Wednesday, June 10, 2015

DENGUE FEVER BACK WITH A BANG


            ಮತ್ತೆ ಮರುಕಳಿಸುತ್ತಿರುವ  " ಡೆಂಗೆ " ಜ್ವರ

ವೈದ್ಯಕೀಯ ಶಬ್ದಕೋಶದಲ್ಲಿ " ಡೆಂಗೆ " ಎಂದು ನಮೂದಿಸಿರುವ ಜ್ವರವೊಂದನ್ನು ಡೆಂಘಿ, ಡೆಂಘೆ ಅಥವಾ ಡೆಂಗ್ಯೂ ಎಂದು ಮುದ್ರಿಸಿ ಉಚ್ಚರಿಸುವುದನ್ನು ನೀವು ಕಂಡಿರಲೇಬೇಕು. ಸೊಳ್ಳೆಗಳಿಂದ ಹರಡುವ ಈ ವ್ಯಾಧಿಯನ್ನು ಯಾವುದೇ ರೀತಿಯಲ್ಲಿ ಉಚ್ಚರಿಸಿದರೂ, ಇದರ ರೋಗಲಕ್ಷಣಗಳು, ಅಪಾಯಕಾರಿ ಅಂಶಗಳು ಮತ್ತು ಮಾರಕತೆಗಳ ಪ್ರಮಾಣವು ಕಡಿಮೆಯಾಗದು. ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿ ಇರಿಸುವ ಮೂಲಕ ಮತ್ತು ಸೊಳ್ಳೆಗಳ ಸಂತತಿಯನ್ನು ಸಂಪೂರ್ಣವಾಗಿ ನಾಶಗೊಳಿಸುವ ತನಕ, ಈ ವ್ಯಾಧಿಯ ಹಾವಳಿಯನ್ನು ನಿಯಂತ್ರಿಸುವುದು ಅಸಾಧ್ಯವೂ ಹೌದು.

ಹಿನ್ನೆಲೆ
ಸುಮಾರು ಆರೇಳು ವರ್ಷಗಳ ಹಿಂದೆ ನಮ್ಮ ರಾಜ್ಯಕ್ಕೆ ಹೊಂದಿಕೊಂಡಿರುವ ಕೇರಳದ ಗಡಿಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಾ, ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿದ್ದ ಚಿಕೂನ್ ಗುನ್ಯಾ ಕಾಯಿಲೆಯೊಂದಿಗೆ ಡೆಂಗೆ ಜ್ವರದ ಹಲವಾರು ಪ್ರಕರಣಗಳು ಪತ್ತೆಯಾಗಿದ್ದವು. ಇವೆರಡೂ ವ್ಯಾಧಿಗಳು ಸೋಂಕು ಪೀಡಿತ ವ್ಯಕ್ತಿಗಳಿಗೆ ಕಚ್ಚಿದ್ದ ಸೊಳ್ಳೆಗಳಿಂದ ಹರಡುವುದರಿಂದ, ಜೊತೆಯಾಗಿ ಕಾಣಿಸಿಕೊಂಡ ಪ್ರಕರಣಗಳು ಸಾಕಷ್ಟು ಇವೆ. ಈ ವ್ಯಾಧಿಗಳನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷದಗಳನ್ನು ಇದುವರೆಗೆ ಪತ್ತೆ ಹಚ್ಚಿರದೇ ಇರುವುದರಿಂದಾಗಿ ಉಲ್ಬಣಿಸಿದ್ದ ಈ  ವ್ಯಾಧಿಯು, ಸಾಕಷ್ಟು ಸಂಖ್ಯೆಯ ರೋಗಿಗಳ ಮರಣಕ್ಕೂ ಕಾರಣವೆನಿಸಿವೆ. ಅಂತೆಯೇ ಈ ವ್ಯಾಧಿಗಳ ಮಾರಕತೆಯು ಜನಸಾಮಾನ್ಯರ ಮನದಲ್ಲಿ ಭೀತಿಯನ್ನು ಹುಟ್ಟಿಸಲೂ ಯಶಸ್ವಿಯಾಗಿವೆ.

ಏನಿದು ಡೆಂಗೆ ?

ಅರ್ಬೋ ವೈರಸ್ ಗಳ ವರ್ಗಕ್ಕೆ ಸೇರಿದ ಡೆಂಗೆ ರೋಗಕಾರಕ ವೈರಸ್ ಗಳು ಸಾಮಾನ್ಯವಾಗಿ ಎಡೆಸ್ ಇಜಿಪ್ತೈ ಜಾತಿಯ ಹೆಣ್ಣು ಸೊಳ್ಳೆಗಳಿಂದ ಹರಡುತ್ತವೆ. ಡೆಂಗೆ ವ್ಯಾಧಿಪೀಡಿತರನ್ನು ಕಚ್ಚಿದ ಈ ಸೊಳ್ಳೆಗಳು, ೮ ರಿಂದ ೧೨ ದಿನಗಳಲ್ಲಿ ಡೆಂಗೆ ವೈರಸ್ ಗಳನ್ನು ಹರಡುವ ಸಾಮರ್ಥ್ಯವನ್ನು ಗಳಿಸಿಕೊಳ್ಳುತ್ತವೆ. ವಿಶೇಷವೆಂದರೆ ಈ ಸೊಳ್ಳೆಗಳು ಸಾಯುವ ತನಕ ಈ ಸಾಮರ್ಥ್ಯವನ್ನು ಉಳಿಸಿಕೊಳ್ಳುತ್ತವೆ.

ರೋಗಲಕ್ಷಣಗಳು

ಡೆಂಗೆ ವ್ಯಾಧಿಪೀಡಿತರನ್ನು ಕಚ್ಚಿದ ಸೊಳ್ಳೆಗಳು ಆರೋಗ್ಯವಂತ ವ್ಯಕ್ತಿಗಳನ್ನು ಕಚ್ಚಿದ ಅನಂತರ ಸುಮಾರು ೫ - ೬ ದಿನಗಳಲ್ಲಿ ರೋಗಲಕ್ಷಣಗಳು ಪ್ರಕಟವಾಗುತ್ತವೆ. ಕಾಯಿಲೆಯ ತೀವ್ರತೆ ಹೆಚ್ಚಿದ್ದಲ್ಲಿ ೭ ರಿಂದ ೧೦ ದಿನಗಳು ಹಾಗೂ ಸೌಮ್ಯರೂಪದಲ್ಲಿ ಇದ್ದರೆ ೪ ರಿಂದ ೬ ದಿನಗಳ ಕಾಲ ರೋಗಿಯನ್ನು ಪೀಡಿಸುತ್ತದೆ.

ಡೆಂಗೆ ವ್ಯಾಧಿ ಪೀಡಿತರಲ್ಲಿ ಆಕಸ್ಮಿಕವಾಗಿ ಆರಂಭವಾಗುವ ಜ್ವರ, ಶರೀರದಾದ್ಯಂತ ಮಾಂಸಪೇಶಿಗಳಲ್ಲಿ ನೋವು, ವಿಶೇಷವಾಗಿ ಕಣ್ಣುಗಳ ಹಿಂಭಾಗ, ತಲೆ ಮತ್ತು ಅಸ್ಥಿ ಸಂಧಿಗಳಲ್ಲಿ ವಿಪರೀತ ನೋವು, ಕಣ್ಣುಗಳು ಕೆಂಪಾಗಿ ನೀರು ಒಸರುವುದು, ಬೆಳಕನ್ನು ನೋಡಲು ಆಗದಿರುವುದು, ವಾಕರಿಕೆ, ವಾಂತಿ, ಹಸಿವಿಲ್ಲದಿರುವುದು, ಎದ್ದೇಳಲು ಆಗದೇ ಹಾಸಿಗೆಯಲ್ಲೇ ಬಿದ್ದುಕೊಂಡಿರುವುದು, ಕೆಲರೋಗಿಗಳಲ್ಲಿ ಬಾಯಿ – ಮೂಗುಗಳಿಂದ ರಕ್ತಸ್ರಾವ, ನಿದ್ರಾಹೀನತೆ ಮತ್ತು ಖಿನ್ನತೆಗಳಂತಹ ಲಕ್ಷಣಗಳು ಕಂಡುಬರುತ್ತವೆ.

ವ್ಯಾಧಿಯ ತೀವ್ರತೆ ಹೆಚ್ಚಿದ್ದಲ್ಲಿ ಏರುವ ಜ್ವರದ ಬಾಧೆಯು ೭ ರಿಂದ ೧೦ ದಿನಗಳ ಕಾಲ ಬಾಧಿಸಬಹುದು. ಕೆಲ ರೋಗಿಗಳಲ್ಲಿ ಮೂರು ದಿನಗಳ ಬಳಿಕ ಮಾಯವಾಗುವ ಜ್ವರ ಮತ್ತು ಅನ್ಯ ಲಕ್ಷಣಗಳು, ಒಂದೆರಡು ದಿನಗಳಲ್ಲೇ ಮತ್ತೆ ಮರುಕಳಿಸುವುದು ಅಪರೂಪವೇನಲ್ಲ. ಈ ಸಂದರ್ಭದಲ್ಲಿ ರೋಗಿಗಳ ಕೈಕಾಲುಗಳ ಮೇಲೆ ಬೆವರುಸಾಲೆಯಂತಹ ದದ್ದುಗಳು ಮೂಡಿ, ಕ್ರಮೇಣ ಶರೀರದ ಅನ್ಯಭಾಗಗಳಿಗೂ ಹರಡಬಹುದು. ರೋಗಿಗಳು ಜ್ವರಮುಕ್ತರಾದ ಬಳಿಕವೂ ಅತಿಯಾದ ಆಯಾಸ ಮತ್ತು ಬಳಲಿಕೆಗಳಿಂದ ಮಲಗಿಕೊಂಡೇ ಇರುವುದು ಈ ವ್ಯಾಧಿಯ ಪೀಡೆಗಳಲ್ಲಿ ಒಂದಾಗಿದೆ.

ಡೆಂಗೆ ಪೀಡಿತ ರೋಗಿಗಳು ಈ ವೈರಸ್ ಗಳ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಗಳಿಸಿಕೊಂಡರೂ, ಇದು ಕೇವಲ ೯ ತಿಂಗಳ ಅವಧಿಗೆ ಸೀಮಿತವಾಗಿರುತ್ತದೆ. ಆದರೆ ಹಲವಾರು ಬಾರಿ ಡೆಂಗೆ ಜ್ವರದಿಂದ ಪೀಡಿತರಾಗಿರುವ ವ್ಯಕ್ತಿಗಳು, ಶಾಶ್ವತ ರೋಗನಿರೋಧಕ ಶಕ್ತಿಯನ್ನು ಗಳಿಸಿಕೊಳ್ಳುವರು.

೧೯೫೬ ರಿಂದ ದಕ್ಷಿಣ ಆಫ್ರಿಕಾದಲ್ಲಿ ಅನೇಕ ಬಾರಿ ಸಾಂಕ್ರಾಮಿಕವಾಗಿ ಹರಡಿದ್ದ ಡೆಂಗೆ ಜ್ವರದೊಂದಿಗೆ ಚಿಕೂನ್ ಗುನ್ಯಾ ವೈರಸ್ ಗಳು ಸೇರಿಕೊಂಡಿದ್ದ ಪರಿಣಾಮವಾಗಿ ಉದ್ಭವಿಸಿದ್ದ ಸಮಸ್ಯೆಗಳಲ್ಲಿ ಆಘಾತ ( ಶಾಕ್ ) ರಕ್ತಸ್ರಾವಗಳು ಪ್ರಮುಖವಾಗಿದ್ದವು. ಡೆಂಗೆ ಹೆಮೊರೆಜಿಕ್ ಫಿವರ್ ಎನ್ನುವ ಈ ಅಪಾಯಕಾರಿ ಸಮಸ್ಯೆಯ ಮಾರಕತೆಗೆ ಶೇ. ೧೦ ರಷ್ಟು ರೋಗಿಗಳು ಬಲಿಯಾಗಿದ್ದರು.

ಪತ್ತೆ ಹಚ್ಚುವುದೆಂತು ?

ಶಂಕಿತ ಜ್ವರಪೀಡಿತರ ರಕ್ತದ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸುವ ಮೂಲಕ ಡೆಂಗೆ ವೈರಸ್ ಗಳ ಇರುವಿಕೆಯನ್ನು ಪತ್ತೆ ಹಚ್ಚಬಹುದಾಗಿದೆ.

ಚಿಕಿತ್ಸೆ

ಡೆಂಗೆ ಜ್ವರವನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷದಗಳನ್ನು ವೈದ್ಯಕೀಯ ವಿಜ್ಞಾನಿಗಳು ಇಂದಿನ ತನಕ ಪತ್ತೆ ಹಚ್ಚಿಲ್ಲ. ರೋಗಿಯಲ್ಲಿ ಕಂಡುಬರುವ ಲಕ್ಷಣಗಳಿಗೆ ಅನುಗುಣವಾಗಿ ವೈದ್ಯರು ನೀಡುವ ಔಷದಗಳನ್ನು ಸೇವಿಸಿ, ಸಂಪೂರ್ಣ ವಿಶ್ರಾಂತಿಯನ್ನು ಪಡೆಯುವುದೇ ಇದಕ್ಕೆ ಪರಿಹಾರವಾಗಿದೆ. ಆದರೆ ಗಂಭೀರ ಸ್ಥಿತಿಯಲ್ಲಿರುವ ಹಾಗೂ ಅನ್ಯ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು  ಮತ್ತು ವಯೋವೃದ್ಧರನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆಯನ್ನು ನೀಡಬೇಕಾಗುವುದು.

ರೋಗಪೀಡಿತರನ್ನು ಪ್ರತ್ಯೇಕವಾದ ಕೋಣೆಯಲ್ಲಿರಿಸಿ, ಸೊಳ್ಳೆಪರದೆಯನ್ನು ಕಡ್ಡಾಯವಾಗಿ ಬಳಸುವ ಮೂಲಕ, ಈ ವ್ಯಾಧಿಯು ಅನ್ಯರಿಗೆ ಹರಡದಂತೆ ತಡೆಗಟ್ಟಬಹುದಾಗಿದೆ. ಇದರೊಂದಿಗೆ ಸುತ್ತಮುತ್ತಲೂ ಇರಬಹುದಾದ ಸೊಳ್ಳೆಗಳ ಸಂತಾನೋತ್ಪತ್ತಿ ಕೇಂದ್ರಗಳನ್ನು ನಾಶಪಡಿಸುವ ಮೂಲಕ ಈ ವ್ಯಾಧಿಯ ಹರಡುವಿಕೆಯನ್ನು ತಡೆಗಟ್ಟಬಹುದಾಗಿದೆ.

ಲಸಿಕೆ

ಸೂಕ್ತ ಚಿಕಿತ್ಸೆ ಇಲ್ಲದ ವ್ಯಾಧಿಗಳನ್ನು ಖಚಿತವಾಗಿ ತಡೆಗಟ್ಟಲು ಲಸಿಕೆಗಳು ಅತ್ಯಂತ ಪರಿಣಾಮಕಾರಿ ಎನಿಸುತ್ತವೆ. ಆದರೆ ಡೆಂಗೆ ಜ್ವರವನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ ಲಸಿಕೆಯನ್ನು ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು





No comments:

Post a Comment