Monday, March 10, 2014

Discarded Plastic bottles



  ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ಕಸದೊಂದಿಗೆ ಎಸೆಯದಿರಿ 

ಮನುಷ್ಯನು ಆರೋಗ್ಯದಿಂದ ಬದುಕಲು ನಿರ್ಮಲವಾದ ಗಾಳಿ ಮತ್ತು ಶುದ್ಧವಾದ ನೀರು ಅವಶ್ಯಕವೆಂದು ನಿಮಗೂ ತಿಳಿದಿರಬೇಕು. ಅದೇ ರೀತಿಯಲ್ಲಿ ಅಶುದ್ಧ ನೀರನ್ನು ಕುಡಿಯುವುದರಿಂದ ಉದ್ಭವಿಸಬಲ್ಲ ಗಂಭೀರ- ಮಾರಕ ಕಾಯಿಲೆಗಳ ಬಗ್ಗೆಯೂ ನೀವು ಅರಿತಿರಲೇಬೇಕು. ಪ್ರಾಯಶಃ ಇದೇ ಕಾರಣದಿಂದಾಗಿ ಕೆಲವೊಂದು ಸಂದರ್ಭಗಳಲ್ಲಿ, ಅದರಲ್ಲೂ ವಿಶೇಷವಾಗಿ ಪ್ರಯಾಣ - ಪ್ರವಾಸಗಳ ಸಂದರ್ಭಗಳಲ್ಲಿ ದುಬಾರಿ ಬೆಲೆಯನ್ನು ತೆತ್ತು ಶುದ್ಧೀಕರಿಸಿದ ನೀರಿನ ಅಥವಾ ತಂಪು ಪಾನೀಯಗಳ ಪ್ಲಾಸ್ಟಿಕ್ ಬಾಟಲಿಗಳನ್ನು ಖರೀದಿಸಿ, ಕುಡಿದ ಬಳಿಕ ಖಾಲಿ ಬಾಟಲಿಗಳನ್ನು ಎಲ್ಲಾದರೂ ಎಸೆದಿರಬಹುದು. ಆದರೆ ಈ ಪೆಟ್ ಬಾಟಲಿಗಳ ತಯಾರಿಕೆ, ಇವುಗಳಲ್ಲಿ ತುಂಬಿಸಿ ಮಾರಲ್ಪಡುವ ನೀರು ಅಥವಾ ತಂಪು ಪಾನೀಯಗಳ ಶುದ್ಧಾಶುದ್ಧತೆಗಳ ಬಗ್ಗೆ ಮತ್ತು ಬಳಸಿ ಎಸೆದಂತಹ ಕೋಟ್ಯಂತರ ಬಾಟಲಿಗಳ ವಿಲೆವಾರಿಗಳ ಬಗ್ಗೆ ಜನಸಾಮಾನ್ಯರು ಎಂದಿಗೂ ತಲೆಕೆಡಿಸಿಕೊಳ್ಳುವುದೇ ಇಲ್ಲ!. 

ನಿಜಹೆಳಬೇಕಿದ್ದಲ್ಲಿ " ಜಲಜನ್ಯ ಕಾಯಿಲೆ" ಗಳಿಂದ ರಕ್ಷಿಸಿಕೊಳ್ಳಲು ಜನಸಾಮಾನ್ಯರು ಬಳಸುವ ಬಾಟಲಿಗಳಲ್ಲಿ ತುಂಬಿ ಮಾರಲ್ಪಡುವ ನೀರು, ಬಹುತೇಕ ಸಂದರ್ಭಗಳಲ್ಲಿ  ನಳ್ಳಿನೀರಿಗಿಂತ ಹೆಚ್ಚು ಪರಿಶುದ್ಧವಾಗಿ ಇರುವುದಿಲ್ಲ. ಆದರೂ ಈ ನೀರು ನಳ್ಳಿನೀರಿಗಿಂತಲೂ ೧೦,೦೦೦ ಪಟ್ಟು ದುಬಾರಿಯಾಗಿರುವುದು ಮಾತ್ರ ಸುಳ್ಳೇನಲ್ಲ. 

ಯುರೋಪ್ ಮತ್ತು ಅಮೆರಿಕಗಳಲ್ಲಿ ಜಾರಿಯಿರುವ ಕಟ್ಟುನಿಟ್ಟಿನ ಕಾನೂನುಗಳಿಂದಾಗಿ, ಅಲ್ಲಿನ ಪ್ರಜೆಗಳಿಗೆ ಸರಬರಾಜಾಗುವ ನಳ್ಳಿನೀರು, ಬಾಟಲಿಗಳಲ್ಲಿ ತುಂಬಿ ಮಾರುವ ನೀರಿನಷ್ಟೇ ಶುದ್ಧವಾಗಿರುತ್ತದೆ.ಹಾಗೂ ಇದೇ ಕಾರಣದಿಂದಾಗಿ ಮತ್ತು ತ್ಯಾಜ್ಯ ಬಾಟಲಿಗಳ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಅನೇಕ ಪಾಶ್ಚಾತ್ಯ ದೇಶಗಳಲ್ಲಿ ಬಾಟಲಿಗಳಲ್ಲಿ ನೀರನ್ನು ತುಂಬಿಸಿ ಮಾರಾಟ ಮಾಡುವುದನ್ನೇ ನಿಷೇಧಿಸಲಾಗಿದೆ.  ಆದರೆ ನಮ್ಮ ದೇಶದ ಮಟ್ಟಿಗೆ ಇಂತಹ ಮಾನದಂಡಗಳು ಕೇವಲ ಕಾಗದಗಳ ಮೇಲೆ ಮಾತ್ರ ಮುದ್ರಿತವಾಗಿರುತ್ತವೆ. ಅದೇನೇ ಇರಲಿ, ಇದೀಗ ಶುದ್ಧೀಕರಿಸಿದ ನೀರು, ತಂಪು ಪಾನೀಯಗಳು, ಖಾದ್ಯ ತೈಲಗಳು, ಸೌಂದರ್ಯವರ್ಧಕ ಉತ್ಪನ್ನಗಳು, ಔಷಧಗಳೇ ಮುಂತಾದ ಉತ್ಪನ್ನಗಳ ಖಾಲಿ ಪ್ಲಾಸ್ಟಿಕ್ ಬಾಟಲಿಗಳು, ಇದೀಗ ಜಲಜನ್ಯ ಕಾಯಿಲೆಗಳಿಗಿಂತ ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸುತ್ತಿವೆ. ಜಗತ್ತಿನಾದ್ಯಂತ ಕೋಟ್ಯಂತರ ಜನರು ಬಳಸಿ ಎಸೆಯುತ್ತಿರುವ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಅನ್ಯ ವಸ್ತುಗಳು, ನಿಸ್ಸಂದೇಹವಾಗಿ ನಮ್ಮ ಮುಂದಿನ ಸಂತತಿಯನ್ನು ಶಾಪದೋಪಾದಿಯಲ್ಲಿ ಪೀಡಿಸಲಿವೆ. 

ಕುಡಿಯುವ ನೀರು ಮತ್ತು ಇತರ ಅನೇಕ ವಾಣಿಜ್ಯ ಉತ್ಪನ್ನಗಳನ್ನು ತುಂಬಿಸಿ ಮಾರಾಟಮಾಡಲು ಬಳಸಲ್ಪಡುವ ಈ ಬಾಟಲಿಗಳನ್ನು ತಯಾರಿಸಲು ಹಾಗೂ ಬಳಸಿ ಎಸೆದ ಖಾಲಿ ಬಾಟಲಿಗಳನ್ನು ಸಂಗ್ರಹಿಸಿ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ವರ್ಷಂಪ್ರತಿ ಕೋಟ್ಯಂತರ ಡಾಲರ್ ಗಳನ್ನು ವ್ಯಯಿಸುತ್ತಿವೆ. ಅಮೆರಿಕದಲ್ಲಿನ ಅರ್ತ್ ಪಾಲಿಸಿ ಇನ್ಸ್ಟಿಟ್ಯೂಟ್ ಸಂಸ್ಥೆಯು ನಡೆಸಿದ್ದ ಅಧ್ಯಯನದ ವರದಿಯಂತೆ, ೧೯೯೯ ರಿಂದ ೨೦೦೪ ನೆ ಇಸವಿಯ ಅವಧಿಯಲ್ಲಿ ಜಗತ್ತಿನಾದ್ಯಂತ ಇಂತಹ ಕುಡಿಯುವ ನೀರಿನ ಬಾಟಲಿಗಳ ಬಳಕೆಯ ಪ್ರಮಾಣವು ದುಪ್ಪಟ್ಟಾಗಿತ್ತು!. ಅಂದರೆ ೧೯೯೯ ರಲ್ಲಿ ವಿಶ್ವಾದ್ಯಂತ ೯೮೦೦ ಕೋಟಿ ಲೀಟರ್ ನೀರಿನ ಬಾಟಲಿಗಳು ಮಾರಾಟವಾಗಿದ್ದಲ್ಲಿ, ೨೦೦೪ ರಲ್ಲಿ ಈ ಸಂಖ್ಯೆಯು ೧೫, ೪೦೦ ಕೋಟಿಯನ್ನು ತಲುಪಿತ್ತು. ಇದರಲ್ಲಿ ಸಿಂಹಪಾಲು ಅಮೆರಿಕದ ಜನತೆಗೆ ಸಲ್ಲುವುದಾದರೂ, ಇದೇ ಅವಧಿಯಲ್ಲಿ ಬಡ ಭಾರತದ ಜನರು ಖರೀದಿಸಿದ್ದ ನೀರಿನ ಬಾಟಲಿಗಳ ಪ್ರಮಾಣವು ಮೂರುಪಟ್ಟು ಹೆಚ್ಚಾಗಿತ್ತು!. 

೨೦೦೪ ರಲ್ಲಿ ವಿಶ್ವದಲ್ಲೇ ಅತಿಹೆಚ್ಚು ನೀರಿನ ಬಾಟಲಿಗಳನ್ನು ಖರೀದಿಸಿ ಕುಡಿದವರಲ್ಲಿ ಇಟಲಿ ದೇಶದ ಪ್ರಜೆಗಳು ಆಗ್ರ ಸ್ಥಾನವನ್ನು ಗಳಿಸಿದ್ದಲ್ಲಿ, ದ್ವಿತೀಯ ಸ್ಥಾನವು ಮೆಕ್ಸಿಕೋ ದೇಶದ ಪ್ರಜೆಗಳಿಗೆ ಸಲ್ಲುತ್ತದೆ. ಇಟಲಿಯ ಪ್ರಜೆಗಳು ೨೦೦೪ ರಲ್ಲಿ ತಲಾ ೧೮೪ ಲೀಟರ್ ಹಾಗೂ ಮೆಕ್ಸಿಕನ್ ಜನರು ತಲಾ ೧೬೯ ಲೀಟರ್ ಗಳಷ್ಟು ಬಾಟಲೀಕರಿಸಿದ ನೀರನ್ನು ಗುಟುಕರಿಸಿದ್ದರು!. 

 ಬಾಟಲಿಗಳ ಬಾಧಕಗಳು 

ಶುದ್ಧೀಕರಿಸಿದ ನೀರು ಮತ್ತು ಅನ್ಯ ವಾಣಿಜ್ಯ ಉತ್ಪನ್ನಗಳನ್ನು ತುಂಬಿಸಿ ಮಾರಾಟಮಾಡಲು ಬೇಕಾಗುವ ಪ್ಲಾಸ್ಟಿಕ್ ಬಾಟಲಿಗಳ ತಯಾರಿಕೆಗೆ ಕಚ್ಚಾ ತೈಲದ ಅವಶ್ಯಕತೆಯಿದೆ. ಈ ಪೆಟ್ರೋಲಿಯಂ ಉತ್ಪನ್ನಕ್ಕಾಗಿ ನಾವು ಕೋಟ್ಯಂತರ ರೂಪಾಯಿಗಳ ವಿದೇಶಿ ವಿನಿಮಯವನ್ನು ವ್ಯಯಿಸಬೇಕಾಗುತ್ತದೆ. ಅಂತೆಯೇ ಈ ಬಾಟಲಿಗಳನ್ನು ತಯಾರಿಸಿದ ಘಟಕಗಳಿಂದ ಇವುಗಳನ್ನು ಖರೀದಿಸಿದ ಘಟಕಗಳಿಗೆ ತಲುಪಿಸಲು ಸಾಕಷ್ಟು ಇಂಧನ ಬೇಕಾಗುತ್ತದೆ. ಬಳಿಕ ವಾಣಿಜ್ಯ ಉತ್ಪನ್ನಗಳನ್ನು ಈ ಬಾಟಲಿಗಳಲ್ಲಿ ತುಂಬಿಸಿ, ಮಾರಾಟಗಾರರಿಗೆ ತಲುಪಿಸಲು ಮತ್ತೆ ಗಣನೀಯ ಪ್ರಮಾಣದ ಇಂಧನ ವ್ಯಯಿಸಲ್ಪಡುತ್ತದೆ. 

ಅಮೆರಿಕ ದೇಶವೊಂದರ ಬೇಡಿಕೆಯನ್ನು ಪೂರೈಸುವಷ್ಟು ಬಾಟಲಿಗಳನ್ನು ತಯಾರಿಸಲು ( ಈ ಲೇಖನವನ್ನು ಪ್ರಕಟಿಸಿದ್ದ ಸಂದರ್ಭದಲ್ಲಿ, ಅರ್ಥಾತ್ ಸುಮಾರು ಎಂಟು ವರ್ಷಗಳ ಹಿಂದೆ) ೧೫ ಲಕ್ಷ ಬ್ಯಾರಲ್ ಗಳಷ್ಟು ಕಚ್ಚಾ ತೈಲ ಬೇಕಾಗುತ್ತದೆ. ವಿಶೇಷವೆಂದರೆ ಇಷ್ಟೇ ಪ್ರಮಾಣದ ಕಚ್ಚಾ ತೈಲದಿಂದ ತಯಾರಿಸಿದ ಪೆಟ್ರೋಲ್ ಅಥವಾ ಡೀಸೆಲ್, ೧ ಲಕ್ಷ ಕಾರುಗಳಿಗೆ ಒಂದು ವರ್ಷಕ್ಕೆ ಸಾಕಾಗುತ್ತದೆ!. 

ಇವೆಲ್ಲಕ್ಕೂ ಮಿಗಿಲಾಗಿ ಬಳಸಿ ಎಸೆದ ಬಾಟಲಿಗಳ ಸಂಗ್ರಹ ಮತ್ತು ವಿಲೆವಾರಿಗಳು ಸ್ಥಳೀಯ ಸಂಸ್ಥೆಗಳ ಪಾಲಿಗೆ ಕಗ್ಗಂಟಾಗಿ ಪರಿಣಮಿಸುತ್ತಿವೆ. ಈ ತ್ಯಾಜ್ಯ ಬಾಟಲಿಗಳು ಪರಿಸರಕ್ಕೆ ಹಾನಿಕರವೆನಿಸುವುದರೊಂದಿಗೆ, ಆರೋಗ್ಯದ ದೃಷ್ಟಿಯಿಂದಲೂ ಅತ್ಯಂತ ಅಪಾಯಕಾರಿ ಎನಿಸುತ್ತವೆ. ಈ ತ್ಯಾಜ್ಯ ಬಾಟಲಿಗಳ ಸಣ್ಣದೊಂದು ಪಾಲು ' ಪುನರ್ ಆವರ್ತನ" ಗೊಳ್ಳಲು ಬಳಕೆಯಾದರೂ, ಬಹುದೊಡ್ಡ ಪಾಲು ರಸ್ತೆಯ ಬದಿಗಳು ಮತ್ತು ಚರಂಡಿಗಳಲ್ಲಿ ರಾರಾಜಿಸುತ್ತಿವೆ. ಇವುಗಳು ಮಣ್ಣಿನಲ್ಲಿ ಕರಗಿ ಬೆರೆಯಲು ೧೦೦೦ ವರ್ಷಗಳೇ ಬೇಕಾಗುತ್ತದೆ. ಇಷ್ಟು ಮಾತ್ರವಲ್ಲ, ಇವುಗಳನ್ನು ಬೆಂಕಿ ಹಚ್ಚಿ ಸುಟ್ಟುಹಾಕಿದಲ್ಲಿ ಉತ್ಪನ್ನವಾಗುವ ಕ್ಲೋರಿನ್, ಡಯಾಕ್ಸಿನ್ ಮತ್ತಿತರ ವಿಷಕಾರಕ ಅನಿಲಗಳು ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೂ ಕಾರಣವೆನಿಸುತ್ತವೆ. ಇದೇ ಕಾರಣದಿಂದಾಗಿ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ಕಸದೊಂದಿಗೆ ಎಸೆಯದೇ, ಇವುಗಳನ್ನು ಸಂಗ್ರಹಿಸಿಟ್ಟು ಗುಜರಿ ವರ್ತಕರಿಗೆ ನೀಡಬಹುದಾಗಿದೆ. ಕಿಲೋ ಒಂದಕ್ಕೆ ಕನಿಷ್ಠ ೧೫ ರಿಂದ ೨೦ ರೂ. ಗಳನ್ನೂ ಪಾವತಿಸುವ ಗುಜರಿ ವರ್ತಕರು, ಈ ತ್ಯಾಜ್ಯ ಬಾಟಲಿಗಳನ್ನು "ಪುನರ್ ಆವರ್ತನ' ಗೊಳಿಸಿ ಬಳಸುವ ಘಟಕಗಳಿಗೆ ಪೂರೈಸುತ್ತಾರೆ. ತತ್ಪರಿಣಾಮವಾಗಿ ತ್ಯಾಜ್ಯ ಬಾಟಲಿಗಳ ಸುರಕ್ಷಿತ ವಿಲೇವಾರಿಯಲ್ಲಿ ಸಹಕರಿಸುತ್ತಿದ್ದಾರೆ. ಇವರೊಂದಿಗೆ ನಾವುನೀವೆಲ್ಲರೂ ಕೈಜೋಡಿಸಿದಲ್ಲಿ, ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಅಲ್ಲಲ್ಲಿ ಬಿದ್ದಿರುವ ತ್ಯಾಜ್ಯ ಬಾಟಲಿಗಳ ಸಮಸ್ಯೆಯನ್ನು ಪರಿಹರಿಸುವುದು ಸುಲಭಸಾಧ್ಯವೂ ಹೌದು. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯಲ್ಲಿ ಕೆಲ ವರ್ಷಗಳ ಹಿಂದೆ ಪ್ರಕಟಿತ ಲೇಖನ.



No comments:

Post a Comment