್ವರವು ಪುಟ್ಟ ಮಕ್ಕಳನ್ನು ಬಾಧಿಸಿದ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯದ ಅಥವಾ ಅನ್ಯ ಕಾರಣಗಳಿಂದಾಗಿ ಉಲ್ಬಣಿಸಿದಾಗ ಉದ್ಭವಿಸಬಲ್ಲ ಅಪಸ್ಮಾರದಂತಹ ಸೆಳೆತಗಳನ್ನು ವೈದ್ಯಕೀಯ ಪರಿಭಾಷೆಯಲ್ಲಿ "ಫೆಬ್ರೈಲ್ ಕನ್ವಲ್ಶನ್ಸ್" ಅಥವಾ ಸೀಝರ್ಸ್ ಎಂದು ಕರೆಯುತ್ತಾರೆ. ಎಳೆಯ ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಈ ಸೆಳೆತಗಳಲ್ಲಿ ಶೇ. ೫೦ ರಷ್ಟು ಪ್ರಕರಣಗಳಿಗೆ ಅನಿಯಂತ್ರಿತ ಜ್ವರವೇ ಕಾರಣವಾಗಿರುತ್ತದೆ.
ನೂರಾರು ವರ್ಷಗಳ ಹಿಂದೆ ಇಂತಹ ಸಮಸ್ಯೆಗಳನ್ನು "ಬಾಲಗ್ರಹ"ದ ಪೀಡೆ ಎಂದೇ ಕರೆಯುತ್ತಿದ್ದರು. ಜೊತೆಗೆ ಇದನ್ನು ತಡೆಗಟ್ಟುವ ಹಾಗೂ ಗುಣಪಡಿಸುವ ಉದ್ದೇಶದಿಂದ "ಚಿಹ್ನೆಯ ಮಾತ್ರೆ"ಯನ್ನು ನೀಡುತ್ತಿದ್ದು,ಈ ಸಂಪ್ರದಾಯವು ಇಂದಿಗೂ ರೂಢಿಯಲ್ಲಿದೆ. ಇಷ್ಟುಮಾತ್ರವಲ್ಲ,ಹುಣ್ಣಿಮೆ,ಅಮಾವಾಸ್ಯೆ,ಮಂಗಳ ಹಾಗೂ ಆದಿತ್ಯವಾರಗಳಂದು ತಮ್ಮ ಕಂದನಿಗೆ ಈ ಮಾತ್ರೆಯನ್ನು ತಪ್ಪದೆ ನೀಡಿದಲ್ಲಿ,ಬಾಲಗ್ರಹ-ಕಫಬಾಧೆಯಂತಹ ಸಮಸ್ಯೆಗಳಿಂದ ರಕ್ಷಿಸುವುದು ಮತ್ತು ಗುಣಪಡಿಸುವುದೆಂದು ಅನೇಕರು ಇಂದಿಗೂ ನಂಬಿದ್ದಾರೆ!.
ಜನಸಾಮಾನ್ಯರು "ಫಿಟ್ಸ್"ಎಂದು ಕರೆಯುವ ಸೆಳೆತಗಳಿಗೆ ಅಪಸ್ಮಾರ ವ್ಯಾಧಿಯೊಂದೇ ಕಾರಣವಲ್ಲ. ಮೆದುಳು ಅಥವಾ ಮೆದುಳಿನ ಪರೆಯ ಉರಿಯೂತ,ಮೆದುಳಿನ ಆಘಾತ,ಅಪಘಾತಗಳ ಸಂದರ್ಭದಲ್ಲಿ ತಗಲಿರಬಹುದಾದ ಏಟು,ಧನುರ್ವಾತ,ಮೂತ್ರಪಿಂಡಗಳ ಉರಿಯೂತ,ರಕ್ತದಲ್ಲಿನ ಸಕ್ಕರೆಯ ಅಂಶವು ಹಠಾತ್ತಾಗಿ ಕುಸಿಯುವುದೇ ಮುಂತಾದ ಸಂದರ್ಭಗಳಲ್ಲೂ ಸೆಳೆತಗಳು ಉದ್ಭವಿಸುವ ಸಾಧ್ಯತೆಗಳಿವೆ.
ಆದರೆ ಜ್ವರಪೀಡಿತ ಮಕ್ಕಳಲ್ಲಿ ಅದರಲ್ಲೂ ೧೨ ರಿಂದ ೧೮ ತಿಂಗಳ ವಯೋಮಾನದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸೆಳೆತಗಳು, ಈ ಮಕ್ಕಳಿಗೆ ೫ ರಿಂದ ೬ ವರ್ಷ ವಯಸ್ಸಾಗುವಾಗ ಮಾಯವಾಗುತ್ತವೆ.ತೀವ್ರವಾದ  ಜ್ವರದಿಂದ ಬಳಲುವ ಶೇ. ೩ ರಿಂದ ೪ ರಷ್ಟು ಮಕ್ಕಳಲ್ಲಿ ಸೆಳೆತಗಳು ಕಂಡುಬರುತ್ತವೆ. ಜೊತೆಗೆ ಈ ಸಮಸ್ಯೆಯಿಂದ ಬಳಲುವ ಶೇ. ೫೦ ರಷ್ಟು ಮಕ್ಕಳಲ್ಲಿ ಇದು ಅನುವಂಶಿಕವಾಗಿ ಬಂದಿರುತ್ತದೆ. ಅರ್ಥಾತ್ ಈ ಮಕ್ಕಳ ತಂದೆ-ತಾಯಿಯರ ಕುಟುಂಬಗಳ ಸದಸ್ಯರಲ್ಲಿ ಇದ್ದಿರಬಹುದಾದ ಈ ತೊಂದರೆಯು, ಹಿರಿಯರ ವಂಶವಾಹಿನಿಗಳ ಮೂಲಕ ಮುಂದಿನ ಸಂತತಿಯನ್ನು ಬಾಧಿಸುತ್ತದೆ.
ಸಾಮಾನ್ಯವಾಗಿ ಹಠಾತ್ತಾಗಿ ಏರುವ ಜ್ವರವೇ ಸೆಳೆತಗಳಿಗೆ ಕಾರಣವೆನಿಸುವುದಾದರೂ, ಕೆಲಮಕ್ಕಳಲ್ಲಿ ಅಲ್ಪಪ್ರಮಾಣದ ಜ್ವರ ಬಾಧಿಸಿದಾಗಲೂ ಸೆಳೆತಗಳು ಉದ್ಭವಿಸುವುದು ಅಪರೂಪವೇನಲ್ಲ. ಇನ್ನು ಕೆಲವರಲ್ಲಿ ಸೆಳೆತಗಳು ಪ್ರತ್ಯಕ್ಷವಾದ ಬಳಿಕವೇ ಜ್ವರ ಕಾಣಿಸಿಕೊಳ್ಳುವುದು. ಇಂತಹ ಸಂದರ್ಭಗಳಲ್ಲಿ ತಮ್ಮ ಮಗುವಿಗೆ ಜ್ವರ ಬಂದಿರುವುದರ ಅರಿವು ಮಾತಾಪಿತರಿಗೆ ಇಲ್ಲದಿರುವುದು ಕೂಡಾ ಇದಕ್ಕೆ ಕಾರಣವೆನಿಸೀತು.
ಪುಟ್ಟ ಮಕ್ಕಳಿಗೆ ಜ್ವರ ಬಾಧಿಸಿದ ೬ ರಿಂದ ೮ ಗಂಟೆಗಳ ಅವಧಿಯಲ್ಲಿ ಹೆಚ್ಚಾಗಿ ಕಂಡುಬರುವ ಸೆಳೆತಗಳು,೨೪ ಗಂಟೆಗಳ ಬಳಿಕ ಬಾಧಿಸುವ ಸಾಧ್ಯತೆಗಳೇ ಕಡಿಮೆ. ಜ್ವರಪೀಡಿತ ಮಕ್ಕಳಲ್ಲಿ ಕಂಡುಬರುವ ಫಿಟ್ಸ್, ಮಗುವಿನ ದೇಹದ ಒಂದುಭಾಗದಲ್ಲಿ ಅಥವಾ ಸಂಪೂರ್ಣ ಶರೀರದಲ್ಲಿ ಕಾಣಿಸಿಕೊಳ್ಳಬಹುದು. ಜೊತೆಗೆ ಕೆಲವೇ ಸೆಕೆಂಡುಗಳಿಂದ ಹಿಡಿದು ಹತ್ತಾರು ನಿಮಿಷಗಳ ಕಾಲ ಬಾಧಿಸಬಲ್ಲ ಇಂತಹ ಸೆಳೆತಗಳನ್ನು "ಫೋಕಲ್ ಕನ್ವಲ್ಶನ್ಸ್"ಎನ್ನುತ್ತಾರೆ. ಆದರೆ ಅಪರೂಪದಲ್ಲಿ ಕಾಣಸಿಗುವ,೧೫ ನಿಮಿಷಗಳಿಗೂ ಅಧಿಕ ಸಮಯ ಬಾಧಿಸುವ ಸೆಳೆತವನ್ನು ನಿರ್ಲಕ್ಷಿಸದೇ, ಇದರ ಮೂಲವನ್ನು ಪತ್ತೆಹಚ್ಚಿ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಅನೇಕ ವೈರಸ್ ಗಳ ಸೋಂಕಿನಿಂದ ಉದ್ಭವಿಸಿ ಉಲ್ಬಣಿಸುವ ಜ್ವರದಲ್ಲೂ ದೀರ್ಘಾವಧಿ ಫಿಟ್ಸ್ ಕಂಡುಬರುತ್ತದೆ.
೧೫ ನಿಮಿಷಗಳಿಗಿಂತ ಅಧಿಕ ಸಮಯ ಫಿಟ್ಸ್ ಬಾಧಿಸುತ್ತಿದ್ದಲ್ಲಿ ಅಥವಾ ನಿಮ್ಮ ಕಂದನಿಗೆ ಪದೇಪದೇ ಈ ತೊಂದರೆ ಮರುಕಳಿಸುತ್ತಿದ್ದಲ್ಲಿ ಹಾಗೂ ನಿಮ್ಮ ಕುಟುಂಬದ ಹಿರಿಯರಿಗೆ ಅಪಸ್ಮಾರ ರೋಗವಿದ್ದಲ್ಲಿ ಮತ್ತು  ೯ ತಿಂಗಳಿಗೂ ಕಡಿಮೆ ವಯಸ್ಸಿನ ಹಸುಗೂಸಿಗೆ ಫಿಟ್ಸ್ ಬರುತ್ತಿದ್ದಲ್ಲಿ ಇ. ಇ. ಜಿ ಪರೀಕ್ಷೆಯನ್ನು ಮಾಡಿಸಬೇಕಾಗುವುದು. ಈ ಪರೀಕ್ಷೆಯಿಂದ ಮೆದುಳಿನ ನರಗಳಲ್ಲಿನ ವಿದ್ಯುನ್ಮಾನಗಳ ವ್ಯತ್ಯಯವನ್ನು ಸುಲಭವಾಗಿಯೇ ಪತ್ತೆಹಚ್ಚಬಹುದು. ಇದರೊಂದಿಗೆ ಮಕ್ಕಳ ಮೆದುಳಿನ ನರಗಳಲ್ಲಿನ ನ್ಯೂನತೆಗಳನ್ನು ಸಮರ್ಥಿಸಬಲ್ಲ ಪುರಾವೆಗಳನ್ನು ಕೂಡಾ ಅರಿತುಕೊಳ್ಳಬಹುದು. ಈ ಪರೀಕ್ಷೆಯ ಮೂಲಕ ಪತ್ತೆ ಹಚ್ಚಿದ ವಿಶಿಷ್ಟ ರೀತಿಯ ಅಸಮಾನತೆಗಳಿರುವ ಗಣನೀಯ ಪ್ರಮಾಣದ ಮಕ್ಕಳು ಮುಂದೆ ಅಪಸ್ಮಾರದಿಂದ ಬಳಲುತ್ತಾರೆ.
ಸಾಮಾನ್ಯವಾಗಿ ಜ್ವರದಿಂದ ಬರುವ ಸೆಳೆತಗಳು ಅಪರೂಪದಲ್ಲಿ ಬಾಧಿಸುತ್ತವೆ. ಇಂತಹ ಮಕ್ಕಳಲ್ಲಿ ಮುಂದೆ ಎಂದಾದರೂ ಜ್ವರ ಬಂದಲ್ಲಿ ಮತ್ತೆ ಮರುಕಳಿಸುವ ಸಾಧ್ಯತೆಗಳೂ ಇವೆ. ಅಧಿಕತಮ ಮಕ್ಕಳಲ್ಲಿ ಐದಾರು ವರ್ಷ ವಯಸ್ಸಿನಲ್ಲಿ ಮಾಯವಾಗುವ ಈ ಸಮಸ್ಯೆಯನ್ನು ನಿರ್ಲಕ್ಷಿಸುವುದು ಹಿತಕರವಲ್ಲ. ಇಂತಹ ಸೆಳೆತಗಳೊಂದಿಗೆ ಮೆದುಳಿನ ಉರಿಯೂತ ಅಥವಾ ಮೆದುಳಿಗೆ ಹಾನಿಯಾಗಿರುವುದು ಪತ್ತೆಯಾದಲ್ಲಿ ಹಾಗೂ ಇಂತಹ ಸಮಸ್ಯೆಗಳು ಇಲ್ಲದ ಮಕ್ಕಳಲ್ಲಿ ಪದೇಪದೇ ಮರುಕಳಿಸುವ ಸೆಳೆತಗಳ ಸಮಸ್ಯೆಯನ್ನು ತಜ್ಞವೈದ್ಯರ ಸಲಹೆ ಮತ್ತು ಚಿಕಿತ್ಸೆಯಿಂದ ನಿಯಂತ್ರಿಸಬಹುದಾಗಿದೆ.
ಮುಂಜಾಗರೂಕತೆ -ಚಿಕಿತ್ಸೆ
ಕೇವಲ ಜ್ವರ ಬಾಧಿಸಿದಾಗ ಮಾತ್ರ ವಿಸುವ ಸೆಳೆತಗಳ ಬಗ್ಗೆ ಅನಾವಶ್ಯಕವಾಗಿ ಗಾಬರಿಪಡದೇ,ಮಗುವಿಗೆ ತೊಡಿಸಿರಬಹುದಾದ ಬಿಗಿಯಾದ ಉಡುಪುಗಳನ್ನು ತೆಗೆದು ಉಸಿರಾಟಕ್ಕೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು. ಮಗುವನ್ನು ಅಂಗಾತ ಮಲಗಿಸದೇ ಒಂದು ಮಗ್ಗುಲಾಗಿ ಮಲಗಿಸಿ,ತಲೆಗೆ ಐಸ್ ಬ್ಯಾಗ್ ಅಥವಾ ತಣ್ಣೀರಿನ ಪಟ್ಟಿಯನ್ನು ಇರಿಸಬೇಕು. ಜ್ವರದ ತೀವ್ರತೆ ಹೆಚ್ಚಾಗಿದ್ದಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಅಥವಾ ಫ್ಯಾನಿನ ಗಾಳಿ ಬೀಳುವಲ್ಲಿ ಮಲಗಿಸಿ ಸಂಪೂರ್ಣ ಶರೀರವನ್ನು ಒದ್ದೆ ಬಟ್ಟೆಯಿಂದ ಒರೆಸುತ್ತಿರಬೇಕು.
ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಕ್ಕಳ ಬಾಯಿಯಲ್ಲಿ ಔಷದ ಅಥವಾ ನೀರನ್ನು ಹಾಕಬಾರದು. ಇಂತಹ ಸಂದರ್ಭದಲ್ಲಿ ಜ್ವರ ನಿವಾರಕ ಹಾಗೂ ಸೆಳೆತಗಳ ಶಮನಕ್ಕಾಗಿ ನೀಡಲೇ ಬೇಕಾಗುವ ಔಷದಗಳನ್ನು ಗುದದ್ವಾರದ ಮೂಲಕ ನೀಡಬಹುದಾದ "ಸಪೋಸಿಟರೀಸ್ "ಗಳ ರೂಪದಲ್ಲಿ ಬಳಸಬಹುದು. ಇತರ ಔಷದಗಳನ್ನು ಮಗುವಿಗೆ ಪ್ರಜ್ಞೆ ಮರುಕಳಿಸಿದ ಬಳಿಕವೇ ನೀಡಬೇಕು. ಈ ಉಪಕ್ರಮಗಳಿಂದಲೂ ಜ್ವರ ಮತ್ತು ಸೆಳೆತಗಳು ಶಮನಗೊಳ್ಳದೆ ಇದ್ದಲ್ಲಿ, ಸುಸಜ್ಜಿತ ಆಸ್ಪತ್ರೆಯಲ್ಲಿ ದಾಖಲಿಸಿ ತುರ್ತು ಚಿಕಿತ್ಸೆಯನ್ನು ನೀಡಬೇಕಾಗುವುದು. 
 
ಡಾ. ಸಿ . ನಿತ್ಯಾನಂದ ಪೈ,ಪುತ್ತೂರು  
 
 
 

No comments:

Post a Comment