Thursday, June 25, 2015

JUNE 26 : INTERNATIONAL DAY AGAINST DRUG ABUSE


         ಜೂನ್ 26 : ವಿಶ್ವ ಮಾದಕದ್ರವ್ಯ ವಿರೋಧಿ ದಿನ  
      ಮಾದಕದ್ರವ್ಯಗಳ ವ್ಯಸನ : ನಿರರ್ಥಕವಾಗುವುದು ಜೀವನ
                     

ಕಳೆದ ಹಲವಾರು ದಶಕಗಳಿಂದ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಮಾದಕದ್ರವ್ಯಗಳ ಸೇವನೆಯ ಚಟ ದಿನೇದಿನೇ ಹೆಚ್ಚುತ್ತಿದೆ. ಈ ಅಪಾಯಕಾರಿ ವ್ಯಸನಕ್ಕೆ ಹದಿಹರೆಯದ ಮತ್ತು ಯುವಜನರು ಬಲಿಯಾಗುತ್ತಿರುವುದು ನಿಜಕ್ಕೂ ಗಾಬರಿಹುಟ್ಟಿಸುವಂತಿದೆ. ಈ ಸಮಸ್ಯೆಗೆ ಭಾರತವೂ ಅಪವಾದವೆನಿಸಿಲ್ಲ. ಅಂತೆಯೇ ಈ ಸಮಸ್ಯೆಗೆ ಬಡ, ಮಧ್ಯಮ ಆದಾಯದ ಮತ್ತು ಶ್ರೀಮಂತ ರಾಷ್ಟ್ರಗಳೆನ್ನುವ ಭೇದವೂ ಇಲ್ಲವೆಂದಲ್ಲಿ ನೀವೂ ನಂಬಲಾರಿರಿ. ಮಾದಕದ್ರವ್ಯಗಳ ಸೇವನೆಯ ಪರಿಣಾಮವಾಗಿ ಉದ್ಭವಿಸುತ್ತಿರುವ ವೈವಿಧ್ಯಮಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಯುನೈಟೆಡ್ ನೇಶನ್ಸ್ ಸಂಸ್ಥೆಯು, 1987 ರ ಡಿಸೆಂಬರ್ 7 ರಂದು ಜರಗಿದ್ದ ಅಧಿವೇಶನದಲ್ಲಿ ಪ್ರತಿವರ್ಷ ಜೂನ್ 26 ರಂದು ವಿಶ್ವ ಮಾದಕದ್ರವ್ಯ ವಿರೋಧಿ ದಿನವನ್ನಾಗಿ ಆಚರಿಸುವ ನಿರ್ಣಯವನ್ನು ಅಂಗೀಕರಿಸಿತ್ತು. ತನ್ಮೂಲಕ ಈ ಸಮಸ್ಯೆಯ ವಿರುದ್ಧ ಹೋರಾಟವನ್ನು ನಡೆಸುವ ನಿಟ್ಟಿನಲ್ಲಿ ವಿವಿಧ ದೇಶಗಳ ಸಹಕಾರದೊಂದಿಗೆ " ಮಾದಕದ್ರವ್ಯ ಮುಕ್ತ ಜಗತ್ತು " ಎನ್ನುವ ಧ್ಯೇಯವನ್ನು ಅನುಷ್ಠಾನಗೊಳಿಸಲು ನಿರ್ಧರಿಸಿತ್ತು. 1988 ರಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮಾದಕದ್ರವ್ಯ ವಿರೋಧಿ ದಿನವನ್ನು ಆಚರಿಸಲಾಗುತ್ತಿದ್ದು, ಈ ವರ್ಷ " LETS DEVELOP OUR LIVES,OUR COMMUNITIES, OUR IDENTITIES WITHOUT DRUGS " ಎನ್ನುವ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ವಿಶೇಷವಾಗಿ ಯುವಜನರ ಜೀವನವನ್ನೇ ನಾಶಪಡಿಸುತ್ತಿರುವ ಮಾದಕದ್ರವ್ಯಗಳ ವಿರುದ್ಧ ನಡೆಯುತ್ತಿರುವ ಈ ಹೋರಾಟ ಯಶಸ್ವಿಯಾಗಬೇಕಿದ್ದಲ್ಲಿ, ಜಗತ್ತಿನ ಪ್ರತಿಯೊಂದು ರಾಷ್ಟ್ರಗಳ ಸರ್ಕಾರಗಳು ಮತ್ತು ಪ್ರತಿಯೊಬ್ಬ ಪ್ರಜೆಯ ಸಹಕಾರ ಅತ್ಯವಶ್ಯಕವೆನಿಸುವುದು.

ಸಂಘಟಿತ ಪ್ರಯತ್ನ  

ಮಾದಕದ್ರವ್ಯಗಳ ವಿರುದ್ಧ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತ ಪ್ರಯತ್ನಗಳು ನಡೆಯುತ್ತಿದ್ದರೂ, ಈ ಸಮಸ್ಯೆಯು ಅನಿಯಂತ್ರಿತವಾಗಿ ಮುಂದುವರೆಯುತ್ತಿದೆ. ತತ್ಪರಿಣಾಮವಾಗಿ ಸಾರ್ವಜನಿಕರ ಆರೋಗ್ಯ, ಸುರಕ್ಷತೆ ಮತ್ತು ನೆಮ್ಮದಿಗಳೊಂದಿಗೆ ವಿವಿಧ ದೇಶಗಳ ಸುರಕ್ಷತೆ ಮತ್ತು ಸ್ವಾಯತ್ತತೆಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಬಹುತೇಕ ದೇಶಗಳ ಯುವಜನತೆಯನ್ನು ಶಾಪದೋಪಾದಿಯಲ್ಲಿ ಪೀಡಿಸುತ್ತಿರುವ ಈ ಗಂಭೀರ ಸಮಸ್ಯೆಯ ವಿರುದ್ಧ ಹೋರಾಡಲು, ಪ್ರತಿಯೊಂದು ದೇಶಗಳ ಸರ್ಕಾರಗಳು ಆರ್ಥಿಕ ಮತ್ತು ರಾಜಕೀಯ ಬೆಂಬಲವನ್ನು ನೀಡುವ ಮೂಲಕ ಸಹಕರಿಸುವಂತೆ ಯುನೈಟೆಡ್ ನೇಶನ್ಸ್ ಸಂಸ್ಥೆಯು ಮನವಿ ಮಾಡಿದೆ.

ಹೆಚ್ಚುತ್ತಿರುವ ವ್ಯಸನಿಗಳು 

ಯುನೈಟೆಡ್ ನೇಶನ್ಸ್ ಸಂಸ್ಥೆಯ ಮಾಹಿತಿಯಂತೆ ಜಗತ್ತಿನ ಸುಮಾರು 200 ದಶಲಕ್ಷಕ್ಕೂ ಅಧಿಕ ಜನರು ವಿವಿಧ ರೀತಿಯ ಮಾದಕದ್ರವ್ಯಗಳ ದಾಸಾನುದಾಸರಾಗಿದ್ದಾರೆ. ಇವರಲ್ಲಿ 162 ದಶಲಕ್ಷ ಜನರು ಕೆನ್ನಬಿಸ್,ಮರಿಹುವಾನ, ಹಶೀಶ್ ಹಾಗೂ ಟಿ ಎಚ್ ಸಿ, 35 ದಶಲಕ್ಷ ಜನರು ಎ ಟಿ ಎಸ್, ಎಕ್ಸ್ಟಸಿ, ಮೇಥಾಆಮ್ಫಿಟಾಮೈನ್, 16 ದಶಲಕ್ಷ ವ್ಯಸನಿಗಳು ಒಪಿಯಂ,ಮಾರ್ಫಿನ್ ಮತ್ತು ಅಫೀಮಿನ ಕೃತಕ ಉತ್ಪನ್ನಗಳು ಮತ್ತು 13 ದಶಲಕ್ಷ ವ್ಯಸನಿಗಳು ಕೊಕೇನ್ ನಂತಹ ಮಾದಕದ್ರವ್ಯಗಳನ್ನು ಸೇವಿಸುತ್ತಿದ್ದಾರೆ. ಈ ಮಾದಕವ್ಯಸನಿಗಳು ತಮ್ಮ ದೈನಂದಿನ ಸೇವನೆಯ ಮಾದಕದ್ರವ್ಯಗಳಿಗೆ ಹಣದ ಅಭಾವವಿದ್ದಲ್ಲಿ, ಅಮಾಯಕರ ಮೇಲೆ ಹಲ್ಲೆ ನಡೆಸುವ, ಸುಲಿಗೆ ಮಾಡುವ ಹಾಗೂ ಅನೇಕ ಸಂದರ್ಭಗಳಲ್ಲಿ ಕೊಲೆಯಂತಹ ಪಾತಕಗಳನ್ನು ನಡೆಸಿದ ಉದಾಹರಣೆಗಳು ಸಾಕಷ್ಟಿವೆ.

ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸರಬರಾಜಾಗುವ ಮಾದಕದ್ರವ್ಯಗಳ ಕಳ್ಳಸಾಗಾಣಿಕೆಯು ನಮ್ಮ ನೆರೆಯ ಅಫ್ಘಾನಿಸ್ತಾನ, ಪಾಕಿಸ್ತಾನ, ನೇಪಾಳ, ಬಾಂಗ್ಲಾ ದೇಶ್,ಭೂತಾನ ಮತ್ತು ಶ್ರೀಲಂಕಾ ದೇಶಗಳ ಮೂಲಕ ನಡೆಯುತ್ತಿದೆ. ಇಂತಹ ದ್ರವ್ಯಗಳಲ್ಲಿ ಆಫೀಮು, ಗಾಂಜಾ, ಚರಸ್, ಕೊಕೇನ್ ಗಳಂತಹ ದ್ರವ್ಯಗಳಲ್ಲದೇ, ವೈದ್ಯಕೀಯ ಕ್ಷೇತ್ರದಲ್ಲಿ ಬಳಸುವ ಕೆಲವಿಧದ ( ಮತ್ತೇರಿಸಬಲ್ಲ ) ಔಷದಗಳನ್ನೂ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ.

  ನಮ್ಮ ದೇಶದಲ್ಲಿ ಹದಿಹರೆಯದವರು, ಯುವಜನರಲ್ಲದೇ, ಶಾಲಾ ವಿದ್ಯಾರ್ಥಿಗಳು ಕೂಡಾ ಮಾದಕದ್ರವ್ಯ ಸೇವನೆಯ ಚಟವನ್ನು ಹೊಂದಿದ್ದಾರೆ. ಈ ವಿಚಾರದಲ್ಲಿ ದೇಶದ ಅನ್ಯ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕ ಅಗ್ರಸ್ಥಾನದಲ್ಲಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ನಿನ್ನೆಯ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯಂತೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋದ ಅಧಿಕಾರಿಗಳು ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬನನ್ನು ಬಂಧಿಸಿದ್ದು, ಆತನು “ ರೇವ್ ಪಾರ್ಟಿ “ ಗಳಿಗೆ ಮಾದಕದ್ರವ್ಯಗಳನ್ನು ಸರಬರಾಜು ಮಾಡುತ್ತಿದ್ದು ಸ್ವತಃ ವ್ಯಸನಿಯೂ ಆಗಿರುವ  ಪ್ರಕರಣ ಬಯಲಾಗಿದೆ. ವಿಶೇಷವೆಂದರೆ ಈತನು ಸರಬರಾಜು ಮಾಡುತ್ತಿದ್ದ ದ್ರವ್ಯಗಳಲ್ಲಿ ಎಲ್ ಎಸ್ ಡಿ ಮತ್ತು ಎಂ ಡಿ ಎಂ ಎ ಎನ್ನುವ ಚಿತ್ತವಿಭ್ರಮೆ ಅಥವಾ ಭ್ರಾಂತಿ ಮೂಡಿಸಬಲ್ಲ ಅಪಾಯಕಾರಿ ಮತ್ತು ಮಾರಕ ದ್ರವ್ಯಗಳು ಸೇರಿದ್ದವು. ಕೇಂದ್ರ ನರಮಂಡಲದ ಮೇಲೆ ತೀವ್ರ ಸ್ವರೂಪದ ದುಷ್ಪರಿಣಾಮ ಬೀರಬಲ್ಲ ಈ ದ್ರವ್ಯಗಳು, ಸಿಜೊಫ್ರೆನಿಯಾದಂತಹ ಗಂಭೀರ ಮಾನಸಿಕ ವ್ಯಾಧಿಯಲ್ಲದೇ ಹೃದಯ ಸ್ಥಂಭನ ಮತ್ತು ಮರಣಕ್ಕೂ ಕಾರಣವೆನಿಸಬಲ್ಲವು.


ಬಹುತೇಕ ವ್ಯಸನಿಗಳು ತಮ್ಮ ಸ್ನೇಹಿತರ ಒತ್ತಾಯಕ್ಕೆ ಮಣಿದು ಅಥವಾ ಅನ್ಯ ಕಾರಣಗಳಿಂದ ಮಾದಕದ್ರವ್ಯಗಳ ಸೇವನೆಯನ್ನು ಆರಂಭಿಸುತ್ತಾರೆ. ಕಾಲಕ್ರಮೇಣ ಇವುಗಳ ಸೇವನೆಯ ವ್ಯಸನಕ್ಕೆ ಈಡಾಗಿ, ತಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯಗಳೊಂದಿಗೆ, ಸಾಕಷ್ಟು ಹಣ ಮತ್ತು ಮರ್ಯಾದೆಗಳನ್ನೂ ಕಳೆದುಕೊಳ್ಳುತ್ತಾರೆ. ಜೊತೆಗೆ ತಮ್ಮ ಕುಟುಂಬದ ಅನ್ಯ ಸದಸ್ಯರ ನೆಮ್ಮದಿಯನ್ನು ಕೆಡಿಸುವುದರೊಂದಿಗೆ, ಅವರ ಸಾಮಾಜಿಕ ಜೀವನಕ್ಕೂ ಅಡ್ಡಿಆತಂಕಗಳನ್ನು ತಂದೊಡ್ಡುತ್ತಾರೆ. ದೀರ್ಘಕಾಲೀನ ವ್ಯಸನಿಗಳು ಕಾರಣಾಂತರಗಳಿಂದ ಆತ್ಮಹತ್ಯೆಗೂ ಶರಣಾಗುವುದು ಅಪರೂಪವೇನಲ್ಲ. ಮತ್ತೆ ಕೆಲವರು ಗಂಭೀರ ಸ್ವರೂಪದ ಶಾರೀರಕ ಅಥವಾ ಮಾನಸಿಕ ಕಾಯಿಲೆಗಳಿಗೆ ಬಲಿಯಾಗುತ್ತಾರೆ.

ಕೊನೆಯ ಮಾತು

ಅಂತರ ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಮಾದಕದ್ರವ್ಯಗಳ ಸೇವನೆಯ ಚಟವನ್ನು ತಡೆಗಟ್ಟಲು ಯುನೈಟೆಡ್ ನೇಶನ್ಸ್ ಸಂಸ್ಥೆಯು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗಿಯಾಗುವ ಮೂಲಕ, ನಮ್ಮ ದೇಶದಲ್ಲೂ ವೃದ್ಧಿಸುತ್ತಿರುವ ಈ ಸಮಸ್ಯೆಯನ್ನು ತೊಡೆದುಹಾಕಲು ನಾವಿಂದು ಪ್ರಯತ್ನಿಸಬೇಕಾಗಿದೆ. ಅಂತೆಯೇ ದೇಶದ ಯುವಜನತೆ ಇಂತಹ ವ್ಯಸನಗಳಿಗೆ ಬಲಿಯಾಗದಂತೆ ತಡೆಗಟ್ಟುವ ಹೊಣೆಗಾರಿಕೆ ನಮ್ಮನಿಮ್ಮೆಲ್ಲರ ಮೇಲಿದೆ. ಅಂತಿಮವಾಗಿ ಈ ವರ್ಷದ ಮಾದಕದ್ರವ್ಯ ವಿರೋಧಿ ದಿನಾಚರಣೆಯ ಘೋಷವಾಕ್ಯದಂತೆ, “ ನಮ್ಮ ಜೀವನ, ನಮ್ಮ ಸಮುದಾಯ, ನಮ್ಮ ವ್ಯಕ್ತಿತ್ವಗಳನ್ನು ಮಾದಕದ್ರವ್ಯ ರಹಿತವಾಗಿ ಅಭಿವೃದ್ಧಿಪಡಿಸೋಣ “ ಎನ್ನುವುದನ್ನು ಕಾರ್ಯಗತಗೊಳಿಸಲು ಶ್ರಮಿಸೋಣ.

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು





No comments:

Post a Comment