Sunday, March 23, 2014

Karnataka MLA's foreign tour





  ಪ್ರಜೆಗಳ ದುಡ್ಡು: ಶಾಸಕರ ವಿದೇಶ ಯಾತ್ರೆ!

ಯಾರದ್ದೋ ದುಡ್ಡು, ಎಲ್ಲಮ್ಮನ ಜಾತ್ರೆ ಎನ್ನುವ ಆಡುಮಾತನ್ನು ನೀವೂ ಕೇಳಿರಲೇಬೇಕು. ಹಾಗಿದ್ದಲ್ಲಿ "ಪ್ರಜೆಗಳ ದುಡ್ಡು, ಶಾಸಕರ ವಿದೇಶ ಯಾತ್ರೆಯ ಬಗ್ಗೆ ಅರಿತುಕೊಳ್ಳುವ ಕುತೂಹಲ ನಿಮ್ಮಲ್ಲಿದ್ದಲ್ಲಿ, ಈ ಲೇಖನವನ್ನು ಓದಲೇಬೇಕು. ಕರ್ನಾಟಕದ ಪ್ರಜೆಗಳು ತೆತ್ತ ತೆರಿಗೆಯ ಹಣವನ್ನು ತಮ್ಮ ಮೋಜು-ಮಸ್ತಿಗಳಿಗಾಗಿ ನಮ್ಮ ಶಾಸಕರು ಯಾವ ರೀತಿಯಲ್ಲಿ ಪೋಲು ಮಾಡುತ್ತಾರೆ, ಎನ್ನುವ ಬಗ್ಗೆ ಮಾಹಿತಿ ಹಕ್ಕು ಕಾಯಿದೆಯನ್ವಯ ಬಳಕೆದಾರರ ಹಿತರಕ್ಷಣಾ ವೇದಿಕೆಯು ಪಡೆದುಕೊಂಡಿರುವ ಅಧಿಕೃತ ಮಾಹಿತಿ ಇಲ್ಲಿದೆ. 
-------------             ----------          --------------             --------------              -------------------         ------------

ಒಂದುಬಾರಿ ಚುನಾವಣೆಯಲ್ಲಿ ಗೆದ್ದು ಶಾಸಕರಾದ ನಮ್ಮ ರಾಜ್ಯದ ರಾಜಕಾರಣಿಗಳಿಗೆ ಸರ್ಕಾರದಿಂದ ಲಭಿಸುವ "ಪುಕ್ಕಟೆ ಭಾಗ್ಯಗಳು" ಅಸಂಖ್ಯ. ಇಂತಹ ಭಾಗ್ಯಗಳಲ್ಲಿ ವಿಧಾನ ಮಂಡಲಗಳ ವಿವಿಧ ಸಮಿತಿಗಳ ಸದಸ್ಯರಾಗಿರುವ ಶಾಸಕರಿಗೆ ದೊರೆಯುವ " ಪುಕ್ಕಟೆ ವಿದೇಶ ಪ್ರವಾಸ" ದ ಭಾಗ್ಯವೂ ಒಂದಾಗಿದೆ!. ರಾಜ್ಯದ ಪ್ರಜೆಗಳು ತೆತ್ತ ತೆರಿಗೆಯ ಹಣವನ್ನು ವ್ಯಯಿಸಿ,ವಿದೇಶ ಪ್ರವಾಸವನ್ನು ಕೈಗೊಳ್ಳುವ ನಮ್ಮ ಶಾಸಕರ ಮೋಜು- ಮಸ್ತಿಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ಪ್ರತಿಕೂಲ ವರದಿಗಳ ಪರಿಣಾಮವಾಗಿಯೋ ಏನೋ, ಇದನ್ನು ವಿದೇಶಿ ಅಧ್ಯಯನ ಪ್ರವಾಸವೆಂದು ಪುನರ್ ನಾಮಕರಣ ಮಾಡಲಾಗಿತ್ತು. ಜೊತೆಗೆ ಪ್ರವಾಸದಿಂದ ಮರಳಿದ ಬಳಿಕ, ಅಧ್ಯಯನದ ವರದಿಯೊಂದನ್ನು ಸಭಾದ್ಯಕ್ಷರಿಗೆ ನೀಡುವ ಸಂಪ್ರದಾಯವೂ ಆರಂಭವಾಗಿತ್ತು. ವಿಶೇಷವೆಂದರೆ ಕೇವಲ ಕಾಟಾಚಾರಕ್ಕಾಗಿ ಸಲ್ಲಿಸುವ ಈ ವರದಿಗಳು ನಿಜಕ್ಕೂ ಶಾಲಾ ಮಕ್ಕಳ 'ಪ್ರವಾಸ ಕಥನ' ದಂತಿದ್ದು, ನಗೆಹಬ್ಬದ ಹಾಸ್ಯ ಚಟಾಕಿಗಳಿಗಿಂತ ತಮಾಷೆಯಾಗಿದೆ. 

ಇದಕ್ಕೂ ಮಿಗಿಲಾಗಿ ಈ ಸದನ ಸಮಿತಿಗಳ ಕರ್ತವ್ಯ ಹಾಗೂ ಹೊಣೆಗಾರಿಕೆಗಳಿಗೆ ಮತ್ತು ಸಮಿತಿಗಳ ಸದಸ್ಯರು ಕೈಗೊಳ್ಳುವ ವಿದೇಶ ಪ್ರವಾಸಗಳಿಗೆ ಏನೇನೂ ಸಂಬಂಧವಿಲ್ಲ. ಉದಾಹರಣೆಗೆ ಸದನದ ಅಂದಾಜುಗಳ ಸಮಿತಿ, ಅರ್ಜಿಗಳ ಸಮಿತಿ, ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ, ಸರ್ಕಾರಿ ಭರವಸೆಗಳ ಸಮಿತಿ, ಗ್ರಂಥಾಲಯಗಳ ಸಮಿತಿ, ಶಾಸಕರ ಭವನದ ವಸತಿ ಸೌಕರ್ಯಗಳ ಸಮಿತಿ ಮತ್ತು ಇತರ ಸಮಿತಿಗಳ ಸದಸ್ಯರು ವಿದೇಶಿ ಅಧ್ಯಯನ ಪ್ರವಾಸ ಕೈಗೊಳ್ಳುವ ಉದ್ದೇಶವೇನು?, ಹಾಗೂ ಈ ಪ್ರವಾಸಗಳಿಂದ ಆಯಾ ಸಮಿತಿಗಳ ಕೆಲಸ ಕಾರ್ಯಗಳು ಮತ್ತು ಇತರ ಹೊಣೆಗಾರಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಅಥವಾ ಅಭಿವೃದ್ಧಿಪಡಿಸಲು ಈ ಪ್ರವಾಸಗಳು ಅವಶ್ಯಕವೇ?, ಎನ್ನುವ ಪ್ರಶ್ನೆಗೆ ಉತ್ತರ ದೊರೆಯುವ ಸಾಧ್ಯತೆಗಳೇ ಇಲ್ಲ. ಆದರೆ ಸದನ ಸಮಿತಿಗಳು ವಿದೇಶ ಪ್ರವಾಸದ ಸಂದರ್ಭದಲ್ಲಿ ಭೇಟಿ ನೀಡಿದ್ದ ದೇಶಗಳ ಯಾದಿಯಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಮಕಾವೋ, ಥಾಯ್ಲೆಂಡ್, ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್, ಜರ್ಮನಿ, ಸ್ವಿಟ್ಜರ್ಲೆಂಡ್, ಬೆಲ್ಜಿಯಂ, ಇಟಲಿ, ಹಾಂಗ್ ಕಾಂಗ್, ಜಪಾನ್, ಸೌತ್ ಕೊರಿಯ, ನೆದರ್ಲೆಂಡ್, ಆಸ್ಟ್ರಿಯಾ,ಮತ್ತು ದುಬೈ ದೇಶಗಳ ಹೆಸರುಗಳಿದ್ದು, ಇವೆಲ್ಲ ದೇಶಗಳೂ ಪ್ರಖ್ಯಾತ ಪ್ರವಾಸಿ ತಾಣಗಳೇ ಆಗಿವೆ. ಅರ್ಥಾತ್, ನಮ್ಮ ಶಾಸಕರು ವಿದೇಶಿ ಅಧ್ಯಯನ ಪ್ರವಾಸದ ಸೋಗಿನಲ್ಲಿ ಮೋಜು- ಮಸ್ತಿ ಮಾಡುತ್ತಿರುವುದು ಧೃಢಪಡುತ್ತದೆ. ಆದರೂ  ಮಂಡಲಗಳ ಸದನ ಸಮಿತಿಗಳ ಪ್ರತಿಯೊಬ್ಬ  ಸದಸ್ಯರೂ, ತಮ್ಮ ಪುಕ್ಕಟೆ ವಿದೇಶಿ ಅಧ್ಯಯನ ಪ್ರವಾಸಗಳನ್ನು ನಿರ್ಲಜ್ಜೆಯಿಂದ ಸಮರ್ಥಿಸಿಕೊಳ್ಳುವುದು ನಂಬಲಸಾಧ್ಯವೆನಿಸುತ್ತದೆ!. 

ಯಾವುದೇ ಸಮಿತಿಯ ಸದಸ್ಯರು ವಿದೇಶ ಪ್ರವಾಸ ಕೈಗೊಳ್ಳುವ ಮುನ್ನ ಸಭಾದ್ಯಕ್ಷರ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಅಸ್ತಿತ್ವದಲ್ಲಿರುವ ನಿಯಮಗಳಂತೆ ಈ ಸಮಿತಿಗಳೊಂದಿಗೆ ಉಚಿತ ಪ್ರವಾಸವನ್ನು ಕೈಗೊಳ್ಳುವ ಅಧಿಕಾರಿಗಳ ಸಂಖ್ಯೆ ೩ ಕ್ಕೆ ಸೀಮಿತವಾಗಿದೆ. ಆದರೆ ೨೦೧೩ ರಲ್ಲಿ ವಿದೇಶ ಪ್ರವಾಸಕ್ಕೆ ತೆರಳಿದ್ದ ಅರ್ಜಿಗಳ ಸಮಿತಿಯ ಪ್ರವಾಸದ ತಂಡದಲ್ಲಿ ಕೇವಲ ೬ ಸದಸ್ಯರಿದ್ದು, ಇವರೊಂದಿಗೆ ಹೋಗಿದ್ದ ಅಧಿಕಾರಿಗಳ ಸಂಖ್ಯೆ ೭ ಆಗಿತ್ತು!. ವಿಶೇಷವೆಂದರೆ ಈ ಅಧಿಕಾರಿಗಳಲ್ಲಿ ಸಭಾಪತಿ ಮತ್ತು ಉಪ ಸಭಾಪತಿಗಳ ಆಪ್ತ ಸಹಾಯಕರು ಸೇರಿದ್ದು, ನಿಗದಿತ ಸಂಖ್ಯೆಗಿಂತ ಹೆಚ್ಚಾಗಿದ್ದ (ಏಳು ಜನ )ಅಧಿಕಾರಿಗಳ ತಂಡಕ್ಕೆ ಮಾನ್ಯ ಸಭಾಪತಿಗಳು ಅನುಮತಿಯನ್ನು ನೀಡಿದ್ದು ಹೇಗೆಂದು ನಮಗೂ ಅರ್ಥವಾಗುತ್ತಿಲ್ಲ. 

ಇವೆಲ್ಲಕ್ಕೂ ಮಿಗಿಲಾಗಿ ವಿದೇಶ ಪ್ರವಾಸದ ಸಂದರ್ಭದಲ್ಲಿ ಭೇಟಿ ನೀಡಿದ್ದ ದೇಶಗಳಲ್ಲಿನ ಜನರ ಶಿಸ್ತು, ಕಾನೂನು ಪರಿಪಾಲನೆ, ಸಾರಿಗೆ ವ್ಯವಸ್ಥೆ, ತ್ಯಾಜ್ಯ ನಿರ್ವಹಣೆ, ಉತ್ತಮ ಗುಣಮಟ್ಟದ ರಸ್ತೆಗಳು- ಕಾಲುದಾರಿಗಳು, ಆಕರ್ಷಕ ಉದ್ಯಾನವನಗಳೇ ಮುಂತಾದವುಗಳನ್ನು ನಮ್ಮ ದೇಶದಲ್ಲೂ ಅನುಷ್ಠಾನಗೊಳಿಸಬೇಕೆನ್ನುವ ಸಲಹೆ- ಸೂಚನೆಗಳನ್ನು ಪ್ರತಿಯೊಂದು ಸಮಿತಿಯ ವರದಿಗಳಲ್ಲಿ ಕಾಣಬಹುದಾಗಿದೆ. ಆದರೆ ಈ ಸದನ ಸಮಿತಿಗಳ ಯಾವುದೇ ಸಲಹೆ-ಸೂಚನೆಗಳನ್ನು ನಮ್ಮ ರಾಜ್ಯದಲ್ಲಂತೂ ಅನುಷ್ಠಾನಗೊಳಿಸಿಲ್ಲ ಎನ್ನುವುದನ್ನು, ಮಾಹಿತಿ ಹಕ್ಕು ಕಾಯಿದೆಯನ್ವಯ ನಾವು ಪಡೆದುಕೊಂಡಿರುವ " ಅಧಿಕೃತ ಮಾಹಿತಿ" ಗಳು ಸಾಬೀತುಪಡಿಸುತ್ತವೆ!. 

ವರದಿಗಳಲ್ಲಿನ ಆಯ್ದ ಅಣಿಮುತ್ತುಗಳು 

ರಾಜ್ಯದ ಶಾಸಕರು ಸಲ್ಲಿಸಿದ್ದ " ವಿದೇಶಿ ಅಧ್ಯಯನ ಪ್ರವಾಸ" ದ ವರದಿಗಳಲ್ಲಿನ ಅಣಿಮುತ್ತುಗಳಲ್ಲಿ  ಆಯ್ದ ಕೆಲವನ್ನು ಅಕ್ಷರಶಃ ಹಾಗೂ ಯಥಾವತ್ತಾಗಿ ಇಲ್ಲಿ ನಮೂದಿಸಲಾಗಿದೆ.

ಬ್ರೆಜಿಲ್ ದೇಶಕ್ಕೆ ಭೇಟಿ ನೀಡಿದ್ದ ಸಾರ್ವಜನಿಕ ಉದ್ಯಮಗಳ ಸಮಿತಿಯ ವರದಿಯಲ್ಲಿ ದಾಖಲಿಸಿದ ಭಾಗ- ಮಾನ್ಯ ಸದಸ್ಯರು ನದಿಯಲ್ಲೇ ತೇಲುತ್ತಿರುವ ಮನೆಗಳು, ಹೋಟೆಲ್ ಗಳು, ಪೆಟ್ರೋಲ್ ಪಂಪುಗಳನ್ನು ಖುದ್ದಾಗಿ ವೀಕ್ಷಿಸಿದರು. ಮಳೆಗಾಲದಲ್ಲಿ ಹೆಚ್ಚಿನ ನೀರು ಬರುವುದರಿಂದ ಜೀವ ಮತ್ತು ಆಸ್ತಿಪಾಸ್ತಿಗಳ ಹಾನಿ ತಡೆಗಟ್ಟುವ ತಂತ್ರವಾಗಿದೆ.
ಇಲ್ಲಿ ಎರಡು ನದಿಗಳು ( ಒಂದು ಕಪ್ಪುನೀರು ಇನ್ನೊಂದು ಬಿಳಿನೀರು) ಕೂಡುವ ಸಂಗಮವನ್ನು ಕಂಡು ಸಂತೋಷಪಡಲಾಯಿತು.

ಮಾನ್ಯ ಸದಸ್ಯರು ವಿಶೇಷವಾಗಿ ಗಮನಿಸಿರುವುದೇನೆಂದರೆ ಸುಮಾರು ಕಟ್ಟಡಗಳು ಅಪೂರ್ಣವಸ್ಥೆಯಲ್ಲಿದ್ದು ನಾಗರಿಕರ ತೆರಿಗೆ ಪಾವತಿಸದಿರಲು ಈ ತಂತ್ರ ಅಳವಡಿಸಿರುವುದು,ತೆರಿಗೆ ಪಾವತಿಸುತ್ತಿರುವ ನಾಗರೀಕ ವಲಯಗಳಲ್ಲಿ ಸಂಪೂರ್ಣ ಅಭಿವೃದ್ಧಿಯನ್ನು ಗಮನಿಸಲಾಯಿತು. 

ಲಿಮಾದಲ್ಲಿ ಮ್ಯೂಸಿಯಂ ಆಫ್ ಗೋಲ್ಡ್ ಭೇಟಿ- ವಿಶೇಷವಾಗಿ ಜಗತ್ತಿನಾದ್ಯಂತ ಸಂಗ್ರಹಿಸಲಾದ ಶಸ್ತ್ರಾಸ್ತಗಳಲ್ಲಿ ಟಿಪ್ಪುಸುಲ್ತಾನನ ಖಡ್ಗ ಮತ್ತು ಕೂರ್ಗ ರೈಫಲ್ ಗಮನಿಸಲಾಯಿತು. ನಮ್ಮ ರಾಷ್ಟ್ರದ ಹೈದರಾಬಾದ್ ಮ್ಯೂಸಿಯಂ ನಲ್ಲಿ ಇಷ್ಟೊಂದು ವಿಧದ ಶಸ್ರಾಸ್ತ್ರಗಳು ಇಲ್ಲದಿರುವುದನ್ನು ನೆನಪಿಸಲಾಯಿತು. 

ಪೀಸಾ ವಾಲುಗೋಪುರ ವೀಕ್ಷಣೆ- ಪೀಸಾದ ವಾಲುಗೋಪುರವು ಪ್ರಸ್ತುತ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುತ್ತದೆ. ಗೋಪುರವು ಅಲ್ಲಿನ ಚರ್ಚ್ ಎದುರಿಗೆ ವಾಲಿ ನಿಂತಿರುವುದು ಆಶ್ಚರ್ಯಕರ ಎಂದು ಸಮಿತಿಯ ಸದಸ್ಯರು ಅಚ್ಚರಿ ವ್ಯಕ್ತಪಡಿಸಿದರು. ಇದರ ಎತ್ತರ ೧೭೯ ಅಡಿ ಇದ್ದು ಬಲಭಾಗಕ್ಕೆ ಸ್ವಲ್ಪ ವಾಲಿರುತ್ತದೆ. ಗೋಪುರದ ಮೂಲ ಅಸ್ತಿಭಾರದಲ್ಲೇ ದೋಷವಿದೆ. ವರ್ಷದಿಂದ ವರ್ಷಕ್ಕೆ ಗೋಪುರವು ಸುಮಾರು ೦.೦೪ ಡಿಗ್ರಿಯಷ್ಟು ವಾಲುವ ಚಲನೆಯಲ್ಲಿದ್ದು, ಕೊನೆಗೆ ಭೂಮಿಗೆ ಬೀಳುವ ಸಂಭವ ಇರುವುದಾಗಿ ಸಮಿತಿಗೆ ತಿಳಿದುಬಂತು(!).  

ಐಫೆಲ್ ಟವರ್ - ಸಾರ್ವಜನಿಕ ಉದ್ಯಮಗಳ ಸಮಿತಿಯು ೨೦೦೯ ರಲ್ಲಿ ನೀಡಿದ್ದ ವರದಿ- ಗಗನಚುಂಬಿ ಕತ್ತದವಾದ ಐಫೆಲ್ ಟವರ್ ಹತ್ತಿರ ಕೋಚ್ ನಿಲ್ಲಿಸಲಾಗಿ, ಸಮಿತಿಯು ಖುದ್ದಾಗಿ ಐಫೆಲ್ ಟವರ್ ನ ವಿನ್ಯಾಸ, ಕಾಮಗಾರಿಗಳ ಗುಣಮಟ್ಟ ಮುಂತಾದವನ್ನು ವೀಕ್ಷಿಸಿತು. 

ಇಂಗ್ಲೆಂಡ್ ನ ರಾಜಕುಮಾರಿ  ಪ್ರಿನ್ಸ್(?)  ಡಯಾನ ದಿನಾಂಕ ೧- ೦೮- ೧೯೯೭ ರಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ನಗರದ ಮಧ್ಯಭಾಗದಲ್ಲಿ ಡಲ್ಮಾ ಟನೆಲ್ ಒಳಗಡೆ ಅಪಘಾತಕ್ಕೀಡಾಗಿ ಮೃತಪತ್ತಿರುವ ಸ್ಥಳವನ್ನು ವೀಕ್ಷಿಸಿತು. ಈ ಸ್ಥಳದಲ್ಲಿ ವರ್ಷವಿಡೀ ದೀಪ ಉರಿಯುತ್ತದೆ. 

ವೆನಿಸ್ ನಲ್ಲಿ ಸಮಿತಿಯ ಸಭೆ- ಯುರೋಪ್ ಖಂಡದ ಪ್ರವಾಸದ ಸಂದರ್ಭದಲ್ಲಿ ಸದಸ್ಯರು ವಿಶೇಷವಾಗಿ ಗಮನಿಸಿದ ಅಂಶಗಳನ್ನು ಸಮಿತಿಯ ಗಮನಕ್ಕೆ ತರಬೇಕೆಂದು ಕೋರಿದ್ದ ಅಧ್ಯಕ್ಷರು. 
ಸದಸ್ಯ ಬಿ. ರಮಾನಾಥ ರೈ- ಯುರೋಪ್ ದೇಶದ ಜನರು ಯಾವುದೇ ವಸ್ತುವನ್ನು ಉಚಿತವಾಗಿ ಅನುದಾನದ ರೂಪದಲ್ಲಾಗಲೀ, ಪರಿಹಾರದ ರೂಪದಲ್ಲಾಗಲೀ ಸರ್ಕಾರದಿಂದ ಪಡೆಯಲು ಇಚ್ಚಿಸುವುದಿಲ್ಲ. ಹಲವಾರು ಕ್ಷೇತ್ರಗಳಲ್ಲಿ ಜನರೇ ಸರ್ಕಾರದ ನೆರವಿಗೆ ಬರುತ್ತಾರೆ. ಆದರೆ ನಮ್ಮ ದೇಶದ ಜನರು ಪ್ರತಿಯೊಂದನ್ನು ಸರ್ಕಾರದಿಂದ ಉಚಿತವಾಗಿ ಪಡೆಯಲು ಬಯಸುತ್ತಾರೆ. ಈ ಮನೋಭಾವದ ವ್ಯವಸ್ಥೆ ಬದಲಾಗಬೇಕು. 
ಸದಸ್ಯ ಕೆ.ಬಿ. ಮುನಿವೆಂಕಟ ರೆಡ್ಡಿ- ಈ ದೇಶದ ರಾಷ್ಟ್ರದ ರಾಷ್ಟ್ರಪತಿಗಳ ಮಗನಾದರೂ ಸರಿ, ಪ್ರಧಾನಿಯ ಮಗನಾದರೂ ಸರಿ ಮತ್ತು ಶ್ರೀಸಾಮಾನ್ಯನಿಗೂ ಒಂದೇ ಕಾನೂನು ಇರುವುದು ಮೆಚ್ಚತಕ್ಕ ಸಂಗತಿಯಾಗಿದೆ. 

ಯುರೋಪ್ ನಲ್ಲಿ - ಯುರೋಪ್ ನ ಅತ್ಯಂತ ಎತ್ತರದ (೧೧,೩೧೯ ಅಡಿ) JUNGFRAUJOCH ಶಿಖರವನ್ನು ವೀಕ್ಷಿಸಿದ್ದ ಸಮಿತಿಯ ವರದಿಯಂತೆ ಇಲ್ಲಿ ಅನೇಕ ಕಡೆಗಳಲ್ಲಿ ಬೆಟ್ಟವನ್ನು ಕೊರೆದು ರೈಲ್ವೇ ಮಾರ್ಗವನ್ನು ಮಾಡಿಕೊಂಡು ಹೋಗಿದ್ದಾರೆ. ಇದರಲ್ಲಿ ಒಂದುಕಡೆ ಮಾತ್ರ ೯ ಕಿ.ಮೀ.ವರೆಗೆ ಸುರಂಗ ಮಾಡಿಕೊಂಡು ಮೇಲಕ್ಕೆ ಟ್ರೈನ್ ಹೋಗುವುದಕ್ಕೆ ವ್ಯವಸ್ಥೆ ಮಾಡಿರತಕ್ಕಂಥದ್ದು ವಿಶಿಷ್ಟವಾಗಿರುವುದಲ್ಲದೇ ಇದನ್ನು ೧೦೦ ವರ್ಷಗಳ ಹಿಂದೆಯೇ ಸುಮಾರು ೧೬ ವರ್ಷಗಳ ವರೆಗೆ ನಿರಂತರವಾಗಿ ಕೆಲಸ ಮಾಡಿ ನಿರ್ಮಿಸಲಾಗಿದೆ. 
ಶಿಖರದ ಕೆಳಭಾಗದಲ್ಲಿರುವ ರೈಲ್ವೇ ಸ್ಟೇಶನ್ ಗೆ ಸಮಿತಿ ಆಗಮಿಸಿ ಅಲ್ಲಿಂದ ನಾಲ್ಕು ಬೋಗಿಗಳನ್ನು ಹೊಂದಿರುವ ಸಣ್ಣ ರೈಲಿನ ಮೂಲಕ ಶಿಖರದ ಮೇಲೆಕ್ಕೆ ಪ್ರಯಾಣ ಬೆಳೆಸಿತು. ೯೪೦೦ ಅಡಿ ಹೋದಾಗ ಟ್ರೈನ್ ನಿಲ್ಲಿಸಲಾಗುತ್ತದೆ. ಅಲ್ಲಿಂದ view point ಹತ್ತಿರ ಹೋಗಿ ಸುಂದರ ಪರ್ವತ ಶಿಖರಗಳನ್ನು ಸಮಿತಿ ವೀಕ್ಷಿಸಿತು. ಮತ್ತೆ ಇದೇ ರೀತಿಯಾಗಿ ೧೦, ೩೬೮ ಅಡಿಯಲ್ಲಿ ಮತ್ತೆ ಟ್ರೈನ್ ನಿಲ್ಲಿಸಿ ವೀಕ್ಷಣೆ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಾರೆ. ೨೬೦೦ ಮೀಟರ್ ವರೆಗೆ ಟ್ರೈನ್ ಮೂಲಕ ಪ್ರಯಾಣ ಮಾಡಿ ಅಲ್ಲಿಂದ ಇನ್ನೊಂದು ಟ್ರೈನ್ ಮೂಲಕ ಪ್ರಯಾಣ ಮಾಡಿ ಶಿಖರ ತುತ್ತ ತುದಿಯನ್ನು ತಲುಪುತ್ತೇವೆ. ಸುಮಾರು ೯ ಕಿಲೋಮೀಟರ್ ವರೆಗೆ ಬೆಟ್ಟವನ್ನು ಕೊರೆದು ಮೇಲಕ್ಕೆ ಟ್ರೈನ್ ಮೂಲಕ ಕರೆದುಕೊಂಡು ಹೋಗತಕ್ಕಂಥದ್ದು ಎಲ್ಲರಿಗೂ ಆಶ್ಚರ್ಯ ಮೂಡಿಸುತ್ತದೆ. 
ನಮ್ಮ ರಾಷ್ಟ್ರದಲ್ಲಿನ ಹಿಮಾಲಯ ಪ್ರದೇಶಗಳಲ್ಲಿ ಅನೇಕ ಪರ್ವತ ಶಿಖರಗಳಿದ್ದು, ಇದೇ ರೀತಿಯಾದ ಸೌಲಭ್ಯವನ್ನು ಅಲ್ಲಿಯೂ ಕಲ್ಪಿಸಿಕೊಟ್ಟರೆ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಣೆ ಮಾಡುವುದಕ್ಕೆ ಸಾಧ್ಯವಾಗುತ್ತದೆಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿತು. 

ಆಸ್ಟ್ರೇಲಿಯಾ ದೇಶಕ್ಕೆ ಭೇಟಿ ನೀಡಿದ್ದ ಬಹುತೇಕ ಸಮಿತಿಗಳ ವರದಿಗಳಲ್ಲಿ, ರಸ್ತೆಯ ಮೂಲಕ ಸಂಚರಿಸುತ್ತಿದ್ದಾಗ ಕಾಣಸಿಕ್ಕುವ ವಿಶಾಲವಾದ ಹುಲ್ಲುಗಾವಲುಗಳಲ್ಲಿ ಸಹಸ್ರಾರು ಹಸುಗಳು ಮತ್ತು ಕುರಿಗಳು ಮೇಯುತ್ತಿರುವ ಮತ್ತು ಇವುಗಳನ್ನು ಕಾಯಲು ದನಗಾಹಿಗಳು ಇಲ್ಲದಿರುವ ಬಗ್ಗೆ ಸದಸ್ಯರಿಗೆ ಅಚ್ಚರಿಯಾಗಿದ್ದುದನ್ನು ನಮೂದಿಸಲಾಗಿದೆ. ಹಸು ಮತ್ತು ಕುರಿಗಳು ಹುಲ್ಲನ್ನು ಮೇಯುವುದರಲ್ಲಿ ಆಚ್ಚರಿಪಡುವಂತಹದ್ದು ಏನಿದೆ?, ಎನ್ನುವುದು ಓದುವಾಗ ಓದುಗರಿಗೆ ಅಚ್ಚರಿಯಾಗುವುದರಲ್ಲಿ ಸಂದೇಹವಿಲ್ಲ!. 

ಸ್ವಾಮೀ, ಇಂತಹ ಹಲವಾರು ಹಾಸ್ಯಾಸ್ಪದ ವರದಿಗಳು ನಾವು ಮಾಹಿತಿ ಹಕ್ಕು ಕಾಯಿದೆಯನ್ವಯ ಪಡೆದುಕೊಂಡಿರುವ ವಿದೇಶಿ ಅಧ್ಯಯನದ ಪ್ರವಾಸದ ವರದಿಗಳಲ್ಲಿ ಕಾಣಸಿಕ್ಕಿದ್ದು, ಅವೆಲ್ಲವನ್ನೂ ಈ ಲೇಖನದಲ್ಲಿ ಸೇರಿಸಿದಲ್ಲಿ ಯಾವುದೇ ಪತ್ರಿಕೆಗಳು ಪ್ರಕಟಿಸುವ ಸಾಧ್ಯತೆಗಳಿಲ್ಲ. ಏಕೆಂದರೆ ಇವೆಲ್ಲವನ್ನೂ ಪ್ರಕಟಿಸಿದಲ್ಲಿ, ಅನ್ಯ ಸುದ್ದಿಗಳನ್ನು ಪ್ರಕಟಿಸಲು ಜಾಗವೇ ಉಳಿಯುವುದಿಲ್ಲ!. 

ಅದೇನೇ ಇರಲಿ, ಇದೀಗ ನಾವೇ ಚುನಾಯಿಸಿ ಕಳುಹಿಸಿದ ಶಾಸಕರು ವಿಧಾನ ಮಂಡಲಗಳ ವಿವಿಧ ಸಮಿತಿಗಳ ಸದಸ್ಯರಾಗಿ ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವ ಸ್ಪಷ್ಟ ಚಿತ್ರಣ ನಿಮಗೆ ದೊರೆತಿರಬಹುದು. ತಮಗೆ ಬೇಕೆನಿಸಿದಾಗ ಹಾಗೂ ತಮಗೆ ಬೇಕೆನಿಸಿದಷ್ಟು ಸಂಬಳ- ಸವಲತ್ತುಗಳನ್ನು ಹೆಚ್ಚಿಸಿಕೊಳ್ಳುವ, ಒಮ್ಮೆ ಶಾಸಕರಾಗಿ ಆಯ್ಕೆಯಾಗಿ ಐದು ವರ್ಷಗಳ ಅವಧಿಯನ್ನು ಪೂರೈಸಿದಲ್ಲಿ ಅಜೀವ ಪರ್ಯಂತ ಪಿಂಚಣಿ ಹಾಗೂ ಇತರ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳುವ  ಮತ್ತು ಬಹುತೇಕ ಸೌಲಭ್ಯಗಳನ್ನು ಉಚಿತವಾಗಿ ಪಡೆದುಕೊಳ್ಳುವ ನಮ್ಮ ಶಾಸಕರು, ನಮ್ಮ ದೇಶದ ಜನರು ಪ್ರತಿಯೊಂದನ್ನೂ ಸರಕಾರದಿಂದ ಉಚಿತವಾಗಿ ಪಡೆಯಲು ಬಯಸುತ್ತಾರೆ ಎನ್ನುವುದು ನಿಜಕ್ಕೂ ಹಾಸ್ಯಾಸ್ಪದವೆನಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. 

ಡಾ. ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೦-೦೩-೨೦೧೪ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ. 




No comments:

Post a Comment