Thursday, June 4, 2015

MISLEADING ADVERTISEMENTS



ದಾರಿತಪ್ಪಿಸುವ ಜಾಹೀರಾತುಗಳಿಗೆ ಕಡಿವಾಣ ತೊಡಿಸಲೇಬೇಕು

ವಿಶೇಷವಾಗಿ ದೃಶ್ಯ ಮಾಧ್ಯಮಗಳಲ್ಲಿ ದಿನನಿತ್ಯ ಪ್ರಸಾರವಾಗುವ " ಮುಂಜಾನೆಯ ಉಪಾಹಾರಕ್ಕೆ ಆರೋಗ್ಯಕರ ಆಹಾರ " ಎನ್ನುವ ಘೋಷಣೆಯೊಂದಿಗೆ, ಖ್ಯಾತನಾಮ ಚಲನಚಿತ್ರ ನಟರು ರೂಪದರ್ಶಿಗಳಾಗಿರುವ " ಮ್ಯಾಗಿ ನೂಡಲ್ಸ್ " ನಾಮಧೇಯದ ನಿರುಪಯುಕ್ತ ಖಾದ್ಯವು ಇದೀಗ ಸಾಕಷ್ಟು ವಾದವಿವಾದಗಳಿಗೆ ಗ್ರಾಸವೆನಿಸಿದೆ. ಬಹುರಾಷ್ಟ್ರೀಯ ಸಂಸ್ಥೆಯೊಂದು ಭಾರತದಲ್ಲಿ ತಯಾರಿಸಿ ಮಾರಾಟ ಮಾಡುತ್ತಿರುವ ಮ್ಯಾಗಿ ನೂಡಲ್ಸ್ ನಲ್ಲಿ ಮೊನೊ ಸೋಡಿಯಂ ಗ್ಲೂಟಮೆಟ್ ಅರ್ಥಾತ್ ಅಜಿನೋಮೊಟೋ  ಎನ್ನುವ ರುಚಿವರ್ಧಕ ಕೃತಕ ರಾಸಾಯನಿಕ ದ್ರವ್ಯ ಮತ್ತು ಸೀಸದ ಅಂಶಗಳು, ನಿಗದಿತ ಪ್ರಮಾಣಕ್ಕಿಂತ ( ನಿಜ ಹೇಳಬೇಕಿದ್ದಲ್ಲಿ ಮನುಷ್ಯರು ಸೇವಿಸುವ ಆಹಾರದಲ್ಲಿ ಸೀಸದಂತಹ ಅಪಾಯಕಾರಿ ಹಾಗೂ ವಿಷಕಾರಕ ಲೋಹವು  ಕನಿಷ್ಠ ಪ್ರಮಾಣದಲ್ಲೂ ಇರುವಂತಿಲ್ಲ. ) ಹಲವಾರು ಪಟ್ಟು ಹೆಚ್ಚಾಗಿರುವುದು ಉತ್ತರ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇಷ್ಟು ಮಾತ್ರವಲ್ಲ, ಇಂತಹ ಸಿದ್ಧ ಮತ್ತು ಸಂಸ್ಕರಿತ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಕೃತಕ ರಾಸಾಯನಿಕ ವರ್ಣಕಾರಕಗಳು, ರುಚಿವರ್ಧಕಗಳು, ಮಾಧುರ್ಯಕಾರಕಗಳು ಮತ್ತು ಇವುಗಳು ಸುದೀರ್ಘಕಾಲ ಕೆಡದಂತೆ ಸಂರಕ್ಷಕ  ದ್ರವ್ಯಗಳನ್ನು ಬಳಸಲಾಗುತ್ತದೆ.ಮನುಷ್ಯನ ಆರೋಗ್ಯದ ಮೇಲೆ ತೀವ್ರ ಸ್ವರೂಪದ ಮತ್ತು ಅಪಾಯಕಾರಿ ದುಷ್ಪರಿಣಾಮಗಳನ್ನು ಬೀರಬಲ್ಲ ಈ ವಿಷಕಾರಕ ದ್ರವ್ಯಗಳು ಮತ್ತು ಕೃತಕ ರಾಸಾಯನಿಕಗಳು, ಇದನ್ನು ಸೇವಿಸುವ ಮಕ್ಕಳಿಗೆ ಇನ್ನಷ್ಟು ಅಪಾಯಕಾರಿಯಾಗಿ ಪರಿಣಮಿಸುವುದರಲ್ಲಿ ಸಂದೇಹವಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಭಾರತದಲ್ಲಿ ಈ ಉತ್ಪನ್ನದ  ತಯಾರಿಕೆ ಮತ್ತು ಮಾರಾಟಗಳನ್ನೇ ನಿಷೇಧಿಸಬೇಕು ಎನ್ನುವ ಅಭಿಪ್ರಾಯವು ದೇಶಾದ್ಯಂತ ವ್ಯಕ್ತವಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವಿಚಾರದಲ್ಲಿ ಯಾವ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳಲಿವೆ ಎನ್ನುವುದನ್ನು ಕಾದುನೋಡಬೇಕಷ್ಟೇ. ಗತದಶಕದಲ್ಲಿ ನಡೆದಿದ್ದ “ ಕೋಲಾಗಳಲ್ಲಿ ಹಾಲಾಹಲ “ ಪ್ರಕರಣವನ್ನು ಗಮನಿಸಿದಲ್ಲಿ ಇದನ್ನು ನಿಷೇಧಿಸುವ ಸಾಧ್ಯತೆಗಳು ತೀರಾ ವಿರಳ ಎನ್ನಬಹುದಾಗಿದೆ.

ಗತದಶಕದ ಕೋಲಾಹಲ

ಸುಮಾರು ೧೨ ವರ್ಷಗಳ ಹಿಂದೆ ಭಾರತದ ಸುಪ್ರಸಿದ್ಧ ವೈಜ್ಞಾನಿಕ ಸಂಸ್ಥೆಯಾಗಿರುವ ಸೆಂಟರ್ ಫಾರ್ ಸಯನ್ಸ್ ಎಂಡ್ ಎನ್ವಿರಾನ್ಮೆಂಟ್ ( ಸಿ.ಎಸ್.ಇ ) ಇದರ ವಿಜ್ಞಾನಿಗಳು, ಬಹುರಾಷ್ಟ್ರೀಯ ಸಂಸ್ಥೆಗಳು ನಮ್ಮ ದೇಶದಲ್ಲಿ ತಯಾರಿಸಿ ಮಾರಾಟ ಮಾಡುತ್ತಿದ್ದ ಲಘುಪಾನೀಯಗಳಲ್ಲಿ ವಿಷಕಾರಕ ಕೀಟನಾಶಕ ರಾಸಾಯನಿಕಗಳ ಅಂಶ ಅತಿಯಾಗಿರುವುದನ್ನು ಪತ್ತೆಹಚ್ಚಿದ್ದರು. ಇಂತಹ ಕೀಟನಾಶಕಗಳ ಸೇವನೆಯಿಂದ ಕ್ಯಾನ್ಸರ್, ನರಮಂಡಲಕ್ಕೆ ಸಂಬಂಧಿಸಿದ ವ್ಯಾಧಿಗಳು, ಸಂತಾನೋತ್ಪತ್ತಿಗೆ ಸಂಬಂಧಿಸಿದ ಸಮಸ್ಯೆಗಳು,ಜನ್ಮದತ್ತ ವೈಕಲ್ಯಗಳು ಮತ್ತು ಶರೀರದ ಸ್ವಾಭಾವಿಕ ರೋಗ ನಿರೋಧಕ ಶಕ್ತಿ ಕ್ಷಯಿಸುವುದೇ ಮುಂತಾದ ಗಂಭೀರ ಆರೋಗ್ಯದ ಸಮಸ್ಯೆಗಳು ಬಾಧಿಸುವ ಸಾಧ್ಯತೆಗಳಿವೆ ಎನ್ನುವ ಮಾಹಿತಿಯನ್ನೂ ಪ್ರಕಟಿಸಿದ್ದರು. ಕೋಲಾಗಳಲ್ಲಿ ಅತಿಯಾಗಿದ್ದ ಹಾಲಾಹಲದ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದಂತೆಯೇ, ಇವುಗಳ ತಯಾರಕರು ಮತ್ತು ಇದನ್ನು ಪತ್ತೆಹಚ್ಚಿ ಪ್ರಕಟಿಸಿದ್ದ ಸಂಸ್ಥೆಯ ನಡುವೆ " ಕೋಲಾಹಲ "ವೇ ನಡೆದಿತ್ತು. ಇದರಿಂದ ಎಚ್ಚೆತ್ತ ಕೇಂದ್ರ ಸರ್ಕಾರವು " ಜಂಟಿ ಸದನ ಸಮಿತಿ " ಯೊಂದನ್ನು ರಚಿಸಿ, ಇದರ ಸತ್ಯಾಸತ್ಯತೆಗಳನ್ನು ಪತ್ತೆಹಚ್ಚಲು ಆದೇಶಿಸಿತ್ತು. ಜೊತೆಗೆ ಲಘುಪಾನೀಯಗಳ ಸುರಕ್ಷತೆಗಾಗಿ ನಿರ್ದಿಷ್ಟ ಮಾನದಂಡಗಳನ್ನು ರೂಪಿಸುವಂತೆ ಸೂಚಿಸಿತ್ತು. ಸದನ ಸಮಿತಿಯು ಸಿ.ಎಸ್. ಇ ಸಂಸ್ಥೆಯ ವರದಿಯು ನಿಜವೆಂದು ವರದಿಯನ್ನು ನೀಡಿದ ಬಳಿಕವೂ, ಇವೆರಡೂ ಬಹುರಾಷ್ಟ್ರೀಯ ಸಂಸ್ಥೆಗಳು ಸಿ.ಎಸ್. ಇ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಕೆಡಿಸಲು ನಡೆಸಿದ್ದ ಪ್ರಯತ್ನಗಳು ಮತ್ತು ಹೂಡಿದ್ದ ಬೆದರಿಕೆಗಳು ವಿಫಲವೆನಿದ ಪರಿಣಾಮವಾಗಿ, ಸಿ.ಎಸ್. ಇ ವಿರುದ್ಧ  ನ್ಯಾಯಾಲಯದಲ್ಲಿ ಹೂಡಿದ್ದ ದಾವೆಗಳನ್ನು ಹಿಂಪಡೆದಿದ್ದವು!.

ವಿಶೇಷವೆಂದರೆ ಸಿ. ಎಸ್. ಇ ಸಂಸ್ಥೆಯು ೨೦೦೬ ರಲ್ಲಿ ಮತ್ತೊಮ್ಮೆ ನಮ್ಮ ದೇಶದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದ ಇವೆರಡೂ ಸಂಸ್ಥೆಗಳ  ಲಘುಪಾನೀಯಗಳನ್ನು ಪ್ರಯೋಗಾಲಯದಲ್ಲಿ ಮತ್ತೆ ಪರೀಕ್ಷಿಸಿದಾಗ ಇವುಗಳಲ್ಲಿ ಕೀಟನಾಶಕಗಳ ಅಂಶಗಳು ಪತ್ತೆಯಾಗಿದ್ದವು. ಅರ್ಥಾತ್  ದೇಶದಲ್ಲಿ ಮಾರಾಟವಾಗುತ್ತಿದ್ದ ಲಘುಪಾನೀಯಗಳಲ್ಲಿ ಕೀಟನಾಶಕಗಳ ಶೇಷಾಂಶಗಳ ಇರುವಿಕೆ ಯಥಾಸ್ಥಿತಿಯಲ್ಲಿ ಮುಂದುವರೆದಿತ್ತು!.

ನಿಷ್ಪ್ರಯೋಜಕ ಕಾಯಿದೆಗಳು

ಭಾರತದಲ್ಲಿ ಗ್ರಾಹಕ ರಕ್ಷಣಾ ಕಾಯಿದೆ, ಆಹಾರ ಸುರಕ್ಷಾ ಮತ್ತು ಗುಣಮಟ್ಟಗಳ ಕಾಯಿದೆ ಮತ್ತು ದಾರಿತಪ್ಪಿಸುವ ಜಾಹೀರಾತುಗಳ ಬಗ್ಗೆ ಔಷದಗಳು ಮತ್ತು ಸೌಂದರ್ಯ ಪ್ರಸಾದನಗಳ ( ಆಕ್ಷೇಪಾರ್ಹ ಜಾಹೀರಾತುಗಳ ) ಕಾಯಿದೆಗಳು ಅಸ್ತಿತ್ವದಲ್ಲಿವೆ. ಆದರೆ ಇವುಗಳನ್ನು ರಾಜಾರೋಷವಾಗಿ ಉಲ್ಲಂಘಿಸಲಾಗುತ್ತಿದೆ. ಏಕೆಂದರೆ ಈ ಕಾಯಿದೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಇಚ್ಛಾಶಕ್ತಿಯು ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಇಲ್ಲವಾಗಿದೆ. ಪ್ರಾಯಶಃ ಇದೇ ಕಾರಣದಿಂದಾಗಿ ಬಹುರಾಷ್ಟ್ರೀಯ ಸಂಸ್ಥೆಗಳು ಮಾತ್ರವಲ್ಲ, ಭಾರತೀಯ ಸಂಸ್ಥೆಗಳೂ ದೇಶದಲ್ಲಿ ತಯಾರಿಸಿ ಮಾರಾಟ ಮಾಡುವ ಉತ್ಪನ್ನಗಳ ಸುರಕ್ಷತೆ ಮತ್ತು ಗುಣಮಟ್ಟಗಳನ್ನು ಕಾಪಾಡಿಕೊಳ್ಳುವಲ್ಲಿ ನಿರ್ಲಕ್ಷ್ಯವನ್ನು ತೋರುತ್ತಿವೆ.ಜೊತೆಗೆ ಗ್ರಾಹಕರ ದಾರಿತಪ್ಪಿಸುವ ಜಾಹೀರಾತುಗಳನ್ನೂ ಧಾರಾಳವಾಗಿ ಪ್ರಕಟಿಸುವ ಮೂಲಕ ಕೋಟ್ಯಂತರ ರೂಪಾಯಿಗಳ ಲಾಭವನ್ನು ಗಳಿಸುತ್ತಿವೆ.

ಹೊಣೆಗಾರರು ಯಾರು?

ಪ್ರಸ್ತುತ ಮ್ಯಾಗಿ ನೂಡಲ್ಸ್ ಗಳ ತಯಾರಕರನ್ನು ತರಾಟೆಗೆ ತೆಗೆದುಕೊಂಡಿರುವ ಮಾಧ್ಯಮಗಳು, ಆರ್ಥಿಕ ಲಾಭಕ್ಕಾಗಿ ಈ  ಜಾಹೀರಾತುಗಳಲ್ಲಿ ಕಾಣಿಸಿಕೊಂಡ ಖ್ಯಾತ ಚಿತ್ರನಟರ ವಿರುದ್ಧ ಹರಿಹಾಯ್ದಿವೆ. ಆದರೆ ಇದೇ ಸಂದರ್ಭದಲ್ಲಿ ಈ ಜಾಹೀರಾತುಗಳನ್ನು ತಾವು ಕೂಡಾ ಆರ್ಥಿಕ ಲಾಭದ ದೃಷ್ಠಿಯಿಂದ  ಪ್ರಕಟಿಸಿರುವ ವಿಚಾರವನ್ನು ಅನುಕೂಲಕರವಾಗಿ ಮರೆಮಾಚಿವೆ. ಮ್ಯಾಗಿ ನೂಡಲ್ಸ್ ಗಳಲ್ಲಿನ ಅಪಾಯಕಾರಿ ಅಂಶಗಳಿಗೆ ಈ ಚಿತ್ರನಟರು ಹೊಣೆಗಾರರು ಎಂದಾದಲ್ಲಿ, ಜಾಹೀರಾತುಗಳನ್ನು ಪ್ರಸಾರ ಮಾಡಿದ ಮಾಧ್ಯಮಗಳೂ ಇದಕ್ಕೆ ಹೊಣೆಗಾರರಾಗಬೇಕಲ್ಲವೇ?.

ಕೇಂದ್ರದ ಸಚಿವರೊಬ್ಬರು ಹೇಳಿರುವಂತೆ ಇಂತಹ “ ದಾರಿತಪ್ಪಿಸುವ ಜಾಹೀರಾತು “ ಗಳಲ್ಲಿ  ಭಾಗವಹಿಸಿರುವ ಚಿತ್ರನಟರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವ ವಿಚಾರ ಸ್ವಾಗತಾರ್ಹ. ಆದರೆ ಇದೇ ರೀತಿಯ ಹಾಗೂ ಮನುಷ್ಯನ ಶಾರೀರಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಲ್ಲ ಅನ್ಯ ಉತ್ಪನ್ನಗಳ ತಯಾರಕರು,  ಜಾಹೀರಾತುಗಳನ್ನು ತಯಾರಿಸಿದ ಸಂಸ್ಥೆಗಳು, ಇದರಲ್ಲಿ ಪಾಲ್ಗೊಂಡ ತಾರೆಯರು ಮತ್ತು  ಪ್ರಸಾರಮಾಡುವ ಮಾಧ್ಯಮಗಳ ವಿರುದ್ಧ ಸರ್ಕಾರ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಒಂದೆರಡು ವರ್ಷಗಳ ಹಿಂದೆಯೇ ಕೇಂದ್ರ ಗ್ರಾಹಕ ರಕ್ಷಣಾ ಮಂಡಳಿಯು ಈ ಬಗ್ಗೆ ಸೂಕ್ತ ನೀತಿ ನಿಯಮಗಳನ್ನು ರೂಪಿಸಲು ಸಮಿತಿಯೊಂದನ್ನು ರಚಿಸಿದ್ದರೂ, ಇಂದಿನ ತನಕ ಸಮಿತಿ ಕೈಗೊಂಡ ನಿರ್ಧಾರಗಳ ಮಾಹಿತಿ ಪ್ರಕಟಗೊಂಡಿಲ್ಲ.


 ಇದಲ್ಲದೆ ನೀವು ದಿನನಿತ್ಯ ಮಾಧ್ಯಮಗಳಲ್ಲಿ ಕಾಣುವ ಧಡೂತಿ ದೇಹದವರನ್ನು ತೆಳ್ಳಗಾಗಿಸುವ, ಕೃಶಕಾಯರನ್ನು ಧೃಢಕಾಯರನ್ನಾಗಿಸುವ, ಕುಬ್ಜರನ್ನು ನೀಳಕಾಯರಾನ್ನಾಗಿಸಬಲ್ಲ, ನಿಮ್ಮ ಮಕ್ಕಳ ಬುದ್ಧಿಮತ್ತೆಯನ್ನು ಹೆಚ್ಚಿಸಬಲ್ಲ, ಚಿಟಿಕೆ ಹೊಡೆಯುವಷ್ಟರಲ್ಲೇ ನಿಮ್ಮನ್ನು ಕಾಡುವ ಗಂಟು – ಸೊಂಟನೋವುಗಳನ್ನು ಗುಣಪಡಿಸಬಲ್ಲ, ಪುರುಷರ ಲೈಂಗಿಕ ಶಕ್ತಿಯನ್ನು ವೃದ್ಧಿಸಬಲ್ಲ, ಕೃಷ್ಣ ವರ್ಣದವರನ್ನು ಗೌರ ವರ್ಣದವರನ್ನಾಗಿಸಬಲ್ಲ, ಶಾಶ್ವತ ಪರಿಹಾರವೇ ಇಲ್ಲದ ಗಂಭೀರ ಕಾಯಿಲೆಗಳನ್ನು ಖಚಿತವಾಗಿ ಗುಣಪಡಿಸಬಲ್ಲ  ಮತ್ತು ಇದೇ ರೀತಿಯ ಹತ್ತುಹಲವು ಜಾಹೀರಾತುಗಳು ಮಾಧ್ಯಮಗಳಲ್ಲಿ ದಿನನಿತ್ಯ ಪ್ರಕಟವಾಗುತ್ತವೆ. ಮೇಲ್ನೋಟಕ್ಕೆ ಸತ್ಯಕ್ಕೆ ದೂರವಾದ ಮತ್ತು ಗ್ರಾಹಕರ ದಾರಿತಪ್ಪಿಸುವ ಇಂತಹ ಉತ್ಪನ್ನಗಳ ತಯಾರಕರು,  ಈ ಜಾಹೀರಾತುಗಳಲ್ಲಿ ಭಾಗವಹಿಸುವ ಖ್ಯಾತನಾಮ ನಟರು ಮತ್ತು ಜಾಹೀರಾತುಗಳನ್ನು ತಮ್ಮ ಲಾಭಕ್ಕಾಗಿ ಪ್ರಕಟಿಸುವ ಮಾಧ್ಯಮಗಳು ಕೂಡಾ ಇದಕ್ಕೆ ಹೊಣೆಗಾರರಾಗಬೇಕಲ್ಲವೇ?.

ಸರ್ಕಾರ ಹೇಳುವಂತೆ ಇಂತಹ ಉತ್ಪನ್ನಗಳ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಈ ಉತ್ಪನ್ನದ ತಯಾರಕರು, ಜಾಹೀರಾತನ್ನು ಸಿದ್ಧಪಡಿಸಿದ ಸಂಸ್ಥೆ, ಇದರಲ್ಲಿ ಪಾಲ್ಗೊಂಡ ಖ್ಯಾತನಾಮ ಕ್ರೀಡಾಪಟುಗಳು ಅಥವಾ ಚಿತ್ರನಟರು ಮತ್ತು ಇವುಗಳನ್ನು ಪ್ರಕಟಿಸಿದ ಮಾಧ್ಯಮಗಳ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಿದಲ್ಲಿ ಇಂತಹ ಅಸಂಖ್ಯ ಜಾಹೀರಾತುಗಳಿಗೆ ಸಂಬಂಧಿಸಿದ ನೂರಾರು ವ್ಯಕ್ತಿಗಳು ನ್ಯಾಯಾಲಯದ ಮೆಟ್ಟಲನ್ನು ಏರಬೇಕಾಗುತ್ತದೆ. ಅಂತೆಯೇ ಇಂತಹ ಜಾಹೀರಾತುಗಳ ಹಾವಳಿಯೂ ಸ್ವಾಭಾವಿಕವಾಗಿಯೇ ಅಂತ್ಯಗೊಳ್ಳಲಿದೆ.
                                                                                                    

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು



No comments:

Post a Comment