Tuesday, April 7, 2015

SAFE FOOD IS ALWAYS GOOD

ಸುರಕ್ಷಿತ ಆಹಾರ ಸೇವನೆ : ವಿಶ್ವ ಆರೋಗ್ಯ ಸಂಸ್ಥೆಯ ಅಭಿಯಾನ

ವರ್ಷಂಪ್ರತಿ ಎಪ್ರಿಲ್ ತಿಂಗಳಿನ ಏಳನೇ ತಾರೀಕಿನಂದು ಪ್ರಪಂಚದ ಪ್ರತಿಯೊಂದು ರಾಷ್ಟ್ರಗಳಲ್ಲಿ “ ವಿಶ್ವ ಆರೋಗ್ಯ ದಿನ “ ವನ್ನು ಆಚರಿಸಲಾಗುತ್ತದೆ. ಈ ಬಾರಿ ವಿಶ್ವ ಆರೋಗ್ಯ ಸಂಸ್ಥೆಯು ಸ್ವಚ್ಛತೆ ಮತ್ತು ಆರೋಗ್ಯಗಳ ಬಗ್ಗೆ ಅರಿವನ್ನು ಮೂಡಿಸುವ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಇದರಲ್ಲಿ ನಾವು ಸೇವಿಸುವ ವೈವಿಧ್ಯಮಯ ಅಹಾರಪದಾರ್ಥಗಳು,ಮೊಟ್ಟೆ, ಮೀನು, ಮಾಂಸ, ಸೊಪ್ಪು ತರಕಾರಿ ಮತ್ತು ಹಣ್ಣು ಹಂಪಲುಗಳ ಸೇವನೆಯ ವಿಚಾರದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ನಾವಿಂದು ಉಸಿರಾಡುವ ಗಾಳಿ, ಕುಡಿಯುವ ನೀರು ಮತ್ತು ಸೇವಿಸುವ ವೈವಿಧ್ಯಮಯ ಆಹಾರಪದಾರ್ಥಗಳು ಕಲುಷಿತವಾಗಿರುವುದು ನಿಮಗೂ ತಿಳಿದಿರಬೇಕು. ತತ್ಪರಿಣಾಮವಾಗಿ ಅನೇಕ ವಿಧದ ಆರೋಗ್ಯದ ಸಮಸ್ಯೆಗಳು ಉದ್ಭವಿಸುತ್ತಿರುವುದರ ವಿಚಾರವೂ ತಿಳಿದಿರಲೇಬೇಕು. ಪ್ರಸ್ತುತ ಕಲುಷಿತ ಹಾಗೂ ಅಸುರಕ್ಷಿತ ಆಹಾರ ಸೇವನೆಯ ಅಪಾಯಗಳ ಬಗ್ಗೆ ಮತ್ತು ಸುರಕ್ಷಿತ ಆಹಾರಪದಾರ್ಥಗಳ ಸೇವನೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯು ಅಭಿಯಾನವೊಂದನ್ನು ಆರಂಭಿಸಿದೆ. ತನ್ಮೂಲಕ ಇದರಿಂದ ಉದ್ಭವಿಸಬಲ್ಲ ಅನೇಕ ವಿಧದ “ ಆಹಾರ ಜನ್ಯ “ ಆರೋಗ್ಯದ ಸಮಸ್ಯೆಗಳನ್ನು ತಡೆಗಟ್ಟಲು ಉದ್ದೇಶಿಸಿದೆ. ಈ ಅಭಿಯಾನದಲ್ಲಿ ವಿಶೇಷವಾಗಿ ದೇಶದ ಕೃಷಿಕರು ಮತ್ತು ವಿದ್ಯಾವಂತರು ಕೈಜೋಡಿಸಿದಲ್ಲಿ, ಅಪೇಕ್ಷಿತ ಪರಿಣಾಮ ದೊರೆಯುವುದರಲ್ಲಿ ಸಂದೇಹವಿಲ್ಲ.

ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳು

ನಾವಿಂದು ಸೇವಿಸುತ್ತಿರುವ ಅಧಿಕತಮ ಆಹಾರಧಾನ್ಯಗಳು, ಹಣ್ಣುಹಂಪಲುಗಳು ಮತ್ತು ತರಕಾರಿಗಳನ್ನು ಬೆಳೆಯುವಾಗ ಗಣನೀಯ ಪ್ರಮಾಣದ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಬಳಸಲಾಗುತ್ತಿದೆ. ರೈತರು ತಾವು ಬೆಳೆಯುವ ಬೆಳೆಗಳ ಫಸಲು ಹೆಚ್ಚಲು ಮತ್ತು ಇವುಗಳನ್ನು ನಾಶಪಡಿಸಬಲ್ಲ ಕೀಟಗಳ ಹಾವಳಿಯನ್ನು ತಡೆಗಟ್ಟಲು ಹೇರಳವಾಗಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುತ್ತಾರೆ. ಇವುಗಳ ಅತಿಯಾದ ಹಾಗೂ ಅವೈಜ್ಞಾನಿಕ ಬಳಕೆಯಿಂದಾಗಿ, ಇಂತಹ ಆಹಾರಪದಾರ್ಥಗಳನ್ನು ಸೇವಿಸುವ ಜನರಲ್ಲಿ ಅನೇಕ ವಿಧದ ಆರೋಗ್ಯದ ಸಮಸ್ಯೆಗಳು ತಲೆದೋರುತ್ತವೆ. ಅದರಲ್ಲೂ ಅತ್ಯಂತ ಅಪಾಯಕಾರಿ ಎನಿಸಬಲ್ಲ ಕೆಲ ಕೀಟನಾಶಕಗಳ ಬಳಕೆಯಿಂದ ಮಾರಕ ಕ್ಯಾನ್ಸರ್ ನಂತಹ ಕಾಯಿಲೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗೇರು ಅಭಿವೃದ್ಧಿ ಮಂಡಳಿಗಳು ಕೆಲ ದಶಕಗಳ ಹಿಂದೆ ವೈಮಾನಿಕವಾಗಿ ಸಿಂಪಡಿಸಿದ್ದ ಎಂಡೋಸಲ್ಫಾನ್ ಕೀಟನಾಶಕದ ದೀರ್ಘಕಾಲೀನ ದುಷ್ಪರಿಣಾಮದಿಂದ ಬಳಲುತ್ತಿರುವ ಸಹಸ್ರಾರು ಜನರು, ಇಂದಿಗೂ ಇದಕ್ಕೆ ಜೀವಂತ ಸಾಕ್ಷಿಗಳಾಗಿದ್ದಾರೆ.

ಭಾರತದಲ್ಲಿ ಸುಮಾರು ೧೯೭ ವಿಧದ ಕೀಟನಾಶಕಗಳು ಲಭ್ಯವಿದ್ದು, ಇವುಗಳಲ್ಲಿ ಕನಿಷ್ಠ ೩೦ ವಿಧದ ಕೀಟನಾಶಕಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಆದರೆ ಇವುಗಳನ್ನು ಬಳಸುವ ಬಹುತೇಕ ರೈತಾಪಿ ಜನರಿಗೆ ಇವುಗಳ ವೈಜ್ಞಾನಿಕ ಬಳಕೆಯ ಬಗ್ಗೆ ಮಾಹಿತಿ ಇಲ್ಲದ ಕಾರಣದಿಂದಾಗಿ, ತಮಗೆ ತೋಚಿದಷ್ಟು ಪ್ರಮಾಣದಲ್ಲಿ ಬಳಸುತ್ತಾರೆ. ಇದಲ್ಲದೇ ಕೀಟನಾಶಕಗಳ ಜೊತೆಗೆ ನೀಡುವ ಸೂಚನಾ ಪತ್ರವನ್ನು ಓದದ ಮತ್ತು ಇವುಗಳನ್ನು ನೀರಿನಲ್ಲಿ ಬೆರೆಸಿ ಬೆಳೆಗಳಿಗೆ ಸಿಂಪಡಿಸುವ ವಿಧಾನದಲ್ಲಿ ತರಬೇತಿಯನ್ನೇ ಪಡೆದಿರದ ರೈತರು, ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ಕೊಂಡೊಯ್ಯುವ ೧೫ ದಿನಗಳಿಗೆ ಮುನ್ನ ಕೀಟನಾಶಕಗಳ ಸಿಂಪಡಣೆಯನ್ನು ನಿಲ್ಲಿಸಬೇಕೆನ್ನುವ ಸೂಚನೆಯನ್ನು ಪರಿಪಾಲಿಸುವುದೇ ಇಲ್ಲ.

ಪರಿಹಾರವೇನು ?

ಅಡುಗೆ ಕೆಲಸದಲ್ಲಿ ತೊಡಗುವ ಮುನ್ನ ನಿಮ್ಮ ಕೈಗಳು ಮತ್ತು  ಅಡುಗೆಮನೆಯ ಎಲ್ಲ ಪರಿಕರಗಳನ್ನು ಸ್ವಚ್ಛಗೊಳಿಸಿ. ಅಡುಗೆ ಮಾಡಿ ಮುಗಿಸಿದ ಬಳಿಕ ಇವೆಲ್ಲವನ್ನೂ ಮತ್ತೊಮ್ಮೆ ಸ್ವಚ್ಛಗೊಳಿಸಿರಿ.

ಸಾಧ್ಯವಿರುವಷ್ಟು ಸಾವಯವ ವಿಧಾನದಿಂದ ಬೆಳೆದ ತರಕಾರಿ, ಸೊಪ್ಪುಗಳು ಮತ್ತು ಹಣ್ಣು ಹಂಪಲುಗಳನ್ನೇ ಸೇವಿಸಿ. ನಿಮ್ಮ ಮನೆಯ ಸಮೀಪದಲ್ಲಿ ಅಥವಾ ತಾರಸಿಯಲ್ಲಿ ಪುಟ್ಟ ಕೈತೋಟವನ್ನು ನಿರ್ಮಿಸಿ, ನಿಮಗೆ ಬೇಕಾಗುವಷ್ಟು ತರಕಾರಿಗಳನ್ನು ಸಾವಯವ ಪದ್ದತಿಯಲ್ಲಿ ಬೆಳೆಯಿರಿ. ಇದರಿಂದಾಗಿ ನಿಮಗೆ ಸಾಕಷ್ಟು ವ್ಯಾಯಾಮದೊಂದಿಗೆ, ಉತ್ತಮ ಗುಣಮಟ್ಟದ ತರಕಾರಿಗಳು ಲಭ್ಯವಾಗುವುದರಿಂದ ಆರೋಗ್ಯದ ಮಟ್ಟವೂ ವೃದ್ಧಿಸುತ್ತದೆ. ಮನೆಯ ಸುತ್ತಮುತ್ತ ಖಾಲಿ ಜಾಗವಿದ್ದಲ್ಲಿ ಮಾವು, ಹಲಸು, ಚಿಕ್ಕು ಮತ್ತಿತರ ಹಣ್ಣಿನ ಮರಗಳನ್ನು ಬೆಳೆಸಿರಿ. ತಾಜಾ ಹಣ್ಣುಗಳೊಂದಿಗೆ ನಿಮಗೆ ಒಂದಿಷ್ಟು ನೆರಳನ್ನು ನೀಡಲು ಇಂತಹ ಮರಗಳು ಉಪಯುಕ್ತವೆನಿಸುತ್ತವೆ.

ನೀವು ದಿನನಿತ್ಯ ಬಳಸುವ ದವಸ – ಧಾನ್ಯಗಳು, ತರಕಾರಿಗಳು, ಹಸಿರುಸೊಪ್ಪುಗಳು ಮತ್ತು ಹಣ್ಣು ಹಂಪಲುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಿದಲ್ಲಿ, ಇವುಗಳನ್ನು  ಬಳಸುವ ಮುನ್ನ ಕನಿಷ್ಠ ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ತನ್ಮಧ್ಯೆ ಎರಡರಿಂದ ಮೂರುಬಾರಿ ಇವುಗಳನ್ನು ತೊಳೆದು, ನೀರನ್ನು ಬದಲಾಯಿಸಿ.

ಇದೇ ರೀತಿಯಲ್ಲಿ ಸ್ವಚ್ಛಗೊಳಿಸಿದ ದವಸ ಧಾನ್ಯಗಳನ್ನು ಬಿಸಿಲಿನಲ್ಲಿ ಒಣಗಿಸಿದ ಬಳಿಕವೇ ಗಿರಣಿಗಳಲ್ಲಿ ಹುಡಿಮಾಡಿ ಹಿಟ್ಟನ್ನು ಸಿದ್ಧಪಡಿಸಿ. ಬೇಯಿಸಬೇಕಾದ ದವಸ ಧಾನ್ಯಗಳನ್ನು ಮತ್ತು ತರಕಾರಿಗಳನ್ನು ಪ್ರೆಷರ್ ಕುಕರ್ ನಲ್ಲಿ ೧೫೦ ರಿಂದ ೧೯೦ ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಬೇಯಿಸಿರಿ. ಇದರಿಂದಾಗಿ ಇವುಗಳಲ್ಲಿರುವ ಪೌಷ್ಠಿಕಾಂಶಗಳು ಆಂಶಿಕವಾಗಿ ನಶಿಸಿದರೂ, ಇದರೊಂದಿಗೆ ಅಪಾಯಕಾರಿ ರಾಸಾಯನಿಕ ಕೀಟನಾಶಕಗಳು ನಾಶವಾಗುತ್ತವೆ.

ಅತ್ಯಧಿಕ ಪ್ರಮಾಣದ ಕೀಟನಾಶಕಗಳನ್ನು ಬಳಸಿ ಬೆಳೆಯುವ ದ್ರಾಕ್ಷಿ, ಸೇಬು, ಮಾವು ಇತ್ಯಾದಿ ಹಣ್ಣುಗಳನ್ನು ಹಾಗೂ ಸೊಪ್ಪು ತರಕಾರಿಗಳನ್ನು ಮೇಲಿನಂತೆಯೇ ನೀರಿನಲ್ಲಿ ಮುಳುಗಿಸಿಟ್ಟು, ಸ್ವಚ್ಛಗೊಳಿಸಿದ ಬಳಿಕ ಬಳಸಿ. ಸೊಪ್ಪುಗಳನ್ನು ಮತ್ತೊಮ್ಮೆ ಸ್ವಚ್ಛಗೊಳಿಸಿದ ಬಳಿಕ ಕೊಂಚ ಉಪ್ಪನ್ನು ಬೆರೆಸಿದ ನೀರಿನಲ್ಲಿ ಒಂದಿಷ್ಟು ಹೊತ್ತು ಮುಳುಗಿಸಿಟ್ಟ ನಂತರ ಬಳಸಿ.

ಹಸಿ ಆಹಾರ್ಪದರ್ಥಗಳನ್ನು ಮತ್ತು ಸೇವನೆಗೆ ಸಿದ್ಧವಾಗಿರುವ ( ರೆಡಿ ಟು ಈಟ್ ) ಆಹಾರಗಳನ್ನು ಬೆರೆಸಬೇಡಿ. ಅದರಲ್ಲೂ ಹಸಿ ತರಕಾರಿಗಳು, ಹಸಿ ಮಾಂಸ ಮತ್ತು ಮೀನುಗಳನ್ನು ಯಾವುದೇ ಸಂದರ್ಭದಲ್ಲೂ ಬೆರೆಸಬೇಡಿ.

ಮೊಟ್ಟೆ, ಮೀನು ಹಾಗೂ ಕೋಳಿ ಮತ್ತಿತರ ಮಾಂಸಗಳನ್ನು ಸಮರ್ಪಕವಾಗಿ ಬೇಯಿಸಿದ ಬಳಿಕವೇ ಸೇವಿಸಿರಿ. ಸೇವನೆಯ ಬಳಿಕ ಉಳಿದ ಆಹಾರಗಳನ್ನು ಮತ್ತೊಮ್ಮೆ ಕುದಿಸಿಡಿ.

ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿದ ಎರಡು ಗಂಟೆಗಳಲ್ಲಿ ಇವುಗಳನ್ನು ಫ್ರಿಜ್ ನಲ್ಲಿರಿಸುವುದು ಸುರಕ್ಷಿತವೆನಿಸುವುದು. ಆದರೆ ಫ್ರೀಜರ್ ನಲ್ಲಿ ಇರಿಸಿದ ಆಹಾರಗಳನ್ನು ಹೊರಗಿರಿಸಿ ಬಳಸುವುದಕ್ಕಿಂತಲೂ, ಈ ಪಾತ್ರೆಯನ್ನು ನೀರಿನಲ್ಲಿರಿಸಿ ಅಥವಾ ಮೈಕ್ರೋವೇವ್ ಬಳಸಿ ಡಿ ಫ್ರಾಸ್ಟ್ ಮಾಡುವುದು ಹಿತಕರವೆನಿಸುವುದು.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು



No comments:

Post a Comment