Wednesday, February 21, 2018

Burning trash is dangerous................


          ತ್ಯಾಜ್ಯಗಳ ಮುಕ್ತ ದಹನ : ಅನಾರೋಗ್ಯಕ್ಕೆ ಆಹ್ವಾನ

ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಪ್ರತಿನಿತ್ಯ ಉತ್ಪನ್ನವಾಗುವ ಅಗಾಧ ಪ್ರಮಾಣದ ವೈವಿಧ್ಯಮಯ ತ್ಯಾಜ್ಯಗಳಲ್ಲಿ ಶೇ. 40 ರಷ್ಟನ್ನು ಅನಿಯಂತ್ರಿತ ಹಾಗೂ ಮುಕ್ತವಾಗಿ ದಹಿಸಲಾಗುತ್ತಿದೆ. ಈ ಅಪಾಯಕಾರಿ ಸಮಸ್ಯೆಗೆ ನಮ್ಮ ದೇಶವೂ ಅಪವಾದವೆನಿಸಿಲ್ಲ ಎಂದು ಇತ್ತೀಚಿಗೆ ನಡೆಸಿದ್ದ ಅಧ್ಯಯನದ ವರದಿಯಿಂದ ಬಹಿರಂಗಗೊಂಡಿದೆ. ಈ ರೀತಿಯಲ್ಲಿ ದಹಿಸಲ್ಪಡುವ ತ್ಯಾಜ್ಯಗಳು ಹೊರಸೂಸುವ ಪ್ರದೂಷಕಗಳ ಪ್ರಮಾಣವು, ಪರಿಸರದಲ್ಲಿ ಬಿಡುಗಡೆಯಾಗುತ್ತಿರುವ ಮಾನವಜನ್ಯ ಜಾಗತಿಕ ಪ್ರದೂಷಕಗಳ ಶೇ. 29 ರಷ್ಟಿದೆ!.

ತ್ಯಾಜ್ಯಗಳ ಅನಿಯಂತ್ರಿತ ಹಾಗೂ ಮುಕ್ತ ದಹನವನ್ನು “ ವಾಣಿಜ್ಯ ದಹನ ವ್ಯವಸ್ಥೆ “ ಯಂತೆ ( ಕಮರ್ಷಿಯಲ್ ಇನ್ಸಿನರೇಶನ್ ) ನಿಯಂತ್ರಿಸುವುದು ಅಸಾಧ್ಯವೆನಿಸುತ್ತದೆ. ಹಾಗೂ ಇದೇ ಕಾರಣದಿಂದಾಗಿ ಇದು ಮನುಕುಲಕ್ಕೆ ಮಾರಕವಾಗಿ ಪರಿಣಮಿಸುತ್ತದೆ. ಈ ಬಗ್ಗೆ ಅಧ್ಯಯನವನ್ನು ನಡೆಸಿದ್ದ ಅಮೆರಿಕ ಮೂಲದ ನ್ಯಾಷನಲ್ ಸೆಂಟರ್ ಫಾರ್ ಅಟ್ಮೋಸ್ಫೆರಿಕ್ ರಿಸರ್ಚ್ ಸಂಸ್ಥೆಯ ಹೇಳಿಕೆಯಂತೆ, ತ್ಯಾಜ್ಯಗಳ ಅನಿಯಂತ್ರಿತ ಹಾಗೂ ಮುಕ್ತ ದಹಿಸುವಿಕೆಯಿಂದ ಹೊರಸೂಸುವ ಪ್ರದೂಷಕಗಳ ಪ್ರಮಾಣವು, ಅಭಿವೃದ್ಧಿ ಹೊಂದುತ್ತಿರುವ ಹಾಗೂ ಅತ್ಯಧಿಕ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಾದ ಭಾರತ,ಚೀನಾ, ಬ್ರೆಜಿಲ್, ಮೆಕ್ಸಿಕೋ, ಪಾಕಿಸ್ತಾನ ಮತ್ತು ಟರ್ಕಿಗಳಲ್ಲಿ ಅಪಾಯಕಾರಿ ಮಟ್ಟವನ್ನು ತಲುಪಿದೆ. ಈ ಅನಾರೋಗ್ಯಕರ ಮತ್ತು ಅಪಾಯಕಾರಿ ಸಮಸ್ಯೆಯ ಬಗ್ಗೆ ಇಂದಿಷ್ಟು ಮಾಹಿತಿ ಇಲ್ಲಿದೆ.

ತ್ಯಾಜ್ಯಗಳ ದಹನ

ನಮ್ಮಲ್ಲಿ ದಿನನಿತ್ಯ ಉತ್ಪನ್ನವಾಗುವ ತ್ಯಾಜ್ಯಗಳಾದ ವೈವಿದ್ಯಮಯ ನಿರುಪಯುಕ್ತ ವಸ್ತುಗಳು, ಕಾಗದ, ಪ್ಲಾಸ್ಟಿಕ್ ಕೈಚೀಲ ಮತ್ತಿತರ ಉತ್ಪನ್ನಗಳು, ನಿಷ್ಪ್ರಯೋಜಕ ಬ್ಯಾಟರಿಗಳು, ಎಣ್ಣೆ, ಪೈಂಟ್, ವಿದ್ಯುತ್ ಬಲ್ಬ್ ಹಾಗೂ ಬಟ್ಟೆಬರೆಗಳೇ ಮುಂತಾದ ನಿಷ್ಪ್ರಯೋಜಕ  ವಸ್ತುಗಳನ್ನು ಬೆಂಕಿಹಚ್ಚಿ ಸುಡುವ ಮೂಲಕ ಸುಲಭದಲ್ಲೇ ವಿಲೇವಾರಿ ಮಾಡುವ ಹವ್ಯಾಸವಿದ್ದಲ್ಲಿ, ನಿಮ್ಮ ಹಾಗೂ ನಿಮ್ಮ ಮನೆಯೊಂದಿಗೆ, ನೆರೆಕರೆಯ ನಿವಾಸಿಗಳ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದೆಂದು ಪ್ರಾಯಶಃ ನಿಮಗೂ ತಿಳಿದಿರಲಾರದು. ಅದರಲ್ಲೂ ವಿಶೇಷವಾಗಿ ಹಸುಗೂಸುಗಳು, ಪುಟ್ಟ ಮಕ್ಕಳು, ವಯೋವೃದ್ಧರು ಮತ್ತು ಗರ್ಭಿಣಿಯರ ಪಾಲಿಗೆ  “ ಧೂಮಕೇತು”  ವಿನಂತೆ ಕಾಡಬಲ್ಲ ಈ ದಹನಕ್ರಿಯೆಯಿಂದ ಉದ್ಭವಿಸುವ ಅಪಾಯಕಾರಿ ಅನಿಲಗಳು, ಅನೇಕ ವಿಧದ ಗಂಭೀರ ಮತ್ತು ಮಾರಕ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುವುದು.

ಈ ಧೂಮದಲ್ಲೇನಿದೆ?

ನೀವು ತ್ಯಾಜ್ಯಗಳನ್ನು ಬೆಂಕಿಹಚ್ಚಿ ಸುಡುವಾಗ ಫಾರ್ಮಲ್ ಡಿಹೈಡ್, ಹೈಡ್ರೋಜನ್ ಕ್ಲೋರೈಡ್, ಸಲ್ಫರ್ ಡೈಆಕ್ಸೈಡ್ ಮತ್ತು ಫ್ಯೂರಾನ್ ಮತ್ತಿತರ ಅನಿಲಗಳು ಬಿಡುಗಡೆಯಾಗುತ್ತವೆ. ಇವುಗಳಲ್ಲಿ ಡೈಆಕ್ಸಿನ್ ಮತ್ತು ಫ್ಯೂರಾನ್ ಅನಿಲಗಳು ಕ್ಯಾನ್ಸರ್ ಕಾರಕಗಳೆಂದು ಗುರುತಿಸಲ್ಪಟ್ಟಿವೆ. ಸುಮಾರು ಎರಡರಿಂದ ನಲವತ್ತು ಮನೆಗಳಲ್ಲಿ ತ್ಯಾಜ್ಯಗಳನ್ನು ಮುಕ್ತವಾಗಿ ದಹಿಸುವಾಗ ಉತ್ಪನ್ನವಾಗುವ ಡೈಆಕ್ಸಿನ್ ಮತ್ತು ಫ್ಯೂರಾನ್ ಗಳ ಪ್ರಮಾಣವು, ಆಧುನಿಕ ಇನ್ಸಿನರೇಟರ್ ಒಂದರಲ್ಲಿ ವೈಜ್ಞಾನಿಕ ಹಾಗೂ ಸುರಕ್ಷಿತ ವಿಧಾನಗಳಿಂದ ಸುಮಾರು 200 ಟನ್ ತ್ಯಾಜ್ಯಗಳನ್ನು ದಹಿಸಿದಾಗ ಉತ್ಪನ್ನವಾಗುವ ಪ್ರಮಾಣದಷ್ಟೇ  ಆಗಿರುತ್ತದೆ!. ಏಕೆಂದರೆ ಇನ್ಸಿನರೇಟರ್ ಗಳಲ್ಲಿ ತ್ಯಾಜ್ಯಗಳನ್ನು ಗರಿಷ್ಠ ಉಷ್ಣತೆಯಲ್ಲಿ ದಹಿಸಲಾಗುತ್ತದೆ. ಆದರೆ ತ್ಯಾಜ್ಯಗಳನ್ನು ಮುಕ್ತವಾಗಿ ದಹಿಸುವಾಗ ಉಷ್ಣತೆಯ ಪ್ರಮಾಣವು ಸಾಕಷ್ಟು ಕಡಿಮೆಯಿರುತ್ತದೆ. ಇದೇ ಕಾರಣದಿಂದಾಗಿ ಇದು ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ.ನಿಜಸ್ಥಿತಿ ಹೀಗಿರುವಾಗ ದೇಶದ ಅನೇಕ ರಾಜ್ಯಗಳಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ರಾಶಿಬಿದ್ದಿರುವ ತ್ಯಾಜ್ಯಗಳಿಗೆ ಆಕಸ್ಮಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಬೆಂಕಿ ತಗಲಿದಾಗ ಉತ್ಪನ್ನವಾಗುವ ಪ್ರದೂಷಕಗಳ ಪ್ರಮಾಣ ಮತ್ತು ಇವುಗಳ ದುಷ್ಪರಿಣಾಮಗಳನ್ನು ಊಹಿಸುವುದು ಅಸಾಧ್ಯವೂ ಹೌದು.

ಕ್ಯಾನ್ಸರ್ ಕಾರಕ

ನಿರುಪಯುಕ್ತ ತ್ಯಾಜ್ಯಗಳನ್ನು ಮುಕ್ತವಾಗಿ ದಹಿಸುವಾಗ ಅತ್ಯಧಿಕ ಉಷ್ಣತೆಯಲ್ಲಿ ದಹನಕ್ರಿಯೆ ಜರಗದ ಕಾರಣದಿಂದಾಗಿ, ಇದರಿಂದ ಉತ್ಪನ್ನವಾಗುವ “ ಸೂಕ್ಷ್ಮಾತಿಸೂಕ್ಷ್ಮ ಕಣ “ ಗಳು ( ಪಾರ್ಟಿಕ್ಯುಲೇಟ್ ಮ್ಯಾಟರ್ ) ಮನುಷ್ಯನ ಶ್ವಾಸದೊಂದಿಗೆ ಸೇವಿಸಲು ಸೂಕ್ತವಲ್ಲದ ಹಾಗೂ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಅಮೆರಿಕದಲ್ಲಿ ನಡೆಸಿದ್ದ ಅಧ್ಯಯನವೊಂದರ ವರದಿಯಂತೆ, ಮನುಷ್ಯನ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸುವ ಹಾಗೂ ವಾಯುಮಾಲಿನ್ಯಕ್ಕೆ ಮೂಲವೆನಿಸುವ ವಿಷಕಾರಕ ದ್ರವ್ಯಗಳಲ್ಲಿ “ ಅಪರಿಪೂರ್ಣ ದಹನಕ್ರಿಯೆ “ ಯಿಂದ ಉದ್ಭವಿಸುವ ದ್ರವ್ಯ – ಅನಿಲಗಳು ಕ್ಯಾನ್ಸರ್ ಕಾರಕವೆಂದು ತಿಳಿದುಬಂದಿದೆ. ಇದಲ್ಲದೇ ಈ ಸೂಕ್ಷ್ಮಾತಿಸೂಕ್ಷ್ಮ ಕಣಗಳು  ಕ್ಯಾನ್ಸರ್, ದೀರ್ಘಕಾಲೀನ ಶ್ವಾಸಕೋಶಗಳ ಉರಿಯೂತಗಳಂತಹ ಸಮಸ್ಯೆಗಳೊಂದಿಗೆ ಕಣ್ಣು, ಕಿವಿ, ಮೊಗು ಮತ್ತು ಗಂಟಲು ಮುಂತಾದ ಅಂಗಗಳಿಗೆ ಸಂಬಂಧಿಸಿದ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತವೆ. ನಿಮ್ಮ ಶ್ವಾಸಕೋಶಗಳನ್ನು ಪ್ರವೇಶಿಸಿದ ತುಸು ದೊಡ್ಡ ಗಾತ್ರದ ಕಣಗಳು ನೀವು ಕೆಮ್ಮಿದಾಗ ಅಥವಾ ಶೀನಿದಾಗ ಹೊರಬೀಳಬಹುದಾದರೂ, ಸಣ್ಣ ಗಾತ್ರದ ಕಣಗಳು ಶರೀರದಲ್ಲೇ ಉಳಿದುಕೊಳ್ಳುವುದರಿಂದ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತವೆ.

ಇಷ್ಟು ಮಾತ್ರವಲ್ಲ, ಮುಕ್ತವಾಗಿ ತ್ಯಾಜ್ಯಗಳನ್ನು ಸುಡುವಾಗ ಉತ್ಪನ್ನವಾಗುವ ಅನಿಲ ಹಾಗೂ ಸೂಕ್ಷ್ಮಾತಿಸೂಕ್ಷ್ಮ ಕಣಗಳ ರೂಪದಲ್ಲಿ ಹೊರಬೀಳುವ ಅಪಾಯಕಾರಿ ದ್ರವ್ಯಗಳು ಬೂದಿಯಲ್ಲೂ ಉಳಿದುಕೊಳ್ಳುವುದರಿಂದ, ಈ ಬೂದಿಯೂ ಮನುಷ್ಯರ ಅನಾರೋಗ್ಯಕ್ಕೆ ಕಾರಣವೆನಿಸುತ್ತದೆ. ಈ ಬೂದಿಯಿಂದಾಗಿ ಸಮೀಪದಲ್ಲಿನ ಬಾವಿ ಅಥವಾ ಅನ್ಯ ಜಲಮೂಲಗಳು ಕಲುಷಿತಗೊಳ್ಳುವುದರಿಂದ, ಈ ನೀರನ್ನು ಕುಡಿದ ಮನುಷ್ಯರು ಮತ್ತು ಇವುಗಳಲ್ಲಿರುವ ಜಲಚರಗಳಿಗೆ  ಅಪಾಯಕಾರಿಯಾಗಿ ಪರಿಣಮಿಸುತ್ತದೆ.

ಕೊನೆಯ ಮಾತು

ನಿಮ್ಮ ವಸತಿ ಅಥವಾ ವಾಣಿಜ್ಯ ಕಟ್ಟಡಗಳಲ್ಲಿ ದಿನನಿತ್ಯ ಉತ್ಪನ್ನವಾಗುವ ತ್ಯಾಜ್ಯಗಳನ್ನು ಕ್ಷಣಮಾತ್ರದಲ್ಲಿ ಬೆಂಕಿಹಚ್ಚಿ ಸುಡಬಹುದಾದರೂ, ಇದರಿಂದ ಸಂಭವಿಸಬಲ್ಲ ಅನಾಹುತಗಳನ್ನು ತಡೆಗಟ್ಟುವುದು ಅಸಾಧ್ಯವೂ ಹೌದು. ಈ ಸಮಸ್ಯೆಯನ್ನು ಬಗೆಹರಿಸಲು ನೀವು ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ಸಾಧ್ಯವಿರುವಷ್ಟು ಕಡಿಮೆಮಾಡಿ. ಅದರಲ್ಲೂ ಪ್ಲಾಸ್ಟಿಕ್ ಕೈಚೀಲಗಳು ಮತ್ತು ಅನ್ಯ ಉತ್ಪನ್ನಗಳ ಬಳಕೆಯನ್ನೇ ನಿಲ್ಲಿಸಿ. ನಿರ್ದಿಷ್ಟ ಗುಣಮಟ್ಟದ ಸ್ವಚ್ಛ ಪ್ಲಾಸ್ಟಿಕ್ ಉತ್ಪನ್ನಗಳನ್ನು ಪುನರ್ ಬಳಕೆ, ಪುನರ್ ಆವರ್ತನ ಅಥವಾ ರಸ್ತೆಗಳ ನಿರ್ಮಾಣದಲ್ಲಿ ಬಳಸಬಹುದಾದರೂ, ನಮ್ಮ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಅವಶ್ಯಕ ಕಾನೂನುಗಳನ್ನು ಇಂದಿನ ತನಕ ರೂಪಿಸಿಲ್ಲ. ಪ್ಲಾಸ್ಟಿಕ್ ನಿಷೇಧ ರಾಜ್ಯದಲ್ಲಿ ಜಾರಿಗೆ ಬಂದಿದ್ದರೂ, ಮಾರುಕಟ್ಟೆಯಲ್ಲಿ ಇವುಗಳ ಮಾರಾಟ ಮತ್ತು ಬಳಕೆ ಇಂದಿಗೂ ನಿಂತಿಲ್ಲ. ಇವೆಲ್ಲಕ್ಕೂ ಮಿಗಿಲಾಗಿ ಜನಸಾಮಾನ್ಯರು ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ನಿಲ್ಲಿಸಲು ಸಿದ್ಧರಿಲ್ಲ. ಅಂತೆಯೇ ತಮ್ಮಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಸ್ಥಳೀಯ ಸಂಸ್ಥೆಗಳು ನಿಯೋಜಿಸಿರುವ ಕಾರ್ಯಕರ್ತರಿಗೆ (ನಿಗದಿತ ಮಾಸಿಕ ಶುಲ್ಕವನ್ನು ಉಳಿಸಲು ) ನೀಡುವುದಿಲ್ಲ.ತತ್ಪರಿಣಾಮವಾಗಿ ಪ್ಲಾಸ್ಟಿಕ್ ಮತ್ತು ಅನ್ಯವಿಧದ ತ್ಯಾಜ್ಯಗಳ ಸಮಸ್ಯೆ ಅನಿಯಂತ್ರಿತವಾಗಿ ವೃದ್ಧಿಸುತ್ತಿದೆ. ಈ ಸಮಸ್ಯೆಯನ್ನು ಸಮರೋಪಾದಿಯಲ್ಲಿ ನಿಯಂತ್ರಿಸದೇ ಇದ್ದಲ್ಲಿ, ನಮ್ಮ ಮುಂದಿನ ಸಂತತಿಯನ್ನು ಇದು ಶಾಪದೋಪಾದಿಯಲ್ಲಿ ಪೀಡಿಸಲಿದೆ.


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು



No comments:

Post a Comment