Wednesday, April 22, 2015

ORGANISERS TO CLEAN THE VENUE !





ಸ್ವಚ್ಛತೆ - ತ್ಯಾಜ್ಯ ವಿಲೇವಾರಿ : ಸಂಘಟಕರ ಜವಾಬ್ದಾರಿ

ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಇದೀಗ ಹೊರಡಿಸಿರುವ ಆದೇಶದಂತೆಯಾವುದೇ ಸಾರ್ವಜನಿಕ ಕಾರ್ಯಕ್ರಮಗಳು ಜರಗಿದ  ಸ್ಥಳವನ್ನು ಸ್ವಚ್ಛಗೊಳಿಸುವ ಹಾಗೂ ಸಂಗ್ರಹಿತ ತ್ಯಾಜ್ಯಗಳನ್ನು ತ್ಯಾಜ್ಯವಿಲೇವಾರಿ ಘಟಕಗಳಿಗೆ ಸಾಗಿಸುವ ಜವಾಬ್ದಾರಿಯನ್ನು ಸಂಘಟಕರೇ ವಹಿಸಿಕೊಳ್ಳಬೇಕಾಗಿದೆ.ಸ್ವಚ್ಛ ಭಾರತ ಅಭಿಯಾನವನ್ನು ಇನ್ನಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಈ ಆದೇಶವನ್ನು ಹೊರಡಿಸಿದ್ದು, ಇದು ತತ್ ಕ್ಷಣದಿಂದಲೇ ಜಾರಿಗೆ ಬರಲಿದೆ.

ಸ್ಥಳೀಯ ಸಂಸ್ಥೆಗಳ ಹೊಣೆ

ಸ್ಥಳೀಯ ಸಂಸ್ಥೆಗಳು ಈ ಆದೇಶವನ್ನು ಅನುಷ್ಠಾನಗೊಳಿಸಬೇಕಾಗಿದ್ದುದೇಶದ ಪ್ರತಿಯೊಂದು ರಾಜ್ಯಗಳಿಗೂ ಈ ಬಗ್ಗೆ ಅವಶ್ಯಕ ಮಾಹಿತಿಯನ್ನು ಕಳುಹಿಸಲಾಗಿದೆ. ನೂತನ ನಿಯಮಗಳಂತೆ ಯಾವುದೇ ಕಾರ್ಯಕ್ರಮದ ಸಂಘಟಕರು ಸ್ವಚ್ಛತೆಯನ್ನು ಪರಿಪಾಲಿಸುವ ಬಗ್ಗೆ ಲಿಖಿತ ಒಪ್ಪಿಗೆಯನ್ನು ಮತ್ತು ನಿಗದಿತ ಭದ್ರತಾ ಮೊತ್ತವನ್ನು ಸ್ಥಳೀಯ ಸಂಸ್ಥೆಗಳಿಗೆ ಡಿಮಾಂಡ್ ಡ್ರಾಫ್ಟ್ ರೂಪದಲ್ಲಿ ನೀಡಲೇಬೇಕು. ಕಾರ್ಯಕ್ರಮದಲ್ಲಿ ೫೦೦ ಕ್ಕೂ ಕಡಿಮೆ ಜನರು ಸೇರುವುದಾದಲ್ಲಿ ೧೦,೦೦೦ ರೂ, ೫೦,೦೦೦ ಜನರು ಸೇರುವುದಾದಲ್ಲಿ ೫೦,೦೦೦ ಸಾವಿರ ರೂ, ಮತ್ತು ೫೦,೦೦೦ ಕ್ಕೂ ಅಧಿಕ ಜನರು ಸೇರುವುದಾದಲ್ಲಿ ೧,೦೦,೦೦೦ ರೂ, ಗಳನ್ನು ಭದ್ರತಾ ಮೊತ್ತದ ರೂಪದಲ್ಲಿ ನೀಡಬೇಕಾಗುವುದು.

ಸಂಘಟಕರ ಜವಾಬ್ದಾರಿ

 ಸಂಘಟಕರು  ಕಾರ್ಯಕ್ರಮ ಜರಗಿದ ಸ್ಥಳವನ್ನು ಸ್ವಚ್ಛಗೊಳಿಸಲು ವಿಫಲರಾದಲ್ಲಿ, ಸ್ಥಳೀಯ ಸಂಸ್ಥೆಗಳು ಭದ್ರತಾ ಮೊತ್ತವನ್ನು ಬಳಸಿ ಸ್ಥಳದಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಬೇಕಾಗುತ್ತದೆ. ಯಾವುದೇ ಕಾರ್ಯಕ್ರಮಗಳ ಸಂಘಟಕರು ಭದ್ರತಾ ಮೊತ್ತವನ್ನು ತೆರದಿದ್ದಲ್ಲಿ, ಕಾರ್ಯಕ್ರಮವನ್ನು ನಡೆಸಲು ಅನುಮತಿಯನ್ನು ನಿರಾಕರಿಸಲಾಗುತ್ತದೆ. ಅರ್ಥಾತ್, ಭದ್ರತಾ ಮೊತ್ತವನ್ನು ಪಾವತಿಸದೇ ಇದ್ದಲ್ಲಿ ಕಾರ್ಯಕ್ರಮಕ್ಕೆ ಅನುಮತಿಯನ್ನು ನೀಡುವಂತಿಲ್ಲ.

ಇಷ್ಟು ಮಾತ್ರವಲ್ಲ, ಕಾರ್ಯಕ್ರಮ ಜರಗುವ ಸ್ಥಳದಲ್ಲಿ ಅವಶ್ಯಕ ಸಂಖ್ಯೆಯ ಕಸದ ತೊಟ್ಟಿಗಳೊಂದಿಗೆ, ತ್ಯಾಜ್ಯ ಸಂಗ್ರಹಕ್ಕಾಗಿ ಅವಶ್ಯಕ ಸಂಖ್ಯೆಯ ಸಿಬಂದಿಗಳನ್ನೂ ಸಂಘಟಕರೇ ನಿಯೋಜಿಸಬೇಕಾಗುತ್ತದೆ. ಅಂತೆಯೇ ಕಾರ್ಯಕ್ರಮ ಮುಗಿದೊಡನೆ ಸಂಗ್ರಹಿತ ತ್ಯಾಜ್ಯಗಳನ್ನು ಸ್ಥಳೀಯ ಸಂಸ್ಥೆಗಳು ನಿಗದಿಸಿರುವ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸಾಗಿಸಬೇಕಾಗುವುದು.

ಇದರೊಂದಿಗೆ ಸಂಘಟಕರು ಕಾರ್ಯಕ್ರಮ ನಡೆದಿರುವ ಸ್ಥಳವನ್ನು ಮುಂದಿನ ೬ ಗಂಟೆಗಳಲ್ಲಿ ಸ್ವಚ್ಛಗೊಳಿಸಿಜಾಗದ ಮಾಲೀಕರಿಗೆ ಒಪ್ಪಿಸಬೇಕಾಗುವುದು. ಕಾರ್ಯಕ್ರಮದ ಸಂಘಟಕರು ಈ ನಿಯಮಗಳನ್ನು ಕ್ರಮಬದ್ಧವಾಗಿ ಪರಿಪಾಲಿಸಿದಲ್ಲಿ, ಅವರು ನೀಡಿದ್ದ ಭದ್ರತಾ ಮೊತ್ತವನ್ನು ಸ್ಥಳೀಯ ಸಂಸ್ಥೆಗಳು ೩ ದಿನಗಳ ಒಳಗಾಗಿ ಮರಳಿಸಬೇಕಾಗುತ್ತದೆ. ಸಂಘಟಕರು ಸಮರ್ಪಕವಾಗಿ ಸ್ಥಳವನ್ನು ಸ್ವಚ್ಚಗೊಳಿಸದೆ ಇದ್ದಲ್ಲಿ, ಸ್ಥಳೀಯ ಸಂಸ್ಥೆಗಳು ಭದ್ರತಾ ಮೊತ್ತವನ್ನು ಬಳಸಿ ಸ್ಥಳವನ್ನು ಸಮರ್ಪಕವಾಗಿ ಸ್ವಚ್ಛಗೊಳಿಸಿದ ಬಳಿಕ ಉಳಿದ ಹಣವನ್ನು ಮರಳಿಸಬೇಕಾಗುತ್ತದೆ.  

ಅನುಷ್ಠಾನದಲ್ಲಿ ಪಾರದರ್ಶಕತೆಯಿರಲಿ

ಪ್ರಸ್ತುತ ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಹೊರಡಿಸಿರುವ ನೂತನ ಆದೇಶವನ್ನು ಕಟ್ಟುನಿಟ್ಟಾಗಿ ಮತ್ತು ಪಾರದರ್ಶಕವಾಗಿ ಅನುಷ್ಠಾನಗೊಳಿಸಬೇಕಾದ ಹೊಣೆಗಾರಿಕೆ ಸ್ಥಳೀಯ ಸಂಸ್ಥೆಗಳ ಮೇಲಿದೆ. ಅದರಲ್ಲೂ ನಮ್ಮ ದೇಶದ ಪ್ರತಿಯೊಂದು ರಾಜ್ಯದಲ್ಲಿ ಜರಗುವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಪಕ್ಷಗಳ ಮತ್ತು ಧಾರ್ಮಿಕ ಕಾರ್ಯಕ್ರಮಗಳೇ ಹೆಚ್ಚಾಗಿವೆ. ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಸಂಘಟನೆಗಳು ಇಂತಹ ನಿಯಮಗಳನ್ನು ಪರಿಪಾಲಿಸುವುದಿಲ್ಲ. ಜೊತೆಗೆ ತಮ್ಮ ಪ್ರಭಾವವನ್ನು ಬಳಸುವ ಮೂಲಕ ಅಸ್ತಿತ್ವದಲ್ಲಿರುವ ನಿಯಮಗಳನ್ನು ಉಲ್ಲಂಘಿಸಲು ಹಿಂಜರಿಯುವುದೇ ಇಲ್ಲ. ತತ್ಪರಿಣಾಮವಾಗಿ " ಯಥಾ ರಾಜಾ, ತಥಾ ಪ್ರಜಾ " ಎನ್ನುವ ಮಾತಿನಂತೆದೇಶದ ಪ್ರಜೆಗಳೂ ಇಂತಹ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಆಶ್ಚರ್ಯವೇನಿಲ್ಲ. ಇದೇ ಕಾರಣದಿಂದಾಗಿ ನೂತನ ನಿಯಮವನ್ನು ನಿರ್ದಾಕ್ಷಿಣ್ಯವಾಗಿ ಅನುಷ್ಠಾನಗೊಳಿಸಲೇ ಬೇಕಾಗಿದೆ. ಇದಕ್ಕೆ ತಪ್ಪಿದಲ್ಲಿ ಸ್ವಚ್ಚ ಭಾರತ ಅಭಿಯಾನವು ನಿಸ್ಸಂದೇಹವಾಗಿ ವಿಫಲವಾಗಲಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು  



No comments:

Post a Comment