Thursday, March 13, 2014

Sedentary lifestyle





  ನಿಷ್ಕ್ರಿಯ ಜೀವನಶೈಲಿ: ಅನಾರೋಗ್ಯದ ಥೈಲಿ!

ಪ್ರಾಥಮಿಕ ಶಾಲೆಯಲ್ಲಿ ಓದಿದ್ದ 'ಆರೋಗ್ಯವೇ ಭಾಗ್ಯ" ಎನ್ನುವ ಮುತ್ತಿನಂತಹ ಮಾತುಗಳನ್ನು ಬಹುತೇಕ ಜನರು ದುಡಿಯಲು ಆರಂಭಿಸಿದ ಬಳಿಕ ಮರೆತುಬಿಡುತ್ತಾರೆ. ಏಕೆಂದರೆ ಅಧಿಕತಮ ಭಾರತೀಯರು ಯೌವ್ವನಾವಸ್ಥೆಯಲ್ಲಿ ಕೈತುಂಬಾ ಹಣವನ್ನು ಸಂಪಾದಿಸುವ ಸಲುವಾಗಿ, ಹಗಲಿರುಳು ದುಡಿಯುವ ಮೂಲಕ ಅಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಾರೆ. ಬಳಿಕ ತಾವು ಕಳೆದುಕೊಂಡಿದ್ದ ಆರೋಗ್ಯವನ್ನು ಮರಳಿ ಗಳಿಸಿಕೊಳ್ಳಲು, ತಾವು ಕಷ್ಟಪಟ್ಟು ದುಡಿದಿದ್ದ ಹಣವನ್ನೆಲ್ಲಾ  ವ್ಯಯಿಸುತ್ತಾರೆ!. ಆದರೆ ಕಳೆದುಕೊಂಡ ಆರೋಗ್ಯವನ್ನು ಮತ್ತೆ ಗಳಿಸುವುದು ಅಷ್ಟೊಂದು ಸುಲಭವೇನಲ್ಲ. ಆದುದರಿಂದ ಬಾಲ್ಯದಿಂದಲೇ ನಿಮ್ಮ ಮಕ್ಕಳ ಶಾರೀರಿಕ, ಮಾನಸಿಕ ಮತ್ತು ಸಾಮಾಜಿಕ ಸ್ವಾಸ್ಥ್ಯಗಳನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳುವುದು ಹಿತಕರವೆಂದು ಹಿರಿಯ ವೈದ್ಯರೇ ಹೇಳುತ್ತಾರೆ. 

ವೃದ್ಧಿಸುತ್ತಿರುವ ಆರೋಗ್ಯದ ಸಮಸ್ಯೆಗಳು 

ಪ್ರಸ್ತುತ ಭಾರತೀಯರನ್ನು ಬಾಧಿಸುತ್ತಿರುವ ಗಂಭೀರ ಹಾಗೂ ಮಾರಕ ಕಾಯಿಲೆಗಳ ಪ್ರಮಾಣವು ನಿಧಾನವಾಗಿ ಆದರೆ ನಿಶ್ಚಿತವಾಗಿಯೂ ಹೆಚ್ಚಲಾರಂಭಿಸಿದೆ. ಕೆಲ ದಶಕಗಳ ಹಿಂದೆ ಮಧ್ಯವಯಸ್ಸು ದಾಟಿದ ಬಳಿಕ ಅಥವಾ ಇಳಿವಯಸ್ಸಿನಲ್ಲಿ ತಲೆದೋರುತ್ತಿದ್ದ ಅನೇಕ ವ್ಯಾಧಿಗಳು ಇದೀಗ ಯೌವ್ವನಸ್ಥರನ್ನು ಪೀಡಿಸಲು ಆರಂಭಿಸಿವೆ. ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯದಂತೆ ಹೆಚ್ಚುತ್ತಿರುವ ಆದಾಯ, ಬದಲಾದ ಆಹಾರ ಸೇವನಾ ಪದ್ಧತಿ ಮತ್ತು ನಿಷ್ಕ್ರಿಯ ಜೀವನ ಶೈಲಿಗಳು ಈ ಸಮಸ್ಯೆಗೆ ಪ್ರಮುಖ ಕಾರಣವೆನಿವೆ. 

ನಮ್ಮ ದೈನಂದಿನ ಜೀವನವನ್ನು ಒಂದಿಷ್ಟು ಆರಾಮದಾಯಕವಾಗಿಸಲು ನಾವೇ ಸಂಶೋಧಿಸಿ ಆವಿಷ್ಕರಿಸಿರುವ ವೈವಿಧ್ಯಮಯ ಉಪಕರಣಗಳಿಂದಾಗಿ, ಭಾರತೀಯರಲ್ಲಿ ನಿಷ್ಕ್ರಿಯತೆಯ ಸಮಸ್ಯೆಯು ಇನ್ನಷ್ಟು ಬಿಗಡಾಯಿಸಿದೆ. 


  ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ವೈದ್ಯಾಧಿಕಾರಿಯೊಬ್ಬರ ಅಭಿಪ್ರಾಯದಂತೆ, ಭಾರತೀಯರಲ್ಲಿ ಶಾರೀರಿಕ ನಿಷ್ಕ್ರಿಯತೆಯ ಪ್ರಮಾಣವು ಅತ್ಯಧಿಕವಾಗಿದೆ. ಈ ರೀತಿಯ ಸೋಮಾರಿತನವನ್ನು ತೊರೆದು, ಶಾರೀರಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಜನರನ್ನು ಪ್ರೇರೇಪಿಸಬೇಕಾದ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆಯು ಹಮ್ಮಿಕೊಳ್ಳಬೇಕಾಗಿದೆ. ಇದರೊಂದಿಗೆ ಜನರ ನಿಷ್ಕ್ರಿಯತೆಯನ್ನು ತೊಡೆದುಹಾಕಬಲ್ಲ ಕೆಲವೊಂದು ನಿರ್ದಿಷ್ಟ ನೀತಿನಿಯಮಗಳನ್ನು ಸರಕಾರ ರೂಪಿಸಬೇಕಿದೆ. ತನ್ಮೂಲಕ ಭಾರತೀಯರನ್ನು ಬಾಧಿಸುತ್ತಿರುವ ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕತೂಕ ಹಾಗೂ ಅತಿಬೊಜ್ಜು ಮತ್ತು ಕ್ಯಾನ್ಸರ್ ಗಳಂತಹ ಗಂಭೀರ ಹಾಗೂ ಮಾರಕ ವ್ಯಾಧಿಗಳ ಸಂಭಾವ್ಯತೆಯನ್ನು ತಡೆಗಟ್ಟಬಹುದಾಗಿದೆ. ಆದರೆ ಈ ಸಮಸ್ಯೆಯನ್ನು ನಿರ್ಲಕ್ಷಿಸಿದಲ್ಲಿ ಈಗಾಗಲೇ ವಿಶ್ವದ ಮಧುಮೇಹಿಗಳ ರಾಜಧಾನಿ ಎನಿಸಿರುವ ನಮ್ಮ ದೇಶವು, ಅನ್ಯ ಗಂಭೀರ ವ್ಯಾಧಿಗಳ ರಾಜಧಾನಿಯಾಗಿ ಕುಖ್ಯಾತವಾಗುವ ಸಾಧ್ಯತೆಗಳಿವೆ. 

ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನದ ಕೇಂದ್ರವೆಂದೇಪ್ರಖ್ಯಾತವಾಗಿರುವ ಭಾರತ ದೇಶದ ಮಧ್ಯಮ ವರ್ಗದ ಜನರು, ಶಾರೀರಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಿರಲು ಉದ್ಯೋಗ ಸಂಬಂಧಿತ ನಿಷ್ಕ್ರಿಯತೆಯೂ ಒಂದು ಪ್ರಮುಖ ಕಾರಣವೆನಿಸಿದೆ. ಇದರೊಂದಿಗೆ ಪಾಶ್ಚಾತ್ಯರ ಜೀವನಶೈಲಿಯ ಅಂಧಾನುಕರಣೆ, ಅತ್ಯಧಿಕ ಮತ್ತು ನಿಷ್ಪ್ರಯೋಜಕ ಕ್ಯಾಲರಿಗಳಿರುವ " ನಿರುಪಯುಕ್ತ ಆಹಾರ" (junk food) ಗಳ ಅತಿಸೇವನೆ ಮತ್ತು ಇನ್ನಿತರ ಕಾರಣಗಳಿಂದಾಗಿ, ಗಂಭೀರ ಹಾಗೂ ಮಾರಕ ಆರೋಗ್ಯದ ಸಮಸ್ಯೆಗಳಿಗೆ ಸುಲಭದಲ್ಲೇ ತುತ್ತಾಗುತ್ತಿದ್ದಾರೆ. 

ಉದಾಹರಣೆಗೆ ಭಾರದಲ್ಲಿ ಅತಿಯಾಗಿ ಪತ್ತೆಯಾಗುತ್ತಿರುವ ಕ್ಯಾನ್ಸರ್ ವ್ಯಾಧಿಗಳಲ್ಲಿ, ಗಂಡಸರಲ್ಲಿ ಹೊಗೆಸೊಪ್ಪಿನ ಸೇವನೆಯಿಂದ ಉದ್ಭವಿಸುವ ಮತ್ತು ಸ್ತ್ರೀಯರಲ್ಲಿ ಶಾರೀರಿಕ ಸಂಪರ್ಕದಿಂದ ಹರಡುವ ಗರ್ಭಕೋಶದ ಕೊರಳಿನ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ಆದರೆ ಸದ್ಯೋಭವಿಷ್ಯದಲ್ಲಿ ಭಾರತೀಯರಲ್ಲಿ ಅನ್ಯವಿಧದ ಕ್ಯಾನ್ಸರ್ ಗಳ ಬಾಧೆಯು ಹೆಚ್ಚಲಿದ್ದು, ಶಾರೀರಿಕ ನಿಷ್ಕ್ರಿಯತೆಯೂ ಇದಕ್ಕೆ ಕಾರಣವೆನಿಸಲಿದೆ ಎಂದು ವಿಶ್ವ ಸಂಸ್ಥೆಯು ಎಚ್ಚರಿಕೆಯನ್ನು ನೀಡಿದೆ. 

ಶಾರೀರಿಕ ನಿಷ್ಕ್ರಿಯತೆಯಿಂದಾಗಿ ಉದ್ಭವಿಸಬಲ್ಲ ಗಂಭೀರ ಹಾಗೂ ಮಾರಕ ವ್ಯಾಧಿಗಳಿಗೆ ವಿಶ್ವಾದ್ಯಂತ ಸುಮಾರು ೩.೨ ದಶಲಕ್ಷ ಜನರು ವರ್ಷಂಪ್ರತಿ ಬಲಿಯಾಗುತ್ತಿದ್ದಾರೆ. ಇವರಲ್ಲಿ ೨.೬ ದಶಲಕ್ಷ ಜನರು ಅಲ್ಪ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳ ಪ್ರಜೆಗಳಾಗಿದ್ದಾರೆ. ಇದಲ್ಲದೆ ಶೇ. ೩೦ ರಷ್ಟು ಜನರಲ್ಲಿ ಹೃದಯಕ್ಕೆ ರಕ್ತವನ್ನು ಪೂರೈಕೆಮಾಡುವ ರಕ್ತನಾಳಗಳಲ್ಲಿನ ಅಡಚಣೆ ಮತ್ತು ಶೇ. ೨೭ ರಷ್ಟು ಜನರಲ್ಲಿ ಮಧುಮೇಹ ಉದ್ಭವಿಸಲು ನಿಷ್ಕ್ರಿಯತೆಯೇ ಕಾರಣವೆನಿಸುತ್ತಿದೆ. 

ಇಷ್ಟು ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಜನಸಾಮಾನ್ಯರ ಮರಣಕ್ಕೆ ಕಾರಣವೆನಿಸುತ್ತಿರುವ ಅಪಾಯಕಾರಿ ಅಂಶಗಳಲ್ಲಿ ನಿಷ್ಕ್ರಿಯತೆಯು ನಾಲನೆ ಸ್ಥಾನದಲ್ಲಿದೆ. ಜೊತೆಗೆ ಜಗತ್ತಿನ ಶೇ. ೩೧ ರಷ್ಟು ಜನರು ನಿಷ್ಕ್ರಿಯ ಜೀವನಶೈಲಿಗೆ ಒಗ್ಗಿರುವುದು ಇದಕ್ಕೆ ಪೂರಕವಾಗಿ ಪರಿಣಮಿಸುತ್ತಿದೆ. 

ಪರಿಹಾರವೇನು?

ಪ್ರತಿನಿತ್ಯ ನಡಿಗೆ, ಓಟ, ವ್ಯಾಯಾಮ, ಯೋಗ, ಪ್ರಾಣಾಯಾಮ ಅಥವಾ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಕೊರೋನರಿ ಹೃದ್ರೋಗ, ಅಧಿಕರಕ್ತದೊತ್ತದ, ಪಕ್ಷಾಘಾತ, ಮಧುಮೇಹ, ಕರುಳು- ಸ್ತನ ಕ್ಯಾನ್ಸರ್, ಮೂಳೆಗಳ ಪೊಳ್ಳುತನ ಮತ್ತು ಮಾನಸಿಕ ಖಿನ್ನತೆಗಳ ಸಂಭಾವ್ಯತೆಗಳನ್ನು ತಡೆಗಟ್ಟಬಹುದಾಗಿದೆ. ಇದಲ್ಲದೆ ಅಧಿಕತೂಕ ಮತ್ತು ಅತಿಬೋಜ್ಜುಗಳಂತಹ  ಸಮಸ್ಯೆಯನ್ನು ಸುಲಭದಲ್ಲೇ ನಿಯಂತ್ರಿಸಬಹುದಾಗಿದೆ. ಇದರೊಂದಿಗೆ ನಿಮ್ಮ ಶಾರೀರಿಕ ಕ್ಷಮತೆಯ ಮಟ್ಟವನ್ನು ಹೆಚ್ಚಿಸಿಕೊಳ್ಳುವುದರಿಂದಾಗಿ, ನಿಮ್ಮ ಶರೀರದ ರೋಗನಿರೋಧಕ ಶಕ್ತಿಯು ಸ್ವಾಭಾವಿಕವಾಗಿಯೇ ಹೆಚ್ಚುತ್ತದೆ. 

ಶಾರೀರಿಕ ಚಟುವಟಿಕೆಗಳ ಪ್ರಾಮುಖ್ಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಪ್ರಕಟಿಸಿರುವ " ಜಾಗತಿಕ ಶಿಫಾರಸು" ಗಳಲ್ಲಿ ೧೮ ವರ್ಷ ಮೀರಿದವರೆಲ್ಲರೂ ಒಂದು ವಾರದಲ್ಲಿ ಕನಿಷ್ಠ ೧೫೦ ನಿಮಿಷಗಳಷ್ಟು ಸಮಯ ಮಧ್ಯಮ ಮಟ್ಟದ ವ್ಯಾಯಾಮ, ಕ್ರೀಡೆ ಅಥವಾ ಅನ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅನೇಕ ವಿಧದ ಗಂಭೀರ ಮತ್ತು ಮಾರಕ ಕಾಯಿಲೆಗಳನ್ನು ದೂರವಿರಿಸುವಲ್ಲಿ ಇದು ಅತ್ಯಂತ ಉಪಯುಕ್ತವೆನಿಸುತ್ತದೆ. 

ಸಕ್ರಿಯ ಜೀವನಶೈಲಿ, ಉತ್ತಮ ಗುನಮಟ್ಟದ ಹಾಗೂ ಸಮತೋಲಿತ ಆಹಾರ ಸೇವನೆ, ಪ್ರತಿನಿತ್ಯ ವ್ಯಾಯಾಮ- ಕ್ರೀಡೆಗಳಲ್ಲಿ ಭಾಗವಹಿಸುವುದು, ದುಶ್ಚಟಗಳು ಮತ್ತು ಮಾನಸಿಕ ಒತ್ತಡಗಳನ್ನು ದೂರವಿರಿಸುವುದೇ ಮುಂತಾದ ಉಪಕ್ರಮಗಳನ್ನು ಕ್ರಮಬದ್ಧವಾಗಿ ಅನುಸರಿಸಿದಲ್ಲಿ ನಿಮ್ಮ ಶಾರೀರಿಕ, ಮಾನಸಿಕ ಮತ್ತು ಸಾಮಾಜಿಕ ಸ್ವಾಸ್ಥ್ಗಳನ್ನು ಉನ್ನತ ಸ್ತರದಲ್ಲಿ  ಕಾಪಾಡಿಕೊಳ್ಳುವುದು ಸುಲಭ ಸಾಧ್ಯ ಎನ್ನುವುದು ನೆನಪಿರಲಿ. 

ನಿಷ್ಕ್ರಿಯತೆಯ ಮೊದಲ ಪಾಠ 

ನಿಮ್ಮ ಮಗುವನ್ನು ಎಲ್.ಕೆ.ಜಿ ಗೆ ಸೇರಿಸಿದೊಡನೆ ಶಾಲೆಗೆ ಹೋಗಿಬರಲು ವಾಹನದ ವ್ಯವಸ್ಥೆ ಮಾಡುವುದರೊಂದಿಗೆ, ನಿಷ್ಕ್ರಿಯತೆಯ ಮೊದಲ ಪಾಠ ಆರಂಭವಾಗುತ್ತದೆ. ತದನಂತರ ತರಗತಿಯಲ್ಲಿ ಮೊದಲ ಸ್ಥಾನವನ್ನು ಗಿಟ್ಟಿಸಲು ಮತ್ತು ಬಳಿಕ ಇದನ್ನು ಉಳಿಸಿಕೊಳ್ಳಲು ಸದಾ ಓದು ಬರಹಗಳಲ್ಲಿ ಮಗ್ನರಾಗುವಂತೆ ಒತ್ತಾಯಿಸುವುದು, ಒಂದಿಷ್ಟು ಬಿಡುವು ದೊರೆತೊಡನೆ ಟಿವಿ ಅಥವಾ ಕಂಪ್ಯೂಟರ್ ನ ಮುಂದೆ ಕುಳಿತುಕೊಳ್ಳುವಂತೆ ಆದೇಶಿಸುವುದರ ಮೂಲಕ ನಮ್ಮ ಮಕ್ಕಳಲ್ಲಿ ನಿಷ್ಕ್ರಿಯತೆಯು ಇನ್ನಷ್ಟು ಹೆಚ್ಚಲು ನಾವೇ ಕಾರಣಕರ್ತರೆನಿಸುತ್ತಿದ್ದೇವೆ. ಇಷ್ಟೆಲ್ಲಾ ಸಾಲದೆನ್ನುವಂತೆ ಸಮತೋಲಿತ ಆಹಾರವನ್ನು ನಿರಾಕರಿಸಿ, ನಿರುಪಯುಕ್ತ ಆಹಾರಗಳನ್ನೇ ಸೇವಿಸುವುದು, ನಡುರಾತ್ರಿ ಕಳೆದ ಬಳಿಕ ಮಲಗಿ ಬೆಳಿಗ್ಗೆ ತಡವಾಗಿ ಏಳುವುದೇ ಮುಂತಾದ ಅನಾರೋಗ್ಯಕರ ಹವ್ಯಾಸಗಳು ಮಕ್ಕಳಲ್ಲಿ ನಿಷ್ಕ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಲು ನೆರವಾಗುತ್ತವೆ. ತತ್ಪರಿಣಾಮವಾಗಿ ಮಕ್ಕಳ ಶಾರೀರಿಕ ಕ್ಷಮತೆಯ ಮಟ್ಟ ಕಡಿಮೆಯಾಗುವುದರೊಂದಿಗೆ, ಮಕ್ಕಳ ರೋಗನಿರೋಧಕ ಶಕ್ತಿಯೂ ನಿಧಾನವಾಗಿ ಕ್ಷಯಿಸುತ್ತದೆ. 

ಇವೆಲ್ಲವುಗಳ ಸಂಯುಕ್ತ ಪರಿಣಾಮಗಳಿಂದಾಗಿ ಇಂತಹ ಮಕ್ಕಳು ಪದೇಪದೇ ಕಾಯಿಲೆಗಳಿಗೆ ಈಡಾಗುವುದರಿಂದ, ಸ್ವಾಭಾವಿಕವಾಗಿಯೇ ಇವರು ವಿದ್ಯಾಭ್ಯಾಸದಲ್ಲೂ ಹಿಂದೆ ಬೀಳುತ್ತಾರೆ. ಈ ವಿಲಕ್ಷಣ ಸಮಸ್ಯೆಗೆ ಇಂತಹ ಮಕ್ಕಳ ತಂದೆ ತಾಯಿಯರೇ ನೇರವಾಗಿ ಹೊಣೆಗಾರರಾಗುತ್ತಾರೆ!. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ೧-೦೫-೨೦೧೧ ರ ಸಂಚಿಕೆಯ ಪುರುಷ ಸಂಪದದಲ್ಲಿ ಪ್ರಕಟಿತ ಲೇಖನ.






 

No comments:

Post a Comment