Monday, March 31, 2014

............FOR ONE VOTE, ONE SEAT !




  ....ಒಂದು ಓಟಿಗಾಗಿ, ಒಂದು ಸೀಟಿಗಾಗಿ!

ಭವ್ಯ ಭಾರತದಲ್ಲಿ ಇದುವರೆಗೆ ನಡೆದಿದ್ದ ಯಾವುದೇ ಚುನಾವಣೆಗಳಲ್ಲಿ ಜನರು ಕಂಡು ಕೇಳರಿಯದಂತಹ ವಿಚಿತ್ರ ವಿದ್ಯಮಾನಗಳನ್ನು ಕಾಣುವ ಸೌಭಾಗ್ಯ ದೇಶದ ಮತದಾರರಿಗೆ ಪ್ರಾಪ್ತವಾಗಿದೆ. ಈ ಬಾರಿಯ ಚುನಾವಣೆ ನಿಸ್ಸಂದೇಹವಾಗಿ ನಮ್ಮನ್ನಾಳುವವರ ನಿಜವಾದ ಬಣ್ಣವನ್ನು ಬಯಲುಮಾಡಿದೆ. ಅಧಿಕಾರದ ಗದ್ದುಗೆಯನ್ನು ಏರಲೇಬೇಕೆನ್ನುವ ಹೆಬ್ಬಯಕೆಯು, ರಾಜಕೀಯ ಪುಡಾರಿಗಳು ನಡೆಸುತ್ತಿರುವ ಅದ್ಭುತ ಕಸರತ್ತುಗಳಿಗೆ ಕಾರಣವೆನಿಸಿದೆ. ವಿವಿಧ ಪಕ್ಷಗಳ ನಾಯಕರು ಮತ್ತು ಅಭ್ಯರ್ಥಿಗಳು ನಡೆಸುತ್ತಿರುವ ದೊಂಬರಾಟಗಳು, ಪುಟ್ಟ ಮಕ್ಕಳು ಆಡುವ "ಮರಕೋತಿ" ಆಟವನ್ನು ನೆನಪಿಸುತ್ತಿವೆ!.

ಪ್ರಸ್ತುತ ಏರುತ್ತಲೇ ಇರುವ ತಾಪಮಾನವನ್ನು ಲೆಕ್ಕಿಸದೇ ಸುಡುಬಿಸಿಲಿನಲ್ಲೂ ಮತದಾರರ ಮನೆಬಾಗಿಲಿಗೆ ಬಂದು, ಕೈಮುಗಿದು ಮತಯಾಚನೆ ಮಾಡುತ್ತಿರುವ ಅಭ್ಯರ್ಥಿಗಳು ತಮಗೆ ಮತವನ್ನು ನೀಡಬೇಕೆಂದು ಗೋಗರೆಯುತ್ತಿದ್ದಾರೆ. ಆದರೆ ಅದೃಷ್ಟವಶಾತ್ ಚುನಾವಣೆಯಲ್ಲಿ ಗೆದ್ದಲ್ಲಿ, ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಜನಸಾಮಾನ್ಯರೇ ಇವರ ಮನೆಬಾಗಿಲಿಗೆ ಹೋಗಿ ಕೈಮುಗಿದು ಗೋಗರೆಯಬೇಕಾಗುತ್ತದೆ ಎನ್ನುವುದು ಮತದಾರರಿಗೆ ತಿಳಿದಿರದ ವಿಚಾರವೇನಲ್ಲ!.

ರಾಜಕೀಯ ಕ್ಷೇತ್ರದಲ್ಲಿ ನಿವೃತ್ತಿಯ ವಯಸ್ಸನ್ನೇ ನಿಗದಿಸದೇ ಇರುವುದು ಅನೇಕ ರಾಜಕೀಯ ನೇತಾರರಿಗೆ ವರದಾನವಾಗಿ ಪರಿಣಮಿಸಿರುವುದು ಸುಳ್ಳೇನಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮ ಘನತೆ ಹಾಗೂ ಗೌರವಗಳನ್ನು ಮೆರೆದಿದ್ದ ಹಿಂದಿನ ತಲೆಮಾರಿನ ರಾಜಕೀಯ ನೇತಾರರು, ಇದೀಗ ತಮ್ಮ ಇಳಿವಯಸ್ಸಿನಲ್ಲಿ "ಚಲಾವಣೆಯಲ್ಲಿ ಇಲ್ಲದ ನಾಣ್ಯ" ದಂತಾಗಿದ್ದರೂ, ಮತ್ತೊಮ್ಮೆ ಚುನಾವಣೆಯಲ್ಲಿ ಗೆದ್ದು ಅಧಿಕಾರವನ್ನು ಚಲಾಯಿಸಲು ಹರಸಾಹಸವನ್ನೇ ನಡೆಸುತ್ತಿದ್ದಾರೆ. ಅದೇರೀತಿಯಲ್ಲಿ ಚಲಾವಣೆಯಲ್ಲಿ ಇರುವ ನಾಣ್ಯಗಳಂತಹ ಗೌರವಾನ್ವಿತ ಹಿರಿಯ ನಾಯಕರನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡಿರುವ ಪ್ರಸಂಗಗಳೂ ನಡೆಯುತ್ತಿವೆ. 

ಚುನಾವಣೆಯ ದಿನಗಳು ಸಮೀಪಿಸಿದಂತೆಯೇ ನಮ್ಮ ರಾಜಕೀಯ ನಾಯಕರ ಆಲಾಪ- ಪ್ರಲಾಪಗಳು ದಿನೇದಿನೇ ಹೆಚ್ಚುತ್ತಲೇ ಹೋಗುತ್ತವೆ. ಒಂದು ವೇದಿಕೆಯಲ್ಲಿ ತಮ್ಮ ವಿರೋಧಿಗಳ ವಿರುದ್ಧ ಸಿಂಹದಂತೆ ಘರ್ಜಿಸುವ ನೇತಾರರು, ಮತ್ತೊಂದು ವೇದಿಕೆಯಲ್ಲಿ ಗಳಗಳನೇ ಅಳುವುದು ಮತದಾರರಿಗೆ ಪುಕ್ಕಟೆ ಮನೋರಂಜನೆಯನ್ನು ನೀಡುತ್ತಿದೆ. ತಮ್ಮ ಸ್ವಾರ್ಥಕ್ಕಾಗಿ ಈ ರೀತಿಯಲ್ಲಿ ಅದ್ಭುತವಾಗಿ ನಟಿಸುತ್ತಿರುವ ನಾಯಕರ ಬಗ್ಗೆ " ನಗುವ ಹೆಂಗಸರನ್ನು ಮತ್ತು ಅಳುವ ಗಂಡಸರನ್ನು ನಂಬಬೇಡ" ಎಂದು ಮತದಾರರು ಲೇವಡಿ ಮಾಡುವಂತಾಗಿದೆ. 

ತಾವು ಸ್ಪರ್ಧಿಸಿರುವ ಕ್ಷೇತ್ರದ ಮತದಾರರನ್ನು ಕಾಡುತ್ತಿರುವ ಯಾವುದೇ ಸಮಸ್ಯೆಗಳು ಮತ್ತು ಇವುಗಳನ್ನು ಪರಿಹರಿಸಲು ತಾನು ಕೈಗೊಳ್ಳಲಿರುವ ಕಾರ್ಯತಂತ್ರಗಳ ಬಗ್ಗೆ ಯಾವುದೇ ಅಭ್ಯರ್ಥಿಗಳು ತಮ್ಮ ಚುನಾವಣಾ ಪ್ರಚಾರ ಸಭೆಗಳಲ್ಲಿ ವಿವರಿಸುವುದನ್ನು ನೀವೂ ಕೇಳಿರಲಾರಿರಿ. ಆದರೆ ತಮ್ಮ ಎದುರಾಳಿಗಳು ಹಾಗೂ ವಿರೋಧ ಪಕ್ಷಗಳು ತಮ್ಮನ್ನು ಸೋಲಿಸಲು ಹೆಣೆದಿರುವ ಷಡ್ಯಂತ್ರಗಳ ಬಗ್ಗೆ ನಿರರ್ಗಳವಾಗಿ ಕೊರೆಯುವ ಅಭರ್ಥಿಗಳು, ಎದುರಾಳಿಯ ದೌರ್ಬಲ್ಯಗಳು, ಆತನ ಹಗರಣಗಳು ಮತ್ತು ಆತನ ಚರಿತ್ರೆಯನ್ನು ಅಧ್ಯಯನ ಮಾಡಲು ಸಾಕಷ್ಟು ಸಮಯವನ್ನು ವಿನಿಯೋಗಿಸಿದರೂ, ಸ್ವಕ್ಷೇತ್ರದ ಸಮಸ್ಯೆಗಳನ್ನು ಅಧ್ಯಯನ ಮಾಡಲು ಇವರಿಗೆ ಒಂದಿಷ್ಟೂ ಬಿಡುವೇ ಇರುವುದಿಲ್ಲ!. 

ಪಕ್ಷಾತೀತರು!

ಪಕ್ಷದ ಟಿಕೆಟ್ ದೊರೆಯದ ಕಾರಣದಿಂದಾಗಿ ಅದೇ ತಾನೇ ತಾನು ತೊರೆದಿದ್ದ ಪಕ್ಷ ಮತ್ತು ಅದರ ನೇತಾರರನ್ನು  ವಾಚಾಮಗೋಚರವಾಗಿ ದೂಷಿಸುವ ಕೆಲ "ದಳಪತಿ" ಗಳು, ತಾವು ಹಿಂದೆ ನಿಂದಿಸುತ್ತಿದ್ದ ಪಕ್ಷವನ್ನು ಸೇರುವುದಲ್ಲದೇ, ಆ ಪಕ್ಷವನ್ನು ಮತ್ತು ಅದರ ನಾಯಕರನ್ನು ಹಾಡಿಹೊಗಳಲು ಆ ಪಕ್ಷವು ಆತನಿಗೆ ನೀಡಿದ್ದ ಟಿಕೆಟ್ ನ ಪ್ರಭಾವವೇ ಹೊರತು ಬೇರೇನೂ ಅಲ್ಲ!.

ಈ ಸಂದರ್ಭದಲ್ಲಿ ಆ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಅನೇಕ ವರ್ಷಗಳಿಂದ ದುಡಿಯುತ್ತಿದ್ದ ಅಭ್ಯರ್ಥಿಯೊಬ್ಬನನ್ನು ಕಡೆಗಣಿಸಿ, ಇದೀಗ ಟಿಕೆಟ್ ನ ಆಸೆಯಿಂದ ಪಕ್ಷವನ್ನು ಸೇರಿದ್ದ ಮತ್ತೊಂದು ಪಕ್ಷದ ಪ್ರಭಾವಿ ನಾಯಕರೊಬ್ಬರಿಗೆ ಟಿಕೆಟ್ ನೀಡುವುದು "ರಾಜಕೀಯ ಚದುರಂಗ" ದ ಆಟದ ನಡೆಗಳಲ್ಲಿ ಒಂದಾಗಿದೆ. ಪಕ್ಷದ ಸಿದ್ಧಾಂತಗಳಲ್ಲಿ ನಂಬಿಕೆ ಇಲ್ಲದಿದ್ದರೂ, ಟಿಕೆಟ್ ನ ಆಸೆಯಿಂದ ವಲಸೆ ಬಂದಿರುವ ಪುಡಾರಿಗಳ ವಿರುದ್ಧ ಸಿಡಿದೆದ್ದ ನಿಷ್ಠಾವಂತ ಕಾರ್ಯಕರ್ತರ ವಿರುದ್ಧ "ಶಿಸ್ತು ಕ್ರಮ" ಕೈಗೊಳ್ಳುವ ನಾಯಕರು, ತಮ್ಮ ನಿರ್ಧಾರಗಳನ್ನು ಸಮರ್ಥಿಸಿಕೊಳ್ಳಲು " ವ್ಯಕ್ತಿಗಿಂತ ಪಕ್ಷ ದೊಡ್ಡದು" ಎಂದು ಹೇಳಿಕೆಯನ್ನು ನೀಡುತ್ತಾರೆ.

ಇಷ್ಟು ಮಾತ್ರವಲ್ಲ, ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ನೀಡಲು ನಿರಾಕರಿಸಿ ಕಡೆಗಣಿಸಿದ್ದ ತಮ್ಮದೇ ಪಕ್ಷದ ಅಭ್ಯರ್ಥಿಗಳನ್ನು ಸಮಾಧಾನಿಸಲು, ಅವರನ್ನು ಮುಂದೆ ಅವಕಾಶ ದೊರೆತಾಗ ಎಂ. ಎಲ್. ಸಿ ಅಥವಾ ಎಂ. ಎಲ್. ಎ ಮಾಡುವ ಅಥವಾ ಇತರ ಗೌರವಾನ್ವಿತ ಹುದ್ದೆಯನ್ನು ನೀಡುವ ಆಮಿಷವನ್ನು ಒಡ್ಡುವುದು ಸುಳ್ಳೇನಲ್ಲ. ಆದರೆ ಇಂತಹ ಕೊಡುಗೆಗಳನ್ನು ತಿರಸ್ಕರಿಸುವ ನಿಷ್ಠಾವಂತ ಕಾರ್ಯಕರ್ತರ ಬಗ್ಗೆ ಇಲ್ಲಸಲ್ಲದ ಅಪವಾದಗಳನ್ನು ಹೊರಿಸಿ, ಅವರ ಮಾನವನ್ನು ಹರಾಜು ಹಾಕಲು ಪಕ್ಷಗಳ ನಾಯಕರು ಹಿಂಜರಿಯುವುದಿಲ್ಲ. ಇಂತಹ ಪ್ರಹಸನಗಳಿಂದ ಪಕ್ಷದ ವರ್ಚಸ್ಸಿಗೆ ಹಾನಿಯಾದರೂ, ಈ ನೇತಾರರು ತಮ್ಮ ನಿರ್ಧಾರಗಳನ್ನು ಮಾತ್ರ ಬದಲಿಸುವುದಿಲ್ಲ. 

ಇದಲ್ಲದೇ ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಬದಲಾಗದಿದ್ದರೂ, ಇವರಿಗೆ ಟಿಕೆಟ್ ನೀಡಿದ್ದ ಪಕ್ಷಗಳು ಬದಲಾಗಿರಲು ಈ ಅಭ್ಯರ್ಥಿಗಳು ಬಟ್ಟೆ ಬದಲಾಯಿಸಿದಂತೆಯೇ ಪಕ್ಷಗಳನ್ನು ಬದಲಾಯಿಸಿರುವುದೇ ಕಾರಣವಾಗಿರುತ್ತದೆ. ಅಂತೆಯೇ ಇಂತಹ ಅಭ್ಯರ್ಥಿಗಳಿಗೆ ಮತ್ತೆ ಮತ್ತೆ ಮತವನ್ನು ನೀಡುವ ಮೂಲಕ ಚುನಾಯಿಸುವ ಮತದಾರರೇ ಇದಕ್ಕೆ ನೇರವಾಗಿ ಕಾರಣವೆನಿಸುತ್ತಾರೆ.

ಆಶ್ವಾಸನೆಗಳ ಸುರಿಮಳೆ

ಚುನಾವಣಾ ಕಣದಲ್ಲಿರುವ ಒಂದು ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಆಶ್ವಾಸನೆಗಳ ಸುರಿಮಳೆಯು, ಮತ್ತೊಂದು ಪಕ್ಷದ ಭರವಸೆಗಳ ಮಹಾಪೂರದಲ್ಲಿ ಕೊಚ್ಚಿ ಹೋಗುತ್ತದೆ. ಇದೇ ಕಾರಣದಿಂದಾಗಿ ಮಗುದೊಂದು ಪಕ್ಷವು, ಇವೆರಡೂ ಪಕ್ಷಗಳ ಪ್ರಣಾಳಿಕೆಗಳಲ್ಲಿನ ಪ್ರಮುಖ ಅಂಶಗಳೊಂದಿಗೆ ತನ್ನ ಪಾಲಿನ ಮತ್ತಷ್ಟು ಕೊಡುಗೆಗಳನ್ನು ಸೇರಿಸಿ, ವಿನೂತನ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತದೆ. ವಿಶೇಷವೆಂದರೆ ಇಂತಹ ಭರವಸೆ- ಕೊಡುಗೆಗಳನ್ನು ನೀಡುವಂತೆ ದೇಶದ ಮತದಾರರು ಯಾವತ್ತೂ ಮನವಿಯನ್ನೇ ಮಾಡಿರುವುದಿಲ್ಲ!. 

ಇವೆಲ್ಲಕ್ಕೂ ಮಿಗಿಲಾಗಿ ತಾವು ಅಧಿಕಾರದಲ್ಲಿದ್ದಾಗ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೇ ಇದ್ದ ರಾಜಕೀಯ ಪಕ್ಷಗಳು- ನೆತಾರು, ಇದೀಗ ಜನರು ನಿರೀಕ್ಷಿಸದ ಕೊಡುಗೆಗಳನ್ನು ಕೊಡುಗೈ ಯಿಂದ ದಾನಮಾಡಲು ಮುಂದಾಗಿರುವುದು ಏಕೆಂದು ದೇಶದ ಮತದಾರರಿಗೆ ನಿಶ್ಚಿತವಾಗಿಯೂ ತಿಳಿದಿದೆ.

ಚುನಾವಣಾ ಪ್ರಚಾರ ಸಭೆಗಳಲ್ಲಿ ತಮ್ಮ ರಂಗುರಂಗಿನ ಮಾತುಗಳಿಂದ " ಅಂಗೈಯಲ್ಲಿ ಅರಮನೆ ಹಾಗೂ ಆಕಾಶದಲ್ಲಿ ಕಾಮನ ಬಿಲ್ಲು" ಗಳನ್ನೂ ತೋರಿಸುವ ರಾಜಕೀಯ ನೇತಾರರು, ಅದೃಷ್ಟವಶಾತ್ ಚುನಾವಣೆಗಳಲ್ಲಿ ಗೆದ್ದು ಅಧಿಕಾರದ ಸೂತ್ರವನ್ನು ಹಿಡಿದಲ್ಲಿ, ಇವೆಲ್ಲವನ್ನೂ ಮರೆತುಬಿಡುತ್ತಾರೆ. ಪ್ರತಿಬಾರಿ ಚುನಾವಣೆಯ ಸಂದರ್ಭದಲ್ಲಿ ಪಕ್ಷಗಳು ಪ್ರಕಟಿಸುವ ಪ್ರಣಾಳಿಕೆಗಳಲ್ಲಿ, ಹಿಂದಿನ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಪುನರಪಿ ನೀಡುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ!.

ಅಂತಿಮವಾಗಿ ಹೇಳುವುದಾದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಏನು ಮಾಡಲಿದೆ ಎನ್ನುವುದಕ್ಕಿಂತ, ಮತ್ತೊಂದು ಪಕ್ಷದ ಅಭ್ಯರ್ಥಿಯ ವೈಯುಕ್ತಿಕ ವಿಚಾರಗಳು ಮತ್ತು ಚರಿತ್ರೆಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುವುದರೊಂದಿಗೆ, ಅವರ ತೇಜೋವಧೆಗೆ ಪ್ರಯತ್ನಿಸುತ್ತಿರುವುದು ಗಮನಾರ್ಹವಾಗಿದೆ.ಇದರೊಂದಿಗೆ ಮತ್ತೊಂದು ಪಕ್ಷ ಅಧಿಕಾರದ ಗದ್ದುಗೆಯನ್ನು ಏರಿದಲ್ಲಿ ದೇಶದ ಅಧೋಗತಿಗೆ ಕಾರಣವೆನಿಸಲಿದೆ ಎಂದು ಘಂಟಾಘೋಷವಾಗಿ ಸಾರುವ ಪ್ರವೃತ್ತಿಯು ದಿನೇದಿನೇ ಹೆಚ್ಚುತ್ತಿದೆ!.

ಅದೇನೇ ಇರಲಿ, ದೇಶದ ಮತದಾರನ್ನು ಒಮ್ಮೆ ಅಥವಾ ಎರಡುಬಾರಿ ಮರುಳು ಮಾಡಬಹುದೇ ವಿನಃ, ಪ್ರತಿಬಾರಿ ಮರುಳು ಮಾಡಲಾಗದು ಎನ್ನುವುದನ್ನು ನಮ್ಮನ್ನಾಳುವ ನೇತಾರರಿಗೆ ತಿಳಿಸಲು ಇದೊಂದು ಉತ್ತಮ ಅವಕಾಶವಾಗಿದೆ. ಆದುದರಿಂದ ನಿಮ್ಮ ಮತವನ್ನು ತಪ್ಪದೆ ಚಲಾಯಿಸುವ ಮೂಲಕ ಅರ್ಹರನ್ನು ಚುನಾಯಿಸುವ ಅಧಿಕಾರವನ್ನು ತಪ್ಪದೇ ಬಳಸಲೇಬೇಕಾಗಿದೆ.

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು 


No comments:

Post a Comment