Wednesday, May 6, 2015

SWACH BHAARATH ABHIYAAN



-

       ಸ್ವಚ್ಛ ಭಾರತ ಅಭಿಯಾನ ಮುಗಿದುಹೋಯಿತು ನೇತಾರರ ಪ್ರಹಸನ !

ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಅಭಿಯಾನವನ್ನು ಸ್ವತಃ ಕಸವನ್ನು ಗುಡಿಸುವ ಮೂಲಕ ಉದ್ಘಾಟಿಸಿ ಏಳು ತಿಂಗಳುಗಳೇ ಕಳೆದಿವೆ. ಗತವರ್ಷದ ಗಾಂಧೀ ಜಯಂತಿಯಂದು ದೇಶದಾದ್ಯಂತ ಆರಂಭವಾಗಿದ್ದ ಈ ಅಭಿಯಾನವನ್ನು ವಿವಿಧ ರಾಜ್ಯಗಳಲ್ಲಿ ಉದ್ಘಾಟಿಸಿದ್ದ ರಾಜಕೀಯ ನೇತಾರರು, ಇದೀಗ ಕಣ್ಮರೆಯಾಗಿದ್ದಾರೆ. ಕೇವಲ ಪ್ರಚಾರಕ್ಕಾಗಿ ಪೊರಕೆಯನ್ನು ಹಿಡಿದು " ಕಸವನ್ನು ಗುಡಿಸಿದಂತೆ " ನಟಿಸಿದ್ದ ಈ ನೇತಾರರಿಗೆ, ಅಭಿಯಾನದ ಯಶಸ್ಸಿಗಿಂತಲೂ, ವೈಯುಕ್ತಿಕ ಪ್ರಚಾರವೇ ಪ್ರಮುಖವಾಗಿತ್ತು. ಅಂತೆಯೇ ಕಾರ್ಯಕ್ರಮವನ್ನು ಉದ್ಘಾಟಿಸುವ ಸಂದರ್ಭದಲ್ಲಿ ಘೋಷಿಸಿದ್ದಂತೆ ಇನ್ನು ಮುಂದೆ ವಾರದಲ್ಲೊಮ್ಮೆ ಅಥವಾ ತಿಂಗಳಲ್ಲಿ ಒಂದುಬಾರಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಾವು ಸ್ವತಃ ಭಾಗಿಯಾಗುವ ಮೂಲಕ ಸ್ವಚ್ಛ ಭಾರತ ಅಭಿಯಾನವನ್ನು ಯಶಸ್ವಿಗೊಳಿಸಲು ಶ್ರಮಿಸುವುದಾಗಿ ಘೋಷಿಸಿದ್ದ ನೇತಾರರೆಲ್ಲರೂ, ಕಳೆದ ಹಲವಾರು ತಿಂಗಳುಗಳಿಂದ ಕಣ್ಮರೆಯಾಗಿದ್ದಾರೆ. ಇದರೊಂದಿಗೆ ಅಭಿಯಾನಕ್ಕೆ ಬೆಂಬಲವನ್ನು ಸೂಚಿಸಿದ್ದ ಅನೇಕ ಸಂಘಟನೆಗಳು ಮತ್ತು ವ್ಯಕ್ತಿಗಳೂ ಇದನ್ನು ನಿರ್ಲಕ್ಷಿಸಿದ್ದಾರೆ. ಅಭಿಯಾನ ಪ್ರಾರಂಭವಾದ ಬಳಿಕ ಸುಮಾರು ಒಂದೆರಡು ತಿಂಗಳುಗಳ ಕಾಲ ಮಾಧ್ಯಮಗಳಲ್ಲಿ ಪದೇಪದೇ ಪ್ರಕಟವಾಗುತ್ತಿದ್ದ ಸ್ವಚ್ಛತಾ ಕಾರ್ಯಕ್ರಮಗಳ ಫೋಟೋಗಳು ಮತ್ತು ವಿಡಿಯೋಗಳೂ ಕಣ್ಮರೆಯಾಗಿವೆ. ಭಾರತೀಯರ " ಆರಂಭಶೂರತ್ವ "  ಹಾಗೂ ಪ್ರಚಾರಪ್ರಿಯತೆಗೆ ಇದೊಂದು ಉತ್ತಮ ಉದಾಹರಣೆಯೂ ಹೌದು!.

ಪ್ರಸ್ತುತ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರು, ಬೆರಳೆಣಿಕೆಯಷ್ಟು ಸ್ವಯಂ ಸೇವಾ ಸಂಘಟನೆಗಳು ಮತ್ತು ವೈಯುಕ್ತಿಕವಾಗಿ ಹಾಗೂ ಸ್ವಯಂಪ್ರೇರಿತವಾಗಿ ಸ್ವಚ್ಛತಾ ಅಭಿಯಾನದಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳನ್ನು ಹೊರತುಪಡಿಸಿ, ಯಾರೊಬ್ಬರೂ ಇದರಲ್ಲಿ ಭಾಗವಹಿಸುತ್ತಿಲ್ಲ. ಪರಿಸ್ಥಿತಿ ಇದೇ ರೀತಿಯಲ್ಲಿ ಮುಂದುವರೆದಲ್ಲಿ, ಮುಂದಿನ ಕೆಲವೇ ತಿಂಗಳುಗಳಲ್ಲಿ ಸ್ವಚ್ಛ ಭಾರತ ಅಭಿಯಾನವು ಸ್ಥಗಿತಗೊಳ್ಳಲಿದೆ.

ಪ್ರಚಾರದ  ಪ್ರಹಸನ

ಸ್ವಚ್ಛ ಭಾರತ ಅಭಿಯಾನಕ್ಕೆ ಮುನ್ನ ತಮ್ಮ ಜೀವಿತಾವಧಿಯಲ್ಲೇ ಪೊರಕೆಯನ್ನು ಕೈಯ್ಯಲ್ಲಿ ಹಿಡಿದು ಕಸವನ್ನು ಗುಡಿಸಿರದ ಕೆಲ ರಾಜಕೀಯ ನೇತಾರರು, ಕೇವಲ ಮಾಧ್ಯಮಗಳ ಮೂಲಕ ಪುಕ್ಕಟೆ ಪ್ರಚಾರವನ್ನು ಗಳಿಸುವ ಸಲುವಾಗಿಯೇ ಇದರಲ್ಲಿ ಭಾಗವಹಿಸಿದ್ದುದು ಸುಳ್ಳೇನಲ್ಲ. ಈ ಸಂದರ್ಭದಲ್ಲಿ ಕೆಲವರು ಮೂಗುಬಾಯಿಗಳನ್ನು ಮುಚ್ಚುವ ಗವುಸು ಹಾಗೂ ಕೈಗವುಸುಗಳನ್ನು ಧರಿಸಿದ್ದಲ್ಲಿ, ಇನ್ನು ಕೆಲವರು ಘೋಷಣೆಗಳನ್ನು ಮುದ್ರಿಸಿದ್ದ ಟೋಪಿಗಳುಟೀ ಶರ್ಟ್ ಮತ್ತು ಬಣ್ಣಬಣ್ಣದ ಬ್ಯಾಡ್ಜ್ ಧರಿಸಿ ಪೊರಕೆಯನ್ನು ಹಿಡಿದಿದ್ದರು. ಮಾಧ್ಯಮದ ಪ್ರತಿನಿಧಿಗಳ ಕ್ಯಾಮರಾಗಳತ್ತ ಗಮನವಿರಿಸಿದ್ದ ಅನೇಕ ನೇತಾರರು, ಕಸವೇ ಇಲ್ಲದ ಜಾಗಗಳಲ್ಲಿ ಹಾಗೂ ನೆಲದಿಂದ ತುಸು ಎತ್ತರದಲ್ಲಿ ಪೊರಕೆಯನ್ನು ಆಡಿಸುತ್ತಿದ್ದುದು ಇವರ ಪ್ರಹಸನಕ್ಕೆ ಸಾಕ್ಷಿಯಾಗಿತ್ತು!. ಈ ದೃಶ್ಯಗಳನ್ನು ಕಿರುಪರದೆಯ ಮೇಲೆ ಕಂಡಿದ್ದ ವೀಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು.

ವಿಶೇಷವೆಂದರೆ ಉದ್ಘಾಟನಾ ಸಮಾರಂಭ ಮುಗಿದೊಡನೆ ಸ್ಥಳದಿಂದ ನಿರ್ಗಮಿಸಿದ್ದ ನೇತಾರರು, ಮತ್ತೆಂದೂ ಅತ್ತ ತಲೆಹಾಕಿರಲೇ ಇಲ್ಲ. ಮೋದಿಯವರು ಅಪೇಕ್ಷಿಸಿದ್ದಂತೆ ವಾರದಲ್ಲಿ ಎರಡು ಘಂಟೆಗಳಂತೆ, ವರ್ಷದಲ್ಲಿ ನೂರು ಘಂಟೆಗಳ ಸಮಯವನ್ನು ಸ್ವಚ್ಛತೆಗಾಗಿ ಮೀಸಲಿಡುವಷ್ಟು ವ್ಯವಧಾನವೂ ಇವರಲ್ಲಿಲ್ಲ. ಆದರೆ ದೇಶದ ಜನತೆ ಈ ಅಭಿಯಾನವನ್ನು ಯಶಸ್ವಿಗೊಳಿಸಲು ಶ್ರಮಿಸುವಂತೆ ಭಾಷಣ ಬಿಗಿಯಲು ನಮ್ಮ ನೇತಾರರು ಮರೆತಿರಲಿಲ್ಲ!.

ಪ್ರಾರಂಭಿಕ ಹಂತದಲ್ಲಿ ದೇಶದ ಬಹುತೇಕ ರಾಜ್ಯಗಳಲ್ಲಿನ ಸ್ಥಳೀಯ ಸಂಸ್ಥೆಗಳು ಮತ್ತು ಜನಸಾಮಾನ್ಯರು ಅಭಿಯಾನದ ಅಂಗವಾಗಿ ಸ್ವಚ್ಛತೆಯತ್ತ ಗಮನವನ್ನು ಹರಿಸಿದ್ದ ಪರಿಣಾಮವಾಗಿ ಅಲ್ಲಲ್ಲಿ ಕಾಣಿಸುತ್ತಿದ್ದ ಕಸದ ರಾಶಿಗಳು ಕಣ್ಮರೆಯಾಗಿದ್ದವು. ಆದರೆ ಒಂದೆರಡು ತಿಂಗಳುಗಳು ಕಳೆಯುವಷ್ಟರಲ್ಲೇ, ಕಣ್ಣು ಹಾಯಿಸಿದಲ್ಲೆಲ್ಲಾ ತ್ಯಾಜ್ಯಗಳ ರಾಶಿಗಳು ಕಾಣಸಿಗುತ್ತಿರುವುದು ಸತ್ಯ. ಈ ತ್ಯಾಜ್ಯಗಳಿಂದಾಗಿ ಸುತ್ತಮುತ್ತಲ ಪರಿಸರದೊಂದಿಗೆ ತಮ್ಮ ಆರೋಗ್ಯವೂ ಕೆಡುತ್ತಿರುವುದು ಜನಸಾಮಾನ್ಯರಿಗೆ ತಿಳಿಯದ ವಿಚಾರವೇನಲ್ಲ. ಆದರೂ ತಮ್ಮ ಮನೆಮಂದಿಯ ಮತ್ತು ದೇಶದ ಪ್ರಜೆಗಳ ಆರೋಗ್ಯದ ಹಿತದೃಷ್ಠಿಯಿಂದ ಸ್ವಚ್ಛತೆಯನ್ನು ಕಾಪಾಡಲು ಕಿಂಚಿತ್ ಸಮಯವನ್ನು ವಿನಿಯೋಗಿಸಲು ಅಧಿಕತಮ ಜನರು ಸಿದ್ಧರಿಲ್ಲ!.

ಅಪಾಯಗಳಿಗೆ ಆಹ್ವಾನ

ಸ್ವಚ್ಛತೆ ಮತ್ತು ಮನುಷ್ಯನ ಆರೋಗ್ಯಗಳಿಗೆ ಅವಿನಾಭಾವ ಸಂಬಂಧವಿದೆ. ನಮ್ಮ ವೈಯುಕ್ತಿಕ ಮತ್ತು ಸುತ್ತಮುತ್ತಲ ಪರಿಸರದ ಸ್ವಚ್ಛತೆಗಳಿಗೆ ಅನುಗುಣವಾಗಿ ನಮ್ಮ ಆರೋಗ್ಯ ಅಥವಾ ಅನಾರೋಗ್ಯಗಳ ಸ್ಥಿತಿಗತಿಗಳು ಬದಲಾಗುತ್ತಲೇ ಇರುತ್ತವೆ. ಅಂತೆಯೇ ನಾವಿಂದು ಅತಿಯಾಗಿ ಉತ್ಪಾದಿಸಿ ಅವೈಜ್ಞಾನಿಕವಾಗಿ ಎಸೆದುಬಿಡುವ ಅಗಾಧ ಪ್ರಮಾಣದ ತ್ಯಾಜ್ಯಗಳು ಪರಿಸರದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿವೆ. ತತ್ಪರಿಣಾಮವಾಗಿ ಜಾಗತಿಕ ತಾಪಮಾನದ ಹೆಚ್ಚಳ, ಹವಾಮಾನದ ವ್ಯತ್ಯಯಗಳೊಂದಿಗೆ, ವೈವಿಧ್ಯಮಯ ಸಾಂಕ್ರಾಮಿಕ ಮತ್ತು ಮಾರಕ ಕಾಯಿಲೆಗಳ ಹಾವಳಿ ಇನ್ನಷ್ಟು ಹೆಚ್ಚುತ್ತಿದೆ. ಇದೇ ವರ್ಷದ ಮಾರ್ಚ್ ತಿಂಗಳಿನ ಮಧ್ಯಭಾಗದ ತನಕ ಚಳಿಗಾಲ ಮುಂದುವರೆದಿದ್ದು, ಹಠಾತ್ ಬೇಸಗೆಯ ಧಗೆ ಆರಂಭವಾಗಿರುವುದು ಮತ್ತು ಇದೀಗ ಬೇಸಗೆಯ ದಿನಗಳಲ್ಲಿ ಅಕಾಲಿಕ ಮಳೆ ಸುರಿಯುತ್ತಿರಲು ಅಪರಿಮಿತ ತ್ಯಾಜ್ಯಗಳ ಉತ್ಪಾದನೆಯೂ ಒಂದು ಪ್ರಧಾನ ಕಾರಣವೆನಿಸುತ್ತಿದೆ. ಅಂತೆಯೇ ಒಂದೆಡೆ ಕುಂಭದ್ರೋಣ ಮಳೆ ಸುರಿಯುತ್ತಿದ್ದಲ್ಲಿ, ಮತ್ತೊಂದೆಡೆ ಬರದ ಬಾಧೆಯಿಂದಾಗಿ ಕುಡಿಯುವ ನೀರಿಗೂ ತತ್ವಾರವಾಗುತ್ತಿದೆ. ಇವೆಲ್ಲವನ್ನೂ ಕಣ್ಣಾರೆ ಕಂಡು ಅನುಭವಿಸಿದರೂ, ಸಮಸ್ಯೆಯ ಮೂಲ ಕಾರಣವನ್ನು ಪರಿಹರಿಸುವ ನಿಟ್ಟಿನಲ್ಲಿ ಜನಸಾಮಾನ್ಯರು ಸಹಕರಿಸದೇ ಇರುವುದರಿಂದಾಗಿ, ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತಿದೆ.

ಪರಿಹಾರವೇನು?

ನಾವಿಂದು ಅನಾವಶ್ಯಕವಾಗಿ ಹಾಗೂ ಅತಿಯಾಗಿ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣ, ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಜನ ಹಾಗೂ ವಾಹನಗಳ ಸಂಖ್ಯೆ, ಪೋಲು ಮಾಡುತ್ತಿರುವ ಅಗಾಧ ಪ್ರಮಾಣದ ನೀರು ಮತ್ತು  ವಾತಾವರಣದಲ್ಲಿ ಬಿಡುಗಡೆ ಮಾಡುತ್ತಿರುವ ಹಸಿರು ಮನೆ ಅನಿಲಗಳ ಪ್ರಮಾಣಗಳನ್ನು ನಿಯಂತ್ರಿಸದೇ ಇದ್ದಲ್ಲಿ, ದೇಶದ ಜನತೆಗೆ ಇನ್ನಷ್ಟು ಸಂಕಷ್ಟಗಳು ಬಾಧಿಸುವುದರಲ್ಲಿ ಸಂದೇಹವಿಲ್ಲ. ಇವೆಲ್ಲಾ ಕಾರಣಗಳಿಂದಾಗಿ, ಕನಿಷ್ಠ ಪಕ್ಷ ನಿಮ್ಮ ಮುಂದಿನ ಸಂತತಿಯ ಹಿತದೃಷ್ಠಿಯಿಂದ  ಸ್ವಚ್ಛ ಭಾರತ ಅಭಿಯಾನದ ಯಶಸ್ಸಿಗಾಗಿ ಒಂದಿಷ್ಟು ಸಮಯವನ್ನು ವಿನಿಯೋಗಿಸಿ. ನಮ್ಮ ನೇತಾರರಂತೆ “ ಆಡುವುದು ಒಂದು, ಮಾಡುವುದು ಮತ್ತೊಂದು “ ಎನ್ನುವ ನಡವಳಿಕೆಯನ್ನು ತ್ಯಜಿಸಿರಿ. ಕೊನೆಯದಾಗಿ ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಆಗದೇ ಇದ್ದಲ್ಲಿ, ತ್ಯಾಜ್ಯಗಳ ಉತ್ಪಾದನೆಯನ್ನು ನಿಯಂತ್ರಿಸಿ ಮತ್ತು ಕಂಡಲ್ಲಿ ಕಸವನ್ನು ಎಸೆಯುವ ಕೆಟ್ಟ ಹವ್ಯಾಸವನ್ನು ಅಂತ್ಯಗೊಳಿಸಿ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು.





No comments:

Post a Comment