Friday, June 14, 2013

          ಮತ್ತೆ ಮರುಕಳಿಸಿರುವ ಡೆಂಗೆ ಜ್ವರ
ವೈದ್ಯಕೀಯ ಶಬ್ದಕೋಶದಲ್ಲಿ "ಡೆಂಗೆ"ಎಂದು ನಮೂದಿಸಲ್ಪಟ್ಟಿರುವ ಜ್ವರವೊಂದನ್ನು ಅನೇಕ ರೀತಿಯಲ್ಲಿ ಮುದ್ರಿಸಿ,ಉಚ್ಚರಿಸುವುದನ್ನು 
ನೀವೂ ಕಂಡಿರಲೇಬೇಕು. ಸೊಳ್ಳೆಗಳಿಂದ ಹರಡುವ ಈ ವ್ಯಾಧಿಯನ್ನು ಯಾವ ರೀತಿಯಲ್ಲಿ ಉಚ್ಚರಿಸಿದರೂ,ಇದರ ರೋಗಲಕ್ಷಣಗಳು,
ಅಪಾಯಕಾರಿ ಅಂಶಗಳು ಮತ್ತು ಮಾರಕತೆಯ ಪ್ರಮಾಣವು ಕಡಿಮೆಯಾಗದು. ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿ ಇರಿಸುವ ಮೂಲಕ, ಸೊಳ್ಳೆಗಳ ಸಂತತಿಯನ್ನು ಸಂಪೂರ್ಣವಾಗಿ ನಾಶಗೊಳಿಸುವ ತನಕ,ಈ ವ್ಯಾಧಿಯ ಹಾವಳಿಯನ್ನು ನಿಯಂತ್ರಿಸುವುದು ಅಸಾಧ್ಯವೂ ಹೌದು.
ಸುಮಾರು ನಾಲ್ಕೈದು ವರ್ಷಗಳ ಹಿಂದೆ ನಮ್ಮ ರಾಜ್ಯಕ್ಕೆ ಹೊಂದಿಕೊಂಡಿರುವ ಕೇರಳದ ಗಡಿ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಾ,ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿದ್ದ ಚಿಕುನ್ ಗುನ್ಯಾ ವ್ಯಾಧಿಯೊಂದಿಗೆ ಡೆಂಗೆ ಜ್ವರದ ಹಲವಾರು ಪ್ರಕರಣಗಳು ಪತ್ತೆಯಾಗಿದ್ದವು. ಇವೆರಡೂ ವ್ಯಾಧಿಗಳು ಸೋಂಕು ಪೀಡಿತ ವ್ಯಕ್ತಿಯನ್ನು ಕಚ್ಚಿದ್ದ ಸೊಳ್ಳೆಗಳಿಂದ ಹರಡುವುದರಿಂದ, ಜೊತೆಯಾಗಿ ಕಾಣಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಈ ವ್ಯಾಧಿಗಳನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷಧಗಳನ್ನು ಇದುವರೆಗೆ ಪತ್ತೆಹಚ್ಚಿಲ್ಲದ ಕಾರಣದಿಂದಾಗಿ ಸಾಕಷ್ಟು ಸಂಖ್ಯೆಯ ರೋಗಿಗಳ ಮರಣಕ್ಕೂ ಕಾರಣವೆನಿಸಿವೆ. ಈ ಮಾರಕತೆಯು ಜನಸಾಮಾನ್ಯರ ಮನದಲ್ಲಿ ಭೀತಿಯನ್ನು ಹುಟ್ಟಿಸಲು ಯಶಸ್ವಿಯಾಗಿದೆ.
ಏನಿದು ಡೆಂಗೆ?
ಅರ್ಬೊ ವೈರಸ್ ಗಳ ವರ್ಗಕ್ಕೆ ಸೇರಿದ ಡೆಂಗೆ ರೋಗಕಾರಕ ವೈರಸ್ ಗಳು ಸಾಮಾನ್ಯವಾಗಿ ಎಡೆಸ್ ಇಜಿಪ್ತೈ ಜಾತಿಯ ಹೆಣ್ಣು ಸೊಳ್ಳೆಗಳಿಂದ ಹರಡುತ್ತದೆ. ಡೆಂಗೆ ಪೀಡಿತರನ್ನು ಕಚ್ಚಿದ ಈ ಸೊಳ್ಳೆಗಳು,೮ ರಿಂದ ೧೨ ದಿನಗಳಲ್ಲಿ ಡೆಂಗೆ ವೈರಸ್ ಗಳನ್ನು ಹರಡುವ ಸಾಮರ್ಥ್ಯವನ್ನು ಗಳಿಸುತ್ತವೆ. ವಿಶೇಷವೆಂದರೆ ಈ ಸೊಳ್ಳೆಗಳು ಸಾಯುವ ತನಕ ಈ ಸಾಮರ್ಥ್ಯವನ್ನು ಉಳಿಸಿಕೊಳ್ಳುತ್ತವೆ.
ಡೆಂಗೆ ವ್ಯಾಧಿಪೀಡಿತ ವ್ಯಕ್ತಿಗಳು ಈ ವೈರಸ್ ಗಳ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಗಳಿಸಿಕೊಂಡರೂ,ಇದು ಕೇವಲ ೯ ತಿಂಗಳ ಅವಧಿಗೆ ಸೀಮಿತವಾಗಿರುತ್ತದೆ. ಆದರೆ ಹಲವಾರುಬಾರಿ ಡೆಂಗೆ ಜ್ವರದಿಂದ ಪೀಡಿತರಾದ ವ್ಯಕ್ತಿಗಳು,ಶಾಶ್ವತವಾಗಿ ರೋಗಪ್ರತಿರೋಧಕ ಶಕ್ತಿಯನ್ನು ಗಳಿಸಿಕೊಳ್ಳುತ್ತಾರೆ.
ಡೆಂಗೆ ವ್ಯಾಧಿಪೀಡಿತರನ್ನು ಕಚ್ಚಿದ ಸೊಳ್ಳೆಗಳು ಆರೋಗ್ಯವಂತರನ್ನು ಕಚ್ಚಿದ ನಂತರ ಸುಮಾರು ೫-೬ ದಿನಗಳಲ್ಲಿ ರೋಗಲಕ್ಷಣಗಳು ಪ್ರಕಟವಾಗುತ್ತವೆ. ಕಾಯಿಲೆಯ ತೀವ್ರತೆ ಹೆಚ್ಚಿದ್ದಲ್ಲಿ ೭-೧೦ ದಿನಗಳು ಹಾಗೂ ಸೌಮ್ಯರೂಪದಲ್ಲಿ ಇದ್ದಲ್ಲಿ ೪-೬ ದಿನಗಳ ಕಾಲ ರೋಗಿಯನ್ನು ಪೀಡಿಸುತ್ತದೆ.
ರೋಗ ಲಕ್ಷಣಗಳು
ಡೆಂಗೆ ವ್ಯಾಧಿಪೀಡಿತರಲ್ಲಿ ಜ್ವರ,ಶರೀರದಾದ್ಯಂತ ನೋವು,ಅದರಲ್ಲೂ ಕಣ್ಣುಗಳ ಹಿಂಭಾಗ,ತಲೆ ಮತ್ತು ಅಸ್ಥಿಸಂಧಿಗಳಲ್ಲಿ ವಿಪರೀತ ನೋವು, ಕಣ್ಣುಗಳು ಕೆಂಪಾಗಿ ನೀರು ಒಸರುವುದು,ಬೆಳಕನ್ನು ನೋಡಲು ಆಗದಿರುವುದು,ವಾಕರಿಕೆ,ವಾಂತಿ,ಹಸಿವಿಲ್ಲದಿರುವುದು,ಎದ್ದೇಳಲು ಆಗದೇ ಹಾಸಿಗೆಯಲ್ಲೇ ಬಿದ್ದಿರುವುದು,ನಿದ್ರಾಹೀನತೆ ಮತ್ತು ಖಿನ್ನತೆಗಳಂತಹ ಲಕ್ಷಣಗಳು ಕಂಡುಬರುತ್ತವೆ.
ವ್ಯಾಧಿಯ ತೀವ್ರತೆ ಹೆಚ್ಚಿದ್ದಲ್ಲಿ ಏರುವ ಜ್ವರದ ಬಾಧೆಯು ೭ ರಿಂದ ೮ ದಿನಗಳ ಕಾಲ ಪೀಡಿಸುವುದು. ಕೆಲರೋಗಿಗಳಲ್ಲಿ ಮೂರು ದಿನಗಳ ಬಳಿಕ ಮಾಯವಾಗುವ ಜ್ವರ ಮತ್ತು ಅನ್ಯ ಲಕ್ಷಣಗಳು,ಒಂದೆರಡು ದಿನಗಳಲ್ಲಿ ಮತ್ತೆ ಮರುಕಳಿಸುವುದು ಅಪರೂಪವೇನಲ್ಲ. ಈ ಸಂದರ್ಭದಲ್ಲಿ ರೋಗಿಗಳ ಕೈಕಾಲುಗಳ ಮೇಲೆ ಬೆವರುಸಾಲೆಯಂತಹ ದದ್ದುಗಳು ಮೂಡಿ,ಶರೀರದ ಅನ್ಯಭಾಗಗಳಿಗೂ ಹರಡಬಹುದು. ಬಹುತೇಕ ರೋಗಿಗಳು ಜ್ವರಮುಕ್ತರಾದ ಬಳಿಕವೂ ಅತಿಯಾದ ಆಯಾಸ ಮತ್ತು ಬಳಲಿಕೆಗಳಿಂದ ಮಲಗಿಕೊಂಡೇ ಇರುವುದು ಈ ವ್ಯಾಧಿಯ ಪೀಡೆಗಳಲ್ಲಿ ಒಂದಾಗಿದೆ.
೧೯೫೬ ರಿಂದ ದಕ್ಷಿಣ ಆಫ್ರಿಕಾ ದೇಶದಲ್ಲಿ ಅನೇಕಬಾರಿ ಸಾಂಕ್ರಾಮಿಕವಾಗಿ ಹರಡಿದ್ದ ಡೆಂಗೆ ಜ್ವರದೊಂದಿಗೆ ಚಿಕುನ್ ಗುನ್ಯಾ ವೈರಸ್ ಗಳು ಸೇರಿಕೊಂಡಿದ್ದ ಪರಿಣಾಮವಾಗಿ ಉದ್ಭವಿಸಿದ್ದ ಸಂಕೀರ್ಣ ಸಮಸ್ಯೆಗಳಲ್ಲಿ ಆಘಾತ(shock) ಮತ್ತು ರಕ್ತಸ್ರಾವಗಳು ಪ್ರಮುಖವಾಗಿದ್ದವು. ಡೆಂಗೆ ಹೆಮೊರೇಜಿಕ್ ಫಿವರ್ ಎನ್ನುವ ಈ ಅಪಾಯಕಾರಿ ಸಮಸ್ಯೆಯ ಮಾರಕತೆಗೆ ಶೇ. ೧೦ ರಷ್ಟು ರೋಗಿಗಳು ಬಲಿಯಾಗಿದ್ದರು.
ಪತ್ತೆಹಚ್ಚುವುದು ಹೇಗೆ?
ಶಂಕಿತ ಜ್ವರ ಪೀಡಿತರ ರಕ್ತದ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸುವ ಮೂಲಕ ಡೆಂಗೆ ವೈರಸ್ ಗಳ ಇರುವಿಕೆಯನ್ನು ಪತ್ತೆಹಚ್ಚಬಹುದಾಗಿದೆ. 
ಚಿಕಿತ್ಸೆ  
ಡೆಂಗೆ ಜ್ವರವನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷಧಗಳನ್ನು ಯಾವುದೇ ಸಂಶೋಧಕರು ಇಂದಿನತನಕ ಪತ್ತೆಹಚ್ಚಿಲ್ಲ. ರೋಗಿಯನ್ನು ಬಾಧಿಸುವ ಲಕ್ಷಣಗಳಿಗೆ ಅನುಗುಣವಾಗಿ ವೈದ್ಯರು ನೀಡುವ ಔಷಧಗಳನ್ನು ಸೇವಿಸಿ,ಸಂಪೂರ್ಣ ವಿಶ್ರಾಂತಿಯನ್ನು ಪಡೆಯುವುದೇ ಇದಕ್ಕೆ ಏಕಮಾತ್ರ ಪರಿಹಾರವಾಗಿದೆ.
ರೋಗಪೀಡಿತರನ್ನು ಪ್ರತ್ಯೇಕವಾದ ಕೋಣೆಯಲ್ಲಿರಿಸಿ,ಸೊಳ್ಳೆಪರದೆಯನ್ನು ಕಡ್ಡಾಯವಾಗಿ ಬಳಸುವ ಮೂಲಕ ರೋಗವು ಇತರರಿಗೆ ಹರಡದಂತೆ ತಡೆಗಟ್ಟಬಹುದು. ಜೊತೆಗೆ ಸುತ್ತಮುತ್ತಲಿನ ಪರಿಸರದಲ್ಲಿ ಇರಬಹುದಾದ ಸೊಳ್ಳೆಗಳ ಸಂತಾನೋತ್ಪತ್ತಿ ಕೇಂದ್ರಗಳನ್ನು ನಾಶಗೊಳಿಸುವುದು,ನಿಶ್ಚಿತವಾಗಿಯೂ ಇದನ್ನು ತಡೆಗಟ್ಟುವ ಪರಿಣಾಮಕಾರಿ ವಿಧಾನವೂ ಹೌದು.
ಸೂಕ್ತ ಚಿಕಿತ್ಸೆ ಲಭ್ಯವಿಲ್ಲದ ಹಲವಾರು ಕಾಯಿಲೆಗಳಂತೆ,ಡೆಂಗೆ ಜ್ವರವನ್ನು ತಡೆಗಟ್ಟಬಲ್ಲ ಲಸಿಕೆಯೊಂದನ್ನು ಸಂಶೋಧಿಸಲು ವೈದ್ಯಕೀಯ ಸಂಶೋಧಕರು ಶ್ರಮಿಸುತ್ತಿದ್ದಾರೆ. ಈ ಪ್ರಯತ್ನದಲ್ಲಿ ಯಶಸ್ವಿಯಾದಲ್ಲಿ,ಡೆಂಗೆ ಜ್ವರವನ್ನು ಖಚಿತವಾಗಿ ನಿಯಂತ್ರಿಸುವುದು ಸುಲಭಸಾಧ್ಯ ಎನಿಸಲಿದೆ.
ವಿಶೇಷ ಸೂಚನೆ-ದಿನಾಂಕ 25-06-13 ರಂದು ಉದಯವಾಣಿ ಪತ್ರಿಕೆಯ ಸುದಿನ ಪುರವಣಿಯಲ್ಲಿ ಈ ಲೇಖನವನ್ನು ಪ್ರಕಟಿಸಿದ್ದಾರೆ. ಆದರೆ ನನ್ನ ಅರಿವಿಗೆ ತರದೇ ಒಂದಿಷ್ಟು ಬದಲಾವಣೆಯನ್ನೂ ಮಾಡಿದ್ದಾರೆ. ಅದರಂತೆ ವೈದ್ಯಕೀಯ ಶಬ್ದಕೋಶದಲ್ಲಿ "ಡೆಂಗೆ" ಎಂದು ನಮೂದಿಸಿರುವುದಾಗಿ ನಾನು ಬರೆದಿರುವುದನ್ನು ತಿದ್ದಿ,"ಡೆಂಗ್ಯೂ"ಎಂದು ನಮೂದಿಸಿರುವ ಎಂದು ಬದಲಾಯಿಸಿದ್ದಾರೆ. ಇದು ಖಂಡಿತವಾಗಿಯೂ ಸರಿಯಲ್ಲ. ಪ್ರಾಯಶಃ ಉದಯವಾಣಿ ಪತ್ರಿಕೆಯಲ್ಲಿ ಹಿಂದಿನಿಂದಲೂ "ಡೆಂಗ್ಯೂ" ಎನ್ನುವ ಶಬ್ದವನ್ನು ಮುದ್ರಿಸುತ್ತಿದ್ದು,ಇದಕ್ಕೂ ಮುನ್ನ ನಾನು ಕಳುಹಿಸಿದ್ದ ಲೇಖನಗಳಲ್ಲಿ ಬಳಸಿದ್ದ ಡೆಂಗೆ ಶಬ್ದವನ್ನು ಡೆಂಗ್ಯೂ ಎಂದು ಬದಲಾಯಿಸುತ್ತಿದ್ದರು. ತಾವು ಪ್ರಕಟಿಸುವ ಹೆಸರೇ ಸರಿ ಎಂದು ಸಮರ್ಥಿಸಲು,ಈ ಬಾರಿಯೂ ನಾನು ಬರೆದಿರುವ ಶಬ್ದವನ್ನು ಬದಲಾಯಿಸಲಾಗಿದೆ ಎನ್ನುವುದನ್ನು ನಿಮಗೆ  ಈ ಮೂಲಕ ತಿಳಿಸುತ್ತಿದ್ದೇನೆ.
ಡಾ.ಸಿ.ನಿತ್ಯಾನಂದ ಪೈ,ಪುತ್ತೂರು

No comments:

Post a Comment