Wednesday, March 26, 2014

Vaidyo narayano hari !. Part-2




   ವೈದ್ಯೋ ನಾರಾಯಣೋ ಹರಿ ! - ಭಾಗ ೨ 

ಸಂತೋಷನ ದುಃಖಕ್ಕೆ ಕಾರಣವೇನು?

ಗಜಗಾತ್ರದ ಸಂತೋಷನಿಗೆ ಪಿತ್ರಾರ್ಜಿತ ಆಸ್ತಿಪಾಸ್ತಿಗಳೊಂದಿಗೆ, ಇತರ ಮೂಲಗಳಿಂದ ಕೈತುಂಬಾ ಆದಾಯ ದೊರೆಯುತ್ತಿತ್ತು. ಆದರೆ ೧೨೦ ಕಿಲೋ ತೂಕದ ವಿವಾಹಯೋಗ್ಯ ಸಂತೋಷನ ಕೈಹಿಡಿಯಲು ಯಾವುದೇ ಕನ್ಯಾಮಣಿಯು ಸಿದ್ಧಳಿರಲಿಲ್ಲ ಎನ್ನುವುದೇ ಸಂತೋಷನ ದುಃಖಕ್ಕೆ ಮೂಲ ಕಾರಣವಾಗಿತ್ತು. 

ಶಾರೀರಿಕ ಶ್ರಮದ ಅಭಾವ, ಅನುವಂಶಿಕತೆ ಮತ್ತು ದಿನದಲ್ಲಿ ಐದಾರು ಬಾರಿ ಸಮೃದ್ಧ ಆಹಾರ ಸೇವಿಸುವ ಸ್ವಭಾವವೇ ಆತನ ಗಜಗಾತ್ರಕ್ಕೆ ಕಾರಣವೆನಿಸಿತ್ತು. ಆದರೆ ವಿವಾಹವಾಗಬೇಕೆನ್ನುವ ಏಕೈಕ ಆಕಾಂಕ್ಷೆಯಿಂದ ಪರಿಚಯದ ವೈದ್ಯರ ಬಳಿ ತೆರಳಿದ ಸಂತೋಷನಿಗೆ, ಎಣ್ಣೆ, ಬೆಣ್ಣೆ, ತುಪ್ಪ ಹಾಗೂ ಸಕ್ಕರೆಗಳನ್ನು ಬಳಸಿ ಸಿದ್ಧಪಡಿಸಿದ ಆಹಾರಪದಾರ್ಥಗಳನ್ನು ವರ್ಜಿಸುವುದರೊಂದಿಗೆ, ಅನ್ನದ ಪ್ರಮಾಣವನ್ನು ಕಡಿಮೆಮಾಡಿ ತರಕಾರಿಗಳ ಸಲಾಡ್ ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಜೊತೆಗೆ ದಿನದಲ್ಲಿ ಎರಡು ಬಾರಿ ತಲಾ ಒಂದು ಗಂಟೆಯಂತೆ ಕ್ಷಿಪ್ರ ನಡಿಗೆಯಲ್ಲಿ ತೊಡಗಿಸಿಕೊಳ್ಳಲು ಆದೇಶಿಸಿದ್ದರು. ವೈದ್ಯರ ಸೂಚನೆಗಳನ್ನು ಪರಿಪಾಲಿಸಲು ಸಿದ್ಧನಿಲ್ಲದ ಸಂತೋಷನು, ತನ್ನ ತೂಕವನ್ನು ಸುಲಭದಲ್ಲೇ ಇಳಿಸಬಲ್ಲ ವಿಧಾನವನ್ನು ಅರಸತೊಡಗಿದ್ದನು. ಈ ಸಂದರ್ಭದಲ್ಲಿ ಭೇಟಿಯಾಗಿದ್ದ ಬಂಧುವೊಬ್ಬರು ಸೂಚಿಸಿದ ಸರಳ ಚಿಕಿತ್ಸೆಯೊಂದು ಆತನಿಗೆ ಆಕರ್ಷಕವಾಗಿ ಕಂಡಿತ್ತು. ಏಕೆಂದರೆ ವೈದ್ಯರು ಹೇಳಿದಂತಹ ಯಾವುದೇ ನಿಯಮಗಳನ್ನು ಈ ಚಿಕಿತ್ಸೆಯಲ್ಲಿ ಪರಿಪಾಲಿಸುವ ಅವಶ್ಯಕತೆಯೇ ಇರಲಿಲ್ಲ!. 

ಒಂದಿಷ್ಟೂ ಬೆವರಿಳಿಸದೇ ಮತ್ತು ಆಹಾರ ಸೇವನೆಯಲ್ಲಿ ಪಥ್ಯವನ್ನು ಅನುಸರಿಸದೇ ಪಡೆಯಬಹುದಾದ ಈ ಚಿಕಿತ್ಸೆಯಲ್ಲಿ, ವಾರದ ಏಳು ದಿನಗಳಲ್ಲಿ ಏಳು ವಿಭಿನ್ನ ಸಸ್ಯಗಳ ಎಲೆಗಳಿಂದ ತಯಾರಿಸಿದ ರಸವನ್ನು ನಿಗದಿತ ಪ್ರಮಾಣದಲ್ಲಿ, ನಿಗದಿತ ದಿನದಂದು ಬೆಳಿಗ್ಗೆ ಬರೀ ಹೊಟ್ಟೆಯಲ್ಲಿ ಸೇವಿಸಬೇಕಾಗಿತ್ತು. ಶುಭದಿನದಂದು ಚಿಕಿತ್ಸೆಯನ್ನು ಪ್ರಾರಂಭಿಸಿದ ಸಂತೋಷನು, ನಿರಂತರವಾಗಿ ಆರು ತಿಂಗಳುಗಳ ಕಾಲ "ಸಪ್ತ ಸಸ್ಯಗಳ ಸ್ವರಸ" ವನ್ನು ಸೇವಿಸಿದರೂ, ಆತನ ತೂಕ ಆರು ಕಿಲೋಗಳಷ್ಟು ಕೂಡಾ ಕಡಿಮೆಯಾಗಲಿಲ್ಲ. ಸಂತೋಷನ ದುಃಖ ಇನ್ನಷ್ಟು ಹೆಚ್ಚಲು ಕಾರಣವೆನಿಸಿದ್ದ ಈ ಚಿಕಿತ್ಸೆಯು ಅಪೇಕ್ಷಿತ ಪರಿಣಾಮವನ್ನು ನೀಡಬೇಕಿದ್ದಲ್ಲಿ, ಆತನ ವೈದ್ಯರು ಸೂಚಿಸಿದ್ದ ನಿಯಮಗಳ ಪರಿಪಾಲನೆ ಅವಶ್ಯವಾಗಿತ್ತು. ಹಾಗೂ ಇದನ್ನು ಅನುಸರಿಸಲು ಸಿದ್ಧನಿಲ್ಲದ ಕಾರಣದಿಂದಾಗಿಯೇ, ಸಂತೋಷನ ತೂಕವು ಕಿಂಚಿತ್ ಕೂಡಾ ಕಡಿಮೆಯಾಗದಿರಲು ಮೂಲವೆನಿಸಿತ್ತು. 

" ಮಹಾಕಾಯ" ರು ತಮ್ಮ ತೂಕವನ್ನು ಇಳಿಸಿಕೊಳ್ಳಲು ನಿಶ್ಚಿತವಾಗಿಯೂ ಯಾವುದೇ ಔಷದ ಸೇವನೆಯ ಅವಶ್ಯಕತೆಯಿಲ್ಲ. ತಮ್ಮ ಜಿಹ್ವಾ ಚಾಪಲ್ಯವನ್ನು ಹತೋಟಿಯಲ್ಲಿ ಇರಿಸಬಲ್ಲ ಮನೋಬಲ ಹಾಗೂ ತೀವ್ರ ವ್ಯಾಯಾಮದಲ್ಲಿ ಭಾಗವಹಿಸಲು ಬೇಕಾದ ಶಾರೀರಿಕ ಬಲಗಳೊಂದಿಗೆ, ಜೀವನಶೈಲಿಯಲ್ಲಿ ಅವಶ್ಯಕ ಬದಲಾವಣೆಗಳನ್ನು ಮಾಡಿಕೊಳ್ಳಲು ಸಿದ್ಧರಿದ್ದಲ್ಲಿ ಅಪೇಕ್ಷಿತ ಪರಿಣಾಮ ದೊರೆಯುವುದರಲ್ಲಿ ಸಂದೇಹವಿಲ್ಲ. ಆದರೆ ಕಾಸು ಖರ್ಚಿಲ್ಲದೆ ಮಾಡುವ ಪ್ರಯೋಗಗಳು ಮತ್ತು ದುಬಾರಿ ಬೆಲೆಯ ತೂಕ ಇಳಿಸಿಕೊಳ್ಳುವ ಚಿಕಿತ್ಸೆಗಳು, ನಿಮ್ಮ ಆರೋಗ್ಯದ ಮತ್ತು ಹಣದ ಥೈಲಿಯನ್ನು ಸೊರಗಿಸಬಹುದೇ ಹೊರತು ನಿಮ್ಮ ತೂಕವನ್ನಲ್ಲ ಎನ್ನುವುದನ್ನು ಮರೆಯದಿರಿ.

ಚಂದ್ರಪ್ಪನ ಚರ್ಮರೋಗ 

ಕಿಂಚಿತ್ ಶೀತವಾದರೂ ತನ್ನ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವ ಚಂದ್ರಪ್ಪನಿಗೆ, ಕಡು ಬೇಸಗೆಯ ದಿನಗಳಲ್ಲಿ ತೊಡೆ ಸಂದಿಯಲ್ಲಿ ತುರಿಕೆ ಆರಂಭವಾಗಿತ್ತು.ಸಾರ್ವಜನಿಕ ಸ್ಥಳಗಳಲ್ಲಿ ತುರಿಕೆ ಪ್ರಾರಂಭವಾದಾಗ ತುಸು ಮುಜುಗರವಾಗುತ್ತಿದ್ದರೂ, ವೈದ್ಯರಲ್ಲಿ ಹೋಗಲು ಆತನಿಗೆ ಸಂಕೋಚವಾಗಿತ್ತು. ಸ್ನೇಹಿತರ ಸಲಹೆಯಂತೆ ವಿವಿಧ ರೀತಿಯ ಟಾಲ್ಕಂ ಪೌಡರ್ ಗಳು ಮತ್ತು ಜಾಹೀರಾತುಗಳಲ್ಲಿ ಕಂಡಿದ್ದ ಅನೇಕ ಮುಲಾಮುಗಳಿಂದ ಒಂದಿಷ್ಟೂ ಪರಿಹಾರ ದೊರೆಯದಿದ್ದಾಗ ಚಂದ್ರಪ್ಪನಿಗೆ ಕೊಂಚ ಭೀತಿಯೂ ಉಂಟಾಗಿತ್ತು. 

ಪತಿಯ ತುರಿಕೆಯನ್ನು ಕೆಲದಿನಗಳಿಂದ ಗಮನಿಸಿದ ಪತ್ನಿಯು ಈ ಬಗ್ಗೆ ವಿಚಾರಿಸಿದಾಗ ಆತನ ಮುಖವು ಬಾಡಿತ್ತು. ಸದಾ ಪತಿಯನ್ನು ಸಂದೇಹಿಸುತ್ತಿದ್ದ ಸಂಶಯ ಪಿಶಾಚಿಯಾದ ಆಕೆಗೆ, ತನ್ನ ಪತಿಗೆ " ಹೊರಗಿನ ಚಾಳಿ" ಆರಂಭವಾಗಿದ್ದು ಯಾವುದೋ ಗುಹ್ಯ ರೋಗವು ಬಾಧಿಸುತ್ತಿದೆ ಎನ್ನುವ ಸಂಶಯ ಮೂಡಿತ್ತು. ಇದೇ ಕಾರಣದಿಂದಾಗಿ ಪತಿ ಪತ್ನಿಯರ ನಡುವೆ ಉದ್ಭವಿಸಿದ್ದ ವಿರಸಕ್ಕೆ ಕಾರಣವೆನಿಸಿದ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಸಲುವಾಗಿ ಇಬ್ಬರೂ ಕುಟುಂಬ ವೈದ್ಯರ ಬಳಿಗೆ ತೆರಳಿದ್ದರು. 

ಚಿಕ್ಕಪುಟ್ಟ ಸಮಸ್ಯೆಗಳಿಗೂ ತನ್ನ ಬಳಿ ಬರುತ್ತಿದ್ದ ಚಂದ್ರಪ್ಪನು ಈ ಬಾರಿ ಕಾಯಿಲೆ ಉಲ್ಬಣಿಸಿದ ಬಳಿಕ ಬಂದಿದ್ದುದು ವೈದ್ಯರಿಗೂ ಆಶ್ಚರ್ಯವೆನಿಸಿತ್ತು. ಪತಿಯ ಕಾಯಿಲೆಯ ಬಗ್ಗೆ ತನ್ನ ಸಂದೇಹ ಮತ್ತು ಅನಿಸಿಕೆಗಳನ್ನು ಹೇಳಲಾರಂಭಿಸಿದ ಆತನ ಪತ್ನಿಯನ್ನು ಸುಮ್ಮನಿರುವಂತೆ ಹೇಳಿದ ವೈದ್ಯರು, ಚಂದ್ರಪ್ಪನನ್ನು ಪರೀಕ್ಷಾ ಕೊಠಡಿಗೆ ಕರೆದೊಯ್ದರು. ಚಂದ್ರಪ್ಪನನ್ನು ಕಾಡುತ್ತಿದ್ದ ಸಮಸ್ಯೆಗೆ ಶೀಲಿಂದ್ರದ ಸೋಂಕು ಕಾರಣವೆಂದು ವೈದ್ಯರಿಗೆ ತಿಳಿದುಬಂದಿತ್ತು. ಇದನ್ನು ಗುಣಪಡಿಸಬಲ್ಲ ಔಷದ- ಮುಲಾಮುಗಳನ್ನು ನೀಡಿದ ವೈದ್ಯರು, ಆತನ ನಡತೆಯನ್ನು ಸಂದೆಹಿಸಿದ್ದ ಪತ್ನಿಗೆ ಛೀಮಾರಿ ಹಾಕಲು ಮರೆಯಲಿಲ್ಲ. ಏಳು ದಿನಗಳ ಚಿಕಿತ್ಸೆಯ ಬಳಿಕ ಚಂದ್ರಪ್ಪನ ಚರ್ಮರೋಗದೊಂದಿಗೆ, ಪತಿಪತ್ನಿಯರ ನಡುವೆ ಮೂಡಿದ್ದ ವಿರಸವೂ ಮಾಯವಾಗಿತ್ತು!. 

ಆಸ್ತಮಾ ಕಾಯಿಲೆಗೆ ಆಯಸ್ಕಾಂತ ಮದ್ದಲ್ಲ 

ಬಾಲ್ಯದಿಂದಲೇ ಆಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ನೀಲಮ್ಮನಿಗೆ ಈ ಕಾಯಿಲೆಯ ಪೀಡೆಯಿಂದಾಗಿ ಜೀವನದಲ್ಲಿ ಜಿಗುಪ್ಸೆ ಮೂಡಿತ್ತು. ಯಾವುದೇ ರೀತಿಯ ಪೂರ್ವಸೂಚನೆಯನ್ನೇ ನೀಡದೆ ಬಂದೆರಗುತ್ತಿದ್ದ ಆಸ್ತಮಾದ ತೀವ್ರತೆಯು ಆಕೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿತ್ತು. ವಿವಿಧ ವೈದ್ಯರ ಮತ್ತು ವಿಭಿನ್ನ ಪದ್ದತಿಗಳ ಚಿಕಿತ್ಸೆಗೂ ಬಗ್ಗದ ನೀಲಮ್ಮನ ಆಸ್ತಮಾ, ಇದೀಗ ಇಳಿ  ವಯಸ್ಸಿನಲ್ಲಿ ಅಸಹನೀಯವೆನಿಸುತ್ತಿತ್ತು. 

ಅದೊಂದು ದಿನ ಅಯಾಚಿತವಾಗಿ ದೊರೆತಿದ್ದ ಕರಪತ್ರದಲ್ಲಿ "ಆಯಸ್ಕಾಂತ ಚಿಕಿತ್ಸೆ" ಯ ಅದ್ಭುತ ಪರಿಣಾಮಗಳನ್ನು ಓದಿದ ಆಕೆಗೆ, ತನ್ನ ಸಮಸ್ಯೆಯನ್ನು ಈ ಚಿಕಿತ್ಸೆಯ ಮೂಲಕ ಗುಣಪಡಿಸಬಹುದೆನ್ನುವ ಆಸೆ ಮನದಲ್ಲಿ ಮೂಡಿತ್ತು. ಮರುದಿನವೇ ಸಹಸ್ರಾರು ರೂಪಾಯಿಗಳನ್ನು ತೆತ್ತು ಖರೀದಿಸಿದ ವಿವಿಧ ಗಾತ್ರದ, ವಿವಿಧ ಆಕಾರಗಳ ಆಯಸ್ಕಾಂತಗಳನ್ನು ಕಂಡು, ತನ್ನ ಕಾಯಿಲೆ ಗುಣವಾಯಿತೆಂದೇ ನಂಬಿದರು. 

ಶರೀರದ ವಿವಿಧ ಭಾಗಗಳ ಮೇಲೆ ಉಪಯೋಗಿಸಬೇಕಾದ ವಿಭಿನ್ನ ಆಯಸ್ಕಾಂತಗಳನ್ನು ಗುರುತಿಸಿ, ವಿಂಗಡಿಸಿದ ಬಳಿಕ ನೀಲಮ್ಮನ ದೈನಂದಿನ ಚಿಕಿತ್ಸೆ ಆರಂಭವಾಯಿತು. ಕೈಕಾಲುಗಳನ್ನು ಆಯಸ್ಕಾಂತದ ಮೇಲಿರಿಸಿ ಧ್ಯಾನದ ಭಂಗಿಯಲ್ಲಿ ಕುಳಿತುಕೊಳ್ಳುವುದು, ನೀರಿನ ಪಾತ್ರೆಯಲ್ಲಿ ಪುಟ್ಟ ಆಯಸ್ಕಾಂತವನ್ನು ಮುಳುಗಿಸಿಟ್ಟು ಬೆಳಿಗ್ಗೆ ಈ ನೀರನ್ನು ಕುಡಿಯುವುದೇ ಮುಂತಾದ ನಾಲ್ಕಾರು ವಿಧದ ಪ್ರಯೋಗಗಳು ಅವಿರತವಾಗಿ ನಡೆದವು. ಒಂದೆರಡು ತಿಂಗಳುಗಳಲ್ಲಿ ತನ್ನ ಸಮಸ್ಯೆ ಪರಿಹಾರಗೊಂದು ದೈನಂದಿನ ಔಷದ ಸೇವನೆಯನ್ನು ನಿಲ್ಲಿಸಬಹುದೆಂದು ನಂಬಿದ್ದ ನೀಲಮ್ಮನಿಗೆ, ಆರು ತಿಂಗಳ ಚಿಕಿತ್ಸೆಯಿಂದಲೂ ಕಿಂಚಿತ್ ಪರಿಹಾರವೂ ದೊರೆತಿರಲಿಲ್ಲ. ಇದೇ ಕಾರಣದಿಂದಾಗಿ ಉಂಟಾಗಿದ್ದ ಮಾನಸಿಕ ಒತ್ತಡವು ಆಕೆ ಸೇವಿಸುತ್ತಿದ್ದ ಔಷದಗಳ ಪ್ರಮಾಣ ಇನ್ನಷ್ಟು ಹೆಚ್ಚಾಗಲು ಕಾರಣವೆನಿಸಿತ್ತು. ಆರು ತಿಂಗಳ ಬಳಿಕ ತೀವ್ರವಾಗಿ ಉಲ್ಬಣಿಸಿದ್ದ ಆಸ್ತಮಾದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಚಿಕಿತ್ಸೆ ನೀಡಿದ್ದ ತಜ್ಞರ ಸಲಹೆಯಂತೆ, ನೀಲಮ್ಮನು ಆಯಸ್ಕಾಂತ ಚಿಕಿತ್ಸೆಗೆ ತಿಲಾಂಜಲಿ ನೀಡಿದ್ದಳು!. 

ಸರ್ವರೋಗಹರ ಆಯಸ್ಕಾಂತ ಹಾಸಿಗೆ!

ಹತ್ತಾರು ವರ್ಷಗಳ ಹಿಂದೆ ಮನುಷ್ಯನನ್ನು ಬಾಧಿಸಬಲ್ಲ ಯಾವುದೇ ಶಾರೀರಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಏಕಮಾತ್ರ ಪರಿಹಾರ ಎನ್ನುವ ಜಾಹೀರಾತು ಅಥವಾ ಕರಪತ್ರಗಳನ್ನು ನೀವು ಓದಿದ್ದುದು  ನೆನಪಿದೆಯೇ?. ಒಂದು ಲಕ್ಷಕ್ಕೂ ಹೆಚ್ಚು ಬೆಲೆಬಾಳುವ, ಮೇಲ್ನೋಟಕ್ಕೆ ಚಾಪೆಯಂತೆ ಕಾಣುವ, ಅದ್ಭುತ ಶಕ್ತಿಯ ಈ ಆಯಸ್ಕಾಂತ ಹಾಸಿಗೆಯನ್ನು ಖರೀದಿಸಿದ ಪ್ರತಿಯೊಬ್ಬರೂ ಟೋಪಿ ಹಾಕಿಸಿಕೊಂದದ್ದು ನಿಜ. ಆದರೆ ಇದರ ತಯಾರಕರು ತಮ್ಮ ಗ್ರಾಹಕರಿಗೆ ನೀಡುವ ಶೇ. ೨೫ ರಷ್ಟು ಕಮಿಷನ್ ನ ಆಸೆಯಿಂದ ಟೋಪಿ ಹಾಕಿಸಿಕೊಂಡವರು ತಮ್ಮ ಬಂಧುಮಿತ್ರರಿಗೂ ಟೋಪಿ ಹಾಕಿಸಿದ್ದು ನಿಮ್ಮಾಣೆಗೂ ನಿಜ!. 

ಕೆಲವೇ ತಿಂಗಳುಗಳ ಹಿಂದೆ ಈ ಉತ್ಪನ್ನದ ತಯಾರಕರ ಮೇಲೆ ಆದಾಯಕರ ಮತ್ತು ಇತರ ಇಲಾಖೆಗಳು ದಾಳಿಯನ್ನು ನಡೆಸಿ, ಅಪಾರ ಪ್ರಮಾಣದ ಸಂಪತ್ತನ್ನು ಪತ್ತೆಹಚ್ಚುವುದರೊಂದಿಗೆ, ಇವರ ವಿರುದ್ಧ ವಂಚನೆಯ ಪ್ರಕರಣವನ್ನು ದಾಖಲಿಸಲಾಗಿದೆ. ಇದರೊಂದಿಗೆ ಟೋಪಿ ಹಾಕುವ ಮತ್ತು ಟೋಪಿ ಹಾಕಿಸಿಕೊಳ್ಳುವವರ ಸಂಖ್ಯೆಯೂ ಕಡಿಮೆಯಾಗಿದೆ!. 

ಮೂಲತಃ ಅಲರ್ಜಿಯಿಂದ ಉದ್ಭವಿಸುವ ಆಸ್ತಮಾ ಉಲ್ಬಣಿಸಲು ಹಲವಾರು ಕಾರಣಗಳಿವೆ. ಉದಾಹರಣೆಗೆ ಆಸ್ತಮಾ ಬಾಧಿಸಲು ಧೂಳು ಕಾರಣವೆಂದಾದರೆ, ಧೂಳು ಇರುವ ಪರಿಸರದಿಂದ ದೂರವಿರುವುದು ಹಿತಕರ. ಆಸ್ತಮಾ ಬಾಧಿಸಿದಾಗ ಶ್ಲೇಷ್ಮದಿಂದ ತುಂಬಿ ಸಂಕುಚಿತಗೊಳ್ಳುವ ನಿಮ್ಮ ಶ್ವಾಸಕೋಶಗಳು, ಆಯಸ್ಕಾಂತ ಚಿಕಿತ್ಸೆಯಿಂದ ವಿಕಸಿತಗೊಳ್ಳುವುದು ನಿಜಕ್ಕೂ ಅಸಾಧ್ಯವೆಂದು ಅರಿತಿರಿ.

ಅಪರ್ಣಾಳ ಅಪಸ್ಮಾರ 

ಎರಡುವರ್ಷ ವಯಸ್ಸಿನ ಅಪರ್ಣಾಳಿಗೆ ಆಕಸ್ಮಿಕವಾಗಿ ಅಪಸ್ಮಾರ ಆರಂಭವಾದಾಗ ಆಕೆಯ ಮಾತಾಪಿತರಿಗೆ ಗಾಬರಿಯಾಗಿತ್ತು. ಆದರೆ ನೆರೆಮನೆಯವರು ಸೂಚಿಸಿದಂತೆ ಆಧುನಿಕ ಪದ್ಧತಿಯ ಔಷದಗಳು ಹಾನಿಕರವೆಂದು ಭಾವಿಸಿ ಅನ್ಯ ಪದ್ಧತಿಯ ಚಿಕಿತ್ಸೆಯನ್ನು ಆಕೆಗೆ ನೀಡಲಾಗುತ್ತಿತ್ತು. ವಿಶೇಷವೆಂದರೆ ಕುಟುಂಬ ವೈದ್ಯರಿಂದಲೂ ಈ ವಿಷಯವನ್ನು ಮುಚ್ಚಿಡಲಾಗಿತ್ತು.

ಅಪರ್ಣಾ ಪ್ರಾಥಮಿಕ ಶಾಲೆಗೇ ಹೋಗಲಾರಂಭಿಸಿದರೂ ಆಕೆಯ ಸಮಸ್ಯೆ ಸುರಕ್ಷಿತ ಪದ್ಧತಿಯ ಚಿಕಿತ್ಸೆಯಿಂದ ಕಡಿಮೆಯಾಗಿರಲಿಲ್ಲ. ಆದರೂ ಆಕೆಯ ಮಾತಾಪಿತರು ಈ ಚಿಕಿತ್ಸೆಯನ್ನು ನಿಲ್ಲಿಸಿರಲಿಲ್ಲ. ಶಾಲೆಗೆ ಹೋಗುತ್ತಿದ್ದ ಅಪರ್ಣಾ, ಕೆಲವೊಮ್ಮೆ ದಿನದಲ್ಲಿ ಮೂರರಿಂದ ನಾಲ್ಕು ಬಾರಿ ಅಪಸ್ಮಾರದ ಸೆಳೆತಗಳಿಂದ ನಿಶ್ಚೇಷ್ಟಿತಳಾಗಿ ಬೀಳುತ್ತಿದ್ದಳು. ಆಕೆಯ ಆರೋಗ್ಯದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಅಧ್ಯಾಪಕರು, ಆಕೆಯ ಮಾತಾಪಿತರನ್ನು ಶಾಲೆಗೇ ಕರೆಸಿ ಸೂಕ್ತ ಚಿಕಿತ್ಸೆಯನ್ನು ಕೊಡಿಸುವಂತೆ ಒತ್ತಾಯಿಸಿದ್ದರು. 

ಅಂತಿಮವಾಗಿ ಅನ್ಯಮಾರ್ಗವಿಲ್ಲದೇ ಕುಟುಂಬ ವೈದ್ಯರ ಸಲಹೆ ಪಡೆಯಲು ತೆರಳಿದ ಮಾತಾಪಿತರಿಗೆ, ಆಕೆಯನ್ನು ಖ್ಯಾತ ತಜ್ಞರಲ್ಲಿಗೆ ಸೂಚಿಸಲಾಗಿತ್ತು. ತಜ್ಞ ವೈದ್ಯರ ಚಿಕಿತ್ಸೆ ಪ್ರಾರಂಭವಾದಂತೆಯೇ, ಆಕೆಯ ಅಪಸ್ಮಾರದ ಸೆಳೆತಗಳೂ ಕಣ್ಮರೆಯಾಗಿದ್ದವು!. ಆಕೆಗೆ ಚಿಕಿತ್ಸೆಯನ್ನು ನೀಡಿದ ವೈದ್ಯರ ಅಭಿಪ್ರಾಯದಂತೆ, ಅಪರ್ಣಾಳಿಗೆ ಪ್ರಾರಂಭಿಕ ಹಂತದಲ್ಲೇ ಆಧುನಿಕ ಪದ್ಧತಿಯ ಚಿಕಿತ್ಸೆಯನ್ನುನೀಡಿದ್ದಲ್ಲಿ ಆಕೆಯ ಅಪಸ್ಮಾರ ನಿಶ್ಚಿತವಾಗಿಯೂ ಗುಣವಾಗುತ್ತಿತ್ತು. ಆದರೆ ಅನ್ಯ ಪದ್ಧತಿಯ ಚಿಕಿತ್ಸೆ ನೀಡಿದ್ದ ಕಾರಣದಿಂದಾಗಿ ಈ ವ್ಯಾಧಿಯು ಇನ್ನಷ್ಟು ಉಲ್ಬಣಿಸಿತ್ತು. ವಿಶೇಷವೆಂದರೆ ತಜ್ಞ ವೈದ್ಯರ ಚಿಕಿತ್ಸೆ ಆರಂಭವಾದ ಬಳಿಕ ಅಪರ್ಣಾಳ ಅಪಸ್ಮಾರ ಮಾಯವಾಗುವುದರೊಂದಿಗೆ, ಆಕೆಯ ಸಾಮಾನ್ಯ ಆರೋಗ್ಯದ ಮಟ್ಟವೂ ಸಾಕಷ್ಟು ಸುಧಾರಿಸಿತ್ತು!. 

ನಿಮ್ಮ ಆರೋಗ್ಯದ ಸಮಸ್ಯೆಗಳಿಗೆ ಪಡೆಯಲೇ ಬೇಕಾದ ಚಿಕಿತ್ಸೆಗಳಲ್ಲಿ ಆಧುನಿಕ- ಪುರಾತನ, ನೈಸರ್ಗಿಕ- ಕೃತಕ, ಅಡ್ಡ ಪರಿಣಾಮ ಬೀರುವ- ಬೀರದ ಮತ್ತು ಸುರಕ್ಷಿತ ಹಾಗೂ ಹಾನಿಕರ ಎನ್ನುವುದನ್ನು ನೀವಾಗಿ ನಿರ್ಧರಿಸದಿರಿ. ಎಲ್ಲ ವಿಧದ ಕಾಯಿಲೆಗಳಿಗೆ ಎಲ್ಲಾ ವಿಧದ ಪದ್ಧತಿಗಳ ಚಿಕಿತ್ಸೆ ಪರಿಣಾಮಕಾರಿ ಆಗದು ಎನ್ನುವುದನ್ನು ಮರೆಯದಿರಿ. 

ಮನುಷ್ಯನ ಜೀವಿತಾವಧಿಯಲ್ಲಿ ಆಹಾರ, ವಸತಿ ಮತ್ತು ವಸ್ತ್ರಗಳಷ್ಟೇ ಅವಶ್ಯಕವೆನಿಸುವ ಆರೋಗ್ಯ ರಕ್ಷಣೆ ಹಾಗೂ ಕಾಯಿಲೆಗಳು ಪೀಡಿಸಿದಾಗ ಪಡೆದುಕೊಳ್ಳಲೇ  ಬೇಕಾದ ಸಮರ್ಪಕ ಚಿಕಿತ್ಸೆಗಳ ಬಗ್ಗೆ ಜನರಿಗಿರುವ ತಪ್ಪು ಕಲ್ಪನೆಗಳು, ಮೂಢನಂಬಿಕೆಗಳು ಮತ್ತು ತಾನು ಆರೋಗ್ಯದಿಂದ ಇದ್ದೇನೆ ಎನ್ನುವ ಆತ್ಮವಿಶ್ವಾಸಗಳು ಪ್ರಾಣಾಪಾಯಕ್ಕೂ ಕಾರಣವೆನಿಸಬಹುದು. ಆಧುನಿಕ ವಿಜ್ಞಾನದ ಫಲವಾದ, ನಮ್ಮ ದೈನಂದಿನ ಜೀವನವನ್ನು ಇನ್ನಷ್ಟು ಸುಖಕರವಾಗಿಸಬಲ್ಲ ಸಕಲ ವಸ್ತುಗಳನ್ನೂ ಬಯಸುವ ಜನರು, ಆಧುನಿಕ ವೈದ್ಯಕೀಯ ಸಂಶೋಧನೆಗಳ ಫಲವನ್ನು ತಮ್ಮ ಕಾಯಿಲೆಗಳನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸಿಸಲು ಬಳಸಲು ಹಿಂಜರಿಯುವುದು ಸರಿಯಲ್ಲ. ತಮ್ಮನ್ನು ಬಾಧಿಸುವ ಕಾಯಿಲೆ ಯಾವುದೆಂದು ಅರಿಯದೇ ಹಾಗೂ ಯಾವುದೇ ಪದ್ಧತಿಯ ಚಿಕಿತ್ಸೆಯನ್ನು ಆರಂಭಿಸುವ ಮೊದಲು, ಪದವೀಧರ ವೈದ್ಯರು ಅಥವಾ ತಜ್ಞವೈದ್ಯರ ಸಲಹೆಯನ್ನು ಪಡೆಯುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಹಿತಕರ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೦-೧೧-೨೦೦೩ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.


No comments:

Post a Comment