Monday, February 17, 2014

NAIJA ENDO SANTRASTARANNU PATTE HACHCHUVUDENTU?


 ನೈಜ ಎಂಡೋ ಸಂತ್ರಸ್ತರನ್ನು ಪತ್ತೆಹಚ್ಚುವುದೆಂತು?

ಎಂಡೋಸಲ್ಫಾನ್ ಕೀಟನಾಶಕದ ದುಷ್ಪರಿಣಾಮಗಳಿಂದಾಗಿ ಅಯಾಚಿತ ಹಾಗೂ ಗಂಭೀರ ಆರೋಗ್ಯದ ಸಮಸ್ಯೆಗಳಿಗೆ ಈಡಾದವರ ನಿಖರವಾದ ವಿವರಗಳು ಇಂದಿಗೂ ಲಭ್ಯವಿಲ್ಲ. ಏಕೆಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸಂತ್ರಸ್ತರನ್ನು ಗುರುತಿಸುವ ಸಲುವಾಗಿ ನಡೆಸಿದ್ದ ವಿಶೇಷ ವೈದ್ಯಕೀಯ ಶಿಬಿರಗಳಲ್ಲಿ, ಶಂಕಿತ ಸಂತ್ರಸ್ತರ ತಪಾಸಣೆಯ ಕಾರ್ಯದಲ್ಲಿ ಸಂಭವಿಸಿದ್ದ ಲೋಪದೊಷಗಳೇ ಇದಕ್ಕೆ ಕಾರಣವೆನಿಸಿವೆ. ತತ್ಪರಿಣಾಮವಾಗಿ ಸಂತ್ರಸ್ತರ ಪಟ್ಟಿಯಲ್ಲಿ ಅನೇಕ ಅನರ್ಹರ ಹೆಸರು ಸೇರ್ಪಡೆಗೊಂಡಿದ್ದು, ನೈಜ ಮತ್ತು ಅರ್ಹ ಸಂತ್ರಸ್ತರ ಹೆಸರುಗಳನ್ನೇ ಕೈಬಿಡಲಾಗಿದೆ.

ತಪ್ಪು ಯಾರದೋ, ಶಿಕ್ಷೆ ಯಾರಿಗೋ!

ಸರ್ಕಾರಿ ವೈದ್ಯಾಧಿಕಾರಿಯೊಬ್ಬರು ಹೇಳುವಂತೆ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಿದ್ಧಪಡಿಸಿರುವ ಸಂತ್ರಸ್ತರ ಪಟ್ಟಿಯಲ್ಲಿನ ನೈಜ ಸಂತ್ರಸ್ತರ ಪ್ರಮಾಣ ಕೇವಲ ಶೇ.೨೫ ರಷ್ಟಿದ್ದು, ಇನ್ನುಳಿದ ಶೇ. ೭೫ ರಷ್ಟು ಮಂದಿ ವಿಕಲಚೇತನರು, ಪೋಲಿಯೋ ಮತ್ತು ಇನ್ನಿತರ ಅನ್ಯ ವ್ಯಾಧಿಗಳಿಂದ ಬಳಲುತ್ತಿರುವವರೇ ಆಗಿದ್ದಾರೆ. ವಿಶೇಷ ವೈದ್ಯಕೀಯ ಶಿಬಿರಗಳಲ್ಲಿ ಸಂಭವಿಸಿದ್ದ ಪ್ರಮಾದಗಳೇ ಇದಕ್ಕೆ ಕಾರಣವೆನಿಸಿವೆ.ಅನೇಕ ವರ್ಷಗಳಿಂದ ಎಂಡೋ ಪೀಡಿತರನ್ನು ನಿರ್ಲಕ್ಷಿಸಿದ್ದ ಸರ್ಕಾರವು ಇದೀಗ ಎಂಡೋ ಪೀಡಿತರ ಮತ್ತು ಇವರನ್ನು ಬೆಂಬಲಿಸುವ ಸ್ವಯಂ ಸೇವಾ ಸಂಘಟನೆಗಳ ನಿರಂತರ ಹೋರಾಟದಿಂದಾಗಿ ಮತ್ತು ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯ ಪರಿಣಾಮವಾಗಿ ಎಚ್ಚೆತ್ತಿದೆ. ಅಂತೆಯೇ ಇದೀಗ ತುಕ್ಕು ಹಿಡಿದಿರುವ ಸರ್ಕಾರಿ ಯಂತ್ರವು ಚಲಿಸಲಾರಂಭಿಸಿದೆ. ತತ್ಪರಿಣಾಮವಾಗಿ ಈ ಸಂತ್ರಸ್ತರಿಗೆ ನೀಡುತ್ತಿರುವ ಮಾಸಾಶನದ ಪ್ರಮಾಣವನ್ನು ಹೆಚ್ಚಿಸುವುದರೊಂದಿಗೆ, ದೊಡ್ಡ ಮೊತ್ತದ ಶಾಶ್ವತ ಪರಿಹಾರ ದೊರೆಯಲಿದೆ ಎನ್ನುವ ಸುದ್ದಿಯಿಂದಾಗಿ, ಸಂತ್ರಸ್ತರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಲು ಪ್ರಯತ್ನಿಸುವವರ ಸಂಖ್ಯೆಯೂ ಹೆಚ್ಚಿದೆ. ಇವರಲ್ಲಿ ನೈಜ ಸಂತ್ರಸ್ತರ ಸಂಖ್ಯೆಯೂ ಸಾಕಷ್ಟಿದೆ. 

ಎಂಡೋ ಸಂತ್ರಸ್ತರನ್ನು ಪತ್ತೆಹಚ್ಚಲು ನಡೆಸಿದ್ದ ವಿಶೇಷ ವೈದ್ಯಕೀಯ ಶಿಬಿರಗಳಿಗೆ ಸಂತ್ರಸ್ತರೆಲ್ಲರೂ ಹಾಜರಾಗುವಂತೆ ಮಾಡುವ ಹೊಣೆಗಾರಿಕೆಯನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ವಹಿಸಲಾಗಿತ್ತು. ಈ ಕಾರ್ಯಕರ್ತೆಯರಿಗೆ ಸಂತ್ರಸ್ತರನ್ನು ಗುರುತಿಸುವ ವಿಧಾನ- ಮಾನದಂಡಗಳ ಅರಿವಿಲ್ಲದಿದ್ದುದರಿಂದ, ಶಾರೀರಿಕ - ಮಾನಸಿಕ ವೈಕಲ್ಯಗಳಿಂದ ಬಳಲುತ್ತಿರುವ ಮತ್ತು ಅಂಗವಿಕಲರ ಮಾಸಾಶನವನ್ನು ಪಡೆಯುತ್ತಿರುವ ಪ್ರತಿಯೊಬ್ಬರನ್ನು ಶಿಬಿರಗಳಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಇದರಿಂದಾಗಿ ಅನೇಕ ಅನರ್ಹರು ಶಿಬಿರಗಳಲ್ಲಿ ಭಾಗವಹಿಸಿದ್ದುದರಿಂದ, ಇವರಲ್ಲಿ ಹಲವಾರು ಮಂದಿಗೆ ಸಂತ್ರಸ್ತರ ಪಟ್ಟಿಯಲ್ಲಿ ಸೇರುವ ಅವಕಾಶ ದೊರೆತಿತ್ತು. ಇನ್ನು ಕೆಲವರು ತಮ್ಮ "ಪ್ರಭಾವ" ವನ್ನು ಬಳಸಿಕೊಂಡು ಈ ಪಟ್ಟಿಯಲ್ಲಿ ಸ್ಥಾನವನ್ನು ಗಳಿಸಿಕೊಂಡ ಆರೋಪಗಳೂ ಕೇಳಿಬರುತ್ತಿವೆ. 

ಇವೆಲ್ಲಕ್ಕೂ ಮಿಗಿಲಾಗಿ ವಿಶೇಷ ವೈದ್ಯಕೀಯ ಶಿಬಿರಗಳಲ್ಲಿ ಭಾಗವಹಿಸಿದ್ದ ಬೆರಳೆಣಿಕೆಯಷ್ಟು ತಜ್ಞವೈದ್ಯರೊಂದಿಗೆ, ಸ್ನಾತಕೋತ್ತರ ಪದವಿಗಳ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಾಗಿದ್ದು, ಇವರಿಗೆ "ಎಂಡೋ ಸಂತ್ರಸ್ತ" ರನ್ನು ಗುರುತಿಸಲು ಅವಶ್ಯಕ ಪರೀಕ್ಷೆಗಳು- ಮಾನದಂಡಗಳ ಬಗ್ಗೆ ಯಾವುದೇ ಮಾಹಿತಿ ತಿಳಿದಿರಲಿಲ್ಲ. ಆರೋಗ್ಯ ಇಲಾಖೆಯ ವತಿಯಿಂದಲೂ ಇಂತಹ ಮಾಹಿತಿಗಳನ್ನು ಒದಗಿಸಿರಲಿಲ್ಲ. ಇದಲ್ಲದೆ ಆರೋಗ್ಯ ಇಲಾಖೆಯು ಒಂದಿಷ್ಟು ಮಾಹಿತಿಯನ್ನು ನೀಡಲು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಆಹ್ವಾನಿತ ತಜ್ಞರೇ ಭಾಗವಹಿಸಿರಲಿಲ್ಲ. ಇದೇ ಕಾರಣದಿಂದಾಗಿ ತಮಗೆ ತಿಳಿದಿರುವ ಸಾಕಷ್ಟು ಮಾಹಿತಿಗಳನ್ನು ನೀಡಲು ನಿಯೋಜಿತರಾಗಿದ್ದ ಖಾಸಗಿ ವೈದ್ಯರ ಕಾರ್ಯಾಗಾರದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಪ್ರತಿನಿಧಿಗಳು ಮಾತ್ರ ಭಾಗವಹಿಸಿದ್ದು, ಈ ಮಾಹಿತಿಗಳನ್ನು ಶಿಬಿರದಲ್ಲಿ ಭಾಗವಹಿಸಲಿದ್ದ ವೈದ್ಯರಿಗೆ ನೀಡಿರಲಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಶಿಬಿರಗಳಲ್ಲಿ ಭಾಗವಹಿಸಿದ್ದ ಅನೇಕ ತಜ್ಞರು ಮತ್ತು ಅನ್ಯ ವೈದ್ಯರು, ಎಂಡೋ ಸಂತ್ರಸ್ತರಲ್ಲದವರನ್ನು ಸಂತ್ರಸ್ತರೆಂದು ಮತ್ತು ನೈಜ ಸಂತ್ರಸ್ತರನ್ನು ಸಂತ್ರಸ್ತರಲ್ಲವೆಂದು ನಿರ್ಧರಿಸಿದ್ದರು. 

ಮಾಹಿತಿ ಹಕ್ಕಿನಿಂದ ದೊರೆತ ಮಾಹಿತಿ 

ಎಂಡೋ ಸಂತ್ರಸ್ತರನ್ನು ಗುರುತಿಸುವ ಶಿಬಿರಗಳಲ್ಲಿ ಸಂಭವಿಸಿದ್ದ ಲೋಪದೋಷಗಳನ್ನು ಕಂಡು, ಇದಕ್ಕೆ ಕಾರಣವೇನೆಂದು ಅರಿತು ಕೊಳ್ಳುವ ಕುತೂಹಲದಿಂದ ದ.ಕ. ಆರೋಗ್ಯಾಧಿಕಾರಿಯವರ ಕಚೇರಿಗೆ ಮಾಹಿತಿ ಹಕ್ಕು ಕಾಯಿದೆಯಂತೆ ಅರ್ಜಿಯೊಂದನ್ನು ಸಲ್ಲಿಸಲಾಯಿತು. ಇದರಲ್ಲಿ ಎಂಡೋ ಸಂತ್ರಸ್ತರನ್ನು ನಿಖರವಾಗಿ ಗುರುತಿಸಲು ಬಳಸಿದ್ದ "ಬಯೋ ಮಾರ್ಕರ್ಸ್" ಮತ್ತು ಅನ್ಯ ಮಾನದಂಡಗಳ ವಿವರಗಳನ್ನು ಕೇಳಿದ್ದು, ಇದಕ್ಕೆ ಸಂಬಂಧಿತ ಅಧಿಕಾರಿಗಳು ನೀಡಿದ್ದ ಉತ್ತರ ಇಂತಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ನೀಡಿದ್ದ ಮಾಹಿತಿಯಂತೆ ಜನ್ಮದತ್ತ ಶಾರೀರಿಕ ವೈಕಲ್ಯಗಳು, ಮಾನಸಿಕ ಬೆಳವಣಿಗೆ ಕುಂಠಿತವಾಗಿರುವುದು, ಇತರ ಮಾನಸಿಕ ಅಸಾಮಾನ್ಯತೆಗಳು, ಇತರ ಜನ್ಮದತ್ತ ಕಾಯಿಲೆಗಳು, ಅಪಸ್ಮಾರ, ಪಕ್ಷವಾತ, ಕುರುಡುತನ, ಕಿವುಡುತನ, ವಿವಿಧ ರೀತಿಯ ಕ್ಯಾನ್ಸರ್, ಬಂಜೆತನ ಮತ್ತು ಅಸಾಮಾನ್ಯ ಕಾರಣಗಳಿಂದ ಸಂಭವಿಸಿದ್ದ ಮರಣಗಳಿಗೆ ಈಡಾಗಿರುವವರನ್ನು ಎಂಡೋ ಸಂತ್ರಸ್ತರೆಂದು ಗುರುತಿಸಬಹುದಾಗಿದೆ. ನಿಜ ಹೇಳಬೇಕಿದ್ದಲ್ಲಿ ಮೇಲೆ ನಮೂದಿಸಿರುವ ಆರೋಗ್ಯದ ಸಮಸ್ಯೆಗಳು- ಲಕ್ಷಣಗಳು ಅನ್ಯ ಕಾರಣಗಳಿಂದಲೂ ಸಂಭವಿಸಬಹುದು. ಅದೇ ರೀತಿಯಲ್ಲಿ ಅಧಿಕಾರಿಗಳು ನೀಡಿರುವ ಮಾಹಿತಿಯಲ್ಲಿ ನಮೂದಿಸಿರದ ಅನೇಕ ಲಕ್ಷಣಗಳು- ವ್ಯಾಧಿಗಳು ಎಂಡೋ ಸಂತ್ರಸ್ತರಲ್ಲಿ ಕಂಡುಬಂದಿವೆ. ಇವುಗಳಲ್ಲಿ ಹೈಡ್ರೋ ಸೆಫಾಲಸ್, ಸೆರೆಬ್ರಲ್ ಪಾಲ್ಸಿ, ಆಸ್ತಮಾ, ಕೆಲವಿಧದ ಚರ್ಮರೋಗಗಳು, ಕೈಕಾಲುಗಳಲ್ಲಿ ನಡುಕ, ಬಾಯಿಯಿಂದ ಜೊಲ್ಲು ಹರಿಯುತ್ತಲೇ ಇರುವುದು, ನಪುಂಸಕತೆ, ವೀರ್ಯಾಣುಗಳ ಸಂಖ್ಯೆ ಕ್ಷಯಿಸುವುದು, ಕೇಂದ್ರ ನರಮಂಡಲಕ್ಕೆ ಸಂಬಂಧಿಸಿದ ಗಂಭೀರ ವ್ಯಾಧಿಗಳು, ಹಾರ್ಮೋನ್ ಗಳ ವ್ಯತ್ಯಯ, ಮೂಕತನವೇ ಮುಂತಾದ ಕಾಯಿಲೆಗಳು ಪ್ರಧಾನವಾಗಿವೆ. ಅಧಿಕಾರಿಗಳ ಪಟ್ಟಿಗೆ ಈ ವ್ಯಾಧಿಗಳನ್ನು ಸೇರಿಸಬಹುದಾದರೂ, ಇವೆಲ್ಲಾ ವ್ಯಾಧಿಗಳು ಅನ್ಯ ಕಾರಣಗಳಿಂದಲೂ ಉದ್ಭವಿಸುತ್ತವೆ. ಇವೆಲ್ಲಾ ಕಾರಣಗಳಿಂದ ಕೇವಲ ನಿರ್ದಿಷ್ಟ ಕಾಯಿಲೆ- ಲಕ್ಷಣಗಳ ಆಧಾರದ ಮೇಲೆ ಒಬ್ಬ ವ್ಯಕ್ತಿಯನ್ನು ಎಂಡೋ ಸಂತ್ರಸ್ತನೆಂದು ಖಚಿತವಾಗಿ ನಿರ್ಧರಿಸುವುದು ಅಸಾಧ್ಯವೆನಿಸುವುದು. ಹಾಗೂ ಇದೇ ಕಾರಣದಿಂದಾಗಿ ಎಂಡೋ ಸಂತ್ರಸ್ತರ ಹಿತರಕ್ಷಣಾ ಪ್ರತಿಷ್ಠಾನವು ಸಂತ್ರಸ್ತರನ್ನು ನಿಖರವಾಗಿ ಪತ್ತೆಹಚ್ಚಬಲ್ಲ " ಬಯೋ ಮಾರ್ಕರ್ಸ್' ಪತ್ತೆಹಚ್ಚುವ ಸಲುವಾಗಿ ಸಂಶೋಧನೆಯನ್ನು ನಡೆಸುವಂತೆ ಐ.ಸಿ.ಎಂ.ಆರ್ ಸಂಸ್ಥೆಯನ್ನು ಆಗ್ರಹಿಸಿದೆ. ಈ ಸಂಶೋಧನೆಗೆ ಲಕ್ಷಾಂತರ ರೂಪಾಯಿಗಳು ವೆಚ್ಚವಾಗಲಿದ್ದು, ಸರ್ಕಾರವು ಈ ಸಂಸ್ಥೆಗೆ ನೀಡುತ್ತಿರುವ ವಾರ್ಷಿಕ ಅನುದಾನವನ್ನು ಇದಕ್ಕೆ ಬಳಸಬಹುದಾಗಿದೆ. ಆದರೆ ಈ ಸಂಸ್ಥೆಯು ಎಂಡೋ ಸಿಂಪಡಿತ ಪ್ರದೇಶಗಳ ಸಮೀಪವಿರುವ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳು ಜಂಟಿಯಾಗಿ ಇದನ್ನು ನಡೆಸಬಹುದೆನ್ನುವ ಉದಾರ ಸಲಹೆಯನ್ನು ನೀಡಿದೆ!. 

ಅದೇನೇ ಇರಲಿ, ರಾಜ್ಯ ಸರ್ಕಾರದಿಂದ ಲಭಿಸುವ ಮಾಸಾಶನ ಮತ್ತು ಆರ್ಥಿಕ ಪರಿಹಾರಗಳು ನೈಜ ಸಂತ್ರಸ್ತರಿಗೆ ಮಾತ್ರ ಲಭಿಸಬೇಕಿದ್ದಲ್ಲಿ, ಇವರನ್ನು ನಿಖರವಾಗಿ ಗುರುತಿಸಬಲ್ಲ ಬಯೋ ಮಾರ್ಕರ್ಸ್ ಸಂಶೋಧಿಸುವುದು ಅತ್ಯವಶ್ಯಕ ಎನಿಸುವುದು. ಆದರೆ ದುರದೃಷ್ಟವಶಾತ್ ಇದನ್ನು ನಡೆಸದೆ ಇದ್ದಲ್ಲಿ, ಅಸಂಖ್ಯ ಅನರ್ಹರೂ ಇದರ ಲಾಭವನ್ನು ಪಡೆಯುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ. ನಿತ್ಯಾನಂದ ಪೈ. ಪುತ್ತೂರು  



No comments:

Post a Comment