Friday, May 29, 2015

GLOBAL WARMING - HEAT WAVE






              ವರ್ಷಂಪ್ರತಿ ಹೆಚ್ಚುತ್ತಿದೆ  : ಬೇಸಗೆಯ ಧಗೆ


ದೇಶದ ಹಲವು ರಾಜ್ಯಗಳಲ್ಲಿ ಭಯಾನಕ " ಉಷ್ಣ ಅಲೆ " ಯ ಹಾವಳಿಗೆ ಈಗಾಗಲೇ ಸಾವಿರಾರು ಅಮಾಯಕರು ಬಲಿಯಾಗಿದ್ದಾರೆ. ಅದರಲ್ಲೂ ನೆರೆಯ ಆಂಧ್ರಪ್ರದೇಶದಲ್ಲಿ ವಾತಾವರಣದ ಉಷ್ಣತೆಯ ಪ್ರಮಾಣವು ೪೮ ರಿಂದ ೪೯ ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದ್ದು,ಈಗಾಗಲೇ ಒಂದು ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹವಾಮಾನ ಇಲಾಖೆಯ ವರದಿಯಂತೆ ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಹೊರತುಪಡಿಸಿ, ಇತರ ರಾಜ್ಯಗಳಲ್ಲಿ ಇನ್ನಷ್ಟು ದಿನಗಳ ಕಾಲ ಉಷ್ಣ ಅಲೆ ಮುಂದುವರೆಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮಾರ್ಚ್ ಮಧ್ಯಭಾಗದ ತನಕ ತಂಪಾದ ವಾತಾವರಣವಿದ್ದು, ಎಪ್ರಿಲ್ ತಿಂಗಳಿನಲ್ಲೇ ಮುಂಗಾರು ಪೂರ್ವ ಮಳೆ ಸುರಿದ ಪರಿಣಾಮವಾಗಿ ಬೇಸಗೆಯ ಧಗೆ ತುಸು ಕಡಿಮೆಯಾಗಿತ್ತು. ಒಂದೆರಡು ದಿನಗಳನ್ನು ಹೊರತುಪಡಿಸಿದರೆ ಇನ್ನುಳಿದ ದಿನಗಳಲ್ಲಿ ತಾಪಮಾನದ ಪ್ರಮಾಣವು ೩೫ ಡಿಗ್ರಿ ಸೆಲ್ಸಿಯಸ್ ನ ಆಸುಪಾಸಿನಲ್ಲೇ ಸುಳಿದಾಡುತ್ತಿತ್ತು. ಆದರೂ ಜಿಲ್ಲೆಯ ಜನರು " ಎಂತಹ ಸೆಕೆ ಮಾರಾಯ್ರೇ " ಎಂದು ಉದ್ಗರಿಸುತ್ತಿದ್ದರು. ರಾಜ್ಯದ ಕೆಲಭಾಗಗಳಲ್ಲಿ ಇದೀಗ ತಾಪಮಾನದ ಮಟ್ಟವು ೪೦ ಡಿಗ್ರಿ ಸೆಲ್ಸಿಯಸ್ ಮೀರಿದ್ದು, ಬೇಸಗೆಯ ಧಗೆ ಅಸಹನೀಯವೆನಿಸುತ್ತಿದೆ. ಎಪ್ರಿಲ್ ತಿಂಗಳಿನಲ್ಲೂ ಒಂದೆರಡು ಬಾರಿ ಅತಿಯಾಗಿ ಹೆಚ್ಚಿದ್ದ ತಾಪಮಾನದ ಪರಿಣಾಮವಾಗಿ, ಸುರಿದಿದ್ದ ಅಕಾಲಿಕ ಮಳೆಯಿಂದಾಗಿ ವಾತಾವರಣವು ಕೊಂಚ ತಂಪಾಗಿತ್ತು. ಇನ್ನು ಕೆಲವೆಡೆ ಆಲಿಕಲ್ಲು ಮಳೆ ಸುರಿದ ಪರಿಣಾಮವಾಗಿ ರೈತಾಪಿ ಜನರಿಗೆ ಸಾಕಷ್ಟು ನಷ್ಟವೂ ಸಂಭವಿಸಿತ್ತು.

ಪ್ರಸ್ತುತ ಆಂಧ್ರದಲ್ಲಿ ಉಷ್ಣ ಅಲೆಗೆ ಬಲಿಯಾದವರಲ್ಲಿ ಬಡ ಜನರ ಸಂಖ್ಯೆಯೇ ಹೆಚ್ಚಿದೆ. ತಜ್ಞರ ಅಭಿಪ್ರಾಯದಂತೆ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಿದೆ. ಏಕೆಂದರೆ ತಾಪಮಾನದ ಮಟ್ಟ ಅತಿಯಾಗಿ ಏರಿದಾಗ ನಿರ್ದಿಷ್ಟ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳು ಮೃತಪಟ್ಟಲ್ಲಿಆ ವ್ಯಕ್ತಿಯು ಉಷ್ಣ ಅಲೆಗೆ ಬಲಿಯಾಗಿರುವನೆಂದು ಅರಿಯದ ಜನರು ಇದನ್ನು ಸ್ವಾಭಾವಿಕ ಮರಣವೆಂದು ಭಾವಿಸುತ್ತಾರೆ. 

ಯಾವುದೇ ದೇಶದಲ್ಲಿ ಉಷ್ಣ ಅಲೆಗೆ ಬಲಿಯಾಗುತ್ತಿರುವವರಲ್ಲಿ ಬಡವರ ಪಾಲೇ ಅತ್ಯಧಿಕವಾಗಿರುತ್ತದೆ. ಅದರಲ್ಲೂ ಹೊರಾಂಗಣದಲ್ಲಿ ದುಡಿಯುವ ಕೂಲಿ ಕಾರ್ಮಿಕರು, ರಸ್ತೆ ಹಾಗೂ ಕಟ್ಟಡಗಳ ನಿರ್ಮಾಣ ಕಾಮಗಾರಿಯಲ್ಲಿ ದುಡಿಯುವವರೇ ಮುಂತಾದವರು ನೆರಳಿನ ಆಸರೆಯಿಲ್ಲದೇಬಿಸಿಲಿನ ಬೇಗೆಗೆ ದುಡಿಯುವುದರಿಂದ ಉಷ್ಣ ಅಲೆಯ ಹಾವಳಿಗೆ ಸುಲಭದಲ್ಲೇ ಬಲಿಯಾಗುತ್ತಾರೆ. ಅದೇ ರೀತಿಯಲ್ಲಿ ಕೆಲವೊಂದು ಗಂಭೀರ ಹಾಗೂ ಮಾರಕ ಕಾಯಿಲೆಗಳಿಂದ ಬಳಲುತ್ತಿರುವವರು ವಾತಾವರಣದ ಉಷ್ಣತೆ ಅತಿಯಾಗಿ ಹೆಚ್ಚಿದ ಸಂದರ್ಭದಲ್ಲಿ ಮೂತ್ರಪಿಂಡಗಳ ವೈಫಲ್ಯ ಹಾಗೂ ಹೃದಯಾಘಾತದಂತಹ ಸಮಸ್ಯೆಯಿಂದ ಮೃತಪಡುತ್ತಾರೆ.

ಉಷ್ಣ ಅಲೆಯು ಎರಡು ವಿಧದಲ್ಲಿ ತನ್ನ ಮಾರಕತೆಯನ್ನು ತೋರ್ಪಡಿಸುತ್ತದೆ. ಇವುಗಳಲ್ಲಿ “ ಉಷ್ಣ ಆಘಾತ “ (Heat stroke ) ದ ಸಂದರ್ಭದಲ್ಲಿ ವ್ಯಕ್ತಿಯ ಶರೀರದ ತಾಪಮಾನವು ವಿಪರೀತ ಹೆಚ್ಚುವುದರಿಂದ ಉದ್ಭವಿಸುವ ನಿರ್ಜಲೀಕೃತ ಸ್ಥಿತಿ ಮತ್ತು ಆತನ ಮೆದುಳಿಗೆ ಸಂಭವಿಸುವ ಹಾನಿಯೂ ಮರಣಕ್ಕೆ ಕಾರಣವೆನಿಸಬಲ್ಲದು. ಎರಡನೆಯ ವಿಧದಲ್ಲಿ ವಯೋವೃದ್ಧರು ಹಾಗೂ ಹೃದಯ, ಶ್ವಾಸಕೋಶಗಳು, ಮೂತ್ರಪಿಂಡಗಳಂತಹ ಪ್ರಮುಖ ಅಂಗಗಳಿಗೆ ಸಂಬಂಧಿಸಿದ ಮತ್ತು ಅನ್ಯ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ರಕ್ತಸಂಚಲನ ವ್ಯವಸ್ಥೆಯ ವೈಫಲ್ಯದಿಂದ ಮರಣ ಸಂಭವಿಸುವ ಸಾಧ್ಯತೆಗಳಿವೆ. ಇದಲ್ಲದೇ ಹಸುಗೂಸುಗಳು ಮತ್ತು ಪುಟ್ಟ ಮಕ್ಕಳ ಮೇಲೂ ಉಷ್ಣ ಅಲೆಯು ದುಷ್ಪರಿಣಾಮವನ್ನು ಬೀರುತ್ತದೆ.

ಜಾಗತಿಕ ತಾಪಮಾನದ ಹೆಚ್ಚಳ

ನಿರಂತರವಾಗಿ ಹೆಚ್ಚುತ್ತಿರುವ ಜನ ಹಾಗೂ ವಾಹನಗಳ ಸಂಖ್ಯೆ, ಅತಿಯಾಗುತ್ತಿರುವ ನಗರೀಕರಣ,ಅರಣ್ಯ – ಕೃಷಿ ಭೂಮಿಗಳನ್ನು ನಾಶಪಡಿಸಿ ತಲೆ ಎತ್ತುತ್ತಿರುವ ಕೈಗಾರಿಕೆ, ಉದ್ದಿಮೆ, ವಿದ್ಯುತ್ ಉತ್ಪಾದನಾ ಘಟಕಗಳು ಮತ್ತು ವಿಶೇಷ ವಿತ್ತ ವಲಯಗಳು, ಕಾಂಕ್ರೀಟ್ ಕಾಡುಗಳ ನಿರ್ಮಾಣ, ಜಲ ಸಂರಕ್ಷಣೆಯ ಬಗ್ಗೆ ನಿರ್ಲಕ್ಷ್ಯ, ಅತಿಯಾಗಿ ಉತ್ಪಾದಿಸುತ್ತಿರುವ ವೈವಿಧ್ಯಮಯ ತ್ಯಾಜ್ಯಗಳ ಪ್ರಮಾಣದಲ್ಲಿ ಹೆಚ್ಚಳ ಹಾಗೂ ಅವೈಜ್ಞಾನಿಕ ವಿಲೇವಾರಿ, ಕೃತಕ ರಾಸಾಯನಿಕ ಗೊಬ್ಬರಗಳ ಅತಿಬಳಕೆ, ಸಾಂಪ್ರದಾಯಿಕ ಉರುವಲುಗಳ ಬಳಕೆ, ಅತಿಯಾಗಿ ಪೋಲು ಮಾಡುತ್ತಿರುವ ನೀರು ಮತ್ತು ಅಂತರ್ಜಾಲದ ಮಟ್ಟವನ್ನು ಹೆಚ್ಚಿಸಬಲ್ಲ ವಿಧಾನಗಳನ್ನು ನಿರ್ಲಕ್ಷಿಸಿರುವುದೇ ಮುಂತಾದ ಕಾರಣಗಳಿಂದಾಗಿ, ಜಾಗತಿಕ ತಾಪಮಾನದ ಮಟ್ಟವು ನಿಧಾನವಾಗಿ ಆದರೆ ನಿಶ್ಚಿತವಾಗಿ ಹೆಚ್ಚುತ್ತಿದೆ. ಪ್ರಕೃತಿಯ ಮೇಲೆ ಮಾನವನು ನಡೆಸುತ್ತಿರುವ ಅತ್ಯಾಚಾರದ ಪರಿಣಾಮವಾಗಿ ಈ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತಿದೆ. ಇವೆಲ್ಲವನ್ನೂ ನಿಯಂತ್ರಿಸದೇ ಇದ್ದಲ್ಲಿ, ನಮ್ಮ ಮುಂದಿನ ಸಂತತಿಯನ್ನು ಈ ಸಮಸ್ಯೆಯು ಶಾಪದಂತೆ ಕಾಡಲಿದೆ.

ಹವಾಮಾನದ ವ್ಯತ್ಯಯ

ಜಾಗತಿಕ ಹವಾಮಾನದ ವ್ಯತ್ಯಯದ  ಭಯಾನಕ ದುಷ್ಪರಿಣಾಮಗಳಲ್ಲಿ ಜಾಗತಿಕ ತಾಪಮಾನ ಮತ್ತು ಉಷ್ಣ ಅಲೆಗಳ ಹೆಚ್ಚಳವು ಪ್ರಮುಖವಾಗಿದೆ. ಈ ಸಮಸ್ಯೆಯ ಸಂಭಾವ್ಯತೆ ಮತ್ತು ತೀವ್ರತೆಗಳ ಪ್ರಮಾಣಗಳು ವರ್ಷದಿಂದ ವರ್ಷಕ್ಕೆ ಇನ್ನಷ್ಟು ಹೆಚ್ಚಲಿವೆ.

ಇತೀಚಿನ ದಿನಗಳಲ್ಲಿ ಸಾಕಷ್ಟು ವಾದವಿವಾದಗಳಿಗೆ ಕಾರಣವೆನಿಸಿರುವ ಜಾಗತಿಕ ತಾಪಮಾನದ ಹೆಚ್ಚಳವು  ಬೇಸಗೆಯ ಧಗೆಯನ್ನು ಹೆಚ್ಚಿಸುವುದರೊಂದಿಗೆ, ಹವಾಮಾನದ ವೈಪರೀತ್ಯಗಳಿಗೆ ಕಾರಣವೆನಿಸುತ್ತಿದೆ. ತತ್ಪರಿಣಾಮವಾಗಿ ಕಡುಬೇಸಗೆಯ ದಿನಗಳಲ್ಲೂ ಗುಡುಗು ಮಿಂಚಿನೊಂದಿಗೆ ಧಾರಾಕಾರ ಮಳೆ ಸುರಿದಲ್ಲಿ ಇನ್ನು  ಕೆಲವೆಡೆ ಆಲಿಕಲ್ಲು ಮಳೆ ಸುರಿಯುತ್ತಿದೆ. ಒಂದೆಡೆ ಅತಿವೃಷ್ಟಿ ಹಾಗೂ ಮತ್ತೊಂದೆಡೆ ಅನಾವೃಷ್ಟಿ, ಮತ್ತೆ ಕೆಲವೆಡೆ ಅತಿಯಾದ ಸೆಕೆ ಅಥವಾ ಅತಿಯಾದ ಚಳಿ ಇತ್ಯಾದಿ ವೈಪರೀತ್ಯಗಳಿಗೆ ಮೇಲೆ ನಮೂದಿಸಿರುವ ಕಾರಣಗಳಲ್ಲದೇ, ಇತರ ಕಾರಣಗಳೂ ಇರುವ ಸಾಧ್ಯತೆಗಳಿವೆ. ಪ್ರಾಕೃತಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಹವಾಮಾನ ತಜ್ಞರು - ವಿಜ್ಞಾನಿಗಳು ಈ ಸಮಸ್ಯೆಗೆ ಸೂಕ್ತ ಪರಿಹಾರವೊಂದನ್ನು ಕಂಡುಹುಡುಕಲು ಶ್ರಮಿಸುತ್ತಿದ್ದರೂ, ಇದು ಫಲಪ್ರದವೆನಿಸಿಲ್ಲ. ಮನುಷ್ಯರ ಪಾಲಿಗೆ ಅತ್ಯಂತ ಅಪಾಯಕಾರಿ ಎನಿಸಿರುವ ಈ ಸಮಸ್ಯೆಗೆ ಪರಿಹಾರವನ್ನು ಸಂಶೋಧಿಸಲು ಅಸಾಧ್ಯವಾಗಿರುವುದರಿಂದ, ಕನಿಷ್ಟಪಕ್ಷ ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕಿದೆ. ಏಕೆಂದರೆ ಮುಂದಿನ ೮೦ ರಿಂದ ೧೦೦ ವರ್ಷಗಳ ಅವಧಿಯಲ್ಲಿ ಸರಾಸರಿ ತಾಪಮಾನವು ೨ ರಿಂದ ೬ ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಲಿದೆ. ದೇಶದ ಅಧಿಕತಮ ರಾಜ್ಯಗಳಲ್ಲಿ ತಾಪಮಾನದ ಮಟ್ಟದ ಹೆಚ್ಚಳವು  ಗಣನೀಯವಾಗಿದ್ದು, ತೀವ್ರ ಚಳಿ ಇರುತ್ತಿದ್ದ ಪ್ರದೇಶಗಳಲ್ಲಿ ಇದೀಗ ಛಳಿಯ ತೀವ್ರತೆ ಕಡಿಮೆಯಾಗಿರುವುದು ಮತ್ತು ಬೇಸಗೆಯ ದಿನಗಳಲ್ಲಿ ವಾತಾವರಣದ ಉಷ್ಣತೆ ಇನ್ನಷ್ಟು ಹೆಚ್ಚುತ್ತಿದೆ.

ಉಷ್ಣ ಅಲೆ – ಮುಂಜಾಗ್ರತೆ

ಅತಿಯಾದ ತಾಪಮಾನ ಬಾಧಿಸಿದ ಸಂದರ್ಭದಲ್ಲಿ ನೇರವಾಗಿ ಸೂರ್ಯನ ಬಿಸಿಲಿಗೆ ಮೈಯ್ಯನ್ನು ಒಡ್ಡದಿರಿ. ಅನಿವಾರ್ಯವೆನಿಸಿದಲ್ಲಿ ಛತ್ರಿಯನ್ನು ಬಳಸಿರಿ. ಜೊತೆಗೆ ಹೊರಾಂಗಣದಲ್ಲಿ ತೀವ್ರ ಶಾರೀರಿಕ ಶ್ರಮದ ಕೆಲಸಗಳನ್ನು ಮಾಡದಿರಿ. ಧಾರಾಳವಾಗಿ ನೀರು ಹಾಗೂ ಕೊಂಚ  ಪಾನಕ ಮತ್ತು ಹಣ್ಣಿನ ರಸ ಇತ್ಯಾದಿ ದ್ರವಗಳನ್ನು ಸೇವಿಸಿ. ವಿಶೇಷವಾಗಿ ಗಂಭೀರ ವ್ಯಾಧಿಗಳಿಂದ ಬಳಲುತ್ತಿರುವ ರೋಗಿಗಳ ಶರೀರದ ಉಷ್ಣತೆಯು ಹೆಚ್ಚಾಗದಂತೆ ಹವಾ ನಿಯಂತ್ರಕ,ಫ್ಯಾನ್ ಅಥವಾ ಕೂಲರ್ ಗಳನ್ನು ಬಳಸಿ. ಈ ಸೌಲಭ್ಯ ಇಲ್ಲದವರು ಒದ್ದೆ ಬಟ್ಟೆಯಿಂದ ರೋಗಿಯ ಶರೀರವನ್ನು ಆಗಾಗ ಒರೆಸುತ್ತಿರಿ. ಇಂತಹವರ ಆರೋಗ್ಯದಲ್ಲಿ ಕೊಂಚ ಏರುಪೇರು ಸಂಭವಿಸಿದಲ್ಲಿ, ತಕ್ಷಣ ವೈದ್ಯರ ಸಲಹೆಯನ್ನು ಪಡೆಯಿರಿ.

ಉಷ್ಣ ಅಲೆಯ ಬಾಧೆಯ ಸಂದರ್ಭದಲ್ಲೇ ಜ್ವರ, ವಾಂತಿ ಮತ್ತು ಭೇಧಿಯಂತಹ ಸಮಸ್ಯೆಗಳು ಉದ್ಭವಿಸಿದಲ್ಲಿ, ಇವುಗಳನ್ನು  ನಿರ್ಲಕ್ಷಿಸದೇ ಸಮೀಪದ ವೈದ್ಯರನ್ನು ಸಂದರ್ಶಿಸಿ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 


No comments:

Post a Comment