Friday, May 22, 2015

DHANALAKSHMI BHAAGYA FOR KARNATAKA MLA'S.

           ಕರ್ನಾಟಕದ ಶಾಸಕರಿಗೆ ಧನಲಕ್ಷ್ಮೀ ಭಾಗ್ಯ !                  

ರಾಜ್ಯದ ಪ್ರಜೆಗಳ ಸೇವೆ ಮಾಡುವ ಸಲುವಾಗಿಯೇ ತಾವು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿರುವುದಾಗಿ ಘಂಟಾಘೋಷವಾಗಿ ಸಾರುವ ನಮ್ಮ ನೇತಾರರು, ತಾವು ಮಾಡುತ್ತಿರುವುದು ಸಮಾಜಸೇವೆಯೇ ಹೊರತು ಇದೊಂದು ಉದ್ಯೋಗವಲ್ಲ ಎಂದು ಪದೇಪದೇ ಹೇಳುವುದನ್ನು ನೀವೂ ಕೇಳಿರಲೇಬೇಕು. ರಾಜ್ಯದ ರಾಜಕಾರಣಿಗಳು ಮಾಡುತ್ತಿರುವ “ ಸಮಾಜಸೇವೆ “ ಗೆ, ಉತ್ತಮ ಉದಾಹರಣೆಯೊಂದು ಇಲ್ಲಿದೆ.

ಕರ್ನಾಟಕದ ಜನತೆಗೆ ( ಮತದಾರರಿಗೆ ) ಸದಾ ಒಂದಲ್ಲ ಒಂದು " ಭಾಗ್ಯ " ವನ್ನು ಕೊಡುಗೆಗಳ  ರೂಪದಲ್ಲಿ ನೀಡುತ್ತಿರುವ ರಾಜ್ಯದ ಶಾಸಕರು, ಇತ್ತೀಚಿಗೆ ತಮಗೊಂದು ಭರ್ಜರಿ ಕೊಡುಗೆಯನ್ನು ತಾವೇ ಮಂಜೂರು ಮಾಡಿಕೊಂಡು ಕೃತಾರ್ಥರಾಗಿದ್ದಾರೆ. ವಿಶೇಷವೆಂದರೆ ಈ ಕೊಡುಗೆಯನ್ನು ವಿಧಾನಸಭೆಯಲ್ಲಿ ಮಂಡಿಸಿದಾಗ, ಪ್ರತಿಯೊಂದು ವಿಚಾರದಲ್ಲೂ ಹಾವು ಮುಂಗುಸಿಗಳಂತೆ ಕಾದಾಡುವ ಆಡಳಿತ ಮತ್ತು ವಿರೋಧ ಪಕ್ಷಗಳ ಶಾಸಕರು ಸದ್ದುಗದ್ದಲಗಳಿಲ್ಲದೇ ಇದನ್ನು ಅಂಗೀಕರಿಸಿದ್ದಾರೆ. ತತ್ಪರಿಣಾಮವಾಗಿ ನಮ್ಮ ಶಾಸಕರು ಐದು ವರ್ಷಗಳ ತಮ್ಮ ಆಡಳಿತಾವಧಿಯನ್ನು ಪರಿಪೂರ್ಣಗೊಳಿಸುವಾಗ, ಕೋಟ್ಯಾಧಿಪತಿಗಳಾಗಲಿದ್ದಾರೆ. ಕಾರಣಾಂತರಗಳಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದಲ್ಲಿ ಅಥವಾ ಸ್ಪರ್ದಿಸಿ ಸೋತಲ್ಲಿ, ಮಾಜಿ ಶಾಸಕರಾಗಿ ಕೈತುಂಬಾ ಪಿಂಚಣಿ ಮತ್ತು ಹಲವಾರು ವಿಧದ ಇತರ ಭತ್ಯೆಗಳನ್ನು ಪಡೆಯುತ್ತಾ ನಿಶ್ಚಿಂತೆಯಿಂದ ಜೀವಿಸಲಿದ್ದಾರೆ!.

ಉತ್ತಮ ಉದ್ಯೋಗ

ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರಯ್ಯಾ ಎನ್ನುವ ನುಡಿಮುತ್ತುಗಳು,ನಮ್ಮ ದೇಶದ  ರಾಜಕೀಯ ಕ್ಷೇತ್ರಕ್ಕೆ ಅನ್ವರ್ಥವೆನಿಸುತ್ತದೆ. ಏಕೆಂದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಕಷ್ಟು ಶ್ರಮಿಸಿ ಉನ್ನತ ಶಿಕ್ಷಣವನ್ನು ಪಡೆದರೂ, ಕೈತುಂಬಾ ಸಂಬಳ ಸಿಗಬಲ್ಲ ಉತ್ತಮ ಉದ್ಯೋಗ ಲಭಿಸುವುದು ಸುಲಭವೇನಲ್ಲ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಯಾವುದೇ ಶೈಕ್ಷಣಿಕ ಅರ್ಹತೆಗಳು, ಅನುಭವ ಮತ್ತು ಬುದ್ಧಿವಂತಿಕೆಗಳು ಇಲ್ಲದಿದ್ದರೂ, ಪ್ರತಿ ತಿಂಗಳಿನಲ್ಲೂ   ಸಹಸ್ರಾರು ರೂಪಾಯಿಗಳ  ಮಾಸಿಕ ವೇತನ, ವೇತನಕ್ಕಿಂತ ಹಲವಾರು ಪಟ್ಟು ಅಧಿಕ ಭತ್ಯೆಗಳು, ಮಾಸಿಕ ವೇತನಕ್ಕಿಂತ ಅಧಿಕ ಪಿಂಚಣಿ  ಹಾಗೂ  ಅನ್ಯ ಸವಲತ್ತುಗಳಲ್ಲದೇ, ಜೀವನ ಪರ್ಯಂತ ನಿವೃತ್ತಿ ವೇತನ  ಮತ್ತು ಇತರ ಹಲವಾರು ಸೌಲಭ್ಯಗಳನ್ನು ಗಳಿಸಬಲ್ಲ ಲಾಭದಾಯಕ ಉದ್ಯೋಗವೊಂದು ಇರುವುದು ನಿಮಗೂ ತಿಳಿದಿರಲಾರದು. ಈ ಉದ್ಯೋಗವನ್ನು ಗಳಿಸಬಲ್ಲ ಸಾಮರ್ಥ್ಯ ಇರುವವರು ಕೇವಲ ಐದು ವರ್ಷಗಳ ಕಾಲ ದುಡಿದರೆ ಅಥವಾ ದುಡಿದಂತೆ ನಟಿಸಿದರೆ ಸಾಕು, ಮುಂದೆ ಅಜೀವ ಪರ್ಯಂತ ಪಿಂಚಣಿ ಮತ್ತು ಅನ್ಯ ಉಚಿತ ಸೌಲಭ್ಯಗಳನ್ನು ಗಳಿಸುತ್ತಾ ನಿಶ್ಚಿಂತೆಯಿಂದ  ಬದುಕುವ ಸುವರ್ಣಾವಕಾಶ ಪ್ರಾಪ್ತಿಯಾಗಲಿದೆ.

ಆದರೆ ಈ ಉದ್ಯೋಗ ದೊರೆಯಬೇಕಿದ್ದಲ್ಲಿ ಒಂದಿಷ್ಟು ರಾಜಕೀಯ ಪ್ರಭಾವ, ಸಾಕಷ್ಟು ಧನಬಲ ಮತ್ತು ಒಂದಿಷ್ಟು ತೋಳ್ಬಲಗಳನ್ನು ಹೊಂದಿರುವುದು ಅನಿವಾರ್ಯವೆನಿಸುತ್ತದೆ. ಜೊತೆಗೆ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲ್ಲಲೇಬೇಕಾಗುತ್ತದೆ. ಕೇವಲ ಒಂದುಬಾರಿ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಐದು ವರ್ಷಗಳ ಅವಧಿಯನ್ನು ಪರಿಪೂರ್ಣಗೊಳಿಸಿದಲ್ಲಿ, ಮುಂದೆ ನಿಶ್ಚಿಂತೆಯಿಂದ ನಿವೃತ್ತ ಜೀವನವನ್ನು ಸಾಗಿಸಬಹುದಾಗಿದೆ. ವಿಶೇಷವೆಂದರೆ  ಮಧ್ಯಂತರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದ ಮರುದಿನವೇ  ಕಾರಣಾಂತರಗಳಿಂದ ವಿಧಾನಸಭೆಯು ವಿಸರ್ಜಿಸಲ್ಪಟ್ಟರೂ,” ಏಕ್ ದಿನ್ ಕಾ ಸುಲ್ತಾನ್ “ ಎನಿಸುವ ಶಾಸಕರನ್ನೂ, ಪಿಂಚಣಿಯನ್ನು ಪಡೆಯುವ  ಸಲುವಾಗಿ  ( ಒಂದು ಅವಧಿಯನ್ನು ಪೂರೈಸಿದ ) ಮಾಜಿ ಶಾಸಕರನ್ನಾಗಿ ಪರಿಗಣಿಸಲಾಗುತ್ತದೆ!. ಅಂತೆಯೇ ಸೋತ ಅಭ್ಯರ್ಥಿಗಳು ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿ, ತನ್ನ ಪರವಾಗಿ ತೀರ್ಪು ಪ್ರಕಟವಾಗುವ ಸಂದರ್ಭದಲ್ಲಿ ವಿಧಾನಸಭೆಯ ಐದು ವರ್ಷಗಳ ಅವಧಿ ಪರಿಪೂರ್ಣಗೊಂಡಿರುವ ಕಾರಣದಿಂದಾಗಿ  ಶಾಸಕರಾಗಿ ಕರ್ತವ್ಯ ನಿರ್ವಹಿಸಲಾಗದ “ ಶಾಸಕ “ ರನ್ನೂ ಮಾಜಿ ಶಾಸಕರೆಂದು ಪರಿಗಣಿಸಲಾಗುತ್ತದೆ. ಇದೀಗ ನೀವೇ ಹೇಳಿ, ಇದಕ್ಕಿಂತ ಉತ್ತಮ ಅನ್ಯ ಉದ್ಯೋಗವೊಂದು ನಮ್ಮ ಅಥವಾ ಅನ್ಯ ಯಾವುದಾದರೂ ದೇಶದಲ್ಲಿ ಇದೆಯೇ ?.

ವೇತನಕ್ಕಿಂತ ಅಧಿಕ ಪಿಂಚಣಿ

“ ಹುಟ್ಟಿದರೇ ಕನ್ನಡನಾಡಿನಲ್ಲಿ ಹುಟ್ಟಬೇಕು, ಮೆಟ್ಟಿದರೇ ಕನ್ನಡ ನೆಲವನ್ನು ಮೆಟ್ಟಬೇಕು “ ಎನ್ನುವ ಜನಪ್ರಿಯ ಚಿತ್ರಗೀತೆಯಂತೆ, ಕನ್ನಡ ನಾಡಿನಲ್ಲಿ ಹುಟ್ಟಿ ಒಂದುಬಾರಿ ಶಾಸಕರಾಗಿ ಆಯ್ಕೆಯಾದಲ್ಲಿ, ನಿಮ್ಮ ಅದೃಷ್ಟ ಖುಲಾಯಿಸುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ಇತ್ತೀಚಿಗೆ ಜರಗಿದ್ದ ವಿಧಾನಸಭಾ( ಬಜೆಟ್ ) ಅಧಿವೇಶನದಲ್ಲಿ ನಮ್ಮ ಶಾಸಕರು, ವಿಧಾನ ಸಭಾ ಅಧ್ಯಕ್ಷರು ಮತ್ತು ಮಂತ್ರಿವರ್ಯರುಗಳ  ಸಂಬಳ, ಭತ್ಯೆಗಳು, ಅನ್ಯ ಸವಲತ್ತುಗಳು ಮತ್ತು ಪಿಂಚಣಿಗಳನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ವಿಶೇಷವೆಂದರೆ ವಿಧಾನ ಸಭೆಯಲ್ಲಿ ಮಂಡಿಸಲಾಗಿದ್ದ ಕರ್ನಾಟಕ ವಿಧಾನಮಂಡಲಗಳ ಸದಸ್ಯರ ವೇತನ, ಪಿಂಚಣಿ ಮತ್ತು ಭತ್ಯೆಗಳ ( ತಿದ್ದುಪಡಿ ) ವಿಧೇಯಕ ೨೦೧೫ ನ್ನು ಸೌಜನ್ಯಕ್ಕಾಗಿಯಾದರೂ ಚರ್ಚಿಸದೇ, ಕ್ಷಣಮಾತ್ರದಲ್ಲಿ ಅಂಗೀಕರಿಸಲಾಗಿತ್ತು. ಅಂತೆಯೇ ಇದೀಗ ಈ ತಿದ್ದುಪಡಿಯು ರಾಜ್ಯಪಾಲರ ಅಂಕಿತದೊಂದಿಗೆ ಅನ್ಗೀಕರಿಸಲ್ಪತ್ತಿದ್ದು, ಇದೇ ವರ್ಷದ ಎಪ್ರಿಲ್ ೧ ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆಬರಲಿದೆ.

ಸರ್ವಾನುಮತದ ಅಂಗೀಕಾರ

ಅಪರೂಪದಲ್ಲೊಮ್ಮೆ ನಡೆಯುವ ವಿಧಾನಸಭಾ ಅಧಿವೇಶನದ ಕಲಾಪಗಳ ಸಂದರ್ಭದಲ್ಲಿ ಸದಾ ಸದ್ದುಗದ್ದಲ, ಧರಣಿ, ಪ್ರತಿಭಟನೆ ಮತ್ತು ಸಭಾತ್ಯಾಗ ಮಾಡುವ ವಿರೋಧ ಪಕ್ಷಗಳ ಶಾಸಕರು ಮತ್ತು ಅವಕಾಶ ದೊರೆತಾಗಳೆಲ್ಲಾ ಇವರನ್ನು ಜರೆಯುವ ಮತ್ತು ತೊಡೆ- ತೋಳುಗಳನ್ನು ತಟ್ಟಿ ಹಂಗಿಸುವ ಆಡಳಿತ ಪಕ್ಷದ ಶಾಸಕರ ನಡುವೆ, ಯಾವುದೇ ವಿಚಾರದ ಬಗ್ಗೆ ಏಕಮತ ಮೂಡುವುದಿಲ್ಲ. ಆದರೆ ತಮ್ಮ ಸಂಬಳ ಸವಲತ್ತುಗಳನ್ನು ಹೆಚ್ಚಿಸಿಕೊಳ್ಳುವ ವಿಚಾರದಲ್ಲಿ ಮಾತ್ರ ಇವರಲ್ಲಿ ಭಿನ್ನಾಭಿಪ್ರಾಯಗಳೇ ಉದ್ಭವಿಸುವುದಿಲ್ಲ!.

ಧನಲಕ್ಷ್ಮೀ ಭಾಗ್ಯ

ಈ ಬಾರಿ ನಮ್ಮ ಶಾಸಕರ ಮಾಸಿಕ ವೇತನವನ್ನು ಕೇವಲ ಶೇ.೨೫ ರಷ್ಟು ಅಂದರೆ ಮಾಸಿಕ ೨೦ ಸಾವಿರ ರೂ.ಗಳಿಂದ ೨೫ ಸಾವಿರಕ್ಕೆ ಏರಿಸಲಾಗಿದೆ. ಆದರೆ ನಿವೃತ್ತ ಶಾಸಕರ ಮಾಸಿಕ ಪಿಂಚಣಿಯನ್ನು ೨೫ ಸಾವಿರದಿಂದ ೪೦ ಸಾವಿರಕ್ಕೆ ಹೆಚ್ಚಿಸಲಾಗಿದೆ. ಸಂಚಾರ ಭತ್ಯೆಯನ್ನು ಪ್ರತಿ ಕಿ.ಮೀ. ಗೆ ೨೦ ರಿಂದ ೨೫ ರೂ.ಗಳಿಗೆ, ದೈನಂದಿನ ಭತ್ಯೆಯನ್ನು ರಾಜ್ಯದಲ್ಲಿ  ೧ ಸಾವಿರದಿಂದ ೨ ಸಾವಿರಕ್ಕೆ ಹಾಗೂ ಹೊರರಾಜ್ಯಗಳಲ್ಲಿ ೧.೫ ರಿಂದ ೨ ಸಾವಿರಕ್ಕೆ, ಕ್ಷೇತ್ರ ಪ್ರವಾಸ ಭತ್ಯೆಯನ್ನು ಮಾಸಿಕ ೨೫ ರಿಂದ ೪೦ ಸಾವಿರಕ್ಕೆ, ದೂರವಾಣಿ ವೆಚ್ಚವನ್ನು ಮಾಸಿಕ ೧೫ ಸಾವಿರದಿಂದ ೨೦ ಸಾವಿರಕ್ಕೆ ಮತ್ತು ಕ್ಷೇತ್ರ ಭತ್ಯೆಯನ್ನು ಮಾಸಿಕ ೧೫ ರಿಂದ ೪೦ ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ತತ್ಪರಿಣಾಮವಾಗಿ ಇದುವರೆಗೆ ಮಾಸಿಕ ವೇತನ ಮತ್ತು ಭತ್ಯೆಗಳು ಸೇರಿದಂತೆ ಸುಮಾರು ೯೦ ಸಾವಿರ ರೂ. ಗಳಿಸುತ್ತಿದ್ದ ನಮ್ಮ ಶಾಸಕರು, ಇನ್ನು ಮುಂದೆ ಕನಿಷ್ಠ ೧.೪೦,೦೦೦ ಸಾವಿರ ರೂ.ಗಳನ್ನು ಪಡೆಯಲಿದ್ದಾರೆ!.  

ಅದೇ ರೀತಿಯಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರ ಮಾಸಿಕ ವೇತನವನ್ನು ೨೫ ರಿಂದ ೪೦ ಸಾವಿರ ರೂ. ಗಳಿಗೆ, ರಾಜ್ಯ ಸಚಿವರ ಮಾಸಿಕ ವೇತನವನ್ನು  ವೇತನವನ್ನು ೧೬ ರಿಂದ ೩೫ ಕ್ಕೆ ಮತ್ತು ಮುಖ್ಯಮಂತ್ರಿಗಳ ವೇತನವನ್ನು ೩೦ ರಿಂದ ೫೦ ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಇದರೊಂದಿಗೆ ಕ್ಯಾಬಿನೆಟ್ ಮತ್ತು ರಾಜ್ಯ ಸಚಿವರಿಗೆ  ನೀಡುವ ಮಾಸಿಕ ಮನೆಬಾಡಿಗೆಯನ್ನು ಮಾಸಿಕ ೪೦,೦೦೦ ರೂ.ಗಳಿಂದ ೮೦. ಸಾವಿರಕ್ಕೆ ಹಾಗೂ ಮನೆಗಳ ನಿರ್ವಹಣೆಯ ಭತ್ಯೆಯನ್ನು ೧೦ ರಿಂದ ೨೦ ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಸಚಿವರಿಗೆ ನೀಡಲಾಗುತ್ತಿದ್ದ ಇಂಧನದ ಪ್ರಮಾಣವನ್ನು ಮಾಸಿಕ ೭೫೦ ಲೀಟರ್ ನಿಂದ ೧೦೦೦ ಲೀ. ಗೆ ಹೆಚ್ಚಿಸಲಾಗಿದೆ. ಇದರೊಂದಿಗೆ ಸಂಚಾರ ಭತ್ಯೆಯನ್ನು ಪ್ರತಿ ಕಿ.ಮೀ. ಗೆ ೨೦ ರಿಂದ ೩೦ ರೂ.ಗಳಿಗೆ ಏರಿಸಲಾಗಿದೆ.

ಇಷ್ಟು ಮಾತ್ರವಲ್ಲ, ಶಾಸಕರ ಕ್ಷೇತ್ರ ಸಂಚಾರ ಭತ್ಯೆಯನ್ನು ೨೫ ರಿಂದ ೪೦ ಸಾವಿರಕ್ಕೆ, ದೂರವಾಣಿ ಭತ್ಯೆಯನ್ನು ೧೫ ರಿಂದ ೨೦ ಕ್ಕೆ ಮತ್ತು ಕ್ಷೇತ್ರ ಭತ್ಯೆಯನ್ನು ಮಾಸಿಕ ೧೫ ರಿಂದ ೪೦ ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ.

ಇದರೊಂದಿಗೆ ವಿಧಾನ ಪರಿಷತ್ತಿನ ಸಭಾಪತಿ ಮತ್ತು ವಿಧಾನ ಸಭೆಯ ಅಧ್ಯಕ್ಷರ ವೇತನ ಮತ್ತು ಭತ್ಯೆಗಳನ್ನು  ಮುಖ್ಯಮಂತ್ರಿಗಳ ವೇತನ ಹಾಗೂ ಭತ್ಯೆಗಳಿಗೆ  ಸಮನಾಗಿ ಹೆಚ್ಚಿಸಲಾಗಿದೆ. ಇದಲ್ಲದೇ ವಿರೋಧ ಪಕ್ಷದ ನಾಯಕ, ಉಪ ಸಭಾಪತಿ, ಉಪಾಧ್ಯಕ್ಷ ಮತ್ತು ಮುಖ್ಯ ಸಚೇತಕರ ವೇತನ – ಭತ್ಯೆಗಳನ್ನೂ ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.

ಇನ್ನು ಸದಾ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವ ಶಾಸಕರ ಮಾಸಿಕ ವೇತನವನ್ನು ೨೦ ಸಾವಿರ ರೂ.ಗಳಿಂದ ೨೫ ಸಾವಿರಕ್ಕೆ ಏರಿಸಿದ್ದಲ್ಲಿ, ಮಾಜಿ ಶಾಸಕರ ಮಾಸಿಕ ನಿವೃತ್ತಿ ವೇತನವನ್ನು ೨೫ ರಿಂದ ೪೦ ಸಾವಿರಕ್ಕೆ ಹೆಚ್ಚಿಸಲಾಗಿದೆ!.  ಒಂದು ಅವಧಿಯನ್ನು ಪೂರೈಸಿದ ಬಳಿಕ ಮುಂದಿನ ಅವಧಿಗೆ, ವರ್ಷವೊಂದಕ್ಕೆ ಒಂದು ಸಾವಿರದಂತೆ ಹೆಚ್ಚುವರಿ ನಿವೃತ್ತಿ ವೇತನವನ್ನೂ ನಮ್ಮ ಮಾಜಿ ಶಾಸಕರು ಪಡೆಯಲಿದ್ದಾರೆ. ( ಅರ್ಥಾತ್ ಮೂರು ಅವಧಿಗಳನ್ನು ಯಶಸ್ವಿಯಾಗಿ ಮುಗಿಸಿದ ಶಾಸಕರು, ಮಾಸಿಕ ೫೦ ಸಾವಿರ ರೂ. ಪಿಂಚಣಿಯನ್ನು ಪಡೆಯಲಿದ್ದಾರೆ!.) ಇದರೊಂದಿಗೆ ಆರೋಗ್ಯವಂತರಾಗಿದ್ದರೂ ಮಾಸಿಕ ೪ ಸಾವಿರ ರೂ. ವೈದ್ಯಕೀಯ ವೆಚ್ಚದ ಭತ್ಯೆ, ಜೊತೆಗೆ ಇವರ ಕುಟುಂಬದ ಅನ್ಯ ಸದಸ್ಯರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಪಾವತಿಸುತ್ತದೆ.ಇದಲ್ಲದೇ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಒಬ್ಬ ಸಹವರ್ತಿಯೊಂದಿಗೆ ಉಚಿತ ಪ್ರಯಾಣದ ಸವಲತ್ತು, ರೈಲು ಮತ್ತು ವಿಮಾನಗಳಲ್ಲಿ ಪ್ರಯಾಣಿಸಲು ವಾರ್ಷಿಕ ೧ ಲಕ್ಷ ರೂ., ನೀಡಲಾಗುತ್ತದೆ. ಮಾಜಿಗಳು ರೈಲು ಅಥವಾ ವಿಮಾನದಲ್ಲಿ ಸಂಚರಿಸದೆ ಇದ್ದರೂ, ಈ ಮೊತ್ತವನ್ನು ಅವರಿಗೆ ಪಾವತಿಸಲಾಗುತ್ತದೆ. ಮಾಜಿ ಶಾಸಕರು ಮೃತಪಟ್ಟ ಬಳಿಕ ಇವರ ಕುಟುಂಬದ ಸದಸ್ಯರೊಬ್ಬರಿಗೆ ಕುಟುಂಬ ಪಿಂಚಣಿ ದೊರೆಯುತ್ತದೆ.

ನಮ್ಮ ಶಾಸಕರ ವೇತನ, ಪಿಂಚಣಿ ಹಾಗೂ  ಭತ್ಯೆಗಳನ್ನು ಇದೀಗ ಏರಿಸಿದ ಪರಿಣಾಮವಾಗಿ, ಸರ್ಕಾರದ ಬೊಕ್ಕಸಕ್ಕೆ ಸುಮಾರು ೪೭.೫  ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದೆ.



ಗತಕಾಲದ ರಾಜಮಹಾರಾಜರನ್ನು ಮತ್ತು ಅವರಿಗೆ ಸರ್ಕಾರ ನೀಡುತ್ತಿದ್ದ “ ರಾಜಧನ “ ವನ್ನು ರದ್ದುಪಡಿಸಿ ದಶಕಗಳೇ ಕಳೆದಿವೆ. ಆದರೆ ಇದೀಗ ದೇಶದ ಬಹುತೇಕ ರಾಜ್ಯಗಳ ಶಾಸಕರು ಮತ್ತು ಸಂಸದರು ಪಡೆಯುತ್ತಿರುವ ಮಾಸಿಕ ವೇತನ ಹಾಗೂ ವಿವಿಧ ನಾಮಧೇಯದ ಭತ್ಯೆ ಮತ್ತು ಅನ್ಯ ಸವಲತ್ತುಗಳು ನಿಶ್ಚಿತವಾಗಿಯೂ ರಾಜಮಹಾರಾಜರನ್ನು ನಾಚಿಸುವಂತಿದೆ. ಇಷ್ಟೆಲ್ಲಾ ಆರ್ಥಿಕ ಸೌಲಭ್ಯಗಳನ್ನು ನಮ್ಮ ಶಾಸಕರು ಪಡೆಯುತ್ತಿದ್ದರೂ, ವರ್ಷದ ಕೆಲವೇ ದಿನಗಳ ಕಾಲ ನಡೆಯುವ ಸದನದ ಕಲಾಪದ ಸಂದರ್ಭದಲ್ಲಿ ಶಾಸಕರ ಆಸನಗಳು ಖಾಲಿಯಾಗಿರುವುದು ಮಾತ್ರ ನಂಬಲಸಾಧ್ಯವೆನಿಸುತ್ತದೆ.

ಕೊನೆಯ ಮಾತು

ಇತ್ತೀಚಿಗೆ ಪ್ರಧಾನಿ ಮೋದಿಯವರು  ದೇಶದ ಆರ್ಥಿಕತೆಗೆ ಹೊರೆಯೆನಿಸುತ್ತಿರುವ ಅಡುಗೆ ಅನಿಲದ ಸಹಾಯಧನವನ್ನು ತ್ಯಜಿಸುವಂತೆ  ಅನುಕೂಲಸ್ತ  ಜನರಿಗೆ ಕರೆನೀಡಿದ್ದರು. ಈ ಕರೆಗೆ ಸ್ಪಂದಿಸಿದ  ಕೇವಲ ಬೆರಳೆಣಿಕೆಯಷ್ಟು ಕೇಂದ್ರ ಸಚಿವರು ಮತ್ತಿತರ ಗಣ್ಯವ್ಯಕ್ತಿಗಳು ಸಹಾಯಧನದ ಅಡುಗೆ ಅನಿಲ ಜಾಡಿಗಳನ್ನು ತ್ಯಜಿಸಿದ್ದರು. ಪ್ರಸ್ತುತ ವಾರ್ಷಿಕ ಲಕ್ಷಾಂತರ ರೂಪಾಯಿಗಳನ್ನು ಅನಾಯಾಸವಾಗಿ ಗಳಿಸುತ್ತಿರುವ  ಕರ್ನಾಟಕದ ಎಷ್ಟು ಮಂದಿ ಶಾಸಕರು ಮತ್ತು ಸಂಸದರು ಸಹಾಯಧನ ಸಹಿತ ಅಡುಗೆ ಅನಿಲಜಾಡಿಗಳನ್ನು ತ್ಯಜಿಸಿದ್ದಾರೆ ಎನ್ನುವುದು, ಇವರನ್ನು ಚುನಾಯಿಸಿದ ಮತದಾರರಿಗೂ ತಿಳಿದಿಲ್ಲ. ಲಭ್ಯ ಮಾಹಿತಿಯಂತೆ ಅಧಿಕತಮ ಶಾಸಕರು ಮತ್ತು ಸಂಸದರು ಇದನ್ನು ತ್ಯಜಿಸಿಲ್ಲ ಹಾಗೂ ಪ್ರಾಯಶಃ ತ್ಯಜಿಸಲೂ ಸಿದ್ಧರಿಲ್ಲ!.

ರಾಜಕಾರಣಿಗಳ ದೃಷ್ಠಿಯಲ್ಲಿ ದೇಶಕ್ಕಾಗಿ ತ್ಯಾಗ ಮಾಡಬೇಕಾದವರು ಪ್ರಜೆಗಳೇ ಹೊರತು ನಮ್ಮನ್ನಾಳುವವರಲ್ಲ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು, ಆದರೆ ಕೆಲವರು ಮಾತ್ರ ಹೆಚ್ಚು ಸಮಾನರು!.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು











No comments:

Post a Comment