Tuesday, March 25, 2014

VAIDYO NARAYANO HARI!



  ವೈದ್ಯೋ ನಾರಾಯಣೋ ಹರಿ!

ನಿರಂತರವಾಗಿ ನಡೆಯುತ್ತಿರುವ ವೈದ್ಯಕೀಯ ಸಂಶೋಧನೆಗಳ ಫಲವಾಗಿ ನಮಗಿಂದು ಅತ್ಯುತ್ತಮ ಔಷದಗಳು ಲಭ್ಯವಿದ್ದರೂ, ನಮ್ಮನ್ನು ನಿರಂತರವಾಗಿ ರೋಗರಹಿತರಾಗಿ ಕಾಪಾಡಬಲ್ಲ ಔಷದಗಳನ್ನು ಯಾವುದೇ ವೈದ್ಯಕೀಯ ವಿಜ್ಞಾನಿಗಳು ಇಂದಿಗೂ ಕಂಡುಹುಡುಕಿಲ್ಲ. ಗಂಭೀರ - ಮಾರಕ ಕಾಯಿಲೆಗಳು ಬಾಧಿಸಿದಾಗ ಔಷದರಹಿತ ಚಿಕಿತ್ಸೆ ಅಥವಾ ನಕಲಿವೈದ್ಯರ ಚಿಕಿತ್ಸೆಗಳನ್ನು ಪ್ರಯೋಗಿಸಲು ಪ್ರಯತ್ನಿಸಿದಲ್ಲಿ, ಮತ್ತಷ್ಟು ಸಮಸ್ಯೆಗಳು ಉದ್ಭವಿಸುವುದರಲ್ಲಿ ಸಂದೇಹವಿಲ್ಲ ಎನ್ನುವುದನ್ನು ಮರೆಯದಿರಿ. 
-------------             -------------             ------------               ---------------          --------------

ಚಿಕಿತ್ಸೆಯನ್ನೇ ಒಲ್ಲದ ಚಿದಾನಂದ 

ವೃತ್ತಿಯಲ್ಲಿ ವ್ಯಾಪಾರಿಯಾಗಿರುವ ಚಿದಾನಂದರಿಗೆ ದಿನವಿಡೀ ಬಿಡುವಿಲ್ಲದ ದುಡಿತ. ಅಪರೂಪದಲ್ಲೊಮ್ಮೆ ಅತಿಯಾದ ಆಯಾಸ ಹಾಗೂ ತಲೆತಿರುಗಿದಂತಾಗಲು ತನ್ನ ವಯಸ್ಸೇ ಕಾರಣವೆಂದು ಅವರು ನಂಬಿದ್ದರು. ಅದೊಂದು ದಿನ ವ್ಯಾಪಾರ ಮುಗಿಸಿ ಮನೆಗೆ ಬಂದು ಸಾಕಷ್ಟು ವಿಶ್ರಾಂತಿ ಪಡೆದ ಬಳಿಕವೂ, ಆಯಾಸ ಮತ್ತು ತಲೆತಿರುಗುವುದು ಮಾತ್ರ ಕಡಿಮೆಯಾಗಿರಲಿಲ್ಲ. 

ಮರುದಿನ ಪರಿಚಯದ ವೈದ್ಯರಲ್ಲಿ ತೆರಳಿ ಪರೀಕ್ಷಿಸಿಕೊಂಡ ಚಿದಾನಂದರಿಗೆ ಅಧಿಕ ರಕ್ತದೊತ್ತಡ ಇರುವುದು ಪತ್ತೆಯಾಗಿತ್ತು. ಔಷದ ಸೇವನೆಗೆ ಒಪ್ಪದಿದ್ದ ರೋಗಿಗೆ ಆಹಾರದಲ್ಲಿ ಪಥ್ಯ, ಜೀವನಶೈಲಿಯಲ್ಲಿ ಬದಲಾವಣೆ ಹಾಗೂ ದಿನನಿತ್ಯ ನಡಿಗೆಗಳನ್ನು ಅನುಸರಿಸುವಂತೆ ಸೂಚಿಸಿದ ವೈದ್ಯರು, ವಾರದಲ್ಲಿ ಒಂದುಬಾರಿ ತನ್ನಲ್ಲಿ ಬಂದು ತಪಾಸಣೆ ಮಾಡಿಸಿಕೊಳ್ಳಲು ಸೂಚಿಸಿದ್ದರು. ತಿಂಗಳೊಪ್ಪತ್ತಿನಲ್ಲಿ ಚಿದಾನಂದರ ರಕ್ತದೊತ್ತಡ ಗಮನಾರ್ಹವಾಗಿ ಕಡಿಮೆಯಾದರೂ, ಅವರನ್ನು ಕಾಡುತ್ತಿದ್ದ ಅತಿಆಯಾಸ ಮತ್ತು ತಲೆತಿರುಗುವಿಕೆಗಳು ಕಿಂಚಿತ್ ಕೂಡಾ ಕಡಿಮೆಯಾಗಿರಲಿಲ್ಲ. ಇದೇ ಕಾರಣದಿಂದಾಗಿ ಮಧುಮೇಹವನ್ನು ಸಂದೇಹಿಸಿದ ವೈದ್ಯರು ಅವಶ್ಯಕ ಪರೀಕ್ಷೆಗಳನ್ನು ನಡೆಸಿದಾಗ, ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ತೀವ್ರವಾಗಿ ಹೆಚ್ಚಿರುವುದು ತಿಳಿದುಬಂದಿತ್ತು. ವಿಷಯವರಿತ ಚಿದಾನಂದರಿಗೆ ಆಕಾಶವೇ ತಲೆಗೆ ಬಿದ್ದಂತಾಗಿತ್ತು. ವೈದ್ಯರ ಅಭಿಪ್ರಾಯದಂತೆ ಔಷದ ಸೇವನೆ ಅನಿವಾರ್ಯವಾಗಿದ್ದರೂ, ಚಿದಾನಂದರು ಮಾತ್ರ ಇದಕ್ಕೆ ಸುತರಾಂ ಸಿದ್ಧರಿರಲಿಲ್ಲ. ಏಕೆಂದರೆ ಜೀವನಪರ್ಯಂತ ಔಷದಸೇವನೆ ಅವರಿಗೆ ಇಷ್ಟವಿರಲಿಲ್ಲ!. 

ಆದರೆ ಔಷದವನ್ನೇ ಸೇವಿಸದೆ ಇದ್ದಲ್ಲಿ ಮಧುಮೇಹವು ಹತೋಟಿಗೆ ಬಾರದ ಕಾರಣದಿಂದಾಗಿ ರೋಗಿಗೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯೂ ಇತ್ತು.ಈ ಬಗ್ಗೆ ವೈದ್ಯರು ಪರಿಪರಿಯಾಗಿ ಸಮಾಧಾನ ಹೇಳಿದರೂ, ಚಿದಾನಂದರು ಮಾತ್ರ ತಮ್ಮ ಹಠವನ್ನು ಬಿಡಲೇ ಇಲ್ಲ. ತನ್ನ ತಲೆಯ ಮೇಲೊಂದು ತೂಗುಕತ್ತಿ ನೇತಾಡುತ್ತಿರುವುದರ ಅರಿವು ಅವರಿಗಿರಲಿಲ್ಲ. 

ಅನೇಕ ರೋಗಿಗಳು ಚಿದನಂದರಂತೆಯೇ ತಮ್ಮ ತಪ್ಪುಕಲ್ಪನೆ ಮತ್ತು ಅತಿಯಾದ ಆತ್ಮವಿಶ್ವಾಸದಿಂದಾಗಿ ಚಿಕಿತ್ಸೆಯನ್ನೇ ನಿರಾಕರಿಸುವುದುಂಟು. ಆದರೆ ಇಂತಹ ವ್ಯಕ್ತಿಗಳು ತಮ್ಮನ್ನು ಬಾಧಿಸುತ್ತಿರುವ ಗಂಭೀರ- ಮಾರಕ ವ್ಯಾಧಿಗಳನ್ನು ನಿಯಂತ್ರಿಸಲು ಔಷದ ಸೇವನೆ ಅನಿವಾರ್ಯ ಎನ್ನುವುದನ್ನು ನಿರ್ಲಕ್ಷಿಸಿ, ಮುಂದೊಂದು ದಿನ ಯಾವುದೇ ಪೂರ್ವಸೂಚನೆಯನ್ನು ನೀಡದೆ ಬಂದೆರಗಬಲ್ಲ ಅಪಾಯಗಳಿಗೆ ಬಲಿಯಾಗುತ್ತಾರೆ. 

ವೈದ್ಯರ ಕ್ಯಾನ್ಸರ್ ಗುಣವಾಯಿತು 

ಎಪ್ಪತ್ತರ ಇಳಿವಯಸ್ಸಿನಲ್ಲಿ ಕಮಲಮ್ಮನಿಗೆ ಆಕಸ್ಮಿಕವಾಗಿ ಸ್ತನದ ಕ್ಯಾನ್ಸರ್ ಪತ್ತೆಯಾಗಿತ್ತು. ಸುಮಾರು ಹದಿನೈದು ವರ್ಷಗಳಿಂದ ತನ್ನ ಎಡಸ್ತನದಲ್ಲಿ ಗೆಡ್ಡೆಯೊಂದು ಬೆಳೆಯುತ್ತಿದ್ದು, ಸಾಕಷ್ಟು ನೋವಿದ್ದರೂ ಮನೆಮಂದಿಗೆ ತಿಳಿಸದೇ ಇದ್ದ ಕಮಲಮ್ಮನ ಸಮಸ್ಯೆ ಇದೀಗ ಉಲ್ಬಣಿಸಿತ್ತು. ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದ ವೈದ್ಯರು, ಮುಂದಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ತೆರಳಲು ಸೂಚಿಸಿದ್ದರು. ವೈದ್ಯರ ಸಲಹೆಯನ್ನು ಮನ್ನಿಸದೆ ಅನ್ಯ ವಿಧದ ಚಿಕಿತ್ಸೆಗೆ ಮೊರೆಹೋದ ಕಮಲಮ್ಮನ ದೇಹಸ್ಥಿತಿಯು ಚಿಂತಾಜನಕವಾಗಿತ್ತು. ಈ ಸಂದರ್ಭದಲ್ಲಿ ಆಕೆಯನ್ನು ಕಾಣಲು ಬಂದಿದ್ದ ಸಂಬಂಧಿಯೊಬ್ಬರು ಘಟ್ಟದ ಮೇಲಿನ ಊರೊಂದರಲ್ಲಿ ಕ್ಯಾನ್ಸರ್ ವ್ಯಾಧಿಗೆ ಚಿಕಿತ್ಸೆ ನೀಡುವ ವ್ಯಕ್ತಿಯೊಬ್ಬರಿದ್ದು, ಅವರ ಚಿಕಿತ್ಸೆಯಿಂದ ಜಿಲ್ಲೆಯ ಖ್ಯಾತ ವೈದ್ಯರೊಬ್ಬರನ್ನು ಪೀಡಿಸುತ್ತಿದ್ದ ಮಾರಕ ಕ್ಯಾನ್ಸರ್ ಗುಣವಾಗಿದ್ದ ಘಟನೆಯನ್ನು ಹೇಳಿದ್ದರು. ಮರುದಿನವೇ ಈ "ವೈದ್ಯ" ರ ಬಳಿ ತೆರಳಿದ ಕಮಲಮ್ಮನ ಮಗನು, ಸಾಕಷ್ಟು ಹಣತೆತ್ತು ಅವಶ್ಯಕ ಔಷದಗಳನ್ನು ತಂದು ತನ್ನ ತಾಯಿಗೆ ನೀಡಲಾರಂಭಿಸಿದ್ದನು. ಆದರೆ ಮುಂದಿನ ಮೂರೇ ವಾರಗಳಲ್ಲಿ ತೀವ್ರವಾಗಿ ಉಲ್ಬಣಿಸಿದ್ದ ವ್ಯಾಧಿಯಿಂದಾಗಿ, ಕಮಲಮ್ಮ ಕೊನೆಯುಸಿರು ಎಳೆದಿದ್ದರು!. 

ನಿಮ್ಮ ಬಂಧುಮಿತ್ರರು ಉಚಿತವಾಗಿ ನೀಡುವ ಸಲಹೆಯಂತೆ, ಯಾರೋ ಹೇಳಿದಂತೆ ಹಾಗೂ ಯಾವುದೋ ವ್ಯಕ್ತಿ ಅಥವಾ ವೈದ್ಯರು, ಯಾರನ್ನೋ ಬಾಧಿಸುತ್ತಿದ್ದ ಕ್ಯಾನ್ಸರ್(ಅಥವಾ ಅನ್ಯ ಗಂಭೀರ ಮತ್ತು ಶಾಶ್ವತ ಪರಿಹಾರವಿಲ್ಲದ ಕಾಯಿಲೆಗಳನ್ನು) ಗುಣಪಡಿಸಿದರು ಎನ್ನುವ ವದಂತಿಗಳನ್ನು ನಂಬಿ ಮೋಸಹೋಗದಿರಿ. ನೀರಿನಲ್ಲಿ ಮುಳುಗುತ್ತಿರುವ ವ್ಯಕ್ತಿಗೆ ಹುಲ್ಲುಕಡ್ಡಿಯೂ ಆಸರೆ ಎನ್ನುವಂತೆ, ಗುಣಪಡಿಸಲಾಗದ ಕಾಯಿಲೆಗಳನ್ನು ನಿಶ್ಚಿತವಾಗಿ ಗುಣಪಡಿಸುವುದಾಗಿ  ನಂಬಿಸಿ ಹಣವನ್ನು ದೋಚುವ ನಕಲಿವೈದ್ಯರಿಗೆ ನಮ್ಮ ದೇಶದಲ್ಲಿ ಕೊರತೆಯಿಲ್ಲ ಎನ್ನುವುದನ್ನು ಮರೆಯದಿರಿ!. 

ಮಧುಮೇಹ ಗುಣವಾಗದೇ?

ಅನೇಕ ವರ್ಷಗಳಿಂದ ಮಧುಮೇಹ ವ್ಯಾಧಿಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದ ಮಧುಸೂಧನರಿಗೆ, ಎರಡು ವರ್ಷಗಳಿಂದ ಮಾತ್ರೆಗಳ ಸೇವನೆಯಿಂದ ಅಪೇಕ್ಷಿತ ಪರಿಣಾಮ ದೊರೆಯದ ಕಾರಣದಿಂದಾಗಿ ಪ್ರತಿದಿನ ಇನ್ಸುಲಿನ್ ಇಂಜೆಕ್ಷನ್ ಪಡೆಯುವಂತೆ ವೈದ್ಯರು ಸೂಚಿಸಿದ್ದರು.ಮಧುಸೂಧನರಿಗೆ ಸಾಕಷ್ಟು ಆರ್ಥಿಕ ಸಮಸ್ಯೆಗಳಿದ್ದರೂ, ರೋಗವನ್ನು ಹತೋಟಿಯಲ್ಲಿರಿಸಲು ನಿಯಮಿತವಾಗಿ ಇನ್ಸುಲಿನ್ ಪಡೆದುಕೊಳ್ಳುವುದು ಅನಿವಾರ್ಯವಾಗಿತ್ತು. ಆದರೆ ಸುಮಾರು ಎರಡು ವರ್ಷಗಳ ಬಳಿಕ ಹಠಾತ್ತನೆ ಇಂಜೆಕ್ಷನ್ ಪಡೆದುಕೊಳ್ಳುವುದನ್ನು ಅವರು ನಿಲ್ಲಿಸಿರಲು ಕಾರಣವೇನೆಂದು ವೈದ್ಯರಿಗೂ ತಿಳಿದಿರಲಿಲ್ಲ. 

ಒಂದು ವಾರದ ಬಳಿಕ ಮಧುಸೂಧನರ ಸೊಸೆ ವೈದ್ಯರ ಚಿಕಿತ್ಸಾಲಯಕ್ಕೆ ಧಾವಿಸಿ, ತನ್ನ ಮಾವ ಪ್ರಜ್ನೆತಪ್ಪಿ ಬಿದ್ದಿದ್ದು ತಕ್ಷಣ ಮನೆಗೆ ಬರುವಂತೆ ವಿನಂತಿಸಿದ್ದಳು. ವಿಳಂಬಿಸದೆ ರೋಗಿಯ ಮನೆಗೆ ತೆರಳಿದ ವೈದ್ಯರಿಗೆ, ಮಧುಸೂಧನರ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಅತಿಯಾಗಿ ಪ್ರಜ್ನೆತಪ್ಪಿರುವುದು ಖಚಿತವಾಯಿತು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆಯನ್ನು ನೀಡಿದ್ದರಿಂದ ರೋಗಿಯ ಪ್ರಾಣ ಉಳಿಯಿತು. ಮುಂದಿನ ಮೂರೇ ದಿನಗಳಲ್ಲಿ ಚೇತರಿಸಿಕೊಂಡ ಮಧುಸೂಧನರು ಮತ್ತೆ ಮನೆಗೆ ಮರಳಿದ್ದರು. 

ಮರಿದಿನ ಚುಚ್ಚುಮದ್ದು ಪಡೆದುಕೊಳ್ಳಲು ಬಂದಿದ್ದ ಮಧುಸೂಧನರಲ್ಲಿ ಚಿಕಿತ್ಸೆಯನ್ನು ನಿಲ್ಲಿಸಿದ ಕಾರಣವೇನೆಂದು ವೈದ್ಯರು ಪ್ರಶ್ನಿಸಿದಾಗ, ಕಳೆದ ಎರಡು ವರ್ಷಗಳಿಂದ ತಾನು ಪಡೆದಿರುವ ನೂರಾರು ಇಂಜೆಕ್ಷನ್ ಗಳ ಪರಿಣಾಮವಾಗಿ ತನ್ನ ಮಧುಮೇಹ ಗುಣವಾಗಿದೆಯೇ ಎಂದು ಪರೀಕ್ಷಿಸುವ ಸಲುವಾಗಿ ಎಂದು ಉತ್ತರಿಸಿದ ರೋಗಿಯ ಮಾತುಗಳನ್ನು ಆಲಿಸಿದ ವೈದ್ಯರು ಮೂಕವಿಸ್ಮಿತರಾಗಿದ್ದರು.

ಮುಂದೆ ಇಂತಹ ಸಾಹಸಕ್ಕೆ ಕೈಹಾಕದಿರಿ ಎಂದು ಎಚ್ಚರಿಕೆಯನ್ನು ನೀಡಿದ ವೈದ್ಯರು, ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಇದುವರೆಗೆ ಯಾರೂ ಸಂಶೋಧಿಸಿಲ್ಲ ಎಂದು ಹೇಳಿದ್ದರು. ಆದರೆ ಕಾರಣಾಂತರಗಳಿಂದ ಮುಂದಿನ ಮೂರೇ ತಿಂಗಳುಗಳ ಬಳಿಕ ಪುನರಪಿ ಇದೇ ಪ್ರಯೋಗ ಮಾಡಿದ್ದ ಮಧುಸೂಧನರು, ಹೃದಯಾಘಾತಕ್ಕೆ ಬಲಿಯಾಗಿದ್ದರು. 

ಆಯುರ್ವೇದ ಶಾಸ್ತ್ರದಲ್ಲಿ ಮಾನವನು ಗೊತ್ತಿದ್ದೂ ಮಾಡುವ ಅಪರಾಧಗಳಿಗೆ "ಪ್ರಜ್ಞಾಪರಾಧ" ಎನ್ನುತ್ತಾರೆ. ಸಾಮಾನ್ಯವಾಗಿ ಇಂತಹ ಪ್ರಜ್ಞಾಪರಾಧಗಳು ರೋಗಿಯ ಮರಣದಲ್ಲಿ ಪರ್ಯವಸಾನಗೊಳ್ಳುವುದು ಅಪರೂಪವೇನಲ್ಲ. ಶಾಶ್ವತ ಪರಿಹಾರವಿಲ್ಲದ ವ್ಯಾಧಿಗಳಿಗೆ ಜೀವನ ಪರ್ಯಂತ ಔಷದ ಸೇವನೆ ಅತ್ಯವಶ್ಯಕ ಎನ್ನುವುದನ್ನು ತಿಳಿದ ಬಳಿಕವೂ, ಔಷದ ಸೇವಿಸದೇ ತಮ್ಮ ವ್ಯಾಧಿಯನ್ನು ಇನ್ನಷ್ಟು ಉಲ್ಬಣಿಸಿಕೊಂಡು ಅಕಾಲಿಕ ಮರಣಕ್ಕೆ ಈಡಾಗುವುದು ಪ್ರಜ್ಞಾಪರಾಧವೇ ಹೊರತು ಬೇರೇನೂ ಅಲ್ಲ.

ಕೇಶವನ ಕೆಮ್ಮು ಗುಣವಾಗದೇಕೆ?

ಕಳೆದ ಏಳುದಿನಗಳಿಂದ ತೀವ್ರ ಕೆಮ್ಮು ಮತ್ತು ಜ್ವರಗಳಿಂದ ಬಳಲುತ್ತಿದ್ದ ಕೇಶವನು ವೈದ್ಯರ ಬಳಿ ತನ್ನ ಕಾಯಿಲೆಯ ವಿವರಗಳನ್ನು ಹೇಳುತ್ತಾ, ಈ ಕಾಯಿಲೆಯ ಚಿಕಿತ್ಸೆಗಾಗಿ ಕಳೆದ ಆರುದಿನಗಳಲ್ಲಿ ತಾನು ಭೇಟಿಯಾಗಿದ್ದ ಆರು ವೈದ್ಯರ ಬಗ್ಗೆ ಕಿಡಿಕಾರಿದ್ದನು. ಕೇಶವನ ಮಾತುಗಳನ್ನು ಆಲಿಸಿದ ವೈದ್ಯರು, ಆತನಿಗೆ ಚಿಕಿತ್ಸೆಯನ್ನು ನೀಡಲು ನಿರಾಕರಿಸಿದ್ದರು. ಇದರಿಂದ ಸಿಟ್ಟಿಗೆದ್ದ ಕೇಶವನು ವೈದ್ಯರೊಂದಿಗೆ ಜಗಳಕ್ಕೆ ಇಳಿದಿದ್ದನು. ಚಿಕಿತ್ಸೆಯನ್ನು ನೀಡಲು ನಿರಾಕರಿಸಿದ ಕಾರಣವನ್ನು ಶಾಂತ ಚಿತ್ತದಿಂದ ವಿವರಿಸಿದ ವೈದ್ಯರು, ನಾಳೆ ನೀನು ಭೇಟಿಯಾಗಲಿರುವ ವೈದ್ಯರ ಬಳಿ ನನ್ನನ್ನೂ ಸೇರಿಸಿ ದೂಷಿಸುವುದು ಬೇಡ ಎನ್ನುವ ಕಾರಣದಿಂದಾಗಿ ನಿನಗೆ ಚಿಕಿತ್ಸೆ ನೀಡುವುದಿಲ್ಲ ಎಂದಿದ್ದರು!. 

ತನ್ನ ತಪ್ಪನ್ನು ಅರಿತ ಕೇಶವನು ವೈದ್ಯರಲ್ಲಿ ಕ್ಷಮೆ ಯಾಚಿಸಿದನು. ಬಳಿಕ ಹತ್ತಾರು ಸ್ನೇಹಿತರ ಸಲಹೆಯಂತೆ ನಿಮ್ಮಲ್ಲಿ ಬಂದಿದ್ದು, ನನ್ನ ಸಮಸ್ಯೆಯು ತಮ್ಮಿಂದ ಬಗೆಹರಿಯುತ್ತದೆ ಎನ್ನುವ ವಿಶ್ವಾಸ ಇರುವುದಾಗಿ ಹೇಳಿದ್ದನು. ಕೇಶವನನ್ನು ಪರೀಕ್ಷಿಸಿದ ವೈದ್ಯರಿಗೆ ಶ್ವಾಸಕೋಶದ ಸೋಂಕು ಪತ್ತೆಯಾಗಿತ್ತು.ಬಳಿಕ ತಾನು ಸೂಚಿಸಿದ ಅವಧಿಗೆ ಚಿಕಿತ್ಸೆ ಪಡೆಯಲೇಬೇಕು ಎನ್ನುವ ಶರತ್ತಿನೊಂದಿಗೆ, ವೈದ್ಯರು ಒಂದು ವಾರದ ಔಷದಗಳನ್ನು ನೀಡಿದ್ದರು. ಮುಂದಿನ ವಾರ ವೈದ್ಯರನ್ನು ಭೇಟಿಯಾಗಲು ಬಂದಿದ್ದ ಕೇಶವನ ಮುಖದಲ್ಲಿನ ಮಂದಹಾಸವೇ, ಚಿಕಿತ್ಸೆ ಫಲಪ್ರದವೆನಿಸಿದೆ ಎಂದು ಸೂಚಿಸುತ್ತಿತ್ತು. 

ಸಣ್ಣಪುಟ್ಟ ಕಾಯಿಲೆಗಳಿಗೆ ಕೇವಲ ಮೂರು ಹೊತ್ತಿನ ಔಷದ ಸಾಕೆಂದು ತಾವಾಗಿ ನಿರ್ಧರಿಸುವ ಕೇಶವನಂತಹ ರೋಗಿಗಳು, ವೈದ್ಯರ ಸಲಹೆ ಸೂಚನೆಗಳಿಗೆ ಬೆಲೆಯನ್ನೇ ನೀಡುವುದಿಲ್ಲ. ಮೂರು ಹೊತ್ತಿನ ಔಷದವನ್ನು ಸೇವಿಸಿದ ಬಳಿಕ " ಕಾಯಿಲೆ ಗುಣವಾಗದೇ ಇರುವುದರಿಂದ", ಬಟ್ಟೆ ಬದಲಾಯಿಸಿದಂತೆಯೇ ವೈದ್ಯರನ್ನು ಬದಲಾಯಿಸಲು ಹಿಂಜರಿಯುವುದಿಲ್ಲ!. 

ಪ್ರಧಾನಿಗೆ ಚಿಕಿತ್ಸೆ ನೀಡಿದ ಭೂಪ!

೬೮ ವರ್ಷ ವಯಸ್ಸಿನ ಅನಸೂಯಮ್ಮನಿಗೆ "ಅಲ್ಜ್ಹೀ ಮರ್ಸ್" ಕಾಯಿಲೆ ತೀವ್ರಗೊಂಡ ಪರಿಣಾಮವಾಗಿ ಹಾಸಿಗೆ ಹಿಡಿದು ಮೂರು ತಿಂಗಳುಗಳೇ ಕಳೆದಿದ್ದವು. ಮನೆಮಂದಿಯೆಲ್ಲ ಮರುಗುವಷ್ಟು ಅಸಹಾಯಕರಾಗಿ, ಪುಟ್ಟ ಮಗುವಿನಂತೆ ತನ್ನ ಬೇಕು ಬೇಡಗಳ ಹಾಗೂ ಇಹಪರಗಳ ಅರಿವಿಲ್ಲದೆ ಅನಸೂಯಮ್ಮ ದಿನಕಳೆ
ಯುತ್ತಿದ್ದಲ್ಲಿ, ಸಮರ್ಪಕ ಚಿಕಿತ್ಸೆಯೇ ಇಲ್ಲದ ಈ ವ್ಯಾಧಿಯಿಂದ ಪತ್ನಿ ನರಳುತ್ತಿರುವುದನ್ನು ಕಂಡು ಕೃಷ್ಣರಾಯರೂ ಕೊರಗುತ್ತಿದ್ದರು. 

ಈ ಸಂದರ್ಭದಲ್ಲಿ ಅನಸೂಯಮ್ಮನನ್ನು ಕಾಣಲು ಬಂದಿದ್ದ ಸಂಬಂಧಿಕರೊಬ್ಬರ ಸಲಹೆಯಂತೆ, ಈ ವಿಲಕ್ಷಣ ಕಾಯಿಲೆಯನ್ನು ಗುಣಪಡಿಸಬಲ್ಲ ವ್ಯಕ್ತಿಯೊಬ್ಬರನ್ನು ಕೃಷ್ಣರಾಯರು ಭೇಟಿಯಾಗಿದ್ದರು. ರೋಗಿಯ ಭಾವಚಿತ್ರ ವೀಕ್ಷಣೆಯಿಂದಲೇ ಆಕೆಯು ಸಂಪೂರ್ಣ ಗುಣಮುಖಳಾಗಿ ೮೦ ವರ್ಷ ವಯಸಿನ ತನಕ ಬದುಕುವುದಾಗಿ ಈ "ಚಿಕಿತ್ಸಕ" ರು ಆಶ್ವಾಸನೆ ನೀಡಿದ್ದರು!. ಕಾಸ್ಮಿಕ್ ರೇಯ್ಸ್ ಮೂಲಕ ಇವರು ನೀಡುವ ಚಿಕಿತ್ಸೆಗೆ, ರೋಗಿಯನ್ನು ಕಾಣುವ ಅಥವಾ ಪರೀಕ್ಷಿಸುವ ಅವಶ್ಯಕತೆಯೇ ಇರಲಿಲ್ಲ. ೧೦೦ ರೂ. ಶುಲ್ಕ ನೀಡಿದೊಡನೆ ಈತನ ಚಿಕಿತ್ಸೆ ಆರಂಭವಾಗುತ್ತಿತ್ತು. 

ತನ್ನಲ್ಲಿ ಬಂದವರಿಗೆ ಮಾಜಿ ಪ್ರಧಾನಿ ವಾಜಪೇಯಿಯವರ ಎರಡು ಭಾವಚಿತ್ರಗಳನ್ನು ತೋರಿಸಿ, ಬಾಡಿದ ಮುಖದ ಚಿತ್ರವು ತನ್ನ ಚಿಕಿತ್ಸೆಗೆ ಮುನ್ನ ತೆಗೆದ ಹಾಗೂ ನಗುಮೊಗದ ಚಿತ್ರವು ತನ್ನ ಚಿಕಿತ್ಸೆಯ ಬಳಿಕ ತೆಗೆದಿದ್ದೆಂದು ಈತ ಹೇಳುತ್ತಿದ್ದನು. ಅಂತೆಯೇ ಇಂಗ್ಲೆಂಡ್ ನ ರಾಣಿ ಎಲಿಜಬೆತ್ ರ ಮಗ ಚಾರ್ಲ್ಸ್ ನ ಪುತ್ರ ಪ್ರಿನ್ಸ್ ವಿಲಿಯಮ್ಸ್ ಕೂಡಾ ತನ್ನಿಂದ ಚಿಕಿತ್ಸೆ ಪಡೆದಿದ್ದರು ಎಂದು ಬೊಗಳೆ ಬಿಡುವ ಈತನು, ಬಿ ಬಿ ಸಿ ಯ ವರದಿಗಾರರ ಕೈಯ್ಯಲ್ಲಿ ಸಿಕ್ಕಿಬಿದ್ದಿದ್ದು ಸತ್ಯ. ತನಗೆ ಯಾವುದೇ ಪಬ್ಲಿಸಿಟಿ ಬೇಡವೆಂದು ಹೇಳುತ್ತಿದ್ದ ಈ ವ್ಯಕ್ತಿಯು, ದೇಶ ವಿದೇಶಗಳ ಗಣ್ಯರಿಗೆ ತಾನು ಚಿಕಿತ್ಸೆ ನೀಡಿ ಗುಣಪಡಿಸಿರುವುದಾಗಿ ಬುರುಡೆ ಬಿಡುವುದೇ ಈತನ ನೆಚ್ಚಿನ "ಪಬ್ಲಿಸಿಟಿ"!. 

ಅದೇನೇ ಇರಲಿ, ಇದೀಗ ಅನಸೂಯಮ್ಮನಿಗೆ ಈತನ ಚಿಕಿತ್ಸೆ ಫಲಪ್ರದವೆನಿಸಿದಲ್ಲಿ, ಮುಂದಿನ ವರ್ಷ ವೈದ್ಯಕೀಯ ಸಂಶೋಧನೆಗಾಗಿ ನೀಡುವ " ನೊಬೆಲ್ ಪ್ರಶಸ್ತಿ" ಈ ಚಿಕಿತ್ಸಕನಿಗೆ ದೊರೆಯುವುದರಲ್ಲಿ ಸಂದೇಹವಿಲ್ಲ!. 

ನಿಮಗಿದು ತಿಳಿದಿರಲಿ 

ನಿಮ್ಮನ್ನು ಕಾಡುವ ಆರೋಗ್ಯದ ಸಮಸ್ಯೆಗಳ ಪರಿಹಾರಕ್ಕಾಗಿ ವೈದ್ಯರನ್ನು ಭೇಟಿಯಾದಾಗ, ಕಾಯಿಲೆಯ ಸಂಕ್ಷಿಪ್ತ ವಿವರಗಳನ್ನು ತಿಳಿಸಿ. ಕಾಯಿಲೆಯ ಅವಧಿ ಮತ್ತು ತೀವ್ರತೆಗಳನ್ನು ಮುಚ್ಚಿಡಬೇಡಿ. ವೈದ್ಯರು ನಿಮ್ಮನ್ನು ಪರೀಕ್ಷಿಸಿದ ಬಳಿಕ ರೋಗ ನಿರ್ಧಾರ ಮತ್ತು ಅವಶ್ಯಕ ಚಿಕಿತ್ಸೆಯ ವಿವರಗಳನ್ನು ಕೇಳಿ ತಿಳಿದುಕೊಳ್ಳಿ. ವೈದ್ಯರು ಇದನ್ನು ತಿಳಿಸುವ ಮುನ್ನವೇ ಮೂರು ಹೊತ್ತಿನ ಔಷದಗಳು ಸಾಕೆಂದು ಹೇಳದಿರಿ. ನಿಮ್ಮ ಕಾಯಿಲೆಯ ಅವಧಿ, ತೀವ್ರತೆ, ನಿಮ್ಮ ವಯಸ್ಸು,ಶರೀರದ ತೂಕ ಹಾಗೂ ನಿಮ್ಮಲ್ಲಿರಬಹುದಾದ ಅನ್ಯ ವ್ಯಾಧಿಗಳ ಇರುವಿಕೆಯನ್ನು ಹೊಂದಿಕೊಂಡು, ಚಿಕಿತ್ಸೆಯ ಅವಧಿ ಮತ್ತು ಔಷದಗಳ ಪ್ರಮಾಣ ನಿರ್ಧರಿಸಲ್ಪಡುವುದು. ವೈದ್ಯರು ಸೂಚಿಸಿದಷ್ಟು ಕಾಲ ಔಷದಗಳನ್ನು ಸೇವಿಸುವುದು ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಎನ್ನುವುದನ್ನು ನೆನಪಿಡಿ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೬-೧೧-೨೦೦ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 


No comments:

Post a Comment