Wednesday, February 12, 2014

ANAVASHYAKA OUSHADA SEVANE AAROGYAKKE HANIKARA



 
 ಅನಾವಶ್ಯಕ ಔಷದ ಸೇವನೆ ಆರೋಗ್ಯಕ್ಕೆ ಹಾನಿಕರ 

ಬಹುತೇಕ ಜನರು ನಂಬಿರುವಂತೆ ವೈದ್ಯರು ಅತಿಯಾದ ಹಾಗೂ ಅನಾವಶ್ಯಕವೆನಿಸುವ ಔಷದಗಳನ್ನು ತಮ್ಮ ರೋಗಿಗಳಿಗೆ ಸೂಚಿಸಲು, ಔಷದ ತಯಾರಿಕಾ ಸಂಸ್ಥೆಗಳ ಪ್ರಲೋಭನೆಗಳು ಮಾತ್ರ ಕಾರಣವಲ್ಲ. ಕೆಲ ಸಂದರ್ಭಗಳಲ್ಲಿ ರೋಗಿಗಳೇ ಇದಕ್ಕೆ ಕಾರಣಕರ್ತರೆನಿಸುತ್ತಾರೆ. ಈ ಬಗ್ಗೆ ನೀವು ತಿಳಿದಿರಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ. 
------------              -------------             -------------                -----------------               ---------------                

ಜನಸಾಮಾನ್ಯರ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಅವರ ಆರೋಗ್ಯ ರಕ್ಷಣೆಯ ಹೊಣೆಯನ್ನು ಹೊತ್ತಿರುವ ವೈದ್ಯರೇ, ಅತಿಯಾದ ಹಾಗೂ ಅನಾವಶ್ಯಕವೆನಿಸುವ ಔಷದಗಳನ್ನು ಸೂಚಿಸುವ ಪ್ರವೃತ್ತಿ ಇತ್ತೀಚಿನ ಹೆಚ್ಚುತ್ತಿದೆ. ವಿಶ್ವಾದ್ಯಂತ ವ್ಯಾಪಕವಾಗಿ ಕಂಡುಬರುತ್ತಿರುವ ಈ ಸಮಸ್ಯೆಗೆ ಭಾರತವೂ ಅಪವಾದವೆನಿಸಿಲ್ಲ. ಈ ರೀತಿಯಲ್ಲಿ ಔಷದಗಳನ್ನು ಪ್ರಯೋಗಿಸುವುದು ರೋಗಿಗಳಿಗೆ ದುಬಾರಿ ಎನಿಸುವುದರೊಂದಿಗೆ, ಇಂತಹ ಔಷದಗಳ ಅಡ್ಡ ಪರಿಣಾಮಗಳು ಆರೋಗ್ಯಕ್ಕೆ ಹಾನಿಕರ ಎನಿಸುವುದರಲ್ಲಿ ಸಂದೇಹವಿಲ್ಲ. 



ಅಸಮಂಜಸ ಚಿಕಿತ್ಸೆ 

ವಿಶ್ವ ಆರೋಗ್ಯ ಸಂಸ್ಥೆ ವರ್ಣಿಸಿರುವಂತೆ, ಔಷದೀಯ ಗುಣವುಳ್ಳ ದ್ರವ್ಯವೊಂದರ ಬಳಕೆಯಿಂದ ರೋಗಿಗೆ ಲಭಿಸಬಲ್ಲ ಪರಿಹಾರವು ತೀರಾ ನಗಣ್ಯ ಅಥವಾ ಶೂನ್ಯವೆನಿಸುವ ಹಾಗೂ ಇವುಗಳ ಬೆಲೆ ಮತ್ತು ದುಷ್ಪರಿಣಾಮಗಳನ್ನು ತುಲನೆ ಮಾಡಿದಾಗ, ನಿಷ್ಪ್ರಯೋಜಕ ಅಥವಾ ಹಾನಿಕಾರಕ ಎನಿಸುವ ಚಿಕಿತ್ಸಾ ಕ್ರಮವನ್ನು "ಅಸಂಜಸ ಚಿಕಿತ್ಸೆ' ಎಂದಿದೆ. 

ಅಖಲ ಭಾರತ ಮಟ್ಟದಲ್ಲಿ ಸ್ವಯಂ ಸೇವಾ ಸಂಘಟನೆಗಳು ನಡೆಸಿದ್ದ ಸಮೀಕ್ಷೆಯೊಂದರ ವರದಿಯಂತೆ ಅನೇಕ ವೈದ್ಯರು ಅತಿಯಾದ ಹಾಗೂ ಅನಾವಶ್ಯಕ  ಔಷದಗಳನ್ನು, ಅಂದರೆ ಟಾನಿಕ್ ಗಳು, ಶಕ್ತಿವರ್ಧಕಗಳು, ವಿಟಮಿನ್ ಗಳು ಮತ್ತು ಇನ್ನಿತರ ವೈವಿಧ್ಯಮಯ ಔಷದಗಳನ್ನು ತಮ್ಮ ರೋಗಿಗಳಿಗೆ ಅನಾವಶ್ಯಕವಾಗಿ ಸೂಚಿಸುತ್ತಿರುವುದು ತಿಳಿದುಬಂದಿದೆ. ಆದರೆ ಖಾಸಗಿ ವೈದ್ಯರಲ್ಲಿ ಒಂದಿಷ್ಟು ಹೆಚ್ಚೆನಿಸುವ ಈ ಪ್ರವೃತ್ತಿಯು ಸರಕಾರಿ ವೈದ್ಯರಲ್ಲಿ ಅತ್ಯಂತ ವಿರಳವಾಗಿದೆ. ಭಾರತದ ಇತರ ಎಲ್ಲ ರಾಜ್ಯಗಳಿಗಿಂತ ಪಶ್ಚಿಮ ಬಂಗಾಳದಲ್ಲಿ ಈ ಸಮಸ್ಯೆ ಅತ್ಯಂತ ವ್ಯಾಪಕವಾಗಿರುವುದು ಇದೇ ಸಮೀಕ್ಷೆಯಿಂದ ತಿಳಿದುಬಂದಿದೆ. 

ಭಾರತದ ಅನೇಕ ಅನುಭವಿ ವೈದ್ಯರೇ ಹೇಳುವಂತೆ ಸರ್ವೋಚ್ಚ  ನ್ಯಾಯಾಲಯದ ತೀರ್ಪಿನಿಂದಾಗಿ ವೈದ್ಯರನ್ನು ಗ್ರಾಹಕ ಸಂರಕ್ಷಣಾ ಕಾಯಿದೆಯ ವ್ಯಾಪ್ತಿಗೆ ಒಳಪಡಿಸಿದ ಬಳಿಕ, ಅತಿಯಾಗಿ ಔಷದಗಳನ್ನು ಸೂಚಿಸುವ ವೈದ್ಯರ ಸಂಖ್ಯೆ ಹೆಚ್ಚಿದೆ. ಈ ಹಿಂದೆ ಒಂದು ನಿರ್ದಿಷ್ಟ ಕಾಯಿಲೆಯನ್ನು ಪತ್ತೆ ಹಚ್ಚಲು ಸೂಚಿಸುತ್ತಿದ್ದ ಪರೀಕ್ಷೆಗಳು ಅಥವಾ ನಿರ್ದಿಷ್ಟ ಕಾಯಿಲೆಯನ್ನು ಗುಣಪಡಿಸಲು ನೀಡುತ್ತಿದ್ದ ಔಷದಗಳನ್ನು, ಇದೀಗ ತಮ್ಮ ಹಿತರಕ್ಷಣೆಗಾಗಿ ವೈದ್ಯರು ಬಳಸುತ್ತಿರುವುದು ಸುಳ್ಳೇನಲ್ಲ. 

ಅತಿಯಾಗಿ ಔಷದವನ್ನು ನೀಡುವ ವೈದ್ಯರುಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ನಡೆಸಿದ್ದ ಸಮೀಕ್ಷೆಯೊಂದರಂತೆ, "ಜೀವ ನಿರೋಧಕ" (ಎಂಟಿ ಬಯಾಟಿಕ್ ) ಗಳ ಬಳಕೆ ಇದೀಗ ಅತಿಯಾಗಿರುವುದು ತಿಳಿದುಬಂದಿದೆ. ಅಂತೆಯೇ ಜಪಾನ್ ದೇಶದ ವೈದ್ಯರು ಪಾಶ್ಚಿಮಾತ್ಯ ದೇಶಗಳ ವೈದ್ಯರಿಗಿಂತ ಮೂರು ಪಟ್ಟು ಹೆಚ್ಚು ಔಷದಗಳನ್ನು ನೀಡುತ್ತಿರುವುದು ಬೆಳಕಿಗೆ ಬಂದಿದೆ. 

ಈ ಪ್ರವೃತ್ತಿಗೆ ಕಾರಣವೇನು?

ಸಾಮಾನ್ಯವಾಗಿ ವೈದ್ಯರು ತನ್ನ ರೋಗಿಯನ್ನು ಬಾಧಿಸುತ್ತಿರುವ ಕಾಯಿಲೆಯನ್ನು ಪತ್ತೆಹಚ್ಚಲು ವಿಫಲರಾದಾಗ, ಒಂದಕ್ಕೂ ಹೆಹ್ಚು ವಿಧದ ವ್ಯಾಧಿಗಳು ತನ್ನ ರೋಗಿಯನ್ನು ಬಾಧಿಸುತ್ತಿವೆ ಎನ್ನುವ ಸಂದೇಹ ಮೂಡಿದಾಗ ಮತ್ತು ರೋಗಿಯ ಕಾಯಿಲೆ ಯಾವುದೆಂದು ತಿಳಿಯದಿರುವ ಸಂದರ್ಭಗಳಲ್ಲಿ ಅತಿ - ಅನಾವಶ್ಯಕ ಔಷದಗಳನ್ನು ಸೂಚಿಸುವರು. ಅದೇ ರೀತಿಯಲ್ಲಿ ನಿರ್ದಿಷ್ಟ ಕಾಯಿಲೆಯೊಂದರ ಚಿಕಿತ್ಸೆಗೆ ಕನಿಷ್ಠ ಬೆಲೆಯ ಔಷದವೊಂದು ನಿಶ್ಚಿತವಾಗಿ ಪರಿಣಾಮಕಾರಿ ಎಂದು ಅರಿತಿದ್ದರೂ, ದುಬಾರಿ ಬೆಲೆಯ ಔಷದಗಳನ್ನೇ ಸೂಚಿಸುವುದನ್ನು ಅನಾವಶ್ಯಕ ಚಿಕಿತ್ಸೆ ಎಂದೇ ಪರಿಗಣಿಸಲಾಗುತ್ತದೆ. ಅಂತೆಯೇ ತಾನು ನೀಡುವ ಔಷದಗಳ  ತೀವ್ರ ದುಷ್ಪರಿಣಾಮಗಳ ಬಗ್ಗೆ ಅರಿವಿದ್ದರೂ, ಇವುಗಳನ್ನು ತನ್ನ ರೋಗಿಗಳಿಗೆ ಸೂಚಿಸುವುದು ಕೂಡಾ ಅನಾವಶ್ಯಕ ಚಿಕಿತ್ಸೆಯೇ ಹೊರತು ಬೇರೇನೂ ಅಲ್ಲ!. 

ಆದರೆ ಇವೆಲ್ಲವುಗಳಿಗಿಂತ ಮಹತ್ವಪೂರ್ಣವೆನಿಸುವ, ಔಷದ ತಯಾರಿಕಾ ಸಂಸ್ಥೆಗಳು ತಮ್ಮ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಲು ಅನುಸರಿಸುವ ತಂತ್ರಗಳು ಇಂತಹ ಸಮಸ್ಯೆಗಳನ್ನು ವೃದ್ಧಿಸುವುದರಲ್ಲಿ ಪ್ರಮುಖ ಸ್ಥಾನವನ್ನು ಗಳಿಸುತ್ತವೆ. ನಾಲ್ಕಾರು ದಶಕಗಳ ಹಿಂದಿನ ತನಕ ಒಂದಿಷ್ಟು ಉಚಿತ ಔಷದಗಳು, ಪೆನ್, ಕೀ ಚೈನ್ ಮತ್ತು ಪರ್ಸ್ ಗಳಂತಹ ಚಿಕ್ಕಪುಟ್ಟ ಕೊಡುಗೆಗಳನ್ನು ಔಷದ ಕಂಪೆನಿಗಳು ವೈದ್ಯರಿಗೆ ನೀಡುತ್ತಿದ್ದವು. ಆದರೆ ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ವೈದ್ಯರ ವಿದ್ಯಾರ್ಹತೆ ಮತ್ತು ಅವರಲ್ಲಿ ಹೋಗುವ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಸೆಲ್ ಫೋನ್, ರೆಫ್ರಿಜಿರೇಟರ್, ಟಿ. ವಿ, ಏರ್ ಕಂಡಿಷನರ್, ಕಾರುಗಳು ಮತ್ತು ವಿದೇಶ ಯಾತ್ರೆಯಂತಹ ಕೊಡುಗೆಗಳನ್ನು ನೀಡುವುದು ನಿಸ್ಸಂದೇಹವಾಗಿಯೂ ಅತಿಯಾದ ಹಾಗೂ ಅನಾವಶ್ಯಕ ಔಷದಗಳನ್ನು ಸೂಚಿಸುವ ಪರಿಪಾಠಕ್ಕೆ ಮೂಲವೆನಿಸುತ್ತದೆ. 

ಅನೇಕ ಔಷದ ತಯಾರಿಕಾ ಸಂಸ್ಥೆಗಳು ಪಂಚತಾರಾ ಹೊಟೇಲುಗಳಲ್ಲಿ ನಡೆಸುವ ವೈದ್ಯಕೀಯ ಸಮ್ಮೇಳನಗಳಿಗೆ ಹೋಗಿಬರಲು ವಿಮಾನದ ಟಿಕೆಟ್, ತಂಗಲು ಪಂಚತಾರಾ ಹೋಟೆಲ್ ಗಳಲ್ಲಿ ವ್ಯವಸ್ಥೆ, ವಿದೇಶಗಳಲ್ಲಿ ನಡೆಸುವ ಇದೇ ರೀತಿಯ ಸಮ್ಮೇಳನಗಳಲ್ಲಿ ಭಾಗವಹಿಸಲು ಇದೇ ರೀತಿಯ ವ್ಯವಸ್ಥೆ, ವಿಹಾರಕ್ಕಾಗಿ ವಿದೇಶಿ ಪ್ರವಾಸ ಮತ್ತು ಕೆಲವೊಮ್ಮೆ ವೈದ್ಯರ ಕುಟುಂಬದ ಸದಸ್ಯರ ವಿವಾಹ ಸಮಾರಂಭಗಳನ್ನೇ  ಅದ್ಧೂರಿಯಾಗಿ ನಡೆಸಿಕೊಡುವುದು  ಕೂಡಾ ಅಪರೂಪವೇನಲ್ಲ!.


ಔಷದ ತಯಾರಿಕಾ ಸಂಸ್ಥೆಗಳ "ಮಾರಾಟದ ತಂತ್ರ" ಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ವೈದ್ಯಕೀಯ ನೀತಿ ಸಂಹಿತೆಯ ವೇದಿಕೆ, ಕೇಂದ್ರ ಸರ್ಕಾರದ ಔಷದ ನಿಯಂತ್ರಣ ಅಧಿಕಾರಿ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳು, ಆರು ತಿಂಗಳುಗಳ ಕಾಲ ನಡೆಸಿದ್ದ ಅಧ್ಯಯನದ ವರದಿಯಲ್ಲಿ ಈ ಮೇಲಿನ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಈ ಅಧ್ಯಯನದ ಅಂಗವಾಗಿ ಭಾರತದ ಪ್ರಮುಖ ನಗರಗಳ ನೂರಾರು ಔಷದ ತಯಾರಿಕಾ ಸಂಸ್ಥೆಗಳು, ಔಷದ ಮಾರಾಟಗಾರರು, ಔಷದ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ವೈದ್ಯರನ್ನು ಅಧಿಕೃತವಾಗಿ ಸಂದರ್ಶಿಸಲಾಗಿತ್ತು. 

ಇದರೊಂದಿಗೆ ಭಾರತದ ಉದ್ದಗಲಕ್ಕೂ ತುಂಬಿರುವ ವೈದ್ಯಕೀಯ ವಿಜ್ಞಾನದ ಪ್ರಾಥಮಿಕ ಜ್ಞಾನವೂ ಇರದ " ನಕಲಿ ವೈದ್ಯ" ರು ರಾಜಾರೋಷವಾಗಿ ಸೂಚಿಸುವ ಔಷದಗಳನ್ನು ನೀಡುವ ಔಷದ ಅಂಗಡಿಯವರು ಹಾಗೂ ಇವುಗಳನ್ನು ಸೇವಿಸುವ ಅಮಾಯಕ ರೋಗಿಗಳೂ, ಈ ಸಮಸ್ಯೆ ವೃದ್ಧಿಸಲು ಕಾರಣರಾಗುತ್ತಾರೆ. 

ಇವೆಲ್ಲವುಗಳಿಗಿಂತ ಮಿಗಿಲಾಗಿ ತಮ್ಮ ವೈದ್ಯರ ಬಳಿ  ಒತ್ತಾಯಪೂರ್ವಕವಾಗಿ ಇಂಜೆಕ್ಷನ್, ಟಾನಿಕ್, ವಿಟಮಿನ್, ಪ್ರಬಲ ಔಷದಗಳು ಮತ್ತು ಶಕ್ತಿವರ್ಧಕಗಳನ್ನು ಕೇಳಿ ಪಡೆದುಕೊಳ್ಳುವ ರೋಗಿಗಳು ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಲು ಕಾರಣಕರ್ತರೆನಿಸುತ್ತಾರೆ. ಮಾತ್ರವಲ್ಲ, ಕ್ಷುಲ್ಲಕ ಆರೋಗ್ಯದ ಸಮಸ್ಯೆಗಳಿಗೆ ಔಷದ ಸೇವನೆ ಅನಿವಾರ್ಯವಲ್ಲ ಎನ್ನುವ ವೈದ್ಯರನ್ನು ತೆಗಳುವ ಮತ್ತು ಎಲ್ಲ ಆರೋಗ್ಯದ ಸಮಸ್ಯೆಗಳಿಗೂ ಧಾರಾಳವಾಗಿ ಔಷದಗಳನ್ನು ನೀಡುವ ವೈದ್ಯರನ್ನು ಹೊಗಳುವ ರೋಗಿಗಳು ನಿಶ್ಚಿತವಾಗಿಯೂ ಅತಿಯಾದ ಮತ್ತು ಅನಾವಶ್ಯಕ ಔಷದಗಳ ಬಳಕೆಗೆ ನೇರವಾಗಿ ಹೊಣೆಗಾರರಾಗುತ್ತಾರೆ. 

ದುಷ್ಪರಿಣಾಮಗಳು 

ಸಾಮಾನ್ಯವಾಗಿ ನಿಮ್ಮನ್ನು ಕಾಡುವ ಶೀತ, ತಲೆನೋವು, ವಾಂತಿ, ಭೇದಿ ಹಾಗೂ ವೈರಸ್ ಗಳಿಂದ ಉದ್ಭವಿಸುವ ಅನೇಕ ಕಾಯಿಲೆಗಳಿಗೆ, ಅತ್ಯಂತ ಶಕ್ತಿಯುತ ಹಾಗೂ ಪ್ರಭಾವಶಾಲಿ ಔಷದಗಳನ್ನು ಸೇವಿಸುವ ಅವಶ್ಯಕತೆಯೇ ಇರುವುದಿಲ್ಲ. ಮಾತ್ರವಲ್ಲ, ಇವುಗಳ ಸೇವನೆಯಿಂದ ನಿಶ್ಶಕ್ತಿ, ವಾಕರಿಕೆಯಂತಹ ತೊಂದರೆಗಳೊಂದಿಗೆ, ಮೂತ್ರಪಿಂಡ ಮತ್ತು ಯಕೃತ್ತಿನ ಕಾರ್ಯಕ್ಷಮತೆಗಳ ಮೇಲೆ ತೀವ್ರ ದುಷ್ಪರಿಣಾಮಗಳೂ ಉಂಟಾಗುತ್ತವೆ. ಇಂತಹ ಪ್ರಬಲ ಔಷದಗಳು ಕೆಲವೊಂದು ಕಾಯಿಲೆಗಳಲ್ಲಿ ಅನಿವಾರ್ಯ ಹಾಗೂ ಪ್ರಾಣರಕ್ಷಕ ಎನಿಸಬಹುದಾದರೂ, ಇವುಗಳ ಅನಾವಶ್ಯಕ ಸೇವನೆಯಿಂದ ರೋಗಿಯು ಇವುಗಳಿಗೆ ಪ್ರತಿರೋಧಶಕ್ತಿಯನ್ನು ಗಳಿಸುವುದು ಅಪರೂಪವೇನಲ್ಲ. ಇದಕ್ಕೂ ಮಿಗಿಲಾಗಿ ರೋಗಕಾರಕ ರೋಗಾಣುಗಳು ಈ ಔಷದಗಳಿಗೆ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡಲ್ಲಿ, ಇಂತಹ ರೋಗಾಣುಗಳು ಮನುಕುಲಕ್ಕೆ ಮಾರಕವೆನಿಸುವುದರಲ್ಲಿ ಸಂದೇಹವಿಲ್ಲ. ಜಗತ್ತಿನ ಅನೇಕ ದೇಶಗಳಲ್ಲಿ ಇತ್ತೀಚಿನ ಕೆಲವರ್ಷಗಳಲ್ಲಿ ಆಕಸ್ಮಿಕವಾಗಿ ಉದ್ಭವಿಸಿ, ಕಾಡ್ಗಿಚ್ಚಿನಂತೆ ಹರಡುತ್ತಿರುವ ಸೋಂಕುಗಳು ಹಾಗೂ ಸಾಂಕ್ರಾಮಿಕ ಕಾಯಿಲೆಗಳಿಗೆ ಕಾರಣವೆನಿಸಬಲ್ಲ ಈ ಸಮಸ್ಯೆ ನಿಜಕ್ಕೂ ಅನಿಯಂತ್ರಿತವಾಗಿ ವೃದ್ಧಿಸುತ್ತಿದೆ. 

ಪ್ರಸ್ತುತ ಭಾರತದಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ "ಮಲೇರಿಯ" ಕಾಯಿಲೆಯ ರೋಗಾಣುಗಳು, ಅನೇಕ ಔಷದಗಳಿಗೆ ಈಗಾಗಲೇ ಪ್ರತಿರೋಧ ಶಕ್ತಿಯನ್ನು ಗಳಿಸಿಕೊಂಡಿರುವುದು ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. 

ಇದೇ ರೀತಿಯಲ್ಲಿ ಇನ್ನೂ ಅನೇಕ ಸಾಮಾನ್ಯ ಹಾಗೂ ಗಂಭೀರ ದುಷ್ಪರಿಣಾಮಗಳಿಗೆ ಕಾರಣವೆನಿಸಬಲ್ಲ ಅತಿಯಾದ ಮತ್ತು ಅನಾವಶ್ಯಕ ಔಷದಗಳ ಸೇವನೆಯು ನಿಶ್ಚಿತವಾಗಿಯೂ ನಿಮ್ಮ ಆರೋಗ್ಯಕ್ಕೆ ಹಾನಿಕರ ಎನ್ನುವುದನ್ನು ಮರೆಯದಿರಿ. 

ಪರಿಹಾರವೇನು? 

ಬಹುತೇಕ ಔಷದ ತಯಾರಿಕಾ ಸಂಸ್ಥೆಗಳು ಅನುಸರಿಸುವ ವಿವಿಧ ರೀತಿಯ " ಮಾರಾಟ ತಂತ್ರ" ಗಳಿಗೆ ಕಡಿವಾಣ ತೊಡಿಸುವುದು, ಈ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಅತ್ಯಂತ ಉಪಯುಕ್ತವೆನಿಸುವುದು. ಇದಲ್ಲದೆ ಔಷದ ತಯಾರಿಕ ಸಂಸ್ಥೆಗಳ ಒಂದು ವರ್ಷದ ವ್ಯವಹಾರದ ಸಣ್ಣದೊಂದು ಅಂಶವನ್ನು ಮಾತ್ರ " ವೈದ್ಯರಿಗೆ ನೀಡುವ ಕೊಡುಗೆ' ಗಳಿಗೆ ವಿನಿಯೋಗಿಸುವಂತೆ ಸರ್ಕಾರವೇ ಕಾನೂನನ್ನು ಜಾರಿಗೆ ತಂದಲ್ಲಿ, ಈ ಸಮಸ್ಯೆಯನ್ನು ಆಂಶಿಕವಾಗಿ ನಿಯಂತ್ರಿಸುವುದು ಸುಲಭಸಾಧ್ಯವೆನಿಸುವುದು. 

ಜನಸಾಮಾನ್ಯರಿಗೆ ಅತಿಯಾದ- ಅನಾವಶ್ಯಕ ಔಷದ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಧ್ಯಮಗಳ ಮೂಲಕ ಮಾಹಿತಿಯನ್ನು ನೀಡುವುದು, ಪ್ರತಿಯೊಂದು ಔಷದವನ್ನು ಮಾರಾಟ ಮಾಡುವಾಗ ಇದರೊಂದಿಗೆ ಇದರ ಸೇವನಾ ಪ್ರಮಾಣ, ಸೇವನಾ ಕ್ರಮ, ಉದ್ಭವಿಸಬಲ್ಲ ಅಡ್ಡ- ದುಷ್ಪರಿಣಾಮಗಳು, ಮತ್ತು ಇತರ ಔಷದಗಳನ್ನು ಇದರೊಂದಿಗೆ ಸೇವಿಸಿದಲ್ಲಿ ಉದ್ಭವಿಸಬಲ್ಲ ಸಮಸ್ಯೆಗಳೇ ಮುಂತಾದ ಮಾಹಿತಿಗಳಿರುವ ಪುಟ್ಟ ಕರಪತ್ರವೊಂದನ್ನು ನೀಡುವುದು ನಿಸ್ಸಂದೇಹವಾಗಿಯೂ ಈ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಎನಿಸುವುದು. 

ಅಂತೆಯೇ ಅನಾವಶ್ಯಕ ಹಾಗೂ ಅಸಂಬದ್ಧ ಔಷದಗಳ ಸಮ್ಮಿಶ್ರಣಗಳ ಉತ್ಪನ್ನಗಳನ್ನು ನಿಷೇಧಿಸುವುದು, ವೈದ್ಯರು ಸೂಚಿಸದೇ ಅಥವಾ ನಕಲಿ ವೈದ್ಯರು ಸೂಚಿಸಿದ ಔಷದಗಳನ್ನು ಔಷದ ಅಂಗಡಿಯವರು ನೀಡುವುದು, ಅತಿಯಾದ ಔಷದಗಳನ್ನು ವೈದ್ಯರು ಸೂಚಿಸಿದಲ್ಲಿ ತತ್ಸಂಬಂಧಿತ ವೈದ್ಯಕೀಯ ಸಂಘಟನೆಗಳ ಅಥವಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವುದೇ ಮುಂತಾದ ಅವಶ್ಯಕ ಆದರೆ ಅನಿವಾರ್ಯ ಕ್ರಮಗಳನ್ನು ಸರಕಾರವೇ ನಿರ್ದಾಕ್ಷಿಣ್ಯವಾಗಿ ಜಾರಿಗೆ ತರುವುದರೊಂದಿಗೆ, ಜನಸಾಮಾನ್ಯರೂ ಜಾಗರೂಕರಾದಲ್ಲಿ ಇಂತಹ ಸಮಸ್ಯೆಗಳನ್ನು ನಿರ್ಮೂಲನಗೊಳಿಸುವುದು ಖಚಿತವಾಗಿಯೂ ಅಸಾಧ್ಯವೆನಿಸದು. 

ನೀವೇನು ಮಾಡಬಹುದು?

 ನಿಮ್ಮ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಸಂದರ್ಶಿಸಿದ ವೈದ್ಯರು, ತಮ್ಮಿಂದಲೇ ಚಿಕಿತ್ಸೆಯನ್ನು ಚಿಕಿತ್ಸೆಯನ್ನು ಪಡೆದುಕೊಳ್ಳುವಂತೆ ನಿಮ್ಮನ್ನು ಒತ್ತಾಯಿಸುವಂತಿಲ್ಲ. ಜೊತೆಗೆ ಯಾವುದೇ ವೈದ್ಯರ ಚಿಕಿತ್ಸೆಯನ್ನು ನಿರಾಕರಿಸುವ ಹಾಗೂ ಅವಶ್ಯವೆನಿಸಿದಲ್ಲಿ ಮತ್ತೊಬ್ಬ ವೈದ್ಯರ ಸಲಹೆ ಪಡೆಯುವ ಹಕ್ಕು ನಿಮಗಿದೆ. ಅದೇ ರೀತಿಯಲ್ಲಿ ವೈದ್ಯರು ಸೂಚಿಸಿದ ಪ್ರತಿಯೋಂದು ಔಷದದ ಅವಶ್ಯಕತೆ, ಸೇವನಾ ಪ್ರಮಾಣ, ಇವುಗಳ ಒಳ್ಳೆಯ- ಕೆಟ್ಟ ಪರಿಣಾಮಗಳನ್ನು ಕೇಳಿ ತಿಳಿದುಕೊಳ್ಳುವ ಹಕ್ಕು ನಿಮಗಿದೆ. 

ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳು ಬಾಧಿಸಿದಾಗ ನಿಮ್ಮಲ್ಲಿ ಕಂಡುಬರುವ ವಿವಿಧ ರೋಗಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡುವಂತೆ ವೈದ್ಯರನ್ನು ಒತ್ತಾಯಿಸದಿರಿ. ಉದಾಹರಣೆಗೆ "ಫ್ಲೂ' ಜ್ವರ ಬಾಧಿಸಿದಾಗ ಜ್ವರ, ತಲೆನೋವು, ಮೈಕೈ ನೋವು, ಗಂಟಲುನೋವು, ಶೀನು, ಕೆಮ್ಮು, ಬಾಯಿ ರುಚಿ ಮತ್ತು ಹಸಿವಿಲ್ಲದಿರುವುದು, ನಿಶ್ಶಕ್ತಿ ಮತ್ತು ನಿದ್ರಾಹೀನತೆಗಳಂತಹ ಲಕ್ಷಣಗಳು ಕಂಡುಬರುತ್ತವೆ. ಇವೆಲ್ಲಾ ಲಕ್ಷಣಗಳಿಗೂ ಒಂದೊಂದು ಔಷದವನ್ನು ನೀಡಿದಲ್ಲಿ, ನೀವು ಸೇವಿಸಬೇಕಾಗುವ ಒಟ್ಟು ಔಷದಗಳ ಸಂಖ್ಯೆ ಒಂದು ಡಜನ್ ಮೀರುತ್ತದೆ!. ನಿಜ ಹೇಳಬೇಕಿದ್ದಲ್ಲಿ ಸಂಪೂರ್ಣ ವಿಶ್ರಾಂತಿಯೊಂದಿಗೆ ಕೇವಲ ಒಂದೆರಡು ವಿಧದ ಸಾಮಾನ್ಯ ಔಷದಗಳನ್ನು ನಾಲ್ಕಾರು ದಿನಗಳ ಕಾಲ ಸೇವಿಸಿದಲ್ಲಿ, ಫ್ಲೂ ಜ್ವರವು ಸಂಪೂರ್ಣವಾಗಿ ಶಮನಗೊಳ್ಳುತ್ತದೆ. 

ಯಾವುದೇ ಸಂದರ್ಭದಲ್ಲೂ ನೀವು ಅಪೇಕ್ಷಿಸಿದ ಚಿಕಿತ್ಸೆಯನ್ನೇ, ಅಂದರೆ ಇಂಜೆಕ್ಷನ್, ಮಾತ್ರೆ, ಕ್ಯಾಪ್ಸೂಲ್, ಸಿರಪ್ ಹಾಗೂ ಟಾನಿಕ್ ಇತ್ಯಾದಿಗಳನ್ನೇ ನೀಡುವಂತೆ ವೈದ್ಯರನ್ನು ಒತ್ತಾಯಿಸದಿರಿ. 

ಅಂತಿಮವಾಗಿ ಹೇಳುವುದಾದಲ್ಲಿ ಇಂತಹ ಉಪಕ್ರಮಗಳನ್ನು ಪ್ರತಿಯೊಬ್ಬ ರೋಗಿಯು ಅನುಸರಿಸಿದಲ್ಲಿ, ಅನಾವಶ್ಯಕ ಔಷದಗಳನ್ನು ಸೂಚಿಸುವ ವೈದ್ಯರ ಪ್ರವೃತ್ತಿ ಹಾಗೂ ಇವುಗಳನ್ನು ಸೇವಿಸುವುದರಿಂದ ರೋಗಿಗಳು ಅನುಭವಿಸಬೇಕಾದ ತೊಂದರೆಗಳನ್ನು ನಿವಾರಿಸುವಲ್ಲಿ ನಿಮ್ಮ ಪಾತ್ರವೂ ಮಹತ್ವಪೂರ್ಣ ಎನಿಸಬಲ್ಲದು.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು.

ಉದಯವಾಣಿ ಪತ್ರಿಕೆಯ ದಿ. ೦೯-೧೨-೨೦೦೪ ರ ಸಂಚಿಕೆಯ ಬಳಕೆದಾರ; ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.


No comments:

Post a Comment