Friday, February 28, 2014

DNA TEST





  ಡಿ.ಎನ್.ಎ ಪರೀಕ್ಷೆ: ಬಗೆಹರಿಸಬಹುದು ಸಮಸ್ಯೆ 

ಕೆಲ ವರ್ಷಗಳ ಹಿಂದೆ ಮಂಗಳೂರಿನಲ್ಲಿ ಸಂಭವಿಸಿದ್ದ ವಿಮಾನ ದುರಂತದಲ್ಲಿ ಅನೇಕ ನತದೃಷ್ಟ ಪ್ರಯಾಣಿಕರು ಮೃತಪಡುವುದರೊಂದಿಗೆ, ಅನೇಕ ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿದ್ದವು. ಇಂತಹ ಮೃತದೇಹಗಳ ಗುರುತನ್ನು ಪತ್ತೆಹಚ್ಚಲು ಇವರ ಸಮೀಪದ ಸಂಬಂಧಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಡಿ ಎನ್ ಎ ಪರೀಕ್ಷೆಯನ್ನು ನಡೆಸಲಾಗಿತ್ತು. ಶೇ. ೫೦ ರಷ್ಟು ಮೃತದೇಹಗಳನ್ನು ಈ ಪರೀಕ್ಷೆಯ ಮೂಲಕ ಗುರುತಿಸಿದ್ದರೂ, ಉಳಿದ ದೇಹಗಳ ಗುರುತನ್ನು ಪತ್ತೆಹಚ್ಚಲು ಇದು ವಿಫಲವಾಗಿತ್ತು. ಆದರೆ ಈ ವೈಫಲ್ಯಕ್ಕೆ ಪರೀಕ್ಷೆಯಲ್ಲಿನ ಲೋಪದೋಷಗಳು ಕಾರಣವಾಗಿರಲಿಲ್ಲ. ಅಪಘಾತ ಸಂಭವಿಸಿದ ಒಂದೆರಡು ದಿನಗಳಲ್ಲೇ ಸುಟ್ಟು  ಕರಕಲಾಗಿದ್ದ ಮೃತ ದೇಹಗಳನ್ನು ಬಂಧುಮಿತ್ರರು ನಿಖರವಾಗಿ ಗುರುತಿಸಲಾಗದಿದ್ದರೂ, ತಮ್ಮದೇ ಸಂಬಂಧಿಗಳ ದೇಹವೆಂದು ಭಾವಿಸಿ ಬೇರೊಂದು ಶವವನ್ನು ಕೊಂಡೊಯ್ದಿರುವುದೇ ಇದಕ್ಕೆ ಕಾರಣವೆನಿಸಿತ್ತು. ಸಾಮಾನ್ಯವಾಗಿ ಡಿ ಎನ್ ಎ ಪರೀಕ್ಷೆಯ ಯಶಸ್ಸಿನ ಪ್ರಮಾಣವು ಅತ್ಯಧಿಕವಾಗಿದ್ದು, ವೈಫಲ್ಯದ ಪ್ರಮಾಣವು ಅತ್ಯಲ್ಪವಾಗಿರುತ್ತದೆ. ಈ ರೀತಿಯಲ್ಲಿ ಜನಸಾಮಾನ್ಯರ ಮನಸ್ಸಿನಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿರುವ "ಡಿ ಎನ್ ಎ ಪರೀಕ್ಷೆ" ಯು, ಇದೇ ಕಾರಣದಿಂದಾಗಿ ಸಾಕಷ್ಟು ಪ್ರಚಾರವನ್ನು ಗಳಿಸಿದೆ. 

ಸಾಮಾನ್ಯವಾಗಿ ಕೊಲೆ, ದರೋಡೆ, ಹಲ್ಲೆ ಮತ್ತು ಅತ್ಯಾಚಾರದಂತಹ ಪ್ರಕರಣಗಳು ನಡೆದಿರುವ ಸ್ಥಳಗಳಲ್ಲಿ ದೊರೆಯಬಹುದಾದ, ಅಪರಾಧಿಗಳ ರಕ್ತ, ಚರ್ಮದ ತುಣುಕುಗಳು, ತಲೆಗೂದಲು, ವೀರ್ಯ ಇತ್ಯಾದಿಗಳು ನೈಜ ಅಪರಾಧಿಗಳನ್ನು ಪತ್ತೆಹಚ್ಚಲು ನೆರವಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಶಂಕಿತ ಅಪರಾಧಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ, ಇವುಗಳಲ್ಲಿರುವ ಜೀವಕೊಶಗಳಿಂದ ಪ್ರತ್ಯೇಕಿಸಿದ ಡಿ ಎನ್ ಎ ಅಂಶಗಳನ್ನು ಘಟನೆ ನಡೆದ ಸ್ಥಳದಲ್ಲಿ ಲಭಿಸಿದ್ದ ಮಾದರಿಗಳಲ್ಲಿರುವ ಡಿ ಎನ್ ಎ ಅಂಶಗಳೊಂದಿಗೆ ಹೋಲಿಸಿ ನೋಡುವ ಪರೀಕ್ಷಾ ವಿಧಾನವನ್ನು " ಡಿ ಎನ್ ಎ ಬೆರಳಚ್ಚು ಪರೀಕ್ಷೆ" ಎನ್ನುತ್ತಾರೆ. DNA fingerprinting ಅಥವಾ DNA profiling ಎಂದು ಕರೆಯಲ್ಪಡುವ ಈ ವೈಜ್ಞಾನಿಕ ಪರೀಕ್ಷೆಯು ಬಹುತೇಕ ಸಂದರ್ಭಗಳಲ್ಲಿ ನಿಖರವಾದ ಫಲಿತಾಂಶವನ್ನು ನೀಡುವುದಾದರೂ, ಅಪರೂಪದಲ್ಲಿ ಹಾಗೂ ಅಲ್ಪಪ್ರಮಾಣದಲ್ಲಿ ವಿಫಲವಾಗುವ ಸಾಧ್ಯತೆಗಳೂ ಇವೆ. 


  ಡಿ ಎನ್ ಎ ಎಂದರೇನು?

ಡಿಆಕ್ಸಿರೈಬೋ ನ್ಯೂಕ್ಲಿಕ್ ಎಸಿಡ್ ಅರ್ಥಾತ್ ಡಿ ಎನ್ ಎ, ಮನುಷ್ಯರು ಮತ್ತು ಅನ್ಯಜೀವಿಗಳಲ್ಲ್ಲಿರುವ ಅನುವಂಶಿಕ ದ್ರವ್ಯವಾಗಿದೆ. ಮನುಷ್ಯನ ಶರೀರದ ಬಹುತೇಕ ಜೀವಕೋಶಗಳಲ್ಲಿ ಡಿ ಎನ್ ಎ ಇದ್ದು, ಇವುಗಳಲ್ಲಿ ಅಧಿಕತಮ ಜೀವಕೋಶಗಳಲ್ಲಿರುವ ಡಿ ಎನ್ ಎ ಗಳು ಒಂದೇ ರೀತಿಯಾಗಿರುತ್ತದೆ. ಜೀವಕೋಶಗಳ ಕೋಶಕಕೇಂದ್ರಗಳಲ್ಲಿ ತುಸು ಅಧಿಕ ಪ್ರಮಾಣದಲ್ಲಿ ಮತ್ತು ಉಳಿದ ಭಾಗಗಳಲ್ಲಿ ಅಲ್ಪ ಪ್ರಮಾಣದಲ್ಲಿ ಡಿ ಎನ್ ಎ ಇರುತ್ತದೆ. ಪುರುಷರ ವೀರ್ಯ ಮತ್ತು ಸ್ತ್ರೀಯರಲ್ಲಿನ ಅಂಡಾಣುಗಳ ಮೂಲಕ ಈ ಡಿ ಎನ್ ಎ ಗಳು ಮುಂದಿನ ಸಂತತಿಗೆ ರವಾನೆಯಾಗುತ್ತವೆ. ಡಿ ಎನ್ ಎ ಗಳಲ್ಲಿ ಅಡಕವಾಗಿರುವ ಅನುವಂಶಿಕ ಮಾಹಿತಿಗಳು ಸಂಕೇತ ರೂಪದಲ್ಲಿ ಇರುತ್ತವೆ. ಡಿ ಎನ್ ಎ ಗಳ ಬಗ್ಗೆ ಇನ್ನಷ್ಟು ವಿವರಗಳನ್ನು ಅರಿತುಕೊಳ್ಳಬೇಕಿದ್ದಲ್ಲಿ, ಅನುವಂಶಿಕತೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದಿರಬೇಕಾಗುತ್ತದೆ. 

ಅನುವಂಶಿಕತೆ- ಅನುವಂಶೀಯತೆ 

ನಿಮ್ಮ ಮನೆಯಲ್ಲೊಂದು ಪುಟ್ಟ ಕಂದ ಜನಿಸಿದಾಗ ನೋಡಬಂದ ಬಂಧುಮಿತ್ರರು "ಮಗು ಥೇಟ್ ಅಪ್ಪನಂತೆ" ಅಥವಾ " ತಾಯಿಯ ಪಡಿಯಚ್ಚು" ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಸ್ವಾಭಾವಿಕ. ಈ ಕಂದನ ಕಣ್ಣು, ಕಿವಿ, ಬಾಯಿ, ತುಟಿ, ಮೂಗು, ತಲೆಗೂದಲು, ಶರೀರದ ಆಕಾರ, ಗಾತ್ರ, ಬಣ್ಣ ಮತ್ತಿತರ ಗುಣಲಕ್ಷಣಗಳು ತಂದೆತಾಯಂದಿರ ವಂಶವಾಹಿನಿಗಳ ಮೂಲಕ ಪೂರ್ವನಿರ್ಧಾರಿತವಾಗಿ ಬರುತ್ತವೆ ಹಾಗೂ ಇವುಗಳಲ್ಲಿನ ಡಿ ಎನ್ ಎ ಗಳು, ಈ ವಿಚಾರಗಳಲ್ಲಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತವೆ. ಅದೇ ರೀತಿಯಲ್ಲಿ ಮಗುವಿನ ಶಾರೀರಿಕ ಮತ್ತು ಮಾನಸಿಕ ಆರೋಗ್ಯ, ಬೆಳವಣಿಗೆ, ಬುದ್ಧಿವಂತಿಕೆ ಇತ್ಯಾದಿಗಳು, ಮಾತಾಪಿತರ ವಂಶವಾಹಿನಿಗಳಲ್ಲಿರುವ ಗುಣಾವಗುಣಗಳನ್ನು ಹೊಂದಿಕೊಂಡು ವ್ಯತ್ಯಯಗೊಳ್ಳುತ್ತವೆ. ಇದನ್ನು ಅನುವಂಶಿಕತೆ ಅಥವಾ ಅನುವಂಶೀಯತೆ ಎನ್ನುತ್ತಾರೆ. 

ಮನುಷ್ಯನ ಶರೀರದಲ್ಲಿನ ಜೀವಕಣಗಳಲ್ಲಿ ತಂದೆಯಿಂದ ಪಡೆದ ೨೩ ಮತ್ತು ತಾಯಿಯಿಂದ ಪಡೆದ ೨೩ ವರ್ಣತಂತುಗಳು ಸೇರಿದಂತೆ ಒಟ್ಟು ೪೬ ವರ್ಣತಂತು (Chromosomes) ಗಳಿದ್ದು, ಇವುಗಳು ೨೩ ಜೊತೆಗಳಾಗಿ ಇರುತ್ತವೆ. ಇವುಗಳಲ್ಲಿ ಒಂದು ಜೊತೆ ಲಿಂಗ ನಿರ್ಧಾರಕ (sex chromosomes) ಗಳಾಗಿವೆ. ಇವುಗಳು ಪುರುಷರಲ್ಲಿ XY ಮತ್ತು ಸ್ತ್ರೀಯರಲ್ಲಿ XX ಎಂದು ಗುರುತಿಸಲ್ಪಟ್ಟಿವೆ. ಈ ಎರಡು ವರ್ಣತಂತುಗಳನ್ನು ಹೊರತುಪಡಿಸಿ ಉಳಿದ ೨೨ ಜೊತೆ ವರ್ಣತಂತುಗಳನ್ನು ಅಟೋಸೋಮ್ಸ್ (Autosomes) ಎಂದು ಕರೆಯುತ್ತಾರೆ.  

ಪ್ರತಿಯೊಂದು ವರ್ಣತಂತುವಿನಲ್ಲೂ ಸಾವಿರಕ್ಕೂ ಅಧಿಕ ವಂಶವಾಹಿನಿಗಳು (Genes) ಇರುತ್ತವೆ. ಈ ವಂಶವಾಹಿನಿಗಳ ಮೂಟೆಯೇ "ಡಿ ಎನ್ ಎ " ಎಂದು ಗುರುತಿಸಲ್ಪಟ್ಟಿದೆ. ಇವುಗಳಲ್ಲಿ ವ್ಯಕ್ತಿಯ ಶಾರೀರಿಕ - ಮಾನಸಿಕ ಗುಣಲಕ್ಷಣಗಳು, ಅನುವಂಶಿಕ ಕಾಯಿಲೆಗಳ ಮಾಹಿತಿಗಳು ಮತ್ತು ಇತರ ಕೆಲ ಸಂಕೇತಗಳು ಅಡಕವಾಗಿರುತ್ತವೆ. ಈ ವಂಶವಾಹಿನಿಗಳು ಡಿಆಕ್ಸಿರೈಬೋನ್ಯೂಕ್ಲಿಕ್ ಎಸಿಡ್ ಅರ್ಥಾತ್ ಡಿ ಎನ್ ಎ ಗಳಿಂದ ನಿರ್ಮಿತವಾಗಿರುತ್ತವೆ. ಬಹುತೇಕ ಮನುಷ್ಯರಲ್ಲಿರುವ ಅಧಿಕತಮ ವಂಶವಾಹಿನಿಗಳು ಒಂದೇ ರೀತಿಯಲ್ಲಿದ್ದು, ಶೇ. ೧ ಕ್ಕೂ ಕಡಿಮೆ ಪ್ರಮಾಣದ ವಂಶವಾಹಿನಿಗಳು ಮಾತ್ರ ವಿಭಿನ್ನವಾಗಿ ಇರುತ್ತವೆ. 

ಮನುಷ್ಯನ ಶರೀರದಲ್ಲಿರುವ ರಕ್ತ, ಮಾಂಸಪೇಶಿಗಳು, ಮೆದುಳು, ಯಕೃತ್, ವೀರ್ಯಾಣು ಇತ್ಯಾದಿಗಳ ಜೀವಕೋಶಗಳಲ್ಲಿರುವ ಕೋಶಕೇಂದ್ರಗಳಲ್ಲಿ (Nucleus) ಡಿ ಎನ್ ಎ ಗಳು ಸಮೃದ್ಧವಾಗಿ ಇರುತ್ತವೆ. ಆದರೆ ರಕ್ತದಲ್ಲಿರುವ ಕೆಂಪು ರಕ್ತಕಣಗಳಲ್ಲಿ ಕೋಶಕೇಂದ್ರಗಳು ಇಲ್ಲದಿರುವುದರಿಂದ, ಡಿ ಎನ್ ಎ ಪರೀಕ್ಷೆಗಾಗಿ ಬಿಳಿ ರಕ್ತಕಣಗಳನ್ನು ಬಳಸಲಾಗುತ್ತದೆ. 

ಡಿ ಎನ್ ಎ ಅರ್ಥಾತ್ ಡಿಆಕ್ಸಿರೈಬೋನ್ಯೂಕ್ಲಿಕ್ ಎಸಿಡ್ ಪ್ರತಿಯೊಂದು ಮನುಷ್ಯ ಮತ್ತು ಜೀವಿಗಳಲ್ಲಿ ಇರುವಂತಹ ದ್ರವ್ಯವಾಗಿದೆ. ಅದೇ ರೀತಿಯಲ್ಲಿ ಒಬ್ಬ ವ್ಯಕ್ತಿಯ ಶರೀರದಲ್ಲಿನ ಬಹುತೇಕ ಜೀವಕೋಶಗಳಲ್ಲಿರುವ ಡಿ ಎನ್ ಎ ಗಳು ಒಂದೇ ರೀತಿಯದ್ದಾಗಿರುತ್ತವೆ. ಇವುಗಳಲ್ಲಿ ಅಡಕವಾಗಿರುವ ವೈವಿಧ್ಯಮಯ ಮಾಹಿತಿಗಳು- ಸಂಕೇತಗಳು ನಾಲ್ಕು ವಿಧದ ರಾಸಾಯನಿಕ ಮೂಲಗಳನ್ನು ಹೊಂದಿರುತ್ತವೆ. ಮನುಷ್ಯರ ಡಿ ಎನ್ ಎ ಮೂರು ಬಿಲಿಯನ್ ಮೂಲ (Base) ಗಳನ್ನು ಹೊಂದಿದ್ದು, ಶೇ. ೯೯ ರಷ್ಟು ಮೂಲಗಳು ಎಲ್ಲರಲ್ಲೂ ಏಕರೀತಿಯದ್ದಾಗಿರುತ್ತವೆ. ಸಂದೇಹಾಸ್ಪದ ಸಂದರ್ಭಗಳು ಅಥವಾ ಪ್ರಕರಣಗಳಲ್ಲಿ ನಿರ್ದಿಷ್ಟ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಲು ಉಳಿದ ಶೇ. ೧ ರಷ್ಟು ಡಿ ಎನ್ ಎ ಗಳನ್ನು ಪರೀಕ್ಷಿಸುವ - ತಾಳೆಹೊಂದಿಸುವ ವಿಧಾನವನ್ನು ಅನುಸರಿಸಲಾಗುತ್ತದೆ. 

ನಿರ್ದಿಷ್ಟ ವ್ಯಕ್ತಿಯೊಬ್ಬನನ್ನು ಗುರುತಿಸಲು, ಕೊಲೆ,ದರೋಡೆ ಹಾಗೂ ಅತ್ಯಾಚಾರದ ಪ್ರಕರಣಗಳಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚಲು, ಒಂದು ಮಗುವಿನ ತಂದೆ ಅಥವಾ ತಾಯಿ ಯಾರೆಂದು ನಿರ್ಧರಿಸಲು ಮತ್ತು ಅಪಘಾತ- ಅಕಸ್ಮಿಕಗಳಲ್ಲಿ ಮೃತಪಟ್ಟವರ ಶವಗಳನ್ನು ಬಂಧುಮಿತ್ರರು ಗುರುತಿಸಲು ಆಗದಂತಹ ಸನ್ನಿವೇಶಗಳಲ್ಲಿ ಡಿ ಎನ್ ಎ ಪರೀಕ್ಷೆ( DNA Finger printing or DNA Profiling) ಉಪಯುಕ್ತವೆನಿಸಬಲ್ಲದು. ೧೯೮೪-೮೫ ರಲ್ಲಿ ಸರ್ ಅಲೆಕ್ ಜೆಫ್ರೀಸ್ ಎನ್ನುವ ವಿಜ್ಞಾನಿಯೊಬ್ಬರು ಆವಿಷ್ಕರಿಸಿದ್ದ ಈ ಪರೀಕ್ಷೆಯು, ಇಂದು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. 

ಸಾಮಾನ್ಯವಾಗಿ ಮನುಷ್ಯರ ಶರೀರದಲ್ಲಿರುವ ಅಧಿಕತಮ ಡಿ ಎನ್ ಎ ಗಳು ಯಾವುದೇ ಅನ್ಯವ್ಯಕ್ತಿಗಳ ಡಿ ಎನ್ ಎ ಗಳೊಂದಿಗೆ ತಾಳೆಯಾಗುತ್ತವೆ. ಇದೇ ಕಾರಣದಿಂದಾಗಿ ಇವುಗಳನ್ನು ಪ್ರತ್ಯೇಕವಾಗಿ ಗುರುತಿಸುವುದು ಸುಲಭವೇನಲ್ಲ. ಆದರೆ ಡಿ ಎನ್ ಎ ಬೆರಳಚ್ಚು ವಿಧಾನದಲ್ಲಿ ಒಂದು ನಿರ್ದಿಷ್ಟ ವಿಧದ ಡಿ ಎನ್ ಎ ಅನುಕ್ರಮ( Sequence) ವಿಧಾನವನ್ನು ಅನುಸರಿಸಲಾಗುತ್ತಿದ್ದು (ಇದನ್ನು Micro satellite ಎನ್ನುತ್ತಾರೆ.) ಇದರಿಂದಾಗಿ ಇವುಗಳನ್ನು ಗುರುತಿಸುವುದು ಸುಲಭಸಾಧ್ಯವೆನಿಸುತ್ತದೆ. 

ಮನುಷ್ಯರ ಜೀವಕೊಶದಲ್ಲಿರುವ ಡಿ ಎನ್ ಎ ಗಳು ತಂದೆ ತಾಯಂದಿರಿಂದ ಅನುವಂಶಿಕವಾಗಿ ಬಂದಿರುವುದರಿಂದಾಗಿ, ಯಾವುದೇ ವ್ಯಕ್ತಿಯಲ್ಲೂ ತನ್ನ ತಂದೆ ತಾಯಂದಿರಲ್ಲಿ ಇರದಂತಹ ಡಿ ಎನ್ ಎ ಗಳು ಇರುವ ಸಾಧ್ಯತೆಗಳೇ ಇಲ್ಲ. ಇದರಿಂದಾಗಿ ಒಬ್ಬ ವ್ಯಕ್ತಿಯ ತಂದೆ, ತಾಯಿ, ಸಹೋದರ, ಸಹೋದರಿ ಹಾಗೂ ಮಕ್ಕಳಲ್ಲಿರುವ ಡಿ ಎನ್ ಎ ಗಳಲ್ಲಿ ಸಾಮ್ಯತೆ ಇರುವುದರಿಂದ, ಈ ವ್ಯಕ್ತಿಯ ಡಿ ಎನ್ ಎ ಗಳೊಂದಿಗೆ ಇವರೆಲ್ಲರ ಡಿ ಎನ್ ಎ ಗಳು ತಾಳೆಯಾಗಲೇಬೇಕು. ಈ ಪರೀಕ್ಷೆಯ ಪರಿಣಾಮಗಳು ಇಷ್ಟೊಂದು ನಿಖರವಾಗಿರುವುದರಿಂದಾಗಿ ತನ್ನ ಪತ್ನಿ ಹೆತ್ತಿರುವ ಮಗುವಿನ ತಂದೆ ತಾನಲ್ಲ ಅಥವಾ ತಾನು ಇಂತಹ ವ್ಯಕ್ತಿಯೊಬ್ಬರ ಮಗನೆಂದು ( ಎನ್. ಡಿ . ತಿವಾರಿಯವರ ಪ್ರಕರಣ) ನ್ಯಾಯಾಲಯದಲ್ಲಿ ಯಾರಾದರೂ ದಾವೆಯನ್ನು ಹೂಡಿದಾಗ, ಡಿ ಎನ್ ಎ ಪರೀಕ್ಷೆ ನಡೆಸುವ ಮೂಲಕವೇ ಇಂತಹ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಲಾಗುತ್ತದೆ!. 

ಡಿ ಎನ್ ಎ ಪರೀಕ್ಷ್ಗಳಲ್ಲಿ ಎರಡು ವಿಧಗಳಿದ್ದು, RFLP ವಿಧಾನದ ಪರೀಕ್ಷೆಗೆ ತುಸು ಅಧಿಕಪ್ರಮಾಣದ ಡಿ ಎನ್ ಎ ಗಳ ಅವಶ್ಯಕತೆ ಇರುತ್ತದೆ. ಆದರೆ PCR ವಿಧದ ಪರೀಕ್ಷೆಗೆ ಅತ್ಯಲ್ಪ ಪ್ರಮಾಣದ ಡಿ ಎನ್ ಎ ಸಾಕಾಗುತ್ತದೆ. PCR ಪರೀಕ್ಷಾ ವಿಧಾನದಲ್ಲಿ ಒಂದಿಷ್ಟು ತಪ್ಪುಗಳು ಸಂಭವಿಸುವ ಸಾಧ್ಯತೆಗಳಿದ್ದರೂ, ಕ್ಷಿಪ್ರಗತಿಯಲ್ಲಿ ಪರಿಣಾಮಗಳು ದೊರೆಯುವುದರಿಂದಾಗಿ ಇದು ವ್ಯಾಪಕವಾಗಿ ಬಳಸಲ್ಪಡುತ್ತಿದೆ. 

ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಬಳಸಲ್ಪಡುವ ಡಿ ಎನ್ ಎ ಫಿಂಗರ್ ಪ್ರಿಂಟಿಂಗ್ ಪರೀಕ್ಷೆಯಲ್ಲಿ ಬೆರಳಚ್ಚನ್ನು ಪಡೆಯುವ ಅವಶ್ಯಕತೆ ಇರುವುದಿಲ್ಲ. ಮನುಷ್ಯನ ಶರೀರದಲ್ಲಿನ ಪ್ರತಿಯೊಂದು ಜೀವಕೋಶಗಳಲ್ಲಿ ಡಿ ಎನ್ ಎ ಗಳು ಇರುವುದರಿಂದ, ಶರೀರದ ಯಾವುದೇ ಭಾಗದ ತುಣುಕು, ತಲೆಗೂದಲು, ಚರ್ಮದ ತುಣುಕು ಅಥವಾ ಕೇವಲ ಒಂದು ತೊಟ್ಟು ರಕ್ತದ ಮೂಲಕ ಈ ಪರೀಕ್ಷೆಯನ್ನು ನಡೆಸಿ ನಿರ್ದಿಷ್ಟ ವ್ಯಕ್ತಿಯ ಅಥವಾ ವ್ಯಕ್ತಿಗಳ ಗುರುತನ್ನು ಪತ್ತೆ ಹಚ್ಚಬಹುದಾಗಿದೆ. ಇದೇ ಕಾರಣದಿಂದಾಗಿ ಅಪರಾಧಿಗಳ ಪತ್ತೆಗಾಗಿ ಈ ಪರೀಕ್ಷೆಯನ್ನು ವಿಶ್ವಾದ್ಯಂತ ಬಳಸಲಾಗುತ್ತಿದೆ. ಈ ಪರೀಕ್ಷಾ ವಿಧಾನದ ನಿಖರತೆಯ ಬಗ್ಗೆ ಕಾನೂನು ಪಂಡಿತರು ಸಂದೇಹಗಳನ್ನು ವ್ಯಕ್ತಪಡಿಸುತ್ತಿದ್ದರೂ, ಇದರ ಉಪಯುಕ್ತತೆಯು ಅನೇಕ ಸಂದರ್ಭಗಳಲ್ಲಿ ಅತ್ಯಂತ ಮಹತ್ವಪೂರ್ಣ ಫಲಿತಾಂಶಗಳನ್ನು ನೀಡಿರುವುದು ಮಾತ್ರ ಸುಳ್ಳೇನಲ್ಲ!. 

ಡಾ. ಸಿ . ನಿತ್ಯಾನಂದ ಪೈ, ಪುತ್ತೂರು 

ಮಂಗಳೂರಿನಲ್ಲಿ ಸಂಭವಿಸಿದ್ದ ವಿಮಾನ ಅಪಘಾತದ ಸಂದರ್ಭದಲ್ಲಿ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿತ ಲೇಖನ. 


No comments:

Post a Comment