Tuesday, March 18, 2014

JUNK FOOD





  ನಿಷ್ಪ್ರಯೋಜಕ ಆಹಾರ: ಆರೋಗ್ಯಕ್ಕೆ ಹಾನಿಕರ 

ಮನುಷ್ಯನು ಆರೋಗ್ಯವಂತನಾಗಿ ಬದುಕಲು ಶುದ್ಧವಾದ ಗಾಳಿ ಹಾಗೂ ನೀರು, ಪೌಷ್ಟಿಕ ಅಂಶಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರ ಮತ್ತು ನಿರ್ಮಲವಾದ ಪರಿಸರ ಅತ್ಯವಶ್ಯಕ ಎನಿಸುವುದು. ಅದೇ ರೀತಿಯಲ್ಲಿ ಇವೆಲ್ಲವುಗಳ ಗುಣಮಟ್ಟಗಳಲ್ಲಿ ನ್ಯೂನ್ಯತೆ ಅಥವಾ ವ್ಯತ್ಯಯಗಳು ಸಂಭವಿಸಿದಲ್ಲಿ, ಅನಾರೋಗ್ಯ ಮತ್ತು ಇತರ ಸಮಸ್ಯೆಗಳು ಬಾಧಿಸುವ ಸಾಧ್ಯತೆಗಳಿವೆ. 

ಪ್ರಸ್ತುತ ಬಹುತೇಕ ಭಾರತೀಯರು ಮಾರುಹೋಗಿರುವ ಪಾಶ್ಚಾತ್ಯ ಜೀವನಶೈಲಿಯಿಂದಾಗಿ ಅತಿಯಾದ ಪ್ರಮಾಣದಲ್ಲಿ "ನಿಷ್ಪ್ರಯೋಜಕ ಆಹಾರ" (junk food) ಗಳನ್ನು ಸೇವಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಶ್ರೀಮಂತರು, ಮೇಲ್ಮಧ್ಯಮ ವರ್ಗದವರು, ಉದ್ಯೋಗಸ್ತ ದಂಪತಿಗಳ ಕುಟುಂಬಗಳು ಮತ್ತು ಯುವಪೀಳಿಗೆಯವರು ಇಂತಹ ಸಂಸ್ಕರಿತ, ಸಿದ್ಧ ಹಾಗೂ ಉಪ್ಪು, ಕೊಬ್ಬು ಮತ್ತು ಸಕ್ಕರೆಗಳಿಂದ ಸಮೃದ್ಧವಾಗಿರುವ ವೈವಿಧ್ಯಮಯ ನಿಷ್ಪ್ರಯೋಜಕ ಆಹಾರಗಳ ದಾಸಾನುದಾಸರಾಗಿದ್ದಾರೆ. ಈ ಕುಟುಂಬಗಳ ಪುಟ್ಟ ಮಕ್ಕಳೂ ಇದಕ್ಕೆ ಅಪವಾದವೆನಿಸಿಲ್ಲ. ಆದರೆ ಎಳೆಯ ಮಕ್ಕಳು ಇಂಥ ಆಹಾರಗಳನ್ನು ಸೇವಿಸುವುದರಿಂದ ಉದ್ಭವಿಸಬಲ್ಲ ಗಂಭೀರ ಆರೋಗ್ಯದ ಸಮಸ್ಯೆಗಳ ಬಗ್ಗೆ ಜನಸಾಮಾನ್ಯರಿಗೆ ಒಂದಿಷ್ಟು ಮಾಹಿತಿ ತಿಳಿದಿದ್ದರೂ, ಇವುಗಳ ಸೇವನೆಯನ್ನು ಮಾತ್ರ ನಿಲ್ಲಿಸುವುದೇ ಇಲ್ಲ!. 

ತಮ್ಮ ಮಕ್ಕಳು ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಊಟ ಉಪಾಹಾರಗಳನ್ನು ಸೇವಿಸದಿರುವ ಸಮಸ್ಯೆಯನ್ನು ಪರಿಹರಿಸಲು, ಉತ್ತಮವಾದ ಟಾನಿಕ್ ಒಂದನ್ನು ನೀಡುವಂತೆ ವೈದ್ಯರನ್ನು ಒತ್ತಾಯಿಸುವ ದಂಪತಿಗಳ ಸಂಖ್ಯೆ ಸಾಕಷ್ಟಿದೆ. ಮಕ್ಕಳ ಹಸಿವನ್ನು ಹೆಚ್ಚಿಸಬಲ್ಲ ಮತ್ತು ತನ್ಮೂಲಕ ಮಕ್ಕಳು ಸೇವಿಸುವ ಆಹಾರದ ಪ್ರಮಾಣವನ್ನು ವೃದ್ಧಿಸಬಲ್ಲ ಟಾನಿಕ್ ನೀಡುವಂತೆ ಅಂಗಲಾಚುವ ತಂದೆತಾಯಂದಿರಿಗೆ, ಈ ಸಮಸ್ಯೆಯ ಮೂಲ ಕಾರಣ ಏನೆಂದು ತಿಳಿದಿದೆ. ಏಕೆಂದರೆ ಇಡ್ಲಿ, ದೋಸೆ, ಚಪಾತಿ ಮತ್ತು ಅನ್ನಗಳನ್ನು ತಿನ್ನಲೊಪ್ಪದ ಮಕ್ಕಳು, ಪಿಜ್ಜಾ, ಬರ್ಗರ್, ನೂಡಲ್ಸ್ ಮತ್ತು ಕುರುಕಲು ತಿಂಡಿಗಳನ್ನು ತಿನ್ನಲು ನಿರಾಕರಿಸುವುದೇ ಇಲ್ಲ. ವಿಶೇಷವೆಂದರೆ ಪೋಷಕ ಅಂಶಗಳೇ ಇಲ್ಲದ ಇಂತಹ ಆಹಾರಗಳ ಸೇವನೆಯಿಂದಾಗಿ, ಈ ಮಕ್ಕಳು ಅನೇಕ ವಿಧದ ಆರೋಗ್ಯದ ಸಮಸ್ಯೆಗಳಿಗೆ ಸುಲಭದಲ್ಲೇ ಈಡಾಗುತ್ತಾರೆ. 

ಬುದ್ಧಿಶಕ್ತಿ ಸೊರಗುವುದೇ?

ಒಂದೆರಡು ವರ್ಷಗಳ ಹಿಂದೆ ಬ್ರಿಟನ್ ನಲ್ಲಿ ಪ್ರಕಟವಾಗಿದ್ದ ವೈದ್ಯಕೀಯ ಅಧ್ಯಯನದ ವರದಿಯಂತೆ, ನಿಷ್ಪ್ರಯೋಜಕ ಹಾಗೂ ಸಂಸ್ಕರಿತ ಆಹಾರಗಳನ್ನೇ ಹೆಚ್ಚಾಗಿ ಸೇವಿಸುವ ನಾಲ್ಕು ವರ್ಷಕ್ಕಿಂತ ಕೆಳಗಿನ ಮಕ್ಕಳ ಬುದ್ಧಿಶಕ್ತಿಯ ಮಟ್ಟವು ಕಡಿಮೆಯಾಗುತ್ತದೆ. ಸುಮಾರು ೪೦೦೦ ಮಕ್ಕಳ ಆಹಾರ ಸೇವನಾ ಕ್ರಮಗಳ ಬಗ್ಗೆ ನಡೆಸಿದ್ದ ಈ ಅಧ್ಯಯನದಿಂದಾಗಿ, ಪ್ರತಿನಿತ್ಯ ನಿಷ್ಪ್ರಯೋಜಕ ಆಹಾರಗಳನ್ನು ಸೇವಿಸುತ್ತಿರುವ ಮಕ್ಕಳಿಗೆ ಎಂಟೂವರೆ ವರ್ಷ ವಯಸ್ಸಾಗುವಾಗ ಇವರ ಬೌದ್ಧಿಕ ಮಟ್ಟವು ಇಂತಹ ಆಹಾರಗಳನ್ನು ಸೇವಿಸದ ಮಕ್ಕಳಿಗಿಂತಲೂ ತುಸು ಕಡಿಮೆ ಇರುವುದು ಪತ್ತೆಯಾಗಿತ್ತು. ಈ ಮಕ್ಕಳು ನಿಯಮಿತವಾಗಿ ಸೇವಿಸುವ ನಿಷ್ಪ್ರಯೋಜಕ ಆಹಾರಪದಾರ್ಥಗಳ ಪ್ರಮಾಣವು ಹೆಚ್ಚಾದಂತೆಯೇ, ಇವರ ಬುದ್ಧಿಮತ್ತೆಯ ಮಟ್ಟವು ಇದಕ್ಕೆ ಅನುಗುಣವಾಗಿ ಇನ್ನಷ್ಟು ಕಡಿಮೆಯಾಗುತ್ತಿರುವುದು ತಿಳಿದುಬಂದಿತ್ತು. 

ಬ್ರಿಟನ್ ನಲ್ಲಿರುವ ಬ್ರಿಸ್ಟಲ್ ವಿಶ್ವವಿದ್ಯಾಲಯದ ಸಂಶೋಧಕರು ಹಲವಾರು ವರ್ಷಗಳ ಕಾಲ ನಡೆಸಿದ್ದ ಈ ಅಧ್ಯಯನದ ಅಂಗವಾಗಿ ೩, ೬. ೭ ಮತ್ತು ೮.೬ ವರ್ಷ ವಯಸ್ಸಿನ ಆಯ್ದ ಮಕ್ಕಳ ಆಹಾರ ಸೇವನೆಯನ್ನು ಕ್ರಮಬದ್ಧವಾಗಿ ನಿರೀಕ್ಷಿಸಲಾಗಿತ್ತು. ಈ ಸಂಶೋಧನಾ ತಂಡದ ನಾಯಕರೂ ಆಗಿದ್ದ ಖ್ಯಾತ ವೈದ್ಯರೊಬ್ಬರ ಅಭಿಪ್ರಾಯದಂತೆ, ಅಲ್ಪ ಪ್ರಮಾಣದ ಉತ್ತಮ ಆಹಾರದೊಂದಿಗೆ ಅತಿಯಾದ ಸಂಸ್ಕರಿತ ಹಾಗೂ ನಿಷ್ಪ್ರಯೋಜಕ ಆಹಾರಪದಾರ್ಥಗಳನ್ನು ಸೇವಿಸುವ ಎಳೆಯ ವಯಸ್ಸಿನ ಮಕ್ಕಳ ಈ ಕೆಟ್ಟ ಹವ್ಯಾಸಕ್ಕೆ ಮತ್ತು ಅವರ ಬುದ್ಧಿಶಕ್ತಿಯ ಮಟ್ಟದಲ್ಲಿ ಕಂಡುಬರಬಹುದಾದ ನ್ಯೂನತೆಗಳಿಗೆ ಅವಿನಾಭಾವ ಸಂಬಂಧವಿದೆ. 

ಇಷ್ಟು ಮಾತ್ರವಲ್ಲ, ಉತ್ತಮ ಗುಣಮಟ್ಟದ ಸಮತೋಲಿತ ಹಾಗೂ ಆರೋಗ್ಯದಾಯಕ ಆಹಾರವನ್ನೇ ಸೇವಿಸುವ ಮಕ್ಕಳ ಬುದ್ಧಿಮತ್ತೆಯು ಉನ್ನತಸ್ತರದಲ್ಲಿ ಇರುತ್ತದೆ. ಏಕೆಂದರೆ ಇಂತಹ ಆಹಾರಗಳಲ್ಲಿ ಸಮೃದ್ಧವಾಗಿರುವ ಪೋಷಕಾಂಶಗಳು ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಆದರೂ ಈ ಬಗ್ಗೆ ಇನ್ನಷ್ಟು ಸಂಶೋಧನೆಗಳನ್ನು ನಡೆಸಬೇಕಾಗಿದೆ. 

ಬ್ರಿಟನ್ ನ ಆಹಾರ ಮತ್ತು ಪಾನೀಯ ಒಕ್ಕೂಟದ ಅಧ್ಯಕ್ಷರು ಹೇಳುವಂತೆ, ಆರೋಗ್ಯದಾಯಕ ಹಾಗೂ ಸಮತೋಲಿತ ಆಹಾರ ಸೇವನೆಯಿಂದ ಮಕ್ಕಳ ಬುದ್ಧಿಶಕ್ತಿ ಹೆಚ್ಚುವುದು ಅಚ್ಚರಿ ಮೂಡಿಸುವಂತಹ ವಿಷಯವೇನಲ್ಲ. ಏಕೆಂದರೆ ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ ಮತ್ತು ಆರೋಗ್ಯ ರಕ್ಷಣೆಗಳ ವಿಚಾರದಲ್ಲಿ ಸಮತೋಲಿತ ಆಹಾರ ಸೇವನೆ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತಿರುವುದು ಅನೇಕ ವರ್ಷಗಳ ಹಿಂದೆಯೇ ವೈದ್ಯಕೀಯ ಕ್ಷೇತ್ರಕ್ಕೆ ತಿಳಿದಿತ್ತು. ಇದೇ ಕಾರಣದಿಂದಾಗಿ ಇಂತಹ ಆಹಾರಗಳನ್ನೇ ಮಕ್ಕಳಿಗೆ ನೀಡುವುದು ನಿಶ್ಚಿತವಾಗಿಯೂ ಹಿತಕರವೆನಿಸುವುದು. 

ಆಹಾರಸೇವನೆಯೆಂಬ ಶಿಸ್ತು 

ಬ್ರಿಟನ್ ನ ಸಂಶೋಧಕರು ಪ್ರಕಟಿಸಿರುವ ವರದಿಯಲ್ಲಿನ ಮಾಹಿತಿಗಳು ಶತಪ್ರತಿಶತ ನಿಜವೆಂದು ನಿಮಗೂ ಅನಿಸಿರಲೇಬೇಕು. ಏಕೆಂದರೆ ಸುಮಾರು ಎರಡು ದಶಕಗಳ ಹಿಂದೆ ಭಾರತದ ಮಾರುಕಟ್ಟೆಗಳಲ್ಲಿ " ಜಂಕ್ ಫುಡ್" ಗಳ ಹಾವಳಿ ಇಲ್ಲದಿದ್ದ ಸಂದರ್ಭದಲ್ಲಿ, ಬಹುತೇಕ ಎಳೆಯ ಮಕ್ಕಳು ಅಪ್ಪಟ ಭಾರತೀಯ ಶೈಲಿಯ ಹಾಗೂ ಸಾಂಪ್ರದಾಯಿಕ ಖಾದ್ಯಪೇಯಗಳನ್ನು ಸವಿಯುತ್ತಿದ್ದರು. ಆದರೆ ಜಾಗತೀಕರಣ ಮತ್ತು ಉದಾರೀಕರಣಗಳ ಫಲವಾಗಿ ಭಾರತದ ಮಾರುಕಟ್ಟೆಗಳಿಗೆ ಲಗ್ಗೆಯಿಟ್ಟಿದ್ದ ಪಿಜ್ಜಾ- ಬರ್ಗರ್ ಮತ್ತು ವೈವಿಧ್ಯಮಯ ಸಂಸ್ಕರಿತ ಆಹಾರಗಳ ಜಾಹೀರಾತುಗಳಿಗೆ ಮನಸೋತ ಎಳೆಯ ಮಕ್ಕಳು, ಸ್ವಾಭಾವಿಕವಾಗಿಯೇ ಇಂತಹ ಆಹಾರಗಳತ್ತ ಆಕರ್ಷಿತರಾಗಿದ್ದರು. 

ಶ್ರೀಮಂತ ಕುಟುಂಬಗಳ ಮತ್ತು ಉದ್ಯೋಗಸ್ತ ದಂಪತಿಗಳ ಮಕ್ಕಳ ಪಾಲಿಗಂತೂ ಇಂತಹ ಜಂಕ್ ಫುಡ್ ಗಳು ದೈನಂದಿನ ಆಹಾರದ ಅವಿಭಾಜ್ಯ ಅಂಗವೆನಿಸಿವೆ. ಪ್ರಾಯಶಃ ಇದೇ ಕಾರಣದಿಂದಾಗಿ ಇವರ ಮಕ್ಕಳ ಬುದ್ಧಿಶಕ್ತಿಯ ಮತ್ತು ಆರೋಗ್ಯದ ಮಟ್ಟಗಳು ಸ್ವಾಭಾವಿಕವಾಗಿಯೇ ಕುಸಿಯಲಾರಂಭಿಸಿವೆ. ಜಂಕ್ ಫುಡ್ ಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿರುವ ಕೃತಕ ರಾಸಾಯನಿಕಗಳಿಂದ ತಯಾರಿಸಿದ ರುಚಿವರ್ಧಕ ಮತ್ತು ಸಂರಕ್ಷಕ ದ್ರವ್ಯಗಳ ಸೇವನೆಯಿಂದ ಉದ್ಭವಿಸಬಲ್ಲ ಅನೇಕ ವಿಧದ ಸಮಸ್ಯೆಗಳಲ್ಲಿ ಇದು ಪ್ರಮುಖವಾಗಿದೆ. 

ಆದರೆ ವೈದ್ಯಕೀಯ ಸಂಶೋಧನೆ- ಅಧ್ಯಯನಗಳ ವರದಿಗಳು ಇಂತಹ ಮಾಹಿತಿಗಳನ್ನು ಬಹಿರಂಗಪಡಿಸಿದ ಬಳಿಕವೂ ನಿಮ್ಮ ಮಕ್ಕಳು ನಿಷ್ಪ್ರಯೋಜಕ ಆಹಾರಗಳನ್ನು ಸೇವಿಸುವ ಕೆಟ್ಟ ಹವ್ಯಾಸವನ್ನು ನಿಲ್ಲಿಸದೇ ಇದ್ದಲ್ಲಿ, ಸಂಭಾವ್ಯ ಸಮಸ್ಯೆಗಳನ್ನು ತಡೆಗಟ್ಟುವುದು ನಿಶ್ಚಿತವಾಗಿಯೂ ಅಸಾಧ್ಯವೆನಿಸುವುದು ಎನ್ನುವುದನ್ನು ಮರೆಯದಿರಿ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು. 

ಉದಯವಾಣಿ ಪತ್ರಿಕೆಯ ದಿ. ೧೮-೦೨-೨೦೧೧ ರ ಸಂಚಿಕೆಯ ಮಹಿಳಾ ಸಂಪದದಲ್ಲಿ( ಮನೆಯಡುಗೆ ಅಮೃತ ಸಮಾನ ಎನ್ನುವ ಶೀರ್ಷಿಕೆಯಲ್ಲಿ) ಪ್ರಕಟಿತ ಲೇಖನ. 


No comments:

Post a Comment