Wednesday, July 24, 2013

Right to hearing act




                                                  ರಾಜಸ್ಥಾನದಲ್ಲಿ ಜಾರಿಗೆಬಂದಿದೆ 
                   ಸಾರ್ವಜನಿಕ ಆಲಿಕೆಯ ಹಕ್ಕು ಕಾಯಿದೆ 

ತಮ್ಮ ನ್ಯಾಯಸಮ್ಮತ ಕೆಲಸಕಾರ್ಯಗಳಿಗಾಗಿ ಸರಕಾರೀ ಕಚೇರಿಗಳಿಗೆ ತೆರಳಿದ ಜನರನ್ನು ಇಲ್ಲಸಲ್ಲದ ನೆಪಗಳನ್ನು ಮುಂದೊಡ್ಡಿ ಸತಾಯಿಸುವ ಸರಕಾರೀ ನೌಕರರು,ಇದೀಗ ತಮ್ಮ ನಡವಳಿಕೆ-ನಿರ್ಧಾರಗಳಿಗೆ ಕಾರಣಗಳೇನು ಎಂದು ಸಮಜಾಯಿಷಿ ನೀಡಬೇಕಿದೆ. ಏಕೆಂದರೆ ಇಂತಹ ಕಾನೂನೊಂದು ರಾಜಸ್ಥಾನದಲ್ಲಿ ಜಾರಿಗೆಬಂದಿದೆ. 
ಆರ್. ಟಿ. ಎಚ್ ಕಾಯಿದೆ 
ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯ ಸುದೀರ್ಘ ಹೋರಾಟದ ಫಲವಾಗಿ ದೇಶದ ಜನತೆಗೆ ಲಭಿಸಿರುವ " ಮಾಹಿತಿ ಪಡೆಯುವ ಹಕ್ಕು ಕಾಯಿದೆಯ ಉಗಮಸ್ಥಾನವೂ ಆಗಿರುವ ರಾಜಸ್ಥಾನದಲ್ಲಿ, ಪ್ರಜಾಪೀಡಕ ಸರಕಾರೀ ಅಧಿಕಾರಿಗಳು ಹಾಗೂ ಸಿಬಂದಿಗಳ ನಿರಂಕುಶ ವರ್ತನೆಗಳಿಗೆ ಕಡಿವಾಣವನ್ನು ತೊಡಿಸುವುದರೊಂದಿಗೆ, ಜನಸಾಮಾನ್ಯರ ಹಕ್ಕುಗಳಿಗೆ ಚ್ಯುತಿ ಉಂಟಾದ ಸಂದರ್ಭದಲ್ಲಿ ನೆರವಾಗುವ ಉದ್ದೇಶದಿಂದ " ರೈಟ್ ಟು ಹಿಯರಿಂಗ್" ಅರ್ಥಾತ್ ಸಾರ್ವಜನಿಕ ಆಲಿಕೆಯ ಹಕ್ಕು ಕಾಯಿದೆಯನ್ನು ಜಾರಿಗೆ ತರಲಾಗಿದೆ. ಈ ಕಾಯಿದೆಯಂತೆ ಸರಕಾರಿ ಕಚೇರಿಗಳ ಕೆಲಸಕಾರ್ಯಗಳ ವಿಚಾರದಲ್ಲಿ ಉದ್ಭವಿಸಿರುವ ಸಮಸ್ಯೆಗಳ ಬಗ್ಗೆ, ಜನಸಾಮಾನ್ಯರು ನಿಯೋಜಿತ ಅಧಿಕಾರಿಗೆ ಲಿಖಿತ ದೂರೊಂದನ್ನು ದಾಖಲಿಸಬೇಕಾಗುತ್ತದೆ. ಇದಕ್ಕೆ ಗುಲಾಬಿ ಬಣ್ಣದ ಸ್ವೀಕೃತಿಯನ್ನು ನೀಡಲಾಗುತ್ತದೆ. ದೂರಿನ ಯಥಾಪ್ರತಿಯೊಂದನ್ನು ಸಂಬಂಧಿತ ಅಧಿಕಾರಿಗೂ ನೀಡಲಾಗುತ್ತದೆ. 
ಪ್ರತೀ ಶುಕ್ರವಾರ ನಿಗದಿತ ಸಮಯದಲ್ಲಿ ಪಂಚಾಯತ್, ಬ್ಲಾಕ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಸರಕಾರೀ ಕಛೇರಿಗಳಲ್ಲಿ , ದೂರುಗಳಿಗೆ ಸಂಬಂಧಿಸಿದ ಅಧಿಕಾರಿಗಳು-ಸಿಬಂದಿಗಳು ಸಾರ್ವಜನಿಕರು-ದೂರುದಾರರ ಮುಂದೆ ಹಾಜರಾಗುತ್ತಾರೆ. ದಾಖಲಾಗಿರುವ ಪ್ರತಿಯೊಂದು ದೂರುಗಳಿಗೆ- ಸಮಸ್ಯೆಗಳಿಗೆ ಇವರು ಸೂಕ್ತ ಸಮಜಾಯಿಶಿ ನೀಡುವ ಮತ್ತು ಜನರ ಹಕ್ಕುಗಳಿಗೆ ಚ್ಯುತಿಯಾದಲ್ಲಿ ಇದನ್ನು ಪರಿಹರಿಸುವ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಆಲಿಕೆ ಹಕ್ಕು ಕಾಯಿದೆಯು ಯಶಸ್ವಿಯಾಗಿದೆ. 
ಸಮಜಾಯಿಶಿ- ಪರಿಹಾರ 
ಜನಸಾಮಾನ್ಯರನ್ನು ಕಾಡುವ ಸಮಸ್ಯೆಗಳಾಗಿರುವ ಪಡಿತರ ಚೀಟಿ ದೊರೆಯದ,ಪಡಿತರ ಸಾಮಾಗ್ರಿಗಳನ್ನು ನೀಡದ,ವೃದ್ಧಾಪ್ಯ ವೇತನವನ್ನು ನಿರಾಕರಿಸಿದ, ಉದ್ಯೋಗ ಖಾತರಿ ಯೋಜನೆಯಲ್ಲಿ ಸೇರಿಸದ, ಬಡವರಿಗೆ ದೊರೆಯುವ ಜಮೀನು- ಮನೆಗಳ ಫಲಾನುಭವಿಗಳ ಪಟ್ಟಿಯಿಂದ ಹೆಸರು ಕಣ್ಮರೆಯಾದ, ಜಮೀನಿನ ಪಹಣಿ ಪತ್ರವನ್ನು ನೀಡದಂತಹ ಹಲವಾರು ಕುಂದುಕೊರತೆಗಳು, ಆರ್. ಟಿ. ಎಚ್ ಕಾಯಿದೆಯನ್ವಯ ಪರಿಹಾರಗೊಂಡಿವೆ. ಏಕೆಂದರೆ ಸಾರ್ವಜನಿಕ ಆಲಿಕೆಯ ಸಂದರ್ಭದಲ್ಲಿ ಅಧಿಕಾರಿಗಳು ಜನರ ಕೆಲಸಕಾರ್ಯಗಳನ್ನು ಮಾಡದೆ ಇರಲು ಸೂಕ್ತ ಸಮಜಾಯಿಶಿಯನ್ನು ನೀಡುವುದರೊಂದಿಗೆ, ನ್ಯಾಯಸಮ್ಮತ ಹಕ್ಕುಗಳನ್ನು-ಬೇಡಿಕೆಗಳನ್ನು ಈಡೇರಿಸಬೇಕಾಗುತ್ತದೆ. 
ಈ ಕಾಯಿದೆಯಂತೆ ಜನಸಾಮಾನ್ಯರು ದೂರನ್ನು ದಾಖಲಿಸಿದ 15 ದಿನಗಳ ಒಳಗಾಗಿ ಸಾರ್ವಜನಿಕ ಆಲಿಕೆಯ ಅವಕಾಶವನ್ನು ನೀಡಬೇಕಾದ ಮತ್ತು ಆಲಿಕೆ ನಡೆದ 7 ದಿನಗಳಲ್ಲಿ ದೂರುದಾರರ ಸಮಸ್ಯೆಯನ್ನು ಪರಿಹರಿಸುವ ಲಿಖಿತ ಆದೇಶವನ್ನು ತಲುಪಿಸಬೇಕಾಗುವುದು.ಇದಕ್ಕೆ ತಪ್ಪಿದಲ್ಲಿ ತಪ್ಪಿತಸ್ಥ ಅಧಿಕಾರಿಗೆ ದಿನವೊಂದಕ್ಕೆ 250 ರೂ. ದಂಡವನ್ನು ವಿಧಿಸಬಹುದಾಗಿದೆ.  ಅರ್ಥಾತ್, ಜನರು ದೂರನ್ನು ದಾಖಲಿಸಿದ 21 ದಿನಗಳಲ್ಲಿ ಹೆಚ್ಚಿನ ಸಮಸ್ಯೆಗಳು ಪರಿಹಾರಗೊಳ್ಳುವುದೇ ಇದರ ವೈಶಿಷ್ಟ್ಯವಾಗಿದೆ. 
ರಾಜ್ ಸಮಂದ್ ನಲ್ಲಿ ಪ್ರಾಯೋಗಿಕವಾಗಿ ಜಾರಿಗೊಂಡಿದ್ದ ಈ ಕಾಯಿದೆಯು,ಇದೇ ವರ್ಷದ ಎಪ್ರಿಲ್ ತಿಂಗಳಿನಿಂದ ರಾಜಸ್ಥಾನ ರಾಜ್ಯಾದ್ಯಂತ ಜಾರಿಗೆ ಬಂದಿದೆ. ಆದರೆ ಇದರ ಅನುಷ್ಠಾನದಲ್ಲಿ ಕೆಲವೊಂದು ಅಡೆತಡೆಗಳೂ ಉದ್ಭವಿಸಿದ್ದು, ಇವೆಲ್ಲವನ್ನೂ ಸಮರ್ಪಕವಾಗಿ ಪರಿಹರಿಸಲಾಗುತ್ತಿದೆ. ತತ್ಪರಿಣಾಮವಾಗಿ ಸರಕಾರದ ಆಡಳಿತದಲ್ಲಿ ಪಾರದರ್ಶಕತೆಯೊಂದಿಗೆ, ಉತ್ತರದಾಯಿತ್ವವನ್ನು ಜಾರಿಗೊಳಿಸುವಲ್ಲಿ ಅತ್ಯಂತ ಉಪಯುಕ್ತವೆನಿಸಿದೆ. 
ಅನೇಕ ವರ್ಷಗಳಿಂದ ಸರಕಾರೀ ಅಧಿಕಾರಿಗಳ ದಬ್ಬಾಳಿಕೆ,ನಿರಂಕುಶ ವರ್ತನೆಗಳು, ಭ್ರಷ್ಟಾಚಾರ ಮತ್ತು ಜನರ ಹಕ್ಕುಗಳಿಗೆ ಚ್ಯುತಿಯನ್ನು ಉಂಟುಮಾಡುತ್ತಿದ್ದ ಸಂದರ್ಭಗಳಲ್ಲಿ ಅಸಹಾಯಕರಾಗಿದ್ದ ಪ್ರಜೆಗಳಿಗೆ, ಈ ಕಾಯಿದೆಯು ಪ್ರಬಲವಾದ ಅಸ್ತ್ರವಾಗಿ ಪರಿಣಮಿಸಿದೆ. ತತ್ಪರಿಣಾಮವಾಗಿ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಮಸ್ಯೆಗಳು ಮತ್ತು ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ರಾಜಸ್ಥಾನದಲ್ಲಿ ದೂರುಗಳ ಮಹಾಪೂರವೇ ಹರಿದುಬರುತ್ತಿದೆ!.  
ಸ್ವಯಂಸೇವಾ ಸಂಘಟನೆಗಳ ಕಾರ್ಯಕರ್ತರ ಅನಿಸಿಕೆಯಂತೆ ಸರಕಾರೀ ಯಂತ್ರದ ವಿವಿಧ ಹಂತಗಳಲ್ಲಿ ಉತ್ತರದಾಯಿತ್ವ ಇಲ್ಲದಿರುವುದು ಜನಸಾಮಾನ್ಯರನ್ನು ಕೆರಳಿಸಿದೆ. ಈ ಪ್ರಬಲ ಕಾಯಿದೆಯು ಸರಕಾರೀ ಅಧಿಕಾರಿಗಳಲ್ಲಿ ಉತ್ತರದಾಯಿತ್ವವನ್ನು ಖಾತರಿಗೊಳಿಸುವ ಆಂದೋಲನದ ರೂಪದಲ್ಲಿ ದೇಶಾದ್ಯಂತ ಜಾರಿಗೆ ಬರಬೇಕಿದೆ. 
ಈ ಕಾಯಿದೆಯನ್ನು ಜಾರಿಗೆ ತರುವಂತಹ ದಿಟ್ಟ ನಿರ್ಧಾರವನ್ನು ತಳೆದ ರಾಜಸ್ಥಾನ ಸರಕಾರದ ನಿರ್ಧಾರ ನಿಜಕ್ಕೂ ಅಭಿನಂದನೀಯ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ದೇಶದ ಪ್ರತಿಯೊಂದು ರಾಜ್ಯಗಳಲ್ಲಿ ಜಾರಿಗೊಳಿಸುವ ವಿಚಾರವನ್ನು ಇದೀಗ ಕೇಂದ್ರಸರಕಾರ ಮತ್ತು ಸಂಸತ್ತಿನ ಸದಸ್ಯರು ಪರಿಗಣಿಸಬೇಕಿದೆ. ತನ್ಮೂಲಕ ಸರಕಾರೀ ಅಧಿಕಾರಿಗಳ ಪ್ರಜಾಪೀಡನೆಯನ್ನು ಅಂತ್ಯಗೊಳಿಸಿ, ಉತ್ತರದಾಯಿತ್ವದ ಹೊಣೆಗಾರಿಕೆಯನ್ನು ಹೇರಬೇಕಾದ ಕಾಲ ಸನ್ನಿಹಿತವಾಗಿದೆ. 
ಬಿಹಾರ ಮತ್ತಿತರ ರಾಜ್ಯಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದ "ಸಕಾಲ" ಯೋಜನೆಯನ್ನು ರಾಜ್ಯದಲ್ಲೂ ಜಾರಿಗೆ ತಂದಿದ್ದ ಕರ್ನಾಟಕ ಸರಕಾರವು,ಇದೀಗ "ಸಾರ್ವಜನಿಕ ಆಲಿಕೆಯ ಹಕ್ಕು" ಕಾಯಿದೆಯನ್ನು ನಮ್ಮ ರಾಜ್ಯದಲ್ಲಿ ಅನುಷ್ಠಾನಗೊಳಿಸುವುದೇ?, ಎನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಷ್ಟೇ!. 
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 

No comments:

Post a Comment