Tuesday, June 16, 2015

VIRAL FEVERS




ವೈರಾಣು ಜ್ವರ : ಚಿಕಿತ್ಸೆಯೊಂದಿಗೆ ವಿಶ್ರಾಂತಿಯೇ ಪರಿಹಾರ

ಪ್ರಸ್ತುತ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಡೆಂಗೆ ಹಾಗೂ ಚಿಕೂನ್ ಗುನ್ಯಾ ಪ್ರಕರಣಗಳೊಂದಿಗೆ, ಮಲೇರಿಯ, ಫ್ಲೂ ಜ್ವರ, ಸಾಮಾನ್ಯ ಶೀತ ಮತ್ತಿತರ ಕಾಯಿಲೆಗಳ ಹಾವಳಿ ಹೆಚ್ಚುತ್ತಿರುವ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ಅದರಲ್ಲೂ ಡೆಂಗೆ ಮತ್ತು ಚಿಕೂನ್ ಗುನ್ಯಾ ವ್ಯಾಧಿಗಳ ಬಗ್ಗೆ ಜನಸಾಮಾನ್ಯರು ಭಯಭೀತರಾಗಿರಲು, ಹಲವಾರು ರೋಗಿಗಳು ಈ ಕಾಯಿಲೆಗಳಿಗೆ ಬಲಿಯಾಗಿರುವುದೇ ಪ್ರಮುಖ ಕಾರಣವೆನಿಸಿದೆ. ತತ್ಪರಿಣಾಮವಾಗಿ ಕಿಂಚಿತ್ ಜ್ವರ ಬಾಧಿಸಿದೊಡನೆ ವೈದ್ಯರ ಬಳಿಗೆ ಧಾವಿಸುವ ರೋಗಿಗಳು, ತಮ್ಮ ರಕ್ತವನ್ನು ಪರೀಕ್ಷಿಸುವ ಅವಶ್ಯಕತೆಯ ಬಗ್ಗೆ ವೈದ್ಯರಿಗೆ ಸಲಹೆಯನ್ನು ನೀಡುತ್ತಿದ್ದಾರೆ!.

ಹವಾಮಾನದ ಬದಲಾವಣೆಯ ಪರಿಣಾಮ

ಸಾಮಾನ್ಯವಾಗಿ ಬೇಸಗೆಯ ಧಗೆಯ ಹೆಚ್ಚಿದಾಗ ಸುರಿಯುವ ಮುಂಗಾರುಪೂರ್ವ ಮಳೆಯು ಇಳೆಯನ್ನು ತುಸು ತಂಪಾಗಿಸುತ್ತದೆ. ಮುಂದಿನ ಕೆಲವೇ ದಿನಗಳಲ್ಲಿ ಆರಂಭವಾಗುವ ಮಳೆಗಾಲದ ಪರಿಣಾಮವಾಗಿ ವಾತಾವರಣವು ಇನ್ನಷ್ಟು  ತಂಪಾಗುತ್ತದೆ. ಪ್ರಸ್ತುತ ನಮ್ಮ ಜಿಲ್ಲೆಯಲ್ಲಿ ಬಿಸಿಲುಮಳೆಗಳ ಕಣ್ಣುಮುಚ್ಚಾಲೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಉದ್ಭವಿಸುವ ಕೆಲ ವ್ಯಾಧಿಗಳಿಗೆ ಕಾರಣವೆನಿಸುವ ವೈರಸ್ ಗಳು, ಇಂತಹ ವಾತಾವರಣದಲ್ಲಿ ಕ್ಷಿಪ್ರಗತಿಯಲ್ಲಿ ವೃದ್ಧಿಸುತ್ತಾ ಹರಡುತ್ತವೆ. ಇದೇ ಸಂದರ್ಭದಲ್ಲಿ ಶಾಲಾಕಾಲೇಜುಗಳು ಆರಂಭವಾಗುವುದರಿಂದ, ಈ ವೈರಸ್ ಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆಗಳು ಇನ್ನಷ್ಟು ಹೆಚ್ಚುತ್ತವೆ.

ವೈರಾಣುಗಳಿಂದ ಜ್ವರ

ಸಾಮಾನ್ಯವಾಗಿ ವೈರಸ್ ಗಳಿಂದ ತಲೆದೋರುವ ಜ್ವರವು ಸೌಮ್ಯ ರೂಪದಲ್ಲಿರುವುದು. ಆದರೆ ಕೆಲವೊಂದು ವೈರಾಣುಗಳಿಂದ ಉದ್ಭವಿಸುವ ಜ್ವರದಲ್ಲಿ, ರೋಗಿಯನ್ನು ಥರಥರ ನಡುಗಿಸುವಂತಹ ಚಳಿ ಕಂಡುಬರುತ್ತದೆ. ವ್ಯಾಧಿಯ ತೀವ್ರತೆ ಕೊಂಚ ಅಧಿಕವಾಗಿದ್ದಲ್ಲಿ, ಇಂತಹ ಚಳಿಜ್ವರವು ಎಂಟೆದೆಯ ಬಂಟರನ್ನೂ ಹಾಸಿಗೆ ಹಿಡಿಯುವಂತೆ ಮಾಡುತ್ತದೆ!. ಮಲೇರಿಯ, ಡೆಂಗೆ, ಚಿಕೂನ್ ಗುನ್ಯಾ, ಫ್ಲೂ ಜ್ವರ ಮುಂತಾದ ಕಾಯಿಲೆಗಳಲ್ಲಿ ಚಳಿಜ್ವರ ಕಂಡುಬರುವ ಸಾಧ್ಯತೆಗಳಿರುವುದರಿಂದ, ಬಹುತೇಕ ರೋಗಿಗಳು ಚಳಿಜ್ವರ ಬಾಧಿಸಿದೊಡನೆ ಗಾಬರಿಯಾಗುತ್ತಾರೆ.

ಜ್ವರ - ನೂರು ತರಹ

ಜ್ವರ ಕೇವಲ ಒಂದು ರೋಗ ಲಕ್ಷಣವಾಗಿದ್ದು, ನೂರಾರು ವ್ಯಾಧಿಗಳಲ್ಲಿ ಕಂಡುಬರುತ್ತದೆ. ಸಾಮಾನ್ಯ ಶೀತದಿಂದ ಆರಂಭಿಸಿ ಮಾರಕ ಕ್ಯಾನ್ಸರ್ ನಂತಹ ಕಾಯಿಲೆಗಳಲ್ಲೂ ಜ್ವರ ಒಂದು ಲಕ್ಷಣವಾಗಿರುತ್ತದೆ. ಆದುದರಿಂದ ಆಕಸ್ಮಿಕವಾಗಿ ಜ್ವರ ಬಾಧಿಸಿದೊಡನೆ, ಇದು ಡೆಂಗೆ, ಚಿಕೂನ್ ಗುನ್ಯಾ ಅಥವಾ ಮತ್ಯಾವುದೋ ಕಾಯಿಲೆಯೆಂದು ಸ್ವಯಂ ನಿರ್ಧರಿಸದಿರಿ. ಕೇವಲ ಒಂದು ವಿಧದ ರಕ್ತ ಪರೀಕ್ಷೆಯಿಂದ ನಿಮ್ಮನ್ನು ಪೀಡಿಸುತ್ತಿರುವ ವ್ಯಾಧಿಯನ್ನು ನಿಖರವಾಗಿ ಪತ್ತೆ ಹಚ್ಚುವುದು ಅಸಾಧ್ಯ ಎನ್ನುವುದನ್ನು ತಿಳಿದಿರಿ. ನಿಮ್ಮ ವೈದ್ಯರು ರೋಗಿಯನ್ನು ಪರೀಕ್ಷಿಸಿದ ಬಳಿಕ ಆತನಲ್ಲಿ ಕಂಡುಬರುವ ಲಕ್ಷಣಗಳ ಆಧಾರದ ಮೇಲೆ ವ್ಯಾಧಿಯನ್ನು ಪತ್ತೆಹಚ್ಚಲು ವಿಫಲರಾದಲ್ಲಿ, ತಮ್ಮ ಸಂದೇಹವನ್ನು ದೂರಮಾಡಲು ಸೂಚಿಸುವ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿ. ವಿವಿಧ ಕಾಯಿಲೆಗಳನ್ನು ಪತ್ತೆ ಹಚ್ಚಲು ವಿಭಿನ್ನ ಪರೀಕ್ಷೆಗಳು ಇರುವುದರಿಂದ, ವೈದ್ಯರು ಸೂಚಿಸದೇ ಪ್ರಯೋಗಾಲಕ್ಕೆ ತೆರಳಿ ನೀವಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳದಿರಿ.

 ಇದೀಗ ಜೂನ್ ತಿಂಗಳಿನ ಮಧ್ಯಭಾಗದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ೬೦೦ ಕ್ಕೂ ಅಧಿಕ ಡೆಂಗೆ ಮತ್ತು ೨೦೦ ಕ್ಕೂ ಅಧಿಕ ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ. ಇವೆರಡೂ ವ್ಯಾಧಿಗಳನ್ನು ಖಚಿತವಾಗಿ ಗುಣಪಡಿಸಬಲ್ಲ ಔಷದಗಳು ಲಭ್ಯವಿಲ್ಲದಿರುವುದರಿಂದಾಗಿ ಹಾಗೂ ಅನಿರೀಕ್ಷಿತ ಅಥವಾ ಗಂಭೀರ ವೈದ್ಯಕೀಯ ಸಮಸ್ಯೆಗಳಿಂದ ಕೆಲ ರೋಗಿಗಳು ಮೃತಪಡುತ್ತಾರೆ.

ಸಾಮಾನ್ಯ ಶೀತ – ಫ್ಲೂ ಜ್ವರ

ಮಳೆಗಾಲ ಆರಂಭವಾದೊಡನೆ ಅಧಿಕತಮ ಜನರನ್ನು ಪೀಡಿಸುವ ಸಾಮಾನ್ಯ ಶೀತವು ಸಂದರ್ಭೋಚಿತವಾಗಿ ಉಲ್ಬಣಿಸಿದಲ್ಲಿ, ಚಳಿಜ್ವರ, ಕೆಮ್ಮು ಮತ್ತು ವಿಪರೀತ ತಲೆನೋವು ಕೂಡಾ ಬಾಧಿಸಬಹುದು.ಇದಕ್ಕೆ ಕಾರಣವೆನಿಸಬಲ್ಲ ವೈರಸ್ ಗಳಲ್ಲಿ ಸುಮಾರು ೨೫೦ ಕ್ಕೂ ಅಧಿಕ ಪ್ರಭೇದಗಳಿದ್ದು, ವಿಶೇಷವಾಗಿ ಮಕ್ಕಳಲ್ಲಿ ಒಂದುಬಾರಿ ಆರಂಭವಾದ ಶೀತ ಗುಣವಾದಂತೆಯೇ, ಮತ್ತೊಮ್ಮೆ ಬೇರೊಂದು ವೈರಸ್ ನಿಂದಾಗಿ ಪುನರಪಿ ಶೀತ ಬಾಧಿಸುವ ಸಾಧ್ಯತೆಗಳಿವೆ. ಅದೇ ರೀತಿಯಲ್ಲಿ ಫ್ಲೂ ಜ್ವರ ತಲೆದೋರಿದಲ್ಲಿ ಮೇಲಿನ ಲಕ್ಷಣಗಳೊಂದಿಗೆ ವಿಪರೀತ ಮೈಕೈ ನೋವು, ತಲೆನೋವು, ಗಂಟಲ ಕೆರೆತ, ಒಣಕೆಮ್ಮು  ಹಾಗೂ ಕಣ್ಣುಗಳು ಕೆಂಪಾಗಿ ಉರಿಯುವ ಅಥವಾ ನೀರು ಒಸರುವ ಸಮಸ್ಯೆಗಳು ಬಾಧಿಸಬಹುದು. ಫ್ಲೂ ಜ್ವರವನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷದಗಳು ಲಭ್ಯವಿಲ್ಲದಿದ್ದರೂ, ಇದನ್ನು ತಡೆಗಟ್ಟಬಲ್ಲ ಲಸಿಕೆಗಳು ಲಭ್ಯವಿದೆ. ಆದರೆ ಈ ಲಸಿಕೆಯನ್ನು ಪದೇಪದೇ ತೆಗೆದುಕೊಳ್ಳಬೇಕಾಗುತ್ತದೆ.  ಮಳೆಗಾಲದ ದಿನಗಳಲ್ಲಿ ಮಾತ್ರವಲ್ಲ, ಚಳಿಗಾಲದಲ್ಲೂ ಕಂಡುಬರಬಹುದಾದಂತಹ ಇಂತಹ ಸಮಸ್ಯೆಗಳನ್ನು ನಿರ್ಲಕ್ಷಿಸದೇ, ವೈದ್ಯರ ಸಲಹೆ ಮತ್ತು ಚಿಕಿತ್ಸೆಗಳೊಂದಿಗೆ ಸಂಪೂರ್ಣ ವಿಶ್ರಾಂತಿಯನ್ನು  ಪಡೆದುಕೊಳ್ಳುವುದು ಹಿತಕರವೆನಿಸುವುದು. ಅಂತೆಯೇ ಸ್ವಯಂ ಚಿಕಿತ್ಸೆಯ ಪ್ರಯೋಗಗಳು ಮತ್ತಷ್ಟು ಸಂಕಷ್ಟಗಳಿಗೆ ಕಾರಣವೆನಿಸಬಹುದು.

ನಿಮಗಿದು ತಿಳಿದಿರಲಿ

ವೈರಾಣುಗಳಿಂದ ಉದ್ಭವಿಸುವ ಜ್ವರಗಳೆಲ್ಲವೂ ಮಾರಣಾಂತಿಕ ಎನಿಸುವುದಿಲ್ಲ. ನೂರಾರು ವ್ಯಾಧಿಗಳ ಲಕ್ಷಣದ ರೂಪದಲ್ಲಿ ಪ್ರಕಟವಾಗುವ ಜ್ವರ, ನಿಜಕ್ಕೂ ಒಂದು ವ್ಯಾಧಿಯೇ ಅಲ್ಲ. ಸಾಮಾನ್ಯವಾಗಿ ವೈರಾಣುಗಳಿಂದ ಉದ್ಭವಿಸುವ ಜ್ವರವು ೩ ರಿಂದ ೭ ದಿನಗಳ ಕಾಲ ಬಾಧಿಸುವುದರಿಂದ, ಒಂದೆರಡು ದಿನಗಳ ಚಿಕಿತ್ಸೆಯಿಂದ ಜ್ವರ ಶಮನವಾಗಿಲ್ಲವೆಂದು ಪದೇಪದೇ ವೈದ್ಯರನ್ನು ಬದಲಾಯಿಸದಿರಿ.

ವೈದ್ಯರು ಸೂಚಿಸಿದ ಔಷದಗಳನ್ನು ನಿಗದಿತ ಪ್ರಮಾಣದಲ್ಲಿ, ನಿಗದಿತ ಅವಧಿಗೆ ತಪ್ಪದೇ ಸೇವಿಸಿ. ಜೊತೆಗೆ ಧಾರಾಳ ದ್ರವಾಹಾರವನ್ನು ಸೇವಿಸಿ ವಿಶ್ರಾಂತಿಯನ್ನು ಪಡೆದಲ್ಲಿ, ಅಯಾಚಿತ ಸಮಸ್ಯೆಗಳನ್ನು ತಡೆಗಟ್ಟಬಹುದು ಎನ್ನುವುದನ್ನು ಮರೆಯದಿರಿ.

ತೀವ್ರ ಜ್ವರದೊಂದಿಗೆ ವಿಪರೀತ ಕೆಮ್ಮು,ಗಂಟಲು ನೋವು, ಅಸಹನೀಯ ತಲೆನೋವು, ವಾಂತಿ, ಭೇದಿ, ಅಪಸ್ಮಾರದಂತಹ ಸೆಳೆತಗಳು ಪ್ರತ್ಯಕ್ಷವಾದಲ್ಲಿ ಮತ್ತು ರೋಗಿಯು ಪ್ರಜ್ಞಾಹೀನನಾದಲ್ಲಿ, ತಕ್ಷಣ ಆಸ್ಪತ್ರೆಗೆ ದಾಖಲಿಸಿ ತಜ್ಞ ವೈದ್ಯರ ಸಲಹೆ – ಚಿಕಿತ್ಸೆಯನ್ನು ಕೊಡಿಸಿ.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು



No comments:

Post a Comment