Tuesday, March 11, 2014

NIMMA MANEYNGALADALLI.........




       ನಿಮ್ಮ ಮನೆಯಂಗಳದಲ್ಲಿ ಹಣ್ಣು ತರಕಾರಿಗಳನ್ನು ಬೆಳೆಸಿ 

ಕಳೆದ ಒಂದೆರಡು ದಶಕಗಳಿಂದ ಮನುಷ್ಯನನ್ನು ಬಾಧಿಸಬಲ್ಲ ವೈವಿಧ್ಯಮಯ, ಗಂಭೀರ ಹಾಗೂ ಮಾರಕ ವ್ಯಾಧಿಗಳ ಸಂಭಾವ್ಯತೆಗಳು ಮತ್ತು ಅಕಾಲಿಕ ಮರಣಗಳ ಪ್ರಮಾಣ ಹೆಚ್ಚುತ್ತಿರುವುದನ್ನು ನೀವೂ ಗಮನಿಸಿರಲೇಬೇಕು. ಈ ಸಮಸ್ಯೆಗೆ ಅನೇಕ ಕಾರಣಗಳಿದ್ದು, ನಾವು ದಿನನಿತ್ಯ ಸೇವಿಸುವ ಆಹಾರಪದಾರ್ಥಗಳಲ್ಲಿರುವ ವಿಷಕಾರಕ ಕೀಟನಾಶಕಗಳ ಶೇಷಾಂಶಗಳೂ ಇದಕ್ಕೊಂದು ಪ್ರಮುಖ ಕಾರಣವೆನಿಸಿವೆ. 
---------------               --------------             ----------------               --------------------             --------

ಭಾರತೀಯರು ಪ್ರತಿನಿತ್ಯ ಸೇವಿಸುತ್ತಿರುವ ತರಕಾರಿಗಳು, ಹಣ್ಣುಹಂಪಲುಗಳು, ದವಸಧಾನ್ಯಗಳು, ಹಾಲು, ಮೊಟ್ಟೆ, ಮೀನು ಮತ್ತು ಮಾಂಸಗಳಲ್ಲಿ ಪತ್ತೆಯಾಗುತ್ತಿರುವ ಕೀಟನಾಶಕಗಳ ಶೇಷಾಂಶಗಳ ಪ್ರಮಾಣವು ದಿನೇದಿನೇ ಹೆಚ್ಚುತ್ತಿದೆ. ಇದು ಭಾರತೀಯ ಆಹಾರ ಕಲಬೆರಕೆ ನಿಯಂತ್ರಣ ಕಾಯಿದೆ (೧೯೫೪) ಯಲ್ಲಿ ನಿಗದಿಸಿರುವ ಗರಿಷ್ಠ ಶೇಷಾಂಶಗಳ ಪ್ರಮಾಣಕ್ಕಿಂತಲೂ ಸಾಕಷ್ಟು ಅಧಿಕವಾಗಿದೆ. ವಿಶೇಷವೆಂದರೆ ಆಹಾರಪದಾರ್ಥಗಳಲ್ಲಿ ಕೀಟನಾಶಕಗಳ ಇರುವಿಕೆಯನ್ನು ನಿಯಂತ್ರಿಸಲು ಸರ್ಕಾರ ವಿಫಲವಾಗಿದೆ ಎಂದು, ಈ ಬಗ್ಗೆ ಅಧ್ಯಯನವನ್ನು ನಡೆಸಿದ್ದ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

೨೦೦೮ -೦೯ ರ ಅವಧಿಯಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ದೇಶದ ೧೩ ರಾಜ್ಯಗಳಿಂದ ಸಂಗ್ರಹಿಸಿದ್ದ, ಭಾರತೀಯರು ಪ್ರತಿನಿತ್ಯ ಬಳಸುವ ಆಹಾರಪದಾರ್ಥಗಳನ್ನು ೨೦ ವಿಭಿನ್ನ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಈ ಪರೀಕ್ಷೆಗಳ ಪರಿಣಾಮವಾಗಿ ದೊರೆತಿದ್ದ ಫಲಿತಾಂಶಗಳು ನಿಜಕ್ಕೂ ದಿಗ್ಭ್ರಮೆ ಹುಟ್ಟಿಸುವಂತಿದ್ದವು. 

ಭಾರತದ ಕೃಷಿಕರು ಒಂದು ವರ್ಷದಲ್ಲಿ ಬಳಸುವ ಕೀಟನಾಶಕಗಳ ಪ್ರಮಾಣವು ೭೦ ಸಹಸ್ರ ಟನ್ ಗಳೆಂದು ಅಂದಾಜಿಸಲಾಗಿದೆ. ತಾವು ಬೆಳೆಯುವ ಆಹಾರ ಧಾನ್ಯಗಳು, ತರಕಾರಿ ಮತ್ತು ಹಣ್ಣುಹಂಪಲುಗಳ ಬೆಳೆಗಳನ್ನು ಕೀಟಗಳ ಬಾಧೆಯಿಂದ ಸಂರಕ್ಷಿಸಲು, ರೈತಾಪಿ ಜನರು ವಿವಿಧ ರೀತಿಯ ಕೀಟನಾಶಕಗಳನ್ನು ಬಳಸುತ್ತಾರೆ. ಈ ಅಪಾಯಕಾರಿ ಕೀಟನಾಶಕಗಳನ್ನು ಯಾವ ಹಂತದಲ್ಲಿ, ಯಾವ ರೀತಿಯಲ್ಲಿ ಮತ್ತು ಯಾವ ಪ್ರಮಾಣದಲ್ಲಿ ಬಳಸಿರುತ್ತಾರೋ, ಅದಕ್ಕೆ ಅನುಗುಣವಾಗಿ ಈ ಆಹಾರಪದಾರ್ಥಗಳಲ್ಲಿ ಉಳಿದುಕೊಳ್ಳುವ ಕೀಟನಾಶಕಗಳ ಪ್ರಮಾಣದಲ್ಲಿ ವ್ಯತ್ಯಯವಾಗುವುದು. ವಿಶೇಷವೆಂದರೆ ಇಂತಹ ರಾಸಾಯನಿಕ ಕೀಟನಾಶಕಗಳ ಆಯ್ಕೆ ಹಾಗೂ ಸಿಂಪಡಿಕೆಗಳನ್ನು ಗಮನಿಸುವ ಮತ್ತು ನಿಯಂತ್ರಿಸುವ ವ್ಯವಸ್ಥೆಗಳು ಯಾವುದೇ ರಾಜ್ಯಗಳ ಕೃಷಿ ಇಲಾಖೆಗಳಲ್ಲಿ ಅಸ್ತಿತ್ವದಲ್ಲಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಅಧಿಕತಮ ರೈತರು ತಾವು ಬೆಳೆಯುವ ಬೆಳೆಗಳಿಗೆ ತಮ್ಮದೇ ಆಯ್ಕೆಯ ಕೀಟನಾಶಕಗಳನ್ನು, ತಮಗೆ ತೋಚಿದಷ್ಟು ಪ್ರಮಾಣದಲ್ಲಿ ಸಿಂಪಡಿಸುತ್ತಾರೆ. ತತ್ಪರಿಣಾಮವಾಗಿ ಇಂತಹ "ವಿಷಪೂರಿತ" ಆಹಾರಪದಾರ್ಥಗಳನ್ನು ಸೇವಿಸುವ ಅಮಾಯಕ ಜನರು, ಗಂಭೀರ ಹಾಗೂ ಮಾರಕ ಕಾಯಿಲೆಗಳಿಗೆ ಸುಲಭದಲ್ಲೇ ಈಡಾಗುತ್ತಾರೆ. 

ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ನಡೆಸಿದ್ದ ಅಧ್ಯಯನದಿಂದ ತಿಳಿದುಬಂದಂತೆ ನಾವು ಸೇವಿಸುವ ವಿವಿಧ ಆಹಾರಪದಾರ್ಥಗಳಲ್ಲಿ, ಭಾರತದಲ್ಲಿ ಈಗಾಗಲೇ ನಿಷೇಧಿಸಿರುವ ಮತ್ತು ನಿಯಂತ್ರಿತ ವಿಧಾನಗಳಿಂದ ಮಾತ್ರ ಬಳಸಬಹುದಾದಂತಹ ಕೀಟನಾಶಕಗಳ ಶೇಷಾಂಶಗಳು ಅತಿಯಾದ ಪ್ರಮಾಣದಲ್ಲಿ ಪತ್ತೆಯಾಗಿದ್ದವು. ಉದಾಹರಣೆಗೆ ತರಕಾರಿಗಳ ಬೆಳೆಗಳಲ್ಲಿ ಬಳಸಲೇಬಾರದಂತಹ ಡಿಡಿಟಿ ಕೀಟನಾಶಕದ ಶೇಷಾಂಶಗಳು, ಪ್ರಯೋಗಾಲಯದಲ್ಲಿ ಪರೀಕ್ಷಿಸಿದ್ದ ಟೊಮೇಟೊ ಹಣ್ಣುಗಳಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ೧೦೮ ಪಟ್ಟು ಅಧಿಕವಾಗಿತ್ತು!. ಉತ್ತರ ಪ್ರದೇಶದಿಂದ ಸಂಗ್ರಹಿಸಿದ್ದ ಅನ್ಯವಿಧದ ತರಕಾರಿಗಳು, ಸೇಬು,ಅಕ್ಕಿ, ಗೋಧಿ, ಹಾಲು ಮತ್ತು ಬೆಣ್ಣೆಗಳ ಮಾದರಿಗಳಲ್ಲಿ ಆಲ್ಡ್ರಿನ್, ಕ್ಲೋರ್ ಡೇಸ್, ಕ್ಲೋರ್ ಫೆನ್ಯಿನ್ ಫಾಸ್ ಮತ್ತು ಹೆಪ್ತಾಕ್ಲೋರ್ ಗಳಂತಹ ನಿಷೇಧಿತ ಕೀಟನಾಶಕಗಳು ವ್ಯಾಪಕವಾಗಿ ಪತ್ತೆಯಾಗಲು, ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ವ್ಯವಸ್ಥೆಗಳ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. 

ಅದೇ ರೀತಿಯಲ್ಲಿ ಕೇವಲ ಹತ್ತಿಯ ಬೆಳೆಯನ್ನು ಸಂರಕ್ಷಿಸುವ ಸಲುವಾಗಿ ಬಳಸಬಹುದಾದ ಮೊನೋಕ್ರೋಟೋಫೋಸ್ ರಾಸಾಯನಿಕವನ್ನು ಪಂಜಾಬಿನ ರೈತರು ತಾವು ಬೆಳೆಯುವ ತರಕಾರಿಗಳನ್ನು ಕೀಟಗಳ ಬಾಧೆಯಿಂದ ಸಂರಕ್ಷಿಸಲು ಬಳಸುತ್ತಿರುವುದು ತಿಳಿದುಬಂದಿತ್ತು. ನಿಜ ಹೇಳಬೇಕಿದ್ದರೆ ಇಂತಹ ಅಪಾಯಕಾರಿ ಕೀಟನಾಶಕಗಳನ್ನು ನಿಯಂತ್ರಿಸಬೇಕಾದ ಹೊಣೆಗಾರಿಕೆಯು ಕೇಂದ್ರ ಕೀಟನಾಶಕ ಮಂಡಳಿಯ ಮೇಲಿದೆ. ಆದರೆ ಮಂಡಳಿಯು ದೇಶಾದ್ಯಂತ ವಿವಿಧ ಆಹಾರಪದಾರ್ಥಗಳಲ್ಲಿ ಅತಿಯಾಗಿ ಪತ್ತೆಯಾಗುತ್ತಿರುವ ಕೀಟನಾಶಕಗಳ ಶೇಷಾಂಶಗಳ ಕುರಿತು ವಿವಿಧ ರಾಜ್ಯಗಳ ಕೃಷಿ ಇಲಾಖೆಗಳಿಗೆ ಮಾಹಿತಿಯನ್ನು ನೀಡಿದ್ದರೂ, ನಿಷೇಧಿತ ಕೀಟನಾಶಕಗಳ ಬಗ್ಗೆ ಕೂಲಂಕುಶ ಮಾಹಿತಿಯನ್ನೇ ನೀಡಿರಲಿಲ್ಲ!. 

ಇವೆಲ್ಲಕ್ಕೂ ಮಿಗಿಲಾಗಿ ದೇಶದ ಬಹುತೇಕ ರಾಜ್ಯಗಳ ಕೃಷಿ ಇಲಾಖೆಗಳ ಅಧಿಕಾರಿಗಳು ನಿರ್ದಿಷ್ಟ ಬೆಳೆ ಹಾಗೂ ಇದನ್ನು ಬಾಧಿಸಬಲ್ಲ ನಿರ್ದಿಷ್ಟ ಕೀಟಗಳಿಗೆ, ಯಾವ ಕೀಟನಾಶಕವನ್ನು ಯಾವ ಪ್ರಮಾಣದಲ್ಲಿ ಬಳಸಬೇಕೆನ್ನುವ ಮಾಹಿತಿಯನ್ನು ರೈತರಿಗೆ ನೀಡುವುದಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಅಸ್ಸಾಂ ನಿಂದ ಸಂಗ್ರಹಿಸಿದ್ದ ಚಹಾದ ಮಾದರಿಗಳಲ್ಲಿ ಪತ್ತೆಯಾಗಿದ್ದ  ಫೆನ್ ಪ್ರೋಪಾಥ್ರಿನ್ ಕೀಟನಾಶಕದ ಶೇಷಾಂಶದ ಪ್ರಮಾಣವು ೪೨೮೦ ಪಿ.ಪಿ.ಎಂ ಗಳಾಗಿದ್ದು, ಸಂಯುಕ್ತ ರಾಷ್ಟ್ರ ಸಂಸ್ಥೆ ನಿಗದಿಸಿರುವ ಮಾನದಂಡದಂತೆ ಇದರ ಪ್ರಮಾಣವು ಕೇವಲ ೨ ಪಿ.ಪಿ.ಎಂ ಇರಬಹುದಾಗಿದೆ. ಇದಲ್ಲದೆ ಕೇಂದ್ರ ಕೀಟನಾಶಕ ಮಂಡಳಿಯು ಚಹಾ ಗಿಡಗಳಿಗೆ ಫೆನ್ ಪ್ರೋಪಾಥ್ರಿನ್ ಬಳಸಲು ಶಿಫಾರಸು ಮಾಡದೇ ಇರುವುದರಿಂದಾಗಿ, ಇದರ ಗರಿಷ್ಠ ಶೇಷಾಂಶದ ಪ್ರಮಾಣವನ್ನೂ ನಿಗದಿಸಿರಲಿಲ್ಲ. ಆದರೂ ಭಾರತದ ಚಹಾ ಮಂಡಳಿಯು ಡೈಕೊಫೋಲ್ ರಾಸಾಯನಿಕಕ್ಕೆ ಪರ್ಯಾಯವಾಗಿ ಫೆನ್ ಪ್ರೋಪಾಥ್ರಿನ್ ರಾಸಾಯನಿಕವನ್ನು ಬಳಸಲು ಶಿಫಾರಸು ಮಾಡಿದ್ದುದು ನಂಬಲು ಅಸಾಧ್ಯವೆನಿಸುತ್ತದೆ. ವಿಶೇಷವೆಂದರೆ ಚಹಾ ಮಂಡಳಿಯ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿದ್ದ ಕೃಷಿ ಮಂತ್ರಾಲಯವೇ ಫೆನ್ ಪ್ರೋಪಾಥ್ರಿನ್ ಕೀಟ ನಾಶಕವನ್ನು ಇತರ ಬೆಳೆಗಳಿಗೂ ವಿಸ್ತರಿಸುವಂತೆ ಸೂಚಿಸಲು ಚಿಂತನೆಯನ್ನು ನಡೆಸಿತ್ತು!. 

ಭಾರತದಿಂದ ವಿದೇಶಗಳಿಗೆ ರಫ್ತಾಗುತ್ತಿರುವ ಆಹಾರಪದಾರ್ಥಗಳಲ್ಲಿನ ಕೀಟನಾಶಕಗಳ ಶೇಷಾಂಶಗಳನ್ನು ಪತ್ತೆಹಚ್ಚುವ ಸಲುವಾಗಿ ಕಟ್ಟುನಿಟ್ಟಿನ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಆದರೆ ವಿದೇಶಗಳಿಂದ ಆಮದು ಮಾಡುತ್ತಿರುವ ಮತ್ತು ನಮ್ಮ ದೇಶದಲ್ಲೇ ಬೆಳೆದ ಹಾಗೂ ಭಾರತೀಯರು ಸೇವಿಸುತ್ತಿರುವ ಆಹಾರಪದಾರ್ಥಗಳ ವಿಚಾರದಲ್ಲಿ ಸರ್ಕಾರವು ಇದೇ ನೀತಿಯನ್ನು ಅನುಸರಿಸುತ್ತಿಲ್ಲ. 



ಭಾರತದಲ್ಲಿ ಬಳಸಲ್ಪಡುತ್ತಿರುವ ಆಹಾರಪದಾರ್ಥಗಳ ಸುರಕ್ಷತೆಯನ್ನು ಕಾಪಾಡಬೇಕಾದ ಹೊಣೆಗಾರಿಕೆ ಇರುವ ಆಹಾರ ಸಂರಕ್ಷಣೆ ಮತ್ತು ಗುಣಮಟ್ಟಗಳ ಪ್ರಾಧಿಕಾರವು, ದೇಶದ ವಿವಿಧ ರಾಜ್ಯಗಳ ಕೃಷಿ ಇಲಾಖೆಗಳಿಗೆ ಆಹಾರಪದಾರ್ಥಗಳ ಕಲಬೆರಕೆ ಅಧಿನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿ ಕೈತೊಳೆದುಕೊಂಡಿದೆ. ಹಾಗೂ ಇದೇ ಕಾರಣದಿಂದಾಗಿ ಭಾರತದ ಉದ್ದಗಲಕ್ಕೂ ವ್ಯಾಪಕ ಹಾಗೂ ಅನಿಯಂತ್ರಿತವಾಗಿ ಬಳಸಲ್ಪಡುತ್ತಿರುವ ಕೀಟನಾಶಕಗಳ ಅತಿಯಾದ ಬಳಕೆಯನ್ನು ನಿಯಂತ್ರಿಸುವುದು "ಬೆಕ್ಕಿನ ಕೊರಳಿಗೆ ಗಂಟೆಯನ್ನು ಕಟ್ಟುವವರು ಯಾರು?" ಎನ್ನುವಂತಾಗಿದೆ. 

ಈ ರೀತಿಯಲ್ಲಿ ಕಲುಷಿತ ನೀರು- ಗಾಳಿಗಳನ್ನು ಸೇವಿಸುತ್ತಾ, ಪ್ರದೂಷಿತ ಪರಿಸರದಲ್ಲಿ ಜೀವಿಸುತ್ತಿರುವ ದೇಶದ ಪ್ರಜೆಗಳು, ಇದೀಗ ವಿಷಯುಕ್ತ ಆಹಾರವನ್ನು ಸೇವಿಸುತ್ತಿರುವುದು ಸತ್ಯ. ಆದರೆ ಇವೆಲ್ಲದರ ಅರಿವಿದ್ದರೂ ಈ ಸಮಸ್ಯೆಯನ್ನು ತಡೆಗಟ್ಟಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದಾಗಿ, ಇದು ಇನ್ನಷ್ಟು ಉಲ್ಬಣಿಸುತ್ತಿರುವುದು ಕೂಡಾ ಅಷ್ಟೇ ಸತ್ಯ!. 

ಕೊನೆಯ ಮಾತು 

ವಾಣಿಜ್ಯ ಉದ್ದೇಶದಿಂದ ಆಹಾರ ಧಾನ್ಯಗಳು, ತರಕಾರಿ ಮತ್ತು ಹಣ್ಣುಹಂಪಲುಗಳನ್ನು ಬೆಳೆಯುವ ಕೃಷಿಕರು, ವಿವಿಧ ಹಂತಗಳಲ್ಲಿ ವಿವಿಧರೀತಿಯ ಕೀಟನಾಶಕಗಳನ್ನು ಬಳಸುತ್ತಾರೆ. ಈ ಆಹಾರಪದಾರ್ಥಗಳನ್ನು ಹಾಗೂ ತರಕಾರಿಗಳನ್ನು ಸಾಕಷ್ಟು ಸಮಯ ನೀರಿನಲ್ಲಿ ನೆನೆಸಿಟ್ಟ ಬಳಿಕ ತೊಳೆಯುವ ಮೂಲಕ ಮತ್ತು ಪ್ರೆಷರ್ ಕುಕ್ಕರ್ ನಲ್ಲಿ ಬೇಯಿಸುವುದರಿಂದ, ಇವುಗಳಲ್ಲಿ ಉಳಿದುಕೊಂಡಿರುವ ಕೀಟನಾಶಕಗಳ ಶೇಷಾಂಶಗಳ ವಿಷಕಾರಕ ಪರಿಣಾಮಗಳ ತೀವ್ರತೆಯು ಕಡಿಮೆಯಾಗುವುದರೊಂದಿಗೆ, ಇವುಗಳ ಬಹುದೊಡ್ಡ ಅಂಶವು ನಾಶವಾಗುತ್ತದೆ. ಅದೇ ರೀತಿಯಲ್ಲಿ ಹಣ್ಣುಹಂಪಲುಗಳನ್ನು ತುಸು ಉಪ್ಪು ಬೆರೆಸಿದ ನೀರಿನಲ್ಲಿ ಮುಳುಗಿಸಿಟ್ಟು, ಸ್ವಲ್ಪ ಸಮಯದ ಬಳಿಕ ಚೆನ್ನಾಗಿ ತೊಳೆಯುವ ಮೂಲಕ ಮತ್ತು ತರಕಾರಿಗಳನ್ನೂ ಇದೇ ರೀತಿಯಲ್ಲಿ ತೊಳೆದು, ಕತ್ತರಿಸಿದ ಬಳಿಕ ಮತ್ತೊಮ್ಮೆ ಇದೇ ವಿಧಾನವನ್ನು ಅನುಸರಿಸಿದ ಬಳಿಕ ಅಡುಗೆಗೆ ಬಳಸುವುದು ಹಿತಕರವೆನಿಸುವುದು. ನಿಮ್ಮ ಪರಿಚಿತ ವೈದ್ಯರು ಸೂಚಿಸಿದಂತೆ ಹಸಿ ತರಕಾರಿಗಳ ಸಲಾಡ್ ಸೇವಿಸುವುದಾದಲ್ಲಿ, ನಿಮ್ಮ ಮನೆಯಂಗಳದಲ್ಲಿ ನೀವೇ ಬೆಳೆದ ಅಥವಾ ಸಾವಯವ ವಿಧಾನದಿಂದ ಬೆಳೆಸಿರುವ ತರಕಾರಿಗಳನ್ನು ಮಾತ್ರ ಸೇವಿಸಿ. ಅಂತಿಮವಾಗಿ ಹೇಳುವುದಾದಲ್ಲಿ " ನಿಮ್ಮ ಆರೋಗ್ಯದ ರಕ್ಷಣೆ ನಿಮ್ಮ ಕೈಯಲ್ಲಿದೆ" ಎನ್ನುವುದನ್ನು ಮಾತ್ರ ಮರೆಯದಿರಿ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ೧೫-೦೪- ೨೦೧೧ ರ ಸಂಚಿಕೆಯ ಮಹಿಳಾ ಸಂಪದದಲ್ಲಿ ಪ್ರಕಟಿತ ಲೇಖನ. 


No comments:

Post a Comment