Saturday, May 16, 2015

SAKKAREYA ATISEVANE...........



ಸಕ್ಕರೆಯ ಸೇವನೆಯನ್ನು ನಿಯಂತ್ರಿಸಿ : ನಿಮ್ಮ ರಕ್ಷಿಸಿ ಆರೋಗ್ಯವನ್ನು ರಕ್ಷಿಸಿ 

ಬಾಯಲ್ಲಿ ನೀರೂರಿಸುವ ಸ್ವಾದಿಷ್ಟ ಸಿಹಿತಿಂಡಿಗಳಿಗೆ ಮಾರುಹೋಗದ ಭಾರತೀಯರೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಅದರಲ್ಲೂ ಹಿಂದೂ ಧರ್ಮೀಯರು ಹುಟ್ಟಿನಿಂದ ಆರಂಭಿಸಿ ಸಾವಿನ ತನಕ, ಆಚರಿಸುವ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಸಿಹಿತಿಂಡಿಗಳಿಗೆ ಆದ್ಯತೆಯನ್ನು ನೀಡುತ್ತಾರೆ. ಈ ರೀತಿಯ ಸಿಹಿಯಾದ ಖಾದ್ಯಪೇಯಗಳನ್ನು ಅತಿಯಾಗಿ ಸೇವಿಸುವ ಭಾರತೀಯರು," ಪರಸ್ಪರ ಹರಡದ ಕಾಯಿಲೆ " (Non communicable diseases - NCD ) ಗಳಿಗೆ ಸುಲಭದಲ್ಲೇ ಈಡಾಗುತ್ತಿರುವುದು ಸುಳ್ಳೇನಲ್ಲ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಆರೋಗ್ಯ ಸಂಸ್ಥೆಯು, ಇದನ್ನು ನಿಯಂತ್ರಿಸುವ ಸಲುವಾಗಿ ನೂತನ ಮಾರ್ಗದರ್ಶಿ ಸೂತ್ರಗಳನ್ನು ಇತ್ತೀಚಿಗೆ ಘೋಷಿಸಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಅನಾರೋಗ್ಯಕರ ಜೀವನಶೈಲಿ

ಭಾರತೀಯರು ಸೇವಿಸುವ ಆಹಾರ ಮತ್ತು ಅನುಸರಿಸುವ ಜೀವನಶೈಲಿಗಳ ಬಗ್ಗೆ ವೈದ್ಯಕೀಯ ತಜ್ಞರು ಪದೇಪದೇ ಎಚ್ಚರಿಕೆಯನ್ನು ನೀಡುತ್ತಲೇ ಇರುತ್ತಾರೆ. ಏಕೆಂದರೆ ನಾವಿಂದು ಸೇವಿಸುವ ಆಹಾರದಲ್ಲಿ ಉಪ್ಪು, ಎಣ್ಣೆ, ಬೆಣ್ಣೆ,ತುಪ್ಪ ಮತ್ತು ಸಕ್ಕರೆಗಳ ಪ್ರಮಾಣ ಅತಿಯಾಗಿದೆ. ಅಂತೆಯೇ ಮಧ್ಯಮ ಮತ್ತು ಶ್ರೀಮಂತ ವರ್ಗದವರ ನಿಷ್ಕ್ರಿಯ ಜೀವನಶೈಲಿಯಿಂದಾಗಿ, ಪರಸ್ಪರ ಹರಡದ ಗಂಭೀರ ಕಾಯಿಲೆಗಳ ಪ್ರಮಾಣವೂ ಸ್ವಾಭಾವಿಕವಾಗಿಯೇ ಹೆಚ್ಚುತ್ತಲೇ ಇದೆ. ಅದರಲ್ಲೂ ನಮ್ಮ ದೇಶದಲ್ಲಿ ಮಧುಮೇಹ ವ್ಯಾಧಿಯಿಂದ ಪೀಡಿತರಾದ ಜನರ ಸಂಖ್ಯೆ ಅನಿಯಂತ್ರಿತವಾಗಿ ವೃದ್ಧಿಸಿದ್ದು, ಭಾರತವನ್ನು “ ವಿಶ್ವದ ಮಧುಮೇಹಿಗಳ ರಾಜಧಾನಿ “ ಎಂದೇ ಗುರುತಿಸಲಾಗಿದೆ. ಇದೇ ಕಾರಣದಿಂದಾಗಿ ಈ ಗಂಭೀರ ಸಮಸ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜನಸಾಮಾನ್ಯರು ವೈದ್ಯಕೀಯ ತಜ್ಞರ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆ ಸೂಚನೆಗಳನ್ನು ಪರಿಪಾಲಿಸಬೇಕಾಗಿದೆ. ಇದರ ಅಂಗವಾಗಿ ನಾವಿಂದು ಅತಿಯಾಗಿ ಸೇವಿಸುತ್ತಿರುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲೇಬೇಕಾಗಿದೆ.

ಸಕ್ಕರೆಯ ಸೇವನೆಯನ್ನು ನಿಯಂತ್ರಿಸಿ

ಪರಸ್ಪರ ಹರಡದ ಕಾಯಿಲೆಗಳನ್ನು ನಿಯಂತ್ರಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯು ಸೂಚಿಸಿರುವ ಮಾರ್ಗದರ್ಶಿ ಸೂತ್ರಗಳಂತೆ, ನೀವು ಒಂದು ದಿನದಲ್ಲಿ ಸೇವಿಸುವ ಸಕ್ಕರೆಯ ಪ್ರಮಾಣವು  ನಿಮ್ಮ ದೈನಂದಿನ ಶಾರೀರಿಕ ಚಟುವಟಿಕೆಗಳಿಗೆ ಅಗತ್ಯವೆನಿಸುವ " ಶಕ್ತಿ " ( Energy ) ಯ ಪ್ರಮಾಣದ ಶೇ. ೧೦ ರಷ್ಟು ಮೀರುವಂತಿಲ್ಲ. ಇದರೊಂದಿಗೆ ಮಧ್ಯಮ ಗತಿಯ ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮಕ್ಕಳು ಮತ್ತು ವಯಸ್ಕರು, ಈ ಪ್ರಮಾಣವನ್ನು ಶೇ. ೫ ಕ್ಕೆ, ಅರ್ಥಾತ್, ಸುಮಾರು ೨೫ ಗ್ರಾಂ ಗಳಿಗೆ ಇಳಿಸುವುದು ಹಿತಕರ ಎನ್ನುವ  ಷರತ್ತುಬದ್ಧ ಶಿಫಾರಸನ್ನೂ ಮಾಡಿದೆ.ವಿ..ಸಂಸ್ಥೆಯು ಗ್ಲುಕೋಸ್, ಫ್ರುಕ್ಟೋಸ್ ಗಳಂತಹ ಮೊನೊ ಸಾಕರೈಡ್ಸ್ ಹಾಗೂ ಸೂಕ್ರೋಸ್ ಮತ್ತು ಸಕ್ಕರೆಗಳೊಂದಿಗೆ, ಜೇನುತುಪ್ಪ, ಹಣ್ಣಿನ ರಸಗಳು, ಸಿರಪ್ ಹಾಗೂ ಸಾಂದ್ರೀಕೃತ ಹಣ್ಣುಗಳನ್ನು ಸಕ್ಕರೆಯೆಂದು ಗುರುತಿಸಿದೆ. ಸಕ್ಕರೆಯನ್ನು ಬಳಸಿ ಸಿದ್ಧಪಡಿಸಿದ ಲಘುಪಾನೀಯಗಳಂತಹ ಪೇಯಗಳು ಮತ್ತು ಅತಿಯಾದ ಸಕ್ಕರೆಯ ಅಂಶವನ್ನು ಹೊಂದಿರುವ ಪ್ಯಾಕ್ ಮಾಡಿದ ಆಹಾರಗಳನ್ನೂ ಈ ವರ್ಗದಲ್ಲಿ ಸೇರಿಸಿದೆ. ಇಂತಹ ಆಹಾರಪದಾರ್ಥಗಳ ಸೇವನೆಯನ್ನು ನಿಯಂತ್ರಿಸುವಂತೆ ಸಲಹೆಯನ್ನೂ ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕರೊಬ್ಬರ ಅಭಿಪ್ರಾಯದಂತೆ ನೀವು ಸೇವಿಸುವ ಸಕ್ಕರೆಯ ಪ್ರಮಾಣವನ್ನು ಕಡಿಮೆಮಾಡಿದಲ್ಲಿ, ಅಧಿಕತೂಕ, ಅತಿಬೊಜ್ಜು,ಮಧುಮೇಹ, ಅಧಿಕ ರಕ್ತದೊತ್ತಡ,ಹೃದ್ರೋಗಗಳು ಮತ್ತು ದಂತಕುಳಿಗಳಂತಹ ಸಮಸ್ಯೆಗಳ ಸಂಭಾವ್ಯತೆಯು ನಿಸ್ಸಂದೇಹವಾಗಿ  ಕಡಿಮೆಯಾಗುವುದು. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶಿ ಸೂತ್ರಗಳನ್ನು ಇಂತಹ ಪರಸ್ಪರ ಹರಡದ ಕಾಯಿಲೆಗಳ ಸಂಭಾವ್ಯತೆಯ ಅಪಾಯವನ್ನು ಕಡಿಮೆಮಾಡುವ ಉದ್ದೇಶದಿಂದಲೇ ಪ್ರಕಟಿಸಲಾಗಿದೆ.

ನಿಮಗಿದು ತಿಳಿದಿರಲಿ

ವಿಶ್ವ ಆರೋಗ್ಯ ಸಂಸ್ಥೆಯು ನಮ್ಮ ದೈನಂದಿನ ಅವಶ್ಯಕತೆಯ ಶೇ.೧೦ ಕ್ಕೂ ಕಡಿಮೆ ಪ್ರಮಾಣದ ಸಕ್ಕರೆಯನ್ನು ಸೇವಿಸುವಂತೆ ಸೂಚಿಸಿದ್ದರೂ, ತಜ್ಞರು ಹೇಳುವಂತೆ ಭಾರತೀಯರ ಆಹಾರ ಸೇವನಾ ಶೈಲಿಯು ತುಸು ವಿಭಿನ್ನವಾಗಿರುವುದರಿಂದ, ನಾವು ಶೇ. ೫ ರ ಪ್ರಮಾಣವನ್ನು ಅನುಸರಿಸುವುದು ಆರೋಗ್ಯಕರವೆನಿಸುವುದು. ಏಕೆಂದರೆ ಅಧಿಕತಮ ಭಾರತೀಯರು ಸೇವಿಸುವ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಸಮೃದ್ಧವಾಗಿದ್ದು, ಇದು ಗ್ಲುಕೋಸ್ ಆಗಿ ಪರಿವರ್ತನೆಗೊಳ್ಳುವ ಮೂಲಕ ಶರೀರಕ್ಕೆ ಅಗತ್ಯವಿರುವಷ್ಟು ಸಕ್ಕರೆಯನ್ನು ಪೂರೈಸುತ್ತದೆ. ಹಾಗೂ  ಇದೇ ಕಾರಣದಿಂದಾಗಿ ಭಾರತೀಯರು ಹೆಚ್ಚುವರಿ ಸಕ್ಕರೆಯನ್ನು ಅಥವಾ ಚಾಕಲೆಟ್, ಬಿಸ್ಕೆಟ್, ಸೂಪ್ ಹಾಗೂ ಲಘುಪಾನೀಯ ಇತ್ಯಾದಿಗಳನ್ನು  ಸೇವಿಸುವ ಅವಶ್ಯಕತೆಯೇ ಉದ್ಭವಿಸುವುದಿಲ್ಲ.  

ಉದಾಹರಣೆಗೆ ನೀವು ಗುಟುಕರಿಸುವ ೩೦೦ ಎಂ.ಎಲ್ ಕೋಲಾದಲ್ಲಿ ಸರಿಸುಮಾರು ೩೩ ಗ್ರಾಂ ಸಕ್ಕರೆ ಸೇರಿರುವುದರಿಂದ, ಇಂತಹ ಒಂದು ಪೇಯವನ್ನು ಕುಡಿದ ಬಳಿಕ ಅನ್ಯ ರೂಪದಲ್ಲಿ ಸಕ್ಕರೆಯನ್ನು ಸೇವಿಸಲು ಅವಕಾಶವಿರುವುದಿಲ್ಲ. ಅಕಸ್ಮಾತ್ ಸೇವಿಸಿದರೂ, ಈ ಹೆಚ್ಚುವರಿ ಸಕ್ಕರೆಯು ಅತಿಬೋಜ್ಜಿನ ಸಮಸ್ಯೆಗೆ ಕಾರಣವೆನಿಸುವುದರಲ್ಲಿ ಸಂದೇಹವಿಲ್ಲ. ಅನಿಲ ರಹಿತ ಹಣ್ಣಿನ ರಸಗಳೂ ಸಕ್ಕರೆಯ ಪ್ರಮಾಣದ ವಿಚಾರದಲ್ಲಿ ಕೋಲಾದಂತಹ ಲಘುಪಾನೀಯಗಳಲ್ಲಿ ಇರುವಷ್ಟೇ ಅಥವಾ ಅದಕ್ಕೂ ಅಧಿಕ ಪ್ರಮಾಣದ ಸಕ್ಕರೆಯ ಅಂಶವನ್ನು ಹೊಂದಿರುತ್ತವೆ. ಸುಪ್ರಸಿದ್ಧ ಸಂಸ್ಥೆಯೊಂದು ಭಾರತದಲ್ಲಿ ತಯಾರಿಸಿ ಮಾರಾಟಮಾಡುತ್ತಿರುವ ೩೦೦ ಎಂ.ಎಲ್ ನ ಮಾವಿನ ಹಣ್ಣಿನ ರಸದ ಪೇಯವೊಂದರಲ್ಲ್ಲಿ, ಸುಮಾರು ೪೫ ಗ್ರಾಂ ಸಕ್ಕರೆ ಇರುವುದು. ಇದೇ ಕಾರಣದಿಂದಾಗಿ ಸ ತಾವು ಸೇವಿಸುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಬಯಸುವವರು, ಇಂತಹ ಲಘು  ಪಾನೀಯಗಳು ಹಾಗೂ ಹಣ್ಣಿನ ರಸಗಳ ಸೇವನೆಯನ್ನೇ ವರ್ಜಿಸಬೇಕಾಗುತ್ತದೆ.

ನೀವು ಮಾರುಕಟ್ಟೆಯಲ್ಲಿ ಖರೀದಿಸಿ ಸೇವಿಸುವ ಬಹುತೇಕ ಸಂಸ್ಕರಿತ ಆಹಾರಗಳ ತಯಾರಿಕೆಯಲ್ಲಿ ಬಳಸುವ “ ಸಂರಕ್ಷಕ ರಾಸಾಯನಿಕ ದ್ರವ್ಯ “ ಗಳ ಅಸ್ವಾದಿಷ್ಟ ರುಚಿಯನ್ನು ಮರೆಮಾಚುವ ಸಲುವಾಗಿ, ಇವುಗಳಲ್ಲಿ ಸಕ್ಕರೆಯನ್ನು ತುಸು ಅಧಿಕ ಪ್ರಮಾಣದಲ್ಲೇ ಬೆರೆಸಲಾಗುತ್ತದೆ. ನೀವು ಸಾಮಾನ್ಯವಾಗಿ ಬಳಸುವ ಒಂದು ಚಮಚ ಟೊಮೆಟೋ ಕೆಚಪ್ ನಲ್ಲಿ ೪ ಗ್ರಾಂ ಸಕ್ಕರೆ ಇರುತ್ತದೆ. ಆದುದರಿಂದ ನೀವು ಒಂದು ದಿನದಲ್ಲಿ ಸೇವಿಸುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಬೇಕಿದ್ದಲ್ಲಿ, ನೀವು ಸೇವಿಸುವ ಪ್ರತಿಯೊಂದು ಖಾದ್ಯಪೇಯಗಳಲ್ಲಿ ಇರುವ ಸಕ್ಕರೆಯ ಪ್ರಮಾಣದ ಬಗ್ಗೆ ಮಾಹಿತಿಯನ್ನು ತಿಳಿದಿರುವುದು ಉಪಯುಕ್ತವೆನಿಸುವುದು. ದೆಹಲಿಯ ಉಚ್ಛ ನ್ಯಾಯಾಲಯವು ನೀಡಿದ್ದ ತೀರ್ಪಿನಂತೆ ಗ್ರಾಹಕ ಉತ್ಪನ್ನಗಳ ಲೇಬಲ್ ಗಳ ಮೇಲೆ ಇವುಗಳಲ್ಲಿರುವ ಪೋಷಕಾಂಶಗಳು ಮತ್ತು ಇದರ ತಯಾರಿಕೆಯಲ್ಲಿ ಬಳಸಲಾಗಿರುವ ಅನ್ಯ ದ್ರವ್ಯಗಳ ಹೆಸರು ಮತ್ತು ಪ್ರಮಾಣಗಳನ್ನು ಮುದ್ರಿಸಬೇಕೆಂದು ಶಿಫಾರಸು ಮಾಡಲಾಗಿದೆ. ಉಚ್ಛ ನ್ಯಾಯಾಲಯದ ಅಭಿಪ್ರಾಯದಂತೆ ಇಂತಹ ಉತ್ಪನ್ನಗಳ ಜಾಹೀರಾತುಗಳನ್ನು ಮತ್ತು ಖ್ಯಾತನಾಮ ವ್ಯಕ್ತಿಗಳು ಇವುಗಳಲ್ಲಿ ರೂಪದರ್ಶಿಗಳಾಗಿ ಭಾಗವಹಿಸಿ, ಇವುಗಳನ್ನು ಅನುಮೋದಿಸುವುದನ್ನು ನಿಯಂತ್ರಿಸುವುದು ಉಪಯುಕ್ತವೆನಿಸುವುದು. ಅನೇಕ ದೇಶಗಳಲ್ಲಿ ಇಂತಹ ಕ್ರಮಗಳನ್ನು ಕಡ್ದಾಯವಾಗಿ ಅನುಷ್ಠಾನಿಸಲಾಗುತ್ತಿದೆ.

ಸಕ್ಕರೆ ಮತ್ತು ಅನಾರೋಗ್ಯ  

ವೈದ್ಯಕೀಯ ತಜ್ಞರು ಹೇಳುವಂತೆ ಸಕ್ಕರೆಯ ಅತಿಸೇವನೆ ಹಾಗೂ ಪರಸ್ಪರ ಹರಡದ ಕಾಯಿಲೆಗಳ ಸಂಭಾವ್ಯತೆಯ ಅಪಾಯಗಳ ನಡುವೆ ಅವಿನಾಭಾವ ಸಂಬಂಧವಿದೆ. ನಮ್ಮ ದೇಶದಲ್ಲಿ ಮಧುಮೇಹ ವ್ಯಾಧಿಯು ವ್ಯಾಪಕವಾಗಿ ಕಂಡುಬರುತ್ತಿದ್ದು, ಸುಮಾರು ೬೫ ದಶಲಕ್ಷಕ್ಕೂ ಅಧಿಕ ಜನರು ಇದರಿಂದ ಬಳಲುತ್ತಿದ್ದಾರೆ. ಅದೇ ರೀತಿಯಲ್ಲಿ ಅಧಿಕತೂಕ ಮತ್ತು ಅತಿಬೋಜ್ಜಿನ ಸಮಸ್ಯೆಗಳೂ ಕಳೆದ ಒಂದೆರಡು ದಶಕಗಳಿಂದ ಸಾಂಕ್ರಾಮಿಕ ಕಾಯಿಲೆಗಳಂತೆ ಹೆಚ್ಚುತ್ತಲೇ ಇವೆ.

೨೦೦೫ ರಿಂದ ೨೦೧೩ ರ ಅವಧಿಯಲ್ಲಿ ನಡೆಸಿದ್ದ ವೈದ್ಯಕೀಯ ಅಧ್ಯಯನಗಳ ವರದಿಗಳಂತೆ, ನಮ್ಮ ದೇಶದಲ್ಲಿ ಅತಿಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಯು ಶೇ. ೧೦ ರಿಂದ ೬೫ ರಷ್ಟು ವೃದ್ಧಿಸಿದೆ.ಮತ್ತೊಂದು ಅಧ್ಯಯನದ ವರದಿಯಂತೆ ಭಾರತದಲ್ಲಿ  ಉತ್ಪಾದನೆಯಾಗುತ್ತಿರುವ ಲಘುಪಾನೀಯಗಳ ಪ್ರಮಾಣವು ೨೦೦೮ ರಿಂದ ೨೦೧೩ ರ ಅವಧಿಯಲ್ಲಿ ದುಪ್ಪಟ್ಟಾಗಿತ್ತು!.

ಸಕ್ಕರೆಯನ್ನು ಬಳಸಿ ಸಿದ್ಧಪಡಿಸುವ ಲಘುಪಾನೀಯಗಳ ಅತಿಸೇವನೆಯಿಂದ ಉದ್ಭವಿಸುತ್ತಿರುವ ಅನಾರೋಗ್ಯದ ಸಮಸ್ಯೆಗಳ ಬಗ್ಗೆ ಅರಿವಿರುವ ಇವುಗಳ ಉತ್ಪಾದಕರು, ತಮ್ಮ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವ  ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಕೆಲವೊಂದು ಸಣ್ಣಪುಟ್ಟ ತಯಾರಕರು ತಮ್ಮ ಉತ್ಪನ್ನಗಳಲ್ಲಿ ಸಕ್ಕರೆಯ ಬದಲಾಗಿ “ ಕೃತಕ ಮಾಧುರ್ಯಕಾರಕ ರಾಸಾಯನಿಕ ದ್ರವ್ಯ “ ಗಳನ್ನು ಬಳಸುತ್ತಿದ್ದು, ಇವುಗಳು ಮನುಷ್ಯನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುವುದರಿಂದ, ಇನ್ನಷ್ಟು ಅಪಾಯಕಾರಿ ಎನಿಸುತ್ತವೆ. ಲಘುಪಾನೀಯಗಳ ಉತ್ಪಾದಕರ ಬಳಿ ಇವುಗಳಲ್ಲಿನ “ ಪೋಷಕಾಂಶ ಮೌಲ್ಯ “ ಗಳ ಬಗ್ಗೆ ಪ್ರಶ್ನಿಸಿದಾಗ, “ ಸಮತೋಲಿತ ಆಹಾರ ಸೇವನೆ “ ಯತ್ತ ತಾವು ಗಮನ ಹರಿಸುವುದಾಗಿ ಉತ್ತರಿಸುವ ಸಂಸ್ಥೆಗಳು, ಅತಿಯಾದ ಸಕ್ಕರೆಯ ಅಂಶಗಳಿರುವ ಲಘುಪಾನೀಯಗಳಿಗೆ ಮತ್ತು ಸಮತೋಲಿತ ಆಹಾರ ಸೇವನೆಗೆ ಏನು ಸಂಬಂಧವಿದೆ ಎನ್ನುವ ವಿಚಾರವನ್ನೇ ಅರ್ಥೈಸಿಕೊಂಡಿಲ್ಲ ಎನ್ನುವುದರಲ್ಲಿ ಸಂದೇಹವಿಲ್ಲ.
                                  
ಅದೇನೇ ಇರಲಿ, ಜಂಕ್ ಫುಡ್ ಗಳು, ಲಘುಪಾನೀಯಗಳು ಮತ್ತು ವೈವಿಧ್ಯಮಯ ಸ್ವಾದಿಷ್ಟ ಸಿಹಿತಿಂಡಿಗಳ ತಯಾರಕರು ತಮ್ಮ ಉತ್ಪನ್ನಗಳ ಬಗ್ಗೆ ಏನನ್ನೇ ಹೇಳಿದರೂ, ಇಂತಹ ಆಹಾರಗಳ ಸೇವನೆಯನ್ನು ವರ್ಜಿಸುವುದು ಅಥವಾ ಕನಿಷ್ಠಪಕ್ಷ ನಿಯಂತ್ರಿಸುವುದು ನಿಮ್ಮ ಆರೋಗ್ಯದ ಹಿತದೃಷ್ಠಿಯಿಂದ ಅತ್ಯಂತ ಉಪಯುಕ್ತವೆನಿಸಲಿರುವುದು. ಅಂತೆಯೇ ವೈದ್ಯಕೀಯ ತಜ್ಞರು ಮತ್ತು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಎಚ್ಚರಿಕೆಯನ್ನು ಅರ್ಥಿಸಿಕೊಂಡು, ಇವರ ಸಲಹೆಯನ್ನು ಪರಿಪಾಲಿಸುವುದು ನಿಸ್ಸಂದೇಹವಾಗಿಯೂ ಆರೋಗ್ಯಕರ ಎನಿಸುವುದು.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು. 






No comments:

Post a Comment