Wednesday, February 5, 2014

SHASTRACHIKITSE ANTIMA ASTRAVE?



               ಶಸ್ತ್ರಚಿಕಿತ್ಸೆ ಅಂತಿಮ ಅಸ್ತ್ರವೇ?

ನಿಮ್ಮನ್ನು ಪೀಡಿಸುತ್ತಿರುವ ಆರೋಗ್ಯದ ಸಮಸ್ಯೆಯೊಂದಕ್ಕೆ ಶಸ್ತ್ರಚಿಕಿತ್ಸೆಯೇ ಏಕಮಾತ್ರ ಪರಿಹಾರವೆಂದು ವೈದ್ಯರು ಸೂಚಿಸಿದಾಗ,  "ಶುಭಸ್ಯ ಶೀಘ್ರಂ" ಎಂದು ಚಿಕಿತ್ಸೆ ಪಡೆದುಕೊಂಡಲ್ಲಿ ನಿಮ್ಮ ಶಾರೀರಿಕ ಸಮಸ್ಯೆಯ ಪರಿಹಾರದೊಂದಿಗೆ ಮಾನಸಿಕ ನೆಮ್ಮದಿಯೂ ಲಭಿಸುವುದರಲ್ಲಿ ಸಂದೇಹವಿಲ್ಲ. 
-------------               --------------                  --------------                 ----------------         --------------

ಮಾನವನನ್ನು ಪೀಡಿಸುವ ಪ್ರತಿಯೊಂದು ಕಾಯಿಲೆಗಳನ್ನು " ಔಷದ ಚಿಕಿತ್ಸೆ" ಯ ಮೂಲಕ ಗುಣಪಡಿಸುವುದು ಅಸಾಧ್ಯ ಎನ್ನುವುದು ನಿಮಗೂ ತಿಳಿದಿರಲೇಬೇಕು. ಶಸ್ತ್ರಚಿಕಿತ್ಸೆಯ ಹೊರತು ಅನ್ಯ ಚಿಕಿತ್ಸೆಗಳಿಂದ ಗುಣಪಡಿಸಲು ಅಸಾಧ್ಯವೆನಿಸುವ ಕೆಲವೊಂದು ವೈದ್ಯಕೀಯ ಸಮಸ್ಯೆಗಳಲ್ಲಿ, ಇತರ ಯಾವುದೇ ಪದ್ದತಿಯ ಚಿಕಿತ್ಸೆಗಳು ನಿಷ್ಪ್ರಯೋಜಕ ಎನಿಸುತ್ತವೆ. ಆದರೆ ಶಸ್ತ್ರಚಿಕಿತ್ಸೆಯ ಬಗ್ಗೆ ಅನಾವಶ್ಯಕವಾಗಿ ಭಯಪಡುವ ಜನಸಾಮಾನ್ಯರು, ಇಂತಹ ಪ್ರಯೋಗಗಳನ್ನು ಕೈಗೊಳ್ಳುವುದು ಅಪರೂಪವೇನಲ್ಲ. ಆದರೆ ಇಂತಹ ಪ್ರಯೋಗಗಳಿಂದಾಗಿ ಸಾಕಷ್ಟು ಹಣದೊಂದಿಗೆ ತಮ್ಮ ಆರೋಗ್ಯವನ್ನೂ ಕಳೆದುಕೊಂಡು, ಪ್ರಾಣಾಪಾಯದ ಸಾಧ್ಯತೆಗಳು ಕಂಡುಬಂದಾಗ ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆಗೆ ಶರಣಾದ ಪ್ರಕರಣಗಳು ಸಾಕಷ್ಟಿವೆ. 

ಲಂಗೋಟಿ ಚಿಕಿತ್ಸೆ!

ಅವಿದ್ಯಾವಂತ ಮಂಕು ಹುಟ್ಟಿದಾರಭ್ಯ ಯಾವುದೇ ಕಾರಣಕ್ಕೂ ವೈದ್ಯರ ಬಳಿ ಹೋಗಿರಲೇ ಇಲ್ಲ. ಮುಂಜಾನೆಯಿಂದ ಮುಸ್ಸಂಜೆಯ ತನಕ ಮೈಮುರಿದು ದುಡಿಯುತ್ತಿದ್ದ ಆತನ ಆರೋಗ್ಯದ ಮಟ್ಟವು ಉತ್ತಮವಾಗಿದ್ದುದೇ ಇದಕ್ಕೆ ಕಾರಣವೆನಿಸಿತ್ತು. ಜೊತೆಗೆ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ಆತನ ತಾಯಿ ಅಥವಾ ಪತ್ನಿ ತಯಾರಿಸಿ ನೀಡುತ್ತಿದ್ದ ಮನೆಮದ್ದು ಆತನ ಸಮಸ್ಯೆಯನ್ನು ಪರಿಹರಿಸುವಲ್ಲಿ ಉಪಯುಕ್ತವೆನಿಸುತ್ತಿತ್ತು. ಪ್ರಾಯಶಃ ಇದೇ ಕಾರಣದಿಂದಾಗಿ ವೈದ್ಯರು ಮತ್ತು ಆಸ್ಪತ್ರೆಗಳನ್ನು ಕಂಡರೆ ಆತನಿಗೆ ಅವ್ಯಕ್ತ ಭಯವೊಂದು ಕಾಡುತ್ತಿತ್ತು. 

ಇದೀಗ ೬೦ ರ ಅಂಚಿನಲ್ಲಿದ್ದ ಮಾಂಕುವಿಗೆ ಒಂದೆರಡು ತಿಂಗಳುಗಳ ಹಿಂದೆ ಕಿಬ್ಬೊಟ್ಟೆಯ ಎಡಬದಿಯಲ್ಲಿ ನೆಲ್ಲಿಕಾಯಿ ಗಾತ್ರದ ಮೆತ್ತಗಿನ ಗುಳ್ಳೆಯೊಂದು ಕಂಡುಬಂದಿತ್ತು. ಆಶ್ಚರ್ಯವೆಂದರೆ ರಾತ್ರಿ ಆಟ ಮಲಗಿದ ಸ್ವಲ್ಪ ಹೊತ್ತಿನಲ್ಲಿ ಮಾಯವಾಗುತ್ತಿದ್ದ ಈ ಗುಳ್ಳೆ, ಬೆಳಿಗ್ಗೆ ಎದ್ದು ಬಹಿರ್ದೆಶೆಗೆ ಹೋಗಿ ಬರುವಷ್ಟರಲ್ಲೇ ಮತ್ತೆ ಪ್ರತ್ಯಕ್ಷವಾಗುತ್ತಿತ್ತು!. ಆರು ತಿಂಗಳುಗಳು ಕಳೆಯುವಷ್ಟರಲ್ಲಿ ನೆಲ್ಲಿಕಾಯಿ ಗಾತ್ರದ ಗುಳ್ಳೆಯು ನಿಂಬೆ ಹಣ್ಣಿನಷ್ಟು ದೊಡ್ಡದಾಗಿ ಬೆಳೆದಿತ್ತು. ಈ ಗುಳ್ಳೆಯ ಬಗ್ಗೆ ಏನೇನೂ ಅರಿತಿರದ ಈ ಮಂದಮತಿಗೆ, ಇದನ್ನು ವೈದ್ಯರಿಗೆ ತೋರಿಸಬೇಕೆನ್ನುವುದು ಮನಸ್ಸಿಗೆ ಹೊಳೆದಿರಲಿಲ್ಲ. 

ಹೀಗಿರುವಾಗ ವಾಡಿಕೆಯಂತೆ ರಾಮಭಟ್ಟರ ತೋಟಕ್ಕೆ ಗೊಬ್ಬರ ಹಾಕಲು ಹೋಗುತ್ತಿದ್ದ ಮಾಂಕುವಿಗೆ, ನಾಲ್ಕಾರು ದಿನಗಳ ಶಾರೀರಿಕ ಶ್ರಮದ ಕೆಲಸದ ಪರಿಣಾಮವಾಗಿ ಗುಳ್ಳೆ ಇರುವ ಜಾಗದಲ್ಲಿ ಅತಿಯಾದ ನೋವು ಆರಂಭವಾಗಿತ್ತು. ಇದೇ ಕಾರಣದಿಂದಾಗಿ ಕೆಲಸ ಮಾಡಲು ಅಸಮರ್ಥನಾದ ಮಾಂಕುವಿನಿಂದ ವಿಷಯವನ್ನರಿತ ಭಟ್ಟರು, ವೃತ್ತಿಯಲ್ಲಿ ವೈದ್ಯನಾಗಿದ್ದ ತಮ್ಮ ಮಗನನ್ನು ಕರೆಸಿ ಮಾನ್ಕುವನ್ನು ಪರೀಕ್ಷಿಸಿ ಔಷದವನ್ನು ನೀಡುವಂತೆ ಹೇಳಿದರು. 

ಮಾಂಕುವನ್ನು ಪರೀಕ್ಷಿಸಿದ ವೈದ್ಯರಿಗೆ ಆತನ ನೋವಿಗೆ "ಹರ್ನಿಯಾ" ಕಾರಣವೆಂದು ತಿಳಿದುಬಂದಿತ್ತು. ಈಗಾಗಲೇ ತುಸು ಉಲ್ಬಣಿಸಿದ್ದ ಈ ಹರ್ನಿಯಾ ಇನ್ನಷ್ಟು ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸುವ ಮುನ್ನ, ಇದನ್ನು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬೇಕು ಎಂದು ವೈದ್ಯರು ಸೂಚಿಸಿದ್ದರು. ಆದರೆ ಆಪರೇಶನ್ ಎನ್ನುವ ಪದವನ್ನು ಕೇಳಿದ ಮಾಂಕುವೀಣೆ ಮನಸ್ಸಿಗೆ ಮಂಕು ಕವಿದಂತಾಗಿತ್ತು. ತನಗಿಂತ ಕಿರಿಯ ವಯಸ್ಸಿನ ವೈದ್ಯರ ಕಾಲಿಗೆ ಬಿದ್ದು, ಏನಾದರೂ ಮದ್ದು ಕೊಟ್ಟು ಗುಣಪಡಿಸಿ, ಆದರೆ ಆಪರೇಶನ್ ಮಾತ್ರ ಬೇಡವೆಂದು ಗೋಗರೆದ ಮಾಂಕುವಿಗೆ ಆಪರೇಶನ್ ಹೊರತು ಅನ್ಯ ಚಿಕಿತ್ಸೆಯೇ ಇಲ್ಲವೆಂದು ವೈದ್ಯರು ತಿಳಿಸಿದ್ದರು. 

ಮರುದಿನದಿಂದಲೇ ಮಾಂಕು ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದನು. ತನಗೆ ಆಪರೇಶನ್ ಆದಲ್ಲಿ ತಾನು ಬದುಕಿ ಉಳಿಯುವ ಸಾಧ್ಯತೆಗಳೇ ಇಲ್ಲವೆನ್ನುವ ' ಸಂಶಯ ಪಿಶಾಚಿ' ಆತನ ಮನವನ್ನು ಹೊಕ್ಕಿತ್ತು. ಇದೇ ಸಂದರ್ಭದಲ್ಲಿ ಮಾಂಕುವಿನ ಮನೆಗೆ ಬಂದಿದ್ದ ಸಂಬಂಧಿಯೊಬ್ಬರು ಆತನ ವಿಹಿತ್ರ ವರ್ತನೆಗಳಿಗೆ ಕಾರಣವೇನೆಂದು ಕೇಳಿದಾಗ, ತನ್ನ ಮನದಳಲನ್ನು ಆತನಲ್ಲಿ ತೋಡಿಕೊಂಡ ಮಾಂಕು ಮಕ್ಕಳಂತೆ ಬಿಕ್ಕಿಬಿಕ್ಕಿ ಅತ್ತಿದ್ದನು. ಮಾಂಕುವಿನ ಕಣ್ಣೀರನ್ನು ಕಂಡರೂ ವಿಚಲಿತನಾಗದ ಈ ಬಂಧುವು ಆತನ ಸಮಸ್ಯೆಯನ್ನು ಬಗೆಹರಿಸುವುದಾಗಿ ಆಶ್ವಾಸನೆಯನ್ನು ನೀಡಿ ಮುಗುಳ್ನಕ್ಕನು. ತನ್ನ ಊರಿನಲ್ಲಿ ಕೇವಲ ಔಷದವನ್ನು ಪ್ರಯೋಗಿಸಿ ಹರ್ನಿಯಾ ಗುಣಪಡಿಸುವ ಪಂಡಿತರೊಬ್ಬರು ಇದ್ದಾರೆ ಎಂದು ಹೇಳಿದಾಗ, ಮಾಂಕುವಿನ ಮುಖದಲ್ಲಿನ ಪ್ರೇತಕಳೆ ಮಾಯವಾಗಿ ಮಂದಹಾಸ ಮೂಡಿತ್ತು. ಆಪರೇಶನ್ ಮಾಡದೇ ತನ್ನ ಸಮಸ್ಯೆ ಪರಿಹಾರವಾಗುವುದರೊಂದಿಗೆ ತಾನು ಜೀವ ಸಹಿತ ಪಾರಾಗಲಿರುವೆನೆಂದು ಅರಿತ ಮಾಂಕುವು, ಅಂದು ರಾತ್ರಿ ನಿರಾಳವಾಗಿ ನಿದ್ರಿಸಿದ್ದನು. 

ಮರುದಿನ ಬಂಧುವಿನೊಂದಿಗೆ ಆತನ ಊರಿಗೆ ತೆರಳಿದ ಮಾಂಕು ಪಂಡಿತರನ್ನು ಭೇಟಿಯಾದನು. ರೋಗಿಯನ್ನು ಕೂಲಂಕುಶವಾಗಿ ಪರೀಕ್ಷಿಸಿದ ವೈದ್ಯ ಶಿಖಾಮಣಿಯು,ತನ್ನ ಚಿಕಿತ್ಸೆಯಿಂದ ಹರ್ನಿಯಾ "ಮಂಗಮಾಯ" ವಾಗುವುದೆನ್ನುವ ಭರವಸೆಯನ್ನು ನೀಡಿದ್ದನು!. ಬಳಿಕ ಚಿಕಿತ್ಸೆಯ ಅಂಗವಾಗಿ ಸಾಕಷ್ಟು ಉದ್ದ ಮತ್ತು ಅಗಲವಿರುವ ಒಣ ಹೊಗೆಸೊಪ್ಪಿನ ಎಲೆಯೊಂದನ್ನು ಬಿಡಿಸಿ, ಅದರ ಮೇಲೆ ದಪ್ಪನೆಯ ಔಷದಯುಕ್ತ ಲೇಪವನ್ನು ಹಚ್ಚಿ, ಈ ಹೊಗೆಸೊಪ್ಪಿನ ಎಲೆಯನ್ನು "ಲಂಗೋಟಿ"ಯಂತೆ ದಿನವಿಡೀ ಧರಿಸುವಂತೆ ಆದೆಶಿಸಿದ್ದನು!. ಪ್ರತಿನಿತ್ಯ ಹೊಸದೊಂದು ಹೊಗೆಸೊಪ್ಪಿನ ಎಲೆಗೆ ಲೇಪವನ್ನು ಬಳಿದು ಸುಮಾರು ನಾಲ್ಕಾರು ವಾರಗಳ ಕಾಲ ಧರಿಸಿದಲ್ಲಿ ನಿಶ್ಚಿತವಾಗಿಯೂ ಹರ್ನಿಯಾ ಮಾಯವಾಗುವುದು ಎಂದು ಪಂಡಿತನು ಹೇಳಿದ್ದನು. 

ಎರಡು ವಾರಗಳ ಚಿಕಿತ್ಸೆಯ ಬಳಿಕ ಮಾಂಕುವಿನ ಹರ್ನಿಯಾ ಕಿಂಚಿತ್ ಕೂಡಾ ಕಡಿಮೆಯಾಗದಿದ್ದರೂ, ಆತನ ತೊಡೆಯಾ ಸಂದಿ ಮತ್ತು ಮರ್ಮಾಂಗಗಳಲ್ಲಿ ಚರ್ಮದ ಉರಿಯೂತ ಮತ್ತು ಸಣ್ಣಪುಟ್ಟ ಹುಣ್ಣುಗಳು ಕಾಣಿಸಿಕೊಂಡಿದ್ದವು. ತತ್ಪರಿಣಾಮವಾಗಿ ಅತ್ತಿತ್ತ ನಡೆದಾಡಲೂ ಅಸಾಧ್ಯವೆನಿಸಿದಾಗ ಅನ್ಯಮಾರ್ಗವಿಲ್ಲದೆ ರಾಮಭಟ್ಟರ ಮಗನ ಬಳಿಗೆ ತೆರಳಿದ್ದನು. ಮಾಂಕುವಿನ ಸ್ಥಿತಿಯನ್ನು ಕಂಡು ವೈದ್ಯರಿಗೆ ಮರುಕ ಹುಟ್ಟಿದರೂ, ತಾನು ಹೇಳಿದ ಮಾತನ್ನು ಕೇಳದೇ ಇಂತಹ ಅವೈಜ್ಞಾನಿಕ ಚಿಕಿತ್ಸೆಯನ್ನು ಪಡೆದ ಆತನಿಗೆ ಛೀಮಾರಿ ಹಾಕಿದ್ದರು. 

ವೈದ್ಯರ ಚಿಕಿತ್ಸೆಯಿಂದ ಚರ್ಮದ ಉರಿಯೂತ ಕಡಿಮೆಯಾದ ಬಳಿಕ ಒತ್ತಾಯಪೂರ್ವಕವಾಗಿ ಮಾಂಕುವಿನ ಹರ್ನಿಯಾ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಸ್ ವಾರ ಕಳೆಯುವಷ್ಟರಲ್ಲಿ ಚೇತರಿಸಿಕೊಂಡಿದ್ದ ಮಾಂಕುವಿಗೆ ತನ್ನ ಸಮಸ್ಯೆ ಪರಿಹಾರಗೊಂಡಿರುವುದರೊಂದಿಗೆ, ತಾನು ಬದುಕಿ ಉಳಿದಿರುವುದಕ್ಕಾಗಿ ಗ್ರಾಮದೇವತೆಗೆ ಕೈಮುಗಿದದ್ದು ಮಾತ್ರ ಸುಳ್ಳೇನಲ್ಲ!. 

ಸಹಸ್ರಾರು ವರ್ಷಗಳ ಹಿಂದೆ ಆಯುರ್ವೇದ ವೈದ್ಯ ಪದ್ದತಿಯಲ್ಲಿ ವಿವಿಧ ರೀತಿಯ ಶಸ್ತ್ರಚಿಕಿತ್ಸೆಗಳು ನಡೆಯುತ್ತಿದ್ದವು. ಶಸ್ತ್ರಚಿಕಿತ್ಸೆಯ ಪಿತಾಮಹ ಎನಿಸಿರುವ ಸುಶ್ರುತ ಆಚಾರ್ಯ ವಿರಚಿತ "ಸುಶ್ರುತ ಸಂಹಿತೆ' ಯಲ್ಲಿ ಈ ಬಗ್ಗೆ ವಿಶದವಾದ ಮಾಹಿತಿಗಳೂ ಇವೆ. ಆದರೆ ಇಂದು ಮಿಡಿಯುತ್ತಿರುವ ಹೃದಯದ ಬಡಿತವನ್ನು ನಿಲ್ಲಿಸದೇ ಶಸ್ತ್ರಚಿಕಿತ್ಸೆಯನ್ನು ನಡೆಸುವ ಈ ಆಧುನಿಕ ಯುಗದಲ್ಲೂ, ಅನೇಕ ವಿದ್ಯಾವಂತರೂ ಮಾಂಕುವಿನಂತೆಯೇ ವಿವಿಧ ರೀತಿಯ ಅವೈಜ್ಞಾನಿಕ ಚಿಕಿತ್ಸೆಗಳನ್ನು ಶಸ್ತ್ರಚಿಕಿತ್ಸೆಗೆ ಪರ್ಯಾಯವಾಗಿ ಪ್ರಯತ್ನಿಸುವುದು ನಿಜಕ್ಕೂ ವಿಷಾದನೀಯ. ಇಂತಹ ಪ್ರಯೋಗಗಳನ್ನು ಪ್ರಯತ್ನಿಸಿ ಪ್ರಾಣವನ್ನೇ ತೆತ್ತವರ ಸಂಖ್ಯೆಯೂ ಕಡಿಮೆಯೇನಿಲ್ಲ. 
ನಿಮ್ಮ ನಂಬಿಗಸ್ಥ ವೈದ್ಯರು ನಿಮ್ಮನ್ನು ಕಾಡುವ ವ್ಯಾಧಿಯೊಂದನ್ನು ಗುಣಪಡಿಸಲು ಶಸ್ತ್ರಚಿಕಿತ್ಸೆ ಅನಿವಾರ್ಯ ಎಂದಾಗ, ನಿಮ್ಮ ವೈದ್ಯರ "ರೋಗ ನಿದಾನ" (Diagnosis) ನ ಬಗ್ಗೆ ಸಂದೇಹವಿದ್ದಲ್ಲಿಮತ್ತೊಬ್ಬ ತಜ್ಞರ ಸಲಹೆ ಪಡೆಯುವ ಹಕ್ಕು ನಿಮಗಿದೆ. ಆದರೆ ಎರಡಕ್ಕೂ ಹೆಚ್ಚು ತಜ್ಞರ ರೋಗ ನಿದಾನ ಏಕರೀತಿಯದಾಗಿದ್ದು, ಶಸ್ತ್ರಚಿಕಿತ್ಸೆಯ ಹೊರತು ಅನ್ಯಮಾರ್ಗವಿಲ್ಲ ಎಂದಾದಲ್ಲಿ, ವಿಳಂಬಿಸದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಹಿತಕರವೆನಿಸೀತು. ಅನಾವಶ್ಯಕವಾಗಿ ಮೀನಮೇಷ ಎಣಿಸುತ್ತಾ ಕಾಲಹರಣ ಮಾಡುವುದರಿಂದ ನಿಮ್ಮ ಕಾಯಿಲೆ ಉಲ್ಬಣಿಸಿ ನಿಮ್ಮ ಸಾಮಾನ್ಯ ಆರೋಗ್ಯದ ಮೇಲೆ ವಿವಿಧ ರೀತಿಯ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೧-೧೦-೨೦೦೪ ರ ಸಂಚಿಕೆಯ ಬಳಕೆದಾರ; ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 



No comments:

Post a Comment