Wednesday, March 12, 2014

SIDDHA HANNINA RASA........


 ಸಿದ್ಧ ಹಣ್ಣಿನ ರಸ : ನಿಜಕ್ಕೂ ಪರಿಶುದ್ಧವೇ?

ಅತಿಯಾಗಿ ಬಳಲಿ ಬಾಯಾರಿದಾಗ ನಾವೆಲ್ಲರೂ ತಂಪಾದ ಪಾನೀಯವನ್ನು ಗುಟುಕರಿಸಲು ಹಾತೊರೆಯುವುದು ಸ್ವಾಭಾವಿಕ. ಆದರೆ ಈ ಸಂದರ್ಭದಲ್ಲಿ ಕೆಲವರ್ಷಗಳ ಹಿಂದೆ ಲಘು ಪಾನೀಯಗಳಲ್ಲಿ ಪತ್ತೆಯಾಗಿದ್ದ ಹಾಲಾಹಲಗಳ ನೆನಪಾಗುವುದು ಕೂಡಾ ಅಷ್ಟೇ ಸ್ವಾಭಾವಿಕ. ಪ್ರಾಯಶಃ ಇದೇ ಕಾರಣದಿಂದಾಗಿ ತಂಪಾದ ಕೋಲಾಗಳನ್ನು ಕುಡಿಯಲು ಹಿಂಜರಿವ ಅನೇಕರು, ಸಿದ್ಧ ಹಣ್ಣಿನ ರಸಗಳನ್ನು ಖರೀದಿಸಿ ಕುಡಿಯುತ್ತಾರೆ. ಆದರೆ ಇಂತಹ ಹಣ್ಣಿನ ರಸಗಳಲ್ಲಿ ಅಡಗಿರುವ ಅಹಿತಕರ ಅಂಶಗಳ ಬಗ್ಗೆ ಬಹುತೇಕ ಜನರಿಗೆ ಅವಶ್ಯಕ ಮಾಹಿತಿಗಳೇ ತಿಳಿದಿರುವುದಿಲ್ಲ. 

ಅನಾರೋಗ್ಯಕರ ಪಾನೀಯಗಳು 

ಬಹುರಾಷ್ಟ್ರೀಯ ಸಂಸ್ಥೆಗಳು ನಮ್ಮ ದೇಶದಲ್ಲಿ ಉತ್ಪಾದಿಸಿ ಮಾರುತ್ತಿರುವ ಕೋಲಾಗಳನ್ನು ಕುಡಿಯಲು ಅನೇಕರು ಹಿಂದೇಟು ಹಾಕಲು ನಿರ್ದಿಷ್ಟ ಕಾರಣಗಳಿವೆ. ಈ ಉತ್ಪನ್ನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿರುವ ವಿಷಕಾರಕ ರಾಸಾಯನಿಕಗಳು ಹಾಗೂ ವಿದೇಶಿ ಉತ್ಪನ್ನಗಳನ್ನು ತಿರಸ್ಕರಿಸಿ, ಸ್ವದೇಶೀ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ದೇಶಪ್ರೇಮಿಗಳ ನಿರ್ದಾಕ್ಷಿಣ್ಯ ನಿರ್ಧಾರಗಳು ಇವುಗಳಲ್ಲಿ ಪ್ರಮುಖವಾಗಿವೆ. ಆದರೆ ಸ್ವದೇಶೀ ಚಳವಳಿಯ ನೇತಾರರು ಸೂಚಿಸುವಂತೆ ಕೋಲಾಗಳಿಗೆ ಬದಲಾಗಿ ಎಳನೀರು, ಕಬ್ಬಿನ ಹಾಲು, ನಿಂಬೆ ಶರಬತ್ತು ಅಥವಾ ಮಜ್ಜಿಗೆಯನ್ನು ಕುಡಿಯಲು ಇಚ್ಚಿಸದ ಜನರು, ಸಿದ್ಧ ಹಣ್ಣಿನ ರಸವನ್ನು ಸವಿಯಲು ಬಯಸುವುದರಲ್ಲಿ ವಿಶೇಷವೇನಿಲ್ಲ. 

ಪೋಷಕಾಂಶರಹಿತ ಪೇಯಗಳು 

ಕಡು ಬೇಸಗೆಯ ದಿನಗಳಲ್ಲಿ ಬಾಯಾರಿದ ಜನರು ಸಿದ್ಧ ಹಣ್ಣಿನ ರಸಗಳನ್ನು ಕೋಲಾಗಳಿಗಿಂತ ಆರೋಗ್ಯಕರ ಹಾಗೂ ರುಚಿಕರವೆಂದು ನಂಬಿ ಕುಡಿಯುತ್ತಾರೆ. ಬಹುತೇಕ ವಿದ್ಯಾವಂತರೂ "..............ಫ್ರೆಶ್ ಎಂಡ್ ಜ್ಯೂಸಿ" ಇತ್ಯಾದಿ  ಜಾಹೀರಾತುಗಳಿಗೆ ಮರುಳಾಗಿ, ಇಂತಹ ವಾಣಿಜ್ಯ ಉತ್ಪನ್ನಗಳನ್ನು ದುಬಾರಿ ಬೆಲೆಯನ್ನು ತೆತ್ತು ಖರೀದಿಸುತ್ತಾರೆ. ಈ ಸಂದರ್ಭದಲ್ಲಿ ವರ್ಷದ ೩೬೫ ದಿನಗಳಲ್ಲೂ ಭಾರತದಲ್ಲಿ ವಿವಿಧ ಜಾತಿಗಳ ಮಾವಿನ ಹಣ್ಣುಗಳು ದೊರೆಯದೇ ಇರುವುದರಿಂದ, ಈ ಉತ್ಪನ್ನವು "ಫ್ರೆಶ್" ಆಗಿರುವುದು ಅಸಾಧ್ಯ ಎನ್ನುವುದನ್ನೇ ಮರೆತುಬಿಡುತ್ತಾರೆ!. ಪೆಟ್ ಬಾಟಲಿಗಳು ಅಥವಾ ಟೆಟ್ರಾ ಪ್ಯಾಕ್ ಗಳಲ್ಲಿ ತುಂಬಿಸಿ ಮಾರಲ್ಪಡುವ ವೈವಿಧ್ಯಮಯ ಹಣ್ಣಿನ ರಸಗಳನ್ನು ಆಸ್ವಾದಿಸುವ ಜನರು, ಇಂತಹ ಪೇಯಗಳು ನಿಜಕ್ಕೂ ಆರೋಗ್ಯಕರವೆಂದು ನಂಬಿದ್ದಾರೆ. ಆದರೆ ನಿಜಹೇಳಬೇಕಿದ್ದಲ್ಲಿ, ಇಂತಹ ಬಹುತೇಕ ವಾಣಿಜ್ಯ ಉತ್ಪನ್ನಗಳಲ್ಲಿ, ತಾಜಾ ಹಣ್ಣುಗಳಲ್ಲಿರುವ ಪೋಷಕ ಅಂಶಗಳೇ ಇರುವುದಿಲ್ಲ. ಇದಕ್ಕೂ ಮಿಗಿಲಾಗಿ ಈ ರೀತಿಯ ಅನೇಕ ವಾಣಿಜ್ಯ ಉತ್ಪನ್ನಗಳಲ್ಲಿ ರುಚಿವರ್ಧಕ ದ್ರವ್ಯಗಳು, ಸಕ್ಕರೆ ಅಥವಾ ಕೃತಕ ಮಾಧುರ್ಯಕಾರಕಗಳು, ನೀರು ಮತ್ತು ಅಲ್ಪ ಪ್ರಮಾಣದ ಹಣ್ಣಿನ ರಸಗಳು ಇರುವುದೆಂದು ನಿಮಗೂ ತಿಳಿದಿರಲಾರದು. 

ಅಪಾಯಕಾರೀ ಅಂಶಗಳು 

ಆಯ್ದ ಹಣ್ಣುಗಳಿಂದ ಅಧಿಕ ಪ್ರಮಾಣದ ರಸವನ್ನು ಪಡೆಯುವ ಸಲುವಾಗಿ, ಇವುಗಳ ತಯಾರಕರು ಕೆಲವಿಧದ ರಾಸಾಯನಿಕಗಳು ಮತ್ತು ಆಮ್ಲಗಳನ್ನು ಬಳಸುತಾರೆ.ಇದರಿಂದಾಗಿ ಇವುಗಳನ್ನು ಸೇವಿಸಿದವರಿಗೆ ಹೊಟ್ಟೆಯಲ್ಲಿ  ಉರಿ, ಗಂಟಲಿನಲ್ಲಿ ಕಿರಿಕಿರಿ, ಅಸ್ತಮಾ ರೋಗಿಗಳಲ್ಲಿ ಎದೆಯನ್ನು ಬಿಗಿದಂತಹ ತೊಂದರೆಗಳು ಕಾಣಿಸಿಕೊಳ್ಳಬಹುದು. ಕೃತಕ ಮಾಧುರ್ಯಕಾರಕ ಆಸ್ಪಾರ್ಟೆಮ್  ಬಳಸಿ ತಯಾರಿಸಿದ ರಸಗಳನ್ನು ಸೇವಿಸಿದ ಅಲ್ಜೀಮರ್ಸ್, ಅಪಸ್ಮಾರ ಹಾಗೂ ಮಧುಮೇಹ ರೋಗಿಗಳ ವ್ಯಾಧಿಗಳು ಉಲ್ಬಣಿಸುತ್ತವೆ. ಅಂತೆಯೇ ಹಣ್ಣಿನ ರಸದ ಬಣ್ಣವನ್ನು ಇನ್ನಷ್ಟು ಆಕರ್ಷಕವಾಗಿಸಲು ಬಳಸುವ ಕೃತಕ ಬಣ್ಣಗಳಿಂದ ಆಸ್ತಮಾ ವ್ಯಾಧಿಯ ಬಾಧೆ ಇನ್ನಷ್ಟು ಹೆಚ್ಚಬಹುದು. ಸಿದ್ಧ ಹಣ್ಣಿನ ರಸಗಳನ್ನು ತಯಾರಿಸಿದ ದಿನದಿಂದ ಮಾರಾಟವಾಗುವ ತನಕ ಕೆಡದಂತೆ ಹಾಗೂ ಇವುಗಳಲ್ಲಿ ಇರಬಹುದಾದ ಸೂಕ್ಷ್ಮಾಣುಜೀವಿಗಳನ್ನು ನಾಶಪಡಿಸಲು ಪಾಶ್ಚರೈಸೇಶನ್ ಮಾಡಲಾಗುತ್ತದೆ. ತತ್ಪರಿಣಾಮವಾಗಿ ಈ ರಸಗಳಲ್ಲಿರುವ ಜೀವಸತ್ವಗಳು ಮತ್ತು ಖನಿಜಾಂಶಗಳೂ ನಾಶಗೊಳ್ಳುತ್ತವೆ. ಹಣ್ಣು ಹಂಪಲುಗಳ ಫಸಲನ್ನು ಹಾಳುಗೆಡಹುವ ರೋಗಗಳು- ಕೀಟಗಳ ಬಾಧೆಯಿಂದ ರಕ್ಷಿಸಲು ಕೃಷಿಕರು ಬಳಸುವ ಕೀಟನಾಶಕಗಳ ಶೇಷಾಂಶಗಳು ಇವುಗಳ ರಸದಲ್ಲೂ ಇರುವ ಸಾಧ್ಯತೆಗಳಿವೆ. ಜೊತೆಗೆ ಈ ರಾಸಾಯನಿಕ ಕೀಟನಾಶಕಗಳು ಅನೇಕ ವಿಧದ ಆರೋಗ್ಯದ ಸಮಸ್ಯೆಗಳಿಗೂ ಕಾರಣವೆನಿಸಬಲ್ಲವು.ಸಾಮಾನ್ಯವಾಗಿ ಹಣ್ಣು ಹಂಪಲುಗಳಲ್ಲಿ ಇರುವ ನಾರಿನ ಅಂಶಗಳು ಕೆಲವಿಧದ ಕ್ಯಾನ್ಸರ್ ಮತ್ತಿತರ ವ್ಯಾಧಿಗಳನ್ನು ತಡೆಗಟ್ಟಬಲ್ಲ, ಹೃದಯದ ಕಾಯಿಲೆಗಳ ಸಂಭಾವ್ಯತೆಗಳನ್ನು ಕಡಿಮೆ ಮಾಡಬಲ್ಲ, ಮಧುಮೇಹ ವ್ಯಾಧಿ ಆರಂಭವಾಗುವುದನ್ನು ತುಸು ದೂರೀಕರಿಸಬಲ್ಲ ಗುಣಗಳನ್ನು ಹೊಂದಿರುತ್ತದೆ ಆದರೆ ಸಿದ್ಧ ಹಣ್ಣಿನ ರಸಗಳನ್ನು ತಯಾರಿಸುವಾಗ ನಾರಿನ ಅಂಶಗಳನ್ನು ಪ್ರತ್ಯೇಕಿಸಲಾಗುತ್ತದೆ. 

ಅಂತೆಯೇ ಸಿದ್ಧ ಹಣ್ಣಿನ ರಸಗಳನ್ನು ತುಂಬಿಸಿ ಮಾರಾಟ ಮಾಡಲು ಬಳಸುವ ಪ್ಲಾಸ್ಟಿಕ್ ಬಾಟಲಿಗಳು ಅಥವಾ ಟೆಟ್ರಾ ಪ್ಯಾಕ್ ಗಳು ಪರಿಸರ ಮಾಲಿನ್ಯಕ್ಕೆ ಮತ್ತು ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸುತ್ತವೆ. ಇವೆಲ್ಲಾ ವಿಚಾರಗಳನ್ನು ಅರಿತುಕೊಂಡ ಬಳಿಕ ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಎಳನೀರು, ನಿಂಬೆ ಶರಬತ್ತು, ಕಬ್ಬಿನ ಹಾಲು,ಮಜ್ಜಿಗೆ ಅಥವಾ ಕುದಿಸಿ ತಣಿಸಿದ ಶುದ್ಧ ನೀರನ್ನು ಕುಡಿಯುವುದೇ ಲೇಸೆಂದು ನಿಮಗೂ ಅನಿಸಿರಬಹುದಲ್ಲವೇ?.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ೦೪- ೦೧- ೨೦೦೭ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ. 





No comments:

Post a Comment