Saturday, June 27, 2015

JULY 1 - NATIONAL DOCTORS DAY


                          ಜುಲೈ ೧ : ವಿಶ್ವ ವೈದ್ಯರ ದಿನಾಚರಣೆ 

                        ಸರ್ವೇ ಜನಾ ಸುಖಿನೋಭವಂತು


ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಆಚರಿಸಲ್ಪಡುವ ವಿಶೇಷ ದಿನಗಳಲ್ಲಿ " ವಿಶ್ವ ವೈದ್ಯರ ದಿನ " ವೂ ಒಂದಾಗಿದೆ. ಜನಸಾಮಾನ್ಯರ ಆರೋಗ್ಯವನ್ನು ರಕ್ಷಿಸುವ, ಅನಾರೋಗ್ಯಪೀಡಿತರಾದಾಗ ಸೂಕ್ತ ಚಿಕಿತ್ಸೆಯನ್ನು ನೀಡಿ ಗುಣಪಡಿಸುವ ಮತ್ತು ರೋಗಿಗಳಿಗೆ ಸಾಂತ್ವನ ನೀಡುವ ಸಲುವಾಗಿ ಹಗಲಿರುಳು ಶ್ರಮಿಸುವ  ವೈದ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಲು ಇದನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಡಾ.ಬಿ.ಸಿ.ರಾಯ್ ಇವರ ಜನ್ಮದಿನವನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ.
---------------------------------------------------------------------------------------------
ಆರೋಗ್ಯವೇ ಭಾಗ್ಯ

ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಸಂಶೋಧನೆ ಮತ್ತು ಅಧ್ಯಯನಗಳ ಫಲವಾಗಿ ಭಾರತೀಯರ ಆರೋಗ್ಯದ ಮಟ್ಟವು ತೃಪ್ತಿಕರವಾಗಿದ್ದು, ಸರಾಸರಿ ಆಯುಷ್ಯದ ಪ್ರಮಾಣವೂ ಹೆಚ್ಚಿದೆ. ಆದರೆ ಇದೇ ಸಂದರ್ಭದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆ, ವಾಯು - ಜಲಮಾಲಿನ್ಯ, ಪರಿಸರ ಪ್ರದೂಷಣೆ, ನಾವಿಂದು ಅತಿಯಾಗಿ ಉತ್ಪಾದಿಸುತ್ತಿರುವ ವೈವಿಧ್ಯಮಯ ಹಾಗೂ ಅಪಾಯಕಾರಿ ತ್ಯಾಜ್ಯಗಳ ಪ್ರಮಾಣ, ಸೇವಿಸುತ್ತಿರುವ ಕಲುಷಿತ ಹಾಗೂ ಕೀಟನಾಶಕಗಳಿಂದ ಸಮೃದ್ಧವಾಗಿರುವ ಆಹಾರ, ನಿರುಪಯುಕ್ತ ( ಜಂಕ್ ಫುಡ್ ) ಹಾಗೂ ಸಂಸ್ಕರಿತ ಆಹಾರಗಳ ಅತಿ ಸೇವನೆ, ಆಧುನಿಕ - ಆರಾಮದಾಯಕ ಜೀವನ ಶೈಲಿ, ನಿಷ್ಕ್ರಿಯತೆ,ಮದ್ಯ -  ಮಾದಕ ದ್ರವ್ಯಗಳ ಸೇವನೆ, ಸ್ವಾಭಾವಿಕ ರೋಗನಿರೋಧಕ ಶಕ್ತಿ ಕುಂಠಿತಗೊಂಡಿರುವುದು, ಅನುವಂಶಿಕತೆಯೇ ಮುಂತಾದ ಕಾರಣಗಳಿಂದಾಗಿ, ಭಾರತೀಯರನ್ನು ಪೀಡಿಸುತ್ತಿರುವ ವೈವಿಧ್ಯಮಯ ಕಾಯಿಲೆಗಳ ಬಾಧೆಯು ನಿಧಾನವಾಗಿ ಆದರೆ ನಿಶ್ಚಿತವಾಗಿಯೂ ಹೆಚ್ಚುತ್ತಿದೆ. ವಿಶೇಷವೆಂದರೆ ಇವೆಲ್ಲಾ ಸಮಸ್ಯೆಗಳಿಗೆ ಕಾರಣಕರ್ತರು ನಾವೇ ಎನ್ನುವುದು ವಿಷಾದನೀಯ.

ಹದಿಹರೆಯದಲ್ಲೇ ಪ್ರತ್ಯಕ್ಷವಾಗುವ ವ್ಯಾಧಿಗಳು

ಕಳೆದ ಒಂದೆರಡು ದಶಕಗಳಿಂದ ಮನುಷ್ಯನನ್ನು ಪೀಡಿಸುವ ಹಾಗೂ ಸಾಂಕ್ರಾಮಿಕವಾಗಿ ಹರಡದ ಮತ್ತು ಹರಡಬಲ್ಲ ಕಾಯಿಲೆಗಳ ಪ್ರಮಾಣವು ದಿನೇದಿನೇ ಹೆಚ್ಚುತ್ತಿವೆ. ಸಾಂಕ್ರಾಮಿಕವಾಗಿ ಹರಡದ ಕಾಯಿಲೆಗಳಲ್ಲಿ ಮಧುಮೇಹ, ಅಧಿಕ ರಕ್ತದ ಒತ್ತಡ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು ಸೇರಿದಂತೆ ಹಲವಾರು ಗಂಭೀರ ವ್ಯಾಧಿಗಳ ಸಂಭಾವ್ಯತೆ ಹೆಚ್ಚುತ್ತಿದೆ. ಅಂತೆಯೇ ಹಿಂದೆ ಮಧ್ಯ ವಯಸ್ಸು ಕಳೆದ ಬಳಿಕ ಉದ್ಭವಿಸುತ್ತಿದ್ದ ಇಂತಹ ವ್ಯಾಧಿಗಳು, ಇದೀಗ ಹದಿಹರೆಯ ಅಥವಾ ಯಾವ್ವನಸ್ತರಲ್ಲೇ ಪತ್ತೆಯಾಗುತ್ತಿವೆ. ಇನ್ನು ಪರಸ್ಪರ ಹರಡಬಲ್ಲ ಸಾಂಕ್ರಾಮಿಕ ಕಾಯಿಲೆಗಳು ಕೆಲವೇ ಗಂಟೆಗಳಲ್ಲಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹರಡುತ್ತಿವೆ. ಸೂಕ್ತ ಹಾಗೂ ನಿಶ್ಚಿತ ಚಿಕಿತ್ಸೆ ಲಭ್ಯವಿರುವ ಕಾಯಿಲೆಗಳನ್ನು ನಿಯಂತ್ರಿಸುವ ಅಥವಾ ಗುಣಪಡಿಸುವ ಸಾಧ್ಯತೆಗಳಿದ್ದು, ಚಿಕಿತ್ಸೆ ಲಭ್ಯವಿಲ್ಲದ ಕೆಲ ಕಾಯಿಲೆಗಳು ಉಲ್ಬಣಿಸಿ ರೋಗಿಗಳ ಮರಣದಲ್ಲಿ ಪರ್ಯವಸಾನವಾಗುವುದು ಅಪರೂಪವೇನಲ್ಲ.

ಮನುಷ್ಯರನ್ನು ಪೀಡಿಸುವ ಬಹುತೇಕ ಕಾಯಿಲೆಗಳನ್ನು ಖಚಿತವಾಗಿ ಗುಣಪಡಿಸಬಲ್ಲ ಔಷದಗಳು ಲಭ್ಯವಿದೆ.ಜೊತೆಗೆ ಸೂಕ್ತ ಹಾಗೂ ನಿಶ್ಚಿತ ಪರಿಹಾರವಿಲ್ಲದ ಅನೇಕ ಕಾಯಿಲೆಗಳನ್ನು ಖಚಿತವಾಗಿ ನಿಯಂತ್ರಿಸಬಲ್ಲ ಔಷದಗಳು ಲಭ್ಯವಿದೆ. ಅಂತೆಯೇ ಕೆಲ ವ್ಯಾಧಿಗಳನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ ಲಸಿಕೆಗಳು ಲಭ್ಯವಿದೆ. ಇನ್ನು ಕೆಲವಿಧದ ಕಾಯಿಲೆಗಳನ್ನು ತಡೆಗಟ್ಟಬಲ್ಲ ಲಸಿಕೆಗಳು ಅಥವಾ ಗುಣಪಡಿಸಬಲ್ಲ ಔಷದಗಳು ಲಭ್ಯವಿಲ್ಲದಿರುವುದರಿಂದ, ಇಂತಹ ವ್ಯಾಧಿಪೀಡಿತರು ಸೂಕ್ತ ಚಿಕಿತ್ಸೆಯ ಅಭಾವ ಮತ್ತು ಅನ್ಯ ಕಾರಣಗಳಿಂದಾಗಿ ಮೃತಪಡುವ ಸಾಧ್ಯತೆಗಳೂ ಇವೆ.

ಪರಿಸರ ಪ್ರದೂಷಣೆ

ಮನುಷ್ಯರ ಆರೋಗ್ಯ ಮತ್ತು ಪರಿಸರಗಳಿಗೆ ಅವಿನಾಭಾವ ಸಂಬಂಧವಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಉದ್ದಿಮೆ - ಕೈಗಾರಿಕೆಗಳು ಮತ್ತು ವಿದ್ಯುತ್ ಉತ್ಪಾದನಾ ಘಟಕಗಳು, ನಾವಿಂದು ಅತಿಯಾಗಿ ಹಾಗೂ ಅನಾವಶ್ಯಕವಾಗಿ ಉತ್ಪಾದಿಸುತ್ತಿರುವ ವೈವಿಧ್ಯಮಯ ತ್ಯಾಜಗಳು ಹಾಗೂ ಇತರ ಕೆಲ ಕಾರಣಗಳಿಂದಾಗಿ ಸಂಭವಿಸುತ್ತಿರುವ ಪರಿಸರ ಮಾಲಿನ್ಯದ ಪರಿಣಾಮವಾಗಿ, ಜಾಗತಿಕ ತಾಪಮಾನದ ಹೆಚ್ಚಳ ಮತ್ತು ಹವಾಮಾನದ ವೈಪರೀತ್ಯಗಳಂತಹ ಗಂಭೀರ ಸಮಸ್ಯೆಗಳು ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತವೆ. ತತ್ಪರಿಣಾಮವಾಗಿ ಉದ್ಭವಿಸುವ ಸಮಸ್ಯೆಗಳು ದೇಶದ ಪ್ರಜೆಗಳ ಆರೋಗ್ಯ ಹಾಗೂ ಆದಾಯಗಳೊಂದಿಗೆ, ದೇಶದ ಆರ್ಥಿಕತೆಯ ಮೇಲೂ ದುಷ್ಪರಿಣಾಮವನ್ನು ಬೀರುತ್ತಿವೆ.

ಮಾನಸಿಕ ಒತ್ತಡ

ಇವೆಲ್ಲಕ್ಕೂ ಮಿಗಿಲಾಗಿ ಬದಲಾಗುತ್ತಿರುವ ನಮ್ಮ ಜೀವನಶೈಲಿಯ ಪರಿಣಾಮವಾಗಿ  ವೃದ್ಧಿಸುತ್ತಿರುವ ಮಾನಸಿಕ ಒತ್ತಡಗಳು ನಮ್ಮ ಆರೋಗ್ಯವನ್ನು ಏರುಪೇರು ಮಾಡುವಲ್ಲಿ ಯಶಸ್ವಿಯಾಗಿವೆ. ವಿಶೇಷವೆಂದರೆ ಪುಟ್ಟ ಮಕ್ಕಳೂ ಇದಕ್ಕೆ ಅಪವಾದವೆನಿಸಿಲ್ಲ. ಈ ವಿಲಕ್ಷಣ ಸಮಸ್ಯೆಗೆ ಇಂದಿನ ಸ್ಪರ್ಧಾತ್ಮಕ ಯುಗವೇ ಕಾರಣ ಎಂದಲ್ಲಿ ತಪ್ಪೆನಿಸಲಾರದು. ಅತಿಯಾದ ಮಾನಸಿಕ ಒತ್ತಡವು ಕೇವಲ ಮಾನಸಿಕ ಸಮಸ್ಯೆಗಳಷ್ಟೇ ಅಲ್ಲ, ಶಾರೀರಿಕ ಆರೋಗ್ಯದ ಮೇಲೂ ತೀವ್ರ ಸ್ವರೂಪದ ದುಷ್ಪರಿಣಾಮವನ್ನು ಬೀರಬಲ್ಲದು ಎಂದಲ್ಲಿ ನಿಮಗೂ ಆಶ್ಚರ್ಯವೆನಿಸೀತು.

ಸ್ವಯಂ ಚಿಕಿತ್ಸೆ

ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಸಂಶೋಧನೆಗಳ ಫಲವಾಗಿ ನಾವಿಂದು ಅಧಿಕತಮ ಕಾಯಿಲೆಗಳನ್ನು ನಿಖರವಾಗಿ ಪತ್ತೆಹಚ್ಚಬಲ್ಲ ವಿಧಾನ – ಪರೀಕ್ಷೆಗಳನ್ನು ಪತ್ತೆಹಚ್ಚಲಾಗಿದೆ. ಜೊತೆಗೆ ಅತ್ಯಂತ ಪರಿಣಾಮಕಾರಿ ಹಾಗೂ ವಿನೂತನ ಔಷದಗಳನ್ನು ಸಂಶೋಧಿಸಲಾಗಿದೆ. ಆದರೆ ಇದೇ ಸಂದರ್ಭದಲ್ಲಿ ಹಲವಾರು ಅಪಾಯಕಾರಿ ರೋಗಾಣುಗಳು ಅನೇಕ ಔಷದಗಳಿಗೆ ಪ್ರತಿರೋಧ ಶಕ್ತಿಯನ್ನು ಗಳಿಸಲು ಯಶಸ್ವಿಯಾಗಿವೆ. ಈ ಸಮಸ್ಯೆಗೆ ಅನ್ಯ ಕೆಲ ಕಾರಣಗಳೊಂದಿಗೆ, ವೈದ್ಯರ ಸಲಹೆಯನ್ನೇ ಪಡೆಯದೇ ರೋಗಿಗಳು “ ಸ್ವಯಂ ಚಿಕಿತ್ಸೆ “ ಯ ಪ್ರಯೋಗದ ಮೂಲಕ ಸೇವಿಸುವ ಹಾಗೂ ಕೆಲ ಸಂದರ್ಭಗಳಲ್ಲಿ ವೈದ್ಯರೇ ನೀಡಬಹುದಾದ ಅನಾವಶ್ಯಕ ಔಷದ ಸೇವನೆಯೂ ಒಂದು ಪ್ರಮುಖ ಕಾರಣವೆನಿಸಿದೆ.

ದಾರಿತಪ್ಪಿಸುವ ಜಾಹೀರಾತುಗಳು

ದಿನನಿತ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುವ ನೂರಾರು ಜಾಹೀರಾತುಗಳಲ್ಲಿ ನಿಮ್ಮ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸುವ ಹಲವಾರು ಉತ್ಪನ್ನಗಳ ಜಾಹೀರಾತುಗಳೂ ಪ್ರಸಾರವಾಗುತ್ತವೆ. ಇವುಗಳಲ್ಲಿ ದಾರಿತಪ್ಪಿಸುವ ಹಾಗೂ ವಿಸ್ಮಯಕಾರಿ ಪರಿಣಾಮವನ್ನು ನೀಡಬಲ್ಲ ಮತ್ತು ಆಕ್ಷೇಪಾರ್ಹ ಜಾಹೀರಾತುಗಳು ಸಾಕಷ್ಟಿವೆ. ಇಂತಹ ಉತ್ಪನ್ನಗಳ ತಯಾರಕರು ಸರ್ಕಾರವೇ ರೂಪಿಸಿರುವ ನಿಯಮಗಳನ್ನು ರಾಜಾರೋಷವಾಗಿ ಉಲ್ಲಂಘಿಸಿದರೂ, ತತ್ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಇವರ ವಿರುದ್ಧ ಕಾನೂನುಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದಾಗಿ ಅಮಾಯಕ ಜನರು ಈ ಉತ್ಪನ್ನಗಳನ್ನು ದುಬಾರಿ ಬೆಲೆಯನ್ನು ತೆತ್ತು ಖರೀದಿಸಿ ಬಳಸುವ ಮೂಲಕ, ಸಾಕಷ್ಟು ಹಣದೊಂದಿಗೆ ತಮ್ಮ ಆರೋಗ್ಯವನ್ನೂ ಕಳೆದುಕೊಳ್ಳುತ್ತಾರೆ!. ಔಷದಗಳು ಹಾಗೂ ವಿಸ್ಮಯಕಾರಿ ಪರಿಹಾರಗಳ  ( ಆಕ್ಷೇಪಾರ್ಹ ಜಾಹೀರಾತುಗಳು ) ನಿಯಮ ೧೯೫೪ ರಂತೆ, ೫೦ ಕ್ಕೂ ಅಧಿಕ ವ್ಯಾಧಿಗಳು ಮತ್ತು ಆರೋಗ್ಯದ ಸಮಸ್ಯೆಗಳ ಬಗ್ಗೆ ಜಾಹೀರಾತುಗಳನ್ನು ಪ್ರಕಟಿಸುವಂತಿಲ್ಲ.ಆದರೂ ಈ ವರ್ಗಕ್ಕೆ ಸೇರಿದ ಹಾಗೂ ಶಾಶ್ವತ ಪರಿಹಾರವಿಲ್ಲದ ವ್ಯಾಧಿಗಳನ್ನು ಗುಣಪಡಿಸುವುದಾಗಿ ಪ್ರಕಟಿಸುವ ಘೋಷಿಸುವ ಅಸಂಖ್ಯ ಜಾಹೀರಾತುಗಳು ಇಂದಿಗೂ ಪ್ರಕಟವಾಗುತ್ತಿವೆ. ಆದರೆ ಈ ರೀತಿಯ ಜಾಹೀರಾತುಗಳನ್ನು ನೀಡುವವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ತತ್ಪರಿಣಾಮವಾಗಿ ಇಂತಹ ಜಾಹೀರಾತುಗಳ ಮೂಲಕ ಮಾರಾಟವಾಗುವ ಉತ್ಪನ್ನಗಳನ್ನು ಬಳಸಿ ತಮ್ಮ ಪ್ರಾಣವನ್ನೇ ಕಳೆದುಕೊಂಡವರ ಸಂಖ್ಯೆಯೂ ಕಡಿಮೆಯೇನಿಲ್ಲ.

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ

ವೈದ್ಯಕೀಯ ವಿಜ್ಞಾನಿಗಳು – ಸಂಶೋಧಕರ ಅವಿರತ ಪ್ರಯತ್ನಗಳ ಫಲವಾಗಿ ರೋಗ ನಿದಾನ – ಚಿಕಿತ್ಸಾ ವಿಧಾನಗಳಲ್ಲಿ ನಾವಿಂದು ಅಸಾಧಾರಣ ಪ್ರಗತಿಯನ್ನು ಸಾಧಿಸಿರುವುದು ನಿಜ. ಆದರೆ ಇದೆ ಸಂದರ್ಭದಲ್ಲಿ ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಜನಸಂಖ್ಯೆ, ಪರಿಸರ ಪ್ರದೂಷಣೆ, ಆಹಾರ – ವಿಹಾರಗಳಲ್ಲಿ ಪಾಶ್ಚಾತ್ಯರ ಅನುಕರಣೆ, ನಿಷ್ಕ್ರಿಯ ಜೀವನಶೈಲಿ, ಮಾನಸಿಕ ಒತ್ತಡಗಳು ಹಾಗೂ ದುಶ್ಚಟಗಳೇ ಮುಂತಾದ ಕಾರಣಗಳಿಂದಾಗಿ, ಗಂಭೀರ ಮತ್ತು ಮಾರಕ ಕಾಯಿಲೆಗಳ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಇವೆಲ್ಲಾ ಸಮಸ್ಯೆಗಳನ್ನು ನಿಯಂತ್ರಿಸುವ ಮಾರ್ಗೋಪಾಯಗಳು ಜನಸಾಮಾನ್ಯರಿಗೂ ತಿಳಿದಿವೆ. ಆದರೆ ಇದನ್ನು ಕಾರ್ಯರೂಪಕ್ಕೆ ತರಲು ಬೇಕಾದ ಇಚ್ಛಾಶಕ್ತಿಯ ಕೊರತೆ ನಮ್ಮಲ್ಲಿದೆ. ಇದೇ ಕಾರಣದಿಂದಾಗಿ “ ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ “ ಎನ್ನುವ ಆಡುಮಾತಿನಂತೆ, ಆರೋಗ್ಯಕರ ಜೀವನಶೈಲಿಯ ಪರಿಪಾಲನೆ, ಸಮತೋಲಿತ ಹಾಗೂ ಪೌಷ್ಠಿಕ ಆಹಾರ ಸೇವನೆ,ದೈನಂದಿನ ವ್ಯಾಯಾಮ, ಮಾನಸಿಕ ಒತ್ತಡ ಹಾಗೂ ದುಶ್ಚಟಗಳಿಂದ ದೂರವಿರುವುದು, ಅನಾರೋಗ್ಯ ಬಾಧಿಸಿದಲ್ಲಿ ನಂಬಿಗಸ್ತ ವೈದ್ಯರ ಸಲಹೆ – ಚಿಕಿತ್ಸೆಗಳನ್ನು ಪಡೆದುಕೊಳ್ಳುವ ಮೂಲಕ ನಿಮ್ಮ ಆರೋಗ್ಯವನ್ನು ಉನ್ನತಸ್ತರದಲ್ಲಿ ಕಾಪಾಡಿಕೊಳ್ಳುವುದು ಹಿತಕರವೆನಿಸುವುದು.  

ಡಾ. ಬಿ.ಸಿ. ರಾಯ್ ಜನ್ಮದಿನ

ಅಪ್ರತಿಮ ವೈದ್ಯ, ಸುಪ್ರಸಿದ್ಧ ಶಿಕ್ಷಣ ತಜ್ಞ ಮತ್ತು ಮಹಾನ್ ರಾಜಕಾರಣಿ ಎಂದೇ ಖ್ಯಾತರಾಗಿದ್ದ ಡಾ. ಬಿ.ಸಿ. ರಾಯ್ ಇವರ ಜನ್ಮದಿನವನ್ನು ಭಾರತದಲ್ಲಿ “ ವೈದ್ಯರ ದಿನ “ ವನ್ನಾಗಿ ಆಚರಿಸಲಾಗುತ್ತಿದೆ. ಡಾ. ರಾಯ್ ಇವರು ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ್ದ ಸೇವೆಯನ್ನು ಗುರುತಿಸಿದ್ದ ಭಾರತ ಸರ್ಕಾರವು ಇವರ ಜನ್ಮದಿನವನ್ನು ವೈದ್ಯರ ದಿನವನ್ನಾಗಿ ಆಚರಿಸಲು ೧೯೯೧ ರಲ್ಲಿ ನಿರ್ಧರಿಸಿತ್ತು.

೧೮೮೨ ರ ಜುಲೈ ೧ ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದ್ದ ಬಿದಾನ ಚಂದ್ರ ರಾಯ್, ಕೊಲ್ಕತ್ತಾದಲ್ಲಿ ವೈದ್ಯಕೀಯ ಶಿಕ್ಷಣವನ್ನು ಮುಗಿಸಿದ ಬಳಿಕ ಇಂಗ್ಲೆಂಡ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದರು. ೧೯೧೧ ರಲ್ಲಿ ಭಾರತಕ್ಕೆ ಮರಳಿದ ರಾಯ್, ಕೊಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು.

ಮಹಾತ್ಮಾ ಗಾಂಧಿಯವರಿಂದ ಪ್ರಭಾವಿತರಾಗಿದ್ದ ಡಾ.ರಾಯ್,  ಸ್ವಾತಂತ್ರ್ಯ ಹೋರಾಟದಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ತದನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ೧೪ ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದರು. ರಾಜಕೀಯ, ಶೈಕ್ಷಣಿಕ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಡಾ. ರಾಯ್ ಇವರ ಮಹೋನ್ನತ ಸಾಧನೆಯನ್ನು ಗುರುತಿಸಿದ್ದ ಕೇಂದ್ರ ಸರ್ಕಾರವು, ೧೯೬೧ ರಲ್ಲಿ ಇವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

೧೯೬೨ ರ ಜುಲೈ ೧ ರಂದು ಅರ್ಥಾತ್ ತಮ್ಮ ಜನ್ಮದಿನದಂದೆ ವಿಧಿವಶರಾಗಿದ್ದ ಡಾ.ರಾಯ್ ಸ್ಮರಣಾರ್ಥ, ವೈದ್ಯಕೀಯ ಕ್ಷೇತ್ರದಲ್ಲಿ ಮಹೋನ್ನತ ಸಾಧನೆ ಮಾಡಿರುವ ಭಾರತೀಯರಿಗೆ ರಾಷ್ಟ್ರಮಟ್ಟದ ಪುರಸ್ಕಾರವನ್ನು ನೀಡುವ ಸಂಪ್ರದಾಯವನ್ನು ೧೯೭೬ ರಲ್ಲಿ ಆರಂಭಿಸಿದ್ದು, ಇಂದಿಗೂ ಮುಂದುವರೆದಿದೆ.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು





No comments:

Post a Comment