Tuesday, June 25, 2013

ಪಡಿತರ ಚೀಟಿಗಳ ನವೀಕರಣ:ಇದಕ್ಕೇನು ಕಾರಣ?
ಇದೇ ವರ್ಷದ ಮಾರ್ಚ್ 11 ರಂದು ರಾಜ್ಯಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸುತ್ತೋಲೆಯೊಂದನ್ನು ಹೊರಡಿಸಿ,2010 ರ ಡಿಸೆಂಬರ್ 31 ಕ್ಕೆ ಮುನ್ನ ಪಡಿತರ ಚೀಟಿಗಳನ್ನು ಪಡೆದುಕೊಂಡಿದ್ದ ಕುಟುಂಬಗಳು ತಮ್ಮ ಚೀಟಿಗಳನ್ನು ಕಡ್ಡಾಯವಾಗಿ ನವೀಕರಿಸುವಂತೆ ಸೂಚಿಸಿತ್ತು. ಆದರೆ ಈ ಸೂಚನೆಗೆ ಕಾರಣ ಏನೆಂದು ತಿಳಿಸಿರಲಿಲ್ಲ. ರಾಜ್ಯದ ಪ್ರಜೆಗಳಿಗೆ ಸಾಕಷ್ಟು ಕಷ್ಟನಷ್ಟಗಳಿಗೆ ಕಾರಣವೆನಿಸಿರುವ ಈ ಸುತ್ತೋಲೆಯ ಹಿಂದಿನ ಕಾರಸ್ಥಾನದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಪಡಿತರ ಚೀಟಿಯ ಗುತ್ತಿಗೆ
ರಾಜ್ಯಸರಕಾರವು ಸಹಾಯಧನದ ಮೂಲಕ ತನ್ನ ಪ್ರಜೆಗಳಿಗೆ ಒದಗಿಸುವ ಆಹಾರಧಾನ್ಯಗಳನ್ನು ಪಡೆದುಕೊಳ್ಳಲು,ಪಡಿತರ ಚೀಟಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಅನೇಕ ವರ್ಷಗಳಿಂದ ಹಲವಾರು ಸಮಸ್ಯೆಗಳಿಗೆ ಕಾರಣವೆನಿಸಿದ್ದ ಈ ವ್ಯವಸ್ಥೆಯನ್ನು ಸರಿಪಡಿಸಲು,ರಾಜ್ಯಸರಕಾರವು ಡಿಜಿಟಲ್ ಪಡಿತರ ಚೀಟಿಗಳನ್ನು ಸಿದ್ಧಪಡಿಸಿ ವಿತರಿಸಲು ವಿನೂತನ ವ್ಯವಸ್ಥೆಯೊಂದನ್ನು ಜಾರಿಗೊಳಿಸಿತ್ತು.
ರಾಜ್ಯದ ಪ್ರತಿಯೊಂದು ಅರ್ಹ ಕುಟುಂಬಗಳ ಸದಸ್ಯರೆಲ್ಲರ ಭಾವಚಿತ್ರ,ಬೆರಳಚ್ಚು ಮತ್ತಿತರ ವಿವರಗಳನ್ನು ಸಂಗ್ರಹಿಸಿ,ಇವುಗಳ ಆರ್ಥಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಎ.ಪಿ. ಎಲ್,ಬಿ.ಪಿ.ಎಲ್ ಅಥವಾ ಅಂತ್ಯೋದಯ ಪಡಿತರ ಚೀಟಿಗಳನ್ನು ವಿತರಿಸುವ ಹೊಣೆಗಾರಿಕೆಯನ್ನು "ಕೊಮ್ಯಾಟ್ ಟೆಕ್ನಾಲಜೀಸ್" ಎನ್ನುವ ಬೆಂಗಳೂರಿನ ಸಂಸ್ಥೆಗೆ ನೀಡಲಾಗಿತ್ತು. ಖಾಸಗಿ-ಸರಕಾರೀ ಭಾಗವಹಿಸುವಿಕೆಯ ಈ ಯೋಜನೆಯಂತೆ,ಸಂಸ್ಥೆಯು ನಿಗದಿತ ಅನಧಿಯಲ್ಲಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪಡಿತರ ಚೀಟಿಗಳನ್ನು ವಿತರಿಸಬೇಕಿತ್ತು. ಇದಕ್ಕಾಗಿ ಸರಕಾರವು ಕೊಮ್ಯಾಟ್ ಸಂಸ್ಥೆಗೆ 54.28 ಕೋಟಿ ರೂ. ಗಳನ್ನೂ ಪಾವತಿಸಿತ್ತು.
ತನಗೆ ಅನಾಯಾಸವಾಗಿ ದೊರೆತಿದ್ದ ಈ ಅವಕಾಶವನ್ನು ದುರುಪಯೋಗಪಡಿಸಿಕೊಂಡಿದ್ದ ಸಂಸ್ಥೆಯು,ಲಕ್ಷಾಂತರ ಜನರಿಗೆ ಬೇನಾಮಿ,ನಕಲಿ ಹಾಗೂ ಒಂದೇ ಕುಟುಂಬಕ್ಕೆ 2 -3 ಮತ್ತು ಎ.ಪಿ.ಎಲ್ ವರ್ಗದವರಿಗೆ ಬಿ.ಪಿ. ಎಲ್ ಚೀಟಿಗಳನ್ನು ವಿತರಿಸಿತ್ತು.
2001 ರ ಜನಗಣತಿಯಂತೆ ರಾಜ್ಯದಲ್ಲಿನ ಒಟ್ಟು ಕುಟುಂಬಗಳ ಸಂಖ್ಯೆಯು 1.02 ಕೋಟಿಯಾಗಿದ್ದರೂ,ಕೊಮ್ಯಾಟ್ ವಿತರಿಸಿದ್ದ ಪಡಿತರ ಚೀಟಿಗಳ ಸಂಖ್ಯೆಯು 1.67 ಕೋಟಿಯಾಗಿತ್ತು!.
2011 ರ ಜನಗಣತಿಯಂತೆ ರಾಜ್ಯದಲ್ಲಿನ ಒಟ್ಟು ಕುಟುಂಬಗಳ ಸಂಖ್ಯೆ 1.31 ಕೋಟಿಯಾಗಿದೆ. ಆದರೆ 2006 ರಿಂದ ಕೊಮ್ಯಾಟ್ ವಿತರಿಸಿದ್ದ ಪಡಿತರ ಚೀಟಿಗಳಲ್ಲಿ 55 ಲಕ್ಷ ಚೀಟಿಗಳು ನಕಲಿ-ಬೆನಾಮಿಯಾಗಿವೆ!.
ನಿಜ ಹೇಳಬೇಕಿದ್ದಲ್ಲಿ ಅಂತ್ಯೋದಯ ಮತ್ತು ಬಿ.ಪಿ. ಎಲ್ ಚೀಟಿಗಳನ್ನು ಅರ್ಹ ಕುಟುಂಬಗಳಿಗೆ ಮಾತ್ರ ನೀಡುವ ಮೂಲಕ ಸರಕಾರದ ಸಹಾಯಧನದಿಂದ ಕಡಿಮೆ ಬೆಲೆಗೆ ಒದಗಿಸುವ ಪಡಿತರ ಧಾನ್ಯಗಳ ದುರುಪಯೋಗವನ್ನು ತಡೆಗಟ್ಟುವ ಉದ್ದೇಶದಿಂದ ಜಾರಿಗೊಂಡಿದ್ದ ಈ ಯೋಜನೆಯೇ ದುರುಪಯೋಗಗೊಂಡಿದ್ದು ವಿಪರ್ಯಾಸವೇ ಸರಿ.
2011 ರಲ್ಲಿ ಸರಕಾರವು ಪತ್ತೆಹಚ್ಚಿ ರದ್ದುಪದಿಸಿದ್ದ ನಕಲಿ ಪಡಿತರ ಚೀಟಿಗಳಲ್ಲಿ ಬಿ.ಪಿ. ಎಲ್ ಚೀಟಿಗಳ ಸಂಖ್ಯೆ 20 ಲಕ್ಷವಾಗಿದ್ದು,ಎ.ಪಿ.ಎಲ್ ಚೀಟಿಗಳ ಸಂಖ್ಯೆಯು 12 ಲಕ್ಷಗಳಾಗಿತ್ತು!.
ಸಂಸ್ಥೆಯಿಂದ ವಂಚನೆ
ಕೊಮ್ಯಾಟ್ ಟೆಕ್ನಾಲಜೀಸ್ ಸಂಸ್ಥೆಯು ಕೇವಲ ನಕಲಿ-ಬೇನಾಮಿ ಚೀಟಿಗಳನ್ನು ವಿತರಿಸಿದ್ದು ಮಾತ್ರವಲ್ಲ,ಅರ್ಹ ಕುಟುಂಬಗಳ ಸದಸ್ಯರಿಂದ ತಾನು ಸಂಗ್ರಹಿಸಿದ್ದ ಭಾವಚಿತ್ರ,ಕೈಬೆರಳಚ್ಚು ಮತ್ತಿತರ ವಿವರಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ನೀಡದೇ,ತನ್ನ ವಂಚನೆಯನ್ನು ಮುಚ್ಚಿಹಾಕಲು ಯತ್ನಿಸಿತ್ತು.
ವಿಶೇಷವೆಂದರೆ 2011 ರ ನವೆಂಬರ್ ತಿಂಗಳಿನಲ್ಲಿ ರಾಜ್ಯಸರಕಾರವು ಸಂಸ್ಥೆಗೆ 54.28 ಕೋಟಿ ರೂಪಾಯಿಗಳನ್ನು ಪಾವತಿಸಿದಂತೆಯೇ, ನಿಗದಿತ ಅವಧಿಗೆ ಮುನ್ನವೇ ತನ್ನ ಕೆಲಸಕಾರ್ಯಗಳನ್ನು ಮುಕ್ತಾಯಗೊಳಿಸಿ ಮಾಯವಾಗಿತ್ತು.
"ನಿರ್ಮಿಸು,ನಡೆಸು ಮತ್ತು ವರ್ಗಾಯಿಸು"(ಬಿಲ್ಡ್,ಆಪರೇಟ್ ಏಂಡ್ ಟ್ರಾನ್ಸ್ಫಫರ್) ಎನ್ನುವ ಈ ಗುತ್ತಿಗೆಯ ಷರತ್ತುಗಳನ್ನು ಉಲ್ಲಂಘಿಸಿದ್ದ ಈ ಸಂಸ್ಥೆಗೆ,ಸರಕಾರವು 6.47 ಕೋಟಿ ರೂ. ದಂಡವನ್ನು ವಿಧಿಸಿದೆ. ಆದರೆ ಕೊಮ್ಯಾಟ್ ವಿತರಿಸಿದ್ದ ನಕಲಿ-ಬೇನಾಮಿ ಚೀಟಿಗಳಿಗೆ ನೀಡಿದ್ದ ಪಡಿತರ ಧಾನ್ಯಗಳಿಂದಾಗಿ ಸರಕಾರದ ಬೊಕ್ಕಸಕ್ಕೆ ಸುಮಾರು 70 ಕೋಟಿ ರೂ. ಗಳಷ್ಟು ನಷ್ಟ ಸಂಭವಿಸಿದೆ.
ಭಾರತದ ಮಹಾಲೇಖಪಾಲರು(ಸಿ. ಎ. ಜಿ) ಗತವರ್ಷದಲ್ಲಿ ಕೊಮ್ಯಾಟ್ ಸಂಸ್ಥೆಯ ಅವ್ಯವಹಾರಗಳ ಬಗ್ಗೆ ನಡೆಸಿದ್ದ ತನಿಖೆಯ ವರದಿಯಲ್ಲಿ, ಈ ಗುತ್ತಿಗೆಯ ಲೋಪದೋಷಗಳು,ಶರತ್ತುಗಳ ಉಲ್ಲಂಘನೆಯೇ ಮುಂತಾದ ವಿಚಾರಗಳ ಬಗ್ಗೆ ವಿಸ್ತೃತವಾಗಿ ಉಲ್ಲೇಖಿಸಿದ್ದಾರೆ. ಈ ವರದಿಯ ಪ್ರತಿಯೊಂದನ್ನು ನೀಡುವಂತೆ ಮಾಹಿತಿ ಹಕ್ಕು ಕಾಯಿದೆಯಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಅರ್ಜಿಯನ್ನು ಸಲ್ಲಿಸಿದ್ದ ಕಾರ್ಯಕರ್ತರಿಗೆ,ಇಲಾಖೆಯು ಇಲ್ಲಸಲ್ಲದ ನೆಪವನ್ನು ಮುಂದೊಡ್ಡಿ ವರದಿಯ ಪ್ರತಿಯನ್ನು ನೀಡಲು ನಿರಾಕರಿಸಿತ್ತು. ಆದರೆ ಮಹಾಲೇಖಪಾಲರ ಕಚೇರಿಯು ವರದಿಯ ಯಥಾ ಪ್ರತಿಯನ್ನು ಕ್ಷಿಪ್ರಗತಿಯಲ್ಲಿ ನೀಡಿತ್ತು!.
ಜನರ ಜೇಬಿಗೆ ಕತ್ತರಿ
ಕೊಮ್ಯಾಟ್ ಸಂಸ್ಥೆಯು ರಾಜ್ಯದ ಜನರಿಂದ ಮತ್ತು ಸರಕಾರದಿಂದ ಕೋಟ್ಯಂತರ ರೂಪಾಯಿಗಳನ್ನು ಪಡೆದು ನೀಡಿದ್ದ ಪಡಿತರ ಚೀಟಿಗಳನ್ನು ಇದೀಗ ಮತ್ತೊಮ್ಮೆ ನವೀಕರಿಸಬೇಕಾಗಿ ಬಂದಿದೆ. ಜೊತೆಗೆ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸೇವಾಕೇಂದ್ರಗಳಿಗೆ ಹೋಗಬೇಕಾಗುತ್ತದೆ. ಇದರೊಂದಿಗೆ  ತಮ್ಮದಲ್ಲದ ತಪ್ಪಿಗೆ ಮತ್ತೊಮ್ಮೆ ಒಂದಿಷ್ಟು ಶುಲ್ಕವನ್ನೂ ತೆರಲೇಬೇಕಾಗುತ್ತದೆ. ಅರ್ಥಾತ್ ಕೊಮ್ಯಾಟ್ ಮಾಡಿರುವ  ಅವ್ಯವಹಾರ-ತಪ್ಪುಗಳಿಗೆ ಜನಸಾಮಾನ್ಯರು ಕಷ್ಟನಷ್ಟಗಳನ್ನು ಅನುಭವಿಸಬೇಕಾಗಿದೆ!.
ಕೊನೆಯ ಮಾತು
ಅದೇನೇ ಇರಲಿ,ಈ ಬಾರಿಯಾದರೂ ಅನರ್ಹ ಕುಟುಂಬಗಳು ಅಂತ್ಯೋದಯ ಅಥವಾ ಬಿ. ಪಿ. ಎಲ್ ಚೀಟಿಗಳನ್ನು ಪಡೆದುಕೊಳ್ಳುವುದನ್ನು ಸರಕಾರವು ತಡೆಗಟ್ಟಬೇಕಾಗಿದೆ. ಇದಕ್ಕೆ ತಪ್ಪಿದಲ್ಲಿ ರಾಜ್ಯಸರಕಾರವು ಈಗಾಗಲೇ ಘೋಷಿಸಿರುವಂತೆ ಬಡ ಕುಟುಂಬಗಳಿಗೆ ಕಿಲೋ ಒಂದರ ಒಂದು
 ರೂಪಾಯಿಯಂತೆ  ಅಕ್ಕಿಯನ್ನು ನೀಡುವ ಯೋಜನೆಯ ದುರುಪಯೋಗ ಸಂಭವಿಸಲಿದೆ. ಜೊತೆಗೆ ಸರಕಾರದ ಬೊಕ್ಕಸಕ್ಕೂ ಕೋಟ್ಯಂತರ ರೂಪಾಯಿಗಳ ನಷ್ಟಕ್ಕೆ ಕಾರಣವೆನಿಸಲಿದೆ.
ಇಂದಿನ ಸುದ್ದಿ
ಇಂದಿನ ಪತ್ರಿಕೆಯಲ್ಲಿ ರಾಜ್ಯದ ಸಚಿವರಾಗಿರುವ ದಿನೇಶ್ ಗುಂಡೂರಾವ್ ನೀಡಿರುವ ಹೇಳಿಕೆಯಂತೆ,ಹೊಸದಾಗಿ ಬಿ.ಪಿ. ಎಲ್  ಪಡಿತರ ಚೀಟಿಯನ್ನು ಪಡೆದುಕೊಳ್ಳಲು ಅರ್ಜಿಸಲ್ಲಿಸುವ ಕುಟುಂಬಗಳಿಂದ ಆದಾಯ ಪ್ರಮಾಣ ಪತ್ರ ಮತ್ತಿತರ ದಾಖಲೆಗಳನ್ನು ನೀಡುವಂತೆ ಸತಾಯಿಸದೇ ಇರುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅದೇ ರೀತಿಯಲ್ಲಿ ದ್ವಿಚಕ್ರ ವಾಹನ,ಟಿ. ವಿ ಮತ್ತು ತಾರಸಿಯ ಮನೆಯನ್ನು ಹೊಂದಿರುವುದು ಇತ್ಯಾದಿ ಮಾನದಂಡಗಳನ್ನು ಅನ್ವಯಿಸದೇ,ಅರ್ಜಿದಾರರಿಗೆ ಬಿ.ಪಿ. ಎಲ್ ಚೀಟಿಯನ್ನು ನೀಡುವಂತೆ ಸೂಚಿಸಲಾಗಿದೆ ಎನ್ನುವ ವರದಿಯು 25-06-13 ರ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಕಳೆದ ಲೋಕಸಭಾ  ಚುನಾವಣೆಗಳಿಗೆ ಮುನ್ನ  ಬಿ.ಜೆ. ಪಿ ಸರಕಾರವು ತಾವು ಬಿ.ಪಿ.ಎಲ್ ವರ್ಗಕ್ಕೆ ಸೇರಿದವರು ಎಂದು ಅಫಿದವಿತ್ ಸಲ್ಲಿಸಿದವರಿಗೆಲ್ಲಾ ಬಿ.ಪಿ.ಎಲ್ ಚೀಟಿಗಳನ್ನು ನೀಡಿದಂತೆಯೇ,ಕಾಂಗ್ರೆಸ್ ಸರಕಾರವೂ ಅನರ್ಹರಿಗೆ ಬಿ.ಪಿ. ಎಲ್ ಕಾರ್ಡುಗಳನ್ನು (ಕಾನೂನು ಬಾಹಿರವಾಗಿ)ನೀಡಲು ಹೊರಟಿರುವುದು ಎಷ್ಟು ಸರಿ?,ಎನ್ನುವ ಪ್ರಶ್ನೆಗೆ ಉತ್ತರ ದೊರೆಯುವ ಸಾಧ್ಯತೆಗಳಿಲ್ಲ.
ಒಂದೆಡೆ ಕೊಮ್ಯಾಟ್ ಸಂಸ್ಥೆಯು ಅನರ್ಹರಿಗೆ ನೀಡಿದ್ದ ಲಕ್ಷಾಂತರ ನಕಲಿ-ಬೇನಾಮಿ ಪಡಿತರ ಚೀಟಿಗಳನ್ನು ರದ್ದುಪಡಿಸುತ್ತಿದ್ದಲ್ಲಿ,ಮತ್ತೊಂದೆಡೆ ಅದೇ ಸರಕಾರವು ನಿಗದಿತ ಮಾನದಂಡಗಳನ್ನು ನಿರ್ಲಕ್ಷಿಸಿ ಅನರ್ಹರಿಗೆ ಬಿ.ಪಿ. ಎಲ್ ಚೀಟಿಗಳನ್ನು ವಿತರಿಸಲು ಆದೆಶಿಸಿರುವುದು ಸರ್ವಥಾ ಸಮರ್ಥನೀಯವಲ್ಲ.
ಇದೀಗ (ದಿ. 20-07-2013) ಪತ್ರಿಕೆಗಳಲ್ಲಿ ವರದಿಯಾಗಿರುವಂತೆ 2010 ಕ್ಕೆ ಮುನ್ನ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವವರು, ಇವುಗಳನ್ನು ಮತ್ತೆ ತಮ್ಮ ಬಯೋಮೆಟ್ರಿಕ್ಸ್ ನೀಡಿ ನವೀಕರಿಸಬೇಕಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರು ಹೇಳಿದ್ದಾರೆ. ಇದರಿಂದಾಗಿ ಕೊಮ್ಯಾಟ್ ಸಂಸ್ಥೆಯು ವಿತರಿಸಿದ್ದ ಸುಮಾರು 55 ಲಕ್ಷ ನಕಲಿ-ಬೇನಾಮಿ ಪಡಿತರ ಚೀಟಿಗಳು ಯಥಾಸ್ಥಿತಿಯಲ್ಲಿ ಉಳಿದುಕೊಳ್ಳಲಿವೆ. ಅಂತೆಯೇ ಇವುಗಳ ದುರುಪಯೋಗವು ಸರಕಾರದ ಬೊಕ್ಕಸಕ್ಕೆ ಕನ್ನವನ್ನು ಕೊರೆಯುವ ಸಾಧ್ಯತೆಗಳಿವೆ!. 
ಅದೇನೇ ಇರಲಿ,ರಾಜ್ಯದಲ್ಲಿ ಯಾವುದೇ ಪಕ್ಷದ ಸರಕಾರ ಬಂದರೂ,ಪಡಿತರ ಚೀಟಿಗಳ ಗೊಂದಲ-ಸಮಸ್ಯೆಗಳು ಇದೇ ರೀತಿಯಲ್ಲಿ ಮುಂದುವರೆಯಲಿವೆ.  
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು

No comments:

Post a Comment