Thursday, April 3, 2014

PRAJAPRABHUTVADALLI PRAJEGALE SEVAKARU !


 ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಸೇವಕರು !

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದಲ್ಲಿ, ಕೆಲವೇ ದಶಕಗಳ ಹಿಂದಿನ ತನಕ " ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು" ಎನ್ನುವ ಮುತ್ತಿನಂತಹ ಮಾತುಗಳು ನಿಜಕ್ಕೂ ಅರ್ಥಪೂರ್ಣವೆನಿಸಿದ್ದವು. ಆದರೆ ಇದೀಗ ಬದಲಾದ ಪರಿಸ್ಥಿತಿಯಲ್ಲಿ ಈ ಮಾತುಗಳು ತಮ್ಮ ಅರ್ಥವನ್ನೇ ಕಳೆದುಕೊಂಡಿರುವುದು ಸುಳ್ಳೇನಲ್ಲ. 

ಮೌಲ್ಯಾಧಾರಿತ ರಾಜಕಾರಣಕ್ಕೆ ಎಂದೋ ತಿಲಾಂಜಲಿಯನ್ನು ನೀಡಿರುವ ನಮ್ಮ ದೇಶದ ರಾಜಕೀಯ ನೇತಾರರು, ತಮ್ಮ ಪಕ್ಷದ ಸಿದ್ಧಾಂತಗಳು, ತತ್ವಗಳು ಮತ್ತು ಪಕ್ಷದ ಪ್ರಮುಖ ಧ್ಯೇಯ-ಧೋರಣೆಗಳನ್ನೇ ಮರೆತು, ಕೇವಲ "ಅಧಿಕಾರ ದಾಹ" ಎನ್ನುವ ವ್ಯಾಧಿಯಿಂದ ಬಳಲುತ್ತಿರುವುದು ಮತದಾರರೆಲ್ಲರೂ ಅರಿತಿರುವ ಸತ್ಯ್ಹ.

ವಿವಿಧ ರಾಜಕೀಯ ಪಕ್ಷಗಳ ಹಾಗೂ ಪಕ್ಷಾತೀತ ರಾಜಕಾರಣಿಗಳ ರಾಜಕೀಯ ಚದುರಂಗದಾಟವು ಲೋಕಸಭಾ ಚುನಾವಣೆಗಳ ಘೋಷಣೆಯಾದ ಬಳಿಕ ದಿನೇದಿನೇ ರಂಗೇರುತ್ತಿದೆ. ಚುನಾವಣೆಗಳ ಘೋಷಣೆಯಾದೊಡನೆ ತಮ್ಮ ಪಕ್ಷದ ಪ್ರಣಾಳಿಕೆ ಸಿದ್ಧವಾಗಿರದೇ ಇದ್ದರೂ, ರಾಜ್ಯದ- ದೇಶದ ಮತದಾರರಿಗೆ ಭರವಸೆಗಳ ಮಹಾಪೂರವನ್ನೇ ಹರಿಸಲಾರಂಭಿಸಿದ್ದ ಪ್ರಮುಖ ರಾಜಕೀಯ ಪಕ್ಷಗಳೂ ಇದೀಗ ಬಂಡಾಯದ ಬಿರುಗಾಳಿಗೆ ಸಿಲುಕಿ ನಲುಗುತ್ತಿವೆ. ಆದರೂ ಈ ಸಂದರ್ಭದಲ್ಲಿ ಮತ್ತೊಂದು ಪಕ್ಷದಿಂದ ಟಿಕೆಟ್ ಪಡೆದುಕೊಳ್ಳಲು ವಿಫಲರಾದ ಅಭ್ಯರ್ಥಿಗಳ ಮನವೊಲಿಸಿ, ತಮ್ಮ ಪಕ್ಷದ ಟಿಕೆಟ್ ನೀಡುತ್ತಿವೆ. ಚುನಾವಣಾ ಕಣದಲ್ಲಿರುವ ಯಾವುದೇ ಪಕ್ಷಗಳು ಇದಕ್ಕೆ ಅಪವಾದವೆನಿಸಿಲ್ಲ!.

ತಮ್ಮ ಪಕ್ಷದಿಂದ ಟಿಕೆಟ್ ದೊರೆಯದ ಕಾರಣದಿಂದಾಗಿ ಪಕ್ಷವನ್ನೇ ತೊರೆದು, ತಮ್ಮ ನಿಷ್ಠೆಯನ್ನು ಕ್ಷಣಮಾತ್ರದಲ್ಲಿ ಬದಲಿಸುವ ಅಭ್ಯರ್ಥಿಗಳು ಮತ್ತು ಟಿಕೆಟ್ ದೊರೆಯದ ಕಾರಣದಿಂದಾಗಿ ಪಕ್ಷದ ಕಚೇರಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ತಮ್ಮ ಬೆಂಬಲಿಗರಿಂದ ನಾಶಪಡಿಸುವ ಮನೋಭಾವವುಳ್ಳ ಅಭ್ಯರ್ಥಿಗಳು, ಆಕಸ್ಮಿಕವಾಗಿ ಚುನಾವಣೆಯಲ್ಲಿ ಗೆದ್ದಲ್ಲಿ ಅಧಿಕಾರಕ್ಕಾಗಿ ಏನನ್ನೂ ಮಾಡಲು ಹಿಂಜರಿಯಲಾರರು. ರಾಜ್ಯದ ಮತ್ತು ದೇಶದ ಹಿತಾಸಕ್ತಿಗಿಂತಲೂ, ತನ್ನ ವೈಯುಕ್ತಿಕ ಹಿತಾಸಕ್ತಿಯ ಬಗ್ಗೆ ಚಿಂತಿಸುವ ಇಂತಹ ರಾಜಕಾರಣಿಗಳಿಂದ ದಕ್ಷ ಮತ್ತು ಸ್ವಚ್ಚ ಆಡಳಿತವನ್ನು ಪ್ರಜೆಗಳು ನಿರೀಕ್ಷಿಸುವಂತಿಲ್ಲ. 

ತಾವು ಶಾಸಕರಾಗುವ, ಮಂತ್ರಿಯಾಗುವ, ಕೈತುಂಬಾ ಹಣವನ್ನು ಗಳಿಸುವ ಹಾಗೂ ಅಧಿಕಾರದ ಆಸೆಯಿಲ್ಲದೆ ಕೇವಲ ಸಮಾಜಸೇವೆ ಮಾಡುವ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ಎಂದು ಘೋಷಿಸುವ ಕೆಲ ಅಭ್ಯರ್ಥಿಗಳ ಮಾತುಗಳನ್ನು ಆಯಾ ಪಕ್ಷಗಳ ಬೆಂಬಲಿಗರು ಹಾಗೂ ನಿಷ್ಠಾವಂತ ಮತದಾರರು ನಂಬಬಹುದಾದರೂ, ಪ್ರಜ್ಞಾವಂತ ಮತದಾರರು ನಿಶ್ಚಿತವಾಗಿಯೂ ನಂಬಲಾರರು. ಏಕೆಂದರೆ ಚುನಾವಣೆಗಾಗಿ ಪ್ರತಿಯೊಬ್ಬ ಅಭ್ಯರ್ಥಿಯೂ ತನ್ನ ಶಕ್ತ್ಯಾನುಸಾರ ವ್ಯಯಿಸುವ ಹಣದಿಂದ, ಹಲವಾರು ವರ್ಷಗಳ ಕಾಲ " ಸಮಾಜಸೇವೆ" ಮಾಡುವುದು ಸುಲಭಸಾಧ್ಯ ಎನ್ನುವುದು ಮತದಾರರಿಗೆ ಅರ್ಥವಾಗದ ವಿಚಾರವೇನಲ್ಲ. ಅದೇರೀತಿಯಲ್ಲಿ ನಮ್ಮ ರಾಜಕಾರಣಿಗಳು ಯಾವುದೇ "ಸ್ವಯಂಸೇವಾ ಸಂಘಟನೆ" ಗಳ ಸದಸ್ಯರಾಗುವುದೇ ಇಲ್ಲ!. 

ಅಧಿಕಾರದ ಗದ್ದುಗೆಯನ್ನೇರುವ ಏಕಮಾತ್ರ ಉದ್ದೇಶದಿಂದ ಜನಬಲ (ತೋಳ್ಬಲ) , ಹಣಬಲ, ಜಾತಿಯ ಬಲ ಹಾಗೂ ರಾಜಕೀಯ ಪ್ರಭಾವಗಳನ್ನು ಬಳಸಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವ, ಊಸರವಳ್ಳಿಯನ್ನೂ ನಾಚಿಸುವಂತೆ ಪಕ್ಷಗಳನ್ನು ಬದಲಾಯಿಸುವ ಅನೇಕ ಅಭ್ಯರ್ಥಿಗಳ ನಿಜವಾದ ಬಣ್ಣ ಈಗಾಗಲೇ ಬಯಲಾಗಿದೆ. ಚುನಾವಣೆಗೆ ಸ್ಪರ್ದಿಸುವ ಮುನ್ನ ಘೋಷಿಸಲೇ ಬೇಕಾದ ಆಸ್ತಿಪಾಸ್ತಿಗಳ ವಿವರಗಳು, ಇವರು ಮಾಡಿರುವ "ಸಮಾಜಸೇವೆ"ಗೆ ಜೀವಂತ ಸಾಕ್ಷಿಯಾಗಿವೆ. ಪ್ರಾಮಾಣಿಕ ಪ್ರಜೆಗಳಿಗೆ ಇಂತಹ ವಿಚಾರ- ವರ್ತನೆಗಳು ಲಜ್ಜಾಸ್ಪದವೆನಿಸಿದರೂ, ರಾಜಕೀಯ ನೇತಾರರಿಗೆ ಇದೊಂದು ಪ್ರತಿಷ್ಠೆಯ ಸಂಕೇತವೆನಿಸಿದೆ!. 

ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಹುತೇಕ ಅಭ್ಯರ್ಥಿಗಳ ಮೊದಲ ಗುರಿ ಸಂಸದರಾಗಿ ಆಯ್ಕೆಯಾಗುವುದೇ ಆದರೂ, ತದನಂತರ ಮಂತ್ರಿಮಂಡಲದಲ್ಲೊಂದು ಸ್ಥಾನವನ್ನು ಗಳಿಸುವತ್ತ ಕೇಂದ್ರೀಕೃತವಾಗುತ್ತದೆ. ಅದೃಷ್ಟವಶಾತ ಮಂತ್ರಿಯಾಗಿ ಆಯ್ಕೆಯಾದಲ್ಲಿ, ಫಲವತ್ತಾದ ಖಾತೆಯೊಂದನ್ನು ಪಡೆದುಕೊಳ್ಳಲು ಅಥವಾ ಮಂತ್ರಿ ಪದವಿ ಕೈತಪ್ಪಿದಲ್ಲಿ ಯಾವುದಾದರೂ ಸದನ ಸಮಿತಿಗಳ ಸದಸ್ಯತ್ವವನ್ನು ಗಳಿಸಲು ಇವರು ಹರಸಾಹಸವನ್ನೇ ನಡೆಸುತ್ತಾರೆ. ಇದರೊಂದಿಗೆ ಸಂಸದರಿಗೆ ದೊರಯುವ ಅನ್ಯ ಆರ್ಥಿಕ ಮತ್ತು ಇತರ ಸವಲತ್ತುಗಳನ್ನು ಪರಿಗಣಿಸಿದಾಗ, ನಮ್ಮನ್ನಾಳುವ ಈ ರಾಜಕಾರಣಿಗಳು ಒಮ್ಮೆ ಸಂಸದರಾಗಿ ಆಯ್ಕೆಯಾಗಲು ಹಾತೊರೆಯುವುದು ಏಕೆಂದು ನಿಮಗೂ ತಿಳಿಯುವುದರಲ್ಲಿ ಸಂದೇಹವಿಲ್ಲ. ವಿಶೇಷವೆಂದರೆ ಒಂದುಬಾರಿ ಸಂಸದರಾಗಿ ಆಯ್ಕೆಯಾದ ಬಳಿಕ ಇವರು ಮತ್ತೆ ಮತದಾರರತ್ತ ಸುಳಿಯುವುದು ಮುಂದಿನ ಚುನಾವಣೆಗಳ ಘೋಷಣೆಯಾದ ಬಳಿಕವೇ ಎನ್ನುವುದು ಮತದಾರರಿಗೂ ತಿಳಿದಿದೆ. ಅಲ್ಲಿಯ ತನಕ ಸಕಲ ಸವಲತ್ತು- ಸೌಲಭ್ಯಗಳನ್ನು ಬಳಸಿಕೊಳ್ಳುತ್ತಾ, ರಾಜ- ಮಹಾರಾಜರಂತೆ ವೈಭವೋಪೇತ ಜೀವನವನ್ನು ನಡೆಸುವ ನಮ್ಮ ರಾಜಕೀಯ ನೇತಾರರಿಗೆ, " ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು" ಎನ್ನುವುದು ಕೇವಲ ಘೋಷಣೆಯೇ ಹೊರತು ಬೇರೇನೂ ಅಲ್ಲ!. 

ಡಾ.ಸಿ.ನಿತ್ಯಾನಂದ ಪೈ ,ಪುತ್ತೂರು 



No comments:

Post a Comment