Monday, March 17, 2014

RISING TEMPERATURE........





  ಏರುತ್ತಿರುವ ತಾಪಮಾನ  : ಇದಕ್ಕೇನು ಕಾರಣ ?

ಕಳೆದ ಕೆಲದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೆಲಭಾಗಗಳಲ್ಲಿ ಬೇಸಗೆಯ ಧಗೆ ಅತಿಯಾಗಿ ಹೆಚ್ಚುತ್ತಿದೆ. ಒಂದೆರಡು ದಶಕಗಳಲ್ಲಿ ಜಿಲ್ಲೆಯ ಜನರು ಕಂಡು ಕೇಳರಿಯದಂತಹ ತಾಪಮಾನದ ಹೆಚ್ಚಳವು ಇನ್ನಷ್ಟು ಹೆಚ್ಚಲಿದೆ ಎನ್ನುವ ಮಾಹಿತಿಯನ್ನು ಹವಾಮಾನ ಇಲಾಖೆ ಪ್ರಕಟಿಸಿದೆ. ಬಳ್ಳಾರಿಯ ಸುಡು ಬಿಸಿಲಿನ ಬೇಗೆಯನ್ನು ಮೀರಿಸುವಂತಹ  ಪರಿಸ್ಥಿತಿಗೆ ಕಾರಣವೇನು?, ಎಂದು ಕೇಳುತ್ತಿರುವ ಜನಸಾಮಾನ್ಯರ ಪ್ರಶ್ನೆಗೆ ಸಂಬಂಧಿತ ಇಲಾಖೆಯ ಅಧಿಕಾರಿಗಳು " ವೈಜ್ಞಾನಿಕ ಉತ್ತರ" ವನ್ನು ನೀಡಬೇಕಾಗಿದೆ. 

ಧಗಧಗಿಸುತಿಹುದು ಬೇಸಗೆ 

ಈ ವರ್ಷದ ಮಾರ್ಚ್ ತಿಂಗಳಿನ ಮೊದಲ ವಾರದಲ್ಲಿ ಸಂಜೆಯ ಮತ್ತು ಮುಂಜಾನೆಯ ಹೊತ್ತಿನಲ್ಲಿ ಸಾಕಷ್ಟು ತಂಪಾಗಿ ಇರುತ್ತಿದ್ದ ಹಾಗೂ ಕೆಲವೊಮ್ಮೆ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿತ್ತು. ಜೊತೆಗೆ ಕೆಲವೊಮ್ಮೆ ಮೋಡ ಕವಿದ ವಾತಾವರಣದೊಂದಿಗೆ, ಜಿಲ್ಲೆಯ ಕೆಲ ಭಾಗಗಳಲ್ಲಿ ತುಂತುರು ಮತ್ತು ಕೆಲವೆಡೆ ಉತ್ತಮ ಮಳೆ ಸುರಿದಿತ್ತು.(ಅಂತೆಯೇ ರಾಜ್ಯದ ಇತರ ಕೆಲ ಜಿಲ್ಲೆಗಳಲ್ಲಿ ಅಕಾಲಿಕವಾಗಿ ಆಲಿಕಲ್ಲು ಮಳೆ ಸುರಿದ ಪರಿಣಾಮವಾಗಿ ಕೃಷಿಕರ ಫಸಲು ನಾಶಗೊಂಡು, ರೈತರಿಗೆ ಅಪಾರ ಪ್ರಮಾಣದ ನಷ್ಟವೂ ಸಂಭವಿಸಿದೆ.) ತದನಂತರ ಏಕಾಏಕಿಯಾಗಿ ಬಿಸಿಲಿನ ಝಳ ಹೆಚ್ಚುತ್ತಾ ಹೋದಂತೆಯೇ, ಇಲ್ಲಿನ ತಾಪಮಾನದ ಮಟ್ಟವು ೪೦ ಡಿಗ್ರಿ ಸೆಲ್ಸಿಯಸ್ ನ ಆಸುಪಾಸಿನಲ್ಲಿ ಸುಳಿದಾಡುತ್ತಿದೆ. ಪುತ್ತೂರಿನಲ್ಲಂತೂ ಜಿಲ್ಲೆಯಲ್ಲೇ ಗರಿಷ್ಠ ಎನಿಸಿರುವ ತಾಪಮಾನದ ಮಟ್ಟವು, ಈಗಾಗಲೇ ೪೦ ಡಿಗ್ರಿ ಸೆಲ್ಸಿಯಸ್ ಮೀರಿದೆ. ಸಾಮಾನ್ಯವಾಗಿ ಎಪ್ರಿಲ್ - ಮೇ ತಿಂಗಳುಗಳಲ್ಲಿ ಬೇಸಗೆಯ ಧಗೆ ವಿಪರೀತವೆನಿಸುವ ನಮ್ಮ ಜಿಲ್ಲೆಯಲ್ಲಿ, ಮಾರ್ಚ್ ತಿಂಗಳಿನಲ್ಲಿ ತಾಪಮಾನದ ಮಟ್ಟವು ದಾಖಲೆಯನ್ನು ನಿರ್ಮಿಸಿದ್ದು, ಮುಂದಿನ ತಿಂಗಳುಗಳಲ್ಲಿ ಇದು ಎಲ್ಲಿಗೆ ತಲುಪಬಹುದೆಂದು ಜನಸಾಮಾನ್ಯರು ಚಿಂತಾಕ್ರಾಂತರಾಗಿದ್ದಾರೆ. ಮುಂದಿನ ಕೆಲ ದಿನಗಳಲ್ಲಿ ಒಂದೆರಡು ಮಳೆ ಸುರಿದಲ್ಲಿ ತಂಪಾಗಲಿರುವ ವಾತಾವರಣವು, ಮತ್ತೆ ಬಿಸಿಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. 

೨೦೧೦ ನೆ ಇಸವಿಯ ಮೊದಲ ನಾಲ್ಕು ತಿಂಗಳುಗಳ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ದಾಖಲಾಗಿರುವ ತಾಪಮಾನದ ಮಟ್ಟವು, ಹಳೆಯ ದಾಖಲೆಗಳನ್ನು ಮುರಿದು ವಿಶ್ವ ದಾಖಲೆಯನ್ನು ನಿರ್ಮಿಸಿತ್ತು. ಈ ಅವಧಿಯಲ್ಲಿ ಭೂಮಿಯ ಮತ್ತು ಸಮುದ್ರದ ಮೇಲ್ಮೈಯ ಸರಾಸರಿ ತಾಪಮಾನದ ಮಟ್ಟವು ೧೩.೩ ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಇದು ೨೦ ನೆ ಶತಮಾನದ ಸರಾಸರಿಗಿಂತಲೂ ೦.೬೯ ಡಿಗ್ರಿ ಹೆಚ್ಚಾಗಿದೆ. ಭಾರತವೂ ಇದಕ್ಕೆ ಅಪವಾದವೆನಿಸಿಲ್ಲ. ಏಕೆಂದರೆ ದಕ್ಷಿಣದ ರಾಜ್ಯಗಳಲ್ಲಿ ೨೦೧೦ ರ ಮೇ ತಿಂಗಳಿನಲ್ಲಿ ದಾಖಲಾಗಿದ್ದ ತಾಪಮಾನವು, ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಅದೇ ರೀತಿಯಲ್ಲಿ ೨೦೧೦ ರ ಮಾರ್ಚ್-ಎಪ್ರಿಲ್ ತಿಂಗಳುಗಳಲ್ಲಿ ಭಾರತದ ಬಹುತೇಕ ರಾಜ್ಯಗಳಲ್ಲಿ ದಾಖಲಾಗಿದ್ದ ತಾಪಮಾನದ ಮಟ್ಟವು, ಸಾಮಾನ್ಯವಾಗಿ ಮೇ ತಿಂಗಳಿನ ಕಡುಬೇಸಗೆಯ ದಿನಗಳಲ್ಲಿ ಕಂಡುಬರುತ್ತಿದ್ದ ತಾಪಮಾನಕ್ಕಿಂತಲೂ ಸಾಕಷ್ಟು ಅಧಿಕವಾಗಿತ್ತು. ವಿಶೇಷವೆಂದರೆ ಸಾಮಾನ್ಯವಾಗಿ " ಉಷ್ಣ ಅಲೆ" ಯ ಪೀಡೆ ಬಾಧಿಸಿರದ ಕೇರಳದ ಪಾಲಕ್ಕಾಡ್ ಮತ್ತು ನಮ್ಮ ಜಿಲ್ಲೆಯಲ್ಲೇ ಅತಿ ಹೆಚ್ಚು ಮಳೆ ಸುರಿಯುವ ಸುಬ್ರಮಣ್ಯದಲ್ಲಿ ಅಂದು ೪೦ ರಿಂದ ೪೫ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. 

ಇದಕ್ಕೇನು ಕಾರಣ?

ಜಾಗತಿಕ ಮಾತದಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಈ ಸಮಸ್ಯೆಗೆ ನಿರಂತರವಾಗಿ ಹೆಚ್ಚುತ್ತಿರುವ ಜನ- ವಾಹನಗಳ ಸಂಖ್ಯೆ, ಅತಿಯಾಗುತ್ತಿರುವ ನಗರೀಕರಣ, ಹೆಚ್ಚುತ್ತಿರುವ ಕಟ್ಟಡಗಳ ನಿರ್ಮಾಣ, ಅರಣ್ಯ- ಕೃಷಿ ಭೂಮಿಗಳನ್ನು ನಾಶಪಡಿಸಿ ತಲೆ ಎತ್ತುತ್ತಿರುವ ಕೈಗಾರಿಕೆ,ಉದ್ದಿಮೆ, ವಿದ್ಯುತ್ ಉತ್ಪಾದನಾ ಘಟಕಗಳು ಮತ್ತು ವಿಶೇಷ ವಿತ್ತ ವಲಯಗಳೊಂದಿಗೆ ಮಿತಿಮೀರಿದ ಪರಿಸರ ಪ್ರದೂಷಣೆಗಳೇ ಕಾರಣವೆಂದು ಬಲ್ಲವರು ಹೇಳುತ್ತಾರೆ. 

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಾದವಿವಾದಗಳಿಗೆ ಗ್ರಾಸವೆನಿಸಿರುವ ಜಾಗತಿಕ ತಾಪಮಾನದ ಹೆಚ್ಚಳವೂ, ಬೇಸಗೆಯ ಧಗೆ ಇನ್ನಷ್ಟು ಹೆಚ್ಚಲು ಕಾರಣವೆನಿಸುತ್ತಿದೆ. ಜೊತೆಗೆ ಇದರಿಂದಾಗಿ ಸಂಭವಿಸುತ್ತಿರುವ ಹವಾಮಾನದ ವೈಪರೀತ್ಯಗಳಿಂದಾಗಿ, ಕಡುಬೇಸಗೆಯ ದಿನಗಳಲ್ಲೂ ಗುಡುಗು- ಮಿಂಚುಗಳೊಂದಿಗೆ ಆಲಿಕಲ್ಲು ಮಳೆ ಸುರಿಯುತ್ತಿದೆ. ಒಂದೆಡೆ ಅತಿವೃಷ್ಟಿ ಹಾಗೂ ಕೆಲವೆಡೆ ಅನಾವೃಷ್ಟಿ, ಕೆಲವೆಡೆ ಅತಿಯಾದ ಸೆಕೆ ಮತ್ತೆ ಕೆಲವೆಡೆ ಅತಿಯಾದ ಚಳಿಗಳಂತಹ  ವ್ಯತ್ಯಯಗಳನ್ನು ತೋರುತ್ತಿರುವ ಹವಾಮಾನದ ವೈಪರೀತ್ಯಗಳಿಗೆ ಮೇಲೆ ನಮೂದಿಸಿದ ಕಾರಣಗಳಲ್ಲದೇ ಇತರ ಕಾರಣಗಳೂ ಇರಲೇಬೇಕು. ಏಕೆಂದರೆ ನಮ್ಮ ದೇಶದ ಕಳೆದ ೫೦ ವರ್ಷಗಳ ಹವಾಮಾನದ ದಾಖಲೆಗಳನ್ನು ಪರಿಶೀಲಿಸಿದಾಗ, ಸುಮಾರು ೫ ದಶಕಗಳ ಹಿಂದೆಯೂ ಅತಿಯಾದ ತಾಪಮಾನ ದಾಖಲಾಗಿದ್ದುದು ತಿಳಿದುಬರುತ್ತದೆ. ೫೦ ವರ್ಷಗಳ ಹಿಂದೆ ಭಾರತದ ಜನ- ವಾಹನಗಳ ಸಂಖ್ಯೆ, ಪರಿಸರ ಪ್ರದೂಷಣೆಯ ಪ್ರಮಾಣ ಇತ್ಯಾದಿಗಳು ಸಾಕಷ್ಟು ಕಡಿಮೆ ಇದ್ದಿತು. ಆದರೂ ಅಂದಿನ ದಿನಗಳಲ್ಲಿ ಭಾರತದ ಅನೇಕ ರಾಜ್ಯಗಳಲ್ಲಿ ಬೇಸಗೆಯ ದಿನಗಳಲ್ಲಿ ತಾಪಮಾನದ ಮಟ್ಟವು ೪೫ ಡಿಗ್ರಿ ಸೆಲ್ಸಿಯಸ್ ಮೀರಿದ್ದುದನ್ನು ದಾಖಲೆಗಳು ಧೃಢಪಡಿಸುತ್ತವೆ. ನಿಜ ಸ್ಥಿತಿ ಹೀಗಿದ್ದಲ್ಲಿ ಅಂದಿನ ದಿನಗಳಲ್ಲಿ ತಾಪಮಾನದ ಮಟ್ಟವು ಅತಿಯಾಗಿ ಹೆಚ್ಚಿದ್ದುದಕ್ಕೆ ನೈಜ ಕಾರಣ ಏನೆಂದು ಹವಾಮಾನ ತಜ್ಞರೇ ಹೇಳಬೇಕಷ್ಟೆ. 

ಪ್ರಸ್ತುತ ಭಾರತದ ಅನೇಕ ರಾಜ್ಯಗಳಲ್ಲಿ ದಾಖಲಾಗುತ್ತಿರುವ ಅತಿಯಾದ ತಾಪಮಾನದ ಪ್ರಮಾಣವು ಗಾಬರಿ ಹುಟ್ಟಿಸುವಂತಿದೆ. ಅಂತೆಯೇ ಅತಿಯಾಗಿ ಕಂಡುಬರುತ್ತಿರುವ ಹವಾಮಾನದ ವೈಪರೀತ್ಯಗಳೂ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಪ್ರಾಕೃತಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಹವಾಮಾನ ತಜ್ಞರು - ವಿಜ್ಞಾನಿಗಳು ಇದಕ್ಕೊಂದು ಸೂಕ್ತ ಪರಿಹಾರವನ್ನು ಪತ್ತೆಹಚ್ಚಬೇಕಿದೆ. ಅಲ್ಲಿಯ ತನಕ ಈ ಅಸಹನೀಯ ಮತ್ತು ಅಪಾಯಕಾರೀ ಸಮಸ್ಯೆಯನ್ನು ನಾವೆಲ್ಲರೂ ಅನಿವಾರ್ಯವಾಗಿ ಸಹಿಸಿಕೊಳ್ಳಲೇಬೇಕಾಗಿದೆ.

ಕೊನೆಯ ಮಾತು 

ಈ ಕಡು ಬೇಸಗೆಯ ಸುಡು ಬಿಸಿಲಿನಲ್ಲಿ ಶಾರೀರಿಕ ಶ್ರಮದ ಕೆಲಸಗಳನ್ನು ಮಾಡಿದಲ್ಲಿ ಧಾರಾಕಾರವಾಗಿ ಬೆವರು ಸುರಿಯುತ್ತದೆ. ಈ ಸಂದರ್ಭದಲ್ಲಿ ಬಾಯಾರಿಕೆಯಾದಲ್ಲಿ ಕೇವಲ ನೀರನ್ನು ಮಾತ್ರ ಕುಡಿಯುವುದು ಹಿತಕರವಲ್ಲ. ಏಕೆಂದರೆ  ಬೆವರಿದಾಗ ನಿಮ್ಮ ಶರೀರದಲ್ಲಿರುವ ನೀರಿನ ಅಂಶ ಕಡಿಮೆಯಾಗಿ ನಿರ್ಜಲೀಕೃತ ಸ್ಥಿತಿ (ಡಿ ಹೈಡ್ರೇಶನ್ ) ಉದ್ಭವಿಸುವುದರೊಂದಿಗೆ, ಇತರ ಕೆಲ ಅಂಶಗಳೂ  ಕಡಿಮೆಯಾಗುತ್ತವೆ. ಇಂತಹ ಸ್ಥಿತಿಯಲ್ಲಿ ಸಕ್ಕರೆ ಮತ್ತು ಚಿಟಿಕೆ ಉಪ್ಪನ್ನು ಬೆರೆಸಿದ ನೀರು ಅಥವಾ ಶರಬತ್ತು ಅಥವಾ ನಮ್ಮ ಪೂರ್ವಜರಂತೆ ತುಂಡು ಬೆಲ್ಲದೊಂದಿಗೆ ನೀರನ್ನು ಕುಡಿಯುವುದು ಅತ್ಯಂತ ಆರೋಗ್ಯಕರವೂ ಹೌದು. 

ಇದಲ್ಲದೆ ಮಟಮಟ ಮಧ್ಯಾಹ್ನ ಕೊಡೆಯನ್ನು ಹಿಡಿಯದೆ ಬಿಸಿಲಿನಲ್ಲಿ ನಡೆದಾಡುವುದರಿಂದ " ಸೂರ್ಯಾಘಾತ" ಅರ್ಥಾತ್ ಸನ್ ಸ್ಟ್ರೋಕ್ ಬಾಧಿಸುವ ಸಾಧ್ಯತೆಗಳಿವೆ. ವಯೋವೃದ್ಧರು, ಅನಾರೋಗ್ಯ ಪೀಡಿತರು ಮತ್ತು ಮಕ್ಕಳಿಗೆ ಇದು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳಿವೆ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 





No comments:

Post a Comment