Thursday, February 20, 2014

G-category sites




    "ಜಿ" ಪ್ರವರ್ಗದ ನಿವೇಶನಗಳ ಹಂಚಿಕೆ: ನಿಮಗಿದು ಗೊತ್ತೇ?

ರಾಜ್ಯದ ಬಹುತೇಕ ಶಾಸಕರು, ಸಂಸದರು ಮತ್ತು ಇವರ ಬಂಧುಮಿತ್ರರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಪಡೆದುಕೊಂಡಿರುವ ಜಿ ಕೆಟಗರಿ ನಿವೇಶನಗಳ ಬಗ್ಗೆ ಸಾಕಷ್ಟು ವಾದವಿವಾದಗಳು ನಡೆದಿವೆ. ಸಾಮಾನ್ಯವಾಗಿ ಮುಖ್ಯಮಂತ್ರಿಗಳ ಇಚ್ಛಾನುಸಾರ, ಸರ್ಕಾರಿ ಭಾಷೆಯಲ್ಲಿ ಹೇಳುವುದಾದಲ್ಲಿ "ವಿವೇಚನಾ ಕೋಟಾ" ದಲ್ಲಿ ನಿವೇಶನಗಳನ್ನು ಅಲ್ಪಬೆಲೆಗೆ ಪಡೆದುಕೊಳ್ಳುವ ಫಲಾನುಭವಿಗಳು, ಇದರಲ್ಲಿ ಸ್ವಂತ ಉಪಯೋಗಕ್ಕೆ ಕೇವಲ ಒಂದು ಮನೆಯನ್ನು ಮಾತ್ರ ನಿರ್ಮಿಸಬಹುದಾಗಿದೆ. ಅದೇ ರೀತಿಯಲ್ಲಿ ತಮಗೆ ಮಂಜೂರಾಗಿರುವ ನಿವೇಶನವನ್ನು ತಮ್ಮ ಹೆಸರಿಗೆ ವರ್ಗಾಯಿಸಬೇಕಾದಲ್ಲಿ, ಹತ್ತು ವರ್ಷಗಳ ಕಾಲ ಕಾಯಬೇಕಾಗುವುದು ಅನಿವಾರ್ಯ. ಆದರೆ ತಾವು  ಕನಿಷ್ಠ ಬೆಲೆಗೆ ಪಡೆದುಕೊಂಡಿರುವ ನಿವೇಶನವನ್ನು ಅನ್ಯರಿಗೆ ಮಾರಾಟ ಮಾಡುವ ಮತ್ತು ಸ್ವಂತ ಮನೆಯನ್ನು ನಿರ್ಮಿಸದೇ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿರುವ ರಾಜ್ಯದ ರಾಜಕಾರಣಿಗಳ ಸಂಖ್ಯೆ ಕಡಿಮೆಯೇನಿಲ್ಲ. ಈ ವಿಚಾರ ರಾಜ್ಯದ ಅಧಿಕತಮ ಪ್ರಜೆಗಳಿಗೆ ತಿಳಿದಿಲ್ಲ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಜಿ ಕೆಟಗರಿ - ಅರ್ಹರು ಯಾರು?

ಅನೇಕ ವರ್ಷಗಳಿಂದ ವೈವಿಧ್ಯಮಯ ವಾದವಿವಾದಗಳಿಗೆ ಗ್ರಾಸವೆನಿಸಿರುವ "ಜಿ" ಪ್ರವರ್ಗ ನಿವೇಶನಗಳ ಬಗ್ಗೆ ನೈಜ ಮಾಹಿತಿಯನ್ನು ಅರಿತುಕೊಳ್ಳುವ ಸಲುವಾಗಿ , ಬಳಕೆದಾರರ ಹಿತರಕ್ಷಣಾ ವೇದಿಕೆಯ ಸಂಚಾಲಕರು ದಿ. ೦೧-೧೨-೨೦೦೯ ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಅರ್ಜಿಯನ್ನು ಸಲ್ಲಿಸಿ, ಜಿ ಕೆಟಗರಿ ನಿವೇಶನಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ನೀಡುವಂತೆ ಕೋರಿದ್ದರು. ೧೦- ೧೨- ೨೦೦೯ ರಂದು ಪತ್ರಮುಖೇನ ಲಭಿಸಿದ್ದ ಮಾಹಿತಿಯು ನಮ್ಮ ಪಾಲಿಗೆ ನಂಬಲು ಅಸಾಧ್ಯವೆನಿಸುವಂತಿತ್ತು. ಈ ಪತ್ರದಲ್ಲಿ " ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ನಿಯಮಾವಳಿ ೧೯೮೪ ರನ್ವಯ ಮುಖ್ಯಮಂತ್ರಿಯವರ ವಿವೇಚನಾ ಕೋಟಾದಲ್ಲಿ ನಿವೇಶನ ಹಂಚಿಕೆ ಮಾಡಲು ಅವಕಾಶವಿರುವುದಿಲ್ಲ. ಆದಾಗ್ಯೂ ದಿ. ೦೬-೦೮-೧೯೯೭ ರ ಸರ್ಕಾರದ ಮಾರ್ಗಸೂಚಿಯನುಸಾರ ಪ್ರಾಧಿಕಾರವು ಬಿಡಿ ನಿವೇಶನಗಳನ್ನು ವಿಲೇವಾರಿ ಮಾಡಬೇಕಾಗಿರುತ್ತದೆ. ಸದರಿ ಮಾರ್ಗಸೂಚಿಯನ್ವಯ ಸರ್ಕಾರ ನಿರ್ದೇಶನ ನೀಡುವ ಸಾರ್ವಜನಿಕ ಜೀವನದಲ್ಲಿನ  ವ್ಯಕ್ತಿಗಳಿಗೆ(ಪ್ರಾಯಶಃ ಸಾರ್ವಜನಿಕ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದ - ಸೇವೆಯನ್ನು ಸಲ್ಲಿಸಿದ್ದ , ಎನ್ನುವ ಅರ್ಥದಲ್ಲಿ) "ಜಿ" ಪ್ರವರ್ಗದಡಿ ಬಿಡಿ ನಿವೇಶನ ಹಂಚಿಕೆ ಮಾಡಲು ಅವಕಾಶವಿರುತ್ತದೆ" ಎಂದು ಉಲ್ಲೇಖಿಸಲಾಗಿತ್ತು. ಅಂತೆಯೇ ಪ್ರಾಧಿಕಾರದ ನಿವೇಶನ ಹಂಚಿಕೆ ನಿಯಮಾವಳಿ ೧೯೮೪ ರ ನಿಯಮ ೧೦ (೩) ರನ್ವಯ, ಯಾವುದೇ ವ್ಯಕ್ತಿ ಒಮ್ಮೆ ಪ್ರಾಧಿಕಾರದ ವತಿಯಿಂದ ನಿವೇಶನ ಹಂಚಿಕೆ ಪಡೆದಿದ್ದಲ್ಲಿ, ಅಂತಹ ವ್ಯಕ್ತಿ ಮತ್ತೊಮ್ಮೆ ನಿವೇಶನ ಹಂಚಿಕೆಗೆ ಅರ್ಹರಲ್ಲವೆಂದು ಈ ಮೂಲಕ ತಿಳಿಸಲಾಗಿದೆ ಎನ್ನುವ ವಿಚಾರವನ್ನೂ ಈ ಪತ್ರದಲ್ಲಿ ನಮೂದಿಸಲಾಗಿತ್ತು. 

ಇತ್ತೀಚೆಗೆ ಖಾಸಗಿ ಟೆಲಿವಿಷನ್ ವಾಹಿನಿಯೊಂದು ಜಿ ಕೆಟಗರಿ ನಿವೇಶನಗಳನ್ನು ಪಡೆದುಕೊಂಡು ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದ್ದ ಆಸ್ತಿವಿವರಗಳ ಪಟ್ಟಿಯಲ್ಲಿ ಇದನ್ನು ನಮೂದಿಸದ ರಾಜ್ಯದ ರಾಜಕಾರಣಿಗಳ ಬಗ್ಗೆ ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳ ಶಾಸಕರು ಇದರಲ್ಲಿ ಭಾಗಿಯಾಗಿದ್ದ ವಿಚಾರವನ್ನು ಬಹಿರಂಗಪಡಿಸಲಾಗಿತ್ತು.ನಿವೇಶನಗಳನ್ನು ಪಡೆದುಕೊಂಡಿರುವ ರಾಜಕಾರಣಿಗಳು ಇದನ್ನು ಮಾರಾಟ ಮಾಡಿರುವ ಕಾರಣದಿಂದಾಗಿ, ಈ ಮಾಹಿತಿಯನ್ನು ಘೋಷಣಾ ಪತ್ರದಲ್ಲಿ ನಮೂದಿಸಿಲ್ಲ ಎನ್ನುವ ಸಂದೆಹವನ್ನೂ ವ್ಯಕ್ತಪಡಿಸಲಾಗಿತ್ತು. ಕಾರ್ಯಕ್ರಮ ಪ್ರಸಾರವಾದ ಮರುದಿನ ರಾಜ್ಯದ ಮಾಜಿ  ಮುಖ್ಯಮಂತ್ರಿ ಕುಮಾರಸ್ವಾಮಿಯವರಲ್ಲಿ  ಪತ್ರಕರ್ತರು ಈ ಬಗ್ಗೆ ಪ್ರತಿಕ್ರಿಯೆಯನ್ನು ಕೇಳಿದಾಗ ನೀಡಿದ್ದ ಉತ್ತರ ಇಂತಿದೆ. ರಾಜ್ಯದ ಶಾಸಕರಿಗೆ ಮುಖ್ಯಮಂತ್ರಿಗಳ ವಿವೇಚನಾ ಕೋಟಾ( ಜಿ ಕೆಟಗರಿ) ದಲ್ಲಿ ಗೃಹ ನಿರ್ಮಾಣಕ್ಕಾಗಿ ( ಅಲ್ಪಬೆಲೆಗೆ) ನಿವೇಶನವನ್ನು ಪಡೆಯಬಹುದಾಗಿದೆ. ಆದರೆ ಯಾವುದೇ ಶಾಸಕರು ಸ್ವಂತಕ್ಕೆ ಆಸ್ತಿಯನ್ನು ಮಾಡಿಕೊಳ್ಳಲು ಇದನ್ನು ಬಳಸುವುದಿಲ್ಲ. ಈ ನಿವೇಶನವನ್ನು ಚುನಾವಣೆಯಲ್ಲಿ ಸ್ಪರ್ದಿಸುವ ಸಂದರ್ಭದಲ್ಲಿ ( ಮಾರುಕಟ್ಟೆಯ ಬೆಲೆಗೆ) ಮಾರಾಟ ಮಾಡುತ್ತಾರೆ. ಕೆಲ ಶಾಸಕರು ಇದಕ್ಕೆ ಅಪವಾದವೆನಿಸಬಹುದು. ಅಂತೆಯೇ ಕೆಲವರು ೨- ೩ ನಿವೇಶನಗಳನ್ನು ಪಡೆದುಕೊಂಡಿರಬಹುದು ಎಂದು ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ಹೇಳಿದ್ದರು.( ೨೦೧೨ ರಲ್ಲಿ ಬಿ.ಡಿ.ಎ ಕಾರ್ಯದರ್ಶಿಯವರು ನಾವು ಮಾಹಿತಿ ಹಕ್ಕು ಕಾಯಿದೆಯನ್ವಯ ಸಲ್ಲಿಸಿದ್ದ ಅರ್ಜಿಗೆ ನೀಡಿದ್ದ ಮಾಹಿತಿಯಂತೆ ರಾಜ್ಯದ ಯಾವುದೇ ಶಾಸಕರು ಹಾಗೂ ಸಂಸದರು ಜಿ ಕೆಟಗರಿಯಲ್ಲಿ ಒಂದಕ್ಕೂ ಅಧಿಕ ನಿವೇಶನಗಳನ್ನು ಪಡೆದಿಲ್ಲ ಎಂದು ತಿಳಿಸಿದ್ದರು.) 

ತದನಂತರ ಕನ್ನಡ  ಪತ್ರಿಕೆಯೊಂದರಲ್ಲಿ ಬೆಂಗಳೂರಿನ(ಸ್ಥಳಾಂತರಿತ) ಕೊಳೆಗೇರಿ ನಿವಾಸಿಗಳ ಹೆಸರಿನಲ್ಲಿ ನೂರಾರು ನಿವೇಶನಗಳನ್ನು ಅನರ್ಹರಿಗೆ ವಿತರಿಸಿದ್ದ ಹಗರಣವನ್ನು ಬಯಲಿಗೆಳೆಯಲಾಗಿತ್ತು. ಬಿ. ಡಿ . ಎ ಹಂಚಿದ್ದ ಈ ನಿವೇಶನಗಳೆಲ್ಲವೂ, ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಇದ್ದವು. ಅಲ್ಪ ಬೆಲೆಗೆ ಲಭಿಸಿದ್ದ ಇಂತಹ ನಿವೇಶನಗಳ ಫಲಾನುಭವಿಗಳ ಪಟ್ಟಿಯಲ್ಲಿ, ಒಂದೇ ಕುಟುಂಬಕ್ಕೆ ಸೇರಿದ ಒಂದಕ್ಕೂ ಅಧಿಕ ಸದಸ್ಯರ ಹೆಸರುಗಳು ಸಾಕಷ್ಟು ಸಂಖ್ಯೆಯಲ್ಲಿದ್ದವು!. ಇವರಲ್ಲಿ ಯಾರೊಬ್ಬರೂ ಕೊಳೆಗೇರಿಗಳ ನಿವಾಸಿಗಳೇ ಆಗಿರಲಿಲ್ಲ ಎನ್ನುವ ವಿಚಾರವನ್ನು ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಪ್ರಕಟಿಸಲಾಗಿತ್ತು. 

ಅನೇಕ ವರ್ಷಗಳಿಂದ ಜಿ ಪ್ರವರ್ಗದಲ್ಲಿ ಅನರ್ಹರಿಗೆ ನಿವೇಶನಗಳನ್ನು ವಿತರಿಸುತ್ತಿರುವ ಬಗ್ಗೆ ನಡೆದಿದ್ದ ದಾವೆಯೊಂದರಲ್ಲಿ, ರಾಜ್ಯದ ಉಚ್ಛ ನ್ಯಾಯಾಲಯವು ೨೦೧೦ ರಲ್ಲಿ ನೀಡಿದ್ದ ತೀರ್ಪಿನಲ್ಲಿ ಈ ರೀತಿಯಲ್ಲಿ ನಿವೇಶನಗಳನ್ನು ಹಂಚದಂತೆ ಆದೇಶಿಸಿತ್ತು. ಆದರೆ ನ್ಯಾಯಾಲಯದ ತೀರ್ಪು ಹೊರಬಿದ್ದ ಬಳಿಕವೂ, ಬಿ . ಡಿ . ಎ ವತಿಯಿಂದ ಜಿ ಪ್ರವರ್ಗದನ್ವಯ ಶಾಸಕರಿಗೆ ನಿವೇಶನಗಳನ್ನು ಹಂಚಿದ್ದ ವಿಚಾರವನ್ನು ಖಾಸಗಿ ಕನ್ನಡ ವಾಹಿನಿ ಪ್ರಸಾರ ಮಾಡಿದ್ದ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಲಾಗಿತ್ತು!. 

ಸಾಮಾನ್ಯವಾಗಿ ಬಿ.ಡಿ.ಎ ನಿಯಮಗಳಂತೆ ಜಿ ಕೆಟಗರಿಯಲ್ಲಿ  ಒಂದಕ್ಕೂ ಅಧಿಕ ನಿವೇಶನಗಳನ್ನು ಯಾರೂ ಪಡೆಯುವಂತಿಲ್ಲ. ಅದೇ ರೀತಿಯಲ್ಲಿ ಸ್ವಂತ ವಾಸ್ತವ್ಯಕ್ಕೆಂದು ಪಡೆದುಕೊಂಡ ನಿವೇಶನವನ್ನು ಮುಂದಿನ ೧೦ ವರ್ಷಗಳ ಕಾಲ ಮಾರಾಟ ಮಾಡುವಂತಿಲ್ಲ. ಏಕೆಂದರೆ ನಿವೇಶನವನ್ನು ಮಂಜೂರು ಮಾಡಿದರೂ, ಇದನ್ನು ಫಲಾನುಭವಿಯ ಹೆಸರಿಗೆ ವರ್ಗಾಯಿಸಬೇಕಿದ್ದಲ್ಲಿ, ೧೦ ವರ್ಷಗಳ ಕಾಲ ಕಾಯಲೇಬೇಕು. ಆದರೂ ನಮ್ಮ ಶಾಸಕರು ಇವುಗಳನ್ನು ಕಾನೂನು ಬಾಹಿರವಾಗಿ ಹೇಗೆ ಮಾರಾಟ ಮಾಡುತ್ತಾರೆ?, ಹಾಗೂ ಸ್ವಂತ ಮನೆಯನ್ನು ನಿರ್ಮಿಸುವುದಾಗಿ ಘೋಷಿಸಿದರೂ ವಾಣಿಜ್ಯ ಕಟ್ಟಡಗಳನ್ನು ಹೇಗೆ ನಿರ್ಮಿಸುತ್ತಾರೆ? ಎನ್ನುವ ಪ್ರಶ್ನೆಗಳಿಗೆ ಉತ್ತರವೇನೆಂದು ನಮಗೂ ತಿಳಿದಿಲ್ಲ. ಪ್ರಾಯಶಃ " ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು ಆದರೆ ಕೆಲವರು ಮಾತ್ರ ಹೆಚ್ಚು ಸಮಾನರು" ಎನ್ನುವುದೇ ಇದಕ್ಕೆ ಕಾರಣವಾಗಿರಬಹುದು. 

ಶರತ್ತುಗಳ ಉಲ್ಲಂಘನೆ 

ಜಿ ಪ್ರವರ್ಗದನ್ವಯ ಬಿ.ಡಿ.ಎ ನಿವೇಶನವನ್ನು ಅಲ್ಪಬೆಲೆಗೆ ಮಂಜೂರು ಮಾಡುವಾಗ ಕೆಲವೊಂದು ಷರತ್ತುಗಳನ್ನು ವಿಧಿಸಲಾಗುತ್ತದೆ. ಇವುಗಳಲ್ಲಿ ನಿವೇಶನ ಪಡೆದವರು ಹತ್ತು ವರ್ಷಗಳ ಕಾಲ ವಾರ್ಷಿಕ ೧೦/- ರೂ. ಬಾಡಿಗೆಯನ್ನು ಸಂದಾಯ ಮಾಡಬೇಕು. ಜೊತೆಗೆ ಐದು ವರ್ಷಗಳಲ್ಲಿ ಈ ನಿವೇಶನದಲ್ಲಿ ಒಂದು ಕಟ್ಟಡವನ್ನು ನಿರ್ಮಿಸಬೇಕು. ಇದರಲ್ಲಿ ಸ್ವಂತಕ್ಕಾಗಿ ಒಂದು ವಾಸ್ತವ್ಯದ ಮನೆಯನ್ನು ಮಾತ್ರ ನಿರ್ಮಿಸಬಹುದೇ ಹೊರತು ಬೇರೆ ಯಾವುದೇ ರೀತಿಯ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಈ ನಿವೇಶನವನ್ನು ಹಾಗೂ ಇದರಲ್ಲಿ ನಿರ್ಮಿಸಿದ ಕಟ್ಟಡವನ್ನು ಪರಭಾರೆ ಮಾಡುವಂತಿಲ್ಲ. ಬಿ.ಡಿ.ಎ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಅಥವಾ ೧೯೮೪ ನೆ ಸಾಲಿನ ನಿವೇಶನ ಹಂಚಿಕೆ ನಿಯಮಗಳ ಉಪಬಂಧಗಳನ್ನು ಉಲ್ಲಂಘಿಸಿದಲ್ಲಿ, ಬಿ.ಡಿ.ಎ ೧೫ ದಿನಗಳ ನೋಟೀಸು ನೀಡಿ, ಯಾವುದೇ ಪರಿಹಾರವನ್ನು ನೀಡದೆ ಈ ಸ್ವತ್ತಿನ ಸ್ವಾಧೀನವನ್ನು ತೆಗೆದುಕೊಳ್ಳಬಹುದು. ಜೊತೆಗೆ ನಿವೇಶನದ ಸಲುವಾಗಿ ಪಾವತಿಸಿದ್ದ ಮೊತ್ತದ ಶೇ.೧೨.೫ ನ್ನು ಮುಟ್ಟುಗೋಲು ಹಾಕಬಹುದು. ಇದಲ್ಲದೆ ಇನ್ನೂ ಅನೇಕ ಷರತ್ತುಗಳಿದ್ದು, ಇವುಗಳನ್ನು ನಿವೇಶನವನ್ನು ಪಡೆದುಕೊಂಡವರು ಪರಿಪಾಲಿಸಬೇಕಾಗುವುದು. ವಿಶೇಷವೆಂದರೆ ಅಧಿಕತಮ ಫಲಾನುಭವಿಗಳು( ನಮ್ಮನ್ನಾಳುವವರು) ಈ ಷರತ್ತುಗಳನ್ನು ರಾಜಾರೋಷವಾಗಿ ಉಲ್ಲಂಘಿಸುತ್ತಿದ್ದಾರೆ. ಆದರೆ ಬಿ.ಡಿ.ಎ ಇವೆಲ್ಲವನ್ನೂ ಕಂಡೂ ಕಾಣದಂತೆ ವರ್ತಿಸುತ್ತಿದೆ ಅನ್ನುವುದರಲ್ಲಿ ಸಂದೇಹವಿಲ್ಲ. 

ಕೊನೆಯ ಮಾತು 

ನಮ್ಮ ಶಾಸಕರಿಗೆ ಅವರು ಆಯ್ಕೆಯಾಗಿರುವ ಕ್ಷೇತ್ರದಲ್ಲೇ ಒಂದು ನಿವೇಶನವನ್ನು ಪಡೆದುಕೊಳ್ಳಬಹುದೇ ಹೊರತು, ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಅಲ್ಲ ಎನ್ನುವ ನಿಯಮವಿದ್ದಿದ್ದಲ್ಲಿ ಇವರು ನಿವೇಶನವನ್ನು ಪಡೆದುಕೊಳ್ಳಲು ಹಾತೊರೆಯುತ್ತಿರಲಿಲ್ಲ. ಹಾಗೂ ಇದೇ ಕಾರಣದಿಂದಾಗಿ ಜಿ ಪ್ರವರ್ಗದ ನಿವೇಶನಗಳ ಹಗರಣವೂ ನಡೆಯುತ್ತಿರಲಿಲ್ಲ!. 

ನಮ್ಮ ದೇಶದಲ್ಲಿ ಕಾನೂನುಗಳನ್ನು ರೂಪಿಸುವುದೇ ಇವುಗಳನ್ನು ಉಲ್ಲಂಘಿಸುವುದಕ್ಕಾಗಿ ಎಂದು ವಯೋವೃದ್ಧರೊಬ್ಬರು ಅನೇಕ ವರ್ಷಗಳ ಹಿಂದೆ ಆಡಿದ್ದ ಮಾತುಗಳು ಇದೀಗ ನಿಜವೆನಿಸುತ್ತಿವೆ. ದೇಶದ ಸಾಮಾನ್ಯ ಪ್ರಜೆಯು ಸಣ್ಣದೊಂದು ತಪ್ಪನ್ನು ಎಸಗಿದರೂ, ಆತನಿಗೆ ಕಾನೂನಿನಿಂದ ತಪ್ಪಿಸಿಕೊಳ್ಳುವ ಅವಕಾಶ ಇರುವುದಿಲ್ಲ. ಆದರೆ ನಮ್ಮನ್ನಾಳುವವರು ಏನೇ ಮಾಡಿದರೂ ಅವರಿಗೆ ಯಾವುದೇ ರೀತಿಯ ಶಿಕ್ಷೆಯೇ ಆಗುವುದಿಲ್ಲ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು.


No comments:

Post a Comment