Monday, March 3, 2014

Mobile Towers- Are they dangerous?



  ಮೊಬೈಲ್ ಸಂಪರ್ಕ ಗೋಪುರ: ಆರೋಗ್ಯಕ್ಕೆ ಅಪಾಯಕರ 

ಬಹುತೇಕ ಭಾರತೀಯರ ದೈನಂದಿನ ಜೀವನದ ಅವಿಭಾಜ್ಯ ಅಂಗವೆನಿಸಿರುವ ಮೊಬೈಲ್ ದೂರವಾಣಿಗಳು ಮತ್ತು ಇವುಗಳ ಸಂಪರ್ಕ ಜಾಲದ ಗೋಪುರಗಳು ಮನುಕುಲಕ್ಕೆ ಮಾತ್ರವಲ್ಲ, ಪಕ್ಷಿ ಮತ್ತು ಕೀಟ ಸಂಕುಲಗಳಿಗೂ ಮಾರಕವೆನಿಸುತ್ತಿವೆ. ಆದರೆ ಇವುಗಳ ಸಂಖ್ಯೆ ಮಾತ್ರ ಅನಿಯಂತ್ರಿತವಾಗಿ ವೃದ್ಧಿಸುತ್ತಿದೆ!. 

ಬಡವ ಬಲ್ಲಿದರೆನ್ನುವ ಭೇದವಿಲ್ಲದೆ ಬಹುತೇಕ ಭಾರತೀಯರು ಪ್ರತಿನಿತ್ಯ ಬಳಸುವ ಪುಟ್ಟ ಸೆಲ್ಯುಲರ್ ದೂರವಾಣಿಗಳು ಮತ್ತು ಇವುಗಳ ಸಂಪರ್ಕಜಾಲದ ಪ್ರಮುಖ ಅಂಗವಾಗಿರುವ ಗೋಪುರಗಳು ನಿರಂತರವಾಗಿ ಹೊರಸೂಸುವ ವಿದ್ಯುತ್ ಆಯಸ್ಕಾಂತೀಯ ಅಲೆಗಳ ವಿಕಿರಣವು ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಆದರೆ ಈ ವಿಕಿರಣದ ದುಷ್ಪರಿಣಾಮಗಳು ಸೆಲ್ ಫೋನ್ ಗಳನ್ನು ಬಳಸುವ ವ್ಯಕ್ತಿಗಳಿಗೆ ಮತ್ತು ಮೊಬೈಲ್ ಗೋಪುರಗಳು ಹೊರಸೂಸುವ ವಿಕಿರಣಗಳ ದುಷ್ಪರಿಣಾಮಗಳು ಇವುಗಳ ಸುತ್ತಮುತ್ತಲೂ ವಾಸಿಸುತ್ತಿರುವ ಮನುಷ್ಯರು, ಪಶುಪಕ್ಷಿಗಳು ಮತ್ತು ಕ್ರಿಮಿಕೀಟಗಳ ಪಾಲಿಗೆ ಮಾರಕವೆನಿಸುತ್ತಿವೆ. ಈ ಬಗ್ಗೆ ಈಗಾಗಲೇ ನಡೆಸಿರುವ ಸಂಶೋಧನೆ- ಅಧ್ಯಯನಗಳ ವರದಿಗಳು ಈ ವಿಚಾರವನ್ನು ಸಾಬೀತುಪಡಿಸಿದ್ದರೂ, ಸೆಲ್ ಫೋನ್ ದೂರವಾಣಿ ಸೇವೆಯನ್ನು ನೀಡುತ್ತಿರುವ ಸಂಸ್ಥೆಗಳು ಮಾತ್ರ ಈ ಬಗ್ಗೆ ಚಿಂತಿರಾಗಿಲ್ಲ. ಏಕೆಂದರೆ ಈ ಸಂಸ್ಥೆಗಳಿಂದ ಸಹಸ್ರಾರು ಕೋಟಿ ರೂಪಾಯಿಗಳ ಆದಾಯವನ್ನು ಗಳಿಸುತ್ತಿರುವ ಕೇಂದ್ರ ಸರಕಾರವು, ವೈದ್ಯಕೀಯ ಸಂಶೋಧನೆಗಳ ವರದಿಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪ್ರಾಯಶಃ ತನ್ನ ಪ್ರಜೆಗಳ ಆರೋಗ್ಯಕ್ಕೆ ಸಂಭವಿಸಬಲ್ಲ ಅಪಾಯಕ್ಕಿಂತಲೂ, ತನ್ನ ಖಜಾನೆಗೆ ದೊರೆಯುವ ಆದಾಯವೇ ಮುಖ್ಯ ಎನ್ನುವುದು ಸರಕಾರದ ನಿಲುವಾಗಿರಬಹುದು. 

ಸುಲಭ ದರ- ಅನುಕೂಲಕರ!

ಕಳೆದ ಒಂದೆರಡು ದಶಕಗಳಲ್ಲಿ ಸೆಲ್ಯುಲರ್ ದೂರವಾಣಿಗಳು ಅತ್ಯಂತ ಜನಪ್ರಿಯವೆನಿಸಿದ್ದು, ಇವುಗಳಿಂದ ಮಾಡುವ ಕರೆಗಳು ತುಸು ಅಗ್ಗವಾದಂತೆಯೇ, ಇವುಗಳ ಬೇಡಿಕೆಯೂ ಸ್ವಾಭಾವಿಕವಾಗಿ ಹೆಚ್ಚಾಗಿತ್ತು. ಈ ಬೇಡಿಕೆಯ ಪ್ರಮಾಣಕ್ಕೆ ಅನುಗುಣವಾಗಿ ಇವುಗಳ ಸಂಪರ್ಕ ಜಾಲದ ವಿಸ್ತರಣೆಗಾಗಿ ಗೋಪುರಗಳ ನಿರ್ಮಾಣದ ಪ್ರಮಾಣವೂ ಹೆಚ್ಚಿತ್ತು. ಆದರೆ ಗೋಪುರಗಳ ನಿರ್ಮಾಣದ ಸಂದರ್ಭಗಳಲ್ಲಿ ಯಾವುದೇ ರೀತಿಯ ನೀತಿನಿಯಮಗಳನ್ನು ಪರಿಪಾಲಿಸದ ಸೇವಾ ಸಂಸ್ಥೆಗಳಿಂದಾಗಿ, ಪ್ರತಿಯೊಂದು ಊರಿನ ಪ್ರತಿಯೊಂದು ಕೇರಿಗಳಲ್ಲೂ ನಾಯಿಕೊಡೆಗಳಂತೆ ಸಹಸ್ರಾರು ಗೋಪುರಗಳು ತಲೆಎತ್ತಿದ್ದವು!. 

ಸ್ಥಳೀಯ ಸಂಸ್ಥೆಗಳಿಂದ ಗೋಪುರಗಳ ನಿರ್ಮಾಣಕ್ಕೆ ಅನುಮತಿಯನ್ನೇ ಪಡೆದುಕೊಳ್ಳದ ಸೇವಾ ಸಂಸ್ಥೆಗಳು, ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಿಂಚಿತ್ ಕೂಡಾ ಚಿಂತಿತರಾಗಿರಲಿಲ್ಲ. ಅದೇ ರೀತಿಯಲ್ಲಿ ಈ ಸೇವಾ ಸಂಸ್ಥೆಗಳು ನೀಡುವ ಸಹಸ್ರಾರು ರೂಪಾಯಿಗಳ ಮಾಸಿಕ ಬಾಡಿಗೆಯ ಆಮಿಷಕ್ಕೆ ಒಳಗಾದ ಜನರು, ತಮ್ಮ ವಸತಿ - ವಾಣಿಜ್ಯ ಕಟ್ಟಡಗಳ ಮೇಲೆ ಈ ಗೋಪುರಗಳನ್ನು ಸ್ಥಾಪಿಸಲು ಹಾತೊರೆದಿದ್ದರು. ಪ್ರಾಯಶಃ ಇದೇ ಕಾರಣದಿಂದಾಗಿ ಶಾಲಾಕಾಲೇಜುಗಳು, ಜನವಸತಿ ಪ್ರದೇಶಗಳು ಮತ್ತು ಆಸ್ಪತ್ರೆಗಳ ಆಸುಪಾಸಿನಲ್ಲಿ ಗೋಪುರಗಳನ್ನು ಸ್ಥಾಪಿಸಬಾರದೆನ್ನುವ ನಿಯಮವನ್ನು ನಿರ್ದಾಕ್ಷಿಣ್ಯವಾಗಿ ಉಲ್ಲಂಘಿಸಲಾಗಿತ್ತು. ಅಂತೆಯೇ ಎರಡು ಮೊಬೈಲ್ ಗೋಪುರಗಳ ನಡುವೆ ಕನಿಷ್ಠ ಮೂರು ಕಿ. ಮೀ ಅಂತರವಿರಬೇಕು ಎನ್ನುವ ನಿಯಮವನ್ನು ರಾಜಾರೋಷವಾಗಿ ಉಲ್ಲಂಘಿಸಲಾಗಿತ್ತು!. ಅರ್ಥಾತ್, ತಮ್ಮ ಮತ್ತು ತಮ್ಮ  ಸುತ್ತಮುತ್ತಲ ನಿವಾಸಿಗಳ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಎನಿಸುವ ಗೋಪುರಗಳನ್ನು ಸ್ಥಾಪಿಸಲು ಸಮ್ಮತಿಸಿದ ಜನರಿಗೂ, ತಮ್ಮೆಲರ ಆರೋಗ್ಯಕ್ಕಿಂತಲೂ ತಮಗೆ ಅನಾಯಾಸವಾಗಿ ದೊರೆಯಲಿರುವ ಸಹಸ್ರಾರು ರೂಪಾಯಿಗಳ ಮಾಸಿಕ ಬಾಡಿಗೆಯೇ ಆಕರ್ಷಕವಾಗಿ ಕಂಡಿತ್ತು. 

ಪ್ರಸ್ತುತ ಕೇಂದ್ರ ಸರಕಾರದ ದೂರಸಂಪರ್ಕ ಇಲಾಖೆಯು ಇಂಟರ್ ನ್ಯಾಶನಲ್ ಕಮಿಷನ್ ಆಫ್ ನಾನ್ ಅಯಾನೈಸಿಂಗ್ ರೇಡಿಯೇಶನ್ ಪ್ರೊಟೆಕ್ಷನ್ ಸಂಸ್ಥೆಯು ರೂಪಿಸಿರುವ ನಿಯಮಗಳನ್ನು ಅನುಸರಿಸುತ್ತಿದೆ. ಆದರೆ ಸೆಲ್ಯುಲರ್ ಸೇವಾ ಸಂಸ್ಥೆಗಳು ಮಾತ್ರ ತಮ್ಮ ಗೋಪುರಗಳು ಹೊರಸೂಸುವ ಸಂಕೇತಗಳ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಈ ನಿಯಮಗಳನ್ನು ಉಲ್ಲಂಘಿಸುತ್ತಿವೆ. 

ಸೆಲ್ಯುಲರ್ ಗೋಪುರಗಳಿಗೆ ರಷ್ಯಾ ದೇಶದಲ್ಲಿ ನಿಗದಿಸಿರುವ ಸುರಕ್ಷಿತ ವಿಕಿರಣದ ಮಿತಿಯು ಚದರ ಕಿ.ಮೀ. ಗೆ ೦.೦೨ ವ್ಯಾಟ್ ಮತ್ತು ಜರ್ಮನಿಯಲ್ಲಿ ೦.೦೦೧ ವ್ಯಾಟ್ ಗಳಾಗಿವೆ. ಆದರೆ ಭಾರತದಲ್ಲಿ ಮಾತ್ರ ಈ ಮಿತಿಯು ಚದರ ಕಿ.ಮೀ. ಗೆ ೪.೫ ವ್ಯಾಟ್ ಗಳಾಗಿದ್ದು, ಇದು ಜೀವಂತ ಮನುಷ್ಯನೊಬ್ಬನನ್ನು ಸುಮಾರು ೧೯ ನಿಮಿಷಗಳ ಕಾಲ "ಮೈಕ್ರೋವೇವ್ ಓವೆನ್" ನಲ್ಲಿ ಇರಿಸಿದಷ್ಟೇ ದುಷ್ಪರಿಣಾಮವನ್ನು ಬೀರುತ್ತದೆ!. 

ಆರೋಗ್ಯದ ಸಮಸ್ಯೆಗಳು 

ಮೊಬೈಲ್ ದೂರವಾಣಿ ಸಂಪರ್ಕ ಗೋಪುರಗಳು ಮತ್ತು ಪುಟ್ಟ ಸೆಲ್ಯುಲರ್ ದೂರವಾಣಿಗಳು ಹೊರಸೂಸುವ ವಿದ್ಯುತ್ ಆಯಸ್ಕಾಂತೀಯ ಅಲೆಗಳ ವಿಕಿರಣದ ಪರಿಣಾಮವು ಮನುಷ್ಯನ ಮೆದುಳು, ನರಮಂಡಲ, ಹೃದಯ,ಶ್ವಾಸಕೋಶಗಳು,ಕಿವಿ ಮತ್ತು ಕಣ್ಣುಗಳಿಗೆ ಸಂಬಂಧಿಸಿದ ಗಂಭೀರವಾದ ಆರೋಗ್ಯದ ಸಮಸ್ಯೆಗಳೊಂದಿಗೆ, ಕೆಲವಿಧದ ಮಾರಕ ಕ್ಯಾನ್ಸರ್ ವ್ಯಾಧಿಗಳಿಗೂ ಕಾರಣವೆನಿಸಬಲ್ಲದೆಂದು ಜರ್ಮನಿಯಲ್ಲಿ ಸುಮಾರು ಹತ್ತಾರು ವರ್ಷಗಳ ಹಿಂದೆ ನಡೆಸಿದ್ದ ಅಧ್ಯಯನದಿಂದ ತಿಳಿದುಬಂದಿದೆ. ಸುಮಾರು ೧೦೦೦ ಕ್ಕೂ ಅಧಿಕ ಕ್ಯಾನ್ಸರ್ ಪೀಡಿತ ರೋಗಿಗಳ ದಾಖಲೆಗಳನ್ನು ಅಧ್ಯಯನ ಮಾಡಿದ್ದ ಸಂಶೋಧಕರ ಅಭಿಪ್ರಾಯದಂತೆ, ಮೊಬೈಲ್ ಗೋಪುರಗ ೪೦೦ ಮೀಟರ್ ಸುತ್ತಳತೆಯಲ್ಲಿ ವಾಸಿಸುವ ವ್ಯಕ್ತಿಗಳಲ್ಲಿ ಹಲವಾರು ವಿಧದ ಕ್ಯಾನ್ಸರ್ ಗಳು ಉದ್ಭವಿಸುವ ಸಾಧ್ಯತೆಗಳು ೧೦೦ ಪಟ್ಟು ಹೆಚ್ಚುತ್ತವೆ!. 

ಮೊಬೈಲ್ ಗೋಪುರಗಳ ಸುತ್ತಮುತ್ತಲೂ ಹರಡುವ ವಿಕಿರಣಗಳ ಪ್ರಮಾಣವು ಪ್ರತಿ ಚದರ ಮೀಟರ್ ಗೆ ೭೨೬೦ ಮೈಕ್ರೋವ್ಯಾಟ್ಸ್ ಆಗಿರುತ್ತದೆ. ಇದರಿಂದಾಗಿ ಉದ್ಭವಿಸುವ ಕ್ಯಾನ್ಸರ್ ಗಳಲ್ಲಿ ಸ್ತನಗಳ ಕ್ಯಾನ್ಸರ್ ಅಗ್ರಸ್ಥಾನದಲ್ಲಿದೆ. ತದನಂತರದ ಸ್ಥಾನಗಳು ಅನುಕ್ರಮವಾಗಿ ಶುಕ್ಲ ಗ್ರಂಥಿ, ಮೇದೋಜೀರಕ ಗ್ರಂಥಿ, ಕರುಳು, ಚರ್ಮ, ಶ್ವಾಸಕೋಶಗಳು ಮತ್ತು ರಕ್ತದ ಕ್ಯಾನ್ಸರ್ ಗಳಿಗೆ ಸಲ್ಲುತ್ತದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಆರೋಗ್ಯ ಸಂಸ್ಥೆಯು ಜಗತ್ತಿನ ಪ್ರತಿಯೊಂದು ರಾಷ್ಟ್ರಗಳಿಗೂ ಮೊಬೈಲ್ ದೂರವಾಣಿಗಳು ಮತ್ತು ಗೋಪುರಗಳ ವಿಕಿರಣದ ಹಾನಿಕಾರಕ ಪರಿಣಾಮಗಳ ಬಗ್ಗೆ ಈಗಾಗಲೇ ಎಚ್ಚರಿಕೆಯನ್ನು ನೀಡಿದೆ. 

ವಿಶೇಷವೆಂದರೆ ಸೆಲ್ಯುಲರ್ ಸೇವಾ ಸಂಸ್ಥೆಗಳು ಮಾತ್ರ ಇಂತಹ ವರದಿಗಳನ್ನು ಒಪ್ಪುವುದೇ ಇಲ್ಲ. ಪ್ರಸ್ತುತ ಭಾರತದಲ್ಲಿ ಮೂರು ಲಕ್ಷಕ್ಕೂ ಅಧಿಕ  (ಈ ಲೇಖನವನ್ನು ಬರೆದಿದ್ದ ಸಂದರ್ಭದಲ್ಲಿ) ಗೋಪುರಗಳು ನಿರ್ಮಾಣಗೊಂಡಿದ್ದು, ಪ್ರತಿ ತಿಂಗಳಿನಲ್ಲೂ ಹೊಸದಾಗಿ ಒಂದೆರೆಡು ಸಾವಿರ ಗೋಪುರಗಳು ತಲೆ ಎತ್ತುತ್ತಿವೆ!. 

ಇತ್ತೀಚಿಗೆ ಸರಕಾರವು ಮೊಬೈಲ್ ಗೋಪುರಗಳ ವಿಕಿರಣದ ಹಾನಿಕಾರಕ ಪರಿಣಾಮಗಳನ್ನು ಅಧ್ಯಯನ ಮಾಡಲು ೧೦ ಸದಸ್ಯರಿರುವ ತಜ್ಞರ ಸಮಿತಿಯನ್ನು ನೇಮಿಸಿದೆ. ಈ ಸಮಿತಿಯು ೬ ತಿಂಗಳುಗಳಲ್ಲಿ ತನ್ನ ವರದಿಯನ್ನು ಸಲ್ಲಿಸಬೇಕಾಗಿದೆ. ಈ ಸಮಿತಿಯು ಮೊಬೈಲ್ ಗೋಪುರಗಳು ವಿಕಿರಣವು ಮನುಷ್ಯನ ಆರೋಗ್ಯಕ್ಕೆ ನಿಶ್ಚಿತವಾಗಿಯೂ ಹಾನಿಕಾರಕ ಎನ್ನುವ ವರದಿಯನ್ನು ನೀಡಿದರೂ, ಸರಕಾರವು ಇಂತಹ ಗೋಪುರಗಳ ನಿರ್ಮಾಣವನ್ನು ನಿಷೇಧಿಸುವ ಸಾಧ್ಯತೆಗಳೇ ಇಲ್ಲ. ಏಕೆಂದರೆ ಮೊಬೈಲ್ ದೂರವಾಣಿಗಳ ಅತಿಬಳಕೆ ಅಪಾಯಕಾರಿ ಎನ್ನುವ ಅರಿವಿದ್ದರೂ, ಇವುಗಳನ್ನು ಖರೀದಿಸಿ ಬಳಸುವ ಗ್ರಾಹಕರ ಸಂಖ್ಯೆಯು ದಿನೇದಿನೇ ಹೆಚ್ಚುತ್ತಿರುವುದರಿಂದಾಗಿ, ಇದಕ್ಕೆ ಅನುಗುಣವಾಗಿ ಮೊಬೈಲ್ ಗೋಪುರಗಳ ಸಂಖ್ಯೆಯೂ ಸ್ವಾಭಾವಿಕವಾಗಿಯೇ ಇನ್ನಷ್ಟು ಹೆಚ್ಚಲಿದೆ!. 

ಡಾ. ಸಿ . ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯಲ್ಲಿ ಸುಮಾರು ಏಳೆಂಟು ವರ್ಷಗಳ ಹಿಂದೆ ಪ್ರಕಟಿತ ಲೇಖನ.


No comments:

Post a Comment