Monday, May 18, 2015

PUTTUR : ROAD WIDENING PROBLEMS





ಪುತ್ತೂರು : ರಸ್ತೆಗಳ ವಿಸ್ತರಣೆ- ಅಭಿವೃದ್ಧಿಗೆ ಅಡ್ಡಿಯಾಗುತ್ತಿರುವ ಅಡಚಣೆಗಳು  

ಇತ್ತೀಚೆಗಷ್ಟೇ ನಗರಸಭೆಯಾಗಿ ಮೇಲ್ದರ್ಜೆಗೆ ಏರಿದ್ದ ಪುತ್ತೂರು ನಗರದ ವ್ಯಾಪ್ತಿಯಲ್ಲಿರುವ ಬಹುತೇಕ ರಸ್ತೆಗಳು ಇದೀಗ ಜನ- ವಾಹನಗಳ ದಟ್ಟಣೆಯಿಂದಾಗಿ ತುಂಬಿ ತುಳುಕುತ್ತಿವೆ. ಕೇವಲ ವಾಹನಗಳು ಮಾತ್ರವಲ್ಲ, ಪಾದಚಾರಿಗಳೂ ಈ ಸಮಸ್ಯೆಯಿಂದ ಹೈರಾಣಾಗಿರುವುದು ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ತಿಳಿಯದ ವಿಚಾರವೇನಲ್ಲ. ಆದರೆ ಯಾವುದೇ ರೀತಿಯ ಯೋಜನೆಯನ್ನು ಹಮ್ಮಿಕೊಳ್ಳದೇಅಡ್ಡಾದಿಡ್ಡಿಯಾಗಿ ಬೆಳೆದಿದ್ದ ಪುತ್ತೂರು ಪಟ್ಟಣವು, ಇದೀಗ ಸುಗಮ ಸಂಚಾರಕ್ಕೆ ಅನುಕೂಲವಾಗುವಂತಹ ರಸ್ತೆಗಳೇ ಇಲ್ಲದ ಕಾರಣದಿಂದಾಗಿ ಪ್ರತಿನಿತ್ಯ  ಅಯಾಚಿತ ಸಮಸ್ಯೆಗಳಿಗೆ ಈಡಾಗುತ್ತಿದೆ.

ಸಭೆ- ಸಮಾರಂಭಗಳು ಇರುವ ದಿನಗಳಲ್ಲಂತೂ, ನಗರದ ರಸ್ತೆಗಳಲ್ಲಿ ವಾಹನಗಳಲ್ಲಿ ಮಾತ್ರವಲ್ಲ, ನಡೆದುಕೊಂಡು ಹೋಗಲೂ ಹರಸಾಹಸವನ್ನೇ ನಡೆಸಬೇಕಾಗುತ್ತಿದೆ. ಶಾಲಾವಿದ್ಯಾರ್ಥಿಗಳು, ಮಹಿಳೆಯರು ಮತ್ತು ವಯೋವೃದ್ಧರು ಸ್ಥಳೀಯ ರಸ್ತೆಗಳಲ್ಲಿ ನಿರಾತಂಕವಾಗಿ ನಡೆದಾಡಲು ಸಾಧ್ಯವಾಗದ ಕಾರಣದಿಂದಾಗಿ ಆತಂಕಿತರಾಗಿದ್ದಾರೆ. ಈ ಸಮಸ್ಯೆಗೆ ಅನೇಕ ಕಾರಣಗಳೂ ಇವೆ.

ವಿಸ್ತರಿಸಲ್ಪಡದ ರಸ್ತೆಗಳು

ಒಂದಾನೊಂದು ಕಾಲದಲ್ಲಿ ಎತ್ತಿನಗಾಡಿಗಳ ಸಂಚಾರಕ್ಕೆ ಸೀಮಿತವಾಗಿದ್ದ ಪುತ್ತೂರಿನ ರಸ್ತೆಗಳು, ಗತಕಾಲದ ಮೋಟಾರು ವಾಹನಗಳು ಸಂಚರಿಸಲು ಆರಂಭವಾದ ಬಳಿಕ ಕಿಂಚಿತ್ ಅಭಿವೃದ್ಧಿಗೊಂಡಿದ್ದವು. ಕಾಲಕ್ರಮೇಣ ವಾಹನಗಳ ಸಂಖ್ಯೆ ಹೆಚ್ಚಿದ್ದರೂ, ಬಹುತೇಕ ರಸ್ತೆಗಳ ಅಂಚಿನಲ್ಲೇ ನಿರ್ಮಿಸಲಾಗಿದ್ದ ವಸತಿ ಹಾಗೂ ವಾಣಿಜ್ಯ ಕಟ್ಟಡಗಳಿಂದಾಗಿ ಸ್ಥಳೀಯ ರಸ್ತೆಗಳು ಯಥಾಸ್ಥಿತಿಯಲ್ಲೇ ಉಳಿದುಕೊಂಡಿದ್ದವು. ಉದಾಹರಣೆಗೆ ನಗರದ ಪ್ರಧಾನ ರಸ್ತೆಯು ಅಂದಿನ ದಿನಗಳಲ್ಲಿ ಮಡಿಕೇರಿ - ಮಂಗಳೂರು ರಾಜರಸ್ತೆಯೆಂದು ಕರೆಯಲ್ಪಡುತ್ತಿದ್ದರೂಇದಕ್ಕೆ ರಾಜಯೋಗ ಮಾತ್ರ ಲಭಿಸಿರಲೇ ಇಲ್ಲ. ಪ್ರಧಾನ ರಸ್ತೆಯ ಗತಿ ಹೀಗಿದ್ದಲ್ಲಿ, ಉಳಿದ ಸಣ್ಣಪುಟ್ಟ ರಸ್ತೆಗಳ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ.

 ಗತದಶಕದಲ್ಲಿ ಎ.ಡಿ.ಬಿ ಸಾಲ ಆಧಾರಿತ ಕುಡ್ಸೆಂಪ್ ಯೋಜನೆಗಳು ಅನುಷ್ಠಾನಗೊಳ್ಳುವ ಮುನ್ನ ಅವಸಾನದ ಅಂಚನ್ನು ತಲುಪಿದ್ದ ಆಯ್ದ ರಸ್ತೆಗಳನ್ನು ಸಾಧ್ಯವಿರುವಷ್ಟು ವಿಸ್ತರಿಸಿ ಪುನರ್ನವೀಕರಿಸಲಾಗಿತ್ತು. ತದನಂತರ ಸ್ಥಳೀಯ ರಸ್ತೆಗಳು ತಕ್ಕಮಟ್ಟಿಗೆ ಸಂಚಾರಯೋಗ್ಯ ಎನಿಸಿದ್ದುದು ಸುಳ್ಳೇನಲ್ಲ. ಈ ಯೋಜನೆಯ ಅನುಷ್ಠಾನಕ್ಕೆ ಮುನ್ನ ಮುಂದಿನ ೨೫ ವರ್ಷಗಳಲ್ಲಿ ಬೆಳೆಯಲಿರುವ ಪುತ್ತೂರಿನ ಜನ - ವಾಹನಗಳ ಸಂಖ್ಯೆ ಮತ್ತು ಅನ್ಯ ವಿಚಾರಗಳನ್ನು ಗಮನದಲ್ಲಿರಿಸಿಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರೂ, ಕೇವಲ ೧೦ ವರ್ಷಗಳು ಕಳೆಯುವಷ್ಟರಲ್ಲೇ ಈ ರಸ್ತೆಗಳು ಜನ - ವಾಹನಗಳ ದಟ್ಟಣೆಯನ್ನು ಭರಿಸಲಾಗುತ್ತಿಲ್ಲ ಎನ್ನುವುದು ಕೂಡಾ ಅಷ್ಟೇ ಸತ್ಯ!.

ಇನ್ನು ನಗರದ ಅನ್ಯ ಸಂಪರ್ಕ ರಸ್ತೆಗಳು ಮತ್ತು ಸಣ್ಣಪುಟ್ಟ ರಸ್ತೆಗಳನ್ನು ವಿಸ್ತರಿಸಬೇಕಿದ್ದಲ್ಲಿ, ಇವುಗಳ ಇಕ್ಕೆಲಗಳಲ್ಲಿರುವ ಜಮೀನು – ಕಟ್ಟಡಗಳ ಮಾಲಕರು ಒಂದಿಷ್ಟು ಜಮೀನನ್ನು ಬಿಟ್ಟುಕೊಡಬೇಕಾಗುವುದು. ಅಥವಾ ನಗರಸಭೆಯು ಅವಶ್ಯಕ ಪ್ರಮಾಣದ ಜಮೀನನ್ನು ಸೂಕ್ತ ಪರಿಹಾರವನ್ನು ನೀಡಿ ಖರೀದಿಸಬೇಕಾಗುವುದು. ಪುತ್ತೂರಿನ ಬಹುತೇಕ ರಸ್ತೆಗಳು ಅಗಲ ಕಿರಿದಾಗಿರುವುದರಿಂದ, ರಸ್ತೆಗಳ ವಿಸ್ತರಣೆಗಾಗಿ ಜಮೀನನ್ನು ಖರೀದಿಸುವುದು ಅನಿವಾರ್ಯವೆನಿಸಿದರೂ, ಸಂಪನ್ಮೂಲಗಳ ಕೊರತೆಯಿಂದ ಬಳಲುತ್ತಿರುವ ನಗರಸಭೆಯು ಜಮೀನುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದೆ. ಏಕೆಂದರೆ ಮೂಲ ಸೌಕರ್ಯಗಳ ಅಭಿವೃದ್ಧಿ ಯೋಜನೆಗಳಿಗಾಗಿ ಕೇಂದ್ರ – ರಾಜ್ಯ ಸರ್ಕಾರಗಳ ಅನುದಾನಗಳನ್ನೇ ಅವಲಂಬಿಸಿರುವ ನಗರಸಭೆಯು, ಲಭ್ಯ ಲಕ್ಷಾಂತರ ರೂಪಾಯಿಗಳನ್ನು  ಪರಿಹಾರ ನೀಡುವ ಸಲುವಾಗಿ ಪಾವತಿಸಿದಲ್ಲಿ, ಮೂಲಸೌಕರ್ಯಗಳ ಅಭಿವೃದ್ಧಿ ಯೋಜನೆಗಳು ಮೂಲೆಗುಂಪಾಗುವುದರಲ್ಲಿ ಸಂದೇಹವಿಲ್ಲ.

ಹಲವಾರು ವರ್ಷಗಳ ಹಿಂದೆ ರಸ್ತೆಗಲ ವಿಸ್ತರಣೆಗಾಗಿ ಜಮೀನನ್ನು ಸ್ವಾಧೀನ ಪಡಿಸುವ ಅಥವಾ ಮಾಲಕರು ತಾವಾಗಿ ಬಿಟ್ಟುಕೊಡುವ ಪದ್ಧತಿ ಇರಲಿಲ್ಲ. ಆದರೆ ಇಂದು ಈ ಬಗ್ಗೆ ಸರ್ಕಾರಗಳು ಸೂಕ್ತ ನೀತಿನಿಯಮಗಳನ್ನು ರೂಪಿಸಿದ್ದರೂ, ಇವುಗಳನ್ನು ಉಲ್ಲಂಘಿಸುವ ಪ್ರಕರಣಗಳು ಸಾಕಷ್ಟಿವೆ.ಅದರಲ್ಲೂ  ನೂತನ ವಸತಿ – ವಾಣಿಜ್ಯ ಕಟ್ಟಡಗಳು ಮತ್ತು ಬಡಾವಣೆಗಳನ್ನು ನಿರ್ಮಿಸುವಾಗ ಇಂತಹ ನಿಯಮಗಳನ್ನು ಉಲ್ಲಂಘಿಸುವ ವ್ಯಕ್ತಿಗಳು, ಸಾಮಾನ್ಯವಾಗಿ ಭ್ರಷ್ಟ ಅಧಿಕಾರಿಗಳ ನೆರವು ಅಥವಾ ರಾಜಕೀಯ ಪ್ರಭಾವವನ್ನು ಬಳಸುವುದು ಜನಸಾಮಾನ್ಯರಿಗೂ ತಿಳಿದಿದೆ. ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ, ಈ ಸಮಸ್ಯೆಯು ಪರಿಹಾರಗೊಳ್ಳದೇ ಇರುವುದರೊಂದಿಗೆ  ಇನ್ನಷ್ಟು ತೊಂದರೆಗಳಿಗೆ ಕಾರಣವೆನಿಸುತ್ತದೆ.

ಇಷ್ಟು ಮಾತ್ರವಲ್ಲ, ಇತ್ತೀಚಿನ ಕೆಲವರ್ಷಗಳಿಂದ ನೂತನ ವಸತಿ – ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಮುನ್ನ ಸ್ಥಳೀಯ ಸಂಸ್ಥೆಯ ಅನುಮತಿಯನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ನೀಡುವ ನಕ್ಷೆಯಲ್ಲಿ, ಕಟ್ಟಡದ ತಳಅಂತಸ್ತಿನಲ್ಲಿ ವಾಹನಗಳ ನಿಲುಗಡೆಗಾಗಿ ಸ್ಥಳವನ್ನು ಮೀಸಲಿಟ್ಟಿರುವುದನ್ನು ತೋರಿಸಲಾಗುತ್ತದೆ. ಆದರೆ ಕಟ್ಟಡ ಸಿದ್ಧಗೊಂಡ ಬಳಿಕ ಈ ಜಾಗವನ್ನು ಅಂಗಡಿಗಳ ನಿರ್ಮಾಣಕ್ಕಾಗಿ ಬಳಸಲಾಗುತ್ತಿದೆ. ವಿಶೇಷವೆಂದರೆ ಇಂತಹ ಅಂಗಡಿಗಳ ಮಾಲಕರು ಅಥವಾ ಬಾಡಿಗೆದಾರರಿಗೆ ತಮ್ಮ ವ್ಯಾಪಾರವನ್ನು ನಡೆಸಲು ಪರವಾನಿಗೆಯನ್ನು ನೀಡುತ್ತವೆ!. ತತ್ಪರಿಣಾಮವಾಗಿ ಇಂತಹ ಕಟ್ಟಡಗಳ ಮುಂದಿರುವ ರಸ್ತೆಗಳಲ್ಲಿ ಹಲವಾರು ವಾಹನಗಳು  ತಂಗುವುದರಿಂದ, ಜನ – ವಾಹನಗಳ ಸುಗಮ ಸಂಚಾರಕ್ಕೆ ಅದಚನೆಯಾಗುತ್ತದೆ. ಈ ಬಗ್ಗೆ ದೂರು ನೀಡಿದರೂ ಸೂಕ್ತ ಕ್ರಮಗಳನ್ನು ಕೈಗೊಳ್ಳದ ಅಧಿಕಾರಿಗಳು, ಇವರ ವಾಣಿಜ್ಯ ಪರವಾನಿಗೆಯನ್ನು ಮಾತ್ರ ರದ್ದುಪಡಿಸದೇ ಇರುವುದು ನಂಬಲು ಅಸಾಧ್ಯವೆನಿಸುತ್ತದೆ.

ಇದಲ್ಲದೇ ನಗರದ ಕೆಲ ಒಳರಸ್ತೆಗಳನ್ನು ಪುನರ್ನವೀಕರಿಸಿದರೂ, ಇವುಗಳ ಇಕ್ಕೆಲಗಳಲ್ಲಿ ಮಳೆನೀರು ಹರಿವ ಚರಂಡಿಗಳನ್ನು ನಿರ್ಮಿಸಿಲ್ಲ ಎಂದು ಅನೇಕರು ದೂರುತ್ತಾರೆ. ಇಂತಹ ರಸ್ತೆಗಳು ಕೇವಲ ಒಂದು ಘನ ವಾಹನ ಸಂಚರಿಸುವಷ್ಟೇ ಅಗಲವಿದ್ದು, ಚರಂಡಿಗಳನ್ನು ನಿರ್ಮಿಸಿದಲ್ಲಿ ರಸ್ತೆ ಇನ್ನಷ್ಟು ಕಿರಿದಾಗಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಉಪಯುಕ್ತವೆನಿಸುತ್ತದೆ. ಇಂತಹ ರಸ್ತೆಗಳ ಇಕ್ಕೆಲಗಳ ನಿವಾಸಿಗಳು ಉದಾರ ಮನೋಭಾವದಿಂದ ಒಂದಿಷ್ಟು ಜಮೀನನ್ನು ನೀಡಿದಲ್ಲಿ,  ರಸ್ತೆಯೊಂದಿಗೆ ಚರಂಡಿಗಳ ನಿರ್ಮಾಣಕ್ಕೆ ಅನುಕೂಲವಾಗುತ್ತದೆ. ಜೊತೆಗೆ ರಸ್ತೆಗಳು ಸುದೀರ್ಘಕಾಲ ಬಾಳ್ವಿಕೆ ಬರುತ್ತವೆ.

ಕೊನೆಯ ಮಾತು

ಅದೇನೇ ಇರಲಿ, ಪ್ರಸ್ತುತ ಪುತ್ತೂರು ನಗರಸಭೆಯು ರಸ್ತೆಗಳ ವಿಸ್ತರಣೆಗಾಗಿ ಯೋಜನೆಗಳನ್ನು ಹಮ್ಮಿಕೊಳ್ಳುವ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ. ಜೊತೆಗೆ ರಸ್ತೆಗಳ ವಿಸ್ತರಣೆಗಾಗಿ ಒಂದಿಷ್ಟು ಜಮೀನನ್ನು ಬಿಟ್ಟುಕೊಡುವಂತೆ ಮನವೊಲಿಸಬೇಕಿದೆ. ಇದಕ್ಕೂ ಮುನ್ನ ಅನಧಿಕೃತ ಬಡಾವಣೆಗಳು ಹಾಗೂ ವಾಹನಗಳ ತಂಗುದಾಣಕ್ಕಾಗಿ ಸ್ಥಳವನ್ನು ಮೀಸಲಿಡದ ವಾಣಿಜ್ಯ ಮತ್ತು ಬಹುಮಹಡಿ ಕಟ್ಟಡಗಳ ಮಾಲಕರ ವಿರುದ್ಧ ಕಾನೂನುಕ್ರಮಗಳನ್ನು ಕೈಗೊಳ್ಳಬೇಕಿದೆ. ಅಧಿಕಾರಿಗಳು ಇಂತಹ ಕಾರ್ಯಾಚರಣೆಯನ್ನು ನಡೆಸಿದಲ್ಲಿ ಮತ್ತು ಜನಸಾಮಾನ್ಯರೂ ಇದಕ್ಕೆ ಸ್ಪಂದಿಸಿದಲ್ಲಿ, ಅಗಲಕಿರಿದಾದ ರಸ್ತೆಗಳಿಂದ ಉದ್ಭವಿಸುವ ಸಮಸ್ಯೆಗಳು ನಿಶ್ಚಿತವಾಗಿಯೂ ಅಂತ್ಯಗೊಳ್ಳಲಿವೆ.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 



No comments:

Post a Comment