Wednesday, March 19, 2014

PLASTIC WASTE




   ಪ್ಲಾಸ್ಟಿಕ್ ತ್ಯಾಜ್ಯ : ನಿಯಂತ್ರಣ ಸಾಧ್ಯವೇ?

ಮನುಷ್ಯನು ನಡೆಸಿದ್ದ ಸಂಶೋಧನೆಗಳ ಸಂದರ್ಭದಲ್ಲಿ ಆಕಸ್ಮಿಕವಾಗಿ ಆವಿಷ್ಕರಿಸಿದ್ದ " ಪ್ಲಾಸ್ಟಿಕ್", ಇಂದು ನಮ್ಮೆಲ್ಲರ ದೈನಂದಿನ ಜೀವನದ ಅವಿಭಾಜ್ಯ ಅಂಗವೆನಿಸಿದೆ. ಅಂತೆಯೇ ಘನತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ವ್ಯವಸ್ಥೆಗೆ ತೊಡಕಾಗಿ ಪರಿಣಮಿಸುತ್ತಿದೆ. ಹಳ್ಳಿ, ಪಟ್ಟಣ, ನಗರ ಮತ್ತು ಮಹಾನಗರ ಎನ್ನುವ ಭೇದವಿಲ್ಲದೇ, ಕಣ್ಣು ಹಾಯಿಸಿದಲ್ಲೆಲ್ಲಾ ಕಾಣಸಿಗುವ ಪ್ಲಾಸ್ತಿಕ್ ತ್ಯಾಜ್ಯಗಳು, ಪರಿಸರದೊಂದಿಗೆ ಜನಸಾಮಾನ್ಯರ ಆರೋಗ್ಯದ ಮೇಲೂ ತೀವ್ರಸ್ವರೂಪದ ದುಷ್ಪರಿಣಾಮಗಳನ್ನು ಬೀರುತ್ತಿದೆ.
---------------               --------------              -----------           ------------------           ---------------

ಅಲೆಕ್ಸಾಂಡರ್ ಪಾರ್ಕ್ಸ್ ಎನ್ನುವ ಸಂಶೋಧಕನು ೧೮೬೨ ರಲ್ಲಿ ಮೊದಲಬಾರಿಗೆ ಮಾನವ ನಿರ್ಮಿತ ಪ್ಲಾಸ್ಟಿಕ್ ನ್ನು ಗ್ರೇಟ್ ಇಂಟರ್ ನ್ಯಾಷನಲ್ ಎಕ್ಸಿಬಿಷನ್ ನಲ್ಲಿ ಪ್ರದರ್ಶಿಸಿದ್ದನು. ಆದರೆ ೧೯೦೭ ರಲ್ಲಿ ಲಿಯೋ ಹೆಂಡ್ರಿಕ್ ಬೇಕ್ ಲ್ಯಾಂಡ್ ಎನ್ನುವ ರಸಾಯನ ಶಾಸ್ತ್ರಜ್ಞನು ಆಕಸ್ಮಿಕವಾಗಿ ಕೋಲ್ ಟಾರ್ ನಿಂದ ಲಭ್ಯವಾಗುವ " ಸಿಂಥೆಟಿಕ್ ಪಾಲಿಮರ್" ನ್ನು ತಯಾರಿಸಬಲ್ಲ ವಿಧಾನವೊಂದನ್ನು ಪತ್ತೆಹಚ್ಚಿದ್ದನು. ಈ ಪಾಲಿಮರ್ ಗೆ ಬೇಕ್ಲೈಟ್ ಎಂದು ನಾಮಕರಣ ಮಾಡಿದ್ದರೂ, ಈ ನೂತನ ವಸ್ತುವನ್ನು ಬಣ್ಣಿಸಲು ಆತನು ' ಪ್ಲಾಸ್ಟಿಕ್' ಎನ್ನುವ ಶಬ್ದವನ್ನು ಹುಟ್ಟುಹಾಕಿದ್ದನು. 

ಪ್ರಥಮ ಜಾಗತಿಕ ಯುದ್ಧದ ಬಳಿಕ ಪೆಟ್ರೋಲಿಯಂ- ಕಚ್ಚಾ ತೈಲದಿಂದ ಪ್ಲಾಸ್ಟಿಕ್ ನ ತಯಾರಿಕೆ ಆರಂಭವಾಯಿತು. ಪ್ರಥಮ ಮತ್ತು ದ್ವಿತೀಯ ಜಾಗತಿಕ ಯುದ್ಧದ ಸಂದರ್ಭದಲ್ಲಿ ಮತ್ತು ತದನಂತರ ಆರ್ಥಿಕ ಸಂಕಷ್ಟಗಳಿಂದ ಪೀಡಿತ ಜನರು ಮರ, ಗಾಜು ಮತ್ತು ಲೋಹಗಳಿಗೆ ಬದಲಾಗಿ ಸುಲಭ ಬೆಲೆಗೆ ಲಭಿಸುತ್ತಿದ್ದ ಪ್ಲಾಸ್ಟಿಕ್ ನ್ನು ಬಳಸಲು ಆರಂಭಿಸಿದ್ದರು. 

ದ್ವಿತೀಯ ಮಹಾಯುದ್ಧದ ಬಳಿಕ ಪಾಲಿಯುರಿಥೆನ್, ಪಾಲಿಯೆಸ್ಟರ್, ಪಾಲಿಪ್ರೋಪೈಲೀನ್, ಪಾಲಿಸ್ಟೈರೀನ್, ಪಾಲಿವೈನಿಲ್ ಕ್ಲೋರೈಡ್ ಗಳಂತಹ ವಿನೂತನ ಪ್ಲಾಸ್ಟಿಕ್ ಗಳನ್ನೂ ಕಂಡುಹಿಡಿಯಲಾಯಿತು. ೧೯೬೦ ರ ಬಳಿಕ ಅತ್ಯಲ್ಪ ಬೆಲೆಯ ಅನೇಕ ವಿಧದ ಪ್ಲಾಸ್ಟಿಕ್ ಗಳು ಮಾರುಕಟ್ಟೆಯನ್ನು ಪ್ರವೇಶಿಸಿದ್ದವು. ೧೯೭೦ ರ ಬಳಿಕ ಹೈಟೆಕ್ ಪ್ಲಾಸ್ಟಿಕ್ ನ ಆವಿಷ್ಕಾರವಾದಂತೆಯೇ, ಆರೋಗ್ಯ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇದರ ವ್ಯಾಪಕ ಬಳಕೆಯೂ ಆರಂಭವಾಯಿತು. 

ಪ್ರಸ್ತುತ ಜೀವನಾವಶ್ಯಕ ವಸ್ತುಗಳ ತಯಾರಿಕೆಯಲ್ಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್ ವ್ಯಾಪಕವಾಗಿ ಬಳಸಲ್ಪಡುತ್ತಿದೆ. ಅದೇ ರೀತಿಯಲ್ಲಿ ಜನಸಾಮಾನ್ಯರು ಬಳಸಿದ ಬಳಿಕ ನಿರುಪಯುಕ್ತವೆನಿಸುವ ಪ್ಲಾಸ್ಟಿಕ್ ತ್ಯಾಜ್ಯಗಳ ಪ್ರಮಾಣವೂ ಅತಿಯಾಗುತ್ತಿದೆ. ಇವುಗಳಲ್ಲಿ ಜನಸಾಮಾನ್ಯರು ದಿನನಿತ್ಯ ಬಳಸಿ ಎಸೆಯುವ ಪುಟ್ಟ ಪೊಟ್ಟಣಗಳಿಂದ ಆರಂಭಿಸಿ, ಕೈಚೀಲಗಳು, ದೊಡ್ಡ ಚೀಲಗಳು ಮತ್ತು ಬಾಟಲಿಗಳೇ ಮುಂತಾದ ತ್ಯಾಜ್ಯಗಳು ಪರಿಸರ ಪ್ರದೂಷಣೆ ಮತ್ತು ಇತರ ಅನೇಕ ವಿಧದ ಸಮಸ್ಯೆಗಳಿಗೆ ಕಾರಣವೆನಿಸುತ್ತಿವೆ. ಪ್ರಾಯಶಃ ಈ ಪ್ಲಾಸ್ಟಿಕ್ ನ್ನು ಆವಿಷ್ಕರಿಸಿದ್ದ ಬೇಕ್ ಲ್ಯಾಂಡ್, ತನ್ನ ಸಂಶೋಧನೆಯು ಮುಂದೊಂದು ದಿನ " ಜಾಗತಿಕ ಸಮಸ್ಯೆ" ಗೆ ಕಾರಣವೆನಿಸಬಹುದು ಎಂದು ಊಹಿಸಿರಲಾರನು ಎನ್ನುವುದರಲ್ಲಿ ಸಂದೇಹವಿಲ್ಲ. 

ಜಾಗತಿಕ ಮಟ್ಟದಲ್ಲಿ ಪ್ರತಿಯೊಂದು ದೇಶಗಳಲ್ಲೂ ಹೇರಳವಾಗಿ ಬಳಸಲ್ಪಟ್ಟು, ತ್ಯಾಜ್ಯರೂಪದಲ್ಲಿ ಎಸೆಯಲ್ಪಡುತ್ತಿರುವ ಪ್ಲಾಸ್ಟಿಕ್ ನ ಕ್ರಮಬದ್ಧ ಸಂಗ್ರಹಣೆ ಮತ್ತು ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡುವುದು ಸ್ಥಳೀಯ ಸಂಸ್ಥೆಗಳಿಗೆ ಬೃಹತ್ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಪ್ರಾಯಶಃ ಇದೇ ಕಾರಣದಿಂದಾಗಿ ೧೯೮೦ ರ ಬಳಿಕ ಕೆಲವಿಧದ ತ್ಯಾಜ್ಯ ಪ್ಲಾಸ್ಟಿಕ್ ನ್ನು ಪುನರ್ ಆವರ್ತನಗೊಳಿಸುವ ( ರಿ ಸೈಕ್ಲಿಂಗ್ ) ಮಾಡುವ ವಿಧಾನಗಳು ಆರಂಭಗೊಂಡಿದ್ದವು. ಇದರೊಂದಿಗೆ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲ್ಪಡುವ ಕಚ್ಚಾ ವಸ್ತುಗಳ ಮತ್ತು ಪ್ಲಾಸ್ಟಿಕ್ ನ ಬಳಕೆಯನ್ನೇ ಕಡಿಮೆ ಮಾಡುವ ಪ್ರಯತ್ನಗಳು ತಕ್ಕಮಟ್ಟಿಗೆ ಫಲಪ್ರದವೆನಿಸಿವೆ. 

ತ್ಯಾಜ್ಯಗಳಿಂದ ಸಮಸ್ಯೆ 

ನಮ್ಮ ದೇಶದ ಹಳ್ಳಿ, ಪಟ್ಟಣ, ನಗರ ಮತ್ತು ಮಹಾನಗರಗಳ ಪ್ರತಿಯೊಂದು ಬೀದಿಗಳಲ್ಲಿ ಕಾಣಸಿಗುವ ಅಗಾಧ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಗಳು ಜನಸಾಮಾನ್ಯರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಗಳ ಸಂಕೇತವಾಗಿದೆ. ನಮ್ಮ ಪರಿಸರ ಮತ್ತು ಆರೋಗ್ಯಗಳನ್ನು ಹಾಳುಗೆಡವಬಲ್ಲ ಈ ತ್ಯಾಜ್ಯ ಮನುಕುಲಕ್ಕೆ ಮಾರಕವೆನಿಸುತ್ತಿದೆ. 
ಪ್ಲಾಸ್ಟಿಕ್ ತ್ಯಾಜ್ಯಗಳಿಂದಾಗಿ ಸ್ವಾಭಾವಿಕವಾಗಿ ಭೂಮಿಗೆ ನೀರು ಇಂಗುವ ಪ್ರಕ್ರಿಯೆಗೆ ಅಡಚಣೆ ಉಂಟಾಗುವುದರಿಂದ ಅಂತರ್ಜಲದ ಮಟ್ಟವೂ ಕುಸಿಯುತ್ತಿದೆ, ಕೆಲವರ್ಷಗಳ ಹಿಂದೆ ಮುಂಬೈ ಮತ್ತು ಬೆಂಗಳೂರುಗಳಲ್ಲಿ ಉದ್ಭವಿಸಿದ್ದ ಕೃತಕ ನೆರೆಗೆ, ಚರಂಡಿಗಳಲ್ಲಿ ತುಂಬಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳೇ ಕಾರಣವೆಂದು ತಿಳಿದುಬಂದಿದೆ. ಅದೇ ರೀತಿಯಲ್ಲಿ ಈ ತ್ಯಾಜ್ಯಗಳನ್ನು ಅರಿಯದೇ ತಿಂದಿದ್ದ ಅಸಂಖ್ಯ ಜಾನುವಾರುಗಳು ಮತ್ತು ಜಲಚರಗಳು ಮೃತಪಟ್ಟಿವೆ. 

ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬೆಂಕಿಹಚ್ಚಿ ಸುಡುವುದರಿಂದ ಕಾರ್ಬನ್ ಮೊನೊಕ್ಸೈಡ್, ನೈಟ್ರೋಜನ್ ಆಕ್ಸೈಡ್, ಡಯಾಕ್ಸಿನ್ ಮತ್ತು ಫ್ಯೂರಾನ್ ಗಳು ವಾತಾವರಣಕ್ಕೆ ಬಿಡುಗಡೆಯಾಗುತ್ತವೆ. ಮನುಷ್ಯನ ಆರೋಗ್ಯಕ್ಕೆ ಮಾರಕವೆನಿಸುವ ಈ ಹಸಿರುಮನೆ ಅನಿಲಗಳು (Greenhouse gaases), ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕಾರಣವಾಗುವ ಮೂಲಕ ಅತಿಯಾದ ಚಳಿ, ಹಿಮಪಾತ, ಅತಿಯಾದ ಸೆಕೆ, ಅತಿವೃಷ್ಟಿ ಮತ್ತು  ಅನಾವೃಷ್ಟಿಗಳಿಗೆ ಕಾರಣವೆನಿಸುವ ಮೂಲಕ ಅನೇಕ ವಿಧದ ಕಾಯಿಲೆಗಳಿಗೂ ಮೂಲವೆನಿಸುತ್ತಿದೆ. 

ಭಾರತದಲ್ಲಿ ಪ್ರತಿನಿತ್ಯ ಉತ್ಪನ್ನವಾಗುತ್ತಿರುವ ಸುಮಾರು ಒಂದು ಲಕ್ಷದ ಎಪ್ಪತ್ತೈದು ಸಾವಿರ ಟನ್ ತ್ಯಾಜ್ಯಗಳಲ್ಲಿ, ಬಳಸಿ ಎಸೆದಿರುವ ಪ್ಲಾಸ್ಟಿಕ್ ತ್ಯಾಜ್ಯಗಳ ಪ್ರಮಾಣವು ಸಾಕಷ್ಟಿದೆ. ಏಕೆಂದರೆ ಒಮ್ಮೆ ಬಳಸಿ ಎಸೆಯುವ ವಸ್ತುಗಳನ್ನು ಬಳಸುವುದು ಭಾರತೀಯರಿಗೆ ಪ್ರತಿಷ್ಠೆಯ ವಿಚಾರವೆನಿಸಿದೆ. 

ನಿಯಂತ್ರಣವೇ ಪರಿಹಾರ 

ತ್ಯಾಜ್ಯ ಪ್ಲಾಸ್ಟಿಕ್ ನ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡುವುದು ಅಸಾಧ್ಯ. ಆದರೆ ನಾವು ಬಳಸುತ್ತಿರುವ ಪ್ಲಾಸ್ಟಿಕ್ ಉತ್ಪನ್ನಗಳ, ಅದರಲ್ಲೂ ವಿಶೇಷವಾಗಿ ಕೈಚೀಲ- ಪೊಟ್ಟಣಗಳ ಬಳಕೆಯನ್ನು ಕಡಿಮೆ ಮಾಡಿದಲ್ಲಿ, ಈ ತ್ಯಾಜ್ಯಗಳ ಪ್ರಮಾಣವು ಗಣನೀಯವಾಗಿ ಕಡಿಮೆಯಾಗುವುದು. ಭಾರತದ ಪ್ರತಿಯೊಬ್ಬ ಪ್ರಜೆಯೂ ದಿನಕ್ಕೊಂದು ಪ್ಲಾಸ್ಟಿಕ್ ಕೈಚೀಲವನ್ನು ಬಳಸುವುದನ್ನು ಕಡಿಮೆ ಮಾಡಿದಲ್ಲಿ, ಒಂದು ದಿನದಲ್ಲಿ ನಾವು ಒಂದು ಶತಕೋಟಿಗೂ ಅಧಿಕ ಪ್ಲಾಸ್ಟಿಕ್ ಕೈಚೀಲಗಳನ್ನು ಉಳಿಸಬಹುದಾಗಿದೆ. ಜೊತೆಗೆ ಇಷ್ಟೇ ಸಂಖ್ಯೆಯ ನಿರುಪಯುಕ್ತ ಕೈಚೀಲಗಳು ಕಸದ ತೊಟ್ಟಿಯನ್ನು ಸೇರುವುದನ್ನು ತಡೆಗಟ್ಟಬಹುದಾಗಿದೆ!. 

ನಮ್ಮ ದೇಶದಲ್ಲಿ ಪ್ರತಿನಿತ್ಯ ಉತ್ಪನ್ನವಾಗುವ ವೈವಿಧ್ಯಮಯ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ವೈಜ್ಞಾನಿಕ ವಿಧಾನಗಳಿಂದ ಸಂಸ್ಕರಿಸಿ ಮರುಬಳಕೆ ಮಾಡುವುದು, ರಸ್ತೆಗಳ ನಿರ್ಮಾಣಗಳಲ್ಲಿ ಬಳಸುವುದೇ ಮುಂತಾದ ವಿಧಾನಗಳಿಂದ ಸುರಕ್ಷಿತವಾಗಿ ವಿಲೇವಾರಿ ಮಾಡಬಹುದಾಗಿದೆ. ಇದರಿಂದ ಅಪಾಯಕಾರಿ ತ್ಯಾಜ್ಯಗಳ ಸುರಕ್ಷಿತ ವಿಲೆವಾರಿಯೊಂದಿಗೆ, ರಸ್ತೆಗಳ ನಿರ್ಮಾಣದ ವೆಚ್ಚ ಕಡಿಮೆಯಾಗುವುದಲ್ಲದೇ, ಇಂತಹ ರಸ್ತೆಗಳು ಸುದೀರ್ಘಕಾಲ ಬಾಳ್ವಿಕೆಬರುತ್ತವೆ. ತತ್ಪರಿಣಾಮವಾಗಿ ಸರಕಾರದ ಬೊಕ್ಕಸಕ್ಕೆ ಸಾಕಷ್ಟು ಹಣದ ಉಳಿತಾಯವೂ ಆಗುತ್ತದೆ. 

ತ್ಯಾಜ್ಯ ಪ್ಲಾಸ್ಟಿಕ್ ಮತ್ತಿತರ ಹೈಡ್ರೋ ಕಾರ್ಬನ್ ಉತ್ಪನ್ನಗಳನ್ನು ದ್ರವ ಅಥವಾ ಅನಿಲ ರೂಪದ ಇಂಧನವನ್ನಾಗಿ ಪರಿವರ್ತಿಸಬಲ್ಲ ತಂತ್ರಜ್ಞಾನವು ಇದೀಗ ನಮ್ಮ ದೇಶದಲ್ಲೂ ಲಭ್ಯವಿದೆ. ಅದೇ ರೀತಿಯಲ್ಲಿ ಉಕ್ಕಿನ ಕಾರ್ಖಾನೆಗಳಲ್ಲಿ ಬಳಸುವ ಕಲ್ಲಿದ್ದಲು ಮತ್ತು ಕಿಟ್ಟಗಳ ಬಳಕೆಯನ್ನು ಶೇ.೩೦ ರಷ್ಟು ಕಡಿಮೆಮಾಡಿ, ಇದರ ಬದಲಾಗಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಉಪಯೋಗಿಸುವ ವಿನೂತನ ವಿಧಾನವೊಂದನ್ನು, ಭಾರತೀಯ ಸಂಜಾತೆ ವೀಣಾ ಸಹಜವಾಲ್ ಎನ್ನುವ ಎನ್ನುವ ವಿಜ್ಞಾನಿಯೊಬ್ಬರು ಸಂಶೋಧಿಸಿ ಕೆಲವರ್ಷಗಳೇ ಕಳೆದಿವೆ. ಈ ತಂತ್ರಜ್ಞಾನವನ್ನು ಆಸ್ಟ್ರೇಲಿಯಾದ ಅತಿ ದೊಡ್ಡ ಉಕ್ಕು ತಯಾರಿಕಾ ಸಂಸ್ಥೆಯಾಗಿರುವ " ವನ್ ಸ್ಟೀಲ್ " ಬಳಸಲು ಆರಂಭಿಸಿದೆ. ಜೊತೆಗೆ ಜಗತ್ತಿನ ಅನೇಕ ಪ್ರಮುಖ ಉಕ್ಕು ತಯಾರಿಕಾ ಘಟಕಗಳು ಈ ತಂತ್ರಜ್ಞಾನವನ್ನು ಬಳಸಲು ಅನುಮತಿಯನ್ನು ಪಡೆದಿವೆ.ಆದರೆ ಭಾರತದ  ಉಕ್ಕು ತಯಾರಿಕಾ ಸ್ಥಾವರಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಲು ಆರಂಭಿಸಿಲ್ಲ. 

ವಿಶ್ವಾದ್ಯಂತ ಪರಿಸರ ಮಾಲಿನ್ಯಕ್ಕೆ ಕಾರಣವೆನಿಸುತ್ತಿರುವ ಉಕ್ಕು ತಯಾರಿಕಾ ಸ್ಥಾವರಗಳು, ತಮ್ಮ ಕುಲುಮೆಗಳಲ್ಲಿ ತ್ಯಾಜ್ಯ ಪ್ಲಾಸ್ಟಿಕ್ ಬಳಸುವ ಮೂಲಕ ವಾಯುಮಾಲಿನ್ಯದೊಂದಿಗೆ, ಪ್ಲಾಸ್ಟಿಕ್ ನಿಂದ ಸಂಭವಿಸಬಲ್ಲ ಪರಿಸರ ಮಾಲಿನ್ಯವನ್ನೂ ಸುಲಭದಲ್ಲೇ ನಿಯಂತ್ರಿಸಬಹುದಾಗಿದೆ. ಹಾಗೂ ಇದರಿಂದಾಗಿ ಈ ಸ್ಥಾವರಗಳ ಇಂಧನದ ವೆಚ್ಚದಲ್ಲಿ ಸಾಕಷ್ಟು ಉಳಿತಾಯವಾಗಲಿದೆ.

ಇವೆಲ್ಲಕ್ಕೂ ಮಿಗಿಲಾಗಿ ಪ್ಲಾಸ್ಟಿಕ್ ನ ಬಳಕೆಯನ್ನೇ ಕಡಿಮೆಮಾಡಿದಲ್ಲಿ, ನಾವು ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವೂ ಸ್ವಾಭಾವಿಕವಾಗಿಯೇ ಕಡಿಮೆಯಾಗುವುದು. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರಕಾರವು ಮುಜರಾಯಿ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನೇ ನಿಷೇಧಿಸಿರುವುದು ಅತ್ಯಂತ ಪರಿಣಾಮಕಾರಿ ನಿರ್ಧಾರವೆನಿಸಿದೆ. 

ಪ್ಲಾಸ್ಟಿಕ್ ತ್ಯಾಜ್ಯಗಳ ಸಮಸ್ಯೆಯನ್ನು ಸಮರ್ಪಕವಾಗಿ ನಿಯಂತ್ರಿಸಲು ಸರಕಾರವು ಪ್ಲಾಸ್ಟಿಕ್ ಬಳಕೆಯ ಮೇಲೆ ವಿಶೇಷ ತೆರಿಗೆಯನ್ನು ವಿಧಿಸಬೇಕು. ಜೊತೆಗೆ ತ್ಯಾಜ್ಯ ಪ್ಲಾಸ್ಟಿಕ್ ಸಂಗ್ರಹಿಸಿ ಮರಳಿಸುವ ಜನರಿಗೆ ಸ್ಥಳೀಯ ಸಂಸ್ಥೆಗಳು ಪ್ರೋತ್ಸಾಹ ಧನ ನೀಡಿದಲ್ಲಿ, ಕಂಡಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯುವ ಕೆಟ್ಟ ಹವ್ಯಾಸಕ್ಕೆ ಕಡಿವಾಣ ಬೀಳಲಿದೆ. ಜೊತೆಗೆ ಇಂತಹ ಉಪಕ್ರಮಗಳಿಂದಾಗಿ, ಈ ರೀತಿಯ ತ್ಯಾಜ್ಯಗಳ ಸಂಗ್ರಹಕ್ಕಾಗಿ ವ್ಯಯಿಸುವ ಶ್ರಮ ಮತ್ತು ವೆಚ್ಚಗಳಲ್ಲಿ ಸಾಕಷ್ಟು ಉಳಿತಾಯವಾಗಲಿದೆ. ಇದಲ್ಲದೆ ನಿರುಪಯುಕ್ತ ತ್ಯಾಜ್ಯಗಳನ್ನು "ಲ್ಯಾಂಡ್ ಫಿಲ್ ಸೈಟ್" ಗಳಲ್ಲಿ ಸುಲಭದಲ್ಲೇ ವಿಲೇವಾರಿ ಮಾಡಬಹುದಾಗಿದೆ. 

ಇವೆಲ್ಲಕ್ಕೂ ಮಿಗಿಲಾಗಿ ಪುನರ್ ಆವರ್ತನ ಮಾಡಲು ಸಾಧ್ಯವಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಖರೀದಿಸಿ, ಪುನರ್ ಆವರ್ತನಗೊಳಿಸಿ ಬಳಸುವ ಉದ್ದಿಮೆಗಳಿಗೆ ಸರಕಾರ ಪ್ರೋತ್ಸಾಹ ಧನ ನೀಡುವುದು, ರಸ್ತೆಗಳ ಡಾಮರೀಕರಣದಲ್ಲಿ ಬಳಸಬಹುದಾದ ಕೆಲ ವಿಧದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕಡ್ಡಾಯವಾಗಿ ಬಳಸುವುದೇ ಮುಂತಾದ ಉಪಕ್ರಮಗಳಿಂದಾಗಿ, ಗಣನೀಯ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಗಳ ವಿಲೆವಾರಿಯೊಂದಿಗೆ ಇವುಗಳ ಸದ್ಬಳಕೆಯೂ ಆಗುವುದು. 

ಅಂತಿಮವಾಗಿ ಆಂಗ್ಲ ಭಾಷೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ಉತ್ಪಾದನೆಯನ್ನು ಕಡಿಮೆ ಮಾಡುವ ಸಲುವಾಗಿ ರೂಪಿಸಿರುವ ಸೂತ್ರವಾಗಿರುವ " ತ್ರೀ ಆರ್" (Three "R"s - Reduse,re use, recycle) , ಅರ್ಥಾತ್ ಕಡಿಮೆಮಾಡಿ, ಮರುಬಳಕೆ ಮಾಡಿ, ಪುನರ್ ಆವರ್ತನಗೊಳಿಸಿ ಎನ್ನುವ ಶಬ್ದಗಳೊಂದಿಗೆ, refuse ಅರ್ಥಾತ್ ನಿರಾಕರಿಸಿ ಎನ್ನುವುದನ್ನು ಸೇರಿಸಿ ಅನುಸರಿಸಿದಲ್ಲಿ, ನಾವು ಉತ್ಪಾದಿಸುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳ ಪ್ರಮಾಣ ನಿಸ್ಸಂದೇಹವಾಗಿ ಕಡಿಮೆಯಾಗಲಿದೆ. ಇದಕ್ಕೆ ತಪ್ಪಿದಲ್ಲಿ ಈ ತ್ಯಾಜ್ಯಗಳ ದುಷ್ಪರಿಣಾಮಗಳು ನಮ್ಮ ಮುಂದಿನ ಸಂತತಿಯನ್ನು ಶಾಪದೋಪಾದಿಯಲ್ಲಿ ಬಾಧಿಸಲಿದೆ ಎನ್ನುವುದನ್ನು ಮರೆಯದಿರಿ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. -೦೧-೨೦೦೯ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.





No comments:

Post a Comment