Saturday, June 13, 2015

JUNE 14 : WORLD BLOOD DONORS DAY



               ಜೂನ್ ೧೪ : ವಿಶ್ವ ರಕ್ತದಾನಿಗಳ ದಿನಾಚರಣೆ

ವಿಶ್ವದ  ಬಹುತೇಕ ರಾಷ್ಟ್ರಗಳಲ್ಲಿ ಜೂನ್ ೧೪ ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ " ನನ್ನ ಜೀವವನ್ನು ಉಳಿಸಿದಕ್ಕಾಗಿ ಧನ್ಯವಾದಗಳು " ಎನ್ನುವ ವಿಚಾರದೊಂದಿಗೆ," ಉಚಿತವಾಗಿ ನೀಡಿ, ಆಗಾಗ ನೀಡಿ. ರಕ್ತದಾನ ಮಹತ್ವಪೂರ್ಣ." ಎನ್ನುವ ಘೋಷಣೆಯೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ.

ರಕ್ತದಾನ - ಜೀವದಾನ
ಸಾವಿನ ದವಡೆಗಳಲ್ಲಿ ಸಿಲುಕಿರುವವರನ್ನು ಬದುಕಿಸಲು ನೀವು ವೈದ್ಯರೇ ಆಗಬೇಕೆಂದಿಲ್ಲ. ನೀವು ಸ್ವಯಂಪ್ರೇರಿತವಾಗಿ ನೀಡುವ ಒಂದು ಯೂನಿಟ್ ರಕ್ತವು ಒಂದಲ್ಲ, ಮೂರು ಜೀವಗಳನ್ನು ಉಳಿಸಬಲ್ಲದು. ಜೊತೆಗೆ ನಿಯಮಿತವಾಗಿ ರಕ್ತದಾನ ಮಾಡುವುದರಿಂದ, ನಿಮ್ಮ ಆರೋಗ್ಯದ ಮಟ್ಟವೂ ಉನ್ನತಸ್ತರದಲ್ಲಿ ಇರುವುದು. ಇದಕ್ಕೂ ಮಿಗಿಲಾಗಿ ಹಲವಾರು ಜೀವಗಳನ್ನು ಉಳಿಸಿದ ಸಂತೃಪ್ತಿಯು ನಿಮ್ಮ ಮನಸ್ಸಿಗೆ ಮುದನೀಡುವುದು.

ರಕ್ತದ ಬೇಡಿಕೆ ಮತ್ತು ಪೂರೈಕೆ

ಜಾಗತಿಕ ಮಟ್ಟದಲ್ಲಿ ಪ್ರಾಣಾಪಾಯದ ಸ್ಥಿತಿಯಲ್ಲಿರುವ ರೋಗಿಗಳನ್ನು ಬದುಕಿಸಲು ಅತ್ಯವಶ್ಯಕವೆನಿಸುವ  ಸುರಕ್ಷಿತ ರಕ್ತ ಮತ್ತು ಇತರ ರಕ್ತದ ಉತ್ಪನ್ನಗಳ ಬೇಡಿಕೆ ದಿನೇದಿನೇ ಹೆಚ್ಚುತ್ತಿದೆ. ಆದರೆ ಬೇಡಿಕೆಯ ಪ್ರಮಾಣಕ್ಕೆ ಅನುಗುಣವಾಗಿ ರಕ್ತ ಮತ್ತು ರಕ್ತದ ಅನ್ಯ ಉತ್ಪನ್ನಗಳ ಪೂರೈಕೆ ಅಪೇಕ್ಷಿತ ಪ್ರಮಾಣದಲ್ಲಿ ಹೆಚ್ಚುತ್ತಿಲ್ಲ. ಅರ್ಥಾತ್ ಅಧಿಕತಮ ಆರೋಗ್ಯವಂತ ಯುವಕ - ಯುವತಿಯರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರುವುದಿಲ್ಲ!.

ಈ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿಯೇ ವಿಶ್ವ ರಕ್ತದಾನಿಗಳ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತಿದ್ದು, ಜನಸಾಮಾನ್ಯರನ್ನು ಸ್ವಯಂಪ್ರೇರಿತ ರಕ್ತದಾನ ಮಾಡುವಂತೆ ಪ್ರೇರೇಪಿಸಲಾಗುತ್ತಿದೆ. ಜೊತೆಗೆ ರಕ್ತದಾನದ ಮಹತ್ವದ ಬಗ್ಗೆ ಅರಿವನ್ನು ಮೂಡಿಸುವ ಮತ್ತು ಜನರ ಮನಸ್ಸಿನಲ್ಲಿ ಈ ಬಗ್ಗೆ ಇರಬಹುದಾದ ತಪ್ಪುಕಲ್ಪನೆಗಳನ್ನು ತೊಡೆದುಹಾಕುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ವಿಶ್ವ ರಕ್ತದಾನಿಗಳ ದಿನ

ಜಾಗತಿಕ ಮಟ್ಟದಲ್ಲಿ ಮೊತ್ತ ಮೊದಲಬಾರಿಗೆ ವಿಶ್ವ ರಕ್ತದಾನಿಗಳ ದಿನವನ್ನು  ೨೦೦೪ ರ ಜೂನ್ ೧೪ ರಂದು ಆಚರಿಸಲಾಗಿತ್ತು. ರಕ್ತದ ಗುಂಪುಗಳನ್ನು ಪತ್ತೆಹಚ್ಚಿದ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೈನರ್ ಇವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ.

ಆಧುನಿಕ ರಕ್ತಪೂರಣ ಪದ್ಧತಿಯ ಅನ್ವೇಷಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಈ ವೈದ್ಯ ವಿಜ್ಞಾನಿ, ೧೯೦೧ ರಲ್ಲಿ ರಕ್ತದ ಎ, ಬಿ, ಎಬಿ ಮತ್ತು ಓ ಗುಂಪುಗಳನ್ನು ಪತ್ತೆಹಚ್ಚಿದ ಮತ್ತು ಆಧುನಿಕ ಪದ್ಧತಿಯ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ ಸಂಶೋಧಕರೂ ಹೌದು. ೧೯೩೭ ರಲ್ಲಿ ಅಲೆಕ್ಸಾಂಡರ್ ವೈನರ್ ಎನ್ನುವ ಸಂಶೋಧಕರೊಂದಿಗೆ ಮಾನವನ ರಕ್ತದಲ್ಲಿರುವ “ ರೀಸಸ್ ಫ್ಯಾಕ್ಟರ್ “ ಎನ್ನುವ ಅಂಶವನ್ನು ಗುರುತಿಸುವ ಮೂಲಕ, ರೋಗಿಗಳ ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸದಂತೆ ರಕ್ತದ ಮರುಪೂರಣವನ್ನು ನಡೆಸಲು ಇವರು ಕಾರಣಕರ್ತರೆನಿಸಿದ್ದರು. ಈ ಮಹಾನ್ ಸಂಶೋಧಕರ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ, ಯಾವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ಈ ದಿನದಂದು ವಿಶೇಷವಾಗಿ ಸ್ವಯಂಪ್ರೇರಿತ ರಕ್ತದಾನವನ್ನು ಮಾಡುತ್ತಿರುವ ವ್ಯಕ್ತಿಗಳಿಗೆ ಧನ್ಯವಾದ ಸಮರ್ಪಿಸುವ ಕಾರ್ಯಕ್ರಮಗಳನ್ನು ಸ್ವಯಂಸೇವಾ ಸಂಘಟನೆಗಳು ಹಮ್ಮಿಕೊಳ್ಳುತ್ತವೆ. ತನ್ಮೂಲಕ ಇನ್ನಷ್ಟು ಜನರು ಈ ಮಹಾನ್ ಕಾರ್ಯದಲ್ಲಿ ಭಾಗವಹಿಸಲು ಪ್ರೇರೇಪಿಸುತ್ತವೆ.

ರಕ್ತದಾನಕ್ಕೆ ಆದ್ಯತೆ

ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯದಂತೆ ಪ್ರತಿ ೧೦೦೦ ಜನರಲ್ಲಿ ಕನಿಷ್ಠ ೧೦ ವ್ಯಕ್ತಿಗಳು ಮಾಡುವ ರಕ್ತದಾನದ ಪ್ರಮಾಣ ತೃಪ್ತಿಕರವೆನಿಸುತ್ತದೆ. ಆದರೆ ೭೫ ಕ್ಕೂ ಅಧಿಕ ರಾಷ್ಟ್ರಗಳಲ್ಲಿ ರಕ್ತದಾನದ ಪ್ರಮಾಣವು ಇದಕ್ಕೂ ಸಾಕಷ್ಟು ಕಡಿಮೆಯಿದೆ. ಈ ಕೊರತೆಯನ್ನು ನೀಗಿಸಲು ನಿಯಮಿತವಾಗಿ, ಸ್ವಯಂಪ್ರೇರಿತವಾಗಿ ಮತ್ತು ಉಚಿತವಾಗಿ ರಕ್ತದಾನ ಮಾಡುವ ದಾನಿಗಳನ್ನು ಪ್ರೋತ್ಸಾಹಿಸುವ ಮೂಲಕ ಸುರಕ್ಷಿತ ರಕ್ತದ ಪೂರೈಕೆಯ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಸದಸ್ಯ ರಾಷ್ಟ್ರಗಳಿಗೆ ಈ ವಿಧಾನದ ಮೂಲಕ ರಕ್ತವನ್ನು ಸಂಗ್ರಹಿಸುವಂತೆ ಸಲಹೆಯನ್ನು ನೀಡಿದೆ.

ಜಾಗತಿಕ ಮಟ್ಟದಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳ ಸಂಖ್ಯೆಯು ಗತದಶಕದಲ್ಲಿ ಹೆಚ್ಚಾಗಿದ್ದು ,ಜಗತ್ತಿನ  ೭೩ ರಾಷ್ಟ್ರಗಳು ತಮ್ಮ ಅವಶ್ಯಕತೆಯ ಶೇ.೯೦ ರಷ್ಟು ರಕ್ತವನ್ನು ಇಂತಹ ದಾನಿಗಳಿಂದಲೇ ಸಂಗ್ರಹಿಸುತ್ತಿವೆ. ಆದರೆ ೧೬ ಅತ್ಯಧಿಕ ಆದಾಯವಿರುವ, ೪೮ ಮಧ್ಯಮ ಆದಾಯವಿರುವ ಮತ್ತು ೧೬ ಕನಿಷ್ಠ ಆದಾಯವಿರುವ ದೇಶಗಳು ಸೇರಿದಂತೆ ೭೨ ರಾಷ್ಟ್ರಗಳು  ಶೇ. ೫೦ ರಷ್ಟು ರಕ್ತವನ್ನು ಹಣವನ್ನು ಪಡೆದು ರಕ್ತವನ್ನು ನೀಡುವ ಅಥವಾ ತಾವು ನೀಡಿದ್ದ ರಕ್ತಕ್ಕೆ ಪ್ರತಿಯಾಗಿ ಬೇರೊಂದು ಗುಂಪಿನ ರಕ್ತವನ್ನು ಮರಳಿ ಪಡೆಯುವ ದಾನಿಗಳಿಂದಲೇ ಸಂಗ್ರಹಿಸುತ್ತಿವೆ!.

ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯಂತೆ ಇದೀಗ ಜಗತ್ತಿನ ಶೇ. ೬೦ ರಾಷ್ಟ್ರಗಳು ಅವಶ್ಯಕತೆಗೆ ಬೇಕಾಗುವಷ್ಟು ಪ್ರಮಾಣದ ರಕ್ತವನ್ನು ದಾನಿಗಳಿಂದ ಸಂಗ್ರಹಿಸುತ್ತಿವೆ. ಇನ್ನುಳಿದ ಶೇ.೪೦ ರಾಷ್ಟ್ರಗಳು ರೋಗಿಗಳ ಸಂಬಂಧಿಗಳನ್ನು ಅಥವಾ ಅನ್ಯ ಮೂಲಗಳನ್ನು  ಅವಲಂಬಿಸುತ್ತಿವೆ. ೨೦೨೦ ನೇ ಇಸವಿಗೆ ಮುನ್ನ ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ತಮಗೆ ಬೇಕಾದಷ್ಟು ಪ್ರಮಾಣದ ರಕ್ತವನ್ನು ಉಚಿತವಾಗಿ ಮತ್ತು ಸ್ವಯಂಪ್ರೇರಿತವಾಗಿ ರಕ್ತವನ್ನು ನೀಡುವ ದಾನಿಗಳಿಂದಲೇ ಸಂಗ್ರಹಿಸಬೇಕೆನ್ನುವ  ಉದ್ದೇಶ ಮತ್ತು ಗುರಿಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಹೊಂದಿದೆ. ಈ ಉದ್ದೇಶ ನೆರವೇರಲು ಮತ್ತು ನಿಗದಿತ ಗುರಿಯನ್ನು ಸಾಧಿಸಲು, ಜಗತ್ತಿನ ಪ್ರತಿಯೊಂದು ರಾಷ್ಟ್ರಗಳ ಪ್ರಜೆಗಳು ಸ್ವಯಂಪ್ರೇರಿತ ರಕ್ತದಾನವನ್ನು ಮಾಡಬೇಕಿದೆ.

ರಕ್ತದಾನ – ಶ್ರೇಷ್ಠ ದಾನ

ಅನಾದಿಕಾಲದಿಂದಲೂ ಭಾರತದ ಹಿಂದೂ ಮತ್ತು ಅನ್ಯ ಕೆಲ ಧರ್ಮೀಯರು ಸಂದರ್ಭೋಚಿತವಾಗಿ ವಿವಿಧ ರೀತಿಯ – ವಸ್ತುಗಳನ್ನು ದಾನವಾಗಿ ನೀಡುವ ಪದ್ಧತಿ ರೂಢಿಯಲ್ಲಿತ್ತು. ಅರ್ಹ ವ್ಯಕ್ತಿಗಳಿಗೆ ನೀಡುವ ದಾನಗಳಿಂದ ತಮ್ಮ ಮತ್ತು ಕುಟುಂಬದ ಸದಸ್ಯರಿಗೆ ಕಿಂಚಿತ್ ಪುಣ್ಯವೂ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಗೆಯೂ ಇದಕ್ಕೆ ಕಾರಣವೆನಿಸಿತ್ತು. ಈ ನಂಬಿಗೆಯು ಇಂದಿಗೂ ಜೀವಂತವಾಗಿದೆ. ಆದರೆ ಇವೆಲ್ಲಾ ದಾನಗಳಿಗಿಂತ ಮಿಗಿಲಾದ ಹಾಗೂ ಸಾವಿನ ದವಡೆಗಳಲ್ಲಿ ಸಿಲುಕಿದವರನ್ನು ಬದುಕಿಸಬಲ್ಲ ಮತ್ತು ಅತ್ಯಂತ ಶ್ರೇಷ್ಠವಾದ ದಾನವೇ ರಕ್ತದಾನ. ಅಕ್ಷರಶಃ “ ಜೀವದಾನ “ ಎನಿಸುವ ಈ ದಾನಕ್ಕೆ ಜಾತಿಮತಗಳ ಮತ್ತು ಬಡವ ಬಲ್ಲಿದರೆನ್ನುವ ಭೇದವಿಲ್ಲ.ಅಂತೆಯೇ ಈ ದಾನಕ್ಕೆ ಅನ್ಯ ಯಾವುದೇ ದಾನಗಳು ಸಾಟಿಯಲ್ಲ ಎನ್ನುವುದನ್ನು ಮರೆಯದಿರಿ. ವಿಶ್ವ ರಕ್ತದಾನಿಗಳ ದಿನವನ್ನು ಸ್ವಯಂಪ್ರೇರಿತ ರಕ್ತದಾನ ಮಾಡುವ ಮೂಲಕ ಸ್ಮರಣೀಯವನ್ನಾಗಿಸಿ.

ನಿಮಗಿದು ತಿಳಿದಿರಲಿ

ಜಗತ್ತಿನ ಪ್ರತಿಯೊಂದು ರಾಷ್ಟ್ರಗಳಲ್ಲಿ ಅಪಘಾತ, ಹೆರಿಗೆ ಮತ್ತು ಅನ್ಯ ಕಾರಣಗಳಿಂದ ಸಂಭವಿಸುವ ಅತಿಯಾದ ರಕ್ತಸ್ರಾವಗಳಂತಹ ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ, ಸೂಕ್ತ ಸಮಯದಲ್ಲಿ ನಿರ್ದಿಷ್ಟ ಗುಂಪಿನ ಹಾಗೂ ಅವಶ್ಯಕ ಪ್ರಮಾಣದ ಸುರಕ್ಷಿತ ರಕ್ತ ಲಭ್ಯವಾಗದೇ ಸಹಸ್ರಾರು ಜನರು ಮೃತಪಡುತ್ತಾರೆ. ನಮ್ಮ ದೇಶವೂ ಈ ಸಮಸ್ಯೆಗೆ ಅಪವಾದವೆನಿಸಿಲ್ಲ. ಇದಲ್ಲದೇ ಅನೇಕರಿಗೆ ರಕ್ತದಾನದ ಬಗ್ಗೆ ಇರುವ ತಪ್ಪುಕಲ್ಪನೆಗಳು ಮತ್ತು ಮೂಢನಂಬಿಕೆಗಳಿಂದಾಗಿ, ಅನೇಕ ಜನರು ರಕ್ತದಾನ ಮಾಡಲು ಹಿಂಜರಿಯುತ್ತಾರೆ. ಆದರೆ ಇತ್ತೀಚಿನ ಕೆಲವರ್ಷಗಳಿಂದ ಭಾರತದ ಹಲವಾರು ಸ್ವಯಂಸೇವಾ ಸಂಸ್ಥೆಗಳು ರಕ್ತದಾನದ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುವ ಮೂಲಕ, ನಮ್ಮಲ್ಲಿ ಸ್ವಯಂಪ್ರೇರಿತ ರಕ್ತದಾನ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ.

ನಿಮಗೆ ೧೮ ವರ್ಷ ತುಂಬಿದಂದಿನಿಂದ ೬೦ ವರ್ಷ ವಯಸ್ಸಿನ ತನಕ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿದಲ್ಲಿ, ೫೦೦ ಕ್ಕೂ ಅಧಿಕ ವ್ಯಕ್ತಿಗಳ ಪ್ರಾಣಗಳನ್ನು ಉಳಿಸಬಹುದಾಗಿದೆ. ಇದರೊಂದಿಗೆ ಸಾಕಷ್ಟು ಪುಣ್ಯ ಮತ್ತು ಮಾನಸಿಕ ನೆಮ್ಮದಿಯನ್ನೂ ಗಳಿಸಬಹುದಾಗಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು






No comments:

Post a Comment