Monday, June 22, 2015

SAFE DISPOSAL OF DANGEROUS GARBAGE



ಅಪಾಯಕಾರಿ ತ್ಯಾಜ್ಯವಿಲೇವಾರಿಗೊಂದು ಸುಲಭದ ದಾರಿ!

ಇತ್ತೀಚೆಗಷ್ಟೇ ಸಾಕಷ್ಟು ವಾದವಿವಾದಗಳಿಗೆ ಗ್ರಾಸವೆನಿಸಿದ್ದ ಹಾಗೂ ಮಾಧ್ಯಮಗಳಲ್ಲಿ ಬಹಳಷ್ಟು ಸುದ್ದಿಗಳಿಗೆ ಮೂಲವೆನಿಸಿದ್ದ " ಮ್ಯಾಗಿ ನೂಡಲ್ಸ್ " ಗಳನ್ನು ನೆಸ್ಲೆ ಸಂಸ್ಥೆಯು ಮಾರುಕಟ್ಟೆಯಿಂದ ಮರಳಿ ಪಡೆದಿತ್ತು. ತದನಂತರ ತಾನು ಮರಳಿ ಪಡೆದಿದ್ದ ಸುಮಾರು 27,420 ಟನ್ ಗಳಷ್ಟು ಪ್ರಮಾಣದ ಈ ಉತ್ಪನ್ನವನ್ನು ಐದು ಸಿಮೆಂಟ್ ತಯಾರಿಕಾ ಘಟಕಗಳ  ಕುಲುಮೆಗಳಲ್ಲಿ ದಹಿಸುವ ಮೂಲಕ ನಾಶಪಡಿಸಿತ್ತು. ಕರ್ನಾಟಕದ ಕಲಬುರ್ಗಿ ಸಮೀಪದ ವಾಡಿಯಲ್ಲಿನ ಘಟಕದಲ್ಲೂ 577ಟನ್ ಮ್ಯಾಗಿಯನ್ನು ದಹಿಸಲಾಗಿತ್ತು.

 ಮ್ಯಾಗಿಯನ್ನು ಮೆಚ್ಚಿ ಸವಿಯುತ್ತಿದ್ದವರಿಗೆ ಅಪಥ್ಯವೆನಿಸಿದ್ದ ಈ ನಡೆಯು, ಅಪಾಯಕಾರಿ ಘನಲೋಹವಾಗಿರುವ ಸೀಸ ಮತ್ತು ಅತಿಯಾದ ಪ್ರಮಾಣದಲ್ಲಿ ಪತ್ತೆಯಾಗಿದ್ದ ಮೊನೊ ಸೋಡಿಯಂ ಗ್ಲುಟಾಮೇಟ್ ಎನ್ನುವ ರುಚಿವರ್ಧಕ ಕೃತಕ ರಾಸಾಯನಿಕ ಮಿಶ್ರಿತ ಉತ್ಪನ್ನವನ್ನು ಸುರಕ್ಷಿತವಾಗಿ ನಾಶಪಡಿಸಲು ಯಶಸ್ವಿಯಾಗಿತ್ತು. ಇದೇ ವಿಧಾನವನ್ನು ಅನೇಕ ವಿಧದ ಅಪಾಯಕಾರಿ ತ್ಯಾಜ್ಯಗಳನ್ನು ವಿಲೇವಾರಿ ಆಡಲು ಬಳಸುವ ವಿಚಾರ ಅನೇಕರಿಗೆ ತಿಳಿದಿಲ್ಲ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಅಪಾಯಕಾರಿ ತ್ಯಾಜ್ಯಗಳು

ನಮ್ಮ ದೇಶದಲ್ಲಿ ಪ್ರತಿನಿತ್ಯ ಲಕ್ಷಾಂತರ ಟನ್ ತ್ಯಾಜ್ಯಗಳು ಉತ್ಪನ್ನವಾಗುತ್ತಿದ್ದು, ಜನಸಾಮಾನ್ಯರ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಈ ವೈವಿಧ್ಯಮಯ ಹಾಗೂ ಅಪಾಯಕಾರಿ ತ್ಯಾಜ್ಯಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಿ, ಸುರಕ್ಷಿತವಾಗಿ ವಿಲೇವಾರಿ ಮಾಡಬಲ್ಲ ವ್ಯವಸ್ಥೆಗಳ ಅಭಾವದಿಂದಾಗಿ ವಾಯು - ಜಲಮಾಲಿನ್ಯ, ಪರಿಸರ ಪ್ರದೂಷಣೆ ಮತ್ತು ಗಂಭೀರ ತೊಂದರೆಗಳಿಗೆ  ಕಾರಣವೆನಿಸಬಲ್ಲ ಆರೋಗ್ಯದ ಸಮಸ್ಯೆಗಳು ಹೆಚ್ಚುತ್ತಿವೆ.

ಸಾಮಾನ್ಯವಾಗಿ ದೇಶದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ದಿನನಿತ್ಯ ಉತ್ಪನ್ನವಾಗುವ ತ್ಯಾಜ್ಯಗಳನ್ನು ಸಂಗ್ರಹಿಸಿ ತ್ಯಾಜ್ಯವಿಲೇವಾರಿ ಘಟಕಗಳಿಗೆ ಸಾಗಿಸಿದ ಬಳಿಕ, ಇವುಗಳನ್ನು ಪ್ರತ್ಯೇಕಿಸಬೇಕಾಗುವುದು. ಬಳಿಕ ಪುನರ್ ಆವರ್ತನಗೊಳಿಸಲು ಅಸಾಧ್ಯವೆನಿಸುವ ತ್ಯಾಜ್ಯಗಳನ್ನು ಮಾತ್ರ ಲ್ಯಾಂಡ್ ಫಿಲ್ ಸೈಟ್ ಗಳಲ್ಲಿ ವಿಲೇವಾರಿ ಮಾಡಬೇಕಾಗುವುದು. ಪುನರ್ ಆವರ್ತನಗೊಳಿಸಬಹುದಾದ ತ್ಯಾಜ್ಯಗಳನ್ನು ತತ್ಸಂಬಂಧಿತ ಘಟಕಗಳಿಗೆ ರವಾನಿಸಬೇಕಾಗುವುದು. ಅಂತಿಮವಾಗಿ ಉಳಿದ ಅಪಾಯಕಾರಿ ತ್ಯಾಜ್ಯಗಳನ್ನು ವೈಜ್ಞಾನಿಕ ಹಾಗೂ ಸುರಕ್ಷಿತ ವಿಧಾನಗಳಿಂದ ವಿಲೇವಾರಿ ಮಾಡಬೇಕೆಂದು ದೇಶದ ಸರ್ವೋಚ್ಛ ನ್ಯಾಯಾಲಯವು ಆದೇಶಿಸಿ ವರ್ಷಗಳೇ ಕಳೆದಿವೆ. ಆದರೆ ಬಹುತೇಕ ಸ್ಥಳೀಯ ಸಂಸ್ಥೆಗಳಿಗೆ ತ್ಯಾಜ್ಯ ಸಂಗ್ರಹ ಮತ್ತು ವಿವಿಧ ಹಂತಗಳ ವಿಲೇವಾರಿಗಳು ಕಬ್ಬಿಣದ ಕಡಲೆಯಾಗಿ ಪರಿಣಮಿಸಿವೆ!.

ವಿಶೇಷವೆಂದರೆ ಅಪಾಯಕಾರಿ ತ್ಯಾಜ್ಯಗಳೂ ಸೇರಿದಂತೆ ಅನೇಕ ವಿಧದ ತ್ಯಾಜ್ಯಗಳನ್ನು ವೈಜ್ಞಾನಿಕ ವಿಧಾನಗಳಿಂದ ಸುರಕ್ಷಿತವಾಗಿ ವಿಲೇವಾರಿ ಮಾಡಬಲ್ಲ ವ್ಯವಸ್ಥೆಯೊಂದನ್ನು ಅನೇಕ ಸಂಸ್ಥೆಗಳು ಹೊಂದಿದ್ದು, ಈ ವ್ಯವಸ್ಥೆಯು ದೇಶಾದ್ಯಂತ ಅನುಷ್ಠಾನಗೊಳಿಸಲು ಸರ್ಕಾರ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಕುಲುಮೆಗಳಿಗೆ ಇಂಧನ!

ನಮ್ಮ ದೇಶದಲ್ಲಿ ಉತ್ಪನ್ನವಾಗುತ್ತಿರುವ ಲಕ್ಷಾಂತರ ಟನ್ ತ್ಯಾಜ್ಯಗಳಲ್ಲಿ, ಗಣನೀಯ ಪ್ರಮಾಣದ ಅಪಾಯಕಾರಿ ಮತ್ತು ಇತರ ತ್ಯಾಜ್ಯಗಳನ್ನು ಸಿಮೆಂಟ್ ಮತ್ತು ಉಕ್ಕು ತಯಾರಿಕಾ ಘಟಕಗಳಲ್ಲಿನ ಕುಲುಮೆಗಳಲ್ಲಿ ಪರ್ಯಾಯ ಇಂಧನವನ್ನಾಗಿ ಬಳಸಲಾಗುತ್ತಿದೆ. ತನ್ಮೂಲಕ ಅಪಾಯಕಾರಿ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲಾಗುತ್ತಿದೆ. ತತ್ಪರಿಣಾಮವಾಗಿ ಈ ಘಟಕಗಳು ಇಂಧನಕ್ಕಾಗಿ ವ್ಯಯಿಸುತ್ತಿರುವ ಕೋಟ್ಯಂತರ ರೂಪಾಯಿಗಳನ್ನು ಉಳಿಸುವುದರೊಂದಿಗೆ, ಈ ತ್ಯಾಜ್ಯಗಳಿಂದ ಸಂಭವಿಸಬಲ್ಲ ಪರಿಸರ ಮಾಲಿನ್ಯವನ್ನೂ ಸುಲಭದಲ್ಲೇ ನಿಯಂತ್ರಿಸುತ್ತಿವೆ.

ಭಾರತದ ಖ್ಯಾತನಾಮ ಸಿಮೆಂಟ್ ತಯಾರಿಕಾ ಸಂಸ್ಥೆಯಾಗಿರುವ ಎ ಸಿ ಸಿ ಕಂಪೆನಿಯು ತನ್ನ ಸಿಮೆಂಟ್ ತಯಾರಿಕಾ ಘಟಕಗಳಲ್ಲಿನ ಕುಲುಮೆಗಳಲ್ಲಿ 23 ವಿಧದ ತ್ಯಾಜ್ಯಗಳನ್ನು ಪರ್ಯಾಯ ಇಂಧನವನ್ನಾಗಿ ಬಳಸುವ ಮೂಲಕ, 2009 ನೆ ಇಸವಿಯಲ್ಲಿ 40.77 ಕೋಟಿ ಮತ್ತು 2010 ರಲ್ಲಿ 47 ಕೋಟಿ ರೂಪಾಯಿಗಳನ್ನು ಉಳಿತಾಯ ಮಾಡಿತ್ತು. ಇವುಗಳಲ್ಲಿ ನಿರುಪಯುಕ್ತ ಟಯರ್ ಗಳ ಚೂರುಗಳು, ಪ್ಲಾಸ್ಟಿಕ್ ತ್ಯಾಜ್ಯಗಳು, ಆಸಿಡ್ ಟಾರ್ ಮಡ್ಡಿ, ಇದ್ದಿಲು, ತ್ಯಾಜ್ಯ ತೈಲೋತ್ಪನ್ನಗಳಂತಹ 22,092 ಟನ್ ತ್ಯಾಜ್ಯಗಳನ್ನು ಉರುವಲಿನ ರೂಪದಲ್ಲಿ ಬಳಸಿತ್ತು!.

ನಿಜ ಹೇಳಬೇಕಿದ್ದಲ್ಲಿ ನಿರುಪಯುಕ್ತ ಪ್ಲಾಸ್ಟಿಕ್, ಟಯರ್,ತೈಲಗಳು ಹಾಗೂ ಪೆಟ್ರೋಲಿಯಂ ಸಂಸ್ಕರಣಾ ಘಟಕಗಳ ತ್ಯಾಜ್ಯಗಳು, ಪೈಂಟ್, ಬಳಸಿದ ಕಲ್ಲಿದ್ದಲು ಇವೇ ಮುಂತಾದ ಅಪಾಯಕಾರಿ ತ್ಯಾಜ್ಯಗಳನ್ನು ಕುಲುಮೆಗಳಲ್ಲಿ ಉರಿಸುವ ಮೂಲಕ ಹಸಿರು ಮನೆ ಅನಿಲಗಳ ಹೊರ ಸೂಸುವಿಕೆಯ ಪ್ರಮಾಣವನ್ನು ನಿಯಂತ್ರಿಸುವುದರೊಂದಿಗೆ, ಇಂತಹ ತ್ಯಾಜ್ಯಗಳನ್ನು ಸ್ಥಳೀಯ ಸಂಸ್ಥೆಗಳು ವಿಲೇವಾರಿ ಮಾಡಲು ಬಳಸುವ ಲ್ಯಾಂಡ್ ಫೈಲ್ ಸೈಟ್ ಗಳ ನಿರ್ಮಾಣ ಮತ್ತು ಅವಶ್ಯಕತೆಗಳನ್ನೂ ನಿಯಂತ್ರಿಸಬಹುದಾಗಿದೆ.

ಇದಲ್ಲದೇ ವೈವಿಧ್ಯಮಯ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಉಕ್ಕಿನ ಕಾರ್ಖಾನೆಗಳಲ್ಲಿನ ಕುಳುಮೆಗಳಲ್ಲಿ ಇಂಧನದ ರೂಪದಲ್ಲಿ ಬಳಸುವ ಮೂಲಕ ಸುರಕ್ಷಿತವಾಗಿ ದಹಿಸುವ ತಂತ್ರಜ್ಞಾನವನ್ನು, ಭಾರತೀಯ ಸಂಜಾತೆ ವೀಣಾ ಸಹಜವಾಲ್ ಎನ್ನುವ ವಿಜ್ಞಾನಿಯೊಬ್ಬರು ಕೆಲ ವರ್ಷಗಳ ಹಿಂದೆಯೇ ಕಂಡುಹುಡುಕಿದ್ದರು. ಈ ತಂತ್ರಜ್ಞಾನವನ್ನು ಜಗತ್ತಿನ ಸುಪ್ರಸಿದ್ಧ ಉಕ್ಕು ತಯಾರಿಕಾ ಘಟಕಗಳಲ್ಲಿ ಬಳಸಲಾಗುತ್ತಿದ್ದರೂ, ಭಾರತ ಉಕ್ಕು ತಯಾರಿಕಾ ಘಟಕಕಗಳಲ್ಲಿ ವ್ಯಾಪಕವಾಗಿ ಬಳಸುತ್ತಿಲ್ಲ. ಅಂತೆಯೇ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನೂತನ ರಸ್ಯೆಗಳ ನಿರ್ಮಾಣದಲ್ಲಿ ಬಳಸುವ ತಂತ್ರಜ್ಞಾನ ನಮ್ಮಲ್ಲಿ ಲಭ್ಯವಿದೇ.ಇದರಿಂದ  ರಸ್ತೆಗಳ ನಿರ್ಮಾಣದ ವೆಚ್ಚಕಡಿಮೆಯಾಗುವುದರೊಂದಿಗೆ ಸುದೀರ್ಘಕಾಲ ಬಾಳ್ವಿಕೆ ಬರುವ ವಿಚಾರದ ಅರಿವಿದ್ದರೂ,ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ತಂತ್ರಜ್ಞಾನವನ್ನು ಕಡ್ಡಾಯವಾಗಿ ಬಳಸಲು ಆದೇಶಿಸಿಲ್ಲ. ಹಾಗೂ ಇದೇ ಕಾರಣದಿಂದಾಗಿ ನಮ್ಮ ದೇಶದ ಜನಸಂಖ್ಯೆಯಂತೆಯೇ ಅನಿಯಂತ್ರಿತವಾಗಿ ಹೆಚ್ಚುತ್ತಿರುವ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲಾಗುತ್ತಿಲ್ಲ. ತತ್ಪರಿಣಾಮವಾಗಿ ಹಳ್ಳಿಯಿಂದ ಆರಂಭಿಸಿ ದಿಲ್ಲಿಯ ತನಕ, ಕಣ್ಣು ಹಾಯಿಸಿದಲ್ಲೆಲ್ಲಾ ಕಾಣಸಿಗುವ ತ್ಯಾಜ್ಯಗಳ ರಾಶಿಗಳು  ಕಣ್ಮರೆಯಾಗುತ್ತಿಲ್ಲ!.

ಅದೇನೇ ಇರಲಿ, ಪ್ರಸ್ತುತ ನಮ್ಮ ದೇಶದಲ್ಲಿರುವ ಪ್ರತಿಯೊಂದು ಸಿಮೆಂಟ್ ಮತ್ತು ಉಕ್ಕು ತಯಾರಿಕಾ ಘಟಕಗಳಲ್ಲಿನ ಕುಲುಮೆಗಳಲ್ಲಿ ನಿರುಪಯುಕ್ತ ಮತ್ತು ಅಪಾಯಕಾರಿ ತ್ಯಾಜ್ಯಗಳನ್ನು ಕಡ್ಡಾಯವಾಗಿ ದಹಿಸಲು ಹಾಗೂ ನೂತನವಾಗಿ ನಿರ್ಮಿಸುವ ಪ್ರತಿಯೊಂದು ರಸ್ತೆಗಳನ್ನು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿ ನಿರ್ಮಿಸುವುದನ್ನು ಕಡ್ಡಾಯಗೊಳಿಸಲು  ಅವಶ್ಯಕವೆನಿಸುವ ಕಾನೂನುಗಳನ್ನು ಕೇಂದ್ರ ಸರ್ಕಾರವು ಆದ್ಯತೆಯ ಮೇರೆಗೆ ಜಾರಿಗೊಳಿಸಬೇಕಾಗಿದೆ. ತನ್ಮೂಲಕ ಸ್ಥಳೀಯ ಸಂಸ್ಥೆಗಳಿಗೆ ತಲೆನೋವಾಗಿರುವ ಹಾಗೂ ದೇಶದ ಪ್ರಜೆಗಳ ಆರೋಗ್ಯಕ್ಕೆ ಮಾರಕವೆನಿಸುತ್ತಿರುವ ಅಪಾಯಕಾರಿ ತ್ಯಾಜ್ಯಗಳ ಸುರಕ್ಷಿತ ವಿಲೇವಾರಿಗೆ ಆಸ್ಪದವನ್ನು ಕಲ್ಪಿಸಬೇಕಿದೆ.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು




No comments:

Post a Comment