Friday, April 17, 2015





ಪುತ್ತೂರು:  ಜಾತ್ರೆಯ ಗದ್ದೆಯಲ್ಲಿ ತ್ಯಾಜ್ಯಗಳ ಸಾಮ್ರಾಜ್ಯ!

ಮುತ್ತು ಬೆಳೆಯುತ್ತಿದ್ದ ಊರೆಂದೇ ಖ್ಯಾತಿವೆತ್ತ ಪುತ್ತೂರಿನ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯುಈ ಬಾರಿ ಎಂದಿಗಿಂತಲೂ ವೈಭವೋಪೇತವಾಗಿ ಜರಗಿದೆ. ಅಂತೆಯೇ ಜಾತ್ರೆಯಂದು ಉಪಸ್ಥಿತರಿರುವ ಭಕ್ತಾದಿಗಳ ಸಂಖ್ಯೆಯೂ ವರ್ಷಂಪ್ರತಿ ಹೆಚ್ಚುತ್ತಿದೆ. ತಮ್ಮ ಆರಾಧ್ಯದೈವದ ಜಾತ್ರೆಯನ್ನು ಕಣ್ಣಾರೆ ಕಂಡುಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾಗುವ ಭಕ್ತರು, ದೇವಳದ ರಥಬೀದಿ ಮತ್ತು ಇದರ ಇಕ್ಕೆಲಗಳಲ್ಲಿ ಎಸೆದಿರುವ ತ್ಯಾಜ್ಯಗಳ ರಾಶಿಯನ್ನು ಕಂಡಾಗ ಮಾತ್ರ ದಿಗ್ಭ್ರಮೆಯಾಗುತ್ತದೆ.

ಸ್ವಚ್ಛತೆಗೆ ಆದ್ಯತೆ

ಸಾಮಾನ್ಯವಾಗಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಸೂತಕ, ಸ್ವಚ್ಛತೆ ಮತ್ತು ಮಡಿಮೈಲಿಗೆಗಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಲಾಗುತ್ತದೆ. ಸಾಮಾನ್ಯವಾಗಿ ದೇವಳಕ್ಕೆ ಭೇಟಿ ನೀಡುವ ಜನರು ಸ್ನಾನವನ್ನು ಮಾಡಿ ಶುಚಿರ್ಭೂತರಾಗಿ ತೆರಳುವುದು ಸಂಪ್ರದಾಯ. ಅದೇ ರೀತಿಯಲ್ಲಿ ದೇವಳದ ಆವರಣದಲ್ಲಿ ಸದ್ದುಗದ್ದಲಗಳನ್ನು ಮಾಡದೇಸ್ವಚ್ಛತೆಯನ್ನು ಕಾಪಾಡುವ ಹವ್ಯಾಸ ಭಕ್ತರಲ್ಲಿದೆ. ಆದರೆ ಸಹಸ್ರಾರು ಜನರು ಸೇರುವಂತಹ ಜಾತ್ರೆಯ ಸಂದರ್ಭದಲ್ಲಿ ಮಾತ್ರ ಇವೆಲ್ಲವನ್ನೂ ನಿರ್ಲಕ್ಷಿಸುವುದು ಮಾತ್ರ ನಂಬಲಸಾಧ್ಯವೆನಿಸುತ್ತದೆ.

ಗದ್ದೆಯಲ್ಲಿ ತ್ಯಾಜ್ಯಗಳು

ಪುತ್ತೂರು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುವ ಬ್ರಹ್ಮರಥೋತ್ಸವದಂದು ಅತ್ಯಧಿಕ ಸಂಖ್ಯೆಯ ಭಕ್ತರು ಕುಟುಂಬ ಸಹಿತ ಹಾಜರಾಗುತ್ತಾರೆ. ಸಂಜೆ ದೇವಳದ ಗದ್ದೆಗೆ ಹೋಗುವ ಮುನ್ನ ತಮಗೆ ಬೇಕಾಗುವ ಕುಡಿಯುವ ನೀರು, ಒಂದಿಷ್ಟು ಖಾದ್ಯಪದಾರ್ಥಗಳು ಮತ್ತು ಹಣ್ಣುಹಂಪಲುಗಳೊಂದಿಗೆ, ಹಳೆಯ ವೃತ್ತ ಪತ್ರಿಕೆಗಳನ್ನು ಕೊಂಡೊಯ್ಯುತ್ತಾರೆ. ಜಾತ್ರೆಯ ಗದ್ದೆಯಲಲ್ಲಿ ಸುತ್ತಾಡಿದ ಬಳಿಕ, ಆಯಕಟ್ಟಿನ ಜಾಗದಲ್ಲಿ ವೃತ್ತಪತ್ರಿಕೆಯನ್ನು ಹರಡಿ ಕುಳಿತುಕೊಳ್ಳುತ್ತಾರೆ. ತಾವು ತಂದಿರುವ ಖಾದ್ಯಪೇಯಗಳಲ್ಲದೇ, ಸ್ಥಳದಲ್ಲಿ ದೊರೆಯುವ ಇತರ ಖಾದ್ಯಪೇಯಗಳನ್ನು ಖರೀದಿಸಿ ಸೇವಿಸುತ್ತಾರೆ. ಬಳಿಕ ಉಳಿಯುವ ಸಕಲವಿಧದತ್ಯಾಜ್ಯಗಳನ್ನು ಅಲ್ಲೇ ಎಸೆದುಬಿಡುತ್ತಾರೆ!.

ಈ ತ್ಯಾಜ್ಯಗಳಲ್ಲಿ ವೃತ್ತಪತ್ರಿಕೆಗಳು, ಖಾದ್ಯಗಳನ್ನು ತರಲು ಬಳಸಿದ ಪ್ಲಾಸ್ಟಿಕ್ ಕೈಚೀಲಗಳು, ಪೇಯ ಅಥವಾ ಕುಡಿಯುವ ನೀರನ್ನು ತರಲು ಬಳಸಿದ ಪ್ಲಾಸ್ಟಿಕ್ ಬಾಟಲಿಗಳು, ಖಾಲಿ ಐಸ್ ಕ್ರೀಮ್ ಕಪ್ - ಚಮಚಗಳು, ತಂಪುಪಾನೀಯಗಳ ಪ್ಲಾಸ್ಟಿಕ್ ಲೋಟಗಳು, ಅನ್ಯ ಖಾದ್ಯಗಳ ತಟ್ಟೆಗಳು, ಚುರುಮುರಿ ಮತ್ತಿತರ ಖಾದ್ಯಗಳ ಖಾಲಿ ಲಕೋಟೆ ಇತ್ಯಾದಿ ತ್ಯಾಜ್ಯಗಳು ಪ್ರಮುಖವಾಗಿವೆ. ಆದರೆ ಈ ಬಾರಿ ಜಾತ್ರೆಯ ಗದ್ದೆಯಲ್ಲಿ ಎಸೆದಿರುವ ತ್ಯಾಜ್ಯಗಳಲ್ಲಿ ಖಾಲಿ ಪ್ಲಾಸ್ಟಿಕ್ ಬಾಟಲಿಗಳಿಗೆ ಸಿಂಹಪಾಲು ಸಲ್ಲುತ್ತದೆ.( ಜಾತ್ರೆಯ ಮರುದಿನ ಬೆಳಗ್ಗೆ ಸ್ಥಳವೀಕ್ಷಣೆ ಮಾಡಿದಾಗ, ಸಹಸ್ರಾರು ಬಾಟಲಿಗಳನ್ನು ಕಂಡು ನಮಗೂ ಅಚ್ಚರಿಯಾಗಿತ್ತು.)ತದನಂತರದ ಸ್ಥಾನ ವೃತ್ತಪತ್ರಿಕೆಗಳಿಗೆ ಸಲ್ಲುತ್ತದೆ. ಸಹಸ್ರಾರು ಜನರು ಎಸೆದಿರುವ ವೈವಿಧ್ಯಮಯ  ತ್ಯಾಜ್ಯಗಳ ಪ್ರಮಾಣವೂ ಅತಿಯಾಗಿದ್ದು, ಇದನ್ನು ಸಂಗ್ರಹಿಸಿವಾಹನಗಳಲ್ಲಿ ತುಂಬಿಸಿ, ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಿ ವಿಲೇವಾರಿ ಮಾಡಲುಪೌರಕಾರ್ಮಿಕರು ಹರಸಾಹಸವನ್ನೇ ನಡೆಸಬೇಕಾಗುತ್ತದೆ. ವಿಶೇಷವಾಗಿ ಎಪ್ರಿಲ್ ೧೮ ಮತ್ತು ೧೯ ರಂದು ಮುಂಜಾನೆ ಪೌರಕಾರ್ಮಿಕರ ದಂಡು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಅಂದು ಸಂಗ್ರಹವಾಗುವ ಬೃಹತ್ ಪ್ರಮಾಣದ ತ್ಯಾಜ್ಯಗಳ ರಾಶಿಗಳನ್ನು ಕಂಡಾಗ, ನಿಜಕ್ಕೂ ಗಾಬರಿಯಾಗುತ್ತದೆ.

ಕಡಿಮೆಮಾಡುವುದೆಂತು?

ನಿಜ ಹೇಳಬೇಕಿದ್ದಲ್ಲಿ ಈ ತ್ಯಾಜ್ಯಗಳ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬಲ್ಲ ಸುಲಭೋಪಾಯವೊಂದು ಇಂತಿದೆ. ಜಾತ್ರೆಯ ಗದ್ದೆಗೆ ಬರುವಾಗ ತಾವು ತಂದಿದ್ದ ಪ್ರತಿಯೊಂದು ವಸ್ತುಗಳನ್ನು ಹಾಕಿದ್ದ ಕೈಚೀಲದಲ್ಲೇತಾವು ಉತ್ಪಾದಿಸಿದ್ದ ತ್ಯಾಜ್ಯಗಳನ್ನು ತುಂಬಿಸಿ ಮನೆಗೆ ಕೊಂಡೊಯ್ಯುವುದೇ ಅತ್ಯಂತ ಸುಲಭದ ಮತ್ತು ಪರಿಣಾಮಕಾರಿ ವಿಧಾನವಾಗಿದೆ. ಆದರೆ ಇದನ್ನು ಮಾಡಬಲ್ಲ ಇಚ್ಛಾಶಕ್ತಿಯ ಕೊರತೆ ನಮ್ಮಲ್ಲಿರುವುದರಿಂದ, ಜಾತ್ರೆಯ ಗದ್ದೆಯು ಸಂಪೂರ್ಣವಾಗಿ ತ್ಯಾಜ್ಯಗಳಿಂದ ತುಂಬಿ, ತ್ಯಾಜ್ಯ ವಿಲೇವಾರಿ ಘಟಕದಂತೆ ಕಾಣುತ್ತದೆ. ಹಾಗೂ ಇದೇ ಕಾರಣದಿಂದಾಗಿ ದೇವಳದ ಸುತ್ತಮುತ್ತಲ ಪರಿಸರದ ನೈರ್ಮಲ್ಯಕ್ಕೆ ಧಕ್ಕೆಯಾಗುವುದರೊಂದಿಗೆ, ಅಯಾಚಿತ ಸಮಸ್ಯೆಗಳಿಗೂ ಕಾರಣವೆನಿಸುತ್ತಿದೆ. " ಮನಸ್ಸಿದ್ದಲ್ಲಿ ಮಾರ್ಗ " ಎನ್ನುವ ಮಾತಿನಂತೆ, ಮುಂದಿನ ವರ್ಷದ ಜಾತ್ರೆಯ ಸಂದರ್ಭದಲ್ಲಾದರೂ, ದೇವಳದ ಗದ್ದೆಯಲ್ಲಿ ತ್ಯಾಜ್ಯಗಳನ್ನು ಎಸೆಯುವ ಕೆಟ್ಟ ಹವ್ಯಾಸವನ್ನು ಭಕ್ತಾದಿಗಳು ತೊರೆದಲ್ಲಿ, ಶ್ರೀ ದೇವಳದ ಆವರಣವು ಸ್ವಚ್ಛ ಮತ್ತು ನಿರ್ಮಲವಾಗಿ ಕಂಗೊಳಿಸುವುದರಲ್ಲಿ  ಸಂದೇಹವಿಲ್ಲ.

ಕೊನೆಯ ಮಾತು

ಅದೇನೇ ಇರಲಿ, ದೇಶದ ಪ್ರಧಾನಿ ಮೋದಿಯವರು ಗತವರ್ಷದ ಅಕ್ಟೋಬರ್ ನಲ್ಲಿ ಉದ್ಘಾಟಿಸಿದ್ದ " ಸ್ವಚ್ಛ ಭಾರತ ಅಭಿಯಾನ " ದ ಅಂಗವಾಗಿ ಮತ್ತು ನಮ್ಮಸುತ್ತಮುತ್ತಲ ಪರಿಸರ ಹಾಗೂ ನಮ್ಮ ನಿಮ್ಮೆಲ್ಲರ  ಆರೋಗ್ಯದ ರಕ್ಷಣೆಯ ಸಲುವಾಗಿಯಾದರೂ, ನಾವಿಂದು ಅತಿಯಾಗಿ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆಮಾಡಬೇಕಾಗಿದೆ. ಅಂತೆಯೇ ಅಸ್ವಚ್ಛ ಭಾರತವು ನಿಸ್ಸಂದೇಹವಾಗಿಯೂ, ಅಸ್ವಸ್ಥ ಭಾರತವಾಗಿ ಬದಲಾಗುವುದು ಎನ್ನುವುದು ನೆನಪಿರಲಿ. ಅಂತಿಮವಾಗಿ ನಮ್ಮ ಮುಂದಿನ ಸಂತತಿಯ ಹಿತದೃಷ್ಟಿಯಿಂದ ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿರಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎನ್ನುವುದನ್ನು ಮರೆಯದಿರಿ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು.



No comments:

Post a Comment