Thursday, March 6, 2014

Pesticides in fruits and vegetables!





  ಹಣ್ಣುಹಂಪಲುಗಳಲ್ಲೂ ತುಂಬಿಹುದು ಹಾಲಾಹಲ!

" an apple a day, keeps the doctor away" ಎನ್ನುವ ಆಡುಮಾತನ್ನು ನೀವೂ ಕೇಳಿರಲೇಬೇಕು. ಅದೇ ರೀತಿಯಲ್ಲಿ ದಿನನಿತ್ಯ ಹಣ್ಣುಹಂಪಲು ಮತ್ತು ತರಕಾರಿಗಳನ್ನು ಸೇವಿಸುವುದು ಆರೋಗ್ಯಕರ ಎನ್ನುವ ಕಿವಿಮಾತನ್ನು ನಿಮ್ಮ ವೈದ್ಯರು ನಿಮಗೆ ಹೇಳಿರಲೇಬೇಕು. ಆದರೆ ಇಂದಿನ ಬದಲಾದ ಪರಿಸ್ಥಿತಿಯಲ್ಲಿ, ಇವುಗಳಲ್ಲಿ ಪತ್ತೆಯಾಗುತ್ತಿರುವ ರಾಸಾಯನಿಕ ಕೀಟನಾಶಕಗಳಿಂದಾಗಿ ಇವುಗಳ ಸೇವನೆ ಮನುಷ್ಯರ ಆರೋಗ್ಯಕ್ಕೆ ಮಾರಕವೆನಿಸುತ್ತಿರುವುದು ಸುಳ್ಳೇನಲ್ಲ!. 

ನಮ್ಮ ದೇಶದ ಸರ್ವೋತ್ಕೃಷ್ಟ ಉತ್ಪನ್ನಗಳನ್ನು ಅವಗಣಿಸಿ ವಿದೇಶಿ ವಸ್ತುಗಳನ್ನು ಖರೀದಿಸುವುದು ಬಹುತೇಕ ಭಾರತೀಯರ ದೌರ್ಬಲ್ಯಗಳಲ್ಲಿ ಪ್ರಮುಖವಾಗಿದೆ. ಸಾಮಾನ್ಯವಾಗಿ ಶ್ರೀಮಂತರಲ್ಲಿ ಹೆಚ್ಚಾಗಿ ಕಾಣಸಿಗುವ ಈ ಪಿಡುಗು, ಇದೀಗ ಮಧ್ಯಮವರ್ಗದ ಜನರಿಗೂ ಹಬ್ಬಿದೆ. ಇದರಲ್ಲಿ ಉದಾರೀಕರಣ- ಜಾಗತೀಕರಣಗಳ ಪ್ರಭಾವವೂ ಸಾಕಷ್ಟಿದೆ. 



 ಪ್ರಸ್ತುತ ಭಾರತದಲ್ಲಿ ಯಥೇಚ್ಚವಾಗಿ ಲಭಿಸುವ, ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ, ದುಬಾರಿ ಬೆಲೆಯ ಹಣ್ಣು ಹಂಪಲು ಹಾಗೂ ತರಕಾರಿಗಳಿಗೆ ಅನೇಕ ಭಾರತೀಯರು ಮಾರುಹೋಗಿದ್ದಾರೆ. ನಿಜ ಹೇಳಬೇಕಿದ್ದಲ್ಲಿ ಕಾಶ್ಮೀರದ ಕುಲು ಕಣಿವೆಯಲ್ಲಿ ಬೆಳೆಯುವ ಉತ್ಕೃಷ್ಟ ಗುಣಮಟ್ಟದ ಹಾಗೂ ಅತ್ಯಂತ ಸ್ವಾದಿಷ್ಟ ಸೇಬುಹಣ್ಣುಗಳನ್ನು ಜಗತ್ತಿನ ಅನೇಕ ರಾಷ್ಟ್ರಗಳು ಇಂದಿಗೂ ಆಮದು ಮಾಡಿಕೊಳ್ಳುತ್ತಿವೆ. ಆದರೆ " ಹಿತ್ತಲ ಗಿಡ ಮದ್ದಲ್ಲ " ಎನ್ನುವಂತೆ, ಭಾರತೀಯರು ಆಸ್ಟ್ರೇಲಿಯಾ ಮತ್ತಿತರ ದೇಶಗಳಿಂದ ಆಮದು ಮಾಡಿದ ದುಬಾರಿ ಬೆಲೆಯ ಸೇಬುಗಳನ್ನು ಖರೀದಿಸಿ ಆಸ್ವಾದಿಸುತ್ತಾರೆ!. ಅಮೆರಿಕ, ಥಾಯ್ಲೆಂಡ್, ಆಸ್ಟ್ರೇಲಿಯಾ ಮುಂತಾದ ದೇಶಗಳಿಂದ ನಾವು ಆಮದು ಮಾಡಿಕೊಳ್ಳುತ್ತಿರುವ ಹಣ್ಣುಹಂಪಲು ಮತ್ತು ತರಕಾರಿಗಳಲ್ಲಿ ವೈವಿಧ್ಯಮಯ ಕೀಟನಾಶಕಗಳು ಇರುತ್ತವೆ. ಇದರರ್ಥ ಭಾರತದಲ್ಲಿ ಬೆಳೆಯುವ ಹಣ್ಣು- ತರಕಾರಿಗಳಲ್ಲಿ ಕೀಟನಾಶಕಗಳೇ ಇಲ್ಲವೆಂದಲ್ಲ. ಆದರೆ ನಮ್ಮ ಮಾತೃಭೂಮಿಯಲ್ಲಿ ಬೆಳೆಯುವ ಇಂತಹ ಉತ್ಪನ್ನಗಳಲ್ಲಿ ನಿಶ್ಚಿತವಾಗಿಯೂ ನಾವಿಂದು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಉತ್ಪನ್ನಗಳಲ್ಲಿ ಇರುವಷ್ಟು ವೈವಿಧ್ಯಮಯ, ಹಾನಿಕಾರಕ ರಾಸಾಯನಿಕ ಕೀಟನಾಶಕಗಳು ಇರುವ ಸಾಧ್ಯತೆಗಳೇ ಇಲ್ಲ. ಏಕೆಂದರೆ ಭಾರತದ ಮಾರುಕಟ್ಟೆಯಲ್ಲಿ ಇಷ್ಟೊಂದು ವಿಧದ ಕೀಟನಾಶಕಗಳೇ ಲಭ್ಯವಿಲ್ಲ!. ಆದರೂ ಈ ಸತ್ಯ ಸಂಗತಿ ಬಹುತೇಕ ಭಾರತೀಯರಿಗೆ ತಿಳಿದಿಲ್ಲ. 

ಇತ್ತೀಚಿನ ಮಾಹಿತಿಯಂತೆ ಅಮೆರಿಕದಲ್ಲಿ ೭೭೫, ಯುರೋಪಿಯನ್ ಯುನಿಯನ್ ನಲ್ಲಿ ೬೦೦ ಹಾಗೂ ಥಾಯ್ಲೆಂಡ್ ನಲ್ಲಿ ೨೮೦ ವಿಧದ ಕೀಟನಾಶಕ ರಾಸಾಯನಿಕಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಭಾರತದಲ್ಲಿ ಕೇವಲ ೧೭೯ ವಿಧದ ಕೀಟನಾಶಕಗಳು ಮಾತ್ರ ಲಭ್ಯವಿದೆ!.ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿರುವ ಆಹಾರ ಕಲಬೆರಕೆ ಕಾಯಿದೆ (prevention of food adulteration act) ೧೯೫೪ ನಿಯಮಗಳು ಆಮದು ಮಾಡಿರುವ ಖಾದ್ಯವಸ್ತುಗಳಿಗೂ ಅನ್ವಯಿಸುತ್ತದೆ. ಆದರೆ ಇಂದು ವಿದೇಶಗಳಲ್ಲಿ ಬಳಸಲ್ಪಡುತ್ತಿರುವ ವೈವಿಧ್ಯಮಯ ಕೀಟನಾಶಕಗಳನ್ನೂ ಪತ್ತೆ ಹಚ್ಚಲು ಬೇಕಾದ ಅವಶ್ಯಕ ವ್ಯವಸ್ಥೆ ಮತ್ತು ಉಪಕರಣಗಳು ನಮ್ಮ ದೇಶದಲ್ಲಿ ಇಲ್ಲದ ಕಾರಣದಿಂದಾಗಿ, ಈ ನಿಯಮವು ನಿಜಕ್ಕೂ ನಿರುಪಯುಕ್ತವೆನಿಸುತ್ತದೆ. ಇದೇ ಕಾರಣದಿಂದಾಗಿ ಆಮದಿತ ಖಾದ್ಯಗಳನ್ನು ಪರೀಕ್ಷಿಸಲು ನಿಯೋಜಿತ ಸಂಸ್ಥೆಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ವಿಫಲವಾಗುತ್ತಿವೆ. ಹಾಗೂ ವಿದೇಶೀ ಸಂಸ್ಥೆಗಳು ತಮ್ಮ ಉತ್ಪನ್ನಗಳಲ್ಲಿ ಕೀಟನಾಶಕಗಳೇ ಇಲ್ಲವೆಂದು ನೀಡುವ ಭರವಸೆಯನ್ನು ಅನಿವಾರ್ಯವಾಗಿ ಒಪ್ಪಿಕೊಂಡು, ಇವುಗಳ ಮೇಲೆ "Zero  pesticide " ಎನ್ನುವ ಮುದ್ರೆಯನ್ನು ಒತ್ತಿಬಿಡುತ್ತವೆ!. 

ವಿಶ್ವ ವ್ಯಾಪಾರ ಸಂಸ್ಥೆಯು ೨೦೦೧ ರಲ್ಲಿ ಸಡಿಲಿಸಿದ ನಿಯಮಗಳಿಂದಾಗಿ ಅಮೆರಿಕ, ಆಸ್ಟ್ರೇಲಿಯ,ಥಾಯ್ಲೆಂಡ್, ನ್ಯೂಜಿಲೆಂಡ್ ಮುಂತಾದ ದೇಶಗಳು ಭಾರತದ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತಿರುವ ವಿವಿಧ ಹಣ್ಣು ಹಂಪಲು- ತರಕಾರಿಗಳ ಪ್ರಮಾಣವು ವರ್ಷಂಪ್ರತಿ ಹೆಚ್ಚುತ್ತಲೇ ಇದೆ. ಇದರಿಂದಾಗಿ ಇವುಗಲ್ಲಿರುವ ಕೀಟನಾಶಕಗಳಲ್ಲದೇ, ಭಾರದಲ್ಲಿ ಕಾಣಸಿಗದಂತಹ " ಕೀಟ ಸಂಕುಲ " ಗಳು ಈ ಉತ್ಪನ್ನಗಳಲ್ಲಿ ಪತ್ತೆಯಾಗಿವೆ!. ಸೆಂಟರ್ ಫಾರ್ ಇಂಟರ್ ನ್ಯಾಷನಲ್ ಟ್ರೇಡ್ ಇನ್ ಅಗ್ರಿಕಲ್ಚರ್ ಎಂಡ್ ಆಗ್ರೋ ಬೇಸ್ಡ್ ಇಂಡಸ್ಟ್ರೀಸ್ ಎನ್ನುವ ಸಂಸ್ಥೆಯು ನಡೆಸಿದ್ದ ಅಧ್ಯಯನದಿಂದಾಗಿ, ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿರುವ ಸೇಬುಹಣ್ಣುಗಳಲ್ಲಿ ೮೭ ವಿಧದ ಕೀಟಗಳು ಪತ್ತೆಯಾಗಿದ್ದವು!. ಕೇವಲ ಒಂದು ಉತ್ಪನ್ನದಲ್ಲಿ ಇಷ್ಟೊಂದು ವಿಧದ ಕೀಟಗಳು ಇರುವುದಾದಲ್ಲಿ, ನಾವಿಂದು ಆಮದು ಮಾಡಿಕೊಳ್ಳುತ್ತಿರುವ ಹಲವಾರು ವಿಧದ ಹಣ್ಣು ಹಂಪಲು- ತರಕಾರಿಗಳಲ್ಲಿ ಇರಬಹುದಾದ ಕೀಟಗಳ ವೈವಿಧ್ಯಗಳನ್ನು ಊಹಿಸುವುದೂ ಅಸಾಧ್ಯವೆನಿಸುತ್ತದೆ. 

 ಈ ರೀತಿಯಲ್ಲಿ ವೈವಿಧ್ಯಮಯ ಕೀಟ ಸಂಕುಲ - ಕೀಟನಾಶಕಗಳಿಂದ ಸಮೃದ್ಧವಾಗಿರುವ ವಿದೇಶೀ ಉತ್ಪನ್ನಗಳನ್ನು ನಾವಿಂದು ಕಣ್ಣುಮುಚ್ಚಿ ಆಮದು ಮಾಡಿಕೊಳ್ಳು ತ್ತಿದ್ದಲ್ಲಿ, ಇದೇ ಸಂದರ್ಭದಲ್ಲಿ ಭಾರತದಿಂದ ವಿದೇಶಗಳಿಗೆ ರಫ್ತಾಗುತ್ತಿರುವ ಇಂತಹ ಉತ್ಪನ್ನಗಳ ಪ್ರಮಾಣ ಸೊರಗುತ್ತಿದೆ. ವಿಶೇಷವೆಂದರೆ ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಗಳು ಕಳೆದ ವರ್ಷದಲ್ಲಿ ಭಾರತದಿಂದ ರಫ್ತಾಗಿದ್ದ ೨೦೦ ಕ್ಕೂ ಅಧಿಕ ವಿಧದ ಆಹಾರೋತ್ಪನ್ನಗಳನ್ನು ತಿರಸ್ಕರಿಸಲು ಇವುಗಳಲ್ಲಿದ್ದ ಕೀಟ - ಕೀಟನಾಶಕಗಳೇ ಕಾರಣವೆನಿಸಿದ್ದವು!. 

ಈ ದೇಶಗಳು ನಮ್ಮ ಉತ್ಪನ್ನಗಳನ್ನು ತಿರಸ್ಕರಿಸಲು, ಆ ದೇಶಗಳಲ್ಲಿ ಇವುಗಳನ್ನು ಪರೀಕ್ಷಿಸಲು ಇರುವಂತಹ ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಕಟ್ಟುನಿಟ್ಟಿನ ನಿಯಮಗಳೂ ಕಾರಣವೆನಿಸಿವೆ. ತತ್ಪರಿಣಾಮವಾಗಿ ಭಾರತವು ವಿದೇಶಗಳಿಗೆ ರಫ್ತು ಮಾಡುತ್ತಿದ್ದ ಹಣ್ಣು- ತರಕಾರಿಗಳ ಪ್ರಮಾಣವು ೨೦೦೩-೦೪ ರಲ್ಲಿದ್ದ ೧.೨೯ ಮಿಲಿಯನ್ ಟನ್ ಗಳಿಂದ, ೨೦೦೪-೦೫ ರಲ್ಲಿ ೧.೨೪ ಟನ್ ಗಳಿಗೆ ಕುಸಿದಿತ್ತು. ಇದಕ್ಕೆ ಅನುಗುಣವಾಗಿ ಭಾರತವು ಗಳಿಸುತ್ತಿದ್ದ ಆದಾಯವೂ ೧೪೫೭ ಕೋಟಿ ರೂ .ಗಳಿಂದ ೧೨೯೯ ಕೋಟಿ ರೂ. ಗಳಿಗೆ ಇಳಿದಿತ್ತು!.

ಈ ರೀತಿಯಲ್ಲಿ ಹಣ್ಣು ಹಂಪಲುಗಳು ಮತ್ತು ತರಕಾರಿಗಳಲ್ಲಿನ " ಹಾಲಾಹಾಲ" ವು ಭಾರತದ ಪಾಲಿಗೆ ನಿಶ್ಚಿತವಾಗಿಯೂ ಸಾಕಷ್ಟು ಕಷ್ಟನಷ್ಟಗಳಿಗೆ ಮತ್ತು ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸಲಿದೆ. ಇದರೊಂದಿಗೆ ಇವುಗಳನ್ನು ಸೇವಿಸುವ ಜನರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಲಿವೆ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ೧೪-೧೦-೨೦೦೬ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ.


No comments:

Post a Comment