Friday, March 28, 2014

Brain Attack- STROKE.



 ಮೆದುಳಿನ ಆಘಾತ: ಪ್ರತ್ಯಕ್ಷವಾಗುವುದು ಪಕ್ಷವಾತ 

ಮಾನವ ಶರೀರದ ಪ್ರತಿಯೊಂದು ಅಂಗಾಂಗಗಳು ಸಮರ್ಪಕವಾಗಿ ಕಾರ್ಯಾಚರಿಸಲು,ಇವುಗಳಿಗೆ ನಿರಂತರವಾಗಿ ಶುದ್ಧ ರಕ್ತದ ಪೂರೈಕೆ ಅತ್ಯವಶ್ಯಕ ಎನಿಸುವುದು. ಆದರೆ ಮನುಷ್ಯನ ಮೆದುಳಿಗೆ ಪೂರೈಕೆಯಾಗುವ ಶುದ್ಧ ರಕ್ತದ ಪ್ರಮಾಣವು ತೀವ್ರವಾಗಿ ಕಡಿಮೆಯಾದಾಗ ಅಥವಾ ತೀವ್ರವಾಗಿ ಹೆಚ್ಚಿದಾಗ, ಮೆದುಳಿನ ಆಘಾತವು ಸಂಭವಿಸುವುದು. ಕ್ಷಣಮಾತ್ರದಲ್ಲಿ ರೋಗಿಯ ಮರಣಕ್ಕೂ ಕಾರಣವೆನಿಸಬಲ್ಲ ಈ ಗಂಭೀರ ಸಮಸ್ಯೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
----------------               ---------------                ---------------                -----------------             ----------------

ವಿದ್ಯಾವಂತ- ಅವಿದ್ಯಾವಂತರೆನ್ನುವ ಭೇದವಿಲ್ಲದೆ, ಬಹುತೇಕ ಜನರಲ್ಲಿ ಮೂಢನಂಬಿಕೆ ಮತ್ತು ತಪ್ಪು ಕಲ್ಪನೆಗಳಿಗೆ ಕಾರಣವಾಗಿರುವ ಗಂಭೀರ- ಮಾರಕ ಕಾಯಿಲೆಗಳಲ್ಲಿ ಪಕ್ಷವಾತವು ಪ್ರಮುಖವಾಗಿದೆ. ಮೆದುಳಿಗೆ ಆಘಾತವಾದಾಗ ಉದ್ಭವಿಸುವ ಈ ಕಾಯಿಲೆಗೆ ಜನಸಾಮಾನ್ಯರು ಆಡುಭಾಷೆಯಲ್ಲಿ ಪಾರ್ಶ್ವವಾಯು, ಲಕ್ವ, ಮತ್ತು ಪಕ್ಷವಾತವೆಂದೂ ಕರೆಯುತ್ತಾರೆ. ರೋಗಿಯ ಶರೀರದ ಒಂದು ಭಾಗವನ್ನು ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ನಿಷ್ಕ್ರಿಯವಾಗಿಸಬಲ್ಲ ಈ ವ್ಯಾಧಿ ಬಾಧಿಸಿದಾಗ, ತುರ್ತುಚಿಕಿತ್ಸೆ ನೀಡಬೇಕಾಗುವುದು ಅನಿವಾರ್ಯವೂ ಹೌದು. ವೃಥಾ ಕಾಲಹರಣ ಮಾಡಿ ಚಿಕಿತ್ಸೆಯನ್ನು ನೀಡಲು ವಿಳಂಬಿಸಿದಲ್ಲಿ, ರೋಗಿಯು ಜೀವನಪರ್ಯಂತ ಪರಾವಲಂಬಿಯಾಗುವ ಅಥವಾ ಕೆಲವೊಮ್ಮೆ ಪ್ರಾಣವನ್ನೇ ಕಳೆದುಕೊಳ್ಳುವ ಸಾಧ್ಯತೆಗಳಿವೆ.

ಮೆದುಳಿನ ಆಘಾತ 

ಮನುಷ್ಯನ ಹೃದಯಕ್ಕೆ ನಿರಂತರವಾಗಿ ಶುದ್ಧ ರಕ್ತವನ್ನು ಪೂರೈಕೆಮಾಡುವ ಕೊರೋನರಿ ರಕ್ತನಾಳಗಳಲ್ಲಿ ಉದ್ಭವಿಸಬಲ್ಲ ಅಡಚಣೆಗಳಿಂದಾಗಿ ಹೃದಯಾಘಾತ ಸಂಭವಿಸುವುದು. ಅದೇ ರೀತಿಯಲ್ಲಿ ಮೆದುಳಿಗೆ ಪೂರೈಕೆಯಾಗುವ ಶುದ್ಧ ರಕ್ತದ ಪ್ರಮಾಣದಲ್ಲಿ ಕಾರಣಾಂತರಗಳಿಂದ ವ್ಯತ್ಯಯವಾದಲ್ಲಿ, ಮೆದುಳಿನ ಆಘಾತ ಸಂಭವಿಸುವುದು. ಈ ಆಘಾತದ ಪರಿಣಾಮವಾಗಿ ಮೆದುಳಿನ ಜೀವಕಣಗಳಿಗೆ ಅತ್ಯವಶ್ಯಕವಾದ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ತತ್ಪರಿಣಾಮವಾಗಿ ಮೆದುಳಿನ ಜೀವಕಣಗಳು ಮೃತಪಡುವುದರಿಂದಾಗಿ, ಮೆದುಳಿಗೆ ಶಾಶ್ವತವಾದ ಹಾನಿ ಉಂಟಾಗುವುದು. ಮೃತಪಟ್ಟ ಮೆದುಳಿನ ಜೀವಕಣಗಳನ್ನು ಪುನಶ್ಚೇತನಗೊಳಿಸುವುದು ಅಸಾಧ್ಯವಾದುದರಿಂದ, ಮೆದುಳಿಗೆ ಸಂಭವಿಸಿದ ಹಾನಿಯನ್ನು ನಿಯಂತ್ರಿಸಲು ರೋಗಿಯನ್ನು ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡುವುದು ಪ್ರಾಣರಕ್ಷಕವೆನಿಸುವುದು. 

ಈ ಸಮಸ್ಯೆಗೆ ಕಾರಣವೇನು? 

ಮನುಷ್ಯನ ಹೃದಯವು ಕರೋಟಿಡ್ ಮತ್ತು ವರ್ಟಿಬ್ರಲ್ ಆರ್ಟರಿಗಳೆಂಬ ಎರಡು ಜೊತೆ ರಕ್ತನಾಳಗಳ ಮೂಲಕ ಮೆದುಳಿಗೆ ನಿರಂತರವಾಗಿ ಶುದ್ಧ ರಕ್ತವನ್ನು ಪೂರೈಸುತ್ತದೆ. ಇವುಗಳಲ್ಲಿ ವರ್ಟಿಬ್ರಲ್ ಆರ್ಟರಿಗಳು ಮೆದುಳಿನ ಕಾಂಡದ ಬಳಿ ಒಂದಾಗಿ, ಬಾಸಿಲಾರ್ ಆರ್ಟರಿಯಾಗಿ ಪರಿವರ್ತನೆಗೊಳ್ಳುತ್ತವೆ. 

ಮನುಷ್ಯನಿಗೆ ವಯಸ್ಸಾದಂತೆಯೇ ಸ್ವಾಭಾವಿಕವಾಗಿ ಅಥವಾ ಅತಿ ಧೂಮಪಾನದ ಚಟದಿಂದಾಗಿ ಹಾಗೂ ಮಧುಮೇಹದಂತಹ ಕಾಯಿಲೆಗಳಿಂದಾಗಿ, ಶರೀರದ ರಕ್ತನಾಳಗಳು ಪೆಡಸಾಗುತ್ತವೆ. ವೈದ್ಯಕೀಯ ಪರಿಭಾಷೆಯಲ್ಲಿ ಈ ಸ್ಥಿತಿಯನ್ನು ಆರ್ಟಿರಿಯೋ ಸ್ಕ್ಲೆರೋಸಿಸ್ ಎನ್ನುವರು. ಇದರೊಂದಿಗೆ ಈ ರಕ್ತನಾಳಗಳ ಒಳಮೈಯಲ್ಲಿ ಪಾಚಿಯಂತೆ ಸಂಗ್ರಹವಾಗುವ ಕೊಬ್ಬಿನ ಅಂಶಗಳಿಂದಾಗಿ ರಕ್ತನಾಳಗಳು ಸಂಕುಚಿತಗೊಳ್ಳುವುದರಿಂದ, ಇವುಗಳ ಮೂಲಕ ಮೆದುಳಿಗೆ ಪೂರೈಕೆಯಾಗುವ ರಕ್ತದ ಪ್ರಮಾಣವೂ ನಿಧಾನವಾಗಿ ಕುಂಠಿತಗೊಳ್ಳುವುದು. ಕೆಲವೊಮ್ಮೆ ಈ ರಕ್ತನಾಳಗಳಲ್ಲಿ ಹೆಪ್ಪುಗಟ್ಟಿದ ರಕ್ತದ ಅಥವಾ ಕೊಬ್ಬಿನ ತುಣುಕುಗಳು ಸ್ವಸ್ಥಾನದಿಂದ ರಕ್ತದ ಪ್ರವಾಹದೊಂದಿಗೆ ಸಂಚರಿಸಿ ಉದ್ಭವಿಸುವ ಅಡಚಣೆಗಳಿಂದಾಗಿಯೂ, ಮೆದುಳಿಗೆ ಪೂರೈಕೆಯಾಗುವ ರಕ್ತದ ಪ್ರಮಾಣವು ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ನಶಿಸುತ್ತದೆ. ಈ ಸಂದರ್ಭದಲ್ಲಿ ಮೆದುಳಿಗೆ ಪೂರೈಕೆಯಾಗುವ ಪೋಷಕಾಂಶಗಳ ಕೊರತೆಯಿಂದ ಸಂಭವಿಸುವ ಮೆದುಳಿನ ಆಘಾತಕ್ಕೆ "ಇಸ್ಕೀಮಿಕ್ ಸ್ಟ್ರೋಕ್" ಎಂದು ಕರೆಯುತ್ತಾರೆ. 

ಅಂತೆಯೇ ಮೆದುಳಿನ ಒಳ ಅಥವಾ ಹೊರಭಾಗದಲ್ಲಿನ ರಕ್ತನಾಳಗಳಲ್ಲಿ ಕಾರಣಾಂತರಗಳಿಂದ ರಕ್ತಸ್ರಾವವಾದಲ್ಲಿ, ಕ್ಷಣಮಾತ್ರದಲ್ಲಿ ಮೆದುಳಿಗೆ ತೀವ್ರ ಹಾನಿಯಾಗಿ ಸಂಭವಿಸುವ ಆಘಾತವನ್ನು " ಹೆಮೊರೆಜಿಕ್ ಸ್ಟ್ರೋಕ್' ಎನ್ನುತ್ತಾರೆ. 

ಸಾಮಾನ್ಯವಾಗಿ ಹೆಮೊರೆಜಿಕ್ ಸ್ಟ್ರೋಕ್ ಸಂಭವಿಸಲು ತೀವ್ರ ಅಧಿಕ ರಕ್ತದೊತ್ತಡ, ಅಪಘಾತದ ಸಂದರ್ಭದಲ್ಲಿ ತಲೆಗೆ ಬೀಳುವ ಹೊಡೆತ- ಪೆಟ್ಟು, ಅಪರೂಪದಲ್ಲಿ ತ್ವರಿತ ಗತಿಯಲ್ಲಿ ಬೆಳೆಯುತ್ತಿರುವ ಮೆದುಳಿನ ಗೆಡ್ಡೆಗಳು( ಟ್ಯೂಮರ್), ಮತ್ತು ಮೆದುಳಿನ ರಕ್ತನಾಳಗಳು ಕಾರಣಾಂತರಗಳಿಂದ ಶಿಥಿಲವಾಗಿ ದುರ್ಬಲಗೊಂಡು, ಚಿಕ್ಕಗುಳ್ಳೆಯಂತೆ ಹಿಗ್ಗಿದಾಗ (ಅನ್ಯೂರಿಸಂ) ಮತ್ತು ಇವುಗಳು ಒಡೆದು ರಕ್ತಸ್ರಾವವಾಗುವುದೂ ಕಾರಣವೆನಿಸುತ್ತದೆ. 

ಇದರೊಂದಿಗೆ ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ತೂಕ- ಅತಿಬೊಜ್ಜು, ಅತಿ ಧೂಮಪಾನ, ಅತಿಯಾದ ಕೊಲೆಸ್ಟರಾಲ್, ತೀವ್ರ ರಕ್ತಹೀನತೆ, ರಕ್ತದೊತ್ತಡ ತೀವ್ರವಾಗಿ ಕುಸಿಯುವುದು ಮತ್ತು ಅನುವಂಶಿಕತೆಯೂ ಮೆದುಳಿನ ಆಘಾತಕ್ಕೆ ಕಾರಣವಾಗುವ ಸಾಧ್ಯತೆಗಳಿವೆ. 

ಪೂರ್ವಸೂಚನೆ- ಲಕ್ಷಣ 

ಬಹುತೇಕ ರೋಗಿಗಳಲ್ಲಿ ಮೆದುಳಿನ ಆಘಾತದಿಂದಾಗಿ ಸಂಭವಿಸುವ ಪಕ್ಷವಾತವು ಪ್ರತ್ಯಕ್ಷವಾಗುವ ಮುನ್ನ ಕೆಲವೊಂದು ಪೂರ್ವಸೂಚನೆಗಳನ್ನು ನೀಡುವುದುಂಟು. ಮತ್ತೆ ಕೆಲವರಲ್ಲಿ ಒಂದುಬಾರಿ ಸಂಭವಿಸಿದ ಪಕ್ಷವಾತವು ಮುಂದೆ ಮತ್ತೊಮ್ಮೆ ಬಂದೆರಗಲಿರುವ ಪಕ್ಷವಾತದ ಪೂರ್ವಸೂಚನೆ ಎನಿಸುತ್ತದೆ. ಏಕೆಂದರೆ ಹೃದಯಾಘಾತದಂತೆಯೇ ಪಕ್ಷವಾತವೂ ಒಬ್ಬ ರೋಗಿಯನ್ನು ಒಂದಕ್ಕೂ ಹೆಚ್ಚುಬಾರಿ ಬಾಧಿಸುವುದು ಅಪರೂಪವೇನಲ್ಲ. 

ಇಸ್ಕೀಮಿಕ್ ಸ್ಟ್ರೋಕ್ ನ ಪೂರ್ವಸೂಚನೆಗಳಲ್ಲಿ ಕ್ಷಣಕಾಲ ರೋಗಿಯನ್ನು ಬಾಧಿಸಿ, ತಾನಾಗಿಯೇ ಮಾಯವಾಗುವ " ತಾತ್ಕಾಲಿಕ ಪಕ್ಷವಾತ" ( ಟ್ರಾನ್ಸಿಯೆಂಟ್ ಇಸ್ಕೀಮಿಕ್ ಎಟಾಕ್, ಟಿ.ಐ.ಎ ) ಪ್ರಮುಖವಾಗಿದೆ. ಕೆಲವೇ ನಿಮಿಷಗಳಿಂದ ಹಿಡಿದು ಕೆಲವು ಘಂಟೆಗಳ ಕಾಲ " ಇದ್ದು ಹೋಗುವ" ಈ ಸಮಸ್ಯೆ ಉದ್ಭವಿಸುವ ಮೊದಲು ಒಂದು ಕಣ್ಣಿನಲ್ಲಿ ದೃಷ್ಟಿದೋಷ, ಆಂಶಿಕ ಅಥವಾ ಸಂಪೂರ್ಣ ದೃಷ್ಟಿನಾಶ, ದೃಷ್ಟಿ ಮಸುಕಾಗುವುದು, ಒಂದು ಕೈ ಮತ್ತು ಒಂದು ಕಾಲಿನಲ್ಲಿ ಅಥವಾ ಕೈಕಾಲುಗಳೆರಡರಲ್ಲೂ ಬಲಹೀನತೆ,ಸ್ಪರ್ಶಜ್ಞಾನದ ಹಾಗೂ ಕಾರ್ಯಕ್ಷಮತೆಯ ಕೊರತೆ ಅಥವಾ ಅಭಾವ ಕಂಡುಬರುವುದು. ಇದಲ್ಲದೆ ಮಾತನಾಡುವಾಗ ತೊದಲುವುದು, ಭಾಷಾ ಸಮಸ್ಯೆ, ಮುಖದ ಒಂದುಭಾಗ ಜೋತುಬಿದ್ದಂತಾಗಿ ವಕ್ರವಾಗುವುದು, ತಲೆ ತಿರುಗಿದಂತಾಗುವುದುಮತ್ತು ಕಣ್ಣು ಕತ್ತಲಾವರಿಸಿದಂತೆ ಆಗುವುದೇ ಮುಂತಾದ ಲಕ್ಷಣಗಳು ಕಂಡುಬರುತ್ತವೆ. 

ಹೆಮೊರೆಜಿಕ್ ಸ್ಟ್ರೋಕ್ ಸಂಭವಿಸುವ ಮೊದಲು ಕ್ಷಣಮಾತ್ರದಲ್ಲಿ ಆರಂಭವಾಗಿ ಅತಿಯಾಗಿ ಉಲ್ಬಣಿಸುವ ಅಸಾಮಾನ್ಯ ತಲೆನೋವು, ವಾಂತಿ, ಅಪಸ್ಮಾರ ಮತ್ತು ಪ್ರಜ್ಞಾಹೀನತೆಯಂತಹ ಲಕ್ಷಣಗಳು ಕಂಡುಬರುತ್ತವೆ. 

ಅಪಾಯಕಾರಿ ಅಂಶಗಳು 

ತಾತ್ಕಾಲಿಕ ಪಕ್ಷವಾತದಲ್ಲಿ (ಟಿ.ಐ.ಎ) ಮೆದುಳಿಗೆ ಪೂರೈಸುವ ರಕ್ತನಾಳವೊಂದರಲ್ಲಿ ಆಕಸ್ಮಿಕವಾಗಿ ಉದ್ಭವಿಸುವ ಅಡಚಣೆಯಿಂದಾಗಿ ಪಕ್ಷವಾತದ ಲಕ್ಷಣಗಳು ಕಂಡುಬಂದರೂ, ಇದರಿಂದಾಗಿ ಮೆದುಳಿಗೆ ಗಂಭೀರವಾದ ಹಾನಿ ಸಂಭವಿಸುವ ಮೊದಲು ಈ ಅಡಚಣೆ ತಾನಾಗಿಯೇ ನಿವಾರಿಸಲ್ಪಡುವುದು. ಆದರೂ ಗಂಭೀರ ಸಮಸ್ಯೆಯೊಂದು ಸ್ವಯಂ ಪರಿಹಾರಗೊಂಡರೂ ನಿರ್ಲಕ್ಷಿಸದೆ ತುರ್ತುಚಿಕಿತ್ಸೆ ಪಡೆಯುವುದರಿಂದ, ಮುಂದೆ ಸಂಭವಿಸಬಹುದಾದ ಪೂರ್ಣ ಪ್ರಮಾಣದ ಪಕ್ಷವಾತವನ್ನು ತಡೆಗಟ್ಟುವುದು ಸುಲಭಸಾಧ್ಯ ಎನಿಸುವುದು. 

ಟಿ.ಐ.ಎ ಪೀಡಿತ ಶೇ.೧೦ ರಷ್ಟು ರೋಗಿಗಳಲ್ಲಿ ಮುಂದಿನ ಎರಡು ವಾರಗಳ ಅವಧಿಯಲ್ಲಿ ಪೂರ್ಣ ಪ್ರಮಾಣದ ಪಕ್ಷವಾತ ಸಂಭವಿಸುವುದು. ಅಂತೆಯೇ ಪೂರ್ಣ ಪ್ರಮಾಣದ ಪಕ್ಷವಾತಕ್ಕೆ ಒಳಗಾದವರಲ್ಲಿ ಶೇ. ೩೦ ಮಂದಿಗೆ ಇದಕ್ಕೂ ಮುನ್ನ ತಾತ್ಕಾಲಿಕ ಪಕ್ಷವಾತ ಬಾಧಿಸಿರುತ್ತದೆ. 

ತಾತ್ಕಾಲಿಕ ಪಕ್ಷವಾತಕ್ಕೆ ದೊಡ್ಡ ಅಥವಾ ಸಣ್ಣಪುಟ್ಟ ರಕ್ತನಾಳಗಳ ಅಡಚಣೆಯೊಂದಿಗೆ, ಕೆಲವೊಮ್ಮೆ ಹೃದಯ ಸಂಬಂಧಿ ಕಾಯಿಲೆಗಳೂ ಕಾರಣವಾಗುತ್ತವೆ. ಆದುದರಿಂದ ಈ ಸಮಸ್ಯೆಯ ನಿರ್ದಿಷ್ಟ ಕಾರಣವನ್ನು ಅರಿಯಲು ಅವಶ್ಯಕ ಪರೀಕ್ಷೆಗಳನ್ನು ನಡೆಸಲೆಬೇಕಾಗುತ್ತದೆ. ಇದರೊಂದಿಗೆ ತಜ್ಞವೈದ್ಯರ ಸಲಹೆಯಂತೆ ಔಷದ- ಶಸ್ತ್ರ ಚಿಕಿತ್ಸೆಯ ಮೂಲಕ ಮುಂದೆ ಸಂಭವಿಸಬಹುದಾದ ಆಘಾತಗಳನ್ನು ನಿವಾರಿಸಿಕೊಳ್ಳಬಹುದು. 

ಇದೇ ರೀತಿಯಲ್ಲಿ ಕರೋಟಿಡ್ ರಕ್ತನಾಳಗಳ ಒಳಮೈಯಲ್ಲಿ ಸಂಗ್ರಹವಾಗಿರುವ ಕೊಬ್ಬು ಇತ್ಯಾದಿ ಅಂಶಗಳಿಂದಾಗಿ ಇವುಗಳು ಸಂಕುಚಿತಗೊಂಡು ಮೆದುಳಿಗೆ ಪೂರೈಕೆಯಾಗುವ ರಕ್ತದ ಪ್ರಮಾಣ ಕಡಿಮೆಯಾಗುವ ಸ್ಥಿತಿಯನ್ನು "ಕರೋಟಿಡ್ ಸ್ಟೆನೋಸಿಸ್" ಎನ್ನುತ್ತಾರೆ. ಈ ಅಡಚಣೆಯ ಪ್ರಮಾಣ ಶೇ. ೫೦ ಕ್ಕೂ ಕಡಿಮೆಯಿದ್ದಲ್ಲಿ ಔಷದ ಚಿಕಿತ್ಸೆ ಹಾಗೂ ಶೇ.೫೦ ಕ್ಕೂ ಹೆಚ್ಚಿದ್ದಲ್ಲಿ ಶಸ್ತ್ರಚಿಕಿತ್ಸೆ ಅವಶ್ಯಕವೆನಿಸುವುದು. ಇಂತಹ ನಿರ್ದಿಷ್ಟ ಚಿಕಿತ್ಸೆಗಳ ಮೂಲಕ ರಕ್ತನಾಳಗಳಲ್ಲಿನ ಅಡಚಣೆಗಳನ್ನು ನಿವಾರಿಸಿ, ಮತ್ತೆ ಸಹಜವಾದ ರಕ್ತಸಂಚಾರವನ್ನು ಪುನರ್ ಸ್ಥಾಪಿಸಲು ಸಾಧ್ಯವಾಗುವುದು. 

ಮೆದುಳಿನ ರಕ್ತನಾಳಗಳ ಹೊರಮೈ ಶಿಥಿಲಗೊಂಡು ದುರ್ಬಲವಾಗಿ, ಚಿಕ್ಕ ಗುಳ್ಳೆಯಂತೆ ಹಿಗ್ಗಿ ಸಂಭವಿಸುವ ಅನ್ಯೂರಿಸಂನಿಂದಾಗಿ ಕೆಲವೊಮ್ಮೆ ರಕ್ತವು ಹನಿಹನಿಯಾಗಿ ಜಿನುಗುವುದು. ಆದರೆ ಕಾರಣಾಂತರಗಳಿಂದ ಅನ್ಯೂರಿಸಂ ಒಡೆದು ತೀವ್ರ ರಕ್ತಸ್ರಾವವಾಗುವ ಸಾಧ್ಯತೆಗಳೂ ಇವೆ. ಮೆದುಳಿನ ಒಳಭಾಗದಲ್ಲಿ ಸಂಭವಿಸುವ ಇಂತಹ ರಕ್ತಸ್ರಾವಕ್ಕೆ "ಇಂಟ್ರಾ ಸೆರೆಬ್ರಲ್ ಹೆಮೋರೇಜ್"(ಐ.ಸಿ.ಎಚ್) ಹಾಗೂ ಮೆದುಳಿನ ಹೊರಭಾಗದಲ್ಲಿ ಸಂಭವಿಸುವ ರಕ್ತಸ್ರಾವಕ್ಕೆ "ಸಬ್ ಅರಕ್ನಾಯ್ದ್ ಹೆಮೋರೇಜ್"(ಎಸ್.ಎ.ಎಚ್) ಎಂದು ಕರೆಯುವರು. 

ಎಸ್.ಎ.ಎಚ್ ಪೀಡಿತ ರೋಗಿಗಳಲ್ಲಿ ಶೇ.೩೦ ಮಂದಿ ಆಸ್ಪತ್ರೆಯನ್ನು ಸೇರುವ ಮುನ್ನವೇ ಮೃತಪಡುತ್ತಾರೆ. ಇನ್ನುಳಿದವರಲ್ಲಿ ಶೇ.೬೦ ಮಂದಿ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ. ಮತ್ತೆ ಶೇ.೧೦ ಮಂದಿ ಶಾಶ್ವತ ಅಂಗವೈಕಲ್ಯಗಳಿಂದ ಪೀಡಿತರಾಗುವುದು ಅಥವಾ ಇತರ ಸಮಸ್ಯೆಗಳಿಂದ ಮೃತಪಡುವುದು ಅಪರೂಪವೇನಲ್ಲ. 

ಅನೇಕರಲ್ಲಿ ಕರೋಟಿಡ್ ರಕ್ತನಾಳಗಳ ಅಡಚಣೆಯ ಪ್ರಮಾಣವನ್ನು ಪತ್ತೆಹಚ್ಚಲು ನಡೆಸುವ ಪರೀಕ್ಷೆಗಳ ಸಂದರ್ಭದಲ್ಲಿ ಪತ್ತೆಯಾಗುವ ಅನ್ಯೂರಿಸಂ, ಕೆಲವೊಮ್ಮೆ ತಾನಾಗಿ ಹಿಗ್ಗಿದಾಗ ಸಮೀಪದ ಮೆದುಳಿನ ಯಾವುದೇ ನರಗಳ ಅಥವಾ ಒಂದು ಭಾಗದ ಮೇಲೆ ಒತ್ತಡ ಬೀಳುವುದರಿಂದ, ಕೆಲವೊಂದು ವಿಶಿಷ್ಟ ಲಕ್ಷಣಗಳನ್ನು ತೋರುತ್ತದೆ. ಇವುಗಳಲ್ಲಿ ದೃಷ್ಟಿ ಮಸುಕಾಗುವುದು, ನೋಡುವ ವಸ್ತು ಎರಡಾಗಿ ಕಾಣಿಸುವುದು ಮತ್ತು ತಲೆನೋವು ಮುಖ್ಯವಾಗಿವೆ. 

ಸಾಮಾನ್ಯವಾಗಿ ಅನ್ಯೂರಿಸಂ ಉದ್ಭವಿಸಿರುವ ಸ್ಥಳ ಹಾಗೂ ಇದರ ಗಾತ್ರ ಮತ್ತು ರೋಗಿಯ ವೈದ್ಯಕೀಯ ಚರಿತ್ರೆಯನ್ನು ಹೊಂದಿಕೊಂಡು ತಜ್ಞವೈದ್ಯರು ಚಿಕಿತ್ಸೆಯನ್ನು ನಿರ್ಧರಿಸುವರು. ಅನ್ಯೂರಿಸಂ ನ ಗಾತ್ರ ವೃದ್ಧಿಸಿದಂತೆಯೇ ಹಾಗೂ ಸಮಯ ಕಳೆದಂತೆಯೇ ಇವು ಒಡೆಯುವ ಸಾಧ್ಯತೆಗಳು ಹೆಚ್ಚುತ್ತಲೇ ಹೋಗುತ್ತವೆ. ಅದೇ ರೀತಿಯಲ್ಲಿ ಅನ್ಯೂರಿಸಂ ನಿಂದ ರಕ್ತಸ್ರಾವವಾದಲ್ಲಿ ಈ ಸಮಸ್ಯೆ ಮರುಕಳಿಸುವ ಸಾಧ್ಯತೆಗಳೂ ಹೆಚ್ಚುತ್ತವೆ. 

ಅನ್ಯೂರಿಸಂ ಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ತಲೆಬುರುಡೆಯನ್ನು ತೆರೆದು, ಅನ್ಯೂರಿಸಂ ನ ಬುಡದಲ್ಲಿ "ಕ್ಲಿಪ್" ಅಳವಡಿಸುವುದು ಅಥವಾ ರಕ್ತನಾಳಗಳ ಮೂಲಕ " ನ್ಯೂರೋ ಎಂಡೋವಾಸ್ಕ್ಯುಲಾರ್ ಥೆರಪಿ" ಮೂಲಕವೂ ಈ ಸಮಸ್ಯೆಯನ್ನು ಪರಿಹರಿಸಬಹುದು. 

ಅಪರೂಪದಲ್ಲಿ ಕೆಲವೊಂದು ಜನರಲ್ಲಿ ಪತ್ತೆಯಾಗುವ ರಕ್ತನಾಳಗಳ ಅಸಾಮಾನ್ಯ ವಿಕೃತಿಗಳು ಹೆಚ್ಚಾಗಿ ಗರ್ಭಸ್ಥ ಶಿಶುವಿನಲ್ಲಿ ಉದ್ಭವಿಸುತ್ತವೆ. ಇವುಗಳಲ್ಲಿ ಶುದ್ಧ ಹಾಗೂ ಅಶುದ್ದ ರಕ್ತ ಹರಿಯುವ ರಕ್ತನಾಳಗಳ ಅಸಾಮಾನ್ಯ ಜೋಡಣೆಗಳು ಸೇರಿವೆ. ಅಶುದ್ಧ ರಕ್ತ ಹರಿವ ರಕ್ತನಾಳಗಳು ನೇರವಾಗಿ ಅಶುದ್ಧ ರಕ್ತಹರಿವ ರಕ್ತನಾಳಗಳೊಂದಿಗೆ ಜೋಡಣೆಯಾಗಿರುವುದು ಪತ್ತೆಯಾದಲ್ಲಿ, ಅವುಗಳು ಒಡೆದು ರಕ್ತಸ್ರಾವವಾಗುವುದನ್ನು ತಡೆಗಟ್ಟಲು ಶಸ್ತ್ರಚಿಕಿತ್ಸೆ ಅನಿವಾರ್ಯವೆನಿಸುವುದು. ರಕ್ತನಾಳಗಳ ವಿಕೃತಿಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಕ್ಷಿಪ್ರವಾಗಿ ಸರಿಪಡಿಸದಿದ್ದಲ್ಲಿ, ಇವುಗಳ ಸಮೀಪದ ಮೆದುಳಿನ ಭಾಗಗಳ ಮೇಲೆ ಒತ್ತಡ ಹೆಚ್ಚುವುದರಿಂದಾಗಿ ತಲೆನೋವು, ಅಪಸ್ಮಾರಗಳಂತಹ ಲಕ್ಷಣಗಳಲ್ಲದೇ, ಈ ರಕ್ತನಾಳಗಳು ಹಿಗ್ಗಿ ಒಡೆದು ರಕ್ತಸ್ರಾವವಾದಲ್ಲಿ ಮೆದುಳಿಗೆ ಶಾಶ್ವತವಾದ ಹಾನಿ, ಪಕ್ಷವಾತ ಮತ್ತು ಕೆಲವೊಮ್ಮೆ ರೋಗಿಯ ಮರಣಕ್ಕೂ ಕಾರಣವೆನಿಸುವುದು. 

ವಿಶದವಾಗಿ ವಿವರಿಸಿದ ಈ ಮೇಲಿನ ಅಪಾಯಕಾರಿ ಅಂಶಗಳ ಬಗ್ಗೆ ಹಾಗೂ ಮೆದುಳಿನ ಆಘಾತಕ್ಕೆ ನಿರ್ದಿಷ್ಟ ಕಾರಣಗಳ ಬಗ್ಗೆ ಏನೇನೂ ತಿಳಿದಿರದ ನಕಲಿ ವೈದ್ಯರು, ತಮ್ಮಲ್ಲಿ ಬರುವ ರೋಗಿಗಳ- ಅವರ ಸಂಬಂಧಿಗಳ ಅಜ್ನಾನವನ್ನೇ ಬಂಡವಾಳವನ್ನಾಗಿಸಿಕೊಂಡು ತಮ್ಮ ಜೇಬನ್ನು ತುಂಬಿಸಿಕೊಳ್ಳುವುದು ಮಾತ್ರ ಸುಳ್ಳೇನಲ್ಲ.

ಚಿಕಿತ್ಸೆ ಎಂತು - ಏನು 

ಆರೋಗ್ಯವಂತ ವ್ಯಕ್ತಿಗಳ ಹೃದಯವು ಶರೀರಕ್ಕೆ ಪೂರೈಸುವ ರಕ್ತದಲ್ಲಿ ಶೇ. ೨೦ ರಷ್ಟು ಮೆದುಳಿಗೆ ಸರಬರಾಜಾಗುತ್ತದೆ. ಈ ಶುದ್ಧ ರಕ್ತದ ಪ್ರಮಾಣವು ಶೇ. ೫೦ ಕ್ಕಿಂತ ಕಡಿಮೆಯಾದಲ್ಲಿ ಮೆದುಳಿನ ಕಾರ್ಯಕ್ಷಮತೆಯಲ್ಲಿ ವ್ತ್ಯತ್ಯಯವಾಗುವುದು. ರಕ್ತನಾಳಗಳಲ್ಲಿ ಹೆಪ್ಪುಗಟ್ಟಿದ ರಕ್ತದ ಅಥವಾ ಕೊಬ್ಬಿನ ತುಣುಕುಗಳಿಂದ ಉದ್ಭವಿಸಿದ ಅಡಚಣೆಯಿಂದಾಗಿ ಸಂಭವಿಸುವ ಇಸ್ಕೀಮಿಕ್ ಸ್ಟ್ರೋಕ್ ನಲ್ಲಿ ಈ ಅಡಚಣೆಗಳನ್ನು ಔಷದ ಅಥವಾ ಶಸ್ತ್ರಚಿಕಿತ್ಸೆಯಿಂದ ನಿವಾರಿಸಬೇಕಾಗುತ್ತದೆ. 

ಸಾಮಾನ್ಯವಾಗಿ ಕರೋಟಿಡ್  ಮತ್ತು ವರ್ಟೆಬ್ರಲ್ ಆರ್ಟರಿಗಳಲ್ಲಿ ಅಡಚಣೆಗಳು ಉದ್ಭವಿಸಿದರೂ, ಇವುಗಳ ಮೂಲಕ ಕಿಂಚಿತ್ ಪ್ರಮಾಣದ ರಕ್ತವು ಮೆದುಳಿಗೆ ಪೂರೈಕೆಯಾಗುವುದು. ಆದರೆ ಈ ಅಲ್ಪಪ್ರಮಾಣದ ರಕ್ತದಿಂದ ಮೆದುಳಿನ ಜೀವಕಣಗಳಿಗೆ ಅಗತ್ಯವಿರುವಷ್ಟು ಪೋಷಕಾಂಶಗಳು ದೊರೆಯದ ಕಾರಣದಿಂದಾಗಿ, ಮೆದುಳಿನ ಕಾರ್ಯಕ್ಷಮತೆ ಕುಂಠಿತವಾಗುವುದಲ್ಲದೆ ಅದರ ಕಾರ್ಯವೂ ಸ್ಥಗಿತಗೊಳ್ಳುವುದು. ತತ್ಪರಿಣಾಮವಾಗಿ ಮೆದುಳಿನ ಆಘಾತ ಸಂಭವಿಸುವುದು. ಈ ಸಂದರ್ಭದಲ್ಲಿ ಮೆದುಳಿನ ನಿರ್ದಿಷ್ಟ ಸ್ಥಾನವೊಂದರಲ್ಲಿ ರಕ್ತದ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಲ್ಲಿ ಇಲ್ಲಿನ ಜೀವಕಣಗಳು ೩ ರಿಂದ ೫ ನಿಮಿಷಗಳಲ್ಲಿ ಮೃತಪಡುತ್ತವೆ. ಆದರೆ ಇದರ ಸುತ್ತಮುತ್ತಲಿನ ಭಾಗದಲ್ಲಿರುವ ಜೀವಕಣಗಳು ತಮ್ಮ ಕಾರ್ಯಕ್ಷಮತೆಯನ್ನು ಕಳೆದುಕೊಂಡರೂ ಜೀವಂತವಾಗಿರುತ್ತವೆ. ಈ ಸ್ಥಿತಿಯಲ್ಲಿ ಮೆದುಳಿನ ಈ ಭಾಗದ ಜೀವಕಣಗಳು ಸುಮಾರು ೩ ಘಂಟೆಗಳ ಕಾಲ ಬದುಕಿ ಉಳಿಯುತ್ತವೆ. ಆಧುನಿಕ ಚಿಕಿತ್ಸಾ ಪದ್ದತಿಯಂತೆ ಈ ಜೀವಕಣಗಳನ್ನು ರಕ್ಷಿಸುವುದರೊಂದಿಗೆ, ಮೆದುಳಿಗೆ ಸಂಭವಿಸುವ ಶಾಶ್ವತ ಹಾನಿಯನ್ನು ಯಶಸ್ವಿಯಾಗಿ ನಿಯಂತ್ರಿಸಬಹುದಾಗಿದೆ. ಆದರೆ ಈ ಚಿಕಿತ್ಸೆಯನ್ನು ರೋಗಿಗೆ ಆಘಾತವಾದ ೩ ಘಂಟೆಗಳ ಅವಧಿಯಲ್ಲಿ ನೀಡಬೇಕಾಗುವುದು. ಮಾತ್ರವಲ್ಲ, ಈ ಚಿಕಿತ್ಸೆಯನ್ನು ನೀಡುವ ಮೊದಲು ರೋಗಿಯನ್ನು ಪರೀಕ್ಷೆಗೊಳಪಡಿಸಿ, ಮೆದುಳಿನ ರಕ್ತಸ್ರಾವ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗುವುದು. 

ಮೆದುಳಿನ ರಕ್ತಸ್ರಾವದಿಂದ ಸಂಭವಿಸುವ ಹೆಮೊರೆಜಿಕ್ ಸ್ಟ್ರೋಕ್, ಕೆಲವೊಮ್ಮೆ ಇಸ್ಕೀಮಿಕ್ ಸ್ಟ್ರೋಕ್ ನ ಪರಿಣಾಮವಾಗಿ ಉದ್ಭವಿಸಿದ ಸಮಸ್ಯೆಗಳಿಂದಾಗಿ ಅಥವಾ ಹೆಪ್ಪುಗಟ್ಟಿದ ರಕ್ತದ ತುಣುಕುಗಳು ಕರಗಲು ನೀಡಿದ ಔಷದಗಳ ಪರಿಣಾಮವಾಗಿಯೂ ಸಂಭವಿಸಬಹುದು. ಹೆಮೊರೆಜಿಕ್ ಸ್ಟ್ರೋಕ್ ಗೆ ಕಾರಣಗಳು ಭಿನ್ನವಾಗಿದ್ದರೂ, ಇದೊಂದು ಗಂಭೀರ ಹಾಗೂ ಮಾರಕ ಸಮಸ್ಯೆಯಾದುದರಿಂದ ಕ್ಷಿ ಪ್ರಗತಿಯಲ್ಲಿ ತುರ್ತುಚಿಕಿತ್ಸೆ ನೀಡಬೇಕಾಗುವುದು. 

ಮೆದುಳಿನ ಒಳಭಾಗದಲ್ಲಿ ರಕ್ತಸ್ರಾವದಿಂದ ಹೆಪ್ಪುಗಟ್ಟಿದ ರಕ್ತವನ್ನು ಶಸ್ತ್ರಚಿಕಿತ್ಸೆಯ ಅಥವಾ ಇತರ ವಿಧಾನದಿಂದ ತೆಗೆಯಬೇಕಾಗುವುದು. ಅಂತೆಯೇ ಮೆದುಳಿನ ಹೊರಭಾಗದಲ್ಲಿ ರಕ್ತಸ್ರಾವವಾಗಿ ಮೆದುಳು- ಬೆನ್ನುಹುರಿಯ ದ್ರವದಲ್ಲಿ ರಕ್ತದ ಅಂಶಗಳು ಪತ್ತೆಯಾದಲ್ಲಿ, ಮೆದುಳಿನ ಹೊರಭಾಗದಲ್ಲಿ ಶುದ್ಧ ರಕ್ತ ಹರಿವ ರಕ್ತನಾಳಗಳು ಸ್ವಯಂ ಸಂಕುಚಿತವಾಗುತ್ತವೆ. ರಕ್ತಸ್ರಾವ ಸಂಭವಿಸಿದ ಒಂದೆರಡು ದಿನಗಳಿಂದ ಹಿಡಿದು, ಒಂದೆರಡು ವಾರಗಳ ತನಕ ಈ ಸಮಸ್ಯೆ ಬಾಧಿಸುವ ಸಾಧ್ಯತೆಗಳಿದ್ದು ಇದರ ಪರಿಣಾಮವಾಗಿ ಮತ್ತಷ್ಟು ಆಘಾತಗಳಾಗುವುದುಂಟು. ಕೆಲವೊಮ್ಮೆ ಮೆದುಳು- ಬೆನ್ನುಹುರಿಯ ದ್ರವವು ಮೆದುಳಿನ ಸುತ್ತಲಿನ ಭಾಗದಲ್ಲಿ ಸಂಗ್ರಹವಾಗಿ ಹೈಡ್ರೋ ಸೆಫಾಲಸ್ ಉದ್ಭವಿಸುವುದು. ಮೆದುಳಿನ ಸುತ್ತಲೂ ಸಂಗ್ರಹವಾಗುವ ಈ ದ್ರವವು ಸ್ವಾಭಾವಿಕವಾಗಿ ಶರೀರದಲ್ಲಿ ಹೀರಲ್ಪಡುವ ಪ್ರಕ್ರಿಯೆಯು ಸಬ್ ಅರಕ್ನಾಯ್ದ್ ಹೆಮೊ ರೇಜ್ ನಿಂದಾಗಿ ಕುಂಠಿತಗೊಳ್ಳುವುದು. ಸಾಮಾನ್ಯವಾಗಿ ಎಸ್.ಎ.ಎಚ್ ಸಂಭವಿಸಿದ ಬಳಿಕ ಹೈಡ್ರೋ ಸೇಫಾಲಸ್ ತಲೆದೋರಲು ಹಲವಾರು ತಿಂಗಳುಗಳೇ ಬೇಕಾಗಬಹುದು. ಈ ಸಮಸ್ಯೆಯನ್ನು ಸಿ.ಟಿ ಸ್ಕ್ಯಾನ್ ಮೂಲಕ ಪತ್ತೆ ಹಚ್ಚಿ, ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಬಹುದು. 

 ಇವೆಲ್ಲ ಚಿಕಿತ್ಸೆಗಳ ಹೊರತಾಗಿಯೂ ಪಕ್ಷವಾತದ ಪರಿಣಾಮವಾಗಿ ರೋಗಿಯ ಶರೀರದ ಒಂದು ಭಾಗದ ಅಂಗಾಂಗಗಳು ತಮ್ಮ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಇದನ್ನು ಸರಿಪಡಿಸಲು " ಫಿಸಿಯೋಥೆರಪಿ" ಯನ್ನು ಹಲವಾರು ತಿಂಗಳುಗಳ ಕಾಲ ನಿರಂತರ ಹಾಗೂ ಕ್ರಮಬದ್ಧವಾಗಿ ಪಡೆದುಕೊಳ್ಳುವ ಮೂಲಕ, ಅನೇಕ ರೋಗಿಗಳು ತಮ್ಮ ಅಂಗಾಂಗಗಳ ಕಾರ್ಯಾಕ್ಷಮತೆಯನ್ನು ಮತ್ತೆ ಸಹಜ ಸ್ಥಿತಿಗೆ ಮರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ನಿಮಗಿದು ತಿಳಿದಿರಲಿ 

ಪ್ರಸ್ತುತ ಪ್ರಪಂಚದ ಅತಿಹೆಚ್ಚು ಜನರ ಮರಣಕ್ಕೆ ಕಾರಣವೆನಿಸುವ ಕಾಯಿಲೆಗಳಲ್ಲಿ, ಹೃದ್ರೋಗ ಮತ್ತು ಕ್ಯಾನ್ಸರ್ ನ ಬಳಿಕ ಮೂರನೆಯ ಸ್ಥಾನವು ಮೆದುಳಿನ ಆಘಾತಕ್ಕೆ ಸಲ್ಲುತ್ತದೆ.ಈ ವಿಶಿಷ್ಟ ವ್ಯಾಧಿ ಹಾಗೂ ಇದರ ಚಿಕಿತ್ಸೆಯ ಬಗ್ಗೆ ಇಂದಿನ ವೈಜ್ಞಾನಿಕ ಯುಗದಲ್ಲೂ ಜನಮನದಲ್ಲಿ ಭದ್ರವಾಗಿ ಬೇರೂರಿರುವ ತಪ್ಪುಕಲ್ಪನೆಗಳು ಮತ್ತು ಮೂಢನಂಬಿಕೆಗಳಿಂದಾಗಿ, ಅನೇಕ ರೋಗಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವುದು ಸತ್ಯ. ಇದರೊಂದಿಗೆ ನಕಲಿವೈದ್ಯರು ಈ ವ್ಯಾಧಿಯ ಅಸಲಿ ಕಾರಣವನ್ನು ಅರಿತುಕೊಳ್ಳದಿದ್ದರೂ, ನೀಡುವ ಅಸಮರ್ಪಕ, ಅಪ್ರಯೋಜಕ ಚಿಕಿತ್ಸೆಯಿಂದಾಗಿ ಇನ್ನಷ್ಟು ರೋಗಿಗಳು ಶಾಶ್ವತವಾದ ಮೆದುಳಿನ ಹಾನಿ ಮತ್ತು ತತ್ಸಂಬಂಧಿತ ಸಮಸ್ಯೆಗಳಿಂದಾಗಿ ಹಾಸಿಗೆ ಹಿಡಿದಿರುವುದು ಅಥವಾ ಇಹಲೋಕವನ್ನೇ ತ್ಯಜಿಸಿರುವುದು ಕೂಡಾ ಅಷ್ಟೇ ಸತ್ಯ!. 

ಮೆದುಳಿನ ಆಘಾತದಿಂದಾಗಿ ಸಂಭವಿಸುವ ಪಕ್ಷವಾತಕ್ಕೆ " ಇಂಗ್ಲಿಷ್ ಮದ್ದು" ಸೂಕ್ತವಲ್ಲ ಎನ್ನುವುದು ಅನೇಕ ವಿದ್ಯಾವಂತರೂ ನಂಬಿರುವ ಅಪ್ಪಟ ಸುಳ್ಳು. ನಿಜ ಹೇಳಬೇಕಿದ್ದಲ್ಲಿ ಈ ವ್ಯಾಧಿ ಉದ್ಭವಿಸಲು ನಿಖರವಾದ ಕಾರಣವನ್ನು ಅರಿತುಕೊಳ್ಳಬೇಕಿದ್ದಲ್ಲಿ,  ಇದೇ ಇಂಗ್ಲಿಷ್ ಪದ್ದತಿಯ ಪರೀಕ್ಷೆಗಳು ಅನಿವಾರ್ಯ ಎನ್ನುವುದು ಕೂಡಾ ಅನೇಕರಿಗೆ ತಿಳಿದಿಲ್ಲ. ಸಿ ಟಿ ಸ್ಕ್ಯಾನ್, ಎಂ ಆರ್ ಐ, ಎಂ ಆರ್ ಎ, ಡಾಪ್ಲರ್ ಅಲ್ಟ್ರಾ ಸೌಂಡ್ ಮತ್ತಿತರ ಪರೀಕ್ಷೆಗಳ ಮೂಲಕ ಮೆದುಳಿನ ಆಘಾತದ ಕಾರಣವನ್ನು ಪತ್ತೆಹಚ್ಚದೆ ನೀಡುವ ಯಾವುದೇ ಪದ್ದತಿಯ ಚಿಕಿತ್ಸೆ ಫಲಪ್ರದವೆನಿಸದು. 

ಅಂತೆಯೇ ರಕ್ತನಾಳಗಳ ಅಡಚಣೆ ಮತ್ತು ರಕ್ತಸ್ರಾವದಿಂದ ಸಂಭವಿಸುವ ಆಘಾತಗಳ ಚಿಕಿತ್ಸೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಇದೇ ಕಾರಣದಿಂದಾಗಿ ಮೆದುಳಿನ ಆಘಾತಕ್ಕೆ ಒಳಗಾದ ರೋಗಿಯನ್ನು ತಕ್ಷಣ ಸುಸಜ್ಜಿತ ಆಸ್ಪತ್ರೆಗೆ ದಾಖಲಿಸಿ, ಅವಶ್ಯಕ ಪರೀಕ್ಷೆಗಳ ಮೂಲಕ ಸಮಸ್ಯೆಯ ಮೂಲ ಕಾರಣವನ್ನು ಪತ್ತೆಹಚ್ಚಿ, ರೋಗಿಯನ್ನು ಪ್ರಾಣಾಪಾಯದಿಂದ ಪಾರುಮಾಡಲು ತಜ್ನವೈದ್ಯರಿಂದ ಚಿಕಿತ್ಸೆ ಪಡೆಯುವುದು ಹಿತಕರವೆನಿಸುವುದು. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೩-೦೬-೨೦೦೪ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.  


No comments:

Post a Comment